ಕಾರ್ಗಿಲ್ ವಿಜಯ ದಿವಸದ ನೆನಪಿನಲ್ಲಿ...

ಕಾರ್ಗಿಲ್ ವಿಜಯ ದಿವಸದ ನೆನಪಿನಲ್ಲಿ...

ದೇಶಭಕ್ತರಿಗೆ ಯಾವ ಹಬ್ಬಕ್ಕೆ ಕಡಿಮೆ ಈ ದಿನ? ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿ 21 ವರ್ಷಗಳು ಕಳೆದಿವೆ. ಆದರೆ ಜನರಲ್ಲಿ ಉತ್ಸಾಹ, ಆಕ್ರೋಶ ಮಾತ್ರ ಸ್ವಲ್ಪವೂ ಕುಂದಿಲ್ಲ. ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಜಯ ಸಾಧಿಸುವುದು ಹೊಸ ವಿಷಯವೇನಲ್ಲ, ಹಾಗೇ ಅದರ ಬಗ್ಗೆ ಸಂಶಯಕ್ಕೆ ಆಸ್ಪದ ಕೂಡ ಇಲ್ಲ. 1999 ಕ್ಕೆ ಮೊದಲು ನಡೆದ ಯುದ್ಧಗಳಲ್ಲಿ ಭಾರತದ ವಿಕ್ರಮಗಳಿಗಿಂತ ಕಾರ್ಗಿಲ್ ವಿಜಯ ನಮಗೆ ಅತಿ ಹತ್ತಿರ ಎನಿಸುವುದು ಬಹುಶಃ ಯುದ್ಧದ ಕಾಲದ ನಿರಂತರ ವರದಿ, ನಮ್ಮ ಬಳಿ ತಲುಪಿದ ಕಾರಣವಾಗಿರಬಹುದು.

ಭಾರತ್ ಮಾತಾ ಜೀ ಜೈ ಘೋಷಣೆ ಕೂಗುತ್ತಾ, ಶತ್ರು ಸೈನಿಕರನ್ನು ಸದೆಬಡಿದ ನಮ್ಮ ಸೈನಿಕರ ಸಾಹಸಗಾಥೆ ಕೇಳುವಾಗ ರೋಮಾಂಚನವಾಗದೇ ಇರಲು ಹೇಗೆ ಸಾಧ್ಯ? ಆ ವಿಕ್ರಮ, ಶೌರ್ಯ, ಸಾಹಸ ತೋರಿದ ವೀರರಲ್ಲಿ ಹಲವರು ಇನ್ನೂ 20 ನೇ ವಸಂತಕ್ಕೂ ಕಾಲಿಟ್ಟಿರಲಿಲ್ಲ. ಅಪ್ಪ ಅಮ್ಮನ ಒಬ್ಬನೇ ಮಗ, ಅಕ್ಕ ತಂಗಿಯರ ಮುದ್ದಿನ ಸಹೋದರ, ಮನೆಗೆ ಆದಾಯ ತರುತ್ತಿದ್ದ ಏಕೈಕ ಸದಸ್ಯ ಹೀಗೆ ಒಬ್ಬಬ್ಬರದ್ದು ಒಂದು ಕಥೆ.

ಅಲ್ಲೊಬ್ಬ ವೀರ, 24 ರ ಯುವಕ, ಕಡಿದಾದ ಗುಡ್ಡಗಳಲ್ಲಿ ಎದುರಾಳಿಗಳ ಗುಂಡಿನ ಸುರಿಮಳೆಗೆ ಎದೆಯೊಡ್ಡಿ ನಿಲ್ಲುತ್ತಾನೆ. ಹೋರಾಡುತ್ತಾ ಪ್ರಾಣವನ್ನೇ ಭಾರತ ಮಾತೆಗೆ ಅರ್ಪಿಸಿ ಬಿದ್ದಾಗ, ಅವನ ಪಾರ್ಥಿವ ಶರೀರವನ್ನೂ ಹೊತ್ತು ತರಲಾರದ ಪರಿಸ್ಥಿತಿಯಲ್ಲಿ ನಮ್ಮ ಸೇನೆಯಿದೆ. ಮನೆಗೆ ಕರೆ ಹೋಗುತ್ತದೆ, ತಂದೆ ಆತ ಕೇವಲ ಏಳು ವರ್ಷ ವಯಸ್ಸಿನವನಾಗಿದ್ದಾಗ ತೀರಿಹೋಗಿದ್ದಾರೆ. ತಾಯಿ ಸ್ವಾಭಿಮಾನ ತುಂಬಿ ಮಕ್ಕಳನ್ನು ಬೆಳೆಸಿದ್ದಾರೆ. ತಾಯಿ ಕರೆ ಸ್ವೀಕರಿಸಿದಾಗ, ನಿಮ್ಮ ಮಗ ಇನ್ನಿಲ್ಲ, ಕ್ಷಮಿಸಿ ಅವನ ಪಾರ್ಥಿವ ಶರೀರವನ್ನು ತರಲಾಗದೆ ಹೋದೆವು ಎಂದ ಸೈನ್ಯಾಧಿಕಾರಿಗಳಿಗೆ, ಆ ತಾಯಿ ನೀಡಿದ ಉತ್ತರ,

