ಕಾಲಾನಂತರ !

ಕಾಲಾನಂತರ !

ಬರಹ

ಹಿಂದಿನ ರಾತ್ರಿ ಬಹಳ ಯಾತನೆಯಾಗಿ ಆಸ್ಪತ್ರೆಗೆ ಸೇರಿದ್ದೆ. ಹೊರಗೆ ಏನು ನೆಡೆದಿದೆ ಎಂದಾಗಲಿ, ನನಗಾಗಿ ಯಾರು ಕಾದಿದ್ದರೆ ಎಂದಾಗಲಿ ಒಂದೂ ಅರಿಯೆ. ಬೆಳಿಗ್ಗೆಯೂ ಹಾಗೇ ನೋವು ಇದ್ದೇ ಇತ್ತು. ಕಣ್ತೆರೆಯ ಹೊರಟರೆ ರೆಪ್ಪೆಗಳು ಅನುಮತಿ ನೀಡಲಿಲ್ಲ. ಮನವೂ ಒಪ್ಪಲಿಲ್ಲ. ಹಾಗಾಗಿ ಕಣ್ಣು ಮುಚ್ಚಿಯೇ ಇದ್ದೆ. ಯಾರೋ ಬಂದು ಹಾಗೇ ಸೂಜಿ ಚುಚ್ಚಿ ಹೋದರು. ರಣರಂಗದಲ್ಲಿ ಪೆಟ್ಟು ತಿಂದು ಸಾಯಲೂ ಆಗದೆ ಬದುಕಲೂ ಆಗದೆ ಬಿದ್ದಿದ್ದವನಿಗೆ ಇರುವೆಯೊಂದು ಕಚ್ಚಿದಂತೆ. ಔಷದಿಯ ಪ್ರಭಾವವೋ ಏನೋ ನಿದ್ದೆ ಬಂತು. ಮನದ ಆಲೋಚನೆಗಳಿಗೆ ಬಿತ್ತು ಬ್ರೇಕ್ !

ಮತ್ತೊಮ್ಮೆ ಎಚ್ಚರವಾಯಿತು. ಏನೋ ಒಂದು ರೀತಿ ನಿರಾಳ. ಚುಚ್ಚಿದ ಸೂಜಿಗಳು, ಬಾಯಿಗೆ ಮತ್ತು ಮೂಗಿಗೆ ಜೋಡಿಸಿದ್ದ ಟ್ಯೂಬುಗಳು ನನ್ನ ಮೇಲೆ ಇಲ್ಲವೇನೋ ಎಂಬಂತೆ. ಇತ್ತೀಚೆಗೆ ಕಣ್ಣಿನ ತೊಂದರೆ ಆರಂಭವಾಗಿದ್ದರೂ ಈಗ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ಪಕ್ಕದಲ್ಲೇ ಕಾಫ಼ಿಯ ಫ಼್ಲಾಸ್ಕ್ ಇದ್ದರೂ ಏನೂ ಬೇಡವೆನಿಸಿತು. ಬಹುಶ: ನನಗೆ ಸಂಪೂರ್ಣ ಗುಣವಾಗಿದೆ ಅನ್ನಿಸುತ್ತೆ. ಯಾರನ್ನಾದರೂ ಕೂಗೋಣವೆಂದು ಎದ್ದು ಕುಳಿತೆ. ಆಗ ನೆಡೆದದ್ದು ಪವಾಡವೇ ಸರಿ. ’ಡಾಕ್ಟರ್’ ಎಂದು ಜೋರಾಗಿ ಒಮ್ಮೆ ಕಿರುಚಿಯೇ ಬಿಟ್ಟೆ ! ಏನಾಶ್ಚರ್ಯ, ನಾನು ಕಿರುಚಿದರೂ ಸುತ್ತಲಿನವರಿಗೆ ನನ್ನ ಕಡೆ ತಿರುಗಿ ನೋಡುವ ವ್ಯವಧಾನವೇ ಇರಲಿಲ್ಲ... ಅಥವಾ ಕೇಳಿಸಲಿಲ್ಲವೋ? ಏನಾಯಿತು ಎಂದು ಯೋಚಿಸುವಷ್ಟರಲ್ಲಿ ಕಣ್ಣು ಕೋರೈಸುವ ಬೆಳಕು ನನ್ನ ಮುಂದೆ ಮೂಡಿಬಂತು.

