ಕಾಫಿ ರುಚಿ ಹೇಗಿರಬಹುದು......??
ನಮ್ಮ ನಿಜ ಜೀವನದಲ್ಲಿ ನೋಡಿದವುಗಳು, ಕೇಳಿದವುಗಳು, ಅನುಭವಿಸಿದವುಗಳು ಇತ್ಯಾದಿ..... ಅದೆಷ್ಟೋ ಘಟನೆಗಳು ನಡೆದಿರುತ್ತವೆ. ಆ ಕ್ಷಣದಲ್ಲಿ ಅದನ್ನು ಅನುಭವಿಸಿ ಮರೆತುಬಿಡುತ್ತೇವೆ. ಅವೆಲ್ಲವೂ ನೆನಪಿರಬೇಕಾದರೆ ಜೀವನದ ಹಿಂದಿನ ಪುಟಗಳನ್ನು ತಿರುವಿಹಾಕುತ್ತಿರಬೇಕು. ನಾನು ಕೇಳಿದ ಇನ್ನೊಂದು ನಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ಸುಮಾರು ಇಪ್ಪತ್ತೈದು ವರ್ಷಕ್ಕಿಂತ ಹಿಂದೆ ನೆಡೆದಿದ್ದು ..... ಮಲೆನಾಡು ಅಂದರೆ ನೀರಿನ ಪ್ರವಾಹ.... ಕರೆಂಟಿಗೆ ಅಭಾವ.... ಈ ಕರೆಂಟು ಇಲ್ಲ ಅಂದ್ರೆ ಏನೇನು ಅವಾಂತರಗಳು ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದ್ದಿದ್ದೇ.... ಬೆಳಿಗ್ಗೆ ಕೋಳಿ ಕೋ.... ಅನ್ನೋದ್ರ ಒಳಗೆ ಎದ್ರೂ ಮನೆಕೆಲಸ ಮುಗಿಸಿಕೊಂಡು ಕೆಲಸಕ್ಕೆ ಹೋಗುವ ಗಂಡಸರು, ಶಾಲೆಗೆ ಹೋಗುವ ಹುಡುಗರು ಇತ್ಯಾದಿ ಎಲ್ಲರ ಮನೆಯಲ್ಲಿ ಇದ್ರೂ......... ಹಳ್ಳಿಗಳಿಂದ ಕಛೇರಿಗೆ, ಶಾಲೆಗಳಿಗೆ ನಡೆದು ಹೋಗುವುದಕ್ಕೇ (ಇಪ್ಪತ್ತೈದು ವರ್ಷಗಳ ಹಿಂದೆ) ಕೆಲವು ಸಮಯ ಹಿಡಿಯುತ್ತಿತ್ತು. ಅದಕ್ಕೆ ಸರಿಯಾಗಿ ಏಳುವ ಹೊತ್ತಿಗೆ ಕರೆಂಟ್ ಬೇರೆ ಇಲ್ಲ ಅಂದ್ರೆ ಎಲ್ಲ ಕೆಲಸಗಳೂ ಎಡವಟ್ಟೇ.... ಹೀಗೇ ಎಡವಟ್ಟಾದ ಒಂದು ಘಟನೆ ಇವತ್ತು ಜ್ಞಾಪಕಕ್ಕೆ ಬಂತು......
ಮುರಾರಿ ಭಟ್ಟರು ಅಂತ ಒಬ್ಬರು ಮೇಷ್ಟ್ರು ಇದ್ರು. ಅವರ ಹೆಂಡತಿ ಪದ್ಮ ಅಂತ. ಈ ದಂಪತಿಗಳಿಗೆ ಒಂದೈದಾರುಜನ ಮಕ್ಕಳು. ಭಟ್ಟರು ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರಾಗಿದ್ರು. ಹಳ್ಳಿಯಲ್ಲಿ ವಾಸ. ಅಲ್ಲಿಂದ ಶೃಂಗೇರಿಗೆ (೨ ಕಿ.ಮೀ) ನಡೆದು ಹೋಗಿ ನಂತರ ಬಸ್ ನಲ್ಲಿ ಹೋಗಿ, ಬಸ್ ಇಳಿದು ಶಾಲೆಯವರೆಗೆ ನಡೆದು ಹೋಗಬೇಕಿತ್ತು. ಹಾಗಾಗಿ ಭಟ್ಟರು ಮುಂಚಿತವಾಗಿ ಎದ್ದು, ಕಾಫಿ ಕುಡಿದು (ಬೆಳಗಿನ ಮೊದಲ ಕಾಫಿ ಮೇಷ್ಟ್ರೇ ಮಾಡಿಕೊಳ್ಳುತ್ತಿದ್ದರು), ಹಂಡೆನೀರಿಗೆ ಬೆಂಕಿಹಾಕಿ, ಹೂವು ಕೊಯ್ದುಕೊಂಡು ಸ್ನಾನ ಸಂಧ್ಯಾವಂದನೆ ದೇವರಪೂಜೆ ಇತ್ಯಾದಿಗಳನ್ನು ಪೂರೈಸಿಕೊಂಡು ಹೊರಡುವ ಹೊತ್ತಿಗೆ ಉಸಿರು ಸಿಕ್ಕಿಹಾಕಿಕೊಳ್ಳುವುದೊಂದೇ ಬಾಕಿ. ಪ್ರತಿ ತಿಂಗಳ ಆ ಮೂರು ದಿನಗಳಲ್ಲಂತೂ ಇನ್ನೂ ಫಜೀತಿ.
ಒಂದು ದಿನ ಬೆಳಿಗ್ಗೆ ಎದ್ದ ಮೇಷ್ಟ್ರು ಸ್ವಿಚ್ ಹಾಕಿದ್ರೆ ಕರೆಂಟ್ ಇರಲಿಲ್ಲ....... ಹಾಗೇ ಗೊಣಗಿಕೊಳ್ಳುತ್ತಾ ಚಿಮಣಿ ಹಚ್ಚಿಕೊಂಡು ಬಚ್ಚಲಿಗೆ ಹೋಗಿ ಮುಖ ತೊಳೆದುಕೊಂಡು, ಅಡಿಗೆ ಒಲೆ ಹಚ್ಚಿ (ಆಗಿನ್ನೂ ಹಳ್ಳಿಗಳಲ್ಲಿ ಸ್ಟೌ ಗಳ ಬಳಕೆ ಬಂದಿರಲಿಲ್ಲ), ಕಾಫಿಗೆ ನೀರಿಟ್ಟು, ಬೆಲ್ಲ ಹಾಕಿ, ಕಾಫಿ ಸೋಸುವ ಬಟ್ಟೆಗಾಗಿ (ಹಿಂದೆ ಕಾಫಿಯನ್ನು ಬಟ್ಟೆಯಲ್ಲಿ ಸೋಸುತ್ತಿದ್ದರು ಈಚೆಗೆ ಫಿಲ್ಟರ್ ಗಳು ಬಂದಿವೆ) ಹುಡುಕಾಡಿದರು ಮಾಮೂಲಿ ಇರುವ ಜಾಗದಲ್ಲಿ ಕಾಣಲಿಲ್ಲವಾದ್ದರಿಂದ... " ಲೇ ಪದ್ದಿ ಕಾಫಿ ಸೋಸೋ ಬಟ್ಟೆ ಎಲ್ಲೇ......?? " ಎಂದು ಹೆಂಡತಿಯನ್ನು ಕೇಳಿದ್ರು. ಆಕೆ ಪಾಪ ನಿದ್ದೆಗಣ್ಣಲ್ಲೇ... "ನಿನ್ನೆ ಸಾಯಂಕಾಲ ಹಿಂಡಿ ಬಚ್ಚಲಮನೆ ಗಳದ ಮೇಲೆ ಹರವಿದಿನಿ ಅಂತ ಕಾಣುತ್ತೆ.... ಸ್ವಲ್ಪ ನೋಡ್ಬಾರ್ದೇಂಡ್ರೀ...." ಅಂದ್ರು. ಸರಿ ಮೇಷ್ಟ್ರು ಚಿಮಣಿ ಹಿಡಿದುಕೊಂಡು ಹೋಗಿ ಬಚ್ಚಲಮನೆ ಗಳದ ಮೇಲೆ ಇರುವ ಬಟ್ಟೆಯನ್ನು ತಂದು ಕಾಫಿ ಸೋಸಿ ಕುಡಿದು ಮುಂದಿನ ಕೆಲಸಗಳಲ್ಲಿ ತೊಡಗಿದರು. ಒಂದು ರೌಂಡ್ ಕಲಸಗಳನ್ನು ಮುಗಿಸಿಕೊಂಡು ಮೇಷ್ಟ್ರು ಸ್ನಾನಕ್ಕೆ ಹೋದರು. ಆ ವೇಳೆಗಾಗಲೇ ಮೇಷ್ಟ್ರ ಹೆಂಡತಿ ಎದ್ದು ಮಕ್ಕಳಿಗೆ ಕಾಫಿ ಮಾಡುವ ಕೆಲಸದಲ್ಲಿ ತೊಡಗಿದ್ದರು. ಸ್ನಾನ ಮುಗಿಸಿ ಮೈ ವರೆಸಿಕೊಂಡ ಮೇಷ್ಟ್ರು " ಲೇ ಪದ್ದಿ ನಿನ್ನೆ ಸ್ನಾನ ಮಾಡಿ ಗಳದ ಮೇಲೆ ಹರವಿದ ನನ್ನ ಕೌಪೀನ ಎಲ್ಲಿ ಹೋಯ್ತೇ...?? ಕಾಣ್ತಾನೇ ಇಲ್ಲ...!! ... " ಅಂತ ಕೂಗಿಕೊಂಡರು. " ಅಲ್ಲೇ ಇರಬೇಕಲ್ರೀ....... ನಾನ್ಯಾಕ್ ತಗೋತಿನಿ ಅದನ್ನ..?? " ಅಂತ ಅಡಿಗೆ ಮನೆಯಿಂದಲೇ ಕೂಗಿಕೊಂಡ್ರು. ಮೇಷ್ಟ್ರು ಹಾಗೇ ಏನೇನೋ ಗೊಣಗಿಕೊಳ್ಳುತ್ತಾ ಅಡಿಗೆ ಮನೆಗೆ ಬರುವ ಹೊತ್ತಿಗೆ ಸರಿಯಾಗಿ ಅವರ ಹೆಂಡತಿ....... " ಅಲ್ರೀ..... ಕಾಫಿ ಸೋಸೋ ಅರಿವೆ ಇಲ್ಲೇ ಕೆಳಗೆ ಬಿದ್ದಿದೆ...!! ನೀವು ಯಾವುದ್ರಲ್ಲಿ ಕಾಫಿ ಸೋಸಿದ್ರಿ....??? "
Comments
ಉ: ಕಾಫಿ ರುಚಿ ಹೇಗಿತ್ತು......??
In reply to ಉ: ಕಾಫಿ ರುಚಿ ಹೇಗಿತ್ತು......?? by Jayanth Ramachar
ಉ: ಕಾಫಿ ರುಚಿ ಹೇಗಿತ್ತು......??
ಉ: ಕಾಫಿ ರುಚಿ ಹೇಗಿರಬಹುದು......??
ಉ: ಕಾಫಿ ರುಚಿ ಹೇಗಿರಬಹುದು......??
ಉ: ಕಾಫಿ ರುಚಿ ಹೇಗಿರಬಹುದು......??