ಕಾರಿನ ಸ್ವಗತ!

ಕಾರಿನ ಸ್ವಗತ!

ಮೊದಲ ನೋಟದಲ್ಲೆ ನೀನು ನನಗೆ ಸೋತೆ. ಮನೆಯವರನ್ನು ಓಲೈಸಿ ನನ್ನನ್ನು ನಿನ್ನ ಮನೆಗೆ ಕರೆತಂದೆ. ನಂತರ ನಿನ್ನ ಜೊತೆಗೆ ಸ್ನೇಹ ಬೆಳೆಯಿತು, ಸ್ನೇಹ ಪ್ರೇಮವಾಯಿತು. ಎಲ್ಲಿಗೆ ಹೋದರೂ ನೀನು ನನ್ನೊಂದಿಗೆ ಬರುತ್ತಿದ್ದೆ. ನಾನು ಇಲ್ಲದೇ ನೀನು ಇರದಾದೆ. ನನ್ನೊಂದಿಗೆ ನೀನು ಬೆರೆತುಹೋದೆ. ನನ್ನನ್ನು ಮನೆಗೆ ಕರೆತಂದ ಹೊಸತರಲ್ಲಿ, ನನ್ನನ್ನು ನೋಡಿಕೊಂಡ ರೀತಿ ನನಗೆ ಇಂದಿಗೂ ನೆನಪಿದೆ. ದಿನವೂ ನನ್ನ ಒರೆಸುವುದು, ಚಕ್ರಗಳಿಗೆ ಮಣ್ಣು ಮೆತ್ತಿದ್ದರೆ ನೀರು ಹಾಕಿ ತೊಳೆಯುವುದು, ನಂತರ ಒಣಗಿದ ಬಟ್ಟೆಯಿಂದ ಒರೆಸುವುದು, ಎಲ್ಲಾ ನೆನಪಿದೆ. ನನ್ನನ್ನು ತಣ್ಣೀರಿನಿಂದ ತೊಳೆದಾಗಲೆಲ್ಲಾ ನನಗೆ ಚಳಿ ಆಗಬಾರದೆಂದು ನನ್ನನ್ನು ಒರೆಸಿದ ಬಳಿಕ ಬಿಸಿಲಿನಲ್ಲಿ ಕಾಯಿಸುತ್ತಿದ್ದೆ. ಆಗ ಸೂರ್ಯನ ಶಾಖ ತಗುಲಿ ಮೈ ಬೆಚ್ಚಗಾಗುತ್ತಿತ್ತು. ನನಗೆ ಹುಮ್ಮಸ್ಸು ಬರುತ್ತಿತ್ತು. ನನ್ನನ್ನು ಹುರಿದುಂಬಿಸಿದಾಗಲೆಲ್ಲ ನಾನು ಜೋರಾಗಿ ಓಡ್ತಿದ್ದೆ. ಓಡಿ, ಓಡಿ, ನನಗೆ ಸುಸ್ತಾದಾಗ ನನ್ನನ್ನು ನಿಲ್ಲಿಸಿ ನೀನು ವಿಶ್ರಾಂತಿ ಪಡೆಯುತ್ತಿದ್ದೆ. ನನಗೋಸ್ಕರ ಒಂದು ಗೂಡು ಕಟ್ಟಿಸಿಕೊಟ್ಟೆ, ನಾನು ಅದರಲ್ಲಿ ಇರಲು ಶುರು ಮಾಡಿದೆ. ನನ್ನನ್ನೂ ನಿಮ್ಮವರಲ್ಲೊಬ್ಬಳಂತೆ ಭಾವಿಸಿದೆ. ನನಗೂ ಆಗ ವಯಸ್ಸಿತ್ತು, ಚೆನ್ನಾಗಿ ಓಡುವ ಶಕ್ತಿ ಇತ್ತು. ಹಬ್ಬದ ದಿನ, ನನ್ನನ್ನು ಚೆನ್ನಾಗಿ ತೊಳೆದು, ಪೂಜೆ ಸಲ್ಲಿಸುತ್ತಿದ್ದೆ. 