ಸೂರ್ಯದೇವನೇ ದಿಕ್ಕು ತಪ್ಪಿ ಕಿಟಕಿಯಲ್ಲಿ ನುಸುಳಿ ನನ್ನ ಬೆಡ್ಡಿನ ಮುಂದೆ ನಿಂತಂತೆ. ಅಷ್ಟು ಬೆಳಕು ನನ್ನ ಮುಂದಿದ್ದರೂ ಕಣ್ಣು ಮುಚ್ಚಲಾಗಲಿಲ್ಲ. ಹಾಗೇ ನೋಡಲು, ಅಲ್ಲಿ ಕಂಡದ್ದು, ಒಬ್ಬ ಹಸನ್ಮುಖಿಯಾದ, ದಿವ್ಯ ತೇಜಸ್ಸು ಹೊಂದಿದ್ದ ಪರಮಾತ್ಮ ಸ್ವರೂಪಿ. ಮಾತನಾಡಲು ಬಾಯಿ ತೆರೆಯಲೂ ಸಾಧ್ಯವಾಗಲಿಲ್ಲ. ಕಂಗಳಲ್ಲಿ ನೀರು ಧಾರಾಕಾರವಾಗಿ ಹರಿದಿತ್ತು. ನಾನು ಎದ್ವಾತದ್ವಾ ಪುಣ್ಯ ಮಾಡಿರಬೇಕು ಅದಕ್ಕೇ ದೇವನೇ ನನ್ನ ಮುಂದೆ ಬಂದಿಹನು. ನನಗೇ ಅರಿವಿಲ್ಲದೆ ಮನದಲ್ಲೇ ಬಗೆ ಬಗೆಯಾಗಿ ಸ್ತುತಿಸುತ್ತ ಸಂತೋಷಿಸಿದೆ. ಆಗ ಆತನ ಬಾಯಿಂದ ಹೊರಬಂದ ನುಡಿಮುತ್ತುಗಳು ನನಗೆ ಹೇಗೆ ಅರ್ಥ ಮಾಡಿಕೊಳ್ಳಬೇಕು ಅರಿಯದಾಯಿತು ’ನಿನ್ನ ಯಾತ್ರೆ ಮುಗಿದಿದೆ. ನಡೆ ಹೋಗೋಣ’. ಯಾವ ಯಾತ್ರೆ? ಎಲ್ಲಿಗೆ ಹೋಗುವುದು? ಪರಿಸ್ಥಿತಿ ಅರ್ಥವಾಗದೆ ಆತನನ್ನು ಕೇಳಿದೆ ’ಪರಮಾತ್ಮಾ, ನೀನಾರು ?’. ಮಂದಸ್ಮಿತನಾಗಿ ದೇವ ನುಡಿದ ’ನಾನು ಯಮಧರ್ಮ’ !!!! ಆಗಲೇ ನನಗೆ ಅರಿವಾಗಿದ್ದು. ನಾನು ಜಗತ್ತಿನ ಪಾಲಿಗೆ ’ಇನ್ನಿಲ್ಲ’ ಎಂದು !!!

ಹಾಗಿದ್ದರೆ ಆಗಾಲೇ ನೆಡೆದದ್ದು ಪವಾಡವಲ್ಲ! ನಾನು ಎದ್ದು ಕುಳಿತಾಗ ನನ್ನ ದೇಹ ಹಾಸಿಗೆಯ ಮೇಲೇ ಇದ್ದರೂ ನಾನು ಮಾತ್ರ ಹೇಗೆ ಎದ್ದು ಕುಳಿತಿದ್ದೆ ಎಂದು ಈಗ ತಿಳಿಯಿತು. ನಾನು ಕಿರುಚಿದರೂ ಏಕೆ ಯಾರ ಕಿವಿಗೂ ಬೀಳಲಿಲ್ಲ ಎಂಬುದರ ಅರಿವಾಯಿತು. ನನ್ನ ಮುಂದಿರುವ ಈ ಪರಮಾತ್ಮ ನನ್ನ ಕಣ್ಣಿಗೆ ಮಾತ್ರ ಯಾಕೆ ಗೋಚರವಾದ ಎಂಬ ಸತ್ಯದ ದರ್ಶನವಾಯಿತು. ಆದರೆ ಒಂದು ಅನುಮಾನ ಮಾತ್ರ ಪರಿಹಾರವಾಗಲಿಲ್ಲ.

’ಯಮ’ ಎಂದರೆ ಕಪ್ಪು ಮೈಯುಳ್ಳ, ದಪ್ಪ ಮೀಸೆಯ, ಗಡಸು ಕಂಠದ, ಕೆಂಗಣ್ಣುಗಳ ದೇವ ಎಂದು ತಿಳಿದರೇ, ನನ್ನ ಮುಂದೆ ನಿಂತಿದ್ದವನು ಹಸನ್ಮುಖಿಯಾದ ಈತ. ನನ್ನ ಮನದ ಸಂಶಯವನ್ನು ನಿವಾರಿಸುವಂತೆ ನುಡಿದನಾತ ’ಮನುಜನ ಒಳಿತು ಕೆಡುಕುಗಳು, ದೇಹಕ್ಕೆ ಸೀಮಿತವಷ್ಟೆಯೇ ಹೊರತು ಆತ್ಮಕ್ಕಲ್ಲ. ದೇಹದೊಳಗಿನ ಆತ್ಮವು ಎಂದಿಗೂ ಪರಿಶುದ್ದ. ಇಂತಹ ಶುದ್ಧ ಆತ್ಮವನ್ನು ಕರೆದೊಯ್ಯಲು ಬರುವ ನನ್ನನ್ನು ಮನುಜರು ರೌದ್ರಾವತಾರದಲ್ಲಿ ಏಕೆ ಚಿತ್ರಿಸಿದ್ದಾರೋ ಅರಿಯದು’. ಅತ್ತ ಹೊರಟ.

ನನಗೇ ಅರಿವಿಲ್ಲದೆ ಅವನ ಹಿಂದೆ ಹೆಜ್ಜೆ ಹಾಕ ತೊಡಗಿದ್ದೆ. ಹೆಚ್ಚು ಜನ ಸುಖ ನಿದ್ರೆಯಲ್ಲಿದ್ದರು. ಮಲಗಿರುವಾಗ ಇರುವ ಶಾಂತತೆ ಎದ್ದಾಗ ಏಕೆ ಇರುವುದಿಲ್ಲವೋ ತಿಳಿಯದು. ನಿದ್ದೆ ಇಂದ ಎದ್ದ ಕೂಡಲೆ ಎಲ್ಲೋ ಅಡಗಿದ್ದ ಸಹಸ್ರಾರು ಅಲೋಚನೆಗಳು ಮನವನ್ನು ಮುತ್ತುವುದಲ್ಲ, ಇವೆಲ್ಲ ನಿದ್ರಿಸುವಾಗ ಎಲ್ಲಿರುತ್ತದೆ ? ತೀರ ತಲೆ ಕೆಟ್ಟಾಗ ನಿದ್ರಿಸಲೂ ಬಿಡುವುದಿಲ್ಲ, ಈ ಅಲೋಚನೆಗಳು. ಅದು ಬೇರೆ ವಿಷಯ. ಯಮಧರ್ಮ ಒಮ್ಮೆ ನನ್ನೆಡೆ ನೋಡಿ ನಕ್ಕ. ’ಸತ್ತ ಮೇಲೂ ನಿನಗೇನು ಅಲೋಚನೆ’ ಎಂದಿರಬೇಕು ! ನನ್ನ ಮನಸ್ಸು ಹೇಳಿತು ’ಪ್ರಭೂ, ಈಗ ತಾನೆ ಸತ್ತಿದ್ದೇನೆ, ಸ್ವಲ್ಪ ಅಡ್ಜಸ್ಟ್ ಆಗುವುದಕ್ಕೆ ಸಮಯ ಕೊಡು’ ಅಂತ

ಮೂಲೆಯಲ್ಲಿ ಬೆಡ್ಡಿನ ರೋಗಿ ಮಾತನಾಡುತ್ತಿದ್ದ ’ನಾಳೆ ನನಗೆ ಡಿಸ್ಚಾರ್ಜ್ ಅಂತ ಡಾಕ್ಟರ್ ಹೇಳಿದ್ದಾರೆ. ಮುಂದಿನ ವಾರದಲ್ಲಿ ಅರೆಕೆರೆ ಸೈಟು ರಿಜಿಸ್ಟರ್ ಮಾಡಿಸಿಡಬೇಕು. ಮುಂದಿನ ವರ್ಷದ ಒಳಗೆ ಮನೆಕಟ್ಟಿ ಮುಗಿಸಬೇಕು....’. ಯಮ ನುಡಿದ ’ನಾನೊಬ್ಬ ಇರುವುದರ ವಿಷಯ ಮರೆತು ಬರೀ ನಾಳೆಯಲ್ಲೇ ಬದುಕುವ ಮನುಜರ ಕಂಡು ನನಗೆ ಸದಾ ನಗು ಬರುತ್ತದೆ’ ಎಂದ. ನಾನೇನು ಹೇಳಲಿಲ್ಲ. ಏಕೆಂದರೆ ನನ್ನನ್ನು ಕಂಡು ಈತ ಎಷ್ಟು ಬಾರಿ ನಕ್ಕಿದ್ದಾನೋ ಯಾರಿಗೆ ಗೊತ್ತು ?

