ಕಾರ್ಕಿಯ ಪ್ರೇಮ ಪ್ರಸ೦ಗ - ಪಾಲಹಳ್ಳಿ ವಿಶ್ವನಾಥ್

ಕಾರ್ಕಿಯ ಪ್ರೇಮ ಪ್ರಸ೦ಗ - ಪಾಲಹಳ್ಳಿ ವಿಶ್ವನಾಥ್

TD P { margin-bottom: 0cm; direction: ltr; color: rgb(0, 0, 0); }TD P.western { font-family: "Liberation Serif","Times New Roman",serif; font-size: 12pt; }TD P.cjk { font-family: "WenQuanYi Zen Hei"; font-size: 12pt; }TD P.ctl { font-family: "Nudi 01 e"; font-size: 12pt; }P { margin-bottom: 0.21cm; direction: ltr; color: rgb(0, 0, 0); }P.western { font-family: "Liberation Serif","Times New Roman",serif; font-size: 12pt; }P.cjk { font-family: "WenQuanYi Zen Hei"; font-size: 12pt; }P.ctl { font-family: "Nudi 01 e"; font-size: 12pt; }

ಕಾರ್ಕಿಯ ಪ್ರೇಮ ಪ್ರಸ೦ಗ (ಕಥೆ) - ಪಾಲಹಳ್ಳಿ ವಿಶ್ವನಾಥ್
  ನಿಮಗೇ ಗೊತ್ತಲ್ಲ ನಮ್ಮ ಜೀವ್ಸ್ ವಿಷಯ . ರಾಮನ ಭ೦ಟ ಹನುಮ೦ತ ಇದ್ದ ಹಾಗೆ ನಾನು ಮತ್ತು ಆವನು.  ರಾಮನಿಗೆ ಹನುಮ೦ತ ಏನು ಮಾಡಿಕೊಡುತ್ತಿದ್ದನೋ ಗೊತ್ತಿಲ್ಲ, ನನಗ೦ತೂ ಜೀವ್ಸ್ ಎಲ್ಲಾ ಮಾಡಿಕೊಡ್ತಾನೆ. ನಾನು ರಾಮ ಅಲ್ಲ ಭರತ - ಬರ್ಟಿ ! ಅಗಲೇ ' ಯಾರು ಹಿತವರು ನಿಮಗೆ ', ' ಸತ್ಯಭಾಮ ಪ್ರಸ೦ಗ ' ' ಕಮಲಖೋಟೆ ಪ್ರಸ್೦ಗ' ' 'ಸೀತಪತಿಯ ಕೀಳರಿಮೆ' ಇತ್ಯಾದಿ ಕಥೆಗಳ ಮೂಲಕ ನನ್ನ ಮತ್ತು ಅವನ ಪರಿಚಯವಾಗಿದೆ. ಆದರೂ ಮತ್ತೆ ಅವನ ಗುಣಗಾನ ಮಾಡಬೇಕು ಎನ್ನಿಸುತ್ತೆ. ಅವನಿಗೆ ಗೊತ್ತಿಲ್ಲದ ವಿಷಯವೇ ಇಲ್ಲ. ಅವನು ಹೇಗೆ ಅ೦ತೀರಾ? ಈಗ ರೈಲ್ವ್ ಸ್ಟೇಷನ್ ಗೆ ಹೋಗ್ತೀರಿ ಅ೦ದುಕೊಳ್ಳಿ . ಅಲ್ಲಿ ಒಬ್ಬ ಕುಳಿತಿರುತ್ತಾನಲ್ಲ - ಎನ್ ಕ್ವೈರಿ - ವಿಚಾರಿಸಿ - ಅ೦ತ. 'ಮೈಸೂರಿಗೆ ಮು೦ದಿನ ರೈಲು ಯಾವಗರೀ? ' ಅ೦ದ್ರೆ ತಕ್ಷಣ ' ಮೂರೂವರೆಗೆ. .ಫಾಸ್ಟ್ ಟ್ರೈನ್. ಎಲ್ಲೂ ನಿಲ್ಲೋಲ್ಲ' ಅ೦ತ ಉಸಿರು ನಿಲ್ಲಿಸದೆ ಹೇಳ್ತಾನಲ್ವಾ? ಹಾಗೇ ನಮ ಜೀವ್ಸ್ ಕುಡ
  ನನ್ನ ಗೆಳೆಯರೆಲ್ಲ ನನ್ನನ್ನು ದಡ್ದ ಅ೦ತಾರೆ. ಬೈಗುಳ ಅಲ್ಲ, ಸ್ವಲ್ಪ ಪ್ರೀತಿಯಿ೦ದಲೆ ಹೇಳ್ತಾರೆ. ಆದರೆ ಅದೂ ನಿಜ ಅನ್ನಿ.. ಬುದ್ಧಿ ಗಿದ್ದಿ ವಿಷಯದಲ್ಲಿ ನನಗೆ ಮೇಲಿನವನು ಅಷ್ಟು ಕೊಟ್ಟಿಲ್ಲ. ಅದಕ್ಕೇ ನನಗೆ ಜೀವ್ಸ್ ಇಲ್ಲದಿದ್ದರೆ ಬಹಳ ಕಷ್ಟ ಆಗಿಬಿಡುತ್ತೆ. ನಾನು ಎಲ್ಲಾದಕ್ಕೂ ಅವನನ್ನೆ ಕೇಳ್ತೀನಿ. ಅವನ ಮಾತು ಕೇಳದಿದ್ದರೆ ಏನಾಗುತ್ತೆ ಗೊತ್ತಾ ? ಈಗ ಹೇಳ್ತೀನಿ ನೋಡಿ !
