ಕಾಮನ ಹುಣ್ಣಿಮೆ
ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ.
ಕಾದಂಬರಿ ಸೂತ್ರಧಾರಿಯಾದ ಚಂದ್ರಣ್ಣ ಮಿಂಟ್ರಿಯವನ ಮಗ. ಆದರೆ ಮಿಂಟ್ರಿಗೆ ಹೋದ ತಂದೆ ಮರಳಿ ಊರಿಗೆ ಬರದಿದ್ದದ್ದು ಒಂದು ಆಘಾತಕಾರಿಯ ಸುದ್ದಿ. ಆದರೂ ತಾಯಿ ಶಾಂತಮ್ಮ ತನ್ನ ಮಗ ಚಂದ್ರಣ್ಣನನ್ನು ಕಣ್ಣು ರೆಪ್ಪೆಯಂತೆ ನೋಡಿಕೊಂಡು ಮಗನಿಗೆ ಸರಿಯಾಗಿ ಓದಿಸುತ್ತಾಳೆ. ಒಳ್ಳೆಯ ವಿಧ್ಯಾವಂತನನ್ನಾಗಿ ಮಾಡಲು ಹಗಲಿರುಳು ಹೆಣಗುತ್ತಾಳೆ. ಮಗನನ್ನು ಕುರಿತು ಚಂದ್ರು ಮುಂದೆ ನೀನು ಮಿಂಟ್ರಿ ನೌಕರಿಯನ್ನು ಬಿಟ್ಟು ಯಾವುದಾದರೂ ಮಾಡೆಂದು ಹೇಳುತ್ತಲೇ ಇರುತ್ತಾಳೆ.
ಊರಲ್ಲಿ ಸಿನಿಮಾ ಟಾಕೀಸ್ ಇದ್ದುದ್ದಕ್ಕೆ ತಾಯಿ, ಚಿಕ್ಕಮ್ಮ ಮತ್ತು ದೊಡ್ಡಮ್ಮನ ಜೊತೆ ಆಗಾಗ ಸಿನಿಮಾ ನೋಡಲು ಹೋಗುತ್ತಿದ್ದ. ರಾಜಕುಮಾರನ ಸಿನಿಮಾ ಬಂದರೆ ಸಾಕು ಹಾಡುವುದು, ಅದರಲ್ಲಿಯ ಡೈಲಾಗ್ ಹೇಳುವುದು ಮಾಡುತ್ತಿದ್ದ. ಅವರಮ್ಮ ಮತ್ತು ಚಿಕ್ಕಮ್ಮ ಅಡುಗೆಯ ಮನೆಯಲ್ಲಿ ಸಿನಿಮಾದ ಬಗ್ಗೆ ಮಾತಾಡುತ್ತಿದ್ದರೆ ಆತನು ಓದುವುದನ್ನು ಬಿಟ್ಟು ಲಕ್ಷ್ಯವೆಲ್ಲ ಆ ಕಡೆಗೆ ಕೊಡುತ್ತಿದ್ದ. ಅಷ್ಟು ಸಿನಿಮಾ ಹುಚ್ಚು ಚಂದ್ರಣ್ಣನಿಗೆ.
ಶಾಲೆಗೆ ಹೋದರೆ ಹುಡುಗರು ಗೇಲಿ ಮಾತು ಕೇಳಿ ಶಾಲೆಗೆ ಹೋಗಬಾರದೆಂದು ತೀರ್ಮಾನಿಸುತ್ತಿದ್ದ. ಆದರೆ ತಾಯಿಯ ಒತ್ತಾಯಕ್ಕೆ ಮಣಿದು ಶಾಲೆಗೆ ಹೋಗುವನು. ಹಾಗೂ ಹೀಗೂ ಮಾಡಿ ಮೆಟ್ರಿಕ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ತಾಯಿಯನ್ನು ಸಂತೋಷ ಪಡೆಸಿದ್ದ. ಮುಂದೆ ಮೈಸೂರಿಗೆ ಹೈಸ್ಕೂಲಕ್ಕೆ ಓದಲು ಹಚ್ಚಿ ಬಂದ. ಅದೇ ಊರಿನ ಹಾಡಿನ ಕಮಲಿಯೂ ಹೈಸ್ಕೂಲಿಗೆ ಹಚ್ಚಿದರೂ ಒಂದು ದಿನವೂ ಭೇಟಿ ಆಗಿರಲಿಲ್ಲ.