ಹಾಗೇ ಹೆಜ್ಜೆ ಹಾಕಲು ಒಂದು ನಿರ್ಜನ ಪ್ರದೇಶ ತಲುಪಿದೆ. ಅಲ್ಲಿನ ವಾತಾವರಣವೂ ಬಹಳ ಹಳತಾಗಿ ಕಂಡಿತು. ಅಲ್ಲೊಂದು ಇಲ್ಲೊಂದು ಸೈಕಲ್ಲು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಇದು ಯಾವ ಊರು ಎಂದು ಅರಿಯದೆ ಕೇಳಿದೆ. ಯಮ ನುಡಿದ ’ಇದು ನೀ ಹುಟ್ಟಿದ ಊರು. ನೀನೀಗ ನೋಡುತ್ತಿರುವುದು ನೀ ಹುಟ್ಟಿದಂದಿನ ಸಮಯ. ಅದೋ ಅಲ್ಲಿ ಕಾಣುತ್ತಿರುವುದೇ ನೀ ಹುಟ್ಟಿದಾ ಮನೆ......’ ಹೀಗೇ ಹೇಳುತ್ತಾ ಹೋದ ಯಮಧರ್ಮ. ನನಗೆ ಅಚ್ಚರಿಯಿಂದ ಬಾಯಿ ಮುಚ್ಚಲಾಗಲಿಲ್ಲ. ಫ಼್ಲಾಶ್ ಬ್ಯಾಕ್ ಬರೀ ಸಿನಿಮಾದಲ್ಲಿ ಎಂದುಕೊಂಡಿದ್ದೆ. ಈಗ ಪ್ರತ್ಯಕ್ಷ ಅನುಭವ ಆಗುತ್ತಿದೆ.

"ಮಗು ಬಹಳ ಮುದ್ದಾಗಿದೆ" ಎಂದು ಬಂದವರೆಲ್ಲ ನುಡಿಯುತ್ತಿದ್ದರೆ ನಾನು ಇಲ್ಲಿಂದ ಒಳಗೊಳಗೇ ಪುಳಕಿತನಾಗುತ್ತಿದ್ದೆ. ನಿಜ, ತುಂಬಾ ಮುದ್ದಾಗಿದ್ದೆ. ಎಲ್ಲರ ಕಣ್ಮಣಿಯಾಗಿ ಕಷ್ಟ ಅರಿಯದೇ ಬೆಳೆದೆ. ಶಾಲೆಯ ದಿನಗಳಲ್ಲಿ ಶಿಸ್ತಿನಿಂದ ಕೂಡಿದ್ದು ಎಲ್ಲರೂ ಹೊಗಳುವಂತೆ ಇದ್ದೆ. ಶಾಲೆಯಲ್ಲಿ ಮೊದಲಿಗನಾಗಿದ್ದು, ಸಿರಿವಂತನಾಗಿದ್ದು, ಚೆಲುವನಾಗಿಯೂ ಇದ್ದ ನನಗೆ ಅದರ ನಶೆ ತಲೆ ಏರಲು ಬಹಳ ವರ್ಷ ಬೇಕಿರಲಿಲ್ಲ ಎನಿಸುತ್ತಿದೆ.

ಹೈಸ್ಕೂಲ್ ಓದುತ್ತಿದ್ದ ದಿನಗಳು ಮೂಡಿಬರುತ್ತಿದ್ದ ಹಾಗೇ ನನ್ನ ಹಳೇ ಸ್ನೇಹಿತರು ಕಂಡು ಬಂದರು. ಓ! ಆ ಹೊಸ ಹುಡುಗ. ಇನ್ನೂ ಆ ಅಳುಮೂಂಜಿಯ ಮುಖ ಹಚ್ಚ ಹಸಿರಾಗಿ ಮನದಲ್ಲಿ ನಿಂತಿದೆ. ಅವನು ಮೊದಲ ದಿನ ಕಾಲಿಟ್ಟಾಗ ಎಷ್ಟು ಆಟ ಆಡಿಸಿದ್ದೆ. ಇಂದಿಗೂ ನೆನಪಿದೆ. ಅವನು ಎಲ್ಲಕ್ಕೂ ಅಳುತ್ತಿದ್ದ. ಅವನು ಅತ್ತಾಗಲೆಲ್ಲ ನಾನು ಇನ್ನೂ ರೇಗಿಸುತ್ತಿದ್ದೆ. ಅವನ ಹೆಸರು ಅದೇನೋ ವಿಚಿತ್ರವಾಗಿತ್ತು. ನೆನಪಿಲ್ಲ. ನಿನಗೆ ಯಾರು ಹೆಸರು ಇಟ್ಟಿದ್ದು ಅಂದರೆ ಗೊತ್ತಿಲ್ಲ ಎಂದಿದ್ದ. ಅಪ್ಪ-ಅಮ್ಮನ ಹೆಸರು ಹೇಳೋ ಅಂದರೆ ಅಳುತ್ತಿದ್ದ. ನಾಲ್ಕು ದಿನ ಆದ ಮೇಲೆ ಅವನು ಶಾಲೆ ಬಿಟ್ಟು ಹೋದ ಎಂದು ತಿಳಿಯಿತು. ಯಾಕೋ ಗೊತ್ತಿಲ್ಲ. ಯಮಧರ್ಮ ತಿರುಗಿ ನೋಡಿ ನುಡಿದ ’ನೀನು ರೇಗಿಸಿದ ಆ ಹುಡುಗ ಅನಾಥ. ಅವನ ಅಪ್ಪ-ಅಮ್ಮ ಯಾರು ಅಂತ ಅವನಿಗೇ ಗೊತ್ತಿಲ್ಲ, ನಿನಗೆ ಹೇಗೆ ಹೇಳಿಯಾನು. ಯಾರೋ ಹೆಸರಿಟ್ಟರು, ಯಾರೋ ಊಟ ಕೊಟ್ಟರು, ಯಾರೋ ಬಟ್ಟೆ ಕೊಟ್ಟರು. ನಿನ್ನಂತೆ ಸುಖವಾಗಿ ಬೆಳೆಯಲಿಲ್ಲ. ನಿನ್ನ ಹಾಗೂ ನಿನ್ನ ಸ್ನೇಹಿತರ ಕಾಟ ತಡೆಯದೆ ಬೇರೆ ಶಾಲೆಗೆ ಹೋದ . ನೆನ್ನೆಯವರೆಗೆ ನಿನ್ನನ್ನು ಸಾಯದಂತೆ ಕಾಪಾಡಿದ ವೈದ್ಯ ಅವನೇ’. ಮುಖಕ್ಕೆ ಸೆಗಣಿ ತೆಗೆದುಕೊಂಡು ಹೊಡೆದ ಹಾಗೆ ಆಯಿತು ನನಗೆ.

ಹೀಗೇ ಹತ್ತು ಹಲವು ಬಾರಿ ನಾ ಮಾಡಿದ ತಪ್ಪುಗಳನ್ನು ಎತ್ತಿ ಎತ್ತಿ ತೋರುತ್ತಿದ್ದಂತೆ ನಾನು ಪಶ್ಚಾತ್ತಾಪದಲ್ಲಿ ಬೆಂದು ಹೋಗುತ್ತಿದ್ದೆ. ನಂತರ ಕಾಲೇಜು ದಿನಗಳು ಮೂಡಿ ಬರುತ್ತಿದ್ದಂತೆ ನನ್ನ ಕೆಟ್ಟ ಆಟಗಳೂ ಮೂಡಿಬಂದಿತ್ತು. ತಲೆಬಗ್ಗಿಸಿ ನೋಡುವುದನ್ನು ತಪ್ಪಿಸಿಕೊಳ್ಳೋಣವೆಂದರೆ, ಸಾಧ್ಯವಾಗಲಿಲ್ಲ. ಮುಂದಿನ ದಿನಗಳು ಮದುವೆಗೆ ಸಿದ್ದನಾಗಿದ್ದ ಸುರದ್ರೂಪಿ ತರುಣನಾದ ನಾನು. ಎಷ್ಟು ಜನರನ್ನು ಹೀಯಾಳಿಸಿ ಕಳಿಸಿದ್ದೆ. ಮನೆಗೆ ಹಿಂದಿರುಗಿ ಹೋಗುವಾಗ ಆ ಹೆಣ್ಣಿನ ಮನೆಯವರು ನನಗೆಷ್ಟು ಶಾಪ ಹಾಕುತ್ತಿದ್ದಾರೆ. ಆ ಹುಡುಗಿಯರೋ ಒಂದೇ ಸಮನೆ ಅಳುತ್ತಿದ್ದಾಳೆ. ಮನೆಯವರು ಅವರನ್ನೇ ದೂಷಿಸುತ್ತಿದ್ದಾರೆ. ನಾನು ಹೀಯಾಳಿಸುವ ಬದಲು ಹೇಳುವುದನ್ನೇ ಬೇರೆ ರೀತಿಯಲ್ಲಿ ಹೇಳಬಹುದಿತ್ತಲ್ಲವೇ? ಈ ಬಾರಿ ಯಮಧರ್ಮ ನನಗೆ ವಿಷಯ ವಿವರಿಸಬೇಕಾಗಲಿಲ್ಲ.

ನಂತರ ಸಂಸಾರದ ದಿನಗಳು. ಮೊದಲೇ ನನ್ನ ರೂಪಿನ ಬಗ್ಗೆ ಅಹಂಕಾರವಿತ್ತು. ಜೊತೆಗೆ ದರ್ಪ ಬೇರೆ. ಕುಳಿತಲ್ಲೇ ಎಲ್ಲ ಸಪ್ಲೈ ಆಗಬೇಕು. ಮನೆಯಲ್ಲಿ ಒಂದು ಕಡ್ಡಿ ಎತ್ತಿ ಆ ಕಡೆ ಇಡುತ್ತಿರಲಿಲ್ಲ. ಯಾವಾಗಲೂ ನನ್ನೊಡನೆ ನಗುನಗುತ್ತಾ ಬೆರೆತಿದ್ದ ಆ ನನ್ನ ಪತ್ನಿ, ನನಗೆ ಕಾಣದೆ ಕಣ್ಣೀರಿಡುತ್ತಿದ್ದ ದೃಶ್ಯ ಅರಿವಾಗಲಿಲ್ಲ. ನನಗೆ ಇವೆಲ್ಲ ಗೊತ್ತೇ ಆಗುತ್ತಿರಲಿಲ್ಲವಲ್ಲ? ನನ್ನ ಯೋಗ್ಯತೆಗೆ ತಕ್ಕ ಹಾಗೆ ಏನೂ ಕಡಿಮೆ ಮಾಡದೆ ಮದುವೆ ಮಾಡಿಕೊಟ್ಟಿದ್ದು ಬಿಟ್ಟರೆ ನಾನೇನು ಡಿಮ್ಯಾಂಡ್ ಮಾಡಿರಲಿಲ್ಲವಲ್ಲ ? ಯಮಧರ್ಮ ನುಡಿದ ’ನೀ ಕೇಳಿದ ಹಾಗೆ, ಅವಳ ಮನೆಯವರು ಮದುವೆ ಮಾಡಿ ಕೊಡಲು ಎಷ್ಟು ಪಾಡು ಪಟ್ಟರೆಂದು ಅವರಿಗೆ ಮಾತ್ರ ಗೊತ್ತು. ಅದಲ್ಲದೆ ಅವಾಗಾವಾಗ ಮೂರು ನಾಲ್ಕು ದಿನ ಅವರ ಮನೆಗೆ ಹೋಗಿ ವಕ್ಕರಿಸುವಾಗಲೆಲ್ಲ ನಿನ್ನನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎಂಬ ಅರಿವು ನಿನಗಿದೆಯೇ? ಎಂದಾದರೂ ಅವರಿಗೆ ಸಹಾಯ ಮಾಡಿದ್ದೆಯಾ ? ಅವರ ಕಷ್ಟ ಸುಖಗಳಿಗೆ ನೆರವಾಗಿದ್ದೀಯಾ ? ವಾರಕ್ಕೊಮ್ಮೆ ಊಟ ಮಾಡುತ್ತ ಕೃಶವಾಗಿದ್ದು ನಿನ್ನ ಈ ಕಣ್ಣುಗಳಿಗೆ ಕಾಣಲೇ ಇಲ್ಲವೇ? ಸಾಲದ ಹೊರೆಯ ಜೊತೆ ಅನಾರೋಗ್ಯವೂ ಸೇರಿತಲ್ಲ, ಅದಕ್ಕೆ ಯಾರು ಹೊಣೆ? ಅವರ ಕೊನೆಗಾಲಕ್ಕಾದರೂ ಅವರಿಗೆ ಆಸರೆಯಾದೆಯಾ? ಅಂದ ಹಾಗೆ ನೀನು ನಿನ್ನ ಯಾವ ಯೋಗ್ಯತೆಗೆ ಜೋತು ಬಿದ್ದಿದ್ದೆ? ’ ಬಗ್ಗಿಸಿದ ತಲೆ ಎತ್ತಲೂ ಧೈರ್ಯ ಬರಲಿಲ್ಲ. ನನ್ನ ಬಗ್ಗೆ ನನಗೇ ಹೇಸಿಗೆಯಾಗಿತ್ತು.

