ಕಾಲಕ್ಕೆ ಕೊಂಕದ ಕೊಂಕಿ ಕೋಟೆ (ಭಾಗ-೨)

ಕಾಲಕ್ಕೆ ಕೊಂಕದ ಕೊಂಕಿ ಕೋಟೆ (ಭಾಗ-೨)

ಈಗ ಕೊಂಕಿಯಲ್ಲಿ ಏನಿದೆ? ಹೆಚ್ಚೆ ಹೆಚ್ಚೆಗೆ ಸಿಗುವ ಹಳೆಯ ಹೆಂಚುಗಳು ಇಟ್ಟಿಗೆಯ ಚೂರುಗಳು. ಚೆನ್ನಮ್ಮನ ಹೊಂಡ ಎಂಬಲ್ಲಿ 1605ನೇ ಶಾಲಿವಾಹನ ಶಕ ವರ್ಷದ ಶಾಸನವೊಂದಿದೆ. ಗೋಡೆ. ಮೇಗಡೆ ಒಂದು ಕೊಳವೂ, ಇನ್ನೊಂದೆಡೆ ತಣ್ಣನೆ ನೀರಿನ ಸೆಲೆಯೂ ಇದೆ. ನಾವು ಹೋದದ್ದು ಏಪ್ರಿಲ್‌ ತಿಂಗಳು. ಎಲೆಗಳೆಲ್ಲ ಉದರಿನಿಂತ ಮರಗಳ ನಗ್ನ ಸೌಂದರ್ಯ ಒಂದೆಡೆ. ಪಕ್ಕಕ್ಕೆ ತಿರುಗಿದರೆ ಕಣಿವೆಯುದ್ದಕ್ಕೂ ಹಚ್ಚ ಹಸಿರು ಕಾಡು. ಒಳಗೆ ಹೆಜ್ಜೆ ಹಾಕುವ ಧೈರ್ಯ ಸೂರ್ಯನಿಗೂ ಇಲ್ಲ. ಒಂದೇ ಕಡೆ - ಪ್ರಕೃತಿಯ ಈ ದ್ವಂದ್ವ ಕಣ್ಣಿಗೆ ರಾಚುವುದು ಇಲ್ಲಿ ಮಾತ್ರವೇನೋ?  

ಹಾಗೇ ಕೊಂಕಿಯ ಸುತ್ತಾಡುತ್ತಿದ್ದಂತೆ ಒಂದು ಮೂಲೆಯಲ್ಲಿ ಎರಡು ಕಲ್ಲು ಬಾವಿಗಳು. ಆನೆಗೆ ನೀರು ಕುಡಿಸಲು ಬೇಕಾಗಿದ್ದವಂತೆ. ಒಂದೊಂದರಲ್ಲೂ  ನೂರು ಡಬ್ಬಿ ನೀರು ಹಿಡಿಯಬಹುದು. ಅಲ್ಲಾ, ಈಗ ಹತ್ತು ಜನರಿಂದ ಸರಿದಾಡಿಸಲೂ ಆಗದ ಈ ಒಜ್ಜೆ ಭೂತಗಳನ್ನು ಗಿರಿಯ ಮೇಲೆ ತಂದದ್ದು ಹೇಗೆ? ಕಡೆದದ್ದು ಎಲ್ಲಿ?

ನಾವು ಬಂದದ್ದೀಗ ಗುಡ್ಡದ ತುದಿ. ಅಲ್ಲೊಂದು ಕಲ್ಲಿನ ಬಸವ-ಎದುರಿಗೆ ಶಿವಲಿಂಗ ಮಾತ್ರ ಇಲ್ಲ! ಸುತ್ತ ಹುಡುಕಿದೆವು. ಇಪ್ಪತ್ತು ಅಡಿ ಪ್ರಪಾತದಲ್ಲಿ ಶಿವಲಿಂಗ ಉರುಳಿಬಿದ್ದಿದೆ. ಪಾಣಿಪೀಠ ಎರಡಾಗಿದೆ. ಬೇಗ ಬೇಗ ಲಿಂಗವನ್ನೂ ಪೀಠವನ್ನೂ ಹೊತ್ತು ತಂದೆವೂ. ನಾವು ಕೊಂಕಿಗೆ ಬಂದ ನೆನಪಿಗೆ ಶಿವಲಿಂಗವನ್ನು ಮರುಸ್ಥಾಪನೆ ಮಾಡಿ- ಹತ್ತತ್ತು ಪೈಸೆ ಕಾಣಿಕೆಯನ್ನೂ ಹಾಕಿದೆವೂ. ಈಗ ನೀವು ಕೊಂಕಿ ಕೋಟೆಗೆ ಹೋದರೆ ಲಿಂಗವೇನು, ಕಾಣಿಕೆಯೂ ಅಲ್ಲೇ ಇದ್ದಿರಬಹುದು!

