ಕಾರ್... ಕಾರ್.. ಎಲ್ನೋಡಿದ್ರೂ ಕಾರ್..

ಕಾರ್... ಕಾರ್.. ಎಲ್ನೋಡಿದ್ರೂ ಕಾರ್..

 ಕಾರ್... ಕಾರ್.. ಎಲ್ನೋಡಿದ್ರೂ ಕಾರ್..

ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಹೊಂದಿದ್ದರೆ ವರ್ಷಕ್ಕೆ ಎಷ್ಟು ಖರ್ಚು ಬರುತ್ತದೆ ಎನ್ನುವುದು ಕುತೂಹಲದ ವಿಷಯ.ಪೆಟ್ರೋಲ್ ಕಾರು,ಡೀಸೆಲ್ ಕಾರಿಗೆ ಹೋಲಿಸಿದರೆ ತುಸು ಅಗ್ಗ.ಆದರೆ ಪೆಟ್ರೋಲ್ ಬಹಳ ದುಬಾರಿ.ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಿದರೆ,ವರ್ಷವೊಂದಕ್ಕೆ ಈ ಕಾರು ಜೇಬಿನ ಮೇಲೆ ಎಷ್ಟು ಭಾರವಾಗುತ್ತದೆ?ಹೆಚ್ಚಿನವರು ಕಾರನ್ನು ಸಾಲ ಮಾಡಿ ಖರೀದಿಸುವುದರಿಂದ,ಇದರ ಬಡ್ಡಿ ಅಸಲು-ತುಂಬುವ ಪ್ರಕ್ರಿಯೆ ನಡೆಯಬೇಕು.ದುಬಾರಿ ಡೀಸೆಲ್ ಕಾರಿಗೆ ಇಎಂಐ ದುಬಾರಿಯಾಗುತ್ತದೆ.ಇವೆಲ್ಲವುಗಳನ್ನು ಲೆಕ್ಕ ಹಾಕಲು ಹಳ್ಳಿಮನೆ ಅರವಿಂದರು ಒಂದು ಸಣ್ಣ ತಂತ್ರಾಂಶವನ್ನು ರೂಪಿಸಿ,http://aravindavk.github.com/diesel-vs-petrol-car/ನಲ್ಲಿ ಹಾಕಿದ್ದಾರೆ.ನೀವೇ ನೋಡಿ,ಈ ಕಾರುಗಳು ಬಹಳ ವ್ಯತ್ಯಾಸ ಇರದು.ಮೊದಲಿನ ವರ್ಷಗಳಲ್ಲಿ,ಪೆಟ್ರೋಲ್ ಕಾರು ಕಿಸೆಗೆ ಹಿತವೆನಿಸುತ್ತದೆ.ಏಳು ವರ್ಷಗಳ ಬಳಿಕ ಡೀಸೆಲ್ ಕಾರೇ ಜೇಬಿಗೆ ಹಿತವೆನಿಸುತ್ತದೆ.ತಂತ್ರಾಂಶವು,ಕಾರು ರಿಪೇರಿಯ ಖರ್ಚನ್ನು ಗಣನೆಗೆ ತೆಗೆದುಕೊಂಡಿಲ್ಲ.
