ಕಾಮೆಂಟರಿ - ಒಂದು ಪುಟ್ಟ ಕಥೆ.
ನನ್ನ ಅಖಂಡ ಪ್ರೇಮಕ್ಕೆ ಕೆ ಈಗ 15 ವರ್ಷ ಮೇಲಾಯಿತು. ಅಂದು ಬಾಂಬೆಯಲ್ಲಿ ಭಾರತ ಮತ್ತೆ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಮ್ಯಾಚ್ ನಡೀತಾ ಇತ್ತು. ಅಂದು ಸಂಜೆನಾನು ಸಾಂದ್ಯವಂಧನೆ ಅದೆಷ್ಟು ವೇಗವಾಗಿ ಮಾಡಿದೆನೋ? ಮುಗಿಸಿ ದೇವರಕೋಣೆಯಿಂದ ಹೊರ ಬರುವಾಗ ಕಂಡಿದ್ದು ಸಚಿನ್ ನ ಸಿಕ್ಸ್ ಮತ್ತೆ ಕುಣಿಯುತ್ತಿದ್ದನಿನ್ನ ಮುಂಗುರುಳು! ಅಂದು ಮನೆಯಲ್ಲಿ ಎಲ್ಲರಿಗೂ ಇಂಡಿಯಾ ಸೋತಿತಲ್ಲ ಅಂತನಿದ್ದೆ ಬಾರದೆ ಇದ್ರೆ, ನನಗೆ ಬೇರಾವುದೋ ಕಾರಣದಿಂದ ನಿದ್ರೆ ಬರಲಿಲ್ಲ!
ಅಂದಿನಿಂದ ಪ್ರತಿ ಮ್ಯಾಚ್ ನೋಡಲು ನೀನು ನಮ್ಮ ಮನೆಗೆ ಬರತೊಡಗಿದೆ.ನಂತರ ಪಾಕಿಸ್ತಾನದ ಮೇಲೆ ಬೆಂಗಳೂರಿನಲ್ಲಿ ಪಂದ್ಯ. ಅಂದು ಜಡೇಜ ಹೊಡೆದಎರಡು ಸಿಕ್ಸೆರ್ ಗೆ ನಾವಿಬ್ಬರು ಕೈ ಕೈ ತಟ್ಟಿ ಚಪ್ಪಾಳೆ ಹೊಡೆದಿದ್ದವು. ಅದೇ ನಿನ್ನಮೊದಲ ಸ್ಪರ್ಶ. ನಂತರ ಸೆಮಿ ನಲ್ಲಿ ಇಂಡಿಯಾ ಶ್ರೀಲಂಕ ಮೇಲೆ ಸೋತಿತು,ಆದರೆ ನಂಗೆ ನಿನ್ನ ಮೇಲೆ ಆಕರ್ಷಣೆ ಜಾಸ್ತಿ ಆಗಿತ್ತು.
ನಂತರ ಕೆನಡಾ ದಲ್ಲಿ ಸಹಾರ ಕಪ್ ಆಡಲು ನಮ್ಮವರು ಹೋದರು. ಆಗಲೂ ಮ್ಯಾಚ್ ಗಳನ್ನು ನೋಡಲು ನೀನು ನಮ್ಮ ಮನೆಗೆ ಬಂದೆ. ಭಾರತ ಸರಣಿಸೋತಿತು. ಕೊನೆಯ ಪಂದ್ಯ ದಲ್ಲಿ ಮುಶ್ತಕ್ ಅಹ್ಮೆದ್ 5 ವಿಕೆಟ್ ಪಡೆದ, ನಿನಗೆಕಣ್ಣಲ್ಲಿ ನೀರೆ ಬಂದಿತ್ತು. ಹಾಗೇನೆ ಮುಶ್ತಕ್ ಗೆ ನನ್ನ ಕಡೆ ಇಂದ ಲೆಕ್ಕವಿಲ್ಲದಷ್ಟು ಶಾಪ ಕೂಡ ಜಮೆ ಆಯಿತು. ನಿನ್ನ ಮೇಲಿನ ಇರುವುದು ಕೇವಲ ಆಕರ್ಷಣೆ ಅಲ್ಲವೇನೋ ಅಂತ ಅನ್ನಿಸುವಷ್ಟರಲ್ಲಿ ನಮ್ಮವರು ನ್ಯೂಜೀಲ್ಯಾಂಡ್ ನಲ್ಲಿ ಆಡುತ್ತಿದ್ದರು. ಅಲ್ಲಿನ ಹಗಲು ರಾತ್ರಿ ಪಂದ್ಯ ನೋಡಲು ನೀನು ಮನೆಗೆ ಬರುತ್ತಿರಲಿಲ್ಲ. ಆಡಲು ಅಲ್ಲಿಗೇ ಹೋಗಬೇಕಿತ್ತಾ? ನಮ್ಮಲ್ಲೇನು ಮೈದಾನಗಳು ಇಲ್ಲವ ಅಂತ ಅದೆಷ್ಟು ಅಂದು ಕೊಂಡೆನೋ? ಆಮೇಲೆ ಅದೆಷ್ಟೋ ಮ್ಯಾಚ್ ಗಳು ಇಲ್ಲಿ ನಡೆದವು. ಸಚಿನ್ ಹೊಡೆದ ಸೆಂಚುರಿಗಳು ಎಷ್ಟೋ. ಅವನ ಪ್ರತಿ ಬೌಂಡರಿಗೆಹಾಕಿದ ಕೇಕೆಗಳು ಲೆಕ್ಕವಿಟ್ಟವರಾರು?. ಕೆಲವೊಮ್ಮೆ ಮಳೆ ಬಂದು ಪಂದ್ಯನಿಲ್ಲಿಸಿದರೆ ನೀನು, ಮಳೆ ನಿಲ್ಲುವುದನ್ನೇ ಕಾಯುತ್ತಾ ಲಂಕೇಶ್ ತಿರುವಿ ಹಾಕುತ್ತಿದ್ದೆ. ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಾ ಕೂತಿರುತ್ತಿದ್ದೆ.
