ಕಾರ್ಯರೂಪದಲ್ಲಿ ಪುರುಷಾರ್ಥವಿದೆ !

ಕಾರ್ಯರೂಪದಲ್ಲಿ ಪುರುಷಾರ್ಥವಿದೆ !

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಅದು ಚರ್ಚೆಯ ವಸ್ತುವಾಗುತ್ತಿದೆ. ಆರಂಭದಿಂದಲೂ ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ತಮ್ಮದೇ ಎನ್ನುವುದನ್ನು ಕಾಂಗ್ರೆಸ್ ಹೇಳುತ್ತಾ ಬಂದಿದೆ. ಆದರೆ ಯಾವಾಗ ಹೆದ್ದಾರಿ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ ಎನ್ನುವುದು ಪಕ್ಕಾ ಆಯಿತೋ ಅಲ್ಲಿಂದ ಕಾಂಗ್ರೆಸಿನ ಉರಿ ಹೆಚ್ಚಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಸಿದ್ಧರಾಮಯ್ಯನವರು ಈ ಹೆದ್ದಾರಿ ಯೋಜನೆಯನ್ನು ರೂಪಿಸಿದ್ದೇ ಕಾಂಗ್ರೆಸ್, ಆಸ್ಕರ್ ಫೆರ್ನಾಂಡೀಸ್ ಇದ್ದಾಗ ಅದರ ಯೋಜನೆ ಸಿದ್ಧವಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅದನ್ನು ತನ್ನದು ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ಹೇಳಿಕೆ ಕೊಟ್ಟರು.

ಈ ಹೇಳಿಕೆಯನ್ನು ಅವಲೋಕಿಸಿದಾಗ ಮೂಡುವ ಮೊಟ್ಟಮೊದಲ ಪ್ರಶ್ನೆಯೇ, ಆಸ್ಕರ್ ಫೆರ್ನಾಂಡಿಸ್ ಕಾಲದಲ್ಲೇ ಹೆದ್ದಾರಿ ಯೋಜನೆ ರೂಪುಗೊಂಡಿದ್ದರೆ ಇಷ್ಟು ವರ್ಷ ಅದೇಕೆ ನೆನೆಗುದಿಗೆ ಬಿದ್ದಿತ್ತು ಎನ್ನುವುದು ! ಹೀಗೆ ಬಟ್ಟಲಲ್ಲಿ ಹೆಗ್ಗಣದಂಥ ಪ್ರಶ್ನೆಗಳನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕರುಗಳು ಬಿಜೆಪಿಯ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಹೆದ್ದಾರಿ ಯೋಜನೆ ಫೆರ್ನಾಂಡಿಸ್ ಕಾಲದಲ್ಲೇ ಮೊಳಕೆಯೊಡೆದಿತ್ತು ಎನ್ನುವುದು ಕೂಡ ಸರಿಯೆ. ಆದರೆ ಫೆರ್ನಾಂಡಿಸ್ ಕಾಲದಲ್ಲಿ ರೂಪಿಸಿದ ಯಾವೆಲ್ಲ ಯೋಜನೆಗಳನ್ನು ಮನಮೋಹನ್ ಸಿಂಗ್ ಸರಕಾರ ಕಾರ್ಯರೂಪಕ್ಕೆ ತಂದಿತ್ತು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಕೇವಲ ರಸ್ತೆ ಮಾತ್ರವಲ್ಲ, ಕಾಂಗ್ರೆಸ್ ಅವಧಿಯಲ್ಲಿ ಘೋಷಣೆಯಾದ ಬಹುತೇಕ ಯೋಜನೆಗಳು ಕೇವಲ ಕಾಗದದ ಘೋಷಣೆಗಳಾಗಿಯೇ ಉಳಿದಿದೆ. ನೆಹರೂ ಆಳ್ವಿಕೆಯ ಕಾಲದಿಂದಲೂ ಕಾಂಗ್ರೆಸಿನ ಆಡಳಿತ ಹಾಗೆಯೇ ನಡೆದುಬಂದಿದೆ. ಆದರೆ ಇಂಥ ಹೇಳಿಕೆಗಳ ಪ್ರಮೇಯ ಕಾಂಗ್ರೆಸಿಗೆಂದೂ ಬಂದಿರಲಿಲ್ಲ. ಏಕೆಂದರೆ ಬಜೆಟ್ ಭಾಷಣದಲ್ಲೋ, ಕಾಗದದಲ್ಲೋ ಘೋಷಣೆಯಾದ ಯೋಜನೆಗಳನ್ನು ಮರೆತ ನಂತರ ಅದನ್ನು ಪ್ರಶ್ನಿಸುವವರಿರಲಿಲ್ಲ. ಮತ್ತು ಘೋಷಿಸಿದವರ ನಂತರ ಅವರಂಥವರೇ ಆ ಜಾಗಕ್ಕೆ ಬರುತ್ತಿದ್ದರು. ಆದರೆ ಈಗ ಮೊಟ್ಟಮೊದಲು ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಜೀವ ತುಂಬುವ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಕಾಲದಲ್ಲಿ ಜನಪ್ರಿಯತೆಗಾಗಿ ಮತ್ತು ಜನರ ಮೂಗಿಗೆ ತುಪ್ಪ ಸವರಲು ಘೋಷಿಸಿದ ಯೋಜನೆಗಳನ್ನು ಬಿಜೆಪಿ ಕಾರ್ಯರೂಪಕ್ಕೆ ತರುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಇತಿಹಾಸ ಕೂದ ಹಾಗೆಯೇ.

