ಕಾಲ್ಚೆಂಡಿನ ವಿಶ್ವ ಸ್ಪರ್ಧೆ ೨೦೨೨...

ಕಾಲ್ಚೆಂಡಿನ ವಿಶ್ವ ಸ್ಪರ್ಧೆ ೨೦೨೨...

ಫೀಫಾ ವರ್ಲ್ಡ್ ಕಪ್ ಪುಟ್ಬಾಲ್ 2022 ಕತಾರ್- ಪೀಲೆ - ಮರಡೋನ - ರೊನಾಲ್ಡೊ - ಮೆಸ್ಸಿ. ಮನುಷ್ಯನ ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ. ಕ್ರೀಡೆಗಳು ಮಾನವನ ಎಲ್ಲಾ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು  ಅಗ್ನಿ ಪರೀಕ್ಷೆಗೆ ಒಳಪಡಿಸುತ್ತವೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಪುಟ್ಬಾಲ್. 200 ಕ್ಕೂ ಹೆಚ್ಚು ದೇಶಗಳಲ್ಲಿ ಪುಟ್ಬಾಲ್ ಆಟ ಆಡಲಾಗುತ್ತದೆ. 11+11 ಜನರ ನಡುವಿನ 90 ನಿಮಿಷಗಳ ಈ ಆಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಅಭಿಮಾನಿಗಳಲ್ಲಿ ರೋಮಾಚನ ಉಂಟುಮಾಡುತ್ತದೆ.

ಕಾಲ್ಚೆಂಡಿನಾಟವೇ ಒಂದು ರೋಮಾಂಚ‌ನ. ಇನ್ನು ಆ ಆಟದ ವಿಶ್ವ ಶ್ರೇಷ್ಠ ಆಟಗಾರರ ಆಡುವುದನ್ನು ನೋಡುವುದೇ ಒಂದು ಹಬ್ಬ. ದಯವಿಟ್ಟು ಸಮಯಾವಕಾಶ ಕಲ್ಪಿಸಿಕೊಂಡು ಸಾಧ್ಯವಾದಷ್ಟು ಪಂದ್ಯಗಳನ್ನು ವೀಕ್ಷಿಸಿ. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಕತಾರ್ ದೇಶ ಇದನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿದೆ.

ಅದರಲ್ಲಿ ಬ್ರೆಜಿಲ್ ದೇಶದ ಪೀಲೆ ಮತ್ತು ಅರ್ಜೆಂಟೈನಾ ದೇಶದ ಡಿಯಾಗೋ ಮರಡೋನ ಪುಟ್ಬಾಲ್ ದಂತ ಕಥೆಗಳು ಎಂದು ಕರೆಯಲಾಗುತ್ತದೆ. ಪಂದ್ಯದ ಒಳಗೆ ಹೊಕ್ಕಿ ನೋಡಿದರೆ ಖಂಡಿತ ಒಂದು ದಿವ್ಯ ದರ್ಶನದ ಅನುಭವ ನೀಡುತ್ತದೆ. ಅವರಲ್ಲಿ ಮರಡೋನ  ಚೆಂಡನ್ನು ಆಟವಾಡಿಸುತ್ತಿರಲಿಲ್ಲ ಚೆಂಡೇ ಆತನ ಕಾಲಿಗೆ ಅಂಟಿಕೊಂಡಿರುವಂತೆ ಭಾಸವಾಗುತ್ತಿತ್ತು. 1986 ಮತ್ತು 1990 ಎರಡು ವಿಶ್ವಕಪ್ ಪುಟ್ಬಾಲ್ ನಲ್ಲಿ ಆತನ ಆಟವನ್ನು ದೂರದರ್ಶನದ ನೇರ ಪ್ರಸಾರದಲ್ಲಿ ನೋಡಿದ್ದೇನೆ.

ತನ್ನ ತಂಡದ ಗೋಲ್ ಕೀಪರ್ ನಿಂದ ಚೆಂಡನ್ನು ಪಡೆದು ಏಕಾಂಗಿಯಾಗಿ ಎದುರಾಳಿ ತಂಡದ 10 ಮಂದಿಯನ್ನು ತನ್ನ ಆಟದ ಚಾಕಚಕ್ಯತೆಯಿಂದ ವಂಚಿಸಿ 11 ನೇ ಆಟಗಾರ ಗೋಲ್ ಕೀಪರ್ ಗೂ ಸಿಗದಂತೆ ಚೆಂಡನ್ನು ಗೋಲ್ ಪೋಸ್ಟ್ ಒಳಗೆ ತೂರಿಸಿದ ಅತ್ಯದ್ಭುತ ಆಟಗಾರ ಮರಡೋನ. ಕೆಲವು ಕ್ಷೇತ್ರಗಳಲ್ಲಿ ಕೆಲವೇ ಕೆಲವರು ಸ್ವಾಭಾವಿಕವಾಗಿ ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತಾರೆ. ಮೋಟಾರು ರೇಸ್ ನಲ್ಲಿ ಮೈಕೆಲ್ ಶೂಮೇಕರ್,

