ಕಾಲ್ದಾರಿ

ಕಾಲ್ದಾರಿ

ಪುಸ್ತಕದ ಲೇಖಕ/ಕವಿಯ ಹೆಸರು
ಅಗ್ರಹಾರ ಕೃಷ್ಣಮೂರ್ತಿ
ಪ್ರಕಾಶಕರು
ಪಲ್ಲವ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೩೦.೦೦, ಮುದ್ರಣ: ೨೦೨೪

ಅಗ್ರಹಾರ ಕೃಷ್ಣಮೂರ್ತಿಯವರು ಬರೆದ ವಿಮರ್ಶೆಗಳ ಸಂಕಲನ ‘ಕಾಲ್ದಾರ್’. ಈ ಕೃತಿಗೆ ಖ್ಯಾತ ವಿಮರ್ಶಕ ರಾಜೇಂದ್ರ ಚೆನ್ನಿಯವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯ ಕಂಡ ಕೆಲವು ಸಾಲುಗಳು ನಿಮ್ಮ ಓದಿಗಾಗಿ…

“ಅಗ್ರಹಾರ ಕೃಷ್ಣಮೂರ್ತಿಯರದು ಅತ್ಯಂತ ವಿಶಿಷ್ಟವಾದ ವ್ಯಕ್ತಿತ್ವ. ಅನೇಕಾನೇಕ ಕಾರಣಗಳಿಂದಾಗಿ ಕಳೆದ ನಾಲ್ಕು ದಶಕಗಳಲ್ಲಿ ಕರ್ನಾಟಕದಲ್ಲಿ ನಡೆದ ಬಹುಮುಖ್ಯ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಅಥವಾ ಸಾಕ್ಷಿಯಾಗಿದ್ದಾರೆ. ಪ್ರೊಫೆಸರ್ ಎಂ.ಡಿ.ಎನ್. ಅವರ ಸಲಹೆ ಮೇರೆಗೆ ಕರ್ನಾಟಕ ವಿಧಾನಸಭೆಯಲ್ಲಿ ಘೋಷಣೆ ಕೂಗಿ ಬಂಧನಕ್ಕೆ ಒಳಪಟ್ಟವರಲ್ಲಿ ಇವರೊಬ್ಬರು. ಬಸವಲಿಂಗಪ್ಪನವರ ಬೂಸಾ ಪ್ರಕರಣದ ಗಲಾಟೆಗಳಲ್ಲಿ ಕೂಡ ಭಾಗಿಗಳಾಗಿದ್ದರು. ಕನ್ನಡದ ಬಹುಮುಖ್ಯ ಸಂಕಿರಣಗಳಿಗೆ ಸಾಕ್ಷಿಯಾಗಿದ್ದವರು.

ಲಂಕೇಶ್ ಪತ್ರಿಕೆಗಾಗಿ ಕಾಲಂ ಬರೆದು ಇಂಥ ಅನೇಕ ಸಂಕಿರಣದ ಬಗ್ಗೆ ಭಿಡೆ ಇಲ್ಲದೆ ವ್ಯಂಗ್ಯವಾಗಿ ಬರೆದವರು (ಇದರಲ್ಲಿ ಕೆಲವು ಈ ಕೃತಿಯಲ್ಲಿವೆ). ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾಗಿ ಭಾರತೀಯ ಬರಹಗಾರರು ಹಾಗೂ ಭಾಷೆಗಳ ಸಂಪರ್ಕದಲ್ಲಿ ಬಂದವರು. ಜ್ಞಾನಪೀಠ ಪ್ರಶಸ್ತಿ ವಿಜೇತ ಅಸ್ಸಾಮಿ ಲೇಖಕ ವೀರೇಂದ್ರಕುಮಾರ ಭಟ್ಟಾಚಾರ್ಯ ಅವರು ಗೋಪಾಲಕೃಷ್ಣ ಅಡಿಗರನ್ನು ಭೇಟಿಯಾದ ಸಂದರ್ಭದಲ್ಲಿ ಜೊತೆಗಿದ್ದವರು. ಡಿ.ಅರ್ ನಾಗರಾಜರ ಪರಮಾಪ್ತರು.