----------------------------------------
ಇಂಟರ್ನೆಟ್:ಬಳಕೆದಾರರು  ಸ್ವ-ನಿಯಂತ್ರಣ ಹೇರಿಕೊಳ್ಳಲಿ
ಇಂಟರ್ನೆಟ್ ಮೇಲೆ ನಿಯಂತ್ರಣ ಹೊಂದಲು ಹಲವು ದೇಶಗಳ ಸರಕಾರಗಳು ಪ್ರಯತ್ನಿಸುತ್ತಿವೆ.ಅದಕ್ಕೆ ಮುಖ್ಯ ಕಾರಣ,ಬಳಕೆದಾರರು ಎಗ್ಗಿಲ್ಲದೆ ಈ ಮಾಧ್ಯಮವನ್ನು ಬಳಕೆ ಮಾಡಿಕೊಳ್ಳುತ್ತಿರುವುದು.ಇತರ ಮಾಧ್ಯಮಗಳಲ್ಲಿಲ್ಲದ ಸ್ವಾತಂತ್ರ್ಯ ಇಲ್ಲಿ ಬಳಕೆದಾರರಿಗೆ ಸಿಗುತ್ತದೆ.ಅದರ ದುರ್ಬಳಕೆಯಾಗುವುದೂ ಸಾಮಾನ್ಯವಾಗಿ ಬಿಟ್ಟಿದೆ.ಫೇಸ್‌ಬುಕ್‌ನ ತಾಣದಲ್ಲಿ ಪ್ರಧಾನಿ,ಸೋನಿಯಾ ಗಾಂಧಿಯಿಂದ ಹಿಡಿದು ಹಲವರನ್ನು ಗೇಲಿ ಮಾಡುವ ಚಿತ್ರಗಳನ್ನು ರೂಪಿಸಿ,ಪ್ರಕಟಿಸಲಾಗುತ್ತಿದೆ.ಮಹಾತ್ಮಾ ಗಂಧಿಯವರೂ ಇದಕ್ಕೆ ಹೊರತಾಗಿಲ್ಲ.ಅವರು ಯಾವುದೋ ನೃತ್ಯಗಾರ್ತಿಯ ಜತೆ ಹೆಜ್ಜೆ ಹಾಕುವ ಚಿತ್ರಗಳೂ ಇಂತಹ ತಾಣಗಳಲ್ಲಿ ಪ್ರಕಟವಾಗಿತ್ತು.ಮಹಾತ್ಮಾ ಗಾಂಧಿಯವರು ನಿಜವಾಗಿಯೂ ನರ್ತಿಸಿದ್ದರೆ ಎನ್ನುವುದು ಪ್ರಸ್ತುತವಲ್ಲ.ಒಂದು ವೇಳೆ ಚಿತ್ರ ನಿಜವೇ ಆಗಿದ್ದರೂ ಅದನ್ನು ಈಗ ಹಂಚಿಕೊಳ್ಳುವಲ್ಲಿನ ಉದ್ದೇಶವೇನು ಎನ್ನುವುದನ್ನು ಅಂತಹ ಬಳಕೆದಾರರು ಯೋಚಿಸಬೇಕಿದೆ.ಬಳಕೆದಾರರು ಹೀಗೆ ಅನಗತ್ಯ ವಿವಾದಗಳನ್ನು ಸೃಷ್ಟಿ ಮಾಡಿ,ಸರಕಾರ ಮಧ್ಯ ಪ್ರವೇಶಿಸುವಂತಾಗುತ್ತದೆ.ಅದರ ಬದಲು,ಅವರು ಸ್ವನಿಯಂತ್ರಣಕ್ಕೊಳ ಪಟ್ಟು,ತಮ್ಮ ವರ್ತನೆಗಳನ್ನು ಹದ್ದುಬಸ್ತಿನಲ್ಲಿರಿಸಿಕೊಂಡರೆ,ಒಳಿತಲ್ಲವೇ?