1999 ರಲ್ಲಿ ಇಂಗ್ಲೆಂಡ್ ನಲ್ಲಿ ವರ್ಲ್ಡ್ ಕಪ್ ನಡೆಯುತ್ತಿತ್ತು. ನಮ್ಮೂರಲ್ಲಿ ಎಡೆಬಿಡದೆ ಮಳೆ. ನೀನು ಬರಲಿಲ್ಲ, ವಿಪರೀತ ಜ್ವರವಿತ್ತು ನಿಂಗೆ. 2000 ರಲ್ಲಿ ಸಹರ ಕಪ್ ನಡೆಯದೆ ಬೇಸರ ಉಂಟು ಮಾಡಿದರೆ, ನಿಮ್ಮ ಮನೆಯಲ್ಲಿ ಬಣ್ಣದ ಟೀವಿ ಬಂದಿತ್ತು, ನನ್ನಲ್ಲಿ ಅಳುವಿನ ಕಟ್ಟೆ ಒಡೆದಿತ್ತು. ಆಮೇಲೆ ನೀನು ಡಿಗ್ರಿ ಮಾಡಲು ಶಿವಮೊಗ್ಗೆ ಗೆಹೋದೆ. ಆಸ್ಟ್ರೇಲಿಯಾದವರು ಇಂಡಿಯಾಗೆ ಬಂದರು. ಹೇಡನ್, ಸಚಿನ್ ನ ದೇವರು ಅಂತ ಕರೆದ. ವಾರ್ನೆ ತಲೆ ಮೇಲೆ ಕೈ ಇಟ್ಟ. ಆದರೆ ಸಂತಸ ಹಂಚಿಕೊಳ್ಳಲು ನೀನು ಇರಲಿಲ್ಲ. ಆದರೆ 2003 ರಲ್ಲಿ ಸೆಂಚುರಿಯನ್ ನಲ್ಲಿ ಭಾರತ ಮತ್ತೆ ಪಾಕಿಸ್ತಾನ ಆಡುವಾಗ ನೀನು ಊರಿಗೆ ಬಂದಿದ್ದೆ. ಅಕ್ತರ್ ಗೆ ಒಂದು ಸಿಕ್ಸ್ ಬಿದ್ದಕೂಡಲೇ ನಿಮ್ಮನೇಲಿ ಕೇಬಲ್ ಸರಿ ಬರ್ತಾ ಇಲ್ಲ ಅಂತ ಹೇಳಿ ಬಂದು ನನ್ನ ಜೊತೇನೆ ಕೂತು ಆಟ ನೋಡಿದೆಯಲ್ಲ, ಅಂದು ನಮ್ಮಿಬ್ಬರ ಮದ್ಯೆ ಗ್ಯಾಪ್ ಇತ್ತಾ? ಆದ್ರೆ ಹಾಳದೊನು ಸಚಿನ್ 98 ಕೆ ಔಟ್ ಆಗಿ ಬಿಟ್ಟ! ನೀನು ಸಿಡುಕಿಕೊಂಡು ಮನೆಗೆಹೋದೆ.