ಮುಂದೆ ಸಾಗುತ್ತಿದ್ದಂತೆ ನನ್ನ ಅಧಿಕಾರ ಅವಧಿಯಲ್ಲಿ ನನ್ನ ಕೈಕೆಳಗೆ ಕೆಲಸ ಮಾಡಿತ್ತಿದ್ದವರನ್ನು ಗೋಳು ಹೊಯ್ದುಕೊಂಡ ದಿನಗಳು, ಅವರ ಕಣ್ಣೀರಿನ ಶಾಪ, ಲಂಚ ತಿಂದ ದಿನಗಳು ಎಲ್ಲವೂ ಸಿನಿಮಾ ರೀಲಿನಂತೆ ನನ್ನ ಮುಂದೆ ಸಾಗುತ್ತಿತ್ತು. ಮನೆಯವರ ಹೆಬ್ಬೆಟ್ಟು ಒತ್ತಿಸಿ ಸರಕಾರಕ್ಕೆ ಕಳ್ಳ ಲೆಕ್ಕ ತೋರಿಸಿ ದುಡ್ಡು ಮಾಡುತ್ತಿದ್ದೆ. ಓ! ಅದು ಯಾರು .... ಹೌದು, ಅವನು ಒಬ್ಬ ಗುಮಾಸ್ತ. ನೆನಪಿದೆ. ಒಮ್ಮೆ ಸಿನಿಮಾಕೆ ಹೋಗಿದ್ದಾಗ, ಬಾಲ್ಕನಿ ಟಿಕೀಟು ಸಿಗಲಿಲ್ಲವೆಂದು ಗಾಂಧಿ ಕ್ಲಾಸಿನಲ್ಲಿ ಕುಳಿತಿದ್ದೆ. ಯಾರಾದರೂ ನನ್ನನ್ನು ನೋಡಿರಬಹುದು ಎಂಬ ಒಣ ಜಂಭದಿಂದ ತಲೆ ಎತ್ತಿ ನೋಡಿದರೆ, ನನ್ನ ಕೈಕೆಳಗೆ ದುಡಿಯುತ್ತಿದ್ದ ಗುಮಾಸ್ತ ಬಾಲ್ಕನಿ ಕಡೆ ನೆಡೆದು ಹೋಗುತ್ತಿದ್ದುದು ಕಾಣಿಸಿತ್ತು. ಯಾವುದೋ ನೆಪ ಎತ್ತಿ ಅವನನ್ನು ಒಂದು ವಾರ ಸಸ್ಪೆಂಡ್ ಮಾಡಿ ಸೇಡು ತೀರಿಸಿಕೊಂಡಿದ್ದೆ. ಹೌದು, ಅವನೇ ಅದು. ಏನು ಮಾಡುತ್ತಿದ್ದಾನೆ ಹೆಂಡದ ಅಂಗಡಿಯಲ್ಲಿ ? ಅವನ ಮನೆಯವರು ಅಳುತ್ತಿದ್ದಾರೆ. ಅವನ ಹೆಂಡತಿ ಹೇಳುತ್ತಿದ್ದಾಳೆ ’ಯಾವುದೊ ದೊಡ್ಡ ಮನುಷ್ಯ ಅಂತೆ. ನನ್ನ ಯಜಮಾನನ್ನ ಸಸ್ಪೆಂಡ್ ಮಾಡಿದ್ದಾನೆ. ಒಂದು ದಿನಕ್ಕೂ ಕುಡಿಯದ ನನ್ನ ಯಜಮಾನ ಈಗ ಕುಡಿಯೋದು ಕಲಿತಿದ್ದಾನೆ. ಯಾಕ್ಲಾ ಅಂದರೆ ನನ್ನ ಇಷ್ಟು ದಿನದ ನೀಯತ್ತು ಮಣ್ಣಾಯ್ತು. ಜೀವನಾನೇ ಬೇಡ ನನಗೆ ಅಂತ ಏನೇನೋ ಬಡಬಡಯಿಸಿದ’.... ಇನ್ನೂ ಹೇಳುತ್ತಲೇ ಇದ್ದಳು. ನಂತರ ಕೇಳಿಬಂದದ್ದೆಲ್ಲಾ ನನ್ನನ್ನು ಹಿಡಿ ಶಾಪ ಹಾಕಿದ ಕಠೋರ ನುಡಿಗಳು. ನನ್ನಿಂದ ಒಂದು ಸಂಸಾರ ಹಾಳಾಗಿ ಹೋಯಿತು. ನನ್ನ ಬಗ್ಗೆ ಇನ್ನೂ ಹೇಸಿಗೆಯಾಯಿತು.

ನನ್ನ ದರ್ಪದ ದಿನಗಳು ಇನ್ನೂ ತೆರೆ ಮೇಲೆ ಕಾಣಿಸುತ್ತಲೇ ಇದೆ. ನೊಂದ ಮನಗಳ ಶಾಪ ನನಗೆ ತಟ್ಟದೆ ಬಿಡಲಿಲ್ಲ. ಐವತ್ತು ದಾಟುತ್ತಲೇ ಕೆಲವು ಖಾಯಿಲೆಗಳು ನಾಮುಂದು ತಾಮುಂದು ಎಂದು ನನ್ನನ್ನು ಅಪ್ಪಿಕೊಂಡವು. ಸಿಹಿ ತಿನ್ನುವ ಹಾಗಿಲ್ಲ. ಹೆಚ್ಚು ನೀರು ಕುಡಿಯುವ ಹಾಗಿಲ್ಲ. ಅನ್ನ ಮುಟ್ಟುವುದು ಮೊದಲೇ ನಿಷಿದ್ದ. ಹೆಚ್ಚು ಕಮ್ಮಿ ಹೇಳುವುದಾದರೆ ನೀರು ಗಾಳಿ ಇಂದಲೇ ಬದುಕು ಎನ್ನುವಂತಾಗಿತ್ತು. ಕೆಲಸದಿಂದ ವಾಲಂಟರಿ ರಿಟೈರ್ ಮೆಂಟ್ ತೆಗೆದುಕೊಳ್ಳಬೇಕಾಯಿತು. ಆದರೇನು ಹೊತ್ತುಹೊತ್ತಿಗೆ ನನ್ನನ್ನು ನೋಡಿಕೊಳ್ಳುವವರಿಲ್ಲ ಎಂದು ಮಲಗಿದ್ದಲ್ಲೇ ಗಲಾಟೆ ಮಾಡುತ್ತಿದ್ದೆ. ಕಟ್ಟಿಕೊಂಡವಳಿಗೆ ವಿಧಿಯಿಲ್ಲ ಸೇವೆ ಮಾಡುತ್ತಿದ್ದಳು, ಆದರೆ ಮನೆಗೆ ಬಂದಿದ್ದ ಸೊಸೆ ? ಅಲ್ಲಿ ನನ್ನ ಪುಣ್ಯವಂತೂ ಇಲ್ಲ. ನನ್ನಾಕೆ ಮಾಡಿದ್ದ ಪುಣ್ಯ ಇರಬೇಕು. ಏನೂ ಪ್ರತಿ ನುಡಿಯದೆ ಮೂಗು ಮುಚ್ಚಿ ದುಡಿಯುತ್ತಿದ್ದಳು ಮನೆಗೆ ಬಂದ ಸೊಸೆ. ತೀವ್ರ ನಿತ್ರಾಣಗೊಂಡ ನನ್ನನ್ನು ಆಸ್ಪತ್ರೆಗೆ ಒಯ್ದು ಮಲಗಿಸಿದ ದೃಶ್ಯ ಮೂಡುತ್ತಿದ್ದಂತೆ ಬೇರೇ ಲೋಕಕ್ಕೆ ಬಂದಿದ್ದೆ. ಅಂದರೆ ಅಲ್ಲಿಗೆ ನನ್ನ ಜೀವಿತ ಕೊನೆಯಾಗಿತ್ತು. ಮುಂದೇನು ನೆಡೆಯುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ನನಗೆ ಇರಲಿಲ್ಲ.