ಮೈಸೂರಿಗೆ ಬಂದ ಚಂದ್ರಣ್ಣನಿಗೆ ಎಲ್ಲವೂ ಅಪರಿಚಿತವಾಯಿತು. ಒಬ್ಬ ಡ್ರೈವರ್ ನ ಸಹಾಯದಿಂದ ಶಿವಣ್ಣನೆಂಬ ಒಬ್ಬ ಗೆಳೆಯನಿಗೆ ಪರಿಚಯ ಮಾಡಿಸಿದ. ಶಿವಣ್ಣ ಚಂದ್ರಣ್ಣನಿಗೆ ಒಂದು ಚಿಕ್ಕ ರೂಮನ್ನು ಹಿಡಿದು ಕೊಟ್ಟನು. ಆದರೆ ಆ ರೂಮಿನಲ್ಲಿ ನೀರಿನ ಸೌಲಭ್ಯ ಮತ್ತು ಕರೆಂಟಿನ ಸೌಲಭ್ಯ ಇರಲಿಲ್ಲ. ಮತ್ತೆ ಪಕ್ಕದಲ್ಲಿದ್ದ ಟೈಲೆಟ್ ರೂಮಿನ ಗಬ್ಬು ವಾಸನೆಯಿಂದ ಆತನಿಗೆ ಓದುವುದು ಬಿಟ್ಟು ಊರಿಗೆ ಹೋಗಬೇಕಿಸುತ್ತಿತ್ತು. ಆದರೂ ಗೆಳೆಯ ಶಿವಣ್ಣ ಆತನಿಗೆ ಇದೆಲ್ಲ ಕಾಮನ್ ಬರಬರುತ್ತಾ ರೂಡಿ ಬೀಳುವುದೆಂದು ಧೈರ್ಯ ಹೇಳಿ ಆತನಿಗೆ ಊಟ ತಿಂಡಿ ಮಾಡಿಸಿ ಮತ್ತೆ ರೂಮಿಗೆ ತಂದು ಬಿಡುತ್ತಿದ್ದ. ಬರಬರುತ್ತ ರೂಡಿ ಬಿದ್ದಿತು.
ಅನಿವಾರ್ಯ ಸ್ಥಿತಿ ಬಂದರೆ ಮನುಷ್ಯ ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳಲೇಬೇಕಾಗುತ್ತದೆ ಎಂಬುವ ಕಟು ಸತ್ಯವನ್ನು ಚಂದ್ರಣ್ಣನಿಗೆ ಹದಿನಾರನೇ ವಯಸ್ಸಿಗೆ ಗೊತ್ತಾಯಿತು.