ಫೋರ್ಡ್ ಐಕಾನ್ ಫ್ಲೈರ್‍

ನನ್ನ ನಿಜವಾದ ಶಕ್ತಿ ಪ್ರದರ್ಶನವಾದದ್ದು ಕೊಡಚಾದ್ರಿಗೆ ಹೋದಾಗ. ನನ್ನ ಶಕ್ತಿ ಮೀರಿ ಓಡ್ತಿದ್ದೆ. ಆದರೆ ನನಗೆ ವಯಸ್ಸಾಗಿದೆ ಎಂಬ ಸುಳಿವೂ ಇರಲಿಲ್ಲ. ಓಡಿ, ಓಡಿ, ನನಗೂ ದಣಿವಾಗಿತ್ತು. ಹೇಗೋ ನಿನ್ನನ್ನು ಕ್ಷೇಮವಾಗಿ ಮನೆಗೆ ಕರೆತಂದೆ. ನಂತರ ನನ್ನ ದಣಿವನ್ನು ಇಂಗಿಸಲು ಒಂದು ವಾರ ಬೇಕಾಯಿತು. ಅಂದಿನಿಂದ ನೀನು, ನನಗೆ ಇನ್ನೂ ಹೆಚ್ಚು ಆರೈಕೆ ಮಾಡಿದೆ. ಎಲ್ಲರಿಗೂ ವಯಸ್ಸಾಗುತ್ತದೆ. ಅಲ್ಲವೇ? ಹಾಗೆಯೇ ನನಗೂ ಸಹ ವಯಸ್ಸಾಗಿದೆ ಎಂಬ ಅರಿವು ಮೂಡಿತು. ನಂತರ ನನ್ನನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ನಿಲ್ಲಿಸಿದೆ. ಜೊತೆಗೆ ಪೆಟ್ರೋಲ್ ಬೆಲೆ ಕೂಡ ಏರುತ್ತಾ ಹೋಯಿತು. ನಾನು ನನ್ನ ಗೂಡಿನಲ್ಲಿಯೇ ಹೆಚ್ಚು ಕಾಲ ಕಳೆಯಬೇಕಾಯಿತು. ನೀನು ಒಬ್ಬೊಬ್ಬನೇ ಹೊರಗೆ ಹೋಗುವಾಗ ನನ್ನನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದೆ. ಆದರೆ ಮನೆಯವರೆಲ್ಲರೂ ಹೊರಗೆ ಹೋಗುವಾಗ ಮಾತ್ರ ನನ್ನನ್ನು ಕರೆದುಕೊಂಡು ಹೋಗುತ್ತಿದ್ದೆ. ದಿನ ನನ್ನ ಜೊತೆ ಹೋಗುತ್ತಿದ್ದ ನೀನು, ವಾರಕ್ಕೊಮ್ಮೆ ನನ್ನೊಂದಿಗೆ ಬರುತ್ತಿದ್ದೆ. ನನಗೂ ಈ ಸೂಕ್ಷ್ಮಗಳು ತಿಳಿಯುವ ಹೊತ್ತಿಗೆ ನನ್ನಲ್ಲೂ ಕೆಲವು ದೋಷಗಳಿವೆ ಎಂದು ಅರಿತೆ. 

ಕಳೆದ ಐದು ವರ್ಷಗಳಿಂದ ನಿನ್ನ ಜೊತೆ ಇದ್ದೆ. ನನ್ನನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಕರೆದುಕೊಂಡು ಹೋದೆ. ಅಷ್ಟೇ ಕ್ಷೇಮವಾಗಿ ಕರೆತಂದೆ. ನಾನು ನೀನು ಜೊತೆಯಲ್ಲಿ ನೋಡಿದ ಜಾಗಗಳು ಅದೆಷ್ಟೋ? 

ಇಂದು, ನಾನು ನಿನ್ನಿಂದ ದೂರವಾಗಿದ್ದೇನೆ. ಹೊಸ ಮನುಷ್ಯರೊಂದಿಗೆ ನನ್ನ ಒಡನಾಟ ಶುರುವಾಗಲಿದೆ. ಅವರೂ ನಿನ್ನಷ್ಟೇ ಪ್ರೀತಿ ತೋರುತ್ತಾರೆ ಎಂಬ ನಂಬಿಕೆ ಇದೆ. ನಿನಗೆ ಒಳ್ಳೆಯದಾಗಲಿ. 

 

Comments

Submitted by anil.ramesh Fri, 09/21/2012 - 20:10

In reply to by nkumar

ಕಾರು ಹಳೆಯದಾದ ಮೇಲೆ ಮಾರಿ ಬಿಡಬೇಕು. ನೋ ಸೆಂಟಿಮೆಂಟ್ಸ್!
ಕೆಲವು ದಿನಗಳು ಬೇಜಾರಾಗತ್ತೆ. ಏನೋ ಮಿಸ್ಸಿಂಗ್ ಅಂತ! ಅದು ಹೊಸ ಕಾರು ಬರೋವರೆಗೂ ಅಷ್ಟೇ!

ನನ್ನ ಫೋರ್ಡ್ ಕಾರು 84000ಕಿ.ಮೀ. ಓಡಿತ್ತು. ಒಳ್ಳೆ ಬೆಲೆ ಸಿಕ್ತು! ಮಾರಿಬಿಟ್ಟೆ.