ಕಾರ್ಯಪ್ಪ ದಂಪತಿಯ ಕೃಷಿ ಕಾರ್ಯತಂತ್ರ

ಕಾರ್ಯಪ್ಪ ದಂಪತಿಯ ಕೃಷಿ ಕಾರ್ಯತಂತ್ರ

ಅಂದು ೯ ಸಪ್ಟಂಬರ್ ೨೦೧೫. ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ”ದ ನಾವು ೬೦ ಸದಸ್ಯರು ವಿವೇಕ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ದಂಪತಿಯ ಕೃಷಿ ಸಾಧನೆ ಕಣ್ಣಾರೆ ಕಾಣಲು ಮುಂಜಾನೆ ಹೊರಟಿದ್ದೆವು. ಮುಂಚಿನ ದಿನ ಫೋನ್ ಮಾಡಿದ್ದಾಗ, ವಿವೇಕ ಕಾರ್ಯಪ್ಪ ಖಡಕ್ಕಾಗಿ ಹೇಳಿದ್ದರು, “ಬೆಳಗ್ಗೆ ಒಂಭತ್ತು ಗಂಟೆಗೆ ನೀವು ಇಲ್ಲಿಗೆ ಬರಬೇಕು. ಅನಂತರ ನನಗೆ ಬೇರೆ ಕೆಲಸ ಇದೆ”. ಮೈಸೂರಿನಿಂದ ಹೆಗ್ಗಡದೇವನ ಕೋಟೆಗೆ, ಅಲ್ಲಿಂದ ಸರಗೂರು ಹಾದು ವಿವೇಕ ಕಾರ್ಯಪ್ಪನವರ ತೋಟಕ್ಕೆ ಸಾಗುವ ಕಚ್ಚಾ ರಸ್ತೆ ತಲಪಿದ್ದೆವು. ಬಸ್ಸಿನಿಂದಿಳಿದು, ಒಂದು ಕಿಮೀ ನಡೆದು ಬೆಳಗ್ಗೆ ಒಂಭತ್ತು ಗಂಟೆಯ ಹೊತ್ತಿಗೆ ಅವರ ಮನೆ ಸೇರಿದ್ದೆವು.
 
ನಮ್ಮೆದುರು ಬಂದು ನಿಂತ ವಿವೇಕ ಕಾರ್ಯಪ್ಪ ಕೇಳಿದ ನೇರ ಪ್ರಶ್ನೆ, “ಯಾಕೆ ಬಂದಿದ್ದೀರಿ? ನಿಮ್ಮ ಭೇಟಿಯ ಉದ್ದೇಶ ಏನು? ನನಗೆ ಸಮಯ ಹಾಳು ಮಾಡಲು ಇಷ್ಟವಿಲ್ಲ”.
ಮಂಗಳೂರಿನಲ್ಲಿ “ವಿಷಮುಕ್ತ ಆಹಾರ” ಒದಗಿಸಲಿಕ್ಕಾಗಿ ಮೇ ೨೦೧೪ರಲ್ಲಿ ನಮ್ಮ ಬಳಗ ಆರಂಭಿಸಿದ್ದು, ಮೊದಲ ವರುಷದಲ್ಲಿ ತಿಂಗಳಿಗೆ ಎರಡು ಭಾನುವಾರ ಮಾತ್ರ ಸಾವಯವ ಕೃಷಿ ಉತ್ಪನ್ನ ಮಾರಾಟ ಮಾಡಿದ್ದು ತಿಳಿಸಿದೆ. ಈಗ ಪ್ರತೀ ಭಾನುವಾರ ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇದ್ದರೂ ಪೂರೈಕೆ ಇಲ್ಲ. ಬೆಳೆಸಿದವರೇ ಬಂದು ತಾವು ಬೆಳೆಸಿದ್ದನ್ನು ಮಾರಾಟ ಮಾಡಬೇಕೆಂಬುದು ನಮ್ಮ ಬಳಗದ ನಿಯವು; ಅದಕ್ಕೆ ಅನುಸಾರವಾಗಿ ಸಾವಯವ ಕೃಷಿ ಮಾಡಲು ಇನ್ನಷ್ಟು ರೈತರು ತಯಾರಿದ್ದಾರೆ. ಆದರೆ ಅವರಿಗೆ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇವೆ – ಇವು ಅವರ ಪ್ರಶ್ನೆಗೆ ನಾನಿತ್ತ ಉತ್ತರ.
 