ಕೆಲವು ದಿನದಲ್ಲಿ ಮತ್ತೊಬ್ಬ ಗೆಳೆಯ ಲಾಲಚಂದ ಎನ್ನುವವನ ಪರಿಚಯವಾಯಿತು. ಒಬ್ಬರೂ ಕೂಡಿ ಹೊರಗೆ ತಿರುಗಾಡಲು ಹೋದಾಗ ಕೆಸದವರು ಬೇಕಾಗಿದ್ದಾರೆ ಎಂಬ ಫಲಕವನ್ನು ನೋಡುತ್ತಾ ನಿಲ್ಲುವುದು ನೋಡಿ ಲಾಲಚಂದ ತನ್ನ ತಂದೆ ಗೊಂಬೆ ಮಾಡುವ ಕೆಲಸಕ್ಕೆ ಇಂತ ಹುಡುಗರು ಸಹಾಯ ಬೇಕೆಂದಿದ್ದು ನೆನಪಿಸಿಕೊಂಡು ತನ್ನ ತಂದೆ ಇದ್ದಲ್ಲಿಗೆ ಕರೆದುಕೊಂಡು ಹೋದನು. ಲಾಲಚಂದನ ತಂದೆ ರಾಮಚಂದ ಚಂದ್ರನನ್ನು ನೋಡಿ ತನ್ನ ಗೊಂಬೆ ಮಾಡುವ ಕಸುಬುದಾರಿಕೆಯ ಬಗ್ಗೆ ವಿವರವಾಗಿ ಹೇಳಿದ. ಇದು ನಮ್ಮ ತಾತ ಮುತ್ತಾನಿಂದಲೂ ಬಂದಿದೆ. ಜಪಾನಿನಿಂದ ಕಲಿತು ಬಂದು ಚನ್ನಪಟ್ಟಣದ ಗೊಂಬೆ ತಯಾರಿಸುತ್ತೇನೆ ಕಟ್ಟಿಗೆಯಲ್ಲಿ ಎಂದು ಹೇಳುತ್ತಾ ನಿನಗೆ ಗೊಂಬೆಗಳಿಗೆ ಬಣ್ಣ ಮಾಡಲು ಬರುತ್ತದೇನು ಕೇಳಿದ. ಚಂದ್ರಣ್ಣ ಒಪ್ಪಿಕೊಂಡನು. ಕೆಲವು ದಿನಗಳಲ್ಲಿ ಗೊಂಬೆಗಳಿಗೆ ಅಚ್ಚುಕಟ್ಟಾಗಿ ಬಣ್ಣ ಕೊಡುವುದನ್ನು ಕಲಿತನು. ರಾಮಚಂದ ಆತನ ಕೆಲಸವನ್ನು ನೋಡಿ ಪ್ರತಿ ಭಾನುವಾರ ಮುನ್ನೂರು ರೂಪಾಯಿ ಮತ್ತೆ ಮೈಸೂರಿನಿಂದ ಹೋಗಿ ಬರುವ ಖರ್ಚನ್ನು ಕೊಡುತ್ತಿದ್ದನು. ತೊಂದರೆ ಇಲ್ಲದೆ ಓದು ಸಾಗಿತು. ಮೊದಲಿನ ರೂಮು ಚೆನ್ನಾಗಿಲ್ಲದಕ್ಕೆ ಬೇರೆ ರೂಮು ಹುಡುಕಿದರೂ ಸಿಗಲಿಲ್ಲವಾದ್ದರಿಂದ ಅಲ್ಲಿಯೇ ಉಳಿದನು. ಲಾಲಚಂದ ಹಾಸ್ಟೇಲಿನಲ್ಲಿಯೂ ಕೇಳಿದ. ಆದರೆ ಯಾವ ಸಾಧ್ಯವೂ ಆಗದಕ್ಕೆ ಅದೇ ರೂಮೇ ಆತನಿಗೆ ಉಳಿಯಿತು. ತಿಂಗಳಿಗೆ ಕೇವಲ ಮೂವತ್ತು ರೂಪಾಯಿ ಮಾತ್ರ. ಹಾಗೂ ಹೀಗೂ ಮಾಡಿ ಚಂದ್ರಣ್ಣ ಐದು ವರುಷ ಡಿಗ್ರಿ ಮುಗಿಸಿ ತನ್ನೂರಿಗೆ ಬಂದನು. ತಾಯಿ ಶಾಂತಮ್ಮನಿಗೆ ಸಂತೋಷವೇ ಸಂತೋಷ.