ಅವರ ಸಂಸ್ಕೃತಿ ಕಥನ ಕೃತಿಯನ್ನು ಸಂಪಾದಿಸಿದವರು. ಭಾರತದ ಬಹುಪಾಲು ಪ್ರಾಂತಗಳಿಗೆ ಅನೇಕ ದೇಶಗಳಿಗೆ ಹೋಗಿ ಬಂದವರು. ಸ್ಥಳೀಯ ಸಂಸ್ಕೃತಿಗಳು ಹಾಗೂ ಭಾಷೆಗಳ ಅಧ್ಯಯನ ಮಾಡಿದವರು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆಶ್ಚರ್ಯವೆನಿಸುವಷ್ಟು ವೈವಿಧ್ಯಮಯ ಅನುಭವಗಳನ್ನು ಪಡೆದವರು. ಕೆಲವೇ ವ್ಯಕ್ತಿಗಳಿಗೆ ಇಂಥದು ಒದಗಿಬರುತ್ತದೆ. ಅವರು ಅಪರೂಪದ ಚಂದವಾದ ಕವಿತೆಗಳನ್ನು ಬರೆದಿದ್ದಾರೆ. ಅವರ ವ್ಯಕ್ತಿತ್ವದ ಈ ಎಲ್ಲಾ ಅಂಶಗಳು ಪ್ರಸ್ತುತ ಕೃತಿಯಲ್ಲಿ ಮೈಗೂಡಿಕೊಂಡಿವೆ. ಮುನ್ನುಡಿಗಳು ಮತ್ತು ಬರಹಗಳಲ್ಲಿ ಕೃತಿಗಳು ಹಾಗೂ ಕೃತಿಕಾರರೇ ಪ್ರಧಾನರಾಗುವುದರಿಂದ ಲೇಖಕರದೇ ಆದ ಸ್ವಂತ ವ್ಯಕ್ತಿತ್ವವು ಅಂಚಿನಲ್ಲಿರುತ್ತದೆ. ಆದರೆ ಇಲ್ಲಿಯ ಬರಹಗಳ ವಿಶಿಷ್ಟತೆ ಹಾಗೂ ಮಹತ್ವವೆಂದರೆ ಪ್ರಾಯಶಃ ಪ್ರತಿಯೊಂದು ಬರಹದಲ್ಲಿಯೂ ಅಗ್ರಹಾರರ ಸೂಕ್ಷ್ಮವಾದ ವಿಸ್ತಾರವಾದ ವಿಮರ್ಶಾಪ್ರಜ್ಞೆ, ಸಾಮಾಜಿಕ ಕಾಳಜಿಗಳು, ಅನೇಕ ವಿಷಯಗಳಲ್ಲಿ ಇರುವ ಗಂಭೀರ ಆಸಕ್ತಿ ಮತ್ತು ಪರಿಣತಿ, ಪ್ರಗತಿಪರ ಧೋರಣೆ ಇವೆಲ್ಲವೂ ಮಿಳಿತವಾಗಿವೆ. ಹೀಗಾಗಿ ಈ ಬರಹಗಳನ್ನು ಓದುವುದೆಂದರೆ ಅನೇಕ ಕೃತಿಗಳು ಹಾಗೂ ಬರಹಗಾರರ ಜೊತೆಗೆ ಸಂಭಾಷಣೆಯಲ್ಲಿ ತೊಡಗಿದಂತೆ ಮಾತ್ರವಲ್ಲ, ಅಗ್ರಹಾರರ ಜೊತೆಗೆ ಕೂಡ ಅರ್ಥಪೂರ್ಣ ಸಂಭಾಷಣೆ ನಡೆಸಿದಂತೆ ಅನುಭವವಾಗುತ್ತದೆ. ಕಾರಣವೆಂದರೆ ಅಗ್ರಹಾರರದೇ ಆಗಿರುವ ಮುಕ್ತ ಶೈಲಿ. ಮುನ್ನುಡಿಗಳಲ್ಲಿ ಸಾಮಾನ್ಯವಾಗಿ ಕಾಣುವ ಸೋಗಿನ ಅತಿ ಗಾಂಭೀರ್ಯ, ಹಿತೋಪದೇಶದ ಅಶೀರ್ವಚನ ಶೈಲಿ ಇದಾವುದೂ ಇಲ್ಲಿ ಕಾಣುವುದಿಲ್ಲ. ಅಗ್ರಹಾರರು ತಮ್ಮ ನಂಬಿಕೆಗಳನ್ನು, ಲೋಕದೃಷ್ಟಿಯನ್ನು ಮರೆಮಾಚುವುದಿಲ್ಲ. ಕೃತಿಗಳಿಗೆ ಮುಕ್ತವಾಗಿ ಸ್ಪಂದಿಸುತ್ತಾ ತಮ್ಮ ತೆರೆದ ಮನಸ್ಸಿನ ಪ್ರತಿಕ್ರಿಯೆಗಳನ್ನು ಅವರು ದಾಖಲಿಸುತ್ತಾರೆ.