ಅಷ್ಟರಲ್ಲಿ ಅವರ ಪತ್ನಿ ಜೂಲಿ ಕಾರ್ಯಪ್ಪ ಅವರೂ ಬಂದರು. ನಮ್ಮೆದುರು ಕುಳಿತುಕೊಂಡು, ವಿವೇಕ – ಜೂಲಿ ಕಾರ್ಯಪ್ಪ ತಾವು ಆ ಬೆಟ್ಟದ ತಪ್ಪಲಿಗೆ ೧೯೮೬ರಲ್ಲಿ ಬಂದಾಗಿನಿಂದ ಅಲ್ಲಿ ಕೃಷಿ ಮಾಡುತ್ತಾ ಕಲಿತದ್ದನ್ನು ಚುಟುಕಾಗಿ – ಹತ್ತೇ ನಿಮಿಷಗಳಲ್ಲಿ – ಹಂಚಿಕೊಂಡರು.
ಇನ್ನು ನಮ್ಮ ತೋಟ ನೋಡಿಕೊಂಡು ಬನ್ನಿ ಎಂದು ನಮ್ಮನ್ನು ಕಳಿಸಿಕೊಟ್ಟು, ಶ್ರಮಜೀವಿಗಳಾದ ಅವರು ತಮ್ಮ ಕೆಲಸಕ್ಕೆ ನಡೆದರು. ನಾವು ಅವರ ತೋಟ ಸುತ್ತುತ್ತಿದ್ದಂತೆ ಕಂಡದ್ದು ಸಮೃದ್ಧ ಹಸುರು. ಜೋಳದ, ಭತ್ತದ ಹೊಲಗಳು. ಕಾಡಿನ ಮರಗಳು. ನಳನಳಿಸುವ ಮಾವು, ಬಟರ್ ಫ್ರುಟ್, ಚಿಕ್ಕು, ಬಾಳೆ, ಪಪ್ಪಾಯಿ ಇತ್ಯಾದಿ ಗಿಡಗಳು. ಕೊಯ್ಲು ಮಾಡದೆ ಬಿಟ್ಟಿದ್ದ ತೆನೆ ತುಂಬಿದ ಜೋಳದ ಹೊಲ. ವಿಶಾಲವಾದ ಕೆರೆ. ಹರಳೆಣ್ಣೆ ತೆಗೆಯುವ ಘಟಕ, ಕಬ್ಬಿನಿಂದ ಬೆಲ್ಲ ಮಾಡುವ ಘಟಕ. ಹತ್ತಾರು ದನ, ಕರು, ಹೋರಿಗಳಿದ್ದ ಕೊಟ್ಟಿಗೆಗಳು.
 
ಅವರ ತರಕಾರಿ ಹೊಲದಲ್ಲಿದ್ದ ವಿವಿಧ ತರಕಾರಿಗಳನ್ನು ನೋಡುತ್ತಿದ್ದಾಗ ನಮ್ಮನ್ನು ಸೇರಿಕೊಂಡ ವಿವೇಕ ಕಾರ್ಯಪ್ಪ ಹೇಳಿದ್ದು, “ನೀವು ಬೇರೆಬೇರೆ ತರಕಾರಿ ಬೆಳೆಸಬೇಕು. ನಿಮ್ಮಲ್ಲಿಗೆ ಬರುವ ಗ್ರಾಹಕನಿಗೆ ಎಲ್ಲವೂ ನಿಮ್ಮಲ್ಲಿಯೇ ಸಿಗಬೇಕು. ಆಗ ಗ್ರಾಹಕ ಮತ್ತೆಮತ್ತೆ ನಿಮ್ಮಲ್ಲಿಗೇ ಬರುತ್ತಾನೆ.”
ಕೃಷಿ ಉತ್ಪನ್ನಗಳ ಬೆಲೆಯ ಬಗ್ಗೆ ಅವರು ತಿಳಿಸಿದ ಸೂತ್ರ: ಒಂದು ಬೆಳೆ ಬೆಳೆಸಲು ಎಷ್ಟು ಖರ್ಚಾಗಿದೆ ಎಂಬುದು ನಿಮಗೇ ಗೊತ್ತಿರಬೇಕು. ಅದರ ಆಧಾರದಿಂದ ನಿಮ್ಮ ಮಾರಾಟದ ಬೆಲೆ ನಿರ್ಧರಿಸಿ. ಯಾವ ಕಾರಣಕ್ಕೂ ಅದನ್ನು ಇಳಿಸಬೇಡಿ.
 
