ಕಾರ್ಡ್ ಇಲ್ಲದೆ ಎಟಿಎಂನಿಂದ ದುಡ್ಡು

ಕಾರ್ಡ್ ಇಲ್ಲದೆ ಎಟಿಎಂನಿಂದ ದುಡ್ಡು

 ಕಾರ್ಡ್ ಇಲ್ಲದೆ ಎಟಿಎಂನಿಂದ ದುಡ್ಡು

ಬ್ಯಾಂಕ್ ಕಾರ್ಡ್ ತರಲು ಮರೆತು ಬಂದಿರುವಾಗ,ಎಟಿಎಂನಿಂದ ಹಣ ತೆಗೆಯಬೇಕೇ? ನೀವು ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಗ್ರಾಹಕರಾದರೆ ಚಿಂತಿಲ್ಲ,ಅದು ಸಾಧ್ಯ.ನೀವು ಮೊಬೈಲ್ ಹೊಂದಿದ್ದು,ಅದು ಬ್ಯಾಂಕಿನಲ್ಲಿ ನೋಂದಾವಣೆಯಾಗಿರಬೇಕು.ಅಪ್ಲಿಕೇಶನ್ ಒಂದನ್ನು ಅನುಸ್ಥಾಪಿಸಿಕೊಂಡಿರಬೇಕೆನ್ನುವುದು ಇನ್ನೊಂದು ಅವಶ್ಯಕತೆ.ಅಪ್ಲಿಕೇಶನ್ ಮೂಲಕ,ಬ್ಯಾಂಕಿಗೆ ಹಣಕ್ಕಾಗಿ ಬೇಡಿಕೆ ಸಲ್ಲಿಸಿ.ಇದು ನೂರು ಪೌಂಡನ್ನು ಮೀರಬಾರದು.ಒಡನೆಯೇ ನಿಮಗೆ ಗುಪ್ತಸಂಖ್ಯೆಯ ರವಾನೆಯಾಗುತ್ತದೆ.ನಂತರ ಎಟಿಎಂನಲ್ಲಿ ಈ ಸಂಖ್ಯೆಯನ್ನು ಟೈಪಿಸುವ ಮೂಲಕ ಹಣ ಪಡೆಯಬಹುದು.ಮೊಬೈಲ್ ಮೂಲಕ ತಂತ್ರಾಂಶ ಚಾಲೂ ಮಾಡಲು ಪಾಸ್‌ವರ್ಡ್ ನೀಡಬೇಕಾಗುತ್ತದೆ,ಮಾತ್ರವಲ್ಲದೆ ಭದ್ರತೆಗಾಗಿ,ಸ್ಪರ್ಶಸಂವೇದಿ ತೆರೆಯನ್ನು ಬೆರಳಿನಿಂದ ತಟ್ಟದೆ,ಸಂಖ್ಯೆ ತೆರೆಯ ಮೇಲೆ ಪ್ರದರ್ಶಿತವಾಗದು.ಬ್ಯಾಂಕಿನ ಗ್ರಾಹಕರು ಯಾರಾದರೂ ಕಾರ್ಡು ಕಳೆದುಕೊಂಡಾಗ,ತುರ್ತು ಹಣ ಪಡೆಯಲು ಮೊದಲಿಗೆ ಅನುಸರಿಸುತ್ತಿದ್ದ ವಿಧಾನವನ್ನೀಗ,ಸಾಮಾನ್ಯ ಸ್ಥಿತಿಗೂ ಅನ್ವಯಿಸಲಾಗಿದೆ.ಈ ವ್ಯವಸ್ಥೆಯು ಹೊಸ ಮಾದರಿ ಎಟಿಎಂಗಳಲ್ಲಿ ಲಭ್ಯವಿದೆ.ಇನ್ನೊಂದು ಇಂತಹುದ್ದೇ ವ್ಯವಸ್ಥೆಯಲ್ಲಿ ಮೊಬೈಲ್ ತೆರೆಯಲ್ಲಿ ಕಾಣಿಸುವ ಬ್ಯಾಂಕಿನ ಬಾರ್‌ಕೋಡು ಗುರುತನ್ನು ಎಟಿಎಂ ಯಂತ್ರಗಳಲ್ಲಿ ಸ್ಕ್ಯಾನ್ ಮಾಡಿ,ಹಣ ಪಡೆಯುವ ವ್ಯವಸ್ಥೆಯೂ ಇದೆ.ಸಂಸ್ಥೆಗಳಿಗೆ ಸಹಾಯಧನ ನೀಡಲೂ,ಮೊಬೈಲ್ ಬಳಕೆಯನ್ನೂ ಬ್ಯಾಂಕ್ ಸಾಧ್ಯವಾಗಿಸಿದೆ.
----------------------------------------------
ವಿದ್ಯುಚ್ಚಾಲಿತ ಬಸ್
ಅತಿ ಶೀಘ್ರದಲ್ಲಿ ಚಾರ್ಜ್ ಮಾಡಲು ಸಾಧ್ಯವಾಗುವ ಬ್ಯಾಟರಿಗಳುಳ್ಳ ಬಸ್‌ನ್ನು ಕೊವೆಂಟ್ರಿಯಲ್ಲಿ ಓಡಿಸಲಾಗುತ್ತಿದೆ.ಸಾಮಾನ್ಯವಾಗಿ ವಿದ್ಯುಚ್ಚಾಲಿತ ಬಸ್‌ಗಳನ್ನು ಚಾರ್ಜ್ ಮಾಡಲು ಆರೇಳು ಗಂಟೆಗಳೇ ಬೇಕು.ಆದರೆ ಕೊವೆಂಟ್ರಿ ಎಂಬ ಯುರೋಪಿನ ಸ್ಥಳದಲ್ಲಿ ಪ್ರವಾಸೀ ಬಸ್ ಸಾರಿಗೆ ಕಂಪೆನಿಯೊಂದು ಬಳಸುವ ಬಸ್‌ನ ಇನ್ನೂರು ಬ್ಯಾಟರಿ ಪಂಕ್ತಿಯನ್ನು ಅರೆತಾಸಿನಲ್ಲಿ ಚಾರ್ಜ್ ಮಾಡಬಹುದು.ನಲುವತ್ತು ಜನರನ್ನು ಹೊತ್ತೊಯ್ಯಬಲ್ಲ ಬಸ್ಸಿನಲ್ಲಿ,ಬ್ರೇಕ್ ಹಾಕಿದಾಗಲೂ ಬಸ್‌ನ ಬ್ಯಾಟರಿ ಚಾರ್ಜ್ ಆಗಬಲ್ಲುದು.ಇನ್ನೂರು ಬ್ಯಾಟರಿಗಳು ಐದು ವರ್ಷ ಬಾಳಿಕೆ ಬಂದರೆ,ಈ ಬಸ್‌ಗಳು ದಿನಾಲೂ ನೂರಿಪ್ಪತ್ತು ಪೌಂಡ್ ಹಣ ಉಳಿಸಿದಕ್ಕೆ ಸಮಾನವಾಗುತ್ತದೆ.
----------------------------------------
ಯುಟ್ಯೂಬ್ ಮೂಲಕ ಕೇಬಲ್ ಚಾನೆಲ್ ವಿತರಣೆ
ಸ್ಥಳೀಯ ಟಿವಿ ಚಾನೆಲುಗಳನ್ನು ಜನರಿಗೆ ಮುಟ್ಟಿಸಲು,ಕೇಬಲ್ ಜಾಲಗಳ ಬಳಕೆಯಾಗುವುದು ನಿಜವಷ್ಟೇ?ಇನ್ನಿವು ನಿಧಾನವಾಗಿ,ಯುಟ್ಯೂಬ್ ಮೂಲಕ ಇಂಟರ್ನೆಟ್ ಸಂಪರ್ಕ ಹೊಂದಿದ ಗ್ರಾಹಕರ ಮನೆಯನ್ನು ತಲುಪುವ ವ್ಯವಸ್ಥೆ ಮಾಡುವ ಯೋಜನೆಯನ್ನು ಯುಟ್ಯೂಬ್ ಹೊಂದಿದೆ.ಕೇಬಲ್ ಜಾಲವನ್ನು ಸ್ಥಾಪಿಸಿ,ನಿರ್ವಹಿಸುವುದು ದುಬಾರಿ,ಮಾತ್ರವಲ್ಲ,ತಲೆನೋವಿನ ಕೆಲಸ.ಮನೆಮನೆಗೂ ಇಂಟರ್ನೆಟ್ ಸಂಪರ್ಕ ತಲುಪಿರುವ ದಿನ ಬಂದಾಗ,ಅದರ ಮೂಲಕವೇ ವಿಶ್ವದ ಯಾವ ಮೂಲೆಯಿಂದಲೂ ಸ್ಥಳೀಯ ಚಾನೆಲುಗಳನ್ನು ಜನರು ವೀಕ್ಷಿಸಲು,ಅದನ್ನು ಯುಟ್ಯೂಬ್ ಮೂಲಕ ಸ್ಟ್ರೀಮಿಂಗ್ ಮಾಡಿದರಾಯಿತಲ್ಲ?
--------------------------------------
ಕನ್ನಡ ವಿಕಿಪೀಡಿಯಾಕ್ಕೀಗ ಒಂಭತ್ತನೇ ವಾರ್ಷಿಕೋತ್ಸವ
ಜನರಿಗೋಸ್ಕರವೇ ಜನರಿಂದಲೇ ಬೆಳೆಯುತ್ತಿರುವ ವಿಕಿಪೀಡಿಯಾ ವಿಶ್ವಕೋಶವು ಕನ್ನಡದಲ್ಲೂ ಇದೆ.ಅದಕ್ಕೀಗ ಒಂಭತ್ತನೇ ವಾರ್ಷಿಕೋತ್ಸವದ ಸಂಭ್ರಮ.ಜೂನ್ ಹನ್ನೆರಡಕ್ಕೆ ಒಂಭತ್ತನೇ ವಾರ್ಷಿಕೋತ್ಸವವಾದರೂ,ಅದರ ಆಚರಣೆ ನಿನ್ನೆ ಹದಿನೇಳನೇ ತಾರೀಕಿನಂದು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಆಯೋಜಿಸಲಾಗಿತ್ತು.ಸದ್ಯ ಕನ್ನಡ ವಿಕಿಪೀಡಿಯಾದಲ್ಲಿ ಹನ್ನೆರಡು ಸಾವಿರ ಬರಹಗಳಿವೆ.ಇತರ ಭಾಷೆಗಳಿಗೆ ಹೋಲಿಸಿದರೆ,ಇದು ಕಡಿಮೆ.ಒಂಭತ್ತು ವರ್ಷಗಳಲ್ಲಿ ಕನ್ನಡ ವಿಕಿಪೀಡಿಯಾ ಕಂಡಿರುವ ಪ್ರಗತಿ ಸಾಲದು.ಬರಹಗಾರರು ಸಕ್ರಿಯರಾಗಿ,ಕನ್ನಡ ವಿಶ್ವಕೋಶವನ್ನು ಸಮೃದ್ಧಗೊಳಿಸುವತ್ತ ಕೈಜೋಡಿಸಬೇಕಿದೆ.ವಿಕಿಪೀಡಿಯಾದಲ್ಲಿ ನೋಂದಾಯಿಸಿಕೊಂಡು,ಬರಹಗಳನ್ನು ವಿಕಿಪೀಡಿಯಾ ಪುಟದಲ್ಲೇ ಟೈಪಿಸಿ,ಉಳಿಸಲು ಸಾಧ್ಯ.ಕನ್ನಡ ಲಿಪ್ಯಂತರ,ಇನ್‌ಸ್ಕ್ರಿಪ್ಟ್ ಮುಂತಾದ ಟೈಪಿಸುವ ಕ್ರಮಗಳ ಪೈಕಿ ಬೇಕಾದ ಕ್ರಮವನ್ನು ಆಯ್ದುಕೊಳ್ಳಬಹುದು.ಕನ್ನಡದ ವಿಕ್ಷನರಿ ಯೋಜನೆಯಲ್ಲಿ ಕನ್ನಡ ನಿಘಂಟು ಕೂಡಾ ಬೆಳೆಯುತ್ತಿದೆ.ಈಗಾಗಲೇ ಎರಡು ಲಕ್ಷ ಪದಗಳನ್ನಿದು ಹೊಂದಿದೆ.ಇದಕ್ಕೂ ಪದಗಳನ್ನು ಸೇರಿಸಲು ಕನ್ನಡಿಗರು ಮುಂದಾಗಬಹುದು.ಕನ್ನಡ ವಿಕಿಪೀಡಿಯಾಕ್ಕೆ ತಮ್ಮ ಬೆಂಬಲ ನೀಡಬಯಸುವವರಿಗೆ,ಅದನ್ನು ಸಾಧಿಸುವ ಬಗೆಯನ್ನು http://meta.wikimedia.org/wiki/File:Wikipedia_Outreach_Document_-_Kannada.pdfನಲ್ಲಿ ವಿವರವಾಗಿ ತಿಳಿಸಲಾಗಿದೆ.
-------------------------------------------------------------------
ಬಾಹ್ಯಾಕಾಶಕ್ಕೆ ಚೀನೀ ಮಹಿಳೆ

 






ಇದೇ ಮೊದಲ ಬಾರಿಗೆ ಚೀನಾವು ತನ್ನ ಮಹಿಳಾ ಗಗನಯಾತ್ರಿಯನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲಿದೆ.ಫೈಟರ್ ವಿಮಾನದ ಪೈಲಟ್ ಲಿಯು ಯಾಂಗ್ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.ಅವರ ಜತೆ ಇನ್ನೀರ್ವರೂ ಬಾಹ್ಯಾಕಾಶಕ್ಕೆ ಹೋಗಿ,ಬಾಹ್ಯಾಕಾಶ ಕೇಂದ್ರವೊಂದನ್ನು ಸ್ಥಾಪಿಸುವ ಕೆಲಸವನ್ನು ನಿರ್ವಹಿಸಲಿದ್ದಾರೆ.ಮಹಿಳೆಯರಿಗೆ ಬಾಹ್ಯಾಕಾಶದಲ್ಲಿ ಎದುರಾಗುವ ತೊಂದರೆಗಳು,ಅವರಿಗೆ ಅಗತ್ಯವಾದ ತರಬೇತಿ,ಕೆಲಸವನ್ನು ನಿರ್ವಹಿಸಲು ಅವರಿಗೆ ಎದುರಾಗುವ ಸವಾಲುಗಳನ್ನು ಅರಿಯಲು ಈ ಮೊದಲ ಬಾಹ್ಯಾಕಾಶಯಾನಿ ಮಹಿಳೆ,ಚೀನಾದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಹೆಚ್ಚಿನ ವಿವರಗಳನ್ನು ತಿಳಿಸಲು ನೆರವಾಗಲಿದ್ದಾರೆ.ಯಾತ್ರೆ ಯಶಸ್ವಿಯಾದರೆ,ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಿರುವ  ಅಮೆರಿಕಾ,ರಶ್ಯಾದ ನಂತರ ಮೂರನೇ ದೇಶವಾಗಿ ಚೀನಾ ಹೊರಹೊಮ್ಮಲಿದೆ.
-----------------------------------------------
ಸುದ್ದಿ ಮಾಡಿದ ಹುಡುಗಿಯ ಬ್ಲಾಗು
ಒಂಭತ್ತು ವರ್ಷದ ಶಾಲಾ ಬಾಲಕಿ ಈ ವರ್ಷ ಎಪ್ರಿಲ್ ನಂತರ ಬ್ಲಾಗು ಬರೆಯುತ್ತಿದ್ದಳು.ಆಕೆ ತನ್ನಶಾಲೆಯಲ್ಲಿ ನೀಡುತ್ತಿದ್ದ,ಊಟದ ಬಗ್ಗೆ ಬರೆದು,ಅವುಗಳ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದಳು.ಈಚೆಗೆ ಅದರ ಬಗ್ಗೆ ಪತ್ರಿಕೆಯೊಂದು ಬರೆದು,ಕಳಪೆ ಆಹಾರ ತಯಾರಿಸಿ,ಮಕ್ಕಳಿಗೆ ನೀಡುತ್ತಿರುವ ಅಡುಗೆಯವರನ್ನು ಉಚ್ಚಾಟಿಸುವ ಸಮಯ ಬಂದಿದೆ ಎಂದು ಬರೆದಿತ್ತು.ಇದು ಶಾಲಾ ಆಡಳಿತವನ್ನು ಕೆರಳಿಸಿತು.ಅವರುಗಳು ಬ್ಲಾಗು ಬರೆಯುತ್ತಿದ್ದ ಮಗುವನ್ನು ಕರೆದು,ಇನ್ನು ಆಹಾರದ ಚಿತ್ರವನ್ನು ಬ್ಲಾಗಿಗೆ ಸೇರಿಸಲಿಕ್ಕಿಲ್ಲವೆಂದು ಬಾಲಕಿ ಮಾರ್ಥಾಳನ್ನು ಎಚ್ಚರಿಸಿತು.ಪ್ರಕರಣದ ಬಗ್ಗೆ ಬರೆದು,ಮಾರ್ತಾ,ಶಾಲಾ ಆಡಳಿತದ ಈ ಕ್ರಮದ ನಂತರ ತಾನು ಬ್ಲಾಗು ಬರೆಯದಿರಲು ನಿರ್ಣಯಿಸಿದ್ದೇನೆಂದು ಹೇಳಿಕೊಂಡಿದ್ದಾಳೆ.ಈಗ ಇದು ಸರ್ವತ್ರ ಸುದ್ದಿ ಮಾಡಿದೆ.ಬ್ಲಾಗನ್ನು ಎರಡು ದಶಲಕ್ಷ ಜನ ವೀಕ್ಷಿಸಿದಾರೆ.
-------------------------------------
ಸ್ಮಾರ್ಟ್‌ಪೋನ್ ಬಳಸಲು ಸ್ಮಾರ್ಟ್‌ನೆಸ್ ಬೇಕು!
ಸ್ಮಾರ್ಟ್‌ಫೋನುಗಳಲ್ಲಿ ಕ್ಯಾಮರಾ,ರೇಡಿಯೋ,ಅಪ್ಲಿಕೆಶನ್‌ಗಳು,ಮಾಮೂಲಿ ಧ್ವನಿಕರೆ-ಸಂದೇಶ ಕಳುಹಿಸುವ ವ್ಯವಸ್ಥೆ,ಬ್ಲೂಟೂತ್-ವೈಫೈ ಸಂಪರ್ಕ ಮುಂತಾದ ಹತ್ತು ಹಲವು ಅನುಕೂಲತೆಗಳಿದ್ದರೂ ಅವನ್ನು ಬಳಸಲು ಬಳಕೆದಾರನು ತುಸು ಸ್ಮಾರ್ಟ್ ಆಗಿರಬೇಕಾಗುತ್ತದೆ.ಈಗಿನ ತಲೆಮಾರಿನವರು ಇಂತಹ ಜಾಣ್ಮೆಯನ್ನು ಮೈಗೂಡಿಸಿಕೊಂದಿರುತ್ತಾರಾದರೂ,ಹಳಬರಿಗೆ ಅವುಗಳನ್ನು ಸಮರ್ಥವಾಗಿ ಬಳಸಲು ಬರಲು ಪರಿಶ್ರಮ ಅಗತ್ಯ.ಹೆಚ್ಚಿನವರು ಸ್ಮಾರ್ಟ್‌ಫೋನುಗಳ ಕನಿಷ್ಠ ಉಪಯೋಗ ಮಾತ್ರಾ ಪಡೆದುಕೊಳ್ಳುವುದೇ ಹೆಚ್ಚು.ಸ್ಪರ್ಶಸಂವೇದಿ ತೆರೆ ಹೊಂದಿದ್ದು,ಕೀಲಿಮಣೆಯೂ ಇಲ್ಲವಾದರೆ,ಟೈಪಿಸುವ ಕೆಲಸವೂ ಕೆಲವರಿಗೆ ಕಷ್ಟವೆನಿಸುತ್ತದೆ.ಸಂದೇಶ ಕಳುಹಿಸುವುದು ಬಿಡಿ,ಬೇಕಾದವರ ಸಂಪರ್ಕ ವಿವರಗಳನ್ನು ಸೇರಿಸಲೂ ಕೆಲವರಿಗೆ ಕಿರಿಕಿರಿ ಅನ್ನಿಸುತ್ತದೆ.ಅದರೆ ಅದನ್ನವರು ಬಹಿರಂಗವಾಗಿ ಹೇಳಿಕೊಳ್ಳಲಾರರು.ಕರ್ನಾಟಕದ ಶಾಸಕರು ನೀಲಿಚಿತ್ರವನ್ನು ಸದನದಲ್ಲಿ ವೀಕ್ಷಿಸಿದ ಅರೋಪ ಬಂದಾಗ,ಹಲವರು ತಮಗೆ ಪೋನು ಬಳಸಲು ಬಾರದು ಎಂದು ಹೇಳಿಕೊಂಡದ್ದು ತಮಗೆ ನೆನಪಿರಬಹುದು.ಆರೋಪದಿಂದ ತಪ್ಪಿಸಿಕೊಳ್ಳಲು ಅವರು ಹೀಗೆನ್ನುತ್ತಿದ್ದಾರೆ ಎಂದು ಅನಿಸಿದರೂ,ಅದು ಪೂರ್ಣ ಸುಳ್ಳೇನೂ ಅಲ್ಲ.ಧ್ವನಿಕರೆ ಮಾಡುವುದು,ಸ್ವೀಕರಿಸುವುದು,ಸಂದೇಶಗಳನ್ನು ಓದುವುದರ ಹೊರತು ಬೇರೆ ಕೆಲಸಗಳನ್ನು ಮಾಡಲು  ಹೆಚ್ಚಿನವರು ಇತರರ ಸಹಾಯ ಪಡೆಯುವುದೇ ಮಾಮೂಲಿಯಾಗಿದೆ ಎನ್ನುವುದು ಸತ್ಯಾಂಶವೇ ಆಗಿದೆ.
--------------------------------

Udayavani 



*ಅಶೋಕ್‌ಕುಮಾರ್ ಎ


Comments