ಉದಾಹರಣೆಗೆ ಎಲ್. ಹನುಮಂತಯ್ಯನವರ ಸಾಹಿತ್ಯದ ಕುರಿತು ಡಾ. ಲಕ್ಷ್ಮಿನಾರಾಯಣಸ್ವಾಮಿ ಅವರು ಬರೆದ ಮಹಾಪ್ರಬಂಧ 'ನೂಲ ಏಣಿಯ ನಡಿಗೆ' ಕೃತಿಯ ಬಗೆಗಿನ ಲೇಖನವನ್ನು ನೋಡಬಹುದು. ಪ್ರಾರಂಭದಲ್ಲಿಯೇ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ದಲಿತ ಬಂಡಾಯ ಕಾವ್ಯ 'ಸಾರ್ವಜನಿಕ ಕಾವ್ಯ' ಅಂಥ ಕಾವ್ಯಕ್ಕೆ ಭಾಷಣದ ಸ್ವರೂಪವಿದ್ದು, ಮಾಧುರ್ಯರಹಿತ ಹಾಡುಗಳಾಗಿರುತ್ತವೆ ಎಂದು ಹೇಳಿದ್ದರ ಬಗ್ಗೆ ಅಗ್ರಹಾರ ದೀರ್ಘವಾಗಿ ಚರ್ಚಿಸುತ್ತಾರೆ. "ಸಕಲಂಕಾರಗಳನ್ನು ಹೊತ್ತ ಮಾಧುರ್ಯಭರಿತ ಕಾವ್ಯವನ್ನು ಅವಲಂಬಿಸಿ, ಸಾರ್ವಜನಿಕವಾಗಿ ಹಾಡಿ ಹಸಿವನ್ನು ಹಿಂಗಿಸಿಕೊಳ್ಳುವುದು ಸಾಧ್ಯವಾಗುವುದಾದರೆ, 'ಯಾರಿಗೆ ಬಂತು ಎಲ್ಲಿಗೆ ಬಂತು...' "ದಲಿತರು ಬಂದರು ದಾರಿ ಬಿಡಿ' ಎಂಬ ನಿರಲಂಕಾರ, ಮಾಧುರ್ಯರಹಿತ ಕಾವ್ಯದ ಮೂಲಕ ಸಾರ್ವಜನಿಕರ ಎದೆ ತಟ್ಟಿದರೆ ನಷ್ಟವೇನು?” ಎನ್ನುವುದು ಅಗ್ರಹಾರರ ವಾದ. ಅವರ ಆಕ್ರೋಶವು ನ್ಯಾಯಯುತವಾಗಿದೆ. ಜೊತೆಗೆ ಅವರು ಯಾವ ಕಾವ್ಯವು ಸಾರ್ವಜನಿಕ ಅಲ್ಲ ಎನ್ನುವ ವಿವರಣೆಯು ತುಂಬಾ ಪ್ರಸ್ತುತವಾಗಿದೆ.