ಕ್ರಿಕೆಟ್ ನಲ್ಲಿ ಡಾನ್ ಬ್ರಾಡ್ಮನ್, ಹಾಕಿಯಲ್ಲಿ ಧ್ಯಾನ್ ಚಂದ್, ಓಟದಲ್ಲಿ ಹುಸೇನ್ ಬೋಲ್ಟ್, ಟೆನಿಸ್‌ ನಲ್ಲಿ ರೋಜರ್ ಫೆಡರರ್, ನಡಾಲ್, ಜೊಕೊವಿಕ್‌, ಮಾಸ್ಟರ್ ಆರ್ಟ್ಸ್ ನಲ್ಲಿ ‌ಬ್ರೂಸ್ಲಿ, ಜಿಮ್ನಾಸ್ಟಿಕ್ಸ್ ನ ನಾಡಿಯಾ ಕೊಮೇನಿ, ಸಾಹಿತ್ಯದಲ್ಲಿ ಷೇಕ್ಸ್‌ಪಿಯರ್, ಲಿಯೋ ಟಾಲ್ಸ್ಟಾಯ್, ವಿಜ್ಞಾನದಲ್ಲಿ ಆಲ್ಬರ್ಟ್ ಐನ್ಸ್ಟೈನ್, ಚಿತ್ರಕಲೆಯ ಲಿಯೊನಾರ್ಡೊ ಡಾವಿಂಚಿ ಹೀಗೆ ಇನ್ನೂ ಕೆಲವರು ಈ ಪಟ್ಟಿಯಲ್ಲಿ ಇದ್ದಾರೆ.

ಫ್ರಾನ್ಸ್ ನ ನೆಪೋಲಿಯನ್ ಬೊನಾಪಾರ್ಟೆ ಒಂದು ಮಾತು ಹೇಳುತ್ತಾನೆ. " ಹುಟ್ಟಿದ ಪ್ರತಿ ಮನುಷ್ಯ ತನ್ನ ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ತನ್ನ ಗುರುತುಗಳನ್ನು ಬಿಟ್ಟು ಹೋಗಬೇಕು " ಎಂದು. ಆದರೆ ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬದುಕು ಅದರಲ್ಲೂ ನಾವು ಪ್ರತಿನಿತ್ಯ ಹತ್ತಿರದಿಂದ ನೋಡುವ ನಮ್ಮ ಭಾರತೀಯ ಬಹುತೇಕ ಯುವಕರ ಜೀವನ ಮನೆ ಕಾರು ಮುಂತಾದ ವಸ್ತುಗಳನ್ನು ಪಡೆಯಲು ಬ್ಯಾಂಕಿನ ಇಎಮ್ಐ ಕಟ್ಟಲು ತಮ್ಮ ಜೀವಿತದ ಅತ್ಯಮೂಲ್ಯ 20 ರಿಂದ 60 ವರ್ಷಗಳ ನಡುವಿನ 40 ವರ್ಷಗಳನ್ನು ಕಳೆದು ಬಿಡುತ್ತಾರೆ. ಅದನ್ನು ಮೀರಿ ಕ್ರಿಯಾತ್ಮಕ ಮತ್ತು ಪ್ರಯೋಗಾತ್ಮಕ ಜೀವನ ನಡೆಸುವವರು ಏನಾದರೂ ಸಾಧನೆ ಮಾಡಲು ಸಾಧ್ಯ.

ಭಾರತ ಈ ವಿಶ್ವದರ್ಜೆಯ ಪುಟ್ಬಾಲ್ ಆಟದಲ್ಲಿ ನೂರಕ್ಕೂ ಹೆಚ್ಚು ಮೇಲ್ಪಟ್ಟ ರ್ಯಾಂಕಿಗ್ ಹೊಂದಿದೆ. 140 ಕೋಟಿ ಜನಸಂಖ್ಯೆಯ ಈ ದೇಶದ ಜನರ ದೈಹಿಕ ಮತ್ತು ಮಾನಸಿಕ ಗುಣಮಟ್ಟ ಇನ್ನೂ ಸಾಕಷ್ಟು ಉತ್ತಮಗೊಳ್ಳಬೇಕಿದೆ. ರಾಜಕೀಯ ಮತ್ತು ಆಡಳಿತಾತ್ಮಕ ಭ್ರಷ್ಟಾಚಾರ ಎಲ್ಲವನ್ನೂ ಆಪೋಷನ ತೆಗೆದುಕೊಳ್ಳುತ್ತಿದೆ. ಬೇಗನೆ ನಾವು ಎಚ್ಚೆತ್ತುಕೊಳ್ಳಬೇಕಿದೆ. 