ಯಮಧರ್ಮನನ್ನು ತಲೆ ಎತ್ತಿ ನೋಡುವ ಧೈರ್ಯವಿರಲಿಲ್ಲ. ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವನೆಂಬ ಊಹೆಯೂ ಇರಲಿಲ್ಲ. ಇನ್ನೆಲ್ಲಿಗೆ, ಎಣೆ ಬಾಂಡ್ಲೆ ತಯಾರಾಗಿರಬೇಕು ಅನ್ನಿಸುತ್ತದೆ. ಮನದಲ್ಲೇ ’ದೇವಾ, ನಾನು ಸಿದ್ದ. ನಾನು ಮಾಡಿದ ಪಾಪಗಳು ನನಗೆ ಅರಿವಾಗಿದೆ. ನೀ ಕೊಟ್ಟ ಶಿಕ್ಷೆ ಅನುಭವಿಸಲು ಸಿದ್ದ’ ಎಂಬ ನಿರ್ಧಾರ ಮೈತಳೆದು ಕೈಜೋಡಿಸಿ ನಮಸ್ಕರಿಸಿ ನುಡಿದೆ ’ ಮುಂದಿನ ಜೀವಿತದಲ್ಲಾದರೂ ಉತ್ತಮ ಜೀವನ ನೆಡೆಸುವಂತೆ ನನಗೆ ದಾರಿ ತೋರು ’ ಎಂದೆ... ಅಷ್ಟೇ!

ಬೆಡ್ಡಿನ ಬಳಿಯಿಂದ ಹೊರನೆಡೆದ ಡಾಕ್ಟರ್ ರೋಗಿಯ ಮನೆಯವರ ಬಳಿ ನುಡಿಯುತ್ತಿದ್ದರು ’ಸಾರಿ. ಪರಿಸ್ಥಿತಿ ನಮ್ಮ ಕೈ ಮೀರಿತ್ತು. ದೇಹದ ಒಳಗೆ ಏನು ಹಿಂಸೆ ಅನುಭವಿಸುತ್ತಿದ್ದರೋ ತಿಳಿಯಲಿಲ್ಲ. ಆಕಡೆ ಈಕಡೆ ಕೈ ತೋರಿಸುತ್ತಿದ್ದರು. ನಮಸ್ಕಾರ ಮಾಡುತ್ತಿದ್ದರು. ಒಮ್ಮೆ ನಗು ಮತ್ತೊಮ್ಮೆ ಅಳು ಹೀಗೆ. ಮಾತನಾಡುವ ಪ್ರಯತ್ನ ನೆಡೆಸುತ್ತಿದ್ದರೆ ಏನೂ ಅರ್ಥವಾಗುತ್ತಿರಲಿಲ್ಲ. ಗಂಟಲು ಬ್ಲಾಕ್ ಆಗಿತ್ತು. ನಾವು ಕೊಟ್ಟ ಔಷದಿಗೆ ರೆಸ್ಪಾಂಡ್ ಮಾಡಲಿಲ್ಲ........ ನಾನು ಪೇಪರ್ಸ್ ಸಿದ್ದ ಮಾಡುತ್ತೇನೆ. ನೀವು ಕೌಂಟರ್’ನಲ್ಲಿ ದುಡ್ಡು ಕಟ್ಟಿ, ಬಾಡಿ ತೆಗೆದುಕೊಂಡು ಹೋಗಿ’......