--------------------------------------------
ಟ್ವಿಟರಿನಲ್ಲಿ ಪ್ರಕಟಗೊಳ್ಳುವ ಸಂಶೋಧನೆಗಳ ತಿರುಳು
ಈಗದ್ದು ದಿಡೀರ್ ಯುಗ.ಜನರಿಗೆ ಏನು ಮಾಡಲೂ ಪುರುಸೊತ್ತೇ ಸಿಗದ ಕಾಲ.ಹಾಗಾಗಿ ಸಂಶೋಧನಾ ಪ್ರಬಂಧಗಳನ್ನು ಓದಲೂ ಆಗದು.ಈಗ http://tinytocs.org/ ತಾಣವು ಹೊಸ ಪ್ರಯೋಗ ನಡೆಸಿದೆ.ಸಂಶೋಧನೆಗೆ ಕಾರಣವಾದ ಅಂಶಗಳ ಮತ್ತು ಅದರ ಹಿನ್ನೆಲೆಯ ಬಗ್ಗೆ ಇನೂರೈವತ್ತು ಶಬ್ದಗಳಲ್ಲಿ ವರದಿಯೊಪ್ಪಿಸಿ,ನಿಜವಾಗಿ ನಡೆದ ಸಂಶೋಧನೆಯನ್ನು ನೂರ ನಲುವತ್ತು ಅಕ್ಷರಗಳಲ್ಲಿ "ವಿವರಿಸಿ",ಶೀರ್ಷಿಕೆಯನ್ನು ನೂರ ಹದಿನೆಂಟು ಅಕ್ಷರಗಳಿಗೆ ಸೀಮಿತಗೊಳಿಸಿ ಎನ್ನುವುದು ಈ ತಾಣವು,ಸಂಶೋಧಕರಿಗೆ ನೀಡುವ ಪಂಥಾಹ್ವಾನವಾಗಿದೆ.ಜುಲೈ ಒಂದು ಮೊದಲ ಕಂತಿನ ಸಲ್ಲಿಕೆಗಳನ್ನು ಸ್ವೀಕರಿಸಲು ಕಡೇದಿನವಾಗಿದೆ.ಪ್ರತಿ ಸಲ್ಲಿಕೆಯಲ್ಲಿಯೂ,ಮೂರು ಉಲ್ಲೇಖಗಳನ್ನು ಮಾಡಬಹುದಾಗಿದ್ದು,ಅವನ್ನು ವರದಿಯ ಮೂರು ಶಬ್ದಗಳಾಗಿ ಲೆಕ್ಕ ಹಾಕಲಾಗುವುದಂತೆ.ಟ್ವಿಟರಿನಲ್ಲಿ ಇವನ್ನು @TinyToCSನಲ್ಲಿ ಪ್ರಕಟಿಸಲಾಗುತ್ತದೆ.
--------------------------
ಟ್ವಿಟರ್:ಹೊಸ ಲೊಗೋ,ಹೊಸ ನಿಯಮ



ನೂರನಲುವತ್ತು ಅಕ್ಷರಗಳ ಅಂಕೆ ವಿಧಿಸಿ,ಬಳಕೆದಾರರಿಗೆ ತಾವೇನು ಮಾಡುತ್ತಿದೇವೆಂದು ಇತರರ ಜತೆ ಹಂಚಿಕೊಳ್ಳಲು ಆಸ್ಪದ ನೀಡುವ twitter.com ತಾಣವು,ಈಗ ತನ್ನ "ಗುಬ್ಬಿ" ಗುರುತನ್ನು ತುಸು ಮಾರ್ಪಡಿಸಿಕೊಂಡಿದೆ.ಸರಳವಾಗಿ ತುಸು ಕಡುಬಣ್ಣದ ಹಾರುವ ಚಿಕಣಿ ಹಕ್ಕಿಯ ಗುರುತನ್ನಿದು ಹೊಂದಲಿದೆ.ಬಳಕೆದಾರರಾದರೋ ಟ್ವಿಟರ್ ಇಂತಹ ಲೋಗೋ ಬದಲಾವಣೆಯನ್ನು ಮಾಡಿ ತೃಪ್ತಿ ಪಡುವುದು ಬಿಟ್ಟು,ಟ್ವಿಟರ್ ತಾಣವು ಚೆನ್ನಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಯಸುತ್ತಾರೆ. ಲೋಗೋವನ್ನು ಬಳಸುವವರು ಅದರ ಬಳಕೆ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಬಿಗಿಗೊಳಿಸಲಾಗಿದೆ.ಅದರ ಅನ್ವಯ,ಹಕ್ಕಿ  ಬಲಭಾಗಕ್ಕೆ ಮುಖ ಮಾಡಿರಬೇಕು.ಅದರ ಬಣ್ಣ ಬದಲಿಸಬಾರದು,ಅದಕ್ಕೆ ಎನಿಮೇಶನ್ ಪರಿಣಾಮ ಕೊಡಬಾರದು,ಅದು ಮಾತನಾಡುವ ಹಾಗೆ ಚಿತ್ರಿಸಬಾರದು ಎಂದು ಮುಂತಾದ ಬಿಗಿ ನಿಯಮಗಳನ್ನೂ ವಿಧಿಸಲಾಗಿದೆ.
-------------------------------
ಆರ್ಕ್ಟಿಕ್ ಸಮುದ್ರದಲ್ಲಿ ರಾಶಿ ರಾಶಿ ಪಾಚಿ
ಉತ್ತರ ಧ್ರುವಪ್ರದೇಶದ ಆರ್ಕ್ಟಿಕ್ ಪ್ರದೇಶದ ಚಳಿಗೆ ಯಾವ ಸಸ್ಯವೂ ಬೆಳೆಯದು.ಆದರೆ,ಅಲ್ಲಿನ ಹಿಮದ ಪದರಿನಾಳದಲ್ಲಿ ಪಾಚಿಯು ಸಮೃದ್ಧವಾಗಿ ಬೆಳೆದಿರುವುದನ್ನು ಕಂಡು ವಿಜ್ಞಾನಿಗಳಿಗೆ ಸಖೇದಾಶ್ಚರ್ಯವಾಗಿದೆ.ಬೇಸಗೆಯಲ್ಲಿ ಮಂಜಿನ ಮೇಲ್ಪದರ,ಕರಗಿದಾಗ ಈ ಪಾಚಿಸಸ್ಯಗಳು ಗೋಚರವಾದುವು.
--------------------------------------------------
ಗೂಗಲ್:ಈಗ ತ್ರೀಡಿ ಮ್ಯಾಪ್
ತನ್ನ ಮ್ಯಾಪಿನ ಬಳಕೆಗೆ ಶುಲ್ಕ ವಿಧಿಸುವ ಮೂಲಕ ಜನರಿಗೆ ಸಿಟ್ಟು ತರಿಸಿದ ಗೂಗಲ್,ಇದೀಗ ತನ್ನ ಕುಸಿಯುತ್ತಿರುವ ಜನಪ್ರಿಯತೆಯನ್ನು ತಡೆಯಲು ತ್ರೀಡಿ ಮ್ಯಾಪುಗಳನ್ನು ಅಭಿವೃದ್ಧಿ ಪಡಿಸಿದೆ.ಇದರಲ್ಲಿ ಬಳಕೆದಾರರಿಗೆ ಸ್ಥಳಗಳ ಪಕ್ಷಿನೋಟ ಸಿಗುತ್ತದೆ.ಹೆಲಿಕಾಪ್ಟರ್ ಮೂಲಕ ತೆಗೆದ ಚಿತ್ರಗಳನ್ನು ಕ್ರೋಡೀಕರಿಸುವ ಮೂಲಕ,ಈ ನಕಾಶೆಗಳನ್ನು ರಚಿಸಲಾಗಿದೆ.ಬಳಕೆದಾರರಿಗೆ ಕಟ್ಟಡಗಳು,ರಸ್ತೆಗಳ ಮೂರು ಆಯಾಮದ ನೋಟ ಕಾಣುತ್ತದೆ.ಇದನ್ನು ಇಂಟರ್ನೆಟ್ ಸಂಪರ್ಕವಿಲ್ಲದಾಗಲೂ ನೋಡಲು ಸಾಧ್ಯವಾಗಲಿದೆ.ಇಂಟರ್‌ನೆಟ್ ಸಂಪರ್ಕವಿದ್ದಾಗ,ಇವನ್ನು ನಮ್ಮ ಕಂಪ್ಯೂಟರಿನಲ್ಲಿ ಉಳಿಸಿಕೊಂಡು,ನಂತರ ನಿಧಾನವಾಗಿ,ಇವನ್ನು ವೀಕ್ಷಿಸಬಹುದು.ಹೆಲಿಕಾಪ್ಟರ್ ಸಂಚಾರ ಮಾಡದೆಯೂ ಅದರ ಅನುಭವ ಬಳಕೆದಾರನಿಗೆ ಸಿಗುವುದು ಇಲ್ಲಿನ ವೈಶಿಷ್ಟ್ಯ.