ಇದು ಅಗ್ರಹಾರರ ಶೈಲಿಯ ಒಂದು ಝಲಕು. ಮಹಾಪ್ರಂಬಧದ ವಿಮರ್ಶಾತ್ಮಕವಾದ ವಿವರಣೆ ಕೊಡುವಾಗಲೇ ಅನೇಕ ಗಂಭೀರ ಪ್ರಶ್ನೆಗಳನ್ನು ಅವರು ಎತ್ತುತ್ತಾರೆ. ಲೇಖನದ ಕೊನೆಗೆ ಅವರು ಬರೆಯುತ್ತಾರೆ; "ನಗುವಿನ ಶಕ್ತಿಗೂ ಬದುಕಿನ ಶಕ್ತಿಗೂ ಇರುವ ತಾಳಿಕೆಯ ಗುಣ ದಲಿತ ಜಗತ್ತಿನಲ್ಲಿ ಯಾವ ಸ್ವರೂಪದಲ್ಲಿರುತ್ತದೆ ಎಂಬುದು ಕುತೂಹಲಕಾರಿಯಾಗಿರುತ್ತದೆ."

ಅಗ್ರಹಾರರಿಗೆ ಪರಿಸರ ಒಂದು ಪ್ರಮುಖ ಕಾಳಜಿಯಾಗಿದೆ. ಟಿ. ಎಸ್. ವಿವೇಕಾನಂದರ 'ಭೂಮಿಗೀತೆ' ಕೃತಿಯ ಬಗೆಗಿರುವ ಬರಹವು ಈ ಕಾಳಜಿಯು ಆರ್ಥಿಕ, ಸಾಮಾಜಿಕ ಅಧಿಕಾರ ರಾಜಕೀಯದ ವಿವಿದ ಸ್ತರಗಳನ್ನು ಒಳಗೊಂಡಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ವಿವೇಕಾನಂದರ ಅದ್ಭುತ ಬರಹಗಳ ಮೂಲಕವೇ ಅಗ್ರಹಾರರು ನೀರಿನ ರಾಜಕಾರಣವನ್ನು ಚರ್ಚಿಸುತ್ತಾರೆ, ಪ್ರಯಾಣ ಮಾಡುವಾಗ ಯಾವ ವರ್ಗದವರು ಹೇಗೆ ನೀರು ಕುಡಿಯುತ್ತಾರೆ ಎನ್ನುವ ಚರ್ಚೆಯೂ ಇಲ್ಲಿದೆ! ಪರಿಸರ ರಕ್ಷಣೆಯ ಬಗೆಗಿನ ಬಹುಮುಖ್ಯ ವಾದವೆಂದರೆ ಪರಿಸರ ಪರವಾದ ಹೋರಾಟವು ವರ್ಗಹೋರಾಟವೇ ಆಗಿರುತ್ತದೆ. ಇಂದು ಒಂದು 'ಸರ್ವಭಕ್ಷಕ' ವರ್ಗವು ಕೇವಲ ಬೂಟಾಟಿಕೆಯ ಪರಿಸರ ಕಾಳಜಿ ವ್ಯಕ್ತಪಡಿಸುತ್ತದೆ. ಆದರೆ ಅದೊಂದು ಜೀವನ ಕ್ರಮ. ಅಂಥ ಕಾಳಜಿಯು ಸಮಾಜದ ಅಂಚಿನ ವರ್ಗಗಳಲ್ಲಿದೆ. ವಿವೇಕಾನಂದರು ಇದರ ಬಗ್ಗೆ ಮಾಡುವ ಚರ್ಚೆಯ ಜೊತೆಗೆ ಅಗ್ರಹಾರರ ಮಾತುಗಳೂ ಅತ್ಯಂತ ಪ್ರಸ್ತುತವಾಗಿವೆ. ಈ ಕೃತಿಯ ಎಲ್ಲಾ ಬರಹಗಳ ಲಕ್ಷಣವೆಂದರೆ ಅಗ್ರಹಾರರು ಮಾಡುವ ವಿಸ್ತಾರವಾದ ಚರ್ಚೆಗಳು. ಕೃತಿಗಳ ಯಾವ ವಿವರಗಳನ್ನು ಅಲಕ್ಷಿಸದೇ, ಅದರ ಒಳಹೊಕ್ಕು ವಿವರಿಸಿ ಜೊತೆಗೆ ತಮ್ಮದೇ ಆದ ವ್ಯಾಪಕ ಓದು ಮತ್ತು ಒಳನೋಟಗಳನ್ನು ಸೇರಿಸುತ್ತಾರೆ. ಇದರ ಇನ್ನೊಂದು ಉದಾಹರಣೆಯೆಂದರೆ ಜಗದೀಶ ಕೊಪ್ಪ ಅವರು ದೇವದಾಸಿಯರ ಬಗ್ಗೆ ಬರೆದಿರುವ ಕೃತಿಯ ಅವಲೋಕನ, ಜಗದೀಶ ಕೊಪ್ಪ ಅವರು ಅಪಾರ ಕಾಳಜಿಯಿಂದ ಸಂಶೋಧನೆ ಮಾಡಿ ಬರೆದ ಕೃತಿಯನ್ನು ವ್ಯಾಖ್ಯಾನಿಸುತ್ತಾ ಅಗ್ರಹಾರರು ಧಾರ್ಮಿಕ ಸಂಸ್ಥೆಗಳು, ಲೈಂಗಿಕ ಶೋಷಣೆ, ಲಿಂಗ ಅಸಮಾನತೆ ಕುರಿತು ಹರಿತವಾದ ವಿಶ್ಲೇಷಣೆ ಮಾಡುತ್ತಾರೆ. ನಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ದುರಂತಗಳ ಬಗ್ಗೆ ಸಹಾನುಕಂಪ ಮತ್ತು ಆಕ್ರೋಶಗಳನ್ನು ಒಂದುಗೂಡಿಸಿ ಬರೆದಿರುವ ಈ ಬರಹ ತುಂಬಾ ಪ್ರಭಾವಿಯಾಗಿದೆ.