ಒಂದು ಯೋಜನೆಯನ್ನು ಘೋಷಿಸುವುದರಲ್ಲೇನೂ ಪುರುಷಾರ್ಥವಿಲ್ಲ. ಅದನ್ನು ಜಿದ್ದಿಗೆ ಬಿದ್ದು ಕಾರ್ಯರೂಪಕ್ಕೆ ತರುವುದರಲ್ಲಿ ಆಳುವವರ ತಾಕತ್ತು ಅಡಗಿದೆ. ಆ ತಾಕತ್ತು ಬಿಜೆಪಿಯವರಿಗೆ, ಸಹಜವಾಗಿ ಅದನ್ನು ಸಹಿಸಬಾರದ ಗುಣ ಕಾಂಗ್ರೆಸಿಗಿದೆ. ಹಾಗಾಗಿ ಸಿದ್ಧರಾಮಯ್ಯನವರ ಹೇಳಿಕೆಯಲ್ಲಿ ಹೊಟ್ಟೆಕಿಚ್ಚಿನ, ಕೈಲಾಗದ ಮತ್ತು ಜನರಿಗೆ ಮೋಸ ಮಾಡುವ ಕುತ್ಸಿಕತನವಿದೆ. ಪ್ರಸ್ತುತ ಹೆದ್ದಾರಿ ಕಾಮಗಾರಿಯ ವೇಗ ಮೂರು ವರ್ಷಗಳಲ್ಲಿ ಯಾವ ಪ್ರಮಾಣದಲ್ಲಿತ್ತು ಎನ್ನುವುದನ್ನು ರಾಜ್ಯ ಗಮನಿಸಿದೆ. ಅಲ್ಲದೆ ಇಂಥ ದೊಡ್ಡ ಯೋಜನೆಯೊಂದು ಭ್ರಷ್ಟಾಚಾರದ ಸಣ್ಣ ವಾಸನೆಯೂ ಇಲ್ಲದಂತೆ ಪೂರ್ಣಗೊಳಿಸಿದ್ದು ಕೇಂದ್ರ ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಒಂದು ವೇಳೆ ಕಾಂಗ್ರೆಸ್ ಕಾಲದಲ್ಲೇನಾದರೂ ಹೆದ್ದಾರಿ ಪೂರ್ಣವಾಗಿದ್ದರೆ ಏನೆಲ್ಲಾ ಹಗರಣಗಳಾಗಿರುತ್ತಿತ್ತೋ ಊಹಿಸುವುದೂ ಕಷ್ಟ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೦-೦೩-೨೦೨೩  

ಚಿತ್ರ ಕೃಪೆ: ಅಂತರ್ಜಾಲ ತಾಣ