ಕಾರ್ಯಾಂಗಕ್ಕೆ ನ್ಯಾಯಾಂಗದ ಚಾಟಿ

ಕಾರ್ಯಾಂಗಕ್ಕೆ ನ್ಯಾಯಾಂಗದ ಚಾಟಿ

ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಇಬ್ಬರು ಉನ್ನತ ಅಧಿಕಾರಿಗಳು ಸೋಮವಾರ ಬಂಧನಕ್ಕೊಳಗಾಗಿದ್ದಾರೆ. ಪೋಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪಾಲ್ ಮತ್ತು ಬೆಂಗಳೂರು ನಗರ ಜಿಲ್ಲೆಯ ಮಾಜಿ ಡಿಸಿ ಮಂಜುನಾಥ್ ಅವರು ಕೆಲವೇ ಗಂಟೆಗಳ ಅಂತರದಲ್ಲಿ ಬಂಧಿತರಾಗಿರುವುದು ನ್ಯಾಯಾಂಗವು ಕಾರ್ಯಾಂಗದ ಮೇಲೆ ಬೀಸಿದ ಚಾಟಿ ಏಟಿನ ಪರಿಣಾಮ ಎಂಬುದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. 'ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಕಲೆಕ್ಷನ್ ಸೆಂಟರ್ ಆಗಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತಿದೆ' ಎಂದು ಹೈಕೋರ್ಟ್ ಸೋಮವಾರ ವಿಚಾರಣೆ ವೇಳೆ ನೇರವಾಗಿ ಮತ್ತು ಕಟು ಮಾತುಗಳಲ್ಲಿ ತನಿಖಾ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿತ್ತು. 'ನಾನು ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ. ಎಸಿಬಿ ಎಡಿಜಿಪಿ ತುಂಬಾ ಪವರ್ ಫುಲ್ ಆಗಿದ್ದಾರಂತೆ. ಜಡ್ಜ್ ಆದ ಮೇಲೆ ನಾನು ಇಂದಿಂಚೂ ಆಸ್ತಿ ಮಾಡಿಲ್ಲ. ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹತ್ತಿ ಉರಿಯುತ್ತಿದೆ. ವಿಟಮಿನ್ ಎಂ ಇದ್ದರೆ ರಕ್ಷಿಸುತ್ತೀರಿ' ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಆಡಿದ ಕಟು ಮಾತುಗಳು ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿರುವುದಕ್ಕೆ ಕನ್ನಡಿ ಹಿಡಿದಂತಿದ್ದವು.