2004 ರಲ್ಲಿ ರಾವಲ್ಪಿಂಡಿಯಲ್ಲಿ ಸಚಿನ್ 37 ನೆ ಶತಕ ದಾಖಲಿಸಿದ, ಆದರೆ ಪಂದ್ಯಸೋತ. ಅಷ್ಟೇ ಅಲ್ಲ, 38, 39,40 ನೆ ಶತಕದಲ್ಲೂ ಭಾರತಕ್ಕೆ ಸೋಲು. ನಿನ್ನ ಮುಖಕೂಡ ನೋಡದೆ 2 ವರ್ಷ 6 ತಿಂಗಳು 18 ದಿನ ಆಗಿತ್ತು. ನಂಗೆ 9 ನೇ ಕೆಲಸ ಕೂಡಹೋಗಿತ್ತು.
ಮುಂದೆ ವೆಸ್ಟ್ ಇಂಡಿಸ್ ನಲ್ಲಿ ಕಪ್ ನಡೆಯೋ ಹೊತ್ತಿಗೆ ನಿಮ್ಮನೇಲಿ ವರ ಹುಡುಕುವ ಸಂಭ್ರಮ. ಅದೆಷ್ಟು ಉಪ್ಪಿಟ್ಟು ಕೇಸರಿ ಬಾತ್ ಸಮಾರಾಧನೆ ನಡೆಯಿತೋ? ಬಾಂಗ್ಲಗೆ ನಮ್ಮವರು ಸೋಲೋ ಹೊತ್ತಿಗೆ, ಇಂಜಿನಿಯರ್ ನ ಬಿಟ್ಟು ಬೇರಾರಿಗೂ ನನ್ನ ಮಗಳನ್ನು ಕೊಡೋಲ್ಲ ಅಂತ ನಿಮ್ಮಪ್ಪ ಘೋಷಣೆ ಮಾಡಿ ಬಿಟ್ಟಿದ್ದರು. ನಾನಿಲ್ಲಿ ಮತ್ತೆ ಕೆಲಸ ಕಳೆದು ಕೊಂಡು ಬೀದಿ ಬೀದಿ ಅಲೀತಾ ಇದ್ದೆ. ನಮ್ಮವರು ವೆಸ್ಟ್ ಇಂಡಿಸ್ನಿಂದ ವಾಪಾಸ್ ಬಂದ್ರು, ನಾನು ಇಲ್ಲಿ ಹೀನಾಯವಾಗಿ ಸೋತೆ. ಮುಂದೆ ೨೦೦೭ ಸೆಪ್ಟೆಂಬರ್ ನಲ್ಲಿ ಟಿ 20 ಶುರು ಆಗುವಾಗ ಅದ್ಯಾರೋ ರಮೇಶ ಅನ್ನೋ ಹೆಸರು ನಿನ್ನ ಜೊತೆ ಕೇಳಿ ಬರುತ್ತಲಿತ್ತು. ಯುವರಾಜ್, ಕ್ರಿಸ್ ಬ್ರಾಡ್ ಗೆ 6 ಸಿಕ್ಸ್ ಹೊಡೆದ. ಕಪ್ ಕೂಡ ಗೆದ್ದರು. ಆದರೆ ತಂಡದಲ್ಲಿ ಸಚಿನ್ ಇರಲಿಲ್ಲ. ನಂತರ ಅವನು ಹೊಡೆದ ಯಾವ ಶತಕ ಗಳು ನನಗೆ ನೆನಪೇ ಉಳಿಯಲಿಲ್ಲ. ಮೊನ್ನೆ ಮೊನ್ನೆ ಅವನು ವಿಶ್ವ ಕಪ್ಕೂಡ ಗೆದ್ದು ಬಿಟ್ಟ, ಆದರೆ ಈ ಬೆಂಗಳೂರ್ ನಲ್ಲಿ ನಾನು ಒಬ್ಬನೇ ಕೂತುನೋಡುತ್ತಿದ್ದೆ, ನೀನು ಎಲ್ಲಿದ್ದ್ಯೋ?
ಕಳೆದ ವಾರ ಊರಿಗೆ ಹೋಗಿದ್ದೆ, ಅಮ್ಮ ಹೇಳಿದಳು, ನೀನು ಅದ್ಯಾವ್ದೋ ಆಫ್ರಿಕಾ ದದೇಶದಲ್ಲಿ ಇದ್ದಿ ಅಂತ. ಅಲ್ಲಿ ಕ್ರಿಕೆಟ್ ಬರುತ್ತಾ? ಗೊತ್ತಿಲ್ಲ. ಟೀವಿ ಲಿ ಕ್ರಿಕೆಟ್ ಬರ್ತಾ ಇತ್ತು. ನೋಡೋ ಆಸಕ್ತಿ ಇರಲಿಲ್ಲ. ಸಚಿನ್ ಕೂಡ ಟೀಂ ನಲ್ಲಿ ಇರಲಿಲ್ಲ.