"ಗಡಿಯಲ್ಲಿ ನಮ್ಮ ರಕ್ಷಣೆಗೆ ನಿಂತ ಪ್ರತಿ ಸೈನಿಕ ನನ್ನ ಮಗ. ಜೀವವಿಲ್ಲದ ಒಬ್ಬ ಮಗನನ್ನು ನನ್ನ ಬಳಿಗೆ ತರಲು ನನ್ನ ಇನ್ನೊಬ್ಬ ಮಗನ ಜೀವವನ್ನು ಅಪಾಯಕ್ಕೆ ದೂಡುವುದು ನನಗೆ ಇಷ್ಟವಿಲ್ಲ".

ಮತ್ತೊಬ್ಬ ತನ್ನ ಪ್ರೀತಿಯ "ಬಚ್ಚಾ" ನಾಪತ್ತೆಯಾದನೆಂದು ಹುಡುಕಿ ಹೊರಟ ಆತನಿಗೆ ಶತ್ರು ಸೈನ್ಯ ನಮ್ಮ ಊಹೆಗಿಂತ ದೊಡ್ಡ ಸಂಖ್ಯೆಯಲ್ಲಿದೆ ಎಂದು ಅರಿವಾದೊಡನೆ, ತನ್ನ ಕಂಪನಿಗೆ ಬೇಸ್ ಕ್ಯಾಂಪ್ ಗೆ ವಾಪಾಸ್ ತೆರಳುವಂತೆ ಆಜ್ಞೆ ನೀಡಿ, ಶತ್ರುವನ್ನು ಎದುರಿಸಲು ಏಕಾಕಿಯಾಗಿ ನಿಲ್ಲುತ್ತಾನೆ. ಅವನ ಜೊತೆಗಾರ ಆತನನ್ನು ಏಕಾಂಗಿಯಾಗಿ ಬಿಟ್ಟು ತೆರಳಲು ನಿರಾಕರಿಸುತ್ತಾನೆ. ಜೀವ ಇದ್ದರೂ, ಹೋದರೂ ನಿಮ್ಮ ಜೊತೆ ಎಂದು ಇಬ್ಬರು ಕೊನೆಯುಸಿರಿನವರೆಗೂ ಹೋರಾಡಿ ಪ್ರಾಣ ಚೆಲ್ಲುತ್ತಾರೆ. ಊರಿನಲ್ಲಿ ಆತನ ಅಕ್ಕ ಮರಣದ ವಾರ್ತೆ ತಿಳಿದೂ 57 ದಿನಗಳ ಕಾಲ ಅವನ ಪಾರ್ಥಿವ ಶರೀರ ದೊರಕುವವರೆಗೂ ತಪಸ್ಸಿನಂತೆ ಕಾಯುತ್ತಾರೆ.

ಆತನೊಬ್ಬ "ಪರಮ ವೀರ". ಮನೆಯಲ್ಲಿ ಬಡತನ, ಈತ ಮಾತ್ರ ಮಹಾನ್ ಮೇಧಾವಿ. ಕೈತುಂಬಾ ಸಂಪಾದನೆ ತರುವ ಕೆಲಸ ಹಿಡಿಯಬಹುದಿತ್ತು, ಆದರೆ ಅವನ ಮನಸ್ಸು ಸೇನೆಯ ಕಡೆಗೆ ಹೊರಳಿತ್ತು. ಕಾರ್ಗಿಲ್ ನಲ್ಲಿ ಆತನ ಪರಾಕ್ರಮ ಹೇಗಿತ್ತು ಎಂದರೆ, ಮಹಾ ವೀರ ಚಕ್ರಕ್ಕೆ ಅವನ ಹೆಸರು ಆಗಲೇ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅವನಿಗೆಲ್ಲಿಯ ತೃಪ್ತಿ, ಪ್ರಾಣ ಕೊಟ್ಟಾದರು ಸರಿ, ಗೆದ್ದರೆ ಪರಮ ವೀರ ಪದಕವೇ ಬೇಕೆಂಬ ಹಠ, ಸಾಧಿಸಿ ತೋರಿಸಿಯೇ ಬಿಟ್ಟ!

