ಕಾಯಿದೆ ಮಾರಕವಾಗದಿರಲಿ

ರಾಜ್ಯದಲ್ಲಿ ಕೃಷಿ ಭೂಮಿ ಪರಿವರ್ತನೆಗೆ ಪ್ರಸಕ್ತ ಚಾಲ್ತಿಯಲ್ಲಿರುವ ನಿಯಮಾವಳಿಗಳನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಇದಕ್ಕೆ ಕೆಲ ರೈತರಿಂದ ವಿರೋಧವೂ ವ್ಯಕ್ತವಾಗಿದೆ. ರಾಜ್ಯದಲ್ಲಿ ರಾಜಧಾನಿ ಬೆಂಗಳೂರಿನ ಹೊರವಲಯ ಸೇರಿದಂತೆ ಜಿಲ್ಲೆ, ತಾಲೂಕು ಹೋಬಳಿ ಮತ್ತು ಗ್ರಾಮೀಣ ಮಟ್ಟದಲ್ಲಿಂದು ನೂರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ರೈತರು ಹಲವು ಹತ್ತು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವುದು ನಿಜ. ಇತ್ತ ಸಮರ್ಪಕ ಪ್ರಮಾಣದಲ್ಲಿ ವ್ಯವಸಾಯ ಮಾಡಿ ಲಾಭದಾಯಕ ಬೆಳೆ ತೆಗೆಯಲು ಸಾಧ್ಯವಾಗದಂತಹ ದುಸ್ಥಿತಿ. ಅತ್ತ ನಷ್ಟದ ಬೆಲೆಗೆ ಭೂಮಿಯನ್ನು ಮಾರಿಕೊಳ್ಳುವಂತಹ ಚಿಂತಾಜನಕ ಸ್ಥಿತಿ.!
ಆದರೆ ರೈತನ ಹೆಸರಿನಲ್ಲಿರುವ ಕೃಷಿ ಭೂಮಿಯನ್ನು ನೇರವಾಗಿ ಎರಡನೆ ವ್ಯಕ್ತಿಗೆ ಮಾರಾಟ ಮಾಡಲು ಕಾನೂನಿನಡಿ ಅವಕಾಶವಿಲ್ಲ. ಕಂದಾಯ ಕಾಯಿದೆ ನಿಯಮಾವಳಿ ಪ್ರಕಾರ ಯಾವುದೇ ಕೃಷಿ ಜಮೀನು ಕೃಷಿಯೇತರ ಉದ್ದೇಶಗಳಿಗೆ ಬಳಕೆಯಾಗಬೇಕಾದಲ್ಲಿ ಅದು ಸಂಬಂಧಿತ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಭೂ ಪರಿವರ್ತನೆಯಾಗಿರುವುದು ಕಡ್ಡಾಯ. ಗಂಭೀರ ಸಂಗತಿ ಎಂದರೆ ಕಳೆದ ಒಂದೂವರೆ, ಎರಡು ದಶಕದ ಅವಧಿಯಲ್ಲಿ ಯಾವುದೇ ಭೂ ಪರಿವರ್ತನೆಯೂ ಇಲ್ಲದೆ ಕೃಷಿ ಭೂಮಿಯಲ್ಲಿಯೇ ಬೃಹತ್ ಆಕಾರದ ಮನೆ ಮತ್ತು ಅಪಾರ್ಟ್ ಮೆಂಟುಗಳು ತಲೆಯೆತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ. ನಾಡಿನ ಉದ್ದಗಲಕ್ಕೂ ಅನಧಿಕೃತ ವಸತಿ ಬಡಾವಣೆಗಳು ತಲೆಯೆತ್ತಲು ಇದು ರಹದಾರಿಯಾಗಿದೆ ಎಂಬುದನ್ನು ಸರ್ಕಾರ ಮರೆಯುವಂತಿಲ್ಲ. ಈಗ ರೈತರು ಭೂ ಪರಿವರ್ತನೆಗೆ ಕೇವಲ ಒಂದು ಸ್ವಯಂಘೋಷಣೆ ಪತ್ರವನ್ನು (ಸೆಲ್ಫ್ ಡಿಕ್ಲರೇಷನ್) ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಮೂಲಕ ಕೃಷಿ ಭೂಮಿಯ ಪರಿವರ್ತನೆಗೆ ಅವಕಾಶವಿದೆ ಎಂದು ಕಂದಾಯ ಮಂತ್ರಿ ಮೊನ್ನೆ ಘೋಷಿಸಿದ್ದು ಸರಿಯಷ್ಟೆ. ಆದರೆ ಇದರ ಸಾಧಕ-ಭಾಧಕಗಳ ಬಗ್ಗೆಯೂ ಇಂದು ಸೂಕ್ತ ಚರ್ಚೆ ಅಗತ್ಯವಿದೆ.