ಕೃಷಿ ಉತ್ಪನ್ನಗಳು ಹಾಳಾಗುತ್ತವಲ್ಲಾ ಎಂಬ ಆತಂಕಕ್ಕೆ ಅವರ ಉತ್ತರ: ಮೌಲ್ಯವರ್ಧನೆ ಮಾಡೋದನ್ನು ಕಲಿತುಕೊಳ್ಳಿ. ನಾವು ಹರಳಿನಿಂದ ಎಣ್ಣೆ ಮಾಡುತ್ತೇವೆ. ಕಬ್ಬಿನಿಂದ ಬೆಲ್ಲ ಮಾಡುತ್ತೇವೆ. ಆಗ ಒಳ್ಳೆಯ ರೇಟಿಗಾಗಿ ಕಾಯಲು ಸಾಧ್ಯ. ಮಾತ್ರವಲ್ಲ, ಗುಣಮಟ್ಟ ಚೆನ್ನಾಗಿದ್ದರೆ ನಿಮ್ಮಲ್ಲಿಗೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. (ಆಗಷ್ಟೇ ಖರೀದಿದಾರನ ಜೀಪ್ ಬಂದು, ಇವರ ತರಕಾರಿ ಒಯ್ದಿತ್ತು.)
 
ಈಗ ಏನಾಗಿದೆ ಅಂದ್ರೆ, ದುಡಿಮೆ ರೈತನದು; ಉಳಿದವರೆಲ್ಲ ಅದರಿಂದ ಲಾಭ ಮಾಡಿ ಕೊಳ್ತಾರೆ. ಇದನ್ನು ತಪ್ಪಿಸ ಬೇಕಾಗಿದೆ. ಅದಕ್ಕಾಗಿ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕು ಎಂಬ ಸರಳ ಸೂತ್ರ ಮುಂದಿಟ್ಟರು, ವಿವೇಕ ಕಾರ್ಯಪ್ಪ. ಪ್ರತಿದಿನ ಅವರ ದನಗಳು ನೀಡುವ ಹಾಲು ೬೦ ಲೀಟರ್. ಅದರಲ್ಲಿ ೨೦ ಲೀಟರ್ ಡೈರಿಗೆ ಮಾರಾಟ, ಉಳಿದ ೪೦ ಲೀಟರ್ ನೇರ ಮಾರಾಟ. ದನಗಳು ಹೆಚ್ಚು ಹಾಲು ನೀಡಿದರೆ, ಆ ಹಾಲಿನ ಮೌಲ್ಯವರ್ಧನೆ – ತುಪ್ಪ ಅಥವಾ ಗಿಣ್ಣು – ಮಾಡಿ ಮಾರಾಟ ಎಂದು ವಿವರಿಸಿದವರು ಜೂಲಿ ಕಾರ್ಯಪ್ಪ.
ನಡು ಮಧ್ಯಾಹ್ನದ ಹೊತ್ತಿಗೆ ನಾವು ಅಲ್ಲಿಂದ ಹೊರಟಾಗ ನಮ್ಮ ಪ್ರಶ್ನೆಗಳಿಗೆ ಅವರ ಮಾತಿಗಿಂತ ಮಿಗಿಲಾದ ಉತ್ತರಗಳು ಸಿಕ್ಕಿದ್ದು ಅವರ ದುಡಿಮೆಯಲ್ಲಿ. “ಈಗ ಕೃಷಿರಂಗದ ಸವಾಲು ಕೃಷಿಭೂಮಿಯ ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು. ರಾಸಾಯನಿಕ ಗೊಬ್ಬರ ಮತ್ತು ಕೀಟ-ರೋಗ ನಿಯಂತ್ರಣಕ್ಕೆ ವಿಷಕಾರಿ ಪೀಡೆನಾಶಕ ಸುರಿದು ಮಣ್ಣನ್ನು ವಿಷಮಯ ಮಾಡುತ್ತಾ ಇದ್ದರೆ, ಮಣ್ಣಿನ ಫಲವತ್ತತೆ ಹೇಗೆ ಉಳಿದೀತು?” ಎಂದು ಆರಂಭದಲ್ಲೇ ನಮ್ಮನ್ನು ಪ್ರಶ್ನಿಸಿದ್ದರು ವಿವೇಕ ಕಾರ್ಯಪ್ಪ. ಮಣ್ಣಿನ ಜೀವಂತಿಕೆ ಉಳಿಸಬೇಕಾದರೆ ಸೊಂಭೇರಿತನ ಬಿಟ್ಟು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು ಎಂಬ ತಮ್ಮ ಮಾತಿಗೆ ತಾವೇ ಸಾಕ್ಷಿಯಾಗಿ ನಮ್ಮೆದುರು ನಿಂತಿದ್ದರು ವಿವೇಕ –ಜೂಲಿ ಕಾರ್ಯಪ್ಪ.
 