ಆಂಡ್ರಾಯಿಡ್ ಮತ್ತು ಆಪಲ್‌ನ ಐಪ್ಯಾಡ್,ಐಫೋನುಗಳಲ್ಲಿವು ಲಭ್ಯವಾಗಲಿವೆ.ಪ್ರತಿಯೋರ್ವ ಬಳಕೆದಾರನೂ ತನ್ನದೇ ಹೆಲಿಕಾಪ್ಟರ್ ಹೊಂದಿ,ನಗರಪ್ರದಕ್ಷಿಣೆ ಮಾಡಿದ ಅನುಭವ ಪಡೆಯಲು ಗೂಗಲ್ ತ್ರೀಡಿ ನಕಾಶೆಗಳು ಅನುವು ಮಾಡುತ್ತವೆ.ಮುಕ್ತ ಮತ್ತು ಸ್ವತಂತ್ರ ನಕಾಶೆಯನ್ನು ಒದಗಿಸುವ ಓಪನ್‌ಸ್ಟ್ರೀಟ್‌ಮ್ಯಾಪಿಗೆ ಬಳಕೆದಾರರು ವಲಸೆ ಹೋಗುವುದನ್ನು ತಪ್ಪಿಸಿ,ತನ್ನ ಒಂದು ಬಿಲಿಯನ್ ಬಳಕೆದಾರರ ಸಂಖ್ಯೆಯು ಇಳಿಕೆ ಕಾಣದಂತೆ ಮಾಡುವುದು,ಈ ಹೊಸ ಸೇವೆಯ ಹಿಂದಿನ ಗುಟ್ಟಾಗಿದೆ.
----------------------------------------
ಮೂರು ಸೈಟುಗಳ ಪಾಸ್‌ವರ್ಡುಗಳು ಬಯಲು
ಇಂಟರ್ನೆಟ್‌ಗೆ ಅಗಾಗ ದಾಳಿಕೋರರ ಸಮಸ್ಯೆ ಕಾಡುವುದಿದೆ.ಲಿಂಕ್ಡಿನ್,ಇ-ಹಾರ್ಮೊನಿ,ಲಾಸ್ಟ್‌ಡಾಟ್‌ಎಫೆಮ್ ತಾಣಗಳ ಸುಮಾರು ಎಂಟು ದಶಲಕ್ಷ ಪಾಸ್‌ವರ್ಡ್‍ಗಳು ಬಹಿರಂಗಗೊಂಡಿವೆ.InsidePro.comಎನ್ನುವ ರಶ್ಯನ್ ಇಂಟರ್ನೆಟ್ ತಾಣದಲ್ಲಿವನ್ನು ಪ್ರಕಟಿಸಲಾಗಿದೆ.ಪಾಸ್‍ವಾರ್ಡ್ ಬಹಿರಂಗಗೊಂಡ ಬಳಕೆದಾರರು ಲಿಂಕ್ಡಿನ್ ತಾಣಕ್ಕೆ ಪ್ರವೇಶ ಬಯಸಿದರೆ,ಅವರ ಪಾಸ್‌ವರ್ಡ್ ನವೀಕರಿ
ಸಿದ ಬಳಿಕವೇ ಅವರಿಗೆ ಪ್ರವೇಶ ಸಿಗಲಿದೆ.ಹೆಚ್ಚಿನ ತಾಣಗಳು ತಮ್ಮ ಬಳಕೆದಾರನ ಪಾಸ್‌ವರ್ಡನ್ನು ಗೂಢರೀತಿಯಲ್ಲಿ ಸಂಗ್ರಹಿಸಿಡುತ್ತವೆ.ಆದರೆ ಈ ಪ್ರಕ್ರಿಯೆಗೆ ಬಳಸಿದ ಕ್ರಮ ಸರಳವಾಗಿದ್ದರೆ,ದಾಳಿಕೋರರ ಕೆಲಸ ಸುಲಭವಾಗುತ್ತದೆ.ಈಗ ಈ ತಾಣಗಳಲ್ಲಿ ಆಗಿರುವುದೂ ಆದೇ ಆಗಿದೆ.