ಇನ್ನೊಬ್ಬ ವೀರನಿಗೆ ಕರ್ಗಲ್ಲು ಏರಬೇಕು, ಕಾಲಿನಲ್ಲಿರುವ ಬೂಟ್ಸ್ ಜಾರುತ್ತಿದೆ. ಇನ್ನೂ 600 ಅಡಿ ಏರಬೇಕು, ಕೊರೆಯುವ ಚಳಿ, ಮೈನಸ್ ನಲ್ಲಿರುವ ಉಷ್ಣಾಂಶ, ಈತ ತನ್ನ ಕಾಲಿನ ಬೂಟನ್ನೇ ಒದ್ದು, ಬರಿಗಾಲಲ್ಲಿ ಬೆಟ್ಟ ಏರಲು ಪ್ರಾರಂಭಿಸಿ, ವೈರಿ ಪಡೆಯ ಬಂಕರ್ ಎದುರಿಗೆ ಯಮನಂತೆ ನಿಲ್ಲುತ್ತಾನೆ, ಹೋರಾಡುತ್ತಾ ಪ್ರಾಣ ದೇಶಕ್ಕಾಗಿ ತೆತ್ತು ತೆರಳುತ್ತಾನೆ.

ಅಲ್ಲೊಬ್ಬ ಅಧಿಕಾರಿ, ಕಂಪೆನಿಗೆ ಅವನೆಂದರೆ ಪ್ರಾಣ, ಹೆಂಡತಿ ತುಂಬು ಗರ್ಭಿಣಿ. ಅಪ್ಪ ಅಮ್ಮನಿಗೆ ಪತ್ರ ಬರೆಯುತ್ತಾ, ಸಾವು ನೋವು ನಿಶ್ಚಿತ, ಕೃಷ್ಣ ಹೇಳಿದ ಹಾಗೆ ಸತ್ತರೆ ಸ್ವರ್ಗ, ಗೆದ್ದರೆ ಭೂಮಿ, ಯುದ್ಧಯಾ ಕೃತ ನಿಶ್ಚಯ! ಹೇಳಿ ಕೇಳಿ ಆತನ ಬೆಟಾಲಿಯನ್ ವೀರ ಭೋಗ್ಯ ವಸುಂಧರಾ ಎಂಬ ಧ್ಯೇಯ ಹೊತ್ತಿದೆ. ಹೆಂಡತಿಗೆ, ಹೆಣ್ಣು ಮಗುವನ್ನು  ಹೆತ್ತರೆ ಕತ್ತಲ್ಲಿರುವ ಚಿನ್ನದ ಸರ ನಿನಗೆ ಎಂಬ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ, ತಾಯಿ ಭಾರತಿಗೆ ತನ್ನನ್ನೇ ಚಿನ್ನದ ಹಾರವಾಗಿ ಅರ್ಪಿಸಿಕೊಂಡ.

ಒಬ್ಬರೇ ಇಬ್ಬರೇ, ಇವರ ಶೌರ್ಯ ಗಾಥೆ ಹೇಳಲು ಹೊರಟರೆ ಅದಕ್ಕೆ ಕೊನೆಯುಂಟೆ? ಉದ್ದೇಶ ಪೂರ್ವಕವಾಗಿ ಹೆಸರುಗಳನ್ನು ಇಲ್ಲಿ ಬರೆಯಲಾಗಿಲ್ಲ. ಅವರ ಬಗ್ಗೆ ಇನ್ನೂ ಮತ್ತಷ್ಟು ತಿಳಿಯಲು ಪ್ರಯತ್ನಿಸೋಣ. ಅವರ ಋಣವಿದೆ ನಮ್ಮ ಮೇಲೆ. ಕೃತಜ್ಞತೆ ಉಸಿರಿರುವವರೆಗೆ ಇರಲಿ.

ಯತ್ರಾಹಂ ವಿಜಯಸ್ತತ್ರ 

-ಸಿಂಧೂ ಪ್ರಶಾಂತ್

 ಚಿತ್ರ ಕೃಪೆ: ಇಂಟರ್ನೆಟ್ ತಾಣ