ಕಾರ್ನಾಡರ ಸುತ್ತ; ಪ್ರೇರಣೆಗಳ ಹುತ್ತ! (ಭಾಗ 1)

ಕಾರ್ನಾಡರ ಸುತ್ತ; ಪ್ರೇರಣೆಗಳ ಹುತ್ತ! (ಭಾಗ 1)

Lives of great men all remind us

We can make our lives sublime,

And, departing, leave behind us

Footprints on the sands of time;

- Henry Wadsworth Longfellow

***

ನಾನು ಬಿ.ಎಸ್ಸಿ ವ್ಯಾಸಂಗಕ್ಕಾಗಿ ಭಂಡಾರಕಾರ್ಸ್ ಕಾಲೇಜು ಸೇರುವರೆಗೆ, ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಯಾರೆಂದು ತಿಳಿದಿರಲಿಲ್ಲ. ಕಾಲೇಜಿನಲ್ಲಿ ಪ್ರತಿ ಬುಧವಾರ ನಡೆಯುತ್ತಿದ್ದ ಪಠ್ಯೇತರ ಚಟುವಟಿಕೆಯ ಕ್ಲಾಸಿನಲ್ಲಿ ನಮ್ಮ ಗುರುಗಳಾದ ಹಯವದನ ಸರ್ ಅವರು ನಮಗೆ ಹಲವಾರು ಹಿರಿಯ ಸಾಹಿತಿಗಳನ್ನು ಪರಿಚಯಿಸುತ್ತಿದ್ದರು. ಇಲ್ಲಿಯೇ, ನನಗೆ ಕಾರ್ನಾಡರ ಪರಿಚಯವಾದದ್ದು; ತದನಂತರ, ಕಾರ್ನಾಡರನ್ನು ಓದಿ, ಅಧ್ಯಯನಿಸಿ, ಪ್ರಭಾವಿತನಾಗಿ ಅವರ ಅಭಿಮಾನಿಯಾದೆ! ಇವತ್ತು ಈ ಜ್ಞಾನ ದಿಗ್ಗಜರು ಇಹಲೋಕ ತ್ಯಜಿಸಿ ಪರಲೋಕಕ್ಕೆ ಪಾದಾರ್ಪಣೆಗೈದು ನಾಲ್ಕು ವರುಷಗಳು ಕಳೆದಿದೆ. ಶ್ರೀಯುತರ ಬದುಕು-ಸಾಧನೆಗಳು ನಮಗೆಲ್ಲರಿಗೂ ಆದರ್ಶವಾಗಲಿ ಎಂದು ಆಶಿಸುತ್ತಾ, ಕಾರ್ನಾಡರ ಸಾಧನೆಗಳನ್ನು ಪರಿಚಯಿಸುತ್ತ ಈ ಲೇಖನವನ್ನು ಬರೆದಿದ್ದೇನೆ.

ಕಾರ್ನಾಡರು ಮೇ 19, 1938 ರಂದು ಮಥೆರಾನಿ (ಮುಂಬಯಿ) ನಲ್ಲಿ ರಘುನಾಥರಾಯರು-ಕೃಷ್ಣಾಬಾಯಿ ಅವರಿಗೆ ಜನಿಸಿದರು. ಬೆಳೆಯೋ ಪೈರು ಮೊಳಕೆಲೇ ನೋಡೋ ಎಂದು ನಾಣ್ನುಡಿ ಹೇಳಿದಂತೆ, ಕಾರ್ನಾಡರು ಬಾಲ್ಯದಲ್ಲೇ ತಮ್ಮ ಅಪ್ರತಿಮ ಪ್ರತಿಭೆ-ಜಾಣ್ಮೆಗಳನ್ನು ಪ್ರದರ್ಶಿಸತೊಡಗಿದರು. ಒಬ್ಬರು ಕಾಲೇಜು ವಿದ್ಯಾರ್ಥಿಯಾದಾಗ, ಅಂತಾರಾಷ್ಟ್ರೀಯ ಕವಿಗಳ ಭಾವಚಿತ್ರಗಳನ್ನು ಬಿಡಿಸಿ ಅವರ ಆಟೋಗ್ರಾಫ್ ಪಡೆಯುತ್ತಿದ್ದರು. ಮುಂದೆ ಧಾರ್ವಾಡ ವಿ.ವಿ ಯಲ್ಲಿ ಪ್ರಥಮ ಸ್ಥಾನಗೈದು ರೋಡ್ಸ್ ವಿದ್ಯಾರ್ಥಿವೇತನ ಪಡೆದು ಆಕ್ಸ್ಫರ್ಡ್ ವಿ.ವಿ ಪ್ರವೇಶಿಸಿದರು. ಇವರ ಚುರುಕುತನಕ್ಕೆ ಬುದ್ಧಿವಂತಿಕೆಗೆ ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಆಕ್ಸ್ಫರ್ಡ್ ವ್ಯಾಸಂಗ ಪೂರೈಸಿ ಭಾರತಕ್ಕೆ ಮರಳಿ, ಮದ್ರಾಸಿನ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ಸ್ ನಲ್ಲಿ ಮುಖ್ಯಸ್ಥರಾದರು. 

ಕನ್ನಡ ನಾಟಕ ರಂಗದಲ್ಲಿ ಮಿಂಚಿದ ಕಾರ್ನಾಡರು: ವೃತ್ತಿ ನಾಟಕಗಳನ್ನು ನೋಡಿ ಅದಕ್ಕೆ ಆಕರ್ಷಿತರಾದ ಕಾರ್ನಾಡರು ಸಣ್ಣವರಿರುವಾಗಲೇ ನಾಟಕ ಬರೆಯತೊಡಗಿ, ನಾಟಕ ಮಂಡಳಿಯವರೊಂದಿಗೆ ಬಾಲ್ಯದಿಂದಲೇ ಸ್ನೇಹ ಸಂಬಂಧವನ್ನು ಬೆಳೆಸಿದ್ದರು. ನಾಟಕರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹೆಗ್ಗುರಿ ಹೊಂದಿ, ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಸ ತೊರೆದು, ಫುಲ್ ಟೈಂ ನಾಟಕಕಾರಾಗಿ- ಒಂದೊಂದು ನಾಟಕಗಳನ್ನು ಪರೀಕ್ಷೆ ಎಂಬಂತೆ ರೂಪಿಸಿ, ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದರು.

ಮೂಲತಃವಾಗಿ ಕಾರ್ನಾಡರು ರಂಗಭೂಮಿಯ ಕುರಿತು ಒಲವಿರಿಸಿಕೊಂಡವರಾದುದರಿಂದ ವಿಲಿಯಮ್ ಶೇಕ್ಷ್ ಪಿಯರ್, ಅನೋಯಿ, ಕಾಮು, ಬ್ರೆಕ್ಟ್ ಮೊದಲಾದ ಐರೋಪ್ಯ ನಾಟಕಕಾರರ ಗಾಢವಾದ ಪ್ರಭಾವಕ್ಕೆ ಒಳಗಾದರು. ಇಪ್ಪತ್ತನೇ ಶತಮಾನದಲ್ಲಿ ಭಾರತೀಯ ರಂಗಭೂಮಿಯಲ್ಲಿ ಸಮಗ್ರ ಬದಲಾವಣೆಯ ರೂವಾರಿಯಾದ ಕಾರ್ನಾಡರು- ಐರೋಪ್ಯ, ಗ್ರೀಸ್, ರೋಮ್ ದೇಶಗಳ ರಂಗತಂತ್ರಗಳನ್ನು ತಮ್ಮ ನಾಟಕಗಳಲ್ಲಿ ಪ್ರಯೋಗಿಸಿ ಭಾರತೀಯ ರಂಗ ರಸಿಕರನ್ನು ಚಕಿತಗೊಳಿಸಿದರು. ನುರಿತ ನಾಟಕಕಾರರಂತೆ ಕಾರ್ನಾಡರು ತಮ್ಮ ನಾಟಕಗಳಲ್ಲಿ ನವ್ಯತೆಯನ್ನು ತರುವಲ್ಲಿ ಶ್ರಮಿಸಿದರು. ಪ್ರತಿಯೊಂದು ವಿಷಯವನ್ನು ಆಳವಾಗಿ ಅಧ್ಯಯನಗೈದು ಕೃತಿರಚನೆಗೆ ತೊಡಗುವುದು ಕಾರ್ನಾಡರ ವೈಶಿಷ್ಟ್ಯ. ಶ್ರೀಯುತರ ಗಂಭೀರವಾದ ಬದುಕಿನ ಮೂಲಭೂತ ಸಮಸ್ಯೆಗಳ ಜಟಿಲತೆಯನ್ನು ಮನೋವೈಜ್ಞಾನಿಕವಾಗಿ ಅಧ್ಯಯನಿಸಿ ನಾಟ್ಯಿಕರಿಸಿ; ಅಪೂರ್ಣತೆಯಂಥ ಸಮಸ್ಯೆಗಳನ್ನು ನಗಿಸುತ್ತ, ರಂಜಿಸುತ್ತ ಆರಾಮವಾಗಿ ಯೋಚಿಸಲು- ವಿಮರ್ಶಿಸಲು ಪ್ರಚೋದಿಸಲು ಉತ್ತೇಜಿಸುತ್ತದೆ. 

"ನನಗನ್ನಿಸುವ ಪ್ರಕಾರ ಕಾರ್ನಾಡ್ 'ನುಡಿ' ಹಿಡಿಯುವ' ಬದಲು, ನಾಟಕದ 'ನಾಡಿ' ಹಿಡಿದಿದ್ದಾರೆ. ನಾಡಿ ಹಿಡಿಯುವುದೇ ನಾಟಕಕಾರನ ಕೆಲಸ. ಅದನ್ನು ಸಾಧಿಸಿದರೆ ನುಡಿ ತಾನಾಗೇ ಬಡ ಮೂಡುತ್ತದೆ" ಎಂದು ಕಾರ್ನಾಡರ ನಾಟಕ ಜಾಣ್ಮೆಯ ಕುರಿತು ಬಿ.ವಿ.ಕಾರಂತರ ಅಭಿಪ್ರಾಯ ಇಲ್ಲಿ ಸ್ಮರಿಸಬಹುದು. ಇವರ ಬಹಳಷ್ಟು ನಾಟಕಗಳು ಹಲವಾರು ಭಾರತೀಯ ಭಾಷೆಗಳಲ್ಲಿ ಭಾಷಾಂತರಗೊಳ್ಳದೆ, ಖ್ಯಾತ ನಿರ್ದೇಶಕರಾದ ಇಬ್ರಾಹಿಂ ಅಲ್-ಖಾಝಿ, ಬಿ.ವಿ. ಕಾರಂತ, ಪ್ರಸನ್ನ, ಅರವಿಂದ್ ಗೌರ್, ಸತ್ಯದೇವ ದುಬೆ, ವಿಜಯ್ ಮೆಹ್ತಾ, ಜಾಫರ್ ಮೊಹಿದ್ದೀನ್ ಇತ್ಯಾದಿಯವರಿಂದ ನಿರ್ದೇಶನಗೊಂಡು ರಂಗಮಂಚದ ಮೇಲೆ ಪ್ರದರ್ಶನವಾಗಿ ರಂಗರಸಿಕರನ್ನು ರಸದೌತಣ ಬಡಿದಂತಾಯಿತು! 

