ಕಾಲ ಕೆಟ್ಟು ಹೋಗಿದೆಯೇ?

ಕಾಲ ಕೆಟ್ಟು ಹೋಗಿದೆಯೇ?

ಬರಹ

ಇತ್ತೀಚೆಗೆ ಇಂತಾ ಮಾತು ಕಡಿಮೆಯಾಗಿದೆ.

" ಕಾಲ ಕೆಟ್ಟು ಹೋಯ್ತು, ನಮ್ಮ ಕಾಲದಲ್ಲಿ ಹೀಗಿರಲಿಲ್ಲ". ಈಗ್ಗೆ ಹತ್ತು ಇಪ್ಪತ್ತು ವರ್ಷಗಳಲ್ಲಿ ೬೦-೭೦ ರ ಗಡಿಯಜನ ಸಾಮಾನ್ಯವಾಗಿ ಆಡುತ್ತಿದ್ದ ಮಾತು ಇದು. ಬಹುಷ: ಅದು ಪರಿವರ್ತನೆಯ ಕಾಲ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಅಸ್ಪೃಶ್ಯತಾ ಆಚರಣೆ ಬಹಳ ವಾಗಿತ್ತು. ಹರಿಜನರೆನಿಸಿಕೊಂಡವರು ದೂರದಿಂದಲೇ ಉಳಿದವರೊಡನೆ ಮಾತನಾಡುತ್ತಿದ್ದ ಕಾಲವದು. ನೆನಸಿಕೊಂಡರೆ ನನಗೆ ಮೈ ಝುಂ ಎನ್ನುತ್ತೆ. " ಎಲ್ಲಾ ಶ್ರಮದ ಕೆಲಸಗಳಿಗೆ ಹರಿಜನ ಆಳು ಬೇಕಾಗಿತ್ತು. ಪಾಪ! ಆತ ಶ್ರದ್ಧೆಯಿಂದ ತೋಟ-ಹೊಲ-ಗದ್ದೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಒಂದಾಣೆ ಬೇಕಾದರೆ ಒಡೆಯನ ಮನೆ ಬಾಗಿಲಿಗೆ ಬರಬೇಕಿದ್ದರೆ ಅದೆಷ್ಟು ಸಂಕೋಚ ಪಡುತ್ತಿದ್ದ!! ಮನೆಯ ಹೊರಗೆ ದೂರದಲ್ಲೆಲ್ಲೋ ನಿಂತು ಯಜಮಾನ ಮನೆಯ ಹೊರಗೆ ಬರುವುದನ್ನೇ ಕಾಯುತ್ತಾ ಯಜಮಾನ ಹೊರಗೆ ಬಂದಾಗ ತಲೆ ತಗ್ಗಿಸಿಯೇ " ಎಂಡ್ರು ಗೆ ಮೈಗೆ ಉಸಾರಿಲ್ಲಾ, ಡಾಕುಟ್ರು ಅತ್ರ ಕರ್ಕಂಡ್ ಓಗ್ಬೇಕಾಯಿತ್ತು, ವಸೀ ದುಡ್ಡು ಬೇಕಾಯಿತ್ತು, ದಣಿ"

-" ಏನ್ಲಾ, ನಿನ್ನೆಂಡ್ರು ಗುಂಡ್ರುಗೂಳಿಯಾಗವ್ಳೆ, ನಿನ್ನೆ ಇನ್ನೂ ನೋಡೀವ್ನಿ. ಸುಳ್ಳು ಬೊಗೊಳ್ತೀಯ?"

- "ಇಲ್ಲಾದಣಿ ನಿನ್ನೆ ಸಂಜೆಮ್ಯಾಗೆ ಆಸಿಗೆ ಇಡ್ದವಳು ಇನ್ನೂ ಎದ್ದಿಲ್ಲ, ನನ್ನ ಕಿರೇಮಗಾ ತ್ವಾಟ ತಕ್ಕೆ ಅತ್ಕೊಂಡೇ ಬಂದಾ." ಇಷ್ಟು ಕೇಳಿದಮೇಲೆ ಒಂದು ಐದು ರೂಪಾಯಿ ಕೊಟ್ಟು, ಅದನ್ನು ಲೆಕ್ಖಕ್ಕೆ ಬರೆದುಕೊಂಡು ಹೆಂಡತಿಯನ್ನು ಕೂಗಿ           " ದ್ಯಾವಂಗೆ ಏನಾದ್ರೂ ಮಿಕ್ಕಿದ್ದರೆ ಕೊಡೆ" ಅಂದ್ರೆ ಆ ಯಮ್ಮ ನಿನ್ನೆ ಮಾಡಿ ಮಿಕ್ಕಿದ್ದ ಅಡಿಗೆಯನ್ನು ಒಂದು ಅಡಿಕೆ ಎಲೆ ಮೇಲೆ ಹಾಕಿ ದೂರದಲ್ಲಿ ಇಡುತ್ತಿದ್ದ ದಿನಗಳನ್ನು ನಾನು ಮರೆತೇ ಇಲ್ಲ. ನನ್ನ ಮಕ್ಕಳು ನೋಡೇ ಇಲ್ಲ. ಇದೇ ಅಲ್ವಾ ಪರಿವರ್ತನೆ?

