ಕಾಯಕ ನಿಷ್ಠೆ
ಕವನ
ಕರುಳಿನ ಕುಡಿಯನು ಸೊಂಟದಲೇರಿಸಿ
ದುಡಿಮೆಯ ಗೈಯಲು ಹೊರಟಿಹಳು/
ಕಾಯಕ ನಿಷ್ಠೆಯ ತೋರಿಸುತವಳು
ಹೊಟ್ಟೆಗೆ ಅನ್ನವ ಹುಡುಕುವಳು//
ಬಿದಿರಿನ ಬುಟ್ಟಿಲಿ ಗೊಂಬೆಯ ಪೇರಿಸಿ
ಪುರಾಣ ಲೋಕವ ತಂದಿಹಳು/
ರಂಗಿನ ಬಣ್ಣದಿ ಹೊಳೆಯುವ ದೇವರ
ನೋಡುತ ಕೈಯನು ಮುಗಿದಿಹೆವು//
ಸಿಂಬಿಯ ಶಿರದ ಮೇಲೆಯೇ ಇಟ್ಟು
ಭಗವಂತನ ಹೊತ್ತು ತಿರುಗುವ ಗತ್ತು/
ಕಷ್ಟದ ಬದುಕು ಹೊಟ್ಟೆಯ ಪಾಡು
ಮುಖದ ಮುಗುಳ್ನಗೆ ಮಾಸದ ಹೊತ್ತು//
ಅಳುವ ಕಂದಗೆ ಆಸರೆ ನೀಡಿ
ಮೊಗದಲಿ ನಗವನು ತರುತಿಹಳು/
ನಾಸಿಕ ನತ್ತು ಮಿನುಗುವ ಹೊತ್ತು
ಹಣೆಯ ಕುಂಕುಮ ಶೋಭಿಸುತಿರಲು//
ಮನದ ದೃಢತೆ ಕಾಯಕ ನಿಷ್ಠೆಯ
ಮೆಚ್ಚಲೇ ಬೇಕು ನಾವಿಂದು/
ದುಡಿದು ಉಣ್ಣಿರಿ ಸುಖವನು ಕಾಣಿರಿ
ಸಾರುತ ಸಾಗುತ ಹೊರಟಿಹಳಿಂದು//
ನಾರಿಯ ಶಕ್ತಿಗೆ ಕೈಯನು ಮುಗಿವೆ
ದುಡಿಮೆಯೇ ದೇವರು ಎನ್ನುವ ಪರಿಗೆ/
ನೋವಿನ ಎಳೆಯ ತೋರಗೊಡದೆ
ಮಾಸದ ಮುಗುಳ್ನಗೆ ಮೊಗದ ಒಸಗೆ//
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ್