ಕಾರ್ಗಿಲ್ ಕಥೆ : ಸೈನಿಕನೆಂದರೆ
"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು ತನ್ನಲ್ಲಿದ್ದ ಹತ್ತಿಯನ್ನು ಗಾಯದ ಮೇಲಿಟ್ಟು ಕರವಸ್ತ್ರದಿಂದ ಗಟ್ಟಿಯಾಗಿ ಕಟ್ಟು ಹಾಕಿದನು. ಮತ್ತೆ ನಮ್ಮ ನಮ್ಮ ಬಂದೂಕುಗಳನ್ನು ಎತ್ತಿಕೊಂಡೆವು! ಶತ್ರು ಪಡೆಗಳ ಸೆಲ್ಗಳೂ ಅವರ ಗನ್ಗಳ ಗುಂಡುಗಳೂ ಅಲ್ಲಲ್ಲಿ ಬಿದ್ದು ಸಿಡಿಯುತ್ತಿದ್ದವು. ನಾವಿಬ್ಬರೂ ಈಗ ಆ ದೊಡ್ಡ ಬಂಡೆಯ ಹಿಂದೆ ರಕ್ಷಣೆ ಪಡೆದಿದ್ದೆವು.
ಮತ್ತೆ ಕೇಳಿದನು ಮಹರ್ಷಿ...... ``ಈಗೇನು ಮಾಡೋಣ?"
``ಇರು... ನಮ್ಮವರು ಬಂದು ನಮ್ಮನ್ನು ಸೇರಿಕೊಳ್ಳಲಿ. ಇದೀಗ ನಾವು ಆಯಕಟ್ಟಿನ ಸ್ಥಳಕ್ಕೆ ಬಂದಾಗಿದೆ... ಇನ್ನೇನಿದ್ದರೂ ಮುಖಾಮುಖಿ" ಎಂದೆ.
``ಇದು ನಮಗೆ ಎಷ್ಟನೇ ಮುಖಾಮುಖಿ?
ಅವನ ಬೆನ್ನು ತಟ್ಟಿ ಹೇಳಿದೆ ``ಮೂರನೆಯದು"
``ಈ ಕುನ್ನಿಗಳಿಂದ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಅಲ್ಲವಾ?" ಎನ್ನುತ್ತ ಅವನು ನನ್ನ ಕೈ ಕುಲಕಿದ್ದನು.
ಆದರೆ ನನ್ನ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು.
* * *
ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ನಮಗೆ ಊರಿನ ಜನರಲ್ಲಿ ಗೆಳೆಯರು ಎಂಬುದಕ್ಕಿಂತ ಅಣ್ಣ ತಮ್ಮಂದಿರೆಂಬ ಪರ್ಯಾಯ ಸಂಬಂಧವಿತ್ತು. ``ಮನು ಮಹರ್ಷಿಯರು ಅಗಲಿದ್ದುದನ್ನು ನಾವೆಂದೂ ನೋಡೇ ಇಲ್ಲ" ಎಂದು ಊರ ಜನರು ಮಾತಾಡಿಕೊಳ್ಳುವಷ್ಟು ನಾವು ಪ್ರಾಣ ಸ್ನೇಹಿತರಾಗಿದ್ದೆವು!
ಒಂದಿಷ್ಟು ಓದಿಕೊಂಡಾದ ನಂತರ ಮನೆಯ ಕಷ್ಟಕ್ಕೆ ಮಣಿದು ಕೆಲಸಕ್ಕಾಗಿ ಅಲೆದಾಡುತ್ತಿರುವಾಗ ಬಂದಿತ್ತು ಆರ್ಮಿ ಸೆಲೆಕ್ಷನ್! ಇಬ್ಬರೂ ಹೋದೆವು. ಯಾರಾದರೊಬ್ಬರು ಮಾತ್ರ ಆಯ್ಕೆ ಆಗಿದ್ದರೆ ಸೇರಿಕೊಳ್ಳುತ್ತಿರಲೇ ಇರಲಿಲ್ಲ.
ಅದೃಷ್ಟಕ್ಕೆ ಇಬ್ಬರೂ ಆಯ್ಕೆ ಆಗಿದ್ದೆವು!
ಆಗ ಶುರುವಾಯ್ತು ಮನೆಯವರ ವಿರೋಧ... ರೋಧನ! ನಾನಾದರೆ ಪರವಾಗಿಲ್ಲ. ನನಗೆ ಸಹೋದರರಿದ್ದಾರೆ. ಆದರೆ ಮಹರ್ಷಿ ಅವರ ತಂದೆ ತಾಯಿಯರಿಗೆ ಏಕಮಾತ್ರ ಪುತ್ರ! ಅವರಾದರೂ ಹೇಗೆ ತಾನೇ ಒಪ್ಪಿಯಾರು? ಬೈದರು... ಬೇಡಿದರು... ಅತ್ತು ಕರೆದು ಎಲ್ಲಾ ಮಾಡಿದರೂ ಅವನು ಮಾತ್ರ ಮಿಸುಕಾಡಲಿಲ್ಲ. ``ಇಟ್ಟ ಹೆಜ್ಜೆ ಹಿಂದೆ ತೆಗೆಯುವುದು ಬೇಡ. ಸೈನ್ಯಕ್ಕೆ ಸೇರಿಯೇ ತೀರೋಣ" ಎಂದು ನನ್ನಲ್ಲಿ ಶಪಥ ಗೈದ!
`ಮಾಡು ಇಲ್ಲವೇ ಮಡಿ` ಎಂಬ ಸೈನ್ಯದ ಸಿದ್ಧಾಂತ ನನಗೂ ಒಪ್ಪಿಗೆಯಾಗಿತ್ತು. ``ನಮ್ಮ ಮನೆಯವರನ್ನು ನೀನೇ ಹೇಗಾದರೂ ಒಪ್ಪಿಸು. ಅವರು ಒಪ್ಪದಿದ್ದರೆ ನಾನು ಊರು ಬಿಟ್ಟು ಹೋಗುತ್ತೇನೆ" ಎಂದು ನನ್ನಲ್ಲಿ ಹಟ ಹಿಡಿದ ಮಹರ್ಷಿ!
ಎಷ್ಟು ಹೇಳಿದರೂ ಅವನ ತಂದೆ ತಾಯಿ ಒಪ್ಪುವಂತಿರಲಿಲ್ಲ. ``ಸೈನ್ಯಕ್ಕೆ ಸೇರಿದರೆ ಯಾವಾಗ ಸಾಯುತ್ತೇವೆಯೋ ಗೊತ್ತಿಲ್ಲ... ಆದರೆ ನೀವು ಈ ರೀತಿ ಪ್ರತಿಬಂಧ ಹೇರಿದರೆ ಈಗಲೇ ನಿಮಗೆ ಮಕ್ಕಳಿಲ್ಲದಂತಾಗಿಬಿಡುತ್ತದೆ!`` ಎಂದು ಹೆದರಿಸಿದ ಮೇಲೆ ಒಂದು ತಹಬದಿಗೆ ಬಂದರು.
ನಂತರ ಅವರಲ್ಲಿ ``ಅಲ್ಲಿ ಏನೇ ಕಷ್ಟ ಬಂದರೂ ನಾನು ನೋಡಿಕೊಳ್ಳುತ್ತೇನೆ. ನನ್ನ ಕೊನೆಯ ಉಸಿರಿರುವತನಕ ನಿಮ್ಮ ಮಗನನ್ನು ರಕ್ಷಿಸುವ ಜವಾಬ್ದಾರಿ ನನ್ನದು! ನನ್ನ ಮೇಲೆ ನಂಬಿಕೆಯಿಟ್ಟು ಅವನನ್ನ ಕಳುಹಿಸಿಕೊಡಿ" ಎಂದು ಭಾಷೆ ನೀಡಿದ ನಂತರ ಸಹಿಮಾಡಿ ಕಳುಹಿಸಿಕೊಟ್ಟರು.
ಅಸ್ಸಾಂನಲ್ಲಿ ನಮಗೆ ಟ್ರೈನಿಂಗ್ ಕೊಡಲಾಯ್ತು. ನಂತರ ಕಾಶ್ಮೀರದ ಈ ಗಡಿಭಾಗಕ್ಕೆ ಹಾಕಿದರು. ಆಗಲೇ ಕಾರ್ಗಿಲ್ ಯುದ್ಧ ಪ್ರಾರಂಭವಾಗಿದ್ದು!
ಈ ಯುದ್ಧವೆಂಬುದು ನಮ್ಮಿಬ್ಬರ ಪಾಲಿಗೆ ಕರ್ಣ ಕಠೋರವಾಗಿರಲೇ ಇಲ್ಲ! ಬದಲಿಗೆ ಒಂದು ರೋಮಾಂಚಿತ ಆಟವಾಗಿತ್ತು! ಅವರ ಗುಂಡುಗಳಿಗೆ ನಾವು ಉತ್ತರಿಸುತ್ತೇವೆ. ನಮ್ಮ ಗುಂಡುಗಳಿಗೆ ಅವರು ಉತ್ತರಿಸುತ್ತಾರೆ! ಬಲಿಯಾದವರು ಔಟ್!
ಆ ಟ್ರೈನಿಂಗ್ನಿಂದ ಹಿಡಿದು ಈ ಟೈಗರ್ ಹಿಲ್ಸ್ವರೆಗೆ ನಾವಿಬ್ಬರೂ ಒಂದಾಗಿಯೇ ಇದ್ದೇವೆ. ನಮ್ಮಿಬ್ಬರ ಜೋಡಿ ನಮ್ಮ ಕ್ಯಾಂಪ್ ನಲ್ಲಿಯೇ ಸಂಚಲನವನ್ನುಂಟು ಮಾಡಿತ್ತು. ಹಾಗೆಯೇ ನಾವೆಂದೂ ಹಿಂದೆ ಉಳಿದವರಲ್ಲ. ``ನಮ್ಮ ಬೆಟಾಲಿಯನ್ ಮುನ್ನುಗ್ಗುತ್ತಿದೆಯೆಂದಾದರೆ ಅದರಲ್ಲಿ ಮನು-ಮಹರ್ಷಿಯರೇ ಮುಂದಿದ್ದಾರೆಂದು ಅರ್ಥ" ಎಂದು ನಮ್ಮ ಕಮಾಂಡರ್ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ! ನಮಗೆ ಹಾಗೆ ತೀರಾ ರಿಸ್ಕ್ನಲ್ಲಿ ಮುಂದುವರಿಯುವುದೆಂದರೆ ತುಂಬಾ ಖುಷಿ!
ಅದಾಗಲೇ ಎರಡು ಬೆಟ್ಟಗಳಲ್ಲಿ ವೈರಿಗಳನ್ನು ಹಿಮ್ಮೆಟ್ಟಿಸಿ, ಹಲವಡೆ ಮಲಗಿಸಿ ನಮ್ಮ ಬೆಟಾಲಿಯನ್ ಗೆದ್ದಾಗ ಆ ಬೆಟ್ಟದ ತುದಿಗೆ ನಮ್ಮ ರಾಷ್ಟ್ರ ಧ್ವಜವನ್ನು ನೆಟ್ಟಿದ್ದು ನಾವೇ ಅಗಿದ್ದೆವು! ಆದರೆ ಈ ನಡೆವೆ ಎಷ್ಟೊಂದು ಜನ ನಮ್ಮ ಸಹಚರರ ಪ್ರಾಣ ನಮ್ಮ ಕಣ್ಣೆದುರೇ ಹೋಗಿತ್ತು. ಅವರು ಪೆಟ್ಟು ತಿಮದು ಬಿದ್ದಿದ್ದರೂ ನಮ್ಮಷ್ಟಕ್ಕೆ ನಾವು ಎದುರಾಳಿಗಳ ಮೇಲೆ ಗುಂಡಿನ ಮಳೆ ಸುರಿಸುತ್ತಲೇ ಇರಬೇಕಾದ ಅನಿವಾರ್ಯತೆಯೂ ಎದುರಾಗಿಒತ್ತು. ಆದರೆ ಇಲ್ಲಿ ಅದಕ್ಕೆಲ್ಲಾ ಪರಿಹಾರ ಅಂತ ಏನೂ ಇಲ್ಲ... ಏಕೆಂದರೆ ಇದು ಯುದ್ಧ!
ಹೀಗೆ ಮುನ್ನುಗ್ಗುವಾಗ ಈ ಆರು ದಿನಗಳಲ್ಲಿ ಎರಡು ಬಾರಿ ತೀರಾ ಮೃತ್ಯುವಿನ ಹತ್ತಿರಕ್ಕೇ ಹೋಗಿಬಿಟ್ಟಿದ್ದೆವು! ಆ ಸಮಯದಲ್ಲಿ ಕಡೆಯ ಕ್ಷಣದಲ್ಲಿ ಅಪಾಯವನ್ನರಿತು ನಾನೇ ಮಹರ್ಷಿಯನ್ನು ರಕ್ಷಿಸುವುದರೊಂದಿಗೆ ನಾನೂ ಸಾವಿನಿಂದ ಪಾರಾಗಿದ್ದೆ!
ಇದೀಗ ಮೂರನೇ ಬಾರಿಯ ಅಪಾಯದಲ್ಲಿ ಆತ ನನ್ನನ್ನು ರಕ್ಷಿಸಿದ್ದ. ಅದೇನು ನಡೆದಿತ್ತೆಂದರೆ... ನಾವಿಬ್ಬರೇ ಮುನ್ನುಗ್ಗುತ್ತ ನಡೆದು ಬಂದಿದ್ದೆವು. ಬೆಳಗ್ಗಿನ ಮಂಜು ಧಾರಾಕಾರವಾಗಿ ಸುರಿಯುತ್ತಿತ್ತು. ವೈರಿಗಳ ಗನ್ಗಳ ಕಿಡಿಗಳನ್ನು ಗುರ್ತಿಸಿ ಅತ್ತ ಶೂಟ್ ಮಾಡುತ್ತ ಬಂದಿದ್ದೆವು. ತೀರಾ ಹತ್ತಿರಕ್ಕೆ ಬರುವಾಗ ಬಿಸಿಲಿಗೆ ಮಂಜು ಕಡಿಮೆಯಾಗಿತ್ತು. ನಾವು ಆ ಬಂಡೆಯ ಮೇಲೆ ಮಲಗಿ ಎದುರಿದ್ದವರಿಗೆ ಗುರಿ ಹಿಡಿಯುತ್ತಿದ್ದೆವು. ಆ ಎದುರಿನವರ ಎದುರಿನಲ್ಲಿ ಬಲ ಬದಿಗೆ ನಮಗೇ ನೇರವಾಗಿದ್ದವರನ್ನು ನಾವು ಕಂಡಿರಲೇ ಇಲ್ಲ! ಅವರು ಮರೆಯಲ್ಲಿದ್ದರಾದರೂ ಅವರಿಗೆ ನಾವು ಸುಲಭದ ಗುರಿಯಾಗಿದ್ದೆವು!
ಇದನ್ನು ಕಡೆಯ ಕ್ಷಣದಲ್ಲಿ ಕಂಡಿದ್ದನು ಮಹರ್ಷಿ. ಅಷ್ಟೇ, ಅದು ಹೇಗೆ ನನ್ನನ್ನು ಎಳೆದುಕೊಂಡು ಏಳಡಿ ಬಂಡೆಯನ್ನು ಬಿಟ್ಟು ಕೆಳಗೆ ಧುಮುಕಿದ್ದನೋ ಅವನಿಗೇ ಗೊತ್ತು! ಆಗಲೇ ನನ್ನ ಮುಂಗೈಗೆ ಗಾಯವಾದದ್ದು.
ನಮ್ಮ ಸಹ ಸೈನಿಕರನ್ನೆಲ್ಲಾ ಅದೆಷ್ಟೋ ಹಿಂದೆ ಹಾಕಿ ನಾವು ಇಲ್ಲಿಯವರೆಗೆ ಬಂದಾಗಿತ್ತು, ಇನ್ನು ನಾವಿಬ್ಬರೇ ಮುಂದುವರಿಯುವಂತಿಲ್ಲ, ವೈರಿ ಸೈನಿಕರ ಅತೀ ಸಮೀಪಕ್ಕೆ ಬಂದಾಗಿದೆ! ಈಗಿರುವುದೇ ನಿಜವಾದ ಕದನ.. ಮುಖಾಮುಖಿ! ಇದಕ್ಕೆ ನಮ್ಮವರೆಲ್ಲಾ ಬಂದು ನಮ್ಮನ್ನು ಸೇರಿಕೊಳ್ಳಬೇಕಾಗಿದೆ. ಏಕೆಂದರೆ ಮುಖ್ಯವಾಗಿ ನಮ್ಮ ಗುಂಡುಗಳೆಲ್ಲ ಖಾಲಿಯಾಗಿಬಿಟ್ಟಿವೆ.
``ಅವರು ಬಂದರು`` ಎಂಬ ಮಹರ್ಷಿಯ ಮಾತನ್ನು ಕೇಳಿ ವಾಸ್ತವಕ್ಕೆ ಬಂದೆ.
ಹೌದು... ನಮ್ಮ ಸಹ ಸೈನಿಕರು ಆ ಬಂಡೆಯ ಮೇಲಿನಿಂದ ಜಿಗಿದು ಮುಖ ಮೂತಿ ಒಡೆದುಕೊಳ್ಳುತ್ತ ಬಬ್ಬೊಬ್ಬರಾಗಿ ನಮ್ಮನ್ನು ಸೇರಿಕೊಳ್ಳತೊಡಗಿದರು.
ಕ್ಷಣ ಬಿಟ್ಟು ಕ್ಷಣಕ್ಕೆ ಸಿಡಿಯುತ್ತಿರುವ ಆ ಪೀರಂಗಿ, ಗನ್ನುಗಳ ಸದ್ದುಗಳು ನಮ್ಮೂರಿನ ದೀಪಾವಳಿಯ ಪಟಾಕಿ ಸದ್ದನ್ನು ನೆನಪಿಸುತ್ತಿದ್ದರೂ ಒತ್ತಾಯ ಪೂರ್ವಕವಾಗಿ ಅದನ್ನು ತಡೆಹಿಡಿಯಬೇಕಾಗಿತ್ತು.
ಈಗ ನಮ್ಮ ಏಳೆಂಟು ಜನ ಸೈನಿಕರು ನಮ್ಮೊಂದಿಗೆ ಸೇರಿಕೊಂಡರು. ಒಂದು ದೊಡ್ಡ ಬಂಡೆಯ ಹಿಂದೆ ನಾವು ಆಸರೆ ಪಡೆದಿದ್ದೆವು. ಸುಮಾರು ನೂರೈವತ್ತು ಮೀಟರ್ ಅಂತರದಲ್ಲಿಯೇ ಶತ್ರುಗಳಿದ್ದಾರೆ! ಆದರೆ ನಾವು ಇಲ್ಲಿಂದ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಅವರೂ ಸಹ ಬಂಡೆಗಳ ಅಶ್ರಯ ಪಡೆದಿದ್ದಾರೆ. ಅವರ ಮೇಲೆ ಅಟ್ಯಾಕ್ ಮಾಡಲು ನಮ್ಮಿಂದ ಐವತ್ತು ಹೆಜ್ಜೆಯ ಅಂತರದಲ್ಲಿರುವ ಇನ್ನೊಂದು ಬಂಡೆಯ ಹಿಂದೆ ಸೇರಿಕೊಳ್ಳಬೇಕಿದೆ. ಅಲ್ಲಿಗೆ ಒಮ್ಮೆ ಒಬ್ಬನಾದರೂ ಹೋಗಿ ಸೇರಿಕೊಂಡರೆ ಅವರಿಗೆ ನಮ್ಮ ರುಚಿ ತೋರಿಸಬಹುದು!
ಆದರೆ...
ಆ ಐವತ್ತು ಹೆಜ್ಜೆಯ ದೂರವೇ ನಮ್ಮ ಸಾವು ಬದುಕಿನ ರಂಗಮಂಟಪವೆಂಬುದರಲ್ಲಿ ಸಂಶಯವಿರಲಿಲ್ಲ !!
ಏಕೆಂದರೆ... ಅದು ಬಯಲು... ಶತ್ರುಗಳಿಗೆ ಸುಲಭದ ಗುರಿ!
ಆ ಐವತ್ತು ಹೆಜ್ಜೆಯ ದೂರವನ್ನು ಯಾರಾದರೊಬ್ಬರು ಕ್ರಮಿಸಿ ಆ ಬಂಡೆಯ ಹಿಂದೆ ಹೋಗಿಬಿಟ್ಟರೆ ಅಲ್ಲಿಂದ ಅವರನ್ನು ಅಟ್ಯಾಕ್ ಮಡತೊಡಗಿದಾಗ ಅವರು ತಲೆ ತಗ್ಗಿಸಿ ಬಂಡೆಯ ಹಿಂದೆ ಆಶ್ರಯ ಪಡೆಯುತ್ತಾರಾದ್ದರಿಂದ ಉಳಿದವರೂ ಬಂದು ಅಲ್ಲಿ ಸೇರಿಕೊಳ್ಳಬಹುದು. ಹಾಗಾಗಿ ಮೊದಲೊಬ್ಬ ಈ ಮೃತ್ಯುವಿನ ಕಣ್ತಪ್ಪಿಸಿ ಕ್ರಮಿಸಬೇಕು! ಹೀಗೆ ಮಾಡದೇ ಬೇರೆ ದಾರಿ ಇಲ್ಲ. ಯುದ್ಧ ವಿಮಾನಗಳ ಸಹಾಯ ಪಡೆಯೋಣವೆಂದು ಕುಳಿತರೆ ತಡವಾಗಬಹುದು. ಅದಲ್ಲದೇ ಪಾಕಿಸ್ತಾನದ ಗಡಿ ಸಮೀಪಕ್ಕೇ ನಾವು ಬಂದಿರೋದರಿಂದ ವಿರೋಧಿಗಳಿಗೆ ಹೆಚ್ಚಿನ ನೆರವು ಸಿಕ್ಕರೆ ನಮ್ಮೆಲ್ಲರಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು.
ಉಳಿದವರ ನೋಟವೆಲ್ಲಾ ನನ್ನ ಮತ್ತು ಮಹರ್ಷಿಯ ಮೇಲೇ ಇದ್ದವು. ಅದರಲ್ಲಿ ಯಾರ ತಪ್ಪೂ ಇರಲಿಲ್ಲ! ಈ ಯುದ್ಧ ಪ್ರಾರಂಭವಾದಾಗಿನಿಂದ ಈ ಬಂಡೆಯ ತನಕ ಮುನ್ನುಗ್ಗಿ ಮುಂದೆ ಬಂದವರು ನಾವಿಬ್ಬರೇ... ನಾವು ಗೆದ್ದ ಎರಡು ಬೆಟ್ಟಗಳ ತುದಿಗೆ ನಮ್ಮ ಧ್ವಜವನ್ನು ನೆಟ್ಟವರೂ ನಾವೇ! ಹಾಗಿದ್ದ ಮೇಲೆ ಈ ಐವತ್ತು ಹೆಜ್ಜೆಗಳ ದೂರಕ್ಕೆ ಹೆದರಿ ಹಿಂದುಳಿಯುವುದು ಎಂದರೆ ಏನು? ಹಾಗಾಗದೆಂದು ನಮ್ಮ ಗೆಳೆಯರಿಗೆಲ್ಲಾ ಗೊತ್ತು.
ಆಗ ಮೈಕೊಡವಿಕೊಂಡು ಎದ್ದಿದ್ದನು ಮಹರ್ಷಿ. ಅವನ ಚೀಲದಲ್ಲಿಯೂ ಗನ್ನಲ್ಲಿಯೂ ಗುಂಡುಗಳು ತುಂಬಿದ್ದವು. ನನ್ನವೂ ಅಷ್ಟೇ. ಅವನು ಅವನ್ನೆಲ್ಲಾ ಪರೀಕ್ಷಿಸಿಕೊಂಡು ನನ್ನತ್ತ ನೋಡಿ ಕೈಚಾಚಿ ``ನಾನೇ ಮೊದಲು ಹೋಗುತ್ತೇನೆ" ಎಂದನು.
ಅವನಾಡಿದ ಆ ``ನಾನೇ ಮೊದಲು ಹೋಗುತ್ತೇನೆ" ಎಂಬ ವಾಕ್ಯ ನನ್ನ ಹೃದಯವನ್ನು ಚುಚ್ಚಿ ಬೇರೆಯೇ ಆರ್ಥವನ್ನು ನೀಡಿ, ಅವನ ಹೆತ್ತವರಿಗೆ ನಾನು ನೀಡಿದ್ದ ಮಾತು `ನನ್ನ ಪ್ರಾಣವಿರುವವಗರೆಗೂ ಅವನನ್ನು ರಕ್ಷಿಸುತ್ತೇನೆ’ ಎಂಬ ವಾಕ್ಯವನ್ನು ನೆನಪು ಮಾಡಿತು!
ಅವನು ನೀಡಿದ ಹಸ್ತಲಾಘವನ್ನು ಹಾಗೆಯೇ ಮೃದುವಾಗಿ ಅದುಮಿ ಅವನನ್ನು ಸಮಾಧಾನದಿಂದ ``ನಾನಿನ್ನೂ ಇದ್ದೇನೆ" ಎಂದು ಹೇಳಿ ಎದ್ದೆ.
ಅವನಿಗೆ ಚೆನ್ನಾಗೆ ಗೊತ್ತು. ನಾನು ಅಡಿಯಿಟ್ಟೆನೆಂದರೆ ಮತ್ತದನ್ನು ಬದದಲಿಸಲಾಗದೆಂದು. ಅವನೂ ಅಂತೆಯೇ ಆಗಿದ್ದರೂ ನನ್ನ ಮುಂದೆ ಮಾತ್ರ ಎದುರಾಡಲಾಗದೇ ಕರಗಿ ಹೋಗಿಬಿಡುತ್ತಿದ್ದ.