ಡಿಗ್ರಿನೇ ಮುಗಿಸಿನಿ ಎನ್ನುವ ಬರದಲ್ಲಿ ಚಂದ್ರಣ್ಣ ದಿನಾ ಒಂದು ಊರಿಗೆ ಅಚ್ಚುಕಟ್ಟಾಗಿ ಇಸ್ತ್ರಿ ಹೊಡೆದ ಬಟ್ಟೆ ತೊಟ್ಟಿಕೊಂಡು ಹೋಗುತ್ತಿದ್ದ. ಅದನ್ನು ನೋಡಿದ ತಾಯಿ ಮಗ ಎಲ್ಲಿ ಪ್ಯಾಟಿಯಲ್ಲಿದ್ದು ಆ ಹಾಲಕ್ಕಿ ರಾಮ ಹೇಳಿದ ಹಾಗೆ ಹಾಳಾಗಿದ್ದಾನೋ ಎನ್ನುವ ಸಂಶಯ ಬರಹತ್ತಿತ್ತು. ಆದರೆ ಮಗ ಅಂತಹವನಲ್ಲ ಎಂದು ಸಮಾಧಾನ ಮಾಡಿಕೊಂಡಳು. ಚಂದ್ರಣ್ಣ ತನ್ನ ದೊಡ್ಡಪ್ಪ ತೀರಿಕೊಂಡ ಕೆಲವು ದಿನ ಬಿಟ್ಟು ಊರಿಗೆ ಬಂದನು. ದೊಡ್ಡಮ್ಮ ಹಾಸಿಗೆ ಹಿಡಿದಿದ್ದಳು. ಈಗ ಹೇಗಾಗಿದ್ದಾಳೋ ನೋಡಿ ಬರಬೇಕೆಂದು ತೋಟದ ಮನೆಗೆ ಹೋದನು. ದೊಡ್ಡಪ್ಪನ ಮಗ ರಾಜಣ್ಣ ಈತನನ್ನು ನೋಡಿ ಯಾವಾಗ ಬಂದೆಯೋ ಚಂದ್ರು ಎಂದು ಕೇಳಿದ. ಈಗ ಬಂದೆ. ದೊಡ್ಡಮ್ಮ ಹೇಗಿದ್ದಾಳೆಂದು ಕೇಳಿದ. ದೊಡ್ಡಮ್ಮ ಈಗ ಇದ್ದಕ್ಕಿದ್ದಂತೆ ಚೇತರಿಸಿಕೊಂಡಿದ್ದಾಳೆ. ದಿನನಿತ್ಯದಂತೆ ಎಲ್ಲ ಕೆಲಸ ಮಾಡುತ್ತ ಚೆನ್ನಾಗಿದ್ದಾಳೆಂದು ಹೇಳಿದ. ದೊಡ್ಡಮ್ಮನನ್ನು ಭೇಟಿಯಾಗಲು ಹೊರಟ. ತೋಟದಲ್ಲಿ ಆಳು ಹೋಳು ಮತ್ತೆ ದೊಡ್ಡಮ್ಮ ಕೆಲಸ ಮಾಡುತ್ತ ಇದ್ದರು. ಅದರಲ್ಲಿ ದೊಡ್ಡಪ್ಪನೇ ಇಲ್ಲ ಎನ್ನುವ ಬೇಜಾರವೂ ಆಯಿತು. ದೊಡ್ಡಮನನ್ನು ಮಾತನಾಡಿಸಿ ಮನೆಗೆ ಬಂದ.
ತಾಯಿಯನ್ನು ಕುರಿತು ಅವ್ವಾ ದೊಡ್ಡವ್ವ ಮೊದಲಿನಕ್ಕಿಂತಲೂ ಚೆನ್ನಾಗಿ ಸುಧಾರಿಸಿದ್ದಾಳೆ ಎಂದನು. ಹೌದಪ್ಪ. ಆಕೆ ಮದುವೆಯಾದ ಹೊಸತರಲ್ಲಿ ನೋಡಬೇಕಿತ್ತು. ಕೆಂಪಗೆ ದುಂಡಗೆ ಮೈಕೈ ತುಂಬಿಕೊಂಡು ಇದ್ದಳೆಂದು ಹೇಳಿದಳು. ಅವ್ವಾ ನಿನ್ನ ಜೊತೆ ಇರುವ ತಂಗೆವ್ವ ಎಲ್ಲಿ ಹೋದಳೆಂದು ಕೇಳಿದ. ಎಲ್ಲಿ ಹೋದಳೋ ಏನೋ ಅಪಾ.. ಗಂಡ ಮಕ್ಕಳ ಹತ್ತಿರ ಹೋದಳೋ ಇಲ್ಲ ಮತ್ತೆಲ್ಲಿಗೋ ಎಂದಳು.