ತಮ್ಮ ಜಮೀನಿಗೆ ಸಂಬಂಧಿಸಿದ ಸ್ವಯಂ ಘೋಷಣೆಯಿಂದ ನಾಡಿನಲ್ಲಿ ರಿಯಲ್ ಎಸ್ಟೇಟ್ ದಾರರು ಮೇಲುಗೈ ಸಾಧಿಸುವರೆಂಬ ರೈತರ ಆತಂಕವನ್ನು ತಳ್ಳಿ ಹಾಕಲಾಗದು. ಏಕೆಂದರೆ ನೂರಾರು ಎಕರೆ ಕೃಷಿ ಜಮೀನಿನ ಮೇಲೆ ಹದ್ದಿನ ಕಣ್ಣಿಟ್ಟ ಬಿಲ್ಡರುಗಳು ರೈತನಿಗೆ ಸಾಮ, ಭೇಧ ಮತ್ತು ದಂಡೋಪಾಯದಿಂದ ಅವನ ಮೇಲೆ ಒತ್ತಡ ಹೇರಿ ಕೃಷಿ ಭೂಮಿ ಪರಿವರ್ತನೆಗೆ ಪ್ರಯತ್ನಿಸಬಹುದಲ್ಲವೇ? ಭೂ ಪರಿವರ್ತನೆಯ ನಿಯಮಾವಳಿಗಳು ಸರ್ಕಾರದ ಮಟ್ಟದಲ್ಲಿ ಸರಳವಾದರೂ ಅದು ರೈತರ ಪಾಲಿಗೆ ಮಾರಕವಾಗುವಂತಹ ರೀತಿಯಲ್ಲಿ ರೂಪುಗೊಂಡರೇ ಒಳಿತು.
ನಿಯಮಾವಳಿ ಸರಳವಾದಷ್ಟು ಮಧ್ಯವರ್ತಿಗಳು ಮತ್ತು ಬಿಲ್ಡರುಗಳ ಪಾಲಿಗೆ ಇದು ಬೆಣ್ಣೆಯಾಗಬಾರದಷ್ಟೆ ! ರಾಜ್ಯದಲ್ಲಿ ಜಮೀನಿಗೆ ಭಾರಿ ಬೆಲೆಯಿದೆ. ಅಲ್ಲದೆ ಬೃಹತ್ ಯೋಜನೆಗಳೂ ಇಲ್ಲಿ ನೆಲೆಗಾಣಬೇಕಿದೆ. ಈ ಯೋಜನೆಗಳಿಗೆ ನೂರಾರು ಎಕರೆ ಕೃಷಿ ಭೂಮಿ ಅನಿವಾರ್ಯ. ಆದರೆ ಬಂಗಾರದಂತಹ ಬೆಳೆ ಬೆಳೆಯುವ ಕೃಷಿ ಭೂಮಿಯೂ ರಿಯಲ್ ಎಸ್ಟೇಟ್ ದಾರರ ಕೈಗೆ ಸಿಗುವಂತಹ ಸಡಿಲ ಕಾನೂನುಗಳು ಮತ್ರ ಅನ್ನದಾತನ ಪಾಲಿಗೆ ಅತಿ ಮಾರಕ.
ಕೃಪೆ ಹೊಸ ದಿಗಂತ, ಸಂಪಾದಕೀಯ, ದಿ: ೦೪-೦೫-೨೦೨೧
ಚಿತ್ರ ಕೃಪೆ: ಅಂತರ್ಜಾಲ ತಾಣ