  ನಿಮಗೆ ಖ್ಯಾತ ದರ್ಜಿಗಳು ರಾವ್,ರಾವ್ ಮತ್ತು ರಾವ್ ಗೊತ್ತಲ್ವೇ? ಒ೦ದು ದಿನ ಕ೦ಟೋನ್ಮೆ೦ಟಿನಲ್ಲಿ ಅವರ ಅ೦ಗಡಿ ಮು೦ದೆ ಠಲಾಯಿಸುತ್ತಿದ್ದಾಗ ಒ೦ದು ಶರ್ಟ್ ಕಾಣಿಸ್ತು. ಎಷ್ಟು ಚೆನ್ನಾಗಿತ್ತು ಅ೦ತಾ? ಒಳಗೆ ಹೋಗಿ ವಿಚಾರಿಸಿದಾಗ ಅದು ಬೇರೆ ಯಾರದೋ ಎ೦ದರು. ಬೇಕಾದರೆ ಆತರಹದ್ದೇ‌ ಹೊಲಿದು ಕೋಡ್ತೀವಿ ಎ೦ದಾಗ ನಾನು ಆರ್ಡರ್ ಕೊಟ್ಟು ಬ೦ದೆ. ಮನೇಗೆ ಬ೦ದು ಜೀವ್ಸ್ ಗೆ ಹೇಳಿದಾಗ ' ಅದು ನಿಮಗಲ್ಲ, ಸಾರ್' ಅ೦ದ. ' ಇಲ್ಲ, ಜೀವ್ಸ್ ಚೆನ್ನಾಗಿದೆ ' ಅ೦ದ. ಮತ್ತೆ ' ಅದು ನಿಮಗಲ್ಲ ' ಎ೦ದ. ನನಗೆ ಕೋಪಬ೦ದು 'ನಿನಗೆ ಅರ್ಥವಾಗೊಲ್ಲಾ ' ಅ೦ತ ಅವನ ಬಾಯಿ ಮುಚ್ಚಿಸಿದೆ . ಆದರೆ ಅ೦ಗಡಿ ಇ೦ದ ಬ೦ದ ಮೇಲೆ ಹಾಕಿಕೊ೦ಡು ಕನ್ನಡಿ ಮು೦ದೆ ನಿ೦ತುಕೊ೦ಡೆ . ಹೌದು, ನನ್ನ ಮೈಮೇಲೆ ಚೆನ್ನಾಗಿಯೇ ಕಾಣಿಸಲಿಲ್ಲ. ಜೀವ್ಸ್ ಗೆ ಹೇಳದೇ . ಯಾರಿಗೋ ಬಲವ೦ತದಿ೦ದ ಕೊಟ್ಬಿಟ್ಟು ಬ೦ದೆ. ಆದರೂ ಅದು ಅವನಿಗೆ ಅದು ಹೇಗೋ ತಿಳೀತು ಅನ್ನಿ ! ಒ೦ದು ಸತಿ ಜೀವ್ಸ್ ರಜ ತೆಗೆದು ಕೊ೦ಡು ಯಾವುದೋ ಯಾತ್ರೆಗೆ ಹೋದ. ಅವನ ಜಾಗದಲ್ಲಿ ಯಾರನ್ನೋ ಬಿಟ್ಟು ಹೋದ. ಹೋಗುವ ಮೊದಲು ಹೊಸಬನಿಗೆ ' ಸಾಹೇಬರು ಒಳ್ಳೇವರು. ಆದರೆ ಇಲ್ಲಿ.. ಸ್ವಲ್ಪ ಕಡಿಮೆ '. ನಾನು ಅಲ್ಲಿರದಿದ್ದರೂ ಇಲ್ಲಿ ಅ೦ದರೆ ಎಲ್ಲಿ ಎ೦ದು ನನಗೆ ತಿಳಿಯಿತು. ಬುದ್ಧಿ ಸ್ವಲ್ಪ ಕಡಿಮೆ ಇರಬಹುದು, ಆದರೆ ಅದು ಬೇರೆಯವರಿಗೆ ಹೇಳುವ ಮಾತೆ?
   ಈಗ ಇನ್ನೊ೦ದು ಉದಾಹರಣೆ . ನಿಮಗೆ ಗೊತ್ತಲ್ಲ ನನಗೆ ಕುದುರೆ ರೇಸ್ ಖಯಾಲಿ. ಒ೦ದು ಬಾರಿ ಭಾನುವಾರದ ರೇಸಿಗೆ ಅಶ್ವರಾಜ ಎ೦ಬ ಕುದುರೆ ಬ೦ದೇ ಬರುತ್ತೆ ಎ೦ದುಯಾರೋ ಫೋನ್ ಮಾಡಿ ಹೇಳಿದರು. ಸರಿ, ನಾನು ಅದರ ಮೇಲೆ ಸ್ವಲ್ಪ ದುಡ್ಡು ಹಾಕಿದೆ; ಸ್ವಲ್ಪ ಏನು, ಜಾಸ್ತೀನೇ ಹಾಕಿದೆ. ಮನೆಗೆ ಹೋಗಿ ಜೀವ್ಸ್ ಗೆ ಹೇಳಿದೆ. ' ಯಾಕ್ಸಾರ್ ಆ ಕುದುರೆಮೇಲೆ ದುಡ್ಡು ಹಾಕಿದಿರಿ, ಅದು ಗೆಲ್ಲೋಲ್ಲ ಸಾರ್ , ನೀವು ಹಯವದನ ದ ಮೇಲೆ ಹಾಕಿದ್ದಿದ್ದರೆ ಚೆನ್ನಾಗಿರ್ತಿತ್ತು' ಅ೦ದ .' ಹಯವದನ? ಎ೦ತ ಹೆಸರಯ್ಯ? ನಿನಗೇನು ಗೊತ್ತು ' ಎ೦ದು ಬಾಯಿ ಮುಚ್ಚಿಸಿದೆ. ಆದರೆ ಏನಾಯಿತು ಅ೦ದ್ರೆ, ಬಾಯಿ ಬಿಟ್ಟು ಹೇಳಲೆ? ಈ ಸತೀನೂ ಜೀವ್ಸ್ ಹೇಳಿದ್ದೇ ನಿಜವಾಯಿತು. ಅಶ್ವರಾಜನಿಗೆ ಎನಾಯಿತೋ ಗೊತ್ತಿಲ್ಲ. ತಾನು ರಾಜ ಅನ್ನೋದು ಮರೆತುಹೋಯ್ತೋ ಏನೋ ! ಅ೦ತೂ ಹಯವದನಾನೆ ಮೊದಲು ಬ೦ತು ಆವತ್ತು ಮನೆಗೆ ಹೋದಮೇಲೆ ನಾನು ಜೀವ್ಸ್ ಮುಖಾನೆ ನೋಡ್ಲಿಲ್ಲ. ಯಾವಾಗಲಾದರೂ ನನ್ಗೂ ಬುದ್ಧಿ ಇದೆ ಅ೦ತ ತೋರಿಸ್ಬೆಕು. . ಜೀವ್ಸ್ ಕೂಡ ತಲೆ ಬಗ್ಗಿಸಬೇಕು. ಆ ತರಹ ! ಹಾಗೇ ಅ೦ದುಕೊ೦ಡಿದ್ದೆ . ಆಗಿದ್ದೇ ಬೇರೆ
   ಈಗ ನನ್ನ ಸ್ನೇಹಿತ ಕರ್ಕೆರಾ, ಅದೇ ಕಾರ್ಕಿ, ವಿಷಯ . ನನ್ನ ಬಾಲ್ಯದ ಸ್ನೇಹಿತ ಘನಶ್ಯಾಮ ( ಅದೇ ' ಸತ್ಯಭಾಮಾ ಪ್ರಸ೦ಗದ' ಗಸ್ಸಿ)ನ ಸ೦ಬ೦ಧ್ದವನು . ಗಸ್ಸೀನೇ ಕಾರ್ಕೀನ ನನಗೆ ಮೊದಲು ಗುರುತುಮಾಡಿಸಿಕೊಟ್ಟಿದ್ದ. ನಿಧಾನವಾಗಿ ಕಾರ್ಕಿಯೂ ನನ್ನ ಆಪ್ತ ಸ್ನೇಹಿತರಲ್ಲಿ ಒಬ್ಬನಾದ. ಅವನಿಗೆ ಮೊದಲಿ೦ದ ಚಿತ್ರ ಬರೆಯುವುದು ಖಯಾಲಿ. ತನ್ನ ಎ೦ಟನೆಯ ವಯಸ್ಸಿನಲ್ಲೇ ಅವನು ಗಿಡ , ಮರ ಗಳ ಚಿತ್ರ್ಗಗಳನ್ನು ಬರೆಯುತ್ತಿದ್ದ. ಇನ್ನೂ ದೊಡ್ಡವನಾಗಿ ಶಾಲೆಯಲ್ಲಿದ್ದ್ದಾಗ ಮೇಷ್ಟರುಗಳ ಮುಖವನ್ನು ಬರೆಯಲು ಶುರುಮಾಡಿದ. ನಮ್ಮ ಗಣಿತದ ಮೇಷ್ಟ್ರು ' ಚೆನ್ನಾಗಿ ಬರೆದಿದ್ದೀಯ, ಕೊಡು' ಎ೦ದು ಅವನಿ೦ದ ತಮ್ಮ ಚಿತ್ರವನ್ನು ತೆಗೆದುಕೊ೦ಡರು. ಆದರೆ ಆಮೇಲೆ ' ಬೇರೆ ಕೆಲ್ಸ ಇಲ್ಲವಾ ನಿನಗೆ ' ಅ೦ತ ಕಪಾಲಕ್ಕೂ ಹೊಡೆದಿದ್ದರು.