ಚಂದ್ರ ದಿನಾ ಒಂದು ಊರಿಗೆ ಹೋಗುತ್ತಿರುವಾಗ ಒಂದು ದಿನ ಬಸ್ಸಿನಲ್ಲಿ ತನಗೆ ಪರಿಚಯದ ಹುಡುಗಿ ಅಂದರೆ ಭಾರತಿ ಎಂಬ ಹೆಣ್ಣುಮಗಳನ್ನು ನೋಡಿದ. ಇವಳೇ ಭಾರತಿ ಎನ್ನುವುದು ಗೊತ್ತಾಗದೇ ನಿಂತ. ಭಾರತಿ ನೀವು ಚಂದ್ರು ಅಲ್ಲವೇ ಎಂದು ಮಾತು ಶುರು ಮಾಡಿದಳು. ನೀವು ಈಗ ಏನು ಮಾಡಿಕೊಂಡಿರುವಿರಿ ಎಂದು ಚಂದ್ರಣ್ಣನನ್ನು ಕೇಳಿದಳು. ಆಗ ಚಂದ್ರ ನನ್ನ ಡಿಗ್ರಿ ಮುಗಿದಿದೆ. ಅಪ್ಲಿಕೇಶನ್ ಹಾಕಿರುವೆ ಇನ್ನಷ್ಟು ದಿನದಲ್ಲಿ ಆರ್ಡರ್ ಬರುವುದಿದೆ ಎಂದನು. ಬಸ್ಸಿನಲ್ಲಿ ಸೀಟು ಖಾಲಿ ಆದಾಗ ತಾನು ಆ ಸೀಟಿನಲ್ಲಿ ಕುಳಿತು ಮತ್ತೆ ಮಾತಿಗೆ ಶುರು ಮಾಡಿದರು. ನೀವು ಏನು ಮಾಡಿಕೊಂಡಿರಿ ಎಂದು ಕೇಳಿದ ಚಂದ್ರು ಭಾರತಿಯನ್ನು ಇದೇ ಪಕ್ಕದ ಊರಿನಲ್ಲಿ ಮಿಡಲ್ ಕ್ಲಾಸಿನ ಹುಡುಗರಿಗೆ ಪಾಠ ಹೇಳುತ್ತೇನೆಂದು ಹೇಳಿದಳು. ಬಸ್ಸಿನಲ್ಲಿ ಜನ ಏನೆಂದುಕೊಳ್ಳುತ್ತಾರೆ ಎಂಬ ಆತಂಕವೂ ಕಾಡುತ್ತಿತ್ತು. ಕೆಲವು ದಿನದಲ್ಲಿ ಸ್ನೇಹ ಹೋಗಿ ಪ್ರೀತಿಗೆ ತಿರುಗಿತು. ಆಗ ಚಂದ್ರು ಭಾರತಿಯ ಬಗ್ಗೆ ಹಗಲಿರುಳು ಕನಸು ಕಾಣ ಹತ್ತಿದ. ಭಾರತಿ ತನ್ನ ಬಗ್ಗೆ ಮೊದಲೇ ಹೇಳಿಕೊಂಡಿದ್ದಳು. ನನ್ನ ಮನೆಯವರು ಇದ್ದಕ್ಕಿದ್ದ ಹಾಗೆ ತೀರಿ ಹೋದರು. ಆದರೆ ನಾನು ಹಣೆಯಲ್ಲಿಯ ಕುಂಕುಮ, ಕೊರಳಲ್ಲಿಯ ತಾಳಿ, ಕಾಲಲ್ಲಿಯ ಕಾಲುಂಗರ ತೆಗೆಯಲಿಲ್ಲ, ತೆಗೆಯಲು ಬಾರದೆಂದು ಅಲ್ಲೊಬ್ಬರು ಹೇಳಿಕೊಟ್ಟಿದ್ದರೆಂದು ವಿವರವಾಗಿ ಹೇಳಿದ್ದಳು. ಆದರೂ ಚಂದ್ರು ಆಕೆಯ ಬಾಳಿಗೆ ಬೆಳಕಾಗಲು ಮುಂದಾದನು.
ಭಾರತಿಯನ್ನು ಕುರಿತು ನಿನ್ನನ್ನು ಮದುವೆಯಾಗುವೆ ಎಂದು ಹೇಳಿದ. ಆದರೆ ನನಗೊಂದು ಮಗು ಇದೆ ಎಂದು ಹೇಳಿದರೂ ನಾನು ಆ ಮಗುವಿಗೆ ತಂದೆ ಆಗುತ್ತೇನೆಂದು ಹೇಳಿದ. ಅದಕ್ಕೆ ಭಾರತಿ ಒಪ್ಪಿ ತನ್ನ ತಂದೆಗೆ ಎಲ್ಲ ವಿಷಯ ತಿಳಿಸಿದಳು. ತಂದೆ ಚನ್ನಯ್ಯ ಸಮಾಜ ಏನೆಂದುಕೊಳ್ಳುತ್ತದೆಂಬ ಆತಂಕ ಕಾಡುತ್ತಿತ್ತು. ಮಗಳ ನಿರ್ಧಾರಕ್ಕೆ ಅಡ್ಡಿ ಬರಲಿಲ್ಲ. ಭಾರತಿ ತನ್ನ ಗಂಡನ ಮನೆಯವರಿಗೂ ಕೇಳಿ ಬಂದಳು ಅವರೂ ಒಪ್ಪಿದರು. ಹೀಗಾಗಿ ಭಾರತಿಯ ಮದುವೆಯ ದಿನವೂ ಸಮೀಪಿಸಿತು.
ಚಂದ್ರು ತಾಯಿಯ ಮುಂದೆ ತಾನು ಪ್ರೀತಿ ಮಾಡುತ್ತಿರುವ ಭಾರತಿಯ ಬಗ್ಗೆ ಹೇಳಿಕೊಳ್ಳಲೂ ಧೈರ್ಯವಾಗದೆ ಚಡಪಡಿಸುತ್ತಿದ್ದ. ಹಾಗೆ ಧೈರ್ಯ ಮಾಡಿ ಹೇಳಬೇಕೆಂದುಕೊಳ್ಳುವಾಗ ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಯಿತು. ತಾಯಿ ಮೊದಲೇ ನೀಲ ಗಂಗಯ್ಯವರಿಂದ ತಿಳಿದುಕೊಂಡದಕ್ಕೆ ಆತ ಹೇಳುವುದನ್ನು ನಿರೀಕ್ಷಿಸುತ್ತಿದ್ದಳು. ಮದುವೆಯಾಗುತ್ತೇನೆ ಅವ್ವಾ ಆ ಭಾರತಿಯನ್ನು ಎಂದು ಗಟ್ಟಿ ಜೀವ ಮಾಡಿ ಹೇಳಿದ. ತಾಯಿ ಶಾಂತಮ್ಮ ಮೊದಲೇ ನಿರ್ಧಾರ ಮಾಡಿರುವಿರಂತೆ ಕಾಣುತ್ತದೆಂದು ಸುಮ್ಮನಾದಳು. ಮನಸ್ಸಿನಲ್ಲಿ ಉದ್ವೇಗವೂ ಸಂತೋಷವೂ ಇತ್ತ ಆದರೆ ಮಗನ ನಿರ್ಧಾರವೇ ನನ್ನ ನಿರ್ಧಾರವೆಂದು ಸುಮ್ಮನಾದಳು.