ಗಂಗನಘಟ್ಟ ಅವರ 'ಉಪ್ಪುಚ್ಚಿಮುಳ್ಳು' ಕಥಾ ಸಂಗ್ರಹದ ಬಗ್ಗೆ ಬರೆಯುತ್ತಾ ಈ ಕತೆಗಳು ಹೇಗೆ ನಾವು ಕಂಡಿರದ ಮಹಿಳಾ ಸಮಾಜವನ್ನು ಕಟ್ಟಿಕೊಡುತ್ತವೆ ಎಂದು ವ್ಯಾಖ್ಯಾನಿಸುತ್ತಾರೆ. ಅವು ಹೇಗೆ ಏಕಕಾಲಕ್ಕೆ ಸುಂದರ ಕಲಾಕೃತಿಗಳು ಮತ್ತು ಸಾಮಾಜಿಕ ರಾಜಕೀಯ ಕತೆಗಳು ಆಗಿವೆ ಎನ್ನುವುದನ್ನು ದೀರ್ಘವಾದ ಟಿಪ್ಪಣಿಗಳ ಮೂಲಕ ವಿವರಿಸುತ್ತಾರೆ. ಹಾಗೆಯೇ ಗುರುಪ್ರಸಾದರ ಕತೆಗಳ ಬಗ್ಗೆ. ವಿಶೇಷವೆಂದರೆ ಅಗ್ರಹಾರರು ಚರ್ಚಿಸುವ ಬಹುಪಾಲು ಕೃತಿಗಳಲ್ಲಿ ಸ್ತ್ರೀಯರದೇ ಮುಖ್ಯಪಾತ್ರ. ಇತ್ತೀಚಿನ ದಲಿತ ಬಂಡಾಯ ಬರಹಗಳಲ್ಲಿ ಇಂಥ ಸ್ತ್ರೀಕೇಂದ್ರಿತ ಅರಿವು ಪ್ರಖರವಾಗಿರುವುದರ ಬಗ್ಗೆ ಅಗ್ರಹಾರರ ಮುನ್ನುಡಿಗಳು ಗಮನ ಸೆಳೆಯುತ್ತವೆ.