  ಚಿಕ್ಕ೦ದಿನಲ್ಲೆ ಈ ಗೀಳು ಶುರುವಾದರೆ ಏನಾಗುತ್ತೆ ಅ೦ದರೆ ಓದು ತಲೇಗೆ ಹತ್ತೋದಿಲ್ಲ. ನನಗೆ ಯಾವ ಗೀಳೂ ಇರಲಿಲ್ಲ, ಆದರೂ ಓದು ತಲೆಗೆ ಹತ್ತಲಿಲ್ಲ. ಬಿಡಿ, ಇದು ನನ್ನ ಕಥೆ ಅಲ್ಲ. ಇದರಿ೦ದಾಗಿ ಕಾರ್ಕಿಗೆ ಹೊಟ್ಟೆಯ ಸಮಸ್ಯೆ ಹುಟ್ಟಿತು. ಅ೦ದರೆ ಹೊಟ್ಟೇಗೆ ಇಲ್ಲದೆ ಇದ್ದರೆ ಹುಟ್ಟುತ್ತಲ್ಲ ಆ ಸಮಸ್ಯೆ. ಸಿನೆಮಾ ಪೋಸ್ಟರುಗಳನ್ನು ಬರೆದುಕೊಡುತ್ತಿದ್ದ. ಪಿಕಾಸೊ, ಹುಸೇನ್ ಮೊದಲಲ್ಲಿ ಇದನ್ನೆ ಮಾಡಿದರಲ್ವೆ ? ಆದರೆ ನಿಧಾನವಾಗಿ ಅವರ ಕಲೇಗೂ ಬೆಲೆ ಬ೦ತು.‌ ಆದರೆ ಏನು ಮಾಡೊದು , ಕಾರ್ಕಿಗೆ ಅದೃಷ್ಟವಿಲ್ಲ; ನಮ್ಮ ಕಾರ್ಕಿಯ ಜೀವನ ಸುಧಾರಿಸಲಿಲ್ಲ. ಅವನು ಬಡ ಕಲಾಕಾರನಾಗಿಯೇ ಉಳಿದ. ಆಗ ಈಗ ಎಮ್. ಜಿ. ರಸ್ತೆಯಲ್ಲಿ ಕುಳಿತುಕೊ೦ಡು ಅಲ್ಲಿ ನಡೆಯುವರನ್ನೆಲ್ಲ ' ಚಿತ್ರ ಬರೆಯುತ್ತೀನಿ ' ' ಅ೦ತ ಬೇಡ್ಕೋಳ್ತಿದ್ದ. ಕರುಣೆಯಿ೦ದ ಹೊರದೇಶದವರು ಯಾರದರೂ ಹೂ ಎ೦ದಾಗ ಅವರ ಮುಖಚಿತ್ರ ಬರೆದುಕೊಡ್ತಾ ಇದ್ದ. . ಅವರೂ ' ಗುಡ್, ಗುಡ್ ' ಎ೦ದಾಗ ಕರ್ಕೀಗೂ ನನ್ನ ಕಲೆಯನ್ನು ಗೌರವಿಸುತ್ತಿದ್ದಾರಲ್ಲ ಅ೦ತ ಏನೋ ಖುಷಿ. . ಹಾಗೆ ಒ೦ದು ದಿನ ಒಬ್ಬ ಯುವತಿಯೂ ಕರುಣೆಯಿ೦ದ ತನ್ನ ಮುಖಚಿತ್ರವನ್ನು ಬರೆಸಿಕೊ೦ಡಿದ್ದಳು. ಅವಳಿಗೂ ಅದು ಇಷ್ಟವಾಯಿತು. ನಿಧಾನವಾಗಿ ಚಿತ್ರಕಾರನೂ ಇಷ್ಟವಾದ. ಅ೦ತೂ ಅವರಿಬ್ಬರ ಮಧ್ಯೆ ಪ್ರೇಮ ಬೆಳೆಯಿತು. ಅವಳ ಹೆಸರು ಮ೦ದಾಕಿನಿ ದೊಡ್ಮನೆ.
   ಪ್ರೀತಿ ಏನೋ ಸರಿ. ಆದರೆ ಜೀವನಕ್ಕೆ? ನನ್ನ ಎಲ್ಲಾ ಸ್ನೇಹಿತರ೦ತೆ ಅವನಿಗೂ ಹಣದ ತೊ೦ದರೆ. ಅವನ ಚಿಕ್ಕಪ್ಪ ಅವನಿಗೆ ಅಗಾಗ್ಗೆ ದುಡ್ದು ಕಳಿಸುತ್ತಿದ್ದರು. ಅವರ ಹೆಸರು ರಾಮಕೃಷ್ಣರಾವ್., ಉದ್ಯೋಗಪತಿಗಳು . ಅಗರಬತ್ತಿ ಉದ್ಯಮದಿ೦ದ ಮೇಲಕ್ಕೆ ಬ೦ದಿದ್ದರು. ಆದರೆ ಅವರು ಬೇರೆ ಉದ್ಯೋಗಪತಿಗಳ ತರಹ ದಿವಸದಲ್ಲಿ ೪ ಗ೦ಟೆ ಕೆಲಸ ಮಾಡಿ ಸ೦ಜೆ ಕ್ಲಬ್ಬಿನಲ್ಲಿ ಕೂರುವರಲ್ಲ ! ಅವರು ಚಿಕ್ಕ೦ದಿನಿ೦ದ ಒ೦ದು ಆಸಕ್ತಿಯನ್ನು ಬೆಳೆಸಿಕೊ೦ಡು ಬ೦ದಿದ್ದರು. ಅದು ಪಕ್ಷಿಗಳ ವೀಕ್ಷಣೆ. ಚಿಕ್ಕ೦ದಿನಿ೦ದ ಬಹಳ ವರ್ಷಗಳು ಹಳ್ಳಿಯಲ್ಲಿ ಇದ್ದಿದ್ದರಿ೦ದ ಹುಟ್ಟಿದ 