“ರೈತನಿಗೆ ಯಾವಾಗ ಒಳ್ಳೇ ರೇಟು ಸಿಗ್ತದೆ? ಅವನು ಬೆಳೆಸಿದ್ದು ಮಾರುಕಟ್ಟೆಯಲ್ಲಿ ಸಾಕಷ್ಟು ಇಲ್ಲದಿದ್ದಾಗ. ಅಂದರೆ, ಮಾರುಕಟ್ಟೆಯಲ್ಲಿ ಅದರ ಕೊರತೆ ಇದ್ದಾಗ. ನೋಡಿ, ಇದು ಒಂದು ಸೊಪ್ಪು – ಗೊಂಗರ ಸೊಪ್ಪು ಅಂತಾರೆ. ಬೇರೆ ತರಕಾರಿ ಬೆಳೆಗಳ ನಡುವೆ ಒಂದೆರಡು ಸಾಲು ಇದರ ಗಿಡ ಹಾಕಿದ್ದೇನೆ. ಮಾರ್ಕೆಟಿಗೆ ಹೋಗುವಾಗ ಎರಡು-ಮೂರು ಕಿಲೋ ಸೊಪ್ಪು ಮಾತ್ರ ಒಯ್ತೇನೆ. ಯಾಕಂದ್ರೆ, ಯಾರೂ ಒಂದು ಕಿಲೋ ಅಥವಾ ಎರಡು ಕಿಲೋ ಸೊಪ್ಪು ತಗಳ್ಳಲ್ಲ. ಒಬ್ಬೊಬ್ಬರು ಇನ್ನೂರು ಗ್ರಾಮ್ ಸೊಪ್ಪು ಮಾತ್ರ ತಗೋತಾರೆ. ಆದ್ರಿಂದ, ಹೆಚ್ಚು ಸೊಪ್ಪು ಬೆಳೆಸಲೂ ಬಾರದು, ಹೆಚ್ಚು ಸೊಪ್ಪು ಮಾರ್ಕೆಟಿಗೆ ಒಯ್ಯಲೂ ಬಾರದು. ಹಾಗೆ ಮಾಡಿದ್ರೆ ರೈತರಿಗೇ ನಷ್ಟ” ಎನ್ನುತ್ತಾ ವಿವೇಕ ಕಾರ್ಯಪ್ಪ ತಾನು ಕೃಷಿಯಲ್ಲಿ ಅಳವಡಿಸಿಕೊಂಡ ಕಾರ್ಯತಂತ್ರಗಳನ್ನು ವಿವರಿಸುತ್ತಲೇ ಇದ್ದರು.