ಒಂದು ದಿನ ನೀಲಗಂಗಯ್ಯನವರು ಕಾರು ಬಂದೇ ಬಿಟ್ಟಿತು. ಮದುವೆಗೆ ಹೋಗಲು ಎಲ್ಲರೂ ಕಾರಿನಲ್ಲಿ ಹೊರಟರು. ಅಂದು ಭಾನುವಾರ. ಕಾರ ಹುಣ್ಣಿಮೆಯ ದಿನ ಮದುವೆ ಕಾಲೇಜಿನಲ್ಲಿ ಆನಂದ ಸ್ವಾಮಿಗಳ ಜೊತೆ ಸೇರಿಕೊಂಡು ಚಂದ್ರನ ಗೆಳೆಯ ಶಿವಣ್ಣ ಎಲ್ಲವೂ ಅರೇಂಜ್ ಮಾಡಿದ್ದ. ರಾಮದಾಸ್ ಮೇಷ್ಟ್ರು, ಕುವೆಂಪು, ಕಾಳೇಗೌಡ್ರು , ಶಿವತಿರ್ಥರು, ದೇವನೂರು ಮಹಾದೇವ ಹೀಗೆ ನಾಲ್ಕೈದು ಜನ ದೊಡ್ಡವರಿದ್ದರು. ಎಲ್ಲರೂ ಕೂಡಿ ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆ ಮಾಡಿ ಮುಗಿಸಿದರು. ಸ್ವತಃ ಕುವೆಂಪು ಅವರೇ ವಿಧಿವಿಧಾನದ ಮಂತ್ರೋಪದೇಶ ಮಾಡಿದರು ಮದುವೆ ಸರಳವಾಗಿ ಮುಗಿಯಿತು.
ಅಂದು ಕಾಮನ ಹುಣ್ಣಿಮೆಯ ದಿನ ಚಂದ್ರ ಆಕಾಶದಲ್ಲಿ ಹೊಳೆಯುತ್ತಿದ್ದ. ಮರುದಿನ ಓಕಳಿ ಆಮೇಲೆ ವಸಂತ ಋತು. ಎಲ್ಲವೂ ಸರಳವಾಗಿ ನಡೆದು ಚಂದ್ರು ಮತ್ತು ಭಾರತಿಯ ಮದುವೆ ಮುಗಿಯಿತು.
ನೀಲಗಂಗಯ್ಯವನರು ಎಲ್ಲವೂ ಸುಸೂತ್ರವಾಗಿ ಮುಗಿಸಿ ಕಾರಿನ ಗಾಜಿನ ರಸ್ತೆಯಲ್ಲಿ ನೋಡುತ್ತ ಕಾಲ ಬರುತ್ತೆಯಂತ ಹಳೇ ಕಾಲದವರ ಹಾಗೆ ಕಾಯುತ್ತ ಕುಳಿತಿರಬಾರದು ಒಂದು ಸರಿಯಾದ ಕೆಲಸ ಮಾಡಬೇಕಾದರೆ ಅದಕ್ಕೆ ತಕ್ಕ ಕಾಲಾನೂ ನಾವೇ ಕ್ರಿಯೆಟ್ ಮಾಡಿಕೊಳ್ಳಬೇಕು ಎಂದರು.
ಚಂದ್ರು ಮೈಸೂರಿನಲ್ಲಿ ಒಂದು ಪುಟ್ಟ ಮನೆ ಬಾಡಿಗೆ ಹಿಡಿದು ಭಾರತಿ ಮತ್ತು ಅವಳ ಪುಟ್ಟ ಮಗಳೊಂದಿಗೆ ಸಂಸಾರ ಹೂಡುವ ಮೊದಲು ಕುವೆಂಪು ನಗರದಲ್ಲಿ ಶಿವಲಿಂಗಯ್ಯನವರ ಮನೆಯಲ್ಲಿ ಮುಂದೆ ಎಂದಾದರೊಂದು ದಿನ ಅವ್ವನ ಹೊಸ ಸಂಸಾರ ನಡಿಯಬೇಕೆಂಬ ಸಡಗರವೇ ಚಂದ್ರನಲ್ಲಿ ಉಕ್ಕಿ ಹರೆಯಹತ್ತಿತು. ಕಾಮನ ಹುಣ್ಣಿಮೆ ಕಾದಂಬರಿ ಓದಿ ಸಂತೋಷವಾಯಿತು.
-ಶೋಭಾ ಗುನ್ನಾಪೂರ