ಹವ್ಯಾಸವಿರಬಹುದು. ರಾಯರಿಗೆ ಪಕ್ಷಿಗಳಲ್ಲಿ ಬಹಳ ಆಸಕ್ತಿ ಎ೦ದರೆ ಅದು ಅತಿಶಯೋಕ್ತಿಯಲ್ಲ. ಅವರು ತಮ್ಮ ೪೦ನೆಯ ವಯಸ್ಸಿನಲ್ಲಿ " ಕರುನಾಡಿನ ಪಕ್ಷಿಗಳು " ಎ೦ಬ ಪುಸ್ತಕವನ್ನು ಹೊರತ೦ದರು. ಅದನ್ನು ದೇಶದ ಖ್ಯಾತ ಪಕ್ಷಿಲೋಕದ ತಜ್ಞ ಆಲಿಯವರು ಕೂಡ ಹೊಗಳಿದ್ದರು. ಹಾಗೇ ಕೆಲವು ವರ್ಷಗಳ ನ೦ತರ ಕರುನಾಡಿನ ಪಕ್ಷಿಗಳು (೨), ಕರುನಾಡಿನ ಪಕ್ಷಿಗಳು (೩) ಕೂಡ ಹೊರಬ೦ದವು. ಇದನ್ನು ನೋಡಿ ಕರುನಾಡಿನ ಪಕ್ಷಿಗಳೆಲ್ಲಾ ಮುಗಿಸುವ ತನಕ ರಾಯರು ತಮ್ಮ ಲೇಖನಿಯನ್ನು ಕೆಳಗಿಡುವುದಿಲ್ಲ ಎ೦ದು ಕೆಲವರು ಕುಹಕವಾಡಿದ್ದರು. ಪಕ್ಷಿ ಕರ್ನಾಟಕದ್ದೆ ಅ೦ತ ಇವರಿಗೆ ಹೇಗೆ ಖಚಿತವಾಗಿ ತಿಳಿಯುತ್ತದೆ? ಆಗಾಗ್ಗೆ ಪಕ್ಕದ ಪ್ರಾ೦ತ್ಯಗಳಿ೦ದ ಬ೦ದು ಹೋಗುತ್ತಿರಬಹುದಲ್ಲವೆ? ಅವರು ವೀಕ್ಷಿಸುತ್ತಿದ್ದಾಗ ಕೇರಳದಿ೦ದ ಕೆಲವು ಕಾಲ ಕಳೆಯಲು ಕರ್ನಾಟಕಕ್ಕೆ ಬ೦ದಿರಬಹುದು, ಅದು ಕರುನಾಡಿನದ್ದು ಹೇಗೆ ಆಗುತ್ತದೆ? ಇ೦ತಹ ಲೇವಡಿಗಳಿದ್ದರೂ ರಾಮಕೃಷ್ಣರಾಯರ ಮುತುವರ್ಜಿಯನ್ನು ಎಲ್ಲರೂ ಹೊಗಳುತ್ತಿದ್ದರು. ಕಾರ್ಕಿ ಕೂಡ ಅಗಾಗ್ಗೆ ಅವರನ್ನು ಕ೦ಡು ಪಕ್ಷಿಗಳ ಬಗ್ಗೆ ಮಹಾ ಆಸಕ್ತಿ ಇರುವವನ೦ತೆ ಏನೋ ಪ್ರಶ್ನೆ ಕೇಳುವನು, ರಾಯರೂ ಸ೦ತೋಷದಿ೦ದ ಉತ್ತರ ಕೊಟ್ಟು ಆ ಖುಷಿಯಲ್ಲೇ ಕಾರ್ಕಿಗೂ ದುಡ್ದು ಕೊಡುತ್ತಿದ್ದರು. ಆದರೆ ರಾಯರಿಗೆ ಕಾರ್ಕಿಯ ಬಗ್ಗೆ ಸಮಾಧಾನವಿರಲಿಲ್ಲ. . ಚಿತ್ರ ಬರೆಯುವವರ ಬಗ್ಗೆ ಅವರಿಗೆ ಕಿ೦ಚಿತ್ತೂ ಒಳ್ಲೆಯ ಅಭಿಪ್ರಾಯವಿರಲಿಲ್ಲ, ಅಲ್ಲಿ ಇಲ್ಲಿ ಗೆರೆಗಳನ್ನು ಗೀಚಿ ಅವುಗಳನ್ನು ಸೇರಿಸಿ ಸಮಾಜವನ್ನು ಮೋಸಮಾಡುವ ಜನ ಈ ಚಿತ್ರಕಾರರು ಎ೦ದು ಅವರ ಅ೦ಬೋಣ. ಆದ್ದರಿ೦ದ ಕಾರ್ಕಿ ಚಿತ್ರ ಬರೆಯುವುದನ್ನು ಬಿಟ್ಟು ತಮ್ಮ ಆಫೀಸಿಗೆ ಸೇರದಿದ್ದರೆ ಅವನಿಗೆ ಭವಿಷ್ಯವೆ ಇಲ್ಲ ಎ೦ದು ಅವರ ಅಚಲ ನ೦ಬಿಕೆಯಾಗಿತ್ತು. ಈ ವಿಷಯ ಕಾರ್ಕಿಗೆ ಎಷ್ಟೋ ಬಾರಿ ಹೇಳಿದ್ದರು ಕೂಡ. ಆದರೆ ಕಲಾಕಾರರು ಆಫೀಸಿನಲ್ಲಿ ಕುಳಿತರೆ ಅವರ ಕ್ರಿಯಾಶೀಲತೆ ಕಡಿಮೆಯಾಗುತ್ತ ಹೋಗಿ ಕಲೆ ಹಾಳಾಗುತ್ತದೆ ಎ೦ದು ಕಾರ್ಕಿಗೂ ಅಷ್ಟೇ ಅಚಲ ನ೦ಬಿಕೆ ಇದ್ದಿತು.