ಒಳ್ಳೇ, ತಮಾಷೆ. ನಮ್ಮ ಗುಂಪಿನಿಂದ ನರಸಿಂಹ ಮತ್ತು ರಾಜು ದೂರವೇ ಇರುತ್ತಿದ್ದರು. ಯಾಕೆಂದು ಆಮೇಲೆ ಗೊತ್ತಾಯ್ತು. ಕೊಂಕಿಯಲ್ಲಿ ಕೊಪ್ಪರಿಗೆ ದುಡ್ಡಿದೆಯೆಂದು ಯಾರೋ ಹೇಳಿದ್ದರಂತೆ. ಕೊಪ್ಪರಿಗೆ ಬೇಡ, ಎರಡು ನಾಣ್ಯ ಸಿಕ್ಕರೂ ಅಷ್ಟೆ ಆಯ್ತೆಂದು ಆ ಇಬ್ಬರೂ ಬಹಳಾ ಹುಡಿಕಿದರು. ಛೇ! ಪಾಪ ಕೊನೆಗೂ ಸಿಗಲೇ ಇಲ್ಲ.

ಇಡೀ ಕೋಟೆ ಕಟ್ಟಲು ಕಡಿಮೆಯೆಂದರೂ ನೂರಾರು ಜನ ಹತ್ತಾರು ವರ್ಷ ದುಡಿದಿರಬೇಕು. ಅಂದರೆ-ಅಷ್ಟು ವರ್ಷ ಅದು ನಾಗರೀಕತೆಯ ಬೀಡಾಗಿತ್ತು. ಅಂದರೆ ಅವರಿಗೆ ಊಟ ಬಟ್ಟೆ ಇತರೇ ಎಲ್ಲಿಂದ ಬರುತ್ತಿತ್ತು ? ಇಂದು ಕಾಲನಡಿಗೆಯಲ್ಲೂ ಹೋಗಲು ಕಷ್ಟವಾಗಿರುವ ಜಾಗ ಅಂದು ನಾಡಾಗಿದ್ದುದು ಹೇಗೆ? ವಿಷಾದವೆಂದರೆ ಕೊಂಕಿ ಕೋಟೆಯ ಬಗ್ಗ ಈ ಎಲ್ಲಾ ಪ್ರಶ್ನೆಗಳೂ ಉಳಿದೇ ಹೋಗುತ್ತವೆ. ಯಾವ ಸಂಶೋಧಕರ ದೃಷ್ಟಿಗೂ ಈವರೆಗೆ ಬೀಳದ ಈ ಕೋಟೆ ತನ್ನ ಗರ್ಭದಲ್ಲಿ ಎಂಥಾ ಚರಿತ್ರೆಯನ್ನು ಹುದುಗಿಸಿಕೊಂಡಿದೆಯೋ ಇನ್ನಾದರೂ ಹೊರತೆಗೆಯುವುದು ಜರೂರು ಜವಾಬ್ದಾರಿ. ತಡಮಾಡಿದರೆ ಅರಣ್ಯವೇ ಈ ಕೋಡೆಯನ್ನು ಪೂರ್ತಿ ನುಂಗಿಬಿಡುತ್ತದೆ.