ಡಿಯಾಗೋ ಮರಡೋನ ಅರ್ಜೆಂಟೈನಾದ ಸ್ಲಂನಲ್ಲಿ ಬೆಳೆದು, ರಸ್ತೆಗಳಲ್ಲಿ ಚೆಂಡಿನಾಟ ಆಡುತ್ತಾ ಪುಟ್ಬಾಲ್ ದಂತಕಥೆಯಾದ ರೋಚಕ ಇತಿಹಾಸ ನಮ್ಮ ಕಣ್ಣ ಮುಂದಿದೆ. ಹಾಗೆಯೇ ನಮ್ಮ ‌ದೇಶದಲ್ಲಿ‌ ಈ ರೀತಿಯ ಎಲ್ಲಾ ಕ್ಷೇತ್ರಗಳ ಅನೇಕ ಮರಡೋನಾಗಳು ಇದ್ದಾರೆ. ಅವರ ಮೇಲೆ ಬೆಳಕು ಚೆಲ್ಲುವ ಅವರನ್ನು ವಿಶ್ವಮಟ್ಟಕ್ಕೆ ಬೆಳೆಸುವ ವ್ಯವಸ್ಥೆಯನ್ನು ನಮ್ಮ ಆಡಳಿತ ಯಂತ್ರ ರೂಪಿಸಬೇಕಿದೆ. ಕತಾರ್ ನಲ್ಲಿ ನಡೆಯುತ್ತಿರು ವಿಶ್ವಕಪ್ ಪುಟ್ ಬಾಲ್ ಪಂದ್ಯಾವಳಿ ಭಾರತದ ಒಟ್ಟಾರೆ ಕ್ರೀಡಾ ಸಾಮರ್ಥ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಒಂದು ಉತ್ತಮ ಅವಕಾಶ ಕಲ್ಪಿಸಿದೆ.

ಯಾರೇ ಒಪ್ಪಬಹುದು ಅಥವಾ ನಿರಾಕರಿಸಬಹುದು, ನೇರವಾಗಿ ಹೇಳಬೇಕೆಂದರೆ ಭಾರತೀಯರ ದೈಹಿಕ ಸಾಮರ್ಥ್ಯ ಯುರೋಪಿಯನ್, ಪರ್ಶಿಯನ್, ಅರೇಬಿಯನ್, ಆಫ್ರಿಕನ್, ಚೈನೀಸ್, ಕೊರಿಯನ್‌, ಅಮೆರಿಕನ್ ಜನರಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಗುಣಮಟ್ಟ ಹೊಂದಿದೆ. ಅದಕ್ಕೆ ಕಾರಣ ಇಲ್ಲಿನ ಅನುವಂಶಿಕ ಗುಣಗಳೋ, ಆಹಾರ ಕ್ರಮವೋ, ಸಾಂಪ್ರದಾಯಿಕ ಜೀವನಶೈಲಿಯೋ ಅಥವಾ ಸ್ವಾಭಾವಿಕ ಕಾರಣಗಳೋ ಏನೋ ಇರಬೇಕು. 

ಆದರೆ ಭಾರತದಲ್ಲಿ ಕೆಲವೇ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿದರೆ ವಿಶ್ವದರ್ಜೆ ಇನ್ನೂ ಸಾಧ್ಯವಾಗಿಲ್ಲ ಮತ್ತು ಅದರಲ್ಲೂ ದೈಹಿಕ ಕ್ಷಮತೆ ಬಯಸುವ ಕ್ಷೇತ್ರಗಳಲ್ಲಿ ತುಂಬಾ ಹಿಂದುಳಿದಿದ್ದೇವೆ. ಇತ್ತೀಚೆಗೆ ಕುಸ್ತಿ, ವೇಯ್ಟ್ ಲಿಪ್ಟಿಂಗ್, ಬಾಕ್ಸಿಂಗ್ ಮುಂತಾದ ಕ್ಷೇತ್ರಗಳಲ್ಲಿ ಸ್ವಲ್ಪ ಸಮಾಧಾನಕರ ಸಾಧನೆ ಕಂಡುಬರುತ್ತಿದೆ.

ಕೆಲವು ವರ್ಷಗಳ ಹಿಂದೆ ಒಂದಷ್ಟು ಹೆಚ್ಚಿನ ದೈಹಿಕ ಕ್ಷಮತೆ ಹೊಂದಿರುವ ಆದಿವಾಸಿ ಮತ್ತು ಸಿದ್ದಿ ಜನಾಂಗದ ಕೆಲವು ಯುವಕ ಯುವತಿಯರನ್ನು ಗುರುತಿಸಿ ಅವರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಯೋಜನೆ ರೂಪಿಸಲಾಯಿತು. ಆದರೆ ಎಲ್ಲಾ ಯೋಜನೆಗಳಂತೆ ಸರ್ಕಾರದ ಈ ಯೋಜನೆಯೂ ನಿರೀಕ್ಷಿತ ಫಲ ನೀಡಲಿಲ್ಲ. ಟೆಂಡರ್ ಮುಖಾಂತರ ಗ್ರಾಂಗಳ ಲೆಕ್ಕದಲ್ಲಿ ಏನೋ ಧರ್ಮಕ್ಕೆ ಕೊಟ್ಟಂತೆ ಊಟ ಕೊಟ್ಟರೆ ಅಂತರರಾಷ್ಟ್ರೀಯ ಸಾಧನೆ ಸಾಧ್ಯವೇ. ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಿಂದ ವಿಶ್ವ ಚಾಂಪಿಯನ್ ಆಗುತ್ತದೆಯೇ ?

ಒಮ್ಮೆ ಭಾರತದ ಹಾಕಿ ತಂಡದ ಮುಖ್ಯ ಕೋಚ್ ಹರೇಂದ್ರಸಿಂಗ್ ಎಂಬುವವರು ದೇಶದ ಅತ್ಯುನ್ನತ ಕ್ರೀಡಾ ಸಂಸ್ಥೆ SAI ( Sports authority of India ) ನ ಊಟದ ಗುಣಮಟ್ಟ ಕಳಪೆಯಾಗಿದ್ದು ಹುಳುಗಳು ಬಿದ್ದಿದ್ದವು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇನ್ನು ಸಾಧನೆಯ ಮಾತೆಲ್ಲಿ?

ಇದರ ಅರ್ಥ ನಮ್ಮ ದೇಶವನ್ನು ನಿಂದಿಸುವುದಲ್ಲ. ಬದಲಾಗಿ  ಭಾರತ ಆದಷ್ಟು ಬೇಗ ‌ವಿಶ್ವದ ಕ್ರೀಡಾ ಶಕ್ತಿಯಾಗಿ ಬೆಳೆಯಲಿ ಅದರಲ್ಲಿ ನಮ್ಮ ಮಕ್ಕಳು ಭಾಗವಹಿಸುವಂತಾಗಲಿ ಎಂಬ ಆಶಯ ಅಷ್ಟೆ. ಅತ್ಯುತ್ತಮ ತರಬೇತಿ ಮತ್ತು ತಂತ್ರಜ್ಞಾನದ ಉಪಯೋಗ ಪಡೆದರೆ ಭಾರತೀಯರು ತಮ್ಮ ದೈಹಿಕ ನ್ಯೂನತೆಗಳನ್ನು ಮೀರಿ ನಿಲ್ಲುವ ಎಲ್ಲಾ ಸಾಧ್ಯತೆ ಇದೆ. ಆದರೆ ಕೇವಲ ಕ್ರೀಡೆಗೆ ಹೆಚ್ಚಿನ ಹಣ ನೀಡಿದ ಮಾತ್ರಕ್ಕೆ ಇದು ಸಾಧ್ಯವಿಲ್ಲ. ಇಡೀ ವ್ಯವಸ್ಥೆ ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಬೇಕು.

ಜಾತಿ ಧರ್ಮ ಹಣ ಹೆಂಡದ ಮೂಲಕ ‌ಚುನಾವಣೆ ಗೆಲ್ಲುವ, ಅವರಿಗೆ ಮತ ನೀಡುವ, ಸರ್ಕಾರದ ಅಧಿಕಾರ ಅನುಭವಿಸುತ್ತಾ ಭ್ರಷ್ಟಾಚಾರದಿಂದ ಶ್ರೀಮಂತರಾಗುವ ಜನರಿಗೆ ಕ್ರಿಯಾತ್ಮಕತೆ, ಸಾಧನೆ, ವ್ಯಕ್ತಿತ್ವ ವಿಕಸನ ಎಂಬ ಪದಗಳೇ ಅರ್ಥವಾಗುತ್ತಿಲ್ಲ. ಇನ್ನೂ ಮುಂದಾದರು ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗೋಣ ಎಂದು ಆಶಿಸುತ್ತಾ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