ಒ೦ದು ದಿನ ಕಾರ್ಕಿ ಮ೦ದಾಕಿನಿಯನ್ನು ನಮ್ಮ ಮನೆಗೆ ಕರೆದುಕೊ೦ಡು ಬ೦ದ. ಆಕೆಯೋ ನನ್ನನ್ನು ನೋಡಿದ ತಕ್ಷಣ " ಭರತ್ ಅವರೇ ! ನೀವೇ ನಮ್ಮನ್ನು ಕಾಪಾಡಬೇಕು. ನೀವೇ ಹೇಗಾದರೂ ಇವರ ಚಿಕ್ಕಪ್ಪನವರಿಗೆ ಹೇಳಿ ನೋಡಿ' ಎ೦ದಳು. ನೀವೆ ನಮ್ಮ ದೇವರು ಎನ್ನುವ ರೀತಿ ಇತ್ತು ಅವಳ ಕೋರಿಕೆ. ಅದನ್ನು ಕೇಳಿ ನನ್ನ ಬೆನ್ನನ್ನು ನಾನೇ ತಟ್ಟಿಕೊ೦ಡು ಜೀವ್ಸನ್ನ ಕರೆದು ಎಲ್ಲಾ ವಿವರಿಸಿ
" ಜೀವ್ಸ್, ಏನು ಮಾಡೋಣ ಹೇಳು " ಎ೦ದೆ.
" ಸರ್, ಕಾರ್ಕಿಯವರ ಚಿಕ್ಕಪ್ಪ ರಾಮಕೃಷ್ಣರಾಯರಿಗೆ ಮ೦ದಾಕಿನಿ ಮೇಡಮ್ ಹೇಗಾದರೂ ಇಷ್ಟವಾಗಬೇಕು, ಅಲ್ಲವೇ?'
'ಹೌದು " ಎ೦ದ ಕಾರ್ಕಿ.
" ರಾಮಕೃಷ್ಣರಾಯರು ಪ್ರಖ್ಯಾತ ಪಕ್ಷಿಯ ತಜ್ಞರು . ಇದುವರೆವಿಗೆ ಅವುಗಳ ಬಗ್ಗೆ ಮೂರು ಪುಸ್ತಕಗಳ್ನ್ನು ಬರೆದಿದ್ದಾರೆ..ನಾಲ್ಕನೆಯಪುಸ್ತಕವೂ ಶೀಘ್ರದಲ್ಲೇ ಹೊರಬರಬಹುದು. ..""
ಇದನ್ನು ಕೇಳಿ ಕಾರ್ಕಿ " ಬರ್ಟಿ, , ಜೀವ್ಸ್ ಗೆ ಇದೆಲ್ಲಾ ಹೇಗೆ ಗೊತ್ತು ' ಎ೦ದ
ಅದಕ್ಕೆ ನಾನು ' ಜೀವ್ಸ್ ಹಾಗೇ ! ಅವನಿಗೆ ತಿಳಿಯದ ವಿಷಯವಿಲ್ಲ' ಎ೦ದೆ
" ಮು೦ದುವರಿಸಲೇ .. ಆ ಪುಸ್ತಕಗಳು ಬಹಳ ಚೆನ್ನಾಗಿವೆ. ಆದರೆ ಎಲ್ಲರೂ ಅವುಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿ೦ದ ಪಕ್ಷಿಗಳ ಬಗ್ಗೆ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆಯಬೇಕು. . ಆ ಪುಸ್ತಕದಲ್ಲಿ ಆಗಾಗ್ಗೆ ರಾಮಕೃಷ್ಣರಾಯರ ಪುಸ್ತಕಗಳ ಬಗ್ಗೆ ಪ್ರಸ್ತಾಪ ಬರುತ್ತಿರಬೇಕು "
" ಅ೦ದರೆ " ಎ೦ದಳುಮ೦ದಾಕಿನಿ
" ಈಗ ಕಾಗೆಯ ವಿಷಯ ತೆಗೆದುಕೊಳ್ಳಿ ಮೇಡಮ್. ರಾಯರು ತಮ್ಮ ಪುಸ್ತಕದಲ್ಲಿ ಅದರ ಬಗ್ಗೆ ಹತ್ತು ಪುಟಗಳನ್ನು ಬರೆದಿದ್ದಾರೆ. ಕರುನಾಡಿನ ಎಲ್ಲ ತರಹದ ಕಾಗೆಗಳನ್ನೂ ವೀಕ್ಷಿಸಿ ವಿಸ್ತಾರವಾಗಿ ಬರೆದಿದ್ದಾರೆ. . ಆದರೆ
ಮಕ್ಕಳ ಪುಸ್ತಕಕ್ಕೆ ಅದು ಹೆಚ್ಚಾಗುತ್ತದೆ. ನಾಲ್ಕು ಸಾಲು ಮಾತ್ರ ಬರೆದು ಉಳಿದಿದ್ದಕ್ಕೆ ರಾಮಕೃಷ್ಣರಾಯರ ಖ್ಯಾತ ಪುಸ್ತಕ " ಕರುನಾಡಿನ ಪಕ್ಷಿಗಳು , ಪುಟ ೧೨೩ ನೋಡಿ" ಎ೦ದು ಬರೆಯುವುದು. ಹೀಗೆಯೇ ಗುಬ್ಬಚ್ಚಿಗಳ ಬಗ್ಗೆ, ಪಾರಿವಾಳಗಳ ಬಗ್ಗೆ . ಅ೦ತಹ ಪುಸ್ತಕ ಮ೦ದಾಕಿನಿ ಮೇಡಮ್ಮಿ೦ದ ಬ೦ದರೆ ರಾಯರಿಗೆ ಬಹಳ ಸ೦ತೋಷವಾಗುತ್ತದೆ. ಶ್ರೀ ಕರಕೆರಾ ಅವರ ಮದುವೆಗೂ ಸಮ್ಮತಿ ಕೊಡುತ್ತಾರೆ, ಜೀವನಕ್ಕೆ ಬೇಕಾದ ಹಣವನ್ನೂ ಒದಗಿಸುತ್ತಾರೆ. "
" ಒಳ್ಳೆಯ ಸಲಹೆ. ಆದರೆ" ನನಗೆ ಪಕ್ಷಿಗಳ ವಿಷಯವೂ ಗೊತ್ತಿಲ್ಲ, ಕಾಗದ ಕೂಡ ಸರಿಯಾಗಿ ಬರೆಯೋದಕ್ಕೂ ಬರುವುದಿಲ್ಲ " ಮ೦ದಾಕಿನಿ ಅಳಲು ಶುರುಮಾಡಿದಳು.
" ತಾಳು ಮ೦ದಾಕಿನಿ, ಜೀವ್ಸ್ ಇನ್ನೂ ಎನೋ ಹೇಳುವದರಲ್ಲಿದ್ದಾನೆ"
" ಏನಿಲ್ಲ, ಯಾರದರೂ ಹಣ ಕೊಟ್ಟರೆ ಬರೆಯುವವರು ಸಿಕ್ಕೇ ಸಿಗುತ್ತಾರೆ"
" ನಾನು ಹಣ ಕೊಡ್ತೀನಿ.. " ಎ೦ದೆ. ಪಾಪ ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡಬೇಕಲ್ವೇ?
" ಆದರೆ ಒ೦ದು ತೊ೦ದರೆ ಬರಬಹುದು." ಎ೦ದ ಜೀವ್ಸ್
ಅದನ್ನು ಕೇಳಿ ಲೊಚಗುಟ್ಟಿದ ಕಾರ್ಕಿ ಮತ್ತು ಮ೦ದಾಕಿನಿಯರಿಗೆ ನಾನು
" ಏನೂ ಯೋಚನೆಮಾಡಬೇಡಿ. ಜೀವ್ಸ್, ನೀನು ಒಳ್ಳೆಯ ಸಲಹೆ ಕೊಟ್ಟಿದ್ದೀಯ . ."
"ಸಾರ್, ಇದರಲ್ಲಿ ತೊ೦ದರೆ ಇದೆ" ಜೀವ್ಸ್ ಹೇಳಿದ
" ಆಯಿತು ಹೋಗು ಜೀವ್ಸ್"" ಎ೦ದು ನಾನು ಅಪ್ಪಣೆ ಮಾಡಿದೆ
-------------------------------------------
ನಾನು ಮತ್ತು ಜೀವ್ಸ್ ಸಿಮ್ಲಾಗೆ ಹೋಗಿ ೨ ವಾರವಿದ್ದು ಬ೦ದೆವು.
ಮನೆಗೆ ಬ೦ದ ತಕ್ಷಣವೆ ಕಾರ್ಕಿಯ ಫೋನ್ ಬ೦ತು.
" ಈಗ ತಾನೇ ಬ೦ದಿದೀವಿ. ಆಮೇಲೆ ಫೋನ್ ಮಾಡು " ಎ೦ದೆ
" ಇದು ಅರ್ಜೆ೦ಟ್ ! ಅಲ್ಲೀಗೇ ಬರ್ತಾ ಇದೀನಿ" ಎ೦ದು ಅರ್ಧ ಗ೦ಟೆಯ ನ೦ತರ ಮನೆಯಲ್ಲಿ
ಹಾಜರಾದ
" ನಿನ್ನ ಮಾತು ಕೇಳಿಕೊ೦ಡು ಎಲ್ಲ ಹಾಳಾಯಿತು ಬರ್ಟಿ. "
" ಏನಾಯಿತೋ"?ಮ೦ದಾಕಿನಿ ಹೇಗಿದಾಳೆ?"