ನನ್ನ ಶಸ್ತ್ರ-ವಸ್ತ್ರಗಳನೆಲ್ಲಾ ಪರೀಕ್ಷಿಸಿಕೊಂಡು ಹೊರಡಲನುವಾದಾಗ ಮಹರ್ಷಿ ಒಮ್ಮೆ ಆಧೃ ನೋಟ ಬೀರಿ ಕೈ ಕುಲುಕಿ ತಬ್ಬಿ ಬೀಳ್ಕೊಟ್ಟ. ನಮ್ಮ ಗೆಳೆಯರು ಬೆನ್ನು ತಟ್ಟಿ ಹುರಿದುಂಬಿಸುತ್ತಿದ್ದರು. ನನ್ನಂತೆಯೇ ಅವರಿಗೂ ತಿಳಿದಿದೆ. ನಾನೀಗ ಓಡಿ ಆ ಬಂಡೆಯನ್ನು ಸೇರಬೇಕಾಗಿರುವುದು ಶತ್ರುವಿನ ಕಣ್ತುಪ್ಪಿಸಿ ಮಾತ್ರವೇ ಅಲ್ಲ... ಮೃತ್ಯುವಿನ ಕಣ್ತಪ್ಪಿಸಿ ಕೂಡಾ !
ಶತ್ರುವಿನ ನೋಟ, ಮೃತ್ಯುವಿನ ನೋಟಗಳೆರಡೂ ಮೇಳೈಸಿದಂತೆ ನಿಂತಿದೆ ಆ ಐವತ್ತು ಹೆಜ್ಜೆಯ ದೂರ !
ಒಂದು ಕ್ಷಣ ಇಣುಕಿ ಅತ್ತ ನೋಡಿದೆ. ಗುಂಡನ್ನು ಸಿಡಿಸಿದ ಉತ್ತರಾರ್ಧವಾಗಿ ಹೊಗೆಯುಗುಳುತ್ತಾ ಗುರಿ ಹಿಡಿದಿವೆ ಪಾಕಿಗಳ ಗನ್ನುಗಳು. ಯಾವ ಕ್ಷಣದಲ್ಲಿ ನಮ್ಮಿಂದ ಯಾವ ಪ್ರತಿಕ್ರಿಯೆ ಬರುತ್ತದೋ ಎಂದು ಹೊಂಚು ಹಾಕಿವೆ ಅವರ ಕಣ್ಣುಗಳು! ಕಣ್ಣು, ಗನ್ನುಗಳ ಎದುರಲ್ಲಿ ಆ ಐವತ್ತು ಹೆಜ್ಜೆಯನ್ನು ಕ್ರಮಿಸುವ ನನ್ನ ಹುಚ್ಚು ಸಾಹಸ!
ಒಮ್ಮೆ ಉಸಿರನ್ನು ದೀರ್ಘವಾಗಿ ಎಳೆದುಕೊಂಡೆ. ಒಂದೇ ಓಟಕ್ಕೆ ಆ ನಲವತ್ತು ಹೆಜ್ಜೆಯ ದೂರವನ್ನು ಕ್ರಮಿಸಿಬಿಡಬೇಕು. ನಂತರದ ಹತ್ತು ಹೆಜ್ಜೆ ದೂರವನ್ನು ಡೈವ್ ಹೊಡೆದುಬಿಟ್ಟರೆ ಆ ಬಂಡೆಯ ಹಿಂಬದಿ ತಲುಪಿಕೊಂಡಿರುತ್ತೇನೆ! ಇದು ನನ್ನ ಲೆಕ್ಕಾಚಾರ.
ಹೀಗೊಂದು ಯೋಚನೆಯನ್ನು ರೂಪಿಸಿಕೊಂಡವನೇ ಮರು ಕ್ಷಣವೇ ಮಿಂಚಿನಂತೆ ನೆಗೆದು ಓಡತೊಡಗಿದೆ... ಆ ಬಂಡೆಯತ್ತ...
ಒಂದು... ಎರಡು... ಮೂರು...
ನನ್ನ ಹೆಜ್ಜೆಗಳ ವೇಗಕ್ಕೆ ಆ ಕ್ಷಣಗಳ ಎಣಿಕೆಯೆ ನಿಧಾನವಾಗಿತ್ತು!
ಹತ್ತು... ಹನ್ನೊಂದು... ಹನ್ನೆರಡು...
ನಾನೆಲ್ಲಿಯೋ ಏಕಾಂಗಿಯಾಗಿ ಮೃತ್ಯುವನ್ನು ಜಯಿಸುತ್ತ ಓಡುತ್ತಿರುವೆನೆಂಬಂತೆ ಭಾಸವಾಯ್ತು!
ಇಪ್ಪತ್ತು... ಇಪ್ಪತ್ತೂಂದು...
ಅರ್ಧ ದಾರಿ ಕ್ರಮಿಸಿದಾಗ ಶುರುವಾಯ್ತು... ನನ್ನಲ್ಲಿ ಗಿಲ್ಟೀ ಫೀಲಿಂಗ್! ನನ್ನ ಓಟ ವೇಗವಾಗಿಯೇ ಇದೆ... ದೂರ ಕಡಿಮೆಯಾಗುತ್ತಲೂ ಇದೆ... ಆದರೆ... ಆದರೆ ಆ ಕ್ಷಣಗಣನೆಯೆಂಬುದು ತುಂಬಾ... ತುಂಬಾ ನಿಧಾನವಾಗಿದೆ ! ಅದುವೆ ನನ್ನ ದುರದೃಷ್ಟ ! ಸಮಯ ಸರಿಯತ್ತಿಲ್ಲ... ದೂರ ಕಡಿಮೆಯಾಗುತ್ತಿಲ್ಲ... ಮೃತ್ಯಕೂಪದ ಐವತ್ತು ಹೆಜ್ಜೆ ದೂರದ ನಟ್ಟ ನಡುವೆ ನಾನು ನಿಂತಿದ್ದೇನಾ? ಇಲ್ಲಾ ಓಡುತ್ತಿದ್ದೇನಾ?... ಹೀಗೊಂದು ವಿಚಿತ್ರ ತುಮುಲ! ಮಾನಸಿಕ ಆಂಧೋಲನ... ತುಮುಲ.... ಹಿಂದೆಂದೂ ಕಾಣದ ತಳಮಳ...
ಮೂವತ್ತೆಂಟು... ಮೂವತ್ತೊಂಬತ್ತು... ನಲವತ್ತು...
ಉಳಿದಿರೋದು ಹತ್ತು ಹೆಜ್ಜೆಯ ದೂರ... ಅದನ್ನು ಡೈವ್ ಹೊಡೆದು ಹಾರಬೇಕು. ಹಾಗಂದುಕೊಂಡಿರುವ ಅದೇ ಕ್ಷಣದಲ್ಲಿ ಕೇಳಿಸಿತ್ತೊಂದು ಭಾರೀ ಸದ್ದು... ಅದೂ ತೀರಾ ಕಿವಿಯ ಹತ್ತಿರಕ್ಕೇ... ಅದೇನೋ ಮಿಂಚುಗಳು ಫಳಫಳಿಸಿದಂತಾಗಿ ಕಣ್ಣು ಮುಚ್ಚಿಕೊಂಡೆ!