ಕಾರ್ನಾಡರ ಪ್ರಸಿದ್ಧ ನಾಟಕಗಳ ಒಂದು ಸಂಕ್ಷೀಪ್ತ ಅವಲೋಕನ: ಕಾರ್ನಾಡರ ನಾಟಕಗಳೆಲ್ಲವೂ ಹೆಚ್ಚಾಗಿ ಹಳಗನ್ನಡ ಕಾವ್ಯ, ಜಾನಪದ ಕಥೆ, ವಿಶಿಷ್ಟ ರೀತಿಯ ಕಥಾ ವಿವರಣೆ ಹಾಗು ಐತಿಹಾಸಿಕ ಕಥಾವಸ್ತು ಹೊಂದಿದಂತಹುಗಳು. ಪ್ರಾಚೀನ ವಿಷಯವನ್ನು ನವೀನ ತಂತ್ರಗಾರಿಕೆಯ ಮೂಲಕ ಸಮಕಾಲೀನ ವಸ್ತುವೆಂಬಂತೆ ತೋರಿಸುವ ಜಾಣ್ಮೆಯೇ ಕಾರ್ನಾಡರ ನಾಟಕಗಳ ವೈಶಿಷ್ಟ್ಯ. ಶ್ರೀರಂಗರಂತೆ ನಾಟಕದಲ್ಲಿ ನೂತನತೆಯನ್ನು ಪ್ರಯೋಗಿಸುವಲ್ಲಿ ಕಾರ್ನಾಡರು ಪ್ರಲೋಭಿಸಿದರು. 1961ರಲ್ಲಿ ಮಹಾಭಾರತದ ಆದಿ ಪರ್ವದಿಂದ ಆರಿಸಿಗೊಂಡ ಪೌರಾಣಿಕ ಕಥೆ ನವೀನ ರೀತಿಯಾಗಿ ಇಂದಿನ ಕಾಲಕ್ಕೆ ಸಮೀಕರಿಸಿ 'ಯಯಾತಿ'ಯನ್ನು ರಚಿಸಿ, ತಮ್ಮ ನಾಟಕ ರಂಗದ ಪಯಣವನ್ನು ಯಶಸ್ವಿಯಾಗಿ ಬೆಳೆಸಿದರು. ತರುವಾಯ, 1964ರಲ್ಲಿ ಐತಿಹಾಸಿಕ ಕಥೆಯನ್ನು ರಂಗದ ಮೇಲೆ ಸಫಲವಾಗಿ ಪ್ರದರ್ಶಿಸುವಂತೆ ರಚಿಸಿದರು. ಒಬ್ಬರು ಸಫಲ ನಾಟಕಕಾರರಾಗಿ ಕಾರ್ನಾಡರು ಇದರಲ್ಲಿ ಸಾಧಿಸಿದ ಯಶಸ್ಸು ಪರಿಣಿತಿ ಅನನ್ಯವಾದದ್ದು; ಅವರಿಗೆ ರಾಷ್ಟೀಯ-ಅಂತರಾಷ್ಟ್ರೀಯ ಖ್ಯಾತಿಯನ್ನು ತಂದು, ರಾಷ್ಟೀಯ ಮಟ್ಟದಲ್ಲಿ ಓರ್ವ ಮುಂಚೂಣಿಯ ನಾಟಕಕಾರರೆಂದು ತೋರಿಸಿ; ಭಾರತದಲ್ಲಿನ ಅನೇಕ ಭಾಷೆಗಳಿಗೆ ಅದೇ ರೀತಿ ಪರದೇಶದ ಭಾಷೆಗಳಿಗೆ ಭಾಷಾಂತಾರಗೊಂಡು ಪ್ರದರ್ಶಿಸಿದ ನಾಟಕ ಚರ್ಚೆಗೊಳಗಾಗಿ, ವಿಮರ್ಶೆಗೊಳಗಾಗಿ ಜನಪ್ರಿಯ ಗೊಂಡಂತಹ ನಾಟಕ. 

(ಇನ್ನೂ ಇದೆ)

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