ಕಾರ್ ನಲ್ಲಿ ಏರ್ ಬ್ಯಾಗ್ ತೆರೆದುಕೊಳ್ಳುವ ಅಚ್ಚರಿ !

ಕಾರ್ ನಲ್ಲಿ ಏರ್ ಬ್ಯಾಗ್ ತೆರೆದುಕೊಳ್ಳುವ ಅಚ್ಚರಿ !

ಪ್ರಯಾಣಿಕರ ಹಾಗೂ ಚಾಲಕನ ಸುರಕ್ಷತೆಗಾಗಿ ಈಗ ಪ್ರತೀ ಕಾರು, ಜೀಪು ಮೊದಲಾದ ವಾಹನಗಳಲ್ಲಿ ಏರ್ ಬ್ಯಾಗ್ ಅಳವಡಿಕೆಯನ್ನು ಕಡ್ಡಾಯ ಮಾಡಿದ್ದಾರೆ. ಸಣ್ಣ ಸಣ್ಣ ಕಾರುಗಳಲ್ಲಿ ಈ ಏರ್ ಬ್ಯಾಗ್ ಅಳವಡಿಕೆ ತುಂಬಾ ದುಬಾರಿಯಾಗುತ್ತದೆ ಎಂದು ವಾಹನ ತಯಾರಿಕಾ ಕಂಪೆನಿಗಳು ಗುಲ್ಲೆಬ್ಬಿಸಿವೆ. ವಾಹನದಲ್ಲಿ ಪ್ರಯಾಣ ಮಾಡುವ ವ್ಯಕ್ತಿಯ ಜೀವಕ್ಕಿಂತಲೂ ಅವರಿಗೆ ಏರ್ ಬ್ಯಾಗ್ ದುಬಾರಿಯಾಯಿತೇ? ಗೊತ್ತಿಲ್ಲ. ಆದರೆ ಏರ್ ಬ್ಯಾಗ್ ಕಡ್ಡಾಯ ಕ್ರಮದಿಂದ ಅಪಘಾತವಾದಾಗ ಇನ್ನಷ್ಟು ಹೆಚ್ಚು ಜೀವಗಳು ಉಳಿದಾವು.

ಹಾಗಾದರೆ ಈ ಏರ್ ಬ್ಯಾಗ್ ಅಪಘಾತವಾದ ತಕ್ಷಣ ನಮ್ಮ ಹಾಗೂ ಕಾರ್ ನ ಭಾಗಗಳ ನಡುವೆ ದಿಂಬಿನಂತೆ ಬಂದು ನಮ್ಮ ಜೀವ ರಕ್ಷಿಸುವುದು ಸರಿಯಷ್ಟೇ. ಹಾಗಾದರೆ ಅಷ್ಟು ದೊಡ್ಡ ಗಾಳಿ ತುಂಬಿದ ಚೀಲವು ಕಾರ್ ನಲ್ಲಿ ಎಲ್ಲಿ ಅಡಗಿಕೊಂಡಿರುತ್ತದೆ ಮತ್ತೆ ಅದು ದುರ್ಘಟನೆಯ ಸಮಯದಲ್ಲಿ ಹೇಗೆ ಪ್ರತ್ಯಕ್ಷವಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲೂ ಕಾಡುತ್ತಿರಬಹುದಲ್ಲವೇ? ಇಲ್ಲಿದೆ ನೋಡಿ ಸರಳವಾದ ಉತ್ತರ.

ನೀವು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಪಘಾತವಾದಾಗ ಕಾರಿನ ಭಾಗಗಳು ನಿಮ್ಮ ದೇಹಕ್ಕೆ ಬಡಿದು ಮೃತ್ಯುವಾಗುವುದು ಅಥವಾ ಗಾಯಗಳಾಗುವುದು ಸಾಮಾನ್ಯ. ಇದನ್ನು ತಡೆಯುವುದಕ್ಕಾಗಿ ನಿಮ್ಮ ಕಾರಿನಲ್ಲಿರುವ ಏರ್ ಬ್ಯಾಗ್ ಗಳು ದಿಂಬಿನ ಆಕಾರ ಪಡೆದುಕೊಂಡು ನಿಮಗೆ ರಕ್ಷಣೆ ಒದಗಿಸುತ್ತವೆ. ನಿಮ್ಮ ಕಾರಿನಲ್ಲಿರುವ ಪುಟ್ಟ ಜಾಗದಿಂದ ಅಷ್ಟೊಂದು ದೊಡ್ಡ ದಿಂಬುಗಳು ಅಷ್ಟೊಂದು ಕಡಿಮೆ ಸಮಯದಲ್ಲಿ ಹೊರಗೆ ಬರುವುದು ಹೇಗೆ? ಇದಕ್ಕೆ ಕಾರಣ ಒಂದು ರಾಸಾಯನಿಕ ಕ್ರಿಯೆ.

ಈ ತೆರೆಯದ ಏರ್ ಬ್ಯಾಗ್ ಗಳಲ್ಲಿ ವಿಭಿನ್ನ ರಾಸಾಯನಿಕ ಪದಾರ್ಥಗಳಿರುತ್ತವೆ. ಕಾರು ಏಕಾಏಕಿ ಯಾವುದಕ್ಕಾದರೂ ಢಿಕ್ಕಿ ಹೊಡೆದು ಒಮ್ಮೆಲೇ ನಿಂತಾಗ ತಕ್ಷಣ ವಿದ್ಯುತ್ ಪ್ರಚೋದನೆಯಾಗಿ ಅದರಲ್ಲಿರುವ ರಾಸಾಯನಿಕ ವಸ್ತುಗಳು ಉರಿಯುವುದಕ್ಕೆ ಪ್ರಾರಂಭವಾಗುತ್ತವೆ. ಈ ರಾಸಾಯನಿಕ ಒಂದರ ಹೆಸರು ಸೋಡಿಯಂ ಅಝೈಡ್. ಒಮ್ಮೆ ಸೋಡಿಯಂ ಅಝೈಡ್ ಹೊತ್ತಿಕೊಂಡಿತೆಂದರೆ, ಸೋಡಿಯಂ ಮತ್ತು ನೈಟ್ರೋಜನ್ ಅನಿಲವಾಗಿ ವಿಭಜನೆಯಾಗುತ್ತದೆ. ನೈಟ್ರೋಜನ್ ಅನಿಲವು ಬಹುಬೇಗನೇ ಸ್ಥಳವನ್ನು ಆಕ್ರಮಿಸುವುದರಿಂದ ಕಣ್ಣು ಮಿಟುಕಿಸುವಷ್ಟರಲ್ಲಿ ಏರ್ ಬ್ಯಾಗ್ ತುಂಬಿಕೊಳ್ಳುತ್ತದೆ. ಹೀಗೆ ತುಂಬಿಕೊಂಡ ಏರ್ ಬ್ಯಾಗ್ ನಮ್ಮ ಜೀವ ಉಳಿಸುತ್ತದೆ. 

***

ತಾಮ್ರಕ್ಕೂ ಕಿಲುಬು ಹಿಡಿಯುತ್ತದೆಯಾ?

ಕಬ್ಬಿಣಕ್ಕೆ ಕಿಲುಬು ಹಿಡಿಯುವುದು ನಿಮಗೆ ಗೊತ್ತೇ ಇದೆ. ತಾಮ್ರಕ್ಕೂ ಹಿಡಿಯುತ್ತಾ? ಹೌದು, ತಾಮ್ರಕ್ಕೂ ಕಿಲುಬು ಹಿಡಿಯುತ್ತೆ. ನಿಮಗೆ ಅಮೇರಿಕದ ಸ್ವಾತಂತ್ರ್ಯ ಪ್ರತಿಮೆ (ಸ್ಟಾಚ್ಯೂ ಆಫ್ ಲಿಬರ್ಟಿ) ಗೊತ್ತಲ್ಲ, ಅದನ್ನು ತಯಾರಿಸಿರುವುದು ತಾಮ್ರದಿಂದ. ಬರೋಬ್ಬರಿ ಎಂಬತ್ತೊಂದು ಸಾವಿರ ಕಿಲೋ ತಾಮ್ರವನ್ನು ಬಳಸಿ ಈ ಪ್ರತಿಮೆಯ ನಿರ್ಮಾಣ ಮಾಡಲಾಗಿದೆ. ಹಲವಾರು ವರ್ಷಗಳಿಂದ ಗಾಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ ಅದರ ಮೈಮೇಲೂ ಕಿಲುಬು ಉಂಟಾಗಿದೆ. ಸುಮಾರು ಎರಡು ನಾಣ್ಯಗಳು ಸೇರಿದಾಗ ಆಗುವ ಅಗಲದಷ್ಟು ಅದರ ಮೇಲೂ ಹಸಿರು ಬಣ್ಣದ ಕಿಲುಬು ಉಂಟಾಗಿದೆಯಂತೆ. ತಾಮ್ರ ವಾತಾವರಣದೊಂದಿಗೆ ಸೇರಿ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಈ ಕಿಲುಬು ಉಂಟಾಗುತ್ತದೆ. 

ವಾಸ್ತವವಾಗಿ , ಈ ಕಿಲುಬು ಶುದ್ಧ ತಾಮ್ರ ಮತ್ತು ವಾತಾವರಣದ ನಡುವೆ ಇದು ತಡೆಗೋಡೆಯಂತೆ ಇದ್ದು ತಾಮ್ರ ಸವೆಯುವುದನ್ನು ತಡೆಗಟ್ಟುತ್ತದೆ. ನಮ್ಮಲ್ಲೂ ಇರುವ ಕೆಲವು ತಾಮ್ರದ ಪ್ರತಿಮೆಗಳು ಕಿಲುಬು ಹಿಡಿದುಕೊಂಡಿರುವುದನ್ನು ಗಮನಿಸಬಹುದು.

(ಮಾಹಿತಿ ಸಂಗ್ರಹ ಕೃಪೆ: ಸೂತ್ರ ಪತ್ರಿಕೆ, ಚಿತ್ರ: ಅಂತರ್ಜಾಲ ತಾಣ)