ಇನ್ನು ಬಿಗಿ ಭದ್ರತಾ ಕ್ರಮಗಳನ್ನು ಅನುಸರಿಸಿ,ಇಂತಹ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುವುದಾಗಿ,ತಾಣಗಳು ತಮ್ಮ ಬಳಕೆದಾರರಿಗೆ ಸಾಂತ್ವನ ಹೇಳಿವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?
------------------------------------------------------
ಮರೆಗುಳಿಗಳಿಗೆ ಸಹಾಯ ಮಾಡುವ ತಂತ್ರಾಂಶ
ಕತ್ತರಿ,ಕನ್ನಡಕ,ಚಮಚ,ಸೌಟು,ಪೆನ್ ಹೀಗೆ ದೈನಂದಿನ ದಿನಗಳಲ್ಲಿ ನಾವು ಬಳಸುವ ವಸ್ತುಗಳನ್ನು ಎಲ್ಲಾದರೂ ಬಿಟ್ಟು,ಆಮೇಲೆ ಅವನ್ನು ಹುಡುಕುವ ಪಡುವ ಪಾಡು ಸ್ವಲ್ಪವಲ್ಲ.ಈಗ ಇಂತಹ ಮರೆಗುಳಿಗಳಿಗೆ ಸಹಾಯ ಮಾಡುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ವಸ್ತುಗಳಿಗೆ ಆರೆಫೈಡಿ ಎನ್ನುವ ರೇಡಿಯೋ ಸಂಕೇತ ಬೀರುವ ಪಟ್ಟಿಗಳನ್ನು ಹಚ್ಚಿದರೆ ಇಂತಹ ಕೆಲಸ ಸುಲಭದಲ್ಲಿ ಸಾಧಿಸಬಹುದು.ಆದರೀ ಆರೆಫೈಡಿಗಳನ್ನು ಓದುವ ರೀಡರುಗಳು ದುಬಾರಿ ಎನ್ನುವುದು ಸಮಸ್ಯೆ.ಹಾಗಾಗಿ,ಅಂತಹ ತಂತ್ರಜ್ಞಾನದ ಬದಲಿಗೆ,ಮೈಕ್ರೋಸಾಫ್ಟ್ ಕಂಪೆನಿಯ ಕೈನೆಕ್ಟ್ ಎನ್ನುವ ಸಂವೇದಕಗಳನ್ನು ಹೊಂದಿದ ಕಂಪ್ಯೂಟರ್ ವ್ಯವಸ್ಥೆಯಲ್ಲಿ,ಈ ತಂತ್ರಾಂಶ ಬಳಸಿ,ವಸ್ತುಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುವ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲು ಪ್ರಯತ್ನಿಸಲಾಗುತ್ತಿದೆ.
UDAYAVANI 
epaper 
*ಅಶೋಕ್‌ಕುಮಾರ್ ಎ