ಕಾಮಧೇನುವಿನ ಕಗ್ಗೊಲೆ?

ಕಾಮಧೇನುವಿನ ಕಗ್ಗೊಲೆ?

ಕಾಮಧೇನುವಿನ ಕಗ್ಗೊಲೆ?
ಹಾಲುಣಿಸಿ ಬೆಳೆಸಿದ ಅಮ್ಮ ಎನಿಸಿಕೊಂಡವಳನ್ನು ಮುದಿಯಾದಮೇಲೆ ಮನೆಯಿಂದಾಚೆಗೆ ತಳ್ಳುವುದಕ್ಕಾಗುತ್ತದೆಯೇ? ಅಮ್ಮನಹಾಲನ್ನೆ ಕುಡಿದು ಬೆಳೆದು ನಂತರ ಹಾಲು ನಿಲ್ಲಿಸಿದ ಮಾತ್ರಕ್ಕೆ ಅವಳನ್ನು ದೂರ ತಳ್ಳುವುದಕ್ಕಾಗುತ್ತದೆಯೇ? ಇದನ್ನು ಹಸುಗಳಿಗೂ ಅನ್ವಯಿಸಬಹುದಲ್ಲವೇ?  ಅಮ್ಮನ ಹಾಲು ನಿಂತ ನಂತರ ನಾವು ಬದುಕಿರುವುದೆ ಹಸುವಿನ ಹಾಲನ್ನು ಕುಡಿದುಕೊಂಡು. 
ಹಸುವೊಂದು ಮನೆಯ ಅವಿಭಾಜ್ಯ ಅಂಗವಾಗಿರುತ್ತದೆ. ಆ ಹಸುವಿನ ಮೂಕ ಪ್ರೀತಿ ಅದನ್ನು ಅನುಭವಿಸಿದವರಿಗೇ ಗೊತ್ತು. ನಾಯಿಯಂತೆಯೇ ಅದು ಕೂಡ ತನ್ನ ಪ್ರೀತಿಯೆಲ್ಲವನ್ನೂ ಮನೆಯ ಒಡೆಯನಿಗೆ ನೀಡುತ್ತದೆ. ಪುಣ್ಯಕೋಟಿಯ ಕತೆಯನ್ನು ಬರೆದ ನಾಡು ನಮ್ಮದಲ್ಲವೇ? ನೀನಾರಿಗಾದೆಯೋ ಎಲೆಮಾನವ ಎಂಬ ಗೀತೆ ಕರ್ನಾಟಕದ ಹೆಮ್ಮೆ ಅಲ್ಲವೇ?
ಇಂತಹ ಕನ್ನಡ ನಾಡಿನಲ್ಲಿ ಇಂದು ಗೋವಿನ ಹತ್ಯೆಗೆ ನಡೆಯುತ್ತಿರುವ ರಾಜಕಾರಣ ಹೇಸಿಗೆ ತರುತ್ತದೆ. ಎಲ್ಲದಕ್ಕೂ ಜಾತಿ, ಕೋಮು ಗಳನ್ನು ಸೇರಿಸಿ ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದಾರೆ ಕೆಲವು ಕಟುಕರು.
ಮಾನವನಿಗೆ ಸರ್ವರೀತಿಯಲ್ಲೂ ಉಪಕಾರಿಯಾಗಿರುವ ಹಸುವನ್ನು, ನಿನ್ನ ಮಾಂಸವೂ ಬೇಕು ಎಂದು ಬಯಸುತ್ತಿರುವ ಕಟುಕರನ್ನು, ಅವರನ್ನು ಬೆಂಬಲಿಸುತ್ತಿರುವ ಬಾಯಿಬಡುಕರನ್ನು ಆ ದೇವರೇ ಕಾಪಾಡಬೇಕು.
ದಯವಿಟ್ಟು ಇಲ್ಲಿ ಜಾತಿ, ಕೋಮುಗಳನ್ನು ತರದೇ ಹಸುವನ್ನು ಅನೇಕ ರೀತಿಯಲ್ಲಿ ಉಪಯೋಗಿಯಾಗಿರುವ ಸಾಕು ಪ್ರಾಣಿಯಂತೆ, ಮನೆಮಂದಿಯಂತೆಯೆ ಇರುವ ಮುಗ್ಛಪ್ರಾಣಿಯಂತೆ, ಮಾನವೀಯತೆಯಿಂದ ನೋಡಿ ನಂತರ ತಮ್ಮ ಅಭಿಪ್ರಾಯವನ್ನು ತಿಳಿಸಬಹುದಲ್ಲವೇ?
ಒಂದು ಕಾಲದಲ್ಲಿ ಗೋಧನ ಎನಿಸಿಕೊಂಡಿದ್ದ, ನಂದಿನಿ, ಕಾಮಧೇನು ಎನಿಸಿಕೊಂಡಿದ್ದ, ಗೋಮಾತೆ ಎನಿಸಿಕೊಂಡಿದ್ದ ಹಸುಗಳಿಗೆ ಇಂದು ಬಂದಿರುವ ಎಲ್ಲರೀತಿಯ ದುರ್ಗತಿಗಳನ್ನು ನೆನೆದರೆ, ಇನ್ನೂ ಏನೇನು ನಡೆಯುವುದೋ ಎಂದು ಗಾಬರಿಯಾಗುತ್ತದೆ. ಎಲ್ಲವನ್ನೂ ಪಡೆದು ನಂತರ ಅದರ ಮಾಂಸವನ್ನೂ ಬಿಡೆನು ಎಂಬ ಕೆಲವು ಕಟುಕರ ದಾಹವನ್ನು ನೋಡಿದರೆ ಇವರು ಮನುಷ್ಯರೋ ರಾಕ್ಷಸರೋ ಎಂಬ ಅನುಮಾನ ಮೂಡುತ್ತದೆ. ಕೇವಲ ಜನಪ್ರಿಯತೆಗೆ ಅಂತಹವರನ್ನು ಬೆಂಬಲಿಸುವ ಕರಟಕ ದಮನಕರುಗಳಿಗೆ ಎನನ್ನಬೇಕೋ ತಿಳಿಯದು.
ಇತ್ತೀಚಿಗೆ ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಾವು ಸಸ್ಯಾಹಾರಿಗಳಾಗಿ ಬದಲಾಗಿರುವುದರ ಬಗ್ಗೆ ಮಾತಾಡುತ್ತಾ, ಏನನ್ನಾದರೂ ತಿನ್ನಿ ಆದರೆ ತಲೆ ಇರುವುದನ್ನು ಹಾಗೂ ತಾಯಿ ಇರುವುದನ್ನು ಮಾತ್ರ ತಿನ್ನಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಅದು ನಿಜ ಅಲ್ಲವೇ.