ಪಿಎಸ್ಐ ನೇಮಕಾತಿ ಪ್ರಕರಣದಲ್ಲೂ ಇದೇ ನ್ಯಾಯಮೂರ್ತಿಗಳಿದ್ದ ಪೀಠವು 'ಹಗರಣದಲ್ಲಿ ಪೋಲೀಸರು, ಗಣ್ಯರು ಸೇರಿ ಹಲವು ಪ್ರಭಾವಿ ವ್ಯಕ್ತಿಗಳ ಮೇಲೆ ಆರೋಪಗಳಿವೆ. ಪೋಲೀಸ್ ಅಧಿಕಾರಿಗಳಿಗೂ ಮಧ್ಯವರ್ತಿಗಳಿದ್ದಾರೆ ಎನ್ನಲಾಗಿದೆ. ಆದ್ದರಿಂದ, ಪ್ರತಿಯೊಂದು ವಿಚಾರದ ಬಗ್ಗೆಯೂ ಸಮರ್ಪಕ ತನಿಖೆ ನಡೆಸಬೇಕಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಗಳಲ್ಲೇ ಇದೆ. ತನಿಖೆಯ ಮೇಲೆ ನ್ಯಾಯಾಲಯ ಸಂಪೂರ್ಣ ನಿಗಾ ಇಡಲಿದೆ' ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಇದರ ಬೆನ್ನಲ್ಲೇ ಉನ್ನತ ಶ್ರೇಣಿಯ ಅಧಿಕಾರಿಗಳ ಬಂಧನವಾಗಿದೆ. ಸದ್ಯ ನ್ಯಾಯಾಂಗ ಹೆಚ್ಚು ಚರ್ಚೆಗೊಳಗಾಗಿದೆ. ನೂಪುರ್ ಶರ್ಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳು ಮಾಡಿರುವ ಕಟು ಟಿಪ್ಪಣಿ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ. ಬೇರೆ ಬೇರೆ ಪ್ರಕರಣಗಳ ತೀರ್ಪಿನ ಹಿನ್ನಲೆಯಲ್ಲೂ ನ್ಯಾಯಾಂಗದ ನಡವಳಿಕೆಯನ್ನು ಬಹಿರಂಗವಾಗಿ ವಿಮರ್ಶಿಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲೇ 'ನ್ಯಾಯಾಂಗವು ಸ್ವತಂತ್ರ ಆಡಳಿತದ ಅಂಗವಾಗಿ ಕಾರ್ಯ ನಿರ್ವಹಿಸುತ್ತದೆ. ನ್ಯಾಯಮೂರ್ತಿಗಳು ಸಂವಿಧಾನಕ್ಕೆ ಮಾತ್ರ ಉತ್ತರದಾಯಿಗಳು' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. 'ಅಧಿಕಾರದಲ್ಲಿರುವ ಪಕ್ಷಗಳು ಸರ್ಕಾರದ ಕ್ರಿಯೆಗಳೆಲ್ಲವೂ ನ್ಯಾಯಾಂಗದ ಅನುಮೋದನೆಗೆ ಅರ್ಹ ಎಂದು ಭಾವಿಸುತ್ತವೆ. ವಿರೋಧ ಸ್ಥಾನದಲ್ಲಿರುವ ಪಕ್ಷಗಳು ತಮ್ಮ ಅನುಕೂಲತೆಗಳಿಗೆ ಪೂರಕವಾಗಿ ನ್ಯಾಯಾಂಗ ಇರಬೇಕೆಂದು  ನಿರೀಕ್ಷಿಸುತ್ತವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಜನರಲ್ಲಿ ಸೂಕ್ತ ತಿಳುವಳಿಕೆ ಕೊರತೆಯೇ ಇಂತಹ ಎಲ್ಲ ದುರ್ಬಲ ಆಲೋಚನೆಗಳಿಗೆ ಕಾರಣ' ಎಂದು ಅವರು ಬೇಸರ ವ್ಯಕ್ತಪಡಿಸಿದರಲ್ಲದೆ, ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಸಾಕಷ್ಟು ಸೂಚನೆಗಳನ್ನೂ ನೀಡಿದ್ದರು. ಸಂವಿಧಾನದಲ್ಲಿ ಅತ್ಯಂತ ಗೌರವಯುತ ಅಂಗವಾದ ನ್ಯಾಯಾಂಗದ ಇಂತಹ ಸಕ್ರಿಯ ಕಾರ್ಯವೈಖರಿ, ನೇರ-ನಿಷ್ಟುರ ನುಡಿ, ಕಟ್ಟುನಿಟ್ಟಿನ ಸೂಚನೆಗಳು ಹಣ ಬಲ ಇದ್ದರೆ ಏನಾದರೂ ಮಾಡಬಹುದೆಂಬ ಮನಸ್ಥಿತಿಗೆ ಕೊಡಲಿ ಪೆಟ್ಟು ನೀಡುತ್ತವೆ. ನ್ಯಾಯದಾನ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆ ಹಾಗೂ ನ್ಯಾಯಾಧೀಶರ ಮೇಲಿನ ಗೌರವ ಹೆಚ್ಚಳಕ್ಕೆ ಕಾರಣವಾಗುತ್ತವೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೫-೦೭-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