ಈ ಕೃತಿಯಲ್ಲಿ ಅಗ್ರಹಾರರ ಅದ್ಭುತ ಸೃಜನಶೀಲ ಪ್ರತಿಭೆಯ ದ್ಯೋತಕವಾಗಿ ಕಂಡಿದ್ದು 'ಭಾವಕೋಶ ಅರಳುವ ಪರಿ' ಎನ್ನುವ ಬರಹ. ಪ್ರಸಿದ್ದ ಬರಹಗಾರ ಹರುಕಿ ಮುರಕಮಿ 'ಆನೆಯೊಂದರ ಕಣ್ಮರೆ' ಕತೆಯೊಂದಿಗೆ ಈ ಬರಹ ಆರಂಭವಾಗುತ್ತದೆ. ವರ್ಷಗಳ ಹಿಂದೆ ಕಬಿನಿ ಜಲಾಶಯದ ಬಳಿ ಕಾಡಿನಲ್ಲಿ ಭೇಟಿಯಾದ ಮಾವುತನ ಮಾತುಗಳು ನೆನಪಾಗುತ್ತವೆ. ಅವನಿಗೆ ಅವರು ಐದು ರೂಪಾಯಿ ಭಕ್ಷೀಸು ಕೊಟ್ಟಾಗ ಅವನು 'ನಾನು ಫಾರಿನ್ನಿಗೆ ಹೋಗಿ ಬಂದವನು' ಎಂದು ಅಸಮಾಧಾನ ತೋರಿಸುತ್ತಾನೆ. ಹುಡುಕುತ್ತ ಹೋದ ಹಾಗೆ ಅವನು ಹೇಳಿದ್ದು ನಿಜ. ನೆಹರು ಅವರು ಜಪಾನಿನ ಮಕ್ಕಳಿಗಾಗಿ 'ಇಂದಿರಾ' ಹೆಸರಿನ ಆನೆಯನ್ನು ಕಳಿಸಿಕೊಟ್ಟಾಗ ಅದರ ಜೊತೆಗೆ ಹೋಗಿದ್ದ ಮಾವುತರಲ್ಲಿ ಇವನೂ ಒಬ್ಬನು ಎನ್ನುವುದು ಗೊತ್ತಾಗುತ್ತದೆ. ಮಹಾಯುದ್ಧ, ಜಪಾನ್, ನೆಹರು ಹೀಗೆ ಈ ಬರಹ ಚಾಚುತ್ತ ಹೋಗುತ್ತದೆ. ಅಗ್ರಹಾರರು ತಮ್ಮ ನೆನಪುಗಳ ಉಗ್ರಾಣದಿಂದ ಏನೆಲ್ಲಾ ಹುಡುಕಿ ಬರೆಯಬಲ್ಲರು ಎನ್ನುವುದಕ್ಕೆ ಈ ಸುಂದರ ಬರಹ ಸಾಕ್ಷಿಯಾಗಿದೆ. ಮುನ್ನುಡಿಗಳು ಕೃತಿಗಳಿಗಿಂತ ಉದ್ದವಾಗಿರಬಾರದು ಮುನ್ನುಡಿಗಳ ಸಂಗ್ರಹವಾದ ಈ ಕೃತಿಗೆ ನನ್ನ ಮುನ್ನುಡಿ ಅತಿ ಉದ್ದವಾಗಬಾರದು ಎಂದು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಚರ್ಚಿಸಬೇಕಾದ ಅನೇಕ ಲೇಖನಗಳಿವೆ. ತಮ್ಮ ಮುನ್ನುಡಿಗಳು ಹಾಗೂ ಬರಹಗಳ ಮೂಲಕ ಅನೇಕ ಕೃತಿಗಳನ್ನು ವಿಮರ್ಶಿಸುತ್ತಾ ತುಂಬಾ ವಿಸ್ತಾರವಾದ ಚರ್ಚೆಗಳನ್ನು ಅಗ್ರಹಾರರು ನಮ್ಮೆದುರಿಗೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಓದಿ ಆ ಚರ್ಚೆಗಳನ್ನು ಮುಂದುವರೆಸುವುದು ಅತ್ಯಂತ ಅವಶ್ಯಕವಾಗಿದೆ.”