ಅವತ್ತಿನ ಕಾಲದಲ್ಲಿ ಹರಿಜನರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದವರು ಯಾರು?

ಊರಿನಲ್ಲಿ ಎಲ್ಲರ ಆಸ್ತಿಯನ್ನು ಲಪಟಾಯಿಸಿಕೊಂಡು ಶ್ರೀಮಂತನ ಬಿರುದು ಹೊತ್ತಿದ್ದ "ದಣಿ". ಆ ದಣಿ ಬ್ರಾಹ್ಮಣ ನಾಗಬಹುದು, ವಕ್ಕಲೀಗನಾಗಬಹುದು, ಲಿಂಗಾಯಿತನಾಗಬಹುದು, ಊರಿನಲ್ಲಿದ್ದ ಮುಸಲ್ಮಾನ ನಾಗಬಹುದು. ಹರಿಜನೇತರ ಯಾವುದೇ ಜಾತಿಯವನಿರಬಹುದು [ ಸಾಮಾನ್ಯವಾಗಿ ಕರೆಯುವಂತೆ ಮೇಲ್ಜಾತಿಯ ಧನಿಕರು]

ಅಬ್ಭಾ! ಆ ದಣಿಗಳ ಕಾಟದಿಂದ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ನಮ್ಮಂತವರೂ ಅಲ್ಪ ಸ್ವಲ್ಪ ನೋವು ಅನುಭವಿಸಿಲ್ಲ. ಅದರಿಂದ ನನಗಂತೂ ಸ್ಪಷ್ಟವಾಗಿ ಗೊತ್ತು, ಅಸ್ಪೃಶ್ಯತಾ ಆಚರಣೆ ಬಹಳವಾಗಿ ಆಚರಣೆಯಲ್ಲಿದ್ದುದು ಮೇಲ್ಜಾತಿಯ ಧನಿಕರ ಮನೆಯಲ್ಲಿ. ಆದರೆ ಬರುಬರುತ್ತಾ ಆ ಆಪಾದನೆ ಇಡೀ ಬ್ರಾಹ್ಮಣ ಜಾತಿಗೆ ಬಂದುದು ಬ್ರಾಹ್ಮಣರಿಗೆ ಒಂದು ಶಾಪ.

ಹಾಗೆ ನೋಡಿದರೆ ನಾನು ಬ್ರಾಹ್ಮಣ ಜಾತಿಯ ದಲಿತನ ಮನೆಯಲ್ಲಿ ಹುಟ್ಟಿದವನು. ಅಂದರೆ ಅರ್ಥವಾಗಲಿಲ್ಲ ಅಲ್ಲವೇ? ಆಗ ಬಡ ಬ್ರಾಹ್ಮಣನೆಂಬ ಸಾಮಾನ್ಯ ಪದ ಬಳಕೆಯಲ್ಲಿತ್ತು. ಅಂತಹ ಅತ್ಯಂತ ಕಡುಬಡವನ ಮನೆಯಲ್ಲಿ ಹುಟ್ಟಿದವನು.ನಮ್ಮಪ್ಪ ನಮ್ಮ ಅಜ್ಜನ ಶ್ರಾದ್ಧವನ್ನು ಮಾಡಬೇಕಿದ್ದರೆ ಅಂದಿಗೆ ಐದು ರೂಪಾಯಿಗೆ ಗತಿ ಇರುತ್ತಿರಲಿಲ್ಲ. ಆ ಐದು ರೂಪಾಯಿಯನ್ನು ನಮ್ಮ ಮನೆಯಲ್ಲಿದ್ದ ಒಂದು ಬೆಳ್ಳಿ ಬಟ್ಟಲನ್ನು ಅಡವಿಟ್ಟು ತರಬೇಕಾಗಿತ್ತು. ಯಾರಿಂದ ಗೊತ್ತೇ? ಹತ್ತಿರದ ಬಂಧುಗಳಿಂದಲೇ. ಆ ಐದು ರೂಪಾಯಿಗೆ ತಿಂಗಳಿಗೆ ಒಂದಾಣೆ ಬಡ್ಡಿಯಂತೆ ಲೆಕ್ಖ. ನಮ್ಮಪ್ಪ ಕಾಡಿಗೆ ಹೋಗಿ ಮುತ್ತುಗದ ಎಲೆ ತಂದು ಅದನ್ನು ಮನೆಯವರೆಲ್ಲಾ ಕುಳಿತು ಹಚ್ಚಿ ಮಾರಿದರೆ ಬರುತ್ತಿದುದು ಎಷ್ಟು ಗೊತ್ತೆ? ನೂರಕ್ಕೆ ಹೆಚ್ಚೆಂದರೆ ಹನ್ನೆರಡಾಣೆ. ಹಾಗೆ ದುಡಿದು ಹೊಟ್ಟೆ ಹೊರೆದು ಬಡ್ಡಿ ಕಟ್ಟಿ