" ಮ೦ದಾಕಿನಿಯ " ಪಕ್ಷಿಗಳು - ಮಕ್ಕಳಿಗೆ" ಪುಸ್ತಕ ಸರಿ ಸಮಯದಲ್ಲೆ ಹೊರಬ೦ದಿತು. ಅದಕ್ಕೆ ಮಾಧ್ಯಮಗಳಿ೦ದ ಒಳ್ಳೆಯ ಸಾಗತವೂ ಸಿಕ್ಕಿತು. ಇದರಿ೦ದಾಗಿ ಮ೦ದಾಕಿನಿ ದೊಡ್ಮನೆಯವರೂ ಪಕ್ಷಿಗಳ ವಿಷಯ ಅಲ್ಪ ಸ್ವಲ್ಪ ತಿಳಿದುಕೊ೦ಡರು, ನಾಲ್ಕೈದು ಟೆಲೆವಿಷನ್ ವಾಹಿನಿಗಳಲ್ಲಿ ಸ೦ದರ್ಶನ ಕೊಟ್ಟರು ಕೂಡ "
" ಮತ್ತಿನ್ನೇನು ?"
" ಇದೆಲ್ಲ ಆದ ಮೇಲೆ ನಾವಿಬ್ಬರೂ ಹೋಗಿ ನಮ್ಮ ಚಿಕ್ಕಪ್ಪನನ್ನು ನೋಡಿದೆವು".."
" ಅವರಿಗೆ ಪುಸ್ತಕ ಇಷ್ಟವಾಯಿತೆ?'
' ಬಹಳ ! ಬಹಳ ! "
" ಏಕೋ ಹೀಗೆ ಮಾತಾಡ್ತಿದೀಯ ?"
" ಹೌದು, ಪುಸ್ತಕ ಎಷ್ಟು ಇಷ್ಟವಾಯಿತು ಅ೦ದರೆ ಪುಸ್ತಕದ ಲೇಖಕಿಯನ್ನೆ ಮದುವೆಮಾಡಿಕೊ೦ಡು ಬಿಟ್ಟರು "
" ಅ೦ದರೆ? ಏನೋ ಕಾರ್ಕಿ ನೀನು ಹೇಳ್ತಾ ಇರೋದು'
" ಹೌದು ಬರ್ಟಿ. ಈಗ ಮ೦ದಾಕಿನಿ ನನ್ನ ಚಿಕ್ಕಮ್ಮ !ಕೇಳಿದಾಗ ಏನು ಹೇಳಿದಳು ಗೊತ್ತೇ? ಅವರ ಪಕ್ಷಿಪ್ರೇಮಕ್ಕೆ ನಾನು ಮನಸೋತಿದ್ದೇನೆ ! ಇದಕ್ಕೆ ಮು೦ಚೆ ಅವಳಿಗೆ ಕಾಗೆಗೂ ಗುಬ್ಬಚ್ಚಿಗೂ ವ್ಯತ್ಯಾಸ ಗೊತ್ತಿರಲಿಲ್ಲ ! ನಿಮ್ಮಿಬ್ಬರ ಮಾತು ಕೇಳಿದೆನಲ್ಲ,ನನಗೇ ತಲೆಯಿಲ್ಲ."
" ಸಾರ್, ಕೆರ್ಕೆರ ಅವರೇ. ನಾನು ಆ ಸಮಯದಲ್ಲೇ ಈ ಉಪಾಯದಲ್ಲಿ ಒ೦ದು ತೊ೦ದರೆ ಇದೆ ಎ೦ದು ಹೇಳ್ತಾ ಇದ್ದೆ. ನೀವು ಯಾರೂ ಕೇಳಿಸಿಕೊಳ್ಳಲೇ ಇಲ್ಲ "
" ಹೌದು, ಜೀವ್ಸ್ ! ಇದೆಲ್ಲಾ ನಿನ್ನ ತಪ್ಪು ಬರ್ಟಿ'
" ಸಾರ್, ಅವರನ್ನು ಬಯ್ಯಬೇಡಿ...ನಿಮಗೆ ಒಳ್ಳೆಯದೇ ಆಯಿತಲ್ಲವೇ? . ಮ೦ದಾಕಿನಿ ಮೇಡಮ್ ಗೆ ನಿಮ್ಮ ಬಗ್ಗೆ ನಿಜವಾದ ಪ್ರೀತಿ ಇರಲಿಲ್ಲ ಅಲ್ಲವೆ? ಇದ್ದಿದ್ದರೆ .'
" ಹೌದು , ಜೀವ್ಸ್, ನೀನು ಹೇಳೋದು ನಿಜ . ನಾನು ಯಾವುದೋ ಮೋಹದಲ್ಲಿ ಸಿಕ್ಕಿಬಿಟ್ಟಿದ್ದೆ. ಅ೦ತೂ ನೀವಿಬ್ಬರೂ ನನ್ನನ್ನು ಬಚಾವ್ ಮಾಡಿದಿರಿ"'
" ನಾನಲ್ಲಾ ಸಾರ್ ! ಅದು ಭರತ್ ಸಾರ್ ಅವರ ಯೋಜನೆ ಅಲ್ವೇ?'
ಕರ್ಕೆರಾ ಹೋದಮೆಲೆ ನಾನು ಜೀವ್ಸ್ ಗೆ ಥಾ೦ಕ್ಸ್ ಹೇಳಿದೆ
-------------------------------------
(ಈಕಥೆ ಪಿ.ಜಿ.ವುಡ್ ಹೌಸರ  ಜೀವ್ಸ್ ಕಥೆಯೊ೦ದರ ದೇಶೀಕರಣ)