ಕಾಯಾ

ಕಾಯಾ

ಪುಸ್ತಕದ ಲೇಖಕ/ಕವಿಯ ಹೆಸರು
ಗುರುಪ್ರಸಾದ ಕಾಗಿನೆಲೆ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ಬೆಲೆ: ರೂ.೩೫೦.೦೦, ಮುದ್ರಣ: ೨೦೨೧

ಗುರುಪ್ರಸಾದ ಕಾಗಿನೆಲೆ ಇವರು ಬರೆದ ‘ಕಾಯಾ’ ಕಾದಂಬರಿ ಇತ್ತೀಚೆಗೆ ಅಂಕಿತ ಪುಸ್ತಕದಿಂದ ಪ್ರಕಾಶಿತವಾಗಿದೆ. ಈ ಪುಸ್ತಕದ ಬೆನ್ನುಡಿಯಲ್ಲಿ ಇಬ್ಬರು ಸಾಹಿತಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯಾ ಕಡಮೆ ಇವರ ಪ್ರಕಾರ “ ಕಾಯಾ ಕಾದಂಬರಿ ಬಗೆದು ತೋರಲು ಹೊರಟಿರುವುದು ಮನುಷ್ಯ ಬಾಳ್ವೆಯಲ್ಲೇ ಬೆರೆತು ಹೋಗಿರುವ ಹಪಾಪಿತನವನ್ನು. ಇಲ್ಲಿನ ಮಲೀಕ್, ಕಸ್ತೂರಿ, ಪರಿ, ಸಮಂತಾ, ಹನಿ ಕನ್ನಡ ಭೂಮಿಕೆಗೆ ಹೊಸತಾಗಿ ನಡೆದು ಬಂದವರಾದರೂ ತಮಗೇ ಗೊತ್ತಿಲ್ಲದೇ ಕನ್ನಡತನದಲ್ಲಿ ಆಳವಾಗಿ ಬೇರೂರಿದವರು. 

ತಿರುವು ಮುರುವಾಗಿ ತೊಟ್ಟ ಬಟ್ಟೆಯ ಗುಂಟ ಹೊಲಿಗೆಯ ಪುಗ್ಗೆ ಕಾಣುವ ಹಾಗೆ ಇಲ್ಲಿನ ಪಾತ್ರಗಳ ದೇಹದ ಮೇಲೂ, ಮನೋವಲಯದ ಒಳಗೂ ಉಬ್ಬುತಗ್ಗುಗಳು ಮೂಡಿವೆ. ಮರೆಯಾಗಿವೆ. ಆ ನೇಯ್ಗೆ ಕಾಣದಂತೆ ಮಾಡಲು ನುರಿತ ಪ್ಲಾಸ್ಟಿಕ್ ಸರ್ಜನ್ ಇದ್ದಾನೆ, ಪಳಗಿದ ರಾಜಕಾರಣಿಯಿದ್ದಾಳೆ.

ಕಾದಂಬರಿಯುದ್ದಕ್ಕೂ ಹರಡಿಕೊಂಡಿರುವ ಲೀಸಾ ಸಾಲೆಂಜೆರ್ ಎಂಬ ವ್ಯಕ್ತಿ ನಮ್ಮಲ್ಲೇ ಯಾರೊಬ್ಬರೂ ಆಗಿರಬಹುದಾದ ಸಾಧ್ಯತೆಯೇ ಬೆಚ್ಚಿ ಬೀಳಿಸುವಂತಿದೆ. ನೀಳಬೆರಳ್ನೆಮಿರ್, ನಿಮ್ಮಬೆರಳ್ಮಡಿಸ್ ಪದಗಳ ಅರ್ಥವನ್ನು ಈ ಕಥನ ಸಾಗರದಲ್ಲಿ ಧುಮುಕಿಯೇ ತಿಳಿಯಬೇಕು!”

ಇನ್ನೊರ್ವ ಲೇಖಕಿ ಸೌಮ್ಯ ಕಲ್ಯಾಣ್ ಕರ್ ಪ್ರಕಾರ “ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೋ ಅಲ್ಲವಾದರೂ ಸಿನೆಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ/ಸೌಂದರ್ಯೋಪಾಸಕ ಚಿಕಿತ್ಸೆಗಳು, ಸಾಮಾನ್ಯ ಜನರಿಗೂ ಎಟುಕುವಂತಾಗಿ, ಅದರದಕ್ಕೆ ಹಾತೊರೆಯುವಂತಾಗಿದ್ದು ಅಚ್ಚರಿಯ ವಿಷಯ. ತನ್ನ ಇಗೋ ಸರ್ವೈವಲ್ ಗಾಗಿ, ಸೋಶಿಯಲ್ ಆಕ್ಸೆಪ್ಟೆನ್ಸಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು, ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂತಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸಮಂತಾಳ ಕಾಯ ಪಲ್ಲಟ, ಕಸ್ತೂರಿ, ಪರಿ, ಹನಿ, ಸಿದ್ಧಿಕಿ ಎಲ್ಲಾ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ದದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಯೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬಂದು ಬಣ್ಣದಲ್ಲೇ ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು.”

ಇವರಿಬ್ಬರ ಬೆನ್ನುಡಿಯ ಬರಹಗಳು 'ಕಾಯಾ’ ಕಾದಂಬರಿಯ ಬಗ್ಗೆ ಕುತೂಹಲವನ್ನು ಮೂಡಿಸುತ್ತವೆ.