ಕಾಲಾಂತರದ ಮಹಿಮೆ
ಬರಹ
ನನ್ನ ಪ್ರೀತಿಯ ಸಂಪದ್ಬಾಂಧವರಿಗೆಲ್ಲಾ ಮಕರ ಸಂಕ್ರಾಂತಿಯ ಶುಭಾಷಯಗಳು.
ಮಕರ ಸಂಕ್ರಮಣವಾಗುವ ಈ ಸಂದರ್ಭದಲ್ಲಿ ನನ್ನ ಹಿರಿಯ ಸಹೋದರರಾದ ಹಾಸನದ ಶ್ರೀ ಎ.ವಿ. ಸೂರ್ಯನಾರಾಯಣರು ರಚಿರಿಸಿರುವ, ಕಾಲಾಂತರದ ಮಹಿಮೆಯನ್ನು ಅರ್ಥಪೂರ್ಣವಾಗಿ ಚಿತ್ರಿಸಿರುವ ಕವಿತೆಯನ್ನು ಸಂಪದ್ಬಾಂಧವರಿಗೆ ನೀಡಲು ಇಚ್ಚಿಸುತ್ತೆನೆ. ಲೇಖಕರು ಇದನ್ನು ಕವನವಲ್ಲ, ವೈಚಾರಿಕ ಲೇಖನ ಎಂದು ತಿಳಿಸಿದ್ದಾರೆ. ಅಂದು ಹಾಗಿತ್ತು, ಇಂದು ಹೀಗಿದೆ, ಮುಂದೆ ಹೇಗಾಗಬಹುದು ನೀವೇ ಯೋಚಿಸಿ ಎಂದಿದ್ದಾರೆ ಶ್ರೀಯುತ ಸೂರ್ಯನಾರಾಯಣರು.
- ಮಂಗ ಮಾನವನಾಯ್ತು, ಕಲ್ಲು ದೇವರಾಯ್ತು, ನಾಲ್ಕು ಕಾಲು ಹೋಗಿ ಎರಡು ಕೈ, ಎರಡು ಕಾಲಾದವು ವ್ಯವಸಾಯ ವ್ಯಾಪಾರ ಕಲಿತರು ಜನರು, ತೋಳ್ಬಲ, ಆಳ್ಬಲ ಇದ್ದವರು ಒಡೆಯರಾದರು, ಇಲ್ಲದವರು ಎಲ್ಲಕ್ಕೂ ಕಡೆಯಾದರು.
- ಅಯೋಧ್ಯೆಯಲ್ಲಿ ರಾಮ ಮಂದಿರ ಕಾಣದಾಯ್ತು, ಶ್ರೀಕೃಷ್ಣನ ದ್ವಾರಕೆ ಸಮುದ್ರದಲ್ಲಿ ಮುಳುಗಿತು, ದ್ವಾಪರ ಮುಗಿದು ಕಲಿಯುಗವಾಯ್ತು, ಲೋಕ ಮೋಸ ವಂಚನೆಗಳ ಆಗರವಾಯ್ತು
- ವಿದೇಶಿಯರ ಆಗಮನ ಧಾಳಿಯಾಯಿತು, ಭರತಖಂಡ ಇಂಡಿಯಾ ಆಯಿತು, ಮಂದಿರ ಮೂರ್ತಿಗಳುರುಳಿ ಸಮಾಧಿಗಳಾದವು, ಮೂಲಭೂತವಾದಿಗಳು ಮೊಗಲರ ಅಡಿಯಾಳಾದರು
- ನಮ್ಮದೆಲ್ಲವ ವಿದೇಶೀಯರಿಗೆ ಕೊಟ್ಟೆವು, ನಾವು ದುಬಾರಿ ಜೀವನವ ಮರುಪಡೆದೆವು, ಸಲ್ಲದ ಸಂಸ್ಕೃತಿ ವೇಷಭೂಷಣ ನಮ್ಮದಾದವು, ಭಾರತೀಯತೆ ನಮಗೆಲ್ಲ ಬೇಡವೆನಿಸತೊಡಗಿತು
- ಆಂಗ್ಲರು ದೇಶವನ್ನಾವರಿಸಿದರು, ಇಂಗ್ಲಿಷ್ ಬಂತು,ಮಾತೃಭಾಷೆ ಕೀಳಾಯ್ತು, ಹತ್ತಿ ಬಟ್ಟೆ ಹೋಯ್ತು ಮಸ್ಲಿನ್ ಬಟ್ಟೆ ಬಂತು, ಬಿಳಿಯರ ಗುಂಡಿಗೆ ಭಾರತೀಯರ ಗುಂಡಿಗೆ ಒಡೆಯಿತು
- ಮೋಹನರು ಹುತಾತ್ಮರಾದರು, ಮಹಾತ್ಮರಾದರು, ನೆಹರು ಕುಟುಂಬ ಗಾಂಧಿ ಕುಟುಂಬವಾಯ್ತು, ಬ್ರಿಟಿಷರ ಪಾಠವ ತಪ್ಪದೆ ಪಾಲಿಸಿದರು, ಭಾರತ ಗಣರಾಜ್ಯವಾಯಿತು, ಕಾಶ್ಮೀರ ತಲೆನೋವಾಯಿತು
- ಸೆಲೆಕ್ಷನ್ ಹೋಗಿ ಎಲೆಕ್ಷನ್ ಬಂತು, ಆಳರಸರ ಬದಲು ಜನಾಧೀಶರು ಬಂದರು, ದೇಶದ ಸುತ್ತ ಶತೃ ರಾಜ್ಯಗಳುದಯಿಸಿದವು, ಬುದ್ಧಗಾಂದಿಯರ ತತ್ವಗಳು ಮಿತ್ಯೆಗಳಾದವು
- ಹಳ್ಳಿಗಳು ದಿಲ್ಲಿಗಳಾದವು, ಹಳ್ಳಗಳು ಬತ್ತಿ, ಭವನಗಳಾದವು, ರಾತ್ರಿ ಹಗಲಾಯಿತು, ಭೋಗ ಜೀವನವೇ ಮಿಗಿಲಾಯಿತು, ಜನರಲ್ಲಿ ಜಾಗೃತಿಯೆಂಬ ವಿಕೃತಿ ಮೂಡಿತು.
- ಕಾಡುಗಳು ನಾಡಾದವು, ಕೃಷಿ ಕೃಶಿಸಿಹೋಯಿತು, ಕಂಪ್ಯೂಟರ್ ಬಂತು, ಮೊಬೈಲ್ ಬಂತು, ಅಂದಿನ ರೂಪಾಯಿ ಇಂದು ಕಾಸಾಯಿತು, ಕಾಲ ಕಸವಾಯಿತು, ಬಡರೈತರು ಲಾಠಿ ಏಟುತಿಂದು ನೇಣಿಗೆ ಶರಣಾದರು
- ಉಳಲು ಭೂಮಿಯೇ ಉಳಿದಿಲ್ಲ, ಉಳುವವನೂ ಇಲ್ಲ, ನಮ್ಮದೆನ್ನುವುದೇನೂ ಇಲ್ಲ, ಪರದೇಶೀ ವಸ್ತ್ರ, ಪರದೇಶೀ ಅನ್ನ, ನಮ್ಮದೆನ್ನಲು ಹೆಸರಾದರೂ ಉಳಿವುದೇ ನೋಡಬೇಕಣ್ಣ.
- ಎ.ವಿ. ಸೂರ್ಯನಾರಾಯಣ, ಹಾಸನ