ಇರಲಿ, ನಾವು ಸಾಮಾನ್ಯರಿಗೆ ಕೊಂಕಿ ಕೋಟೆಯ ಐತಿಹಾಸಿಕ ಸತ್ಯ ಎನೆಂದೂ ಗೊತ್ತಿರದಿದ್ದರೂ ಸೌಂದರ್ಯವೇ ಸಾಕು ಕೊಂಕಿಯನ್ನು ನೋಡಲೇಬೇಕಾದ ತಾಣವಾಗಿಸಲಿಕ್ಕೆ. ದೂರದಲ್ಲಿ ಮೂರು ದಿಕ್ಕುಗಳಿಗೂ ಹರಿವ ನದಿಯ ದಡದ ಮೇಲೆ ಹಬ್ಬಿರುವ ಸಮೃದ್ಧ ತೆಂಗಿನ ತೋಟಗಳನ್ನು ನೋಡುವುದೇ ಹಬ್ಬ. ಅದು ಕೈಗಾಡಿಯೆಂಬ, ಅಂಕೋಲೆಗೆ ಸೇರಿದ ಊರಂತೆ. ಕೊಂಕಿಕೋಟೆ ಇರುವುದು ಶಿರಸಿ, ಯಾಲ್ಲಾಪುರ, ಅಂಕೋಲಾ ತಾಲೂಕಿನ ಗಡಿಗಳು ಸೇರುವಲ್ಲಿ. ಅಲ್ಲಿಂದ ಕೈಗಾಡಿಗೆ ಕಣ್ಣಳತೆಯ ದೂರ.ಆದರೆ ಇಳಿಯ ಹೋದರೆ ಒಪ್ಪತ್ತು ಬೇಕಂತೆ. "ಕೈಗಾಡಿ ಬಾವಾ ನಾವು ಊಟಕ್ಕೆ ಬತ್ಯ" ಅಂತ ನಮ್ಮ ನರಸಿಂಹ ಕೂಗಿದ್ದು ಕೈಗಾಡಿಯ ಮನೆಯವರಿಗೆ ಕೇಳಿತೋ ಏನೋ!

ಬೆಳಗಾಗುವ ಮೊದಲೇ ಹೊರಟಿದ್ದ ನಾವು ಮಧ್ಯಾಹ್ನದ ಊಟದ ಹೊತ್ತಿಗೆ ಹಿಂದಿರುಗಬಹುದೆಂದು ತಿಳಿದಿದ್ದೆವು. ಆದರೆ ಕೋಟೆಯಲ್ಲೇ ಗಂಟೆ ಎರಡೂವರೆ. ಮತ್ತೆ ಒಂದು ಗುಟುಕು ನೀರು ಸಿಗಬೇಕಾದರೂ ಆರು ಕಿ.ಮೀ. ನಡೆದು-ಇಳಿದು-ಬನಗೆರೆಗೇ ಬರಬೇಕು! ಅದಕ್ಕೇ ಕೊಟೆಯ ನೀರ ಚೆಲುಮೆಯಿಂದ ಬೊಗಸೆ-ಬೊಗಸೆ ಹಿಡಿದು ಹೊಟ್ಟೆ ತುಂಬಿಸಿಕೊಂಡು ಸರಸರ ಕೆಳಗಿಳಿದೆವು.

ಕೊಂಕಿ ಕೋಟೆಯ ಬಗ್ಗ ಬರೆಯುವಾಗ ದಾಖಲಿಸಬೇಕಾದ್ದು, ಆದರೆ ತುಂಬ ಮುಜುಗರವಾಗುತ್ತಿರುವುದು ಅಲ್ಲಿಯ ವನಸಿರಿ, ನಂಬಿದರೆ ನಂಬಿ. ಕೊಂಕಿ ಕೊಟೆಯ ಕಾಡಲ್ಲಿ ಬೀಟೆ (ರೋಸ್‌ವುಡ್‌) ಮರಗಳನ್ನು ಬಿಟ್ಟರೆ ಬೇರೆ ಕಾಣವುದೇ ಅಪರೂಪ. ಹಾಗೇ ಬಿದ್ದು ಮಣ್ಣಾಗುತ್ತಿರುವ ಅಥವಾ ಬೆಂಕಿ ತಗಲಿ ಹೊಗೆಯಾಡುತ್ತಿರುವ ಯಾವ ಮರಗಳಿಗೆ ಕತ್ತಿಯ ಅಲಗು ತಾಗಿಸಿದರೂ ಕಾಣುವ ಕಾಂಡ-ಕಪ್ಪು ಬಂಗಾರ. ಇವು ಯಾರಿಗೂ ಉಪಯೋಗಕ್ಕಿಲ್ಲದೇ ಹೀಗೆ ಮಣ್ಣಾಗುವುದನ್ನು ಕಂಡಾಗ ಹೊಟ್ಟೆ ಉರಿಯುತ್ತದೆ.

ಬೀಟೆಯ ಹಾಗೆ, ಈಗ ಅಪರೂಪವಾದ ಬೆತ್ತವೂ ಇಲ್ಲಿ ಹೇರಳ. ಬೇಕಾಬಿಟ್ಟಿ ಬೆಳೆ. ಬೆತ್ತದ ಮುಳ್ಳಗಳನ್ನು ಕಡಿಯದೇ ದಾರಿಮಾಡಿಕೊಂಡು ಕೊಂಕಿ ಕೋಟೆಗೆ ಹೋಗುವುದು ಅಸಾಧ್ಯ. ಜನಕ್ಕೆ  ಗೊತ್ತಾಗಿ, ಪ್ರವಾಸಿಗರು ಹೋದಷ್ಟೂ ಬೆತ್ತದ ನಾಶ ಖಂಡಿತ. ಹಾಗೆಯೇ ಬೀಟೆಯದೂ ಕೂಡ. ಒಬ್ಬ ಖದೀಮನ ಕಣ್ಣಿಗೆ ಬಿದ್ದರೂ ಇಲ್ಲಿಯ ಪರಿಸರವೇ ನಾಶವಾಗುತ್ತದೆ ಎಂಬುದನ್ನು ನೆನಯುವಾಗ ಹೆದರಿಕೆಯಾಗುತ್ತದೆ.

Comments

Submitted by smurthygr Thu, 01/12/2017 - 17:16

<<ಇವು ಯಾರಿಗೂ ಉಪಯೋಗಕ್ಕಿಲ್ಲದೇ ಹೀಗೆ ಮಣ್ಣಾಗುವುದನ್ನು ಕಂಡಾಗ ಹೊಟ್ಟೆ ಉರಿಯುತ್ತದೆ.
ಬೀಟೆಯ ಹಾಗೆ, ಈಗ ಅಪರೂಪವಾದ ಬೆತ್ತವೂ ಇಲ್ಲಿ ಹೇರಳ. ಬೇಕಾಬಿಟ್ಟಿ ಬೆಳೆ. ಬೆತ್ತದ ಮುಳ್ಳಗಳನ್ನು ಕಡಿಯದೇ ದಾರಿಮಾಡಿಕೊಂಡು ಕೊಂಕಿ ಕೋಟೆಗೆ ಹೋಗುವುದು ಅಸಾಧ್ಯ. ಜನಕ್ಕೆ ಗೊತ್ತಾಗಿ, ಪ್ರವಾಸಿಗರು ಹೋದಷ್ಟೂ ಬೆತ್ತದ ನಾಶ ಖಂಡಿತ. ಹಾಗೆಯೇ ಬೀಟೆಯದೂ ಕೂಡ.>>
ಒಳ್ಳೆಯ ಲೇಖನ. ಆದರೆ ಇಂತಹ ತಾಣಗಳಿಗೆ ಪ್ರಚಾರ ಕೊಡುವುದು ಸರಿಯಲ್ಲ. ನಿಸರ್ಗ ತನ್ನ ಪಾಡಿಗೆ ತಾನು ಕೆಲವೆಡೆಯಾದರೂ ಉಳಿದಿರಲಿ. ಇಂತಹ ಲೇಖನಗಳನ್ನು ನೋಡಿ ವೀಕೆಂಡ್ ಪ್ರವಾಸಿಗಳು, ಜೊತೆಯಲ್ಲೇ ಮರಗಳ್ಳರು, ರಿಸಾರ್ಟ್, ಹೋಂ ಸ್ಟೇಗಳು ಸುರುವಾಗಬಾರದಷ್ಟೇ.

Submitted by smurthygr Thu, 01/12/2017 - 17:18

In reply to by smurthygr

ಅಲ್ಲದೇ <<ಇವು ಯಾರಿಗೂ ಉಪಯೋಗಕ್ಕಿಲ್ಲದೇ ಹೀಗೆ ಮಣ್ಣಾಗುವುದನ್ನು ಕಂಡಾಗ ಹೊಟ್ಟೆ ಉರಿಯುತ್ತದೆ.>> ಎನ್ನುವುದು ಸರಿ ಅನ್ನಿಸಲಿಲ್ಲ. ಮನುಷ್ಯನಿಗೆ ಉಪಯೋಗಕ್ಕೆ ಬಂದರೆ ಮಾತ್ರ ಲೆಕ್ಕವೇ? ಅಲ್ಲೇ ಬಿದ್ದು ನಿಧಾನವಾಗಿ ಕೊಳೆಯುವ ಮರಗಳು ಎಷ್ಟೋ ಹುಳುಹುಪ್ಪಟೆಗಳಿಗೆ ಇನ್ನಿತರ ಜೀವಸಂಕುಲಗಳಿಗೆ ಆಧಾರವಾಗಿರುತ್ತದೆ, ಮಣ್ಣಿನ ಫಲವತ್ತತೆಗೂ ಕಾರಣವಾಗುತ್ತವೆ.