ಕಣ್ಣು ತೆರೆದಾಗ ಚಕಿತನಾದೆ...
ನಲವತ್ತು ಹೆಜ್ಜೆಯ ದೂರವನ್ನು ಕ್ರಮಿಸಿದ್ದೇನೆ... ಇನ್ನು ಕೇವಲ ಹತ್ತು ಹೆಜ್ಜೆ ಬಾಕಿ ಇದೆ! ಅದನ್ನು ಡೈವ್ ಹೊಡೆಯಬೇಕಾಗಿತ್ತು... ಆದರೆ ನಾನು ಹಾಗೆ ಮಾಡಿಲ್ಲ... ಬದಲಿಗೆ ಆ ನಾನೆಂಬ ನಾನೇ ಅರಡಿಯ ದೇಹದೊಂದಿಗೆ ಧರಾಶಾಯಿಯಾಗಿದ್ದೇನೆ !! ಏನಾಯಿತು ನನಗೆ? ಯಾಕೆ ಹೀಗೆ ಆ ಶತ್ರುಗಳ ಗುರಿಗೆ ನೇರವಾಗಿ ಕುಸಿದು ಬಿದ್ದುಬಿಟ್ಟೆ! ನನ್ನ ಗಿಲ್ಟಿ ಫೀಲಿಂಗ್ಗಳಿಗೆ ಒಳಗಾಗಿ ನನಗೆ ನಾನೇ ಸಾಮ್ಮೋಹನಕ್ಕೊಳಗಾಗಿ ಬಿಟ್ಟೆನಾ?!
ಈಗ ನೋಡಿದೆ ನನ್ನ ಶತ್ರುಗಳತ್ತ... ಅವರು ನಗುತ್ತಿದ್ದಾರೆ. ಇಷ್ಟು ಸುಲಭವಾಗಿ ನಾನವರ ಗುರಿಯಾಗಿದ್ದರೂ ಅವರೇಕೆ ನನಗೆ ತಮ್ಮ ಗನ್ನಿಂದ ಗುರಿ ಹಿಡಿದಿಲ್ಲ ! ಅನುಮಾನದಿಂದ ಸುತ್ತಲೂ ನೋಡಿದೆ...
ನನ್ನ ಗನ್ ದೂರದಲ್ಲಿ ಹಾರಿ ಬಿದ್ದಿತ್ತು. ಅದರ ಪಕ್ಕದಲ್ಲಿ ಎರಡು ಕಾಲುಗಳು ಬಿದ್ದಿವೆ! ಅರೆರೆ... ಅವು ನನ್ನ ಕಾಲುಗಳಂತೆಯೇ ಇವೆಯಲ್ಲ! ಅವು ಕತ್ತರಿಸಿದ ಜಾಗದಲ್ಲಿ ರಕ್ತವಿನ್ನೂ ಒಸರುತ್ತಿದೆ ! ಇದೇನಿದು?
ಆಗ ನೋಡಿಕೊಂಡೆ ನನ್ನತ್ತ ನಾನೇ... ಆಗ ಕಾದಿತ್ತು. ಆ ಆಘಾತವೆಂಬ ಪೆಡಂಭೂತ! ಆ ಕತ್ತರಿಸಿ ಬಿದ್ದ ಕಾಲುಗಳು ನನ್ನವೇ ! ನನ್ನ ಸೊಂಟದ ಕೆಳಗೆ ಏನೇನೂ ಇರಲಿಲ್ಲ. ನೆಲ ಪೂರ್ತಿ ರಕ್ತಮಯವಾಗಿದೆ! ಆ ಕಾಲುಗಳಿಗೂ ನನಗೂ ಮಧ್ಯೆ ಶತ್ರುಗಳ ಶೆಲ್ ಸಿಡಿದ ಗುರುತಿದೆ!
ಅಷ್ಟು ಹೊತ್ತು ಅದೇನು ನಡಿಯಿತೆಂದೇ ತಿಳಿಯದೇ ಬಿದ್ದುಕೊಂಡಿದ್ದ ನನಗೆ ಆ ಕ್ಷಣದಲ್ಲಿ ಪ್ರಾರಂಭವಾಯ್ತು...
ಯಾತನೆ... ಭಯಾನಕ ಯಮ ಯಾತನೆ !
ಆಗ ಆರ್ಥವಾಯ್ತು... ಶತ್ರುಗಳು ನನ್ನನ್ನು ನೋಡಿ ನಗುತ್ತಿದ್ದುದೇಕೆಂದು!!
ಕಷ್ಟ ಪಟ್ಟು ಒಮ್ಮೆ ಮಹರ್ಷಿಯತ್ತ ನೋಡಿದೆ. ಅವನಾಗಲೇ ಕೆಳಗೆ ಕುಸಿದು ಬಿದ್ದು ರೋಧಿಸುತ್ತಿದ್ದ. ನಾಲ್ಕು ಜನ ಅವನನ್ನು ಹಿಡಿದುಕೊಂಡು ಸಮಾಧಾನಪಡಿಸುತ್ತಿದ್ದರು. ಅದನ್ನೂ ಮೀರಿ ನನ್ನತ್ತ ಬರಲು ನುಗ್ಗುತ್ತಿದ್ದನವ !
ಯಾತನೆಯೆ ಹಿಂದೆಯೇ ಬಂದ ನಿಶ್ಯಕ್ತಿ ನನ್ನನ್ನು ಅವರಿಸುತ್ತಿದ್ದಂತೆಯೇ ತಲೆ ಸುತ್ತಿದಂತಾಗಿ ಜ್ಞಾನ ತಪ್ಪುತ್ತ ಕಣ್ಮುಚ್ಚಿದೆ. ಹಾಗೆ ಮುಚ್ಚುವ ಮುನ್ನ ಬೇಡಿಕೊಂಡಿದ್ದೆ... ``ದೇವರೆ ಈ ವೇದನೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಮಹರ್ಷಿಗೆ ಕೊಡು!``
* * *
ಕಣ್ತೆರೆದಾಗಲೇ ತಿಳಿದಿದ್ದು... ನಾನಿನ್ನೂ ಸತ್ತಿಲ್ಲವೆಂದು!
`ಅಮ್ಮಾ... ಎಂದು ಚೀರಬೇಕೆನಿಸಿದರೂ ಅ ಸ್ವರ ಗಂಟಲಲ್ಲೇ ಉಡುಗಿ ಹೋಯ್ತು... ಏನೀ ವೇದನೆ? ಏನೀ ಆವಸ್ಧೆ? ಸಾವಾದರೂ ಸರಿಯೇ.... ತಕ್ಷಣ ಬರಬೇಕೇ ಹೊರತೂ, ಈ ರೀತಿ ಆಗಬಾರದು !’
ಅದಾಗಲೇ ಬಿಸಿಲಿನ ಝುಳ ಬೇರೆ ಹೆಚ್ಚುತ್ತಿದೆ. ಪಕ್ಕದ ಪರ್ವತಗಳ ಮೇಲಿನ ಹಿಮ ಕರಗಿ ಇಳಿಯುತ್ತಿದೆ. ಇಲ್ಲಿ ನನ್ನ ರಕ್ತ ಬಿಸಿಲಿಗೆ ಹೆಪ್ಪುಗಟ್ಟಿ ಕಮಟುತ್ತಿದೆ.
ಸಾವು ಬದುಕಿನ ನಡುವಿನ ಆ ಸ್ಥಿತಿಯಲ್ಲಿ ಇನೊಂದಿಷ್ಟು ಹೊತ್ತು ನರಳಾಡಿ ಮತ್ತೆ ಪ್ರಜ್ಞಾ ಹೀನನಾದೆ!
* * *
ಆಮೇಲೆ ಯಾವಾಗ ಎಚ್ಚೆತ್ತೆನೋ... ಯಾವಾಗ ಕಣ್ಮುಚ್ಚಿದೆನೋ ತಿಳಿಯಲಿಲ್ಲ. ಅದಾಗಲೇ ಮಹರ್ಷಿ ಸ್ವಲ್ವ ಸುಧಾರಿಸಿದ್ದನೆಂದು ಕಾಣಿಸುತ್ತಿದೆ. ಅವನ ಕಣ್ಣೀರೂ, ಹೃದಯವೂ ಇಂಗಿ ಹೋಗಿರುತ್ತದೆ! ಹಾಗಾದ ಮೇಲೆ ಇನ್ನೇನು ತಾನೇ ಮಾಡಿಯಾನು? ಸೈನಿಕನೆಂದರೇನೆಂದು ಇಂದು ಆತ ಪೂರ್ತಿಯಾಗಿ ಅರಿತಿರಬಹುದು.
ಒಮ್ಮೆ ನೀರಿನ ಬಾಟಲಿಯನ್ನು ನನ್ನತ್ತ ಉರಿಳಿಸಿ ಬಿಟ್ಟ, ಅದರಿಂದ ನೀರನ್ನು ಕುಡಿದಾಗ ಜ್ಞಾನ ಸ್ವಲ್ವ ಸರಿಯಾಯ್ತು ಕೋಟಿ ಚೇಳುಗಳು ಕುಟುಕಿದಂತೆ ನೋವು ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ.
ನಾನು ಹೀಗೆ ಕಾಲುಗಳನ್ನು ಕಳೆದುಕೊಂಡು ಅರೆಪ್ರಜ್ಞಾವಸ್ಥೆಯಲ್ಲಿ ನೋವನ್ನು ಅನುಭವಿಸುತ್ತ ಬದುಕಲೂ ಆಗದೇ, ಸಾಯಲೂ ಆಗದೇ ಬಿದ್ದಿರುವುದನ್ನು ಎದುರಲ್ಲೇ ಕಣ್ಣಾರೆ ಕಾಣುತ್ತಿದ್ದಾರೆ ನನ್ನ ಗೆಳೆಯರು! ಆದರೂ ಅವರೇನೂ ಮಾಡುವಂತಿಲ್ಲವೆಂಬುದು ನನಗೆ ಗೊತ್ತು! ಅವರೇನಾದರೂ ನನ್ನನ್ನು ಹೊತ್ತೊಯ್ಯಲೋ, ಇಲ್ಲ ಸಹಾಯ ಮಾಡಲೋ ನನ್ನತ್ತ ಬಂದರೆಂದರೆ ತಮ್ಮ ಬಂದೂಕಿಗೆ ಬಲಿಯಾಗುತ್ತಾರೆಂದು ಮರೆಯಲ್ಲಿ ನಿಂತಿರುವ ಶತ್ರುಗಳಿಗೂ ಗೊತ್ತು! ಅದಕ್ಕಾಗಿ ಅವರು ಕಾಯುತ್ತಲೂ ಇದ್ದಾರೆ.
ಆದಾಗಲೇ ನಮ್ಮ ಮೇಜರ್ ಬಂದಾಗಿತ್ತು, ಅವರು ನನ್ನ ಸ್ಥಿತಿಯನ್ನು ಕಂಡು ಮರುಗದೇ ಇರಲಿಲ್ಲ. ಆದರೆ ದಯೆ ತೋರುವ ಸಮಯ ಅದಲ್ಲ.. ದೇಶ ಈಗ ಮುಖ್ಯ! ಉಳಿದ ಸೈನಿಕರಿಗೆ ಬೇರೆ ಮಾರ್ಗಬಾಗಿ ಶತ್ರುರಗಳನ್ನು ಸುತ್ತುವರಿಯಲು ಸೂಚನೆ ನೀಡಿ ಆ ಕಡೆಗೆ ಕರೆದೊಯ್ದರು. ಮಹರ್ಷಿ ಮಾತ್ರ ಅಲ್ಲೇ ನಿಂತು ನನ್ನತ್ತಲೇ ಎಲ್ಲವನ್ನೂ ಕಳೆದುಕೊಂಡವನಂತೆ ನೋಡುತ್ತಿದ್ದನು.
ಯಾವುದೇ ಸಹಾಯ ದೊರೆಯುವ ಹಾಗೇ ಇರಲಿಲ್ಲ. ನನಗೆ ನಾನೇ ಶೂಟ್ ಮಾಡಿಕೊಂಡು ಸತ್ತು ಹೋಗಿ ಬಿಡೋಣವೆಂದರೂ ಗನ್ ನನ್ನಿಂದ ದೂರದಲ್ಲಿ ಹೋಗಿ ಬಿದ್ದಿದೆ!
ಅಲ್ಲಿ ಮೇಜರ್ ಮಹರ್ಷಿಯನ್ನೂ ಬರುವಂತೆ ಕರೆಯುತ್ತಿದ್ದರು. ಆತನಿಗೆ ನನ್ನನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗುವುದು ಸಾಧ್ಯವಿಲ್ಲವಾಗಿದೆ! ಬಹುಶಃ ವಾಯುಸೇನೆಯ ಸಹಾಯವೂ ಇಲ್ಲಿಗೆ ಲಭ್ಯವಿಲ್ಲವಿರಬೇಕು.
ಕೊಟ್ಟ ಕೊನೆಗೆ ಅವನೊಂದೂ ನಿರ್ಧಾರ ಮಾಡಿದವನಂತೆ ತನ್ನ ಗನ್ ಎತ್ತಿಕೊಂಡು ಎದ್ದು ನಿಂತಾಗ ಅವನ ಕಂಗಳು ಹನಿಗೂಡಿದ್ದವು! ಹಾಗೆ ಎದ್ದು ನಿಂತು ನನಗೊಮ್ಮೆ ಸೈನ್ಯದ ರೀತಿಯಲ್ಲಿ ಸೆಲ್ಯೂಟ್ ಮಾಡಿದ.
ಅವನೇಕೆ ಹಾಗೆ ಮಾಡಿದನೆಂದು ನನಗಾಗ ಅರ್ಥವಾಗಲಿಲ್ಲ!
ಅವನ ಹಿಂದಿನಿಂದ ನಾವು ನಿನ್ನೆ ತಾನೆ ಹಾರಿಸಿದ ತ್ರಿವರ್ಣ ಧ್ವಜ ಬೆಟ್ಟದ ಮೇಲೆ ಕೆನೆಯುತ್ತಿದ್ದುದು ಗೋಚರಿಸಿ ಮನಸ್ಸೊಮ್ಮೆ ಅಂತಹ ವೇದನೆಯಲ್ಲಿಯೂ ಪುಟಿಯಿತು! ಆಂತರ್ಯ ಆ ಧ್ವಜಕ್ಕೆ ಸೆಲ್ಯೂಟ್ ಹೊಡೆಯಿತು!
ಅವನು ಗನ್ ಎತ್ತಿಕೊಂಡು ಶೂಟ್ ಮಾಡಲು ತಯಾರು ಮಾಡಿಕೊಂಡನು. ಅವನ ಆಂತರ್ಯ ತಿಳಿದು ನನ್ನ ತುಟಿಯಲ್ಲಿ ನನಗೇ ಅರಿವಿಲ್ಲದೇ ಕಿರುನಗೆಯೊಂದು ಮೂಡಿತು! ಅವನು ಗುರಿ ಹಿಡಿದಿದ್ದು ನಮ್ಮ ಆಜನ್ಮ ಶತ್ರುಗಳೆಡೆಗಲ್ಲ! ತನ್ನ ಪ್ರಾಣಾತ್ಮ ಸ್ನೇಹಿತನೆಡೆಗೆ! ನನಗೆ!
ಶಹಭಾಷ್ ಮಹರ್ಷಿ! ನನ್ನನ್ನೀ ವೇದನೆಯಿಂದ... ನರಕದಿಂದ ಪಾರು ಮಾಡುವ ಏಕೈಕ ದಾರಿಯನ್ನು ಕಂಡುಕೊಳ್ಳುವ ಧೈರ್ಯ ಕೊನೆಗೂ ಆ ಭಾರತಮಾತೆ ನಿನಗೆ ನೀಡಿದಳಲ್ಲ! ಎಂದುಕೊಂಡೆ. ಹಾಗಂದುಕೊಂಡು ಅನಾಮತ್ತಾಗಿ ಅತಿ ಕಷ್ಟದಿಂದ ತಿರುಗಿ ಅವನಿಗೆ ಎದಿಯೊಡ್ಡಿ ಮಲಗಿದೆ!
`ಜನ ಗಣ ಮನ ಅಧಿನಾಯಕ ಜಯ ಹೇ... ಗೀತೆ ಕಿವಿಯೊಳಗೆ ಪ್ರತಿಧ್ವನಿಸಿದಂತಾಯ್ತು!
`ವಂದೇ ಮಾತರಮ್ ನೊಳಗೇ ನಾನು ಹುದುಗಿ ಹೋಗುತ್ತಿರುವೆನೇನೋ ಎಂಬಷ್ಟು ಆನಂದವಾಯ್ತು!
ಆಗ ಎಳೆದಿದ್ದನು ಮಹರ್ಷಿ ತನ್ನ ಗನ್ನ ಟ್ರಿಗರನ್ನು! ಅಷ್ಟು ಮಾಡಿ ಮುಚ್ಚಿಕೊಂಡಿದ್ದನು ತನ್ನ ಕಣ್ಣನ್ನು!!
ಆತನ ಗನ್ನಿಂದ ಹೊರಟ ಗುಂಡು ನನ್ನ ಎದೆಯನ್ನು ಭೇದಿಸಿತು!
ಅವನ ಕಣ್ಣಿನಿಂದ ಧುಮುಕಿದ ನೀರ ಹನಿ ನೆಲವನ್ನು ಸೇರಿತ್ತು!
ಗುಂಡು ಬಡಿದ ರಭಸಕ್ಕೆ ಎರಡಡಿ ಹಿಂದೆ ಎಸೆಯಲ್ಪಟ್ಟೆ ! ದೂರದ ತ್ರಿವರ್ಣ ಧ್ವಜಕ್ಕೊಮ್ಮೆ ಸೆಲ್ಯೂಟ್ ಹೊಡಿಯಬೇಕೆನಿಸಿತಾದರೂ ಸಾಧ್ಯವಾಗಲಿಲ್ಲ. ಮನಸ್ಸು ಮಾತ್ರ ಆ ಕಾರ್ಯವನ್ನು ಮಾಡಿತು!
ಆಗ ಉಂಟಾಯಿತು... ನನ್ನ ಸ್ನೇಹಿತನಿಂದಲೇ ಸಾಯುತ್ತಿದ್ದೇನೆಂಬ ಆ ಆನಂದ.
`ಆತ್ಮಗಳಿವಿಯೆಂಬುದು ನಿಜವಾದರೆ ನನ್ನ ಆತ್ಮ ಇವನ ರಕ್ಷಣೆಗಿರಲಿ’ ಎಂದು ಪ್ರಾರ್ಥಿಸಿದೆ!
ಆಮೇಲೆ ಏನೂ ಅರಿವಾಗದಂತೆ ನನ್ನ ಆತ್ಮ ಗಾಳಿಯಲ್ಲಿ ವಿಲೀನವಾಗುವ ಮುನ್ನ ತುಟಿಗಳು ಸಣ್ಣದಾಗಿ ಕಂಪಿಸಿ ನುಡಿದಿದ್ದವು.
Comments
ಉ: ಕಾರ್ಗಿಲ್ ಕಥೆ : ಸೈನಿಕನೆಂದರೆ
ಉ: ಕಾರ್ಗಿಲ್ ಕಥೆ : ಸೈನಿಕನೆಂದರೆ
ಉ: ಕಾರ್ಗಿಲ್ ಕಥೆ : ಸೈನಿಕನೆಂದರೆ