ಕಾರ್ತಿಕದ ಬೆಳಕು
ಕವನ
ದೀಪ ಹಚ್ಚಬೇಕು
ಅದು ಬೆಳಗಿ ಒಳಗಿನೊಳಗೆ
ಕತ್ತಲ ಬಸಿರೊಡೆದು
ಸ್ಪಷ್ಟವಾಗಬೇಕು ಒಳಗಿನೊಳಗು !
ಮೂಲೆ ಮೂಲೆಗೂ
ಕಿರಣಗಳು ತೂರಿ
ಬೆಳಗುತಿರಲಿ ನಿನ್ನ
ಕಣ್ಣುಗಳ ಹಾಗೆ
ಅದು ಅರಳುತಿರಲಿ ನಿನ್ನ
ನಗುವಿನ ಹಾಗೆ
ನೂತ ಜೇಡನ ಬಲೆ ತೊಡೆದು
ಕಸ ಗುಡಿಸಿ, ಕಪಾಟಿನ
ಧೂಳು ಝಾಡಿಸಿ
ಹೊತ್ತಗೆಗಳ ಒಪ್ಪವಾಗಿಡಬೇಕು.....
ಹಚ್ಚಿಟ್ಟ ದೀಪದ ಬೆಳಕು
ಅದು ಸುತ್ತಲೂ ವಿಸ್ತರಿಸಲಿ
ನಿನ್ನ ಹೆಜ್ಜೆ ಗುರುತಿನ ಹಾಗೆ
ಕತ್ತಲಿನಿಂದ ಬೆಳಕಿನೆಡೆಗೆ
ಬೆಳಕಿನಿಂದ ಕತ್ತಲಿನೆಡೆಗೆ.....
ಹಚ್ಚಿಟ್ಟ ದೀಪದ ಕೆಳಗೆ
ದೇವರ ಪೀಠದ ಮೇಲೆ
ಗಂಧದಕಡ್ಡಿ ಉರಿದುರಿದು
ಘಮಘಮಿಸಬೇಕು ಸುತ್ತೆಲ್ಲಾ
ಅನುಭವದೊಡನೆ ಅನುಭಾವಬೆರೆತು
ಬೆಳಗಬೇಕು ನೀ ಹಚ್ಚಿಟ್ಟ
ಹಣತೆಯ ಬೆಳಕು
ಈ ನೆಲದ ಬದುಕು
ಕಾರ್ತಿಕದ ರಾತ್ರಿಯಲಿ ದೀಪ ಬೆಳಗಿದಂತೆ
ಮನದಲ್ಲೇ ನಿರಂತರ
ಹಣತೆಯ ಹಚ್ಚುತ್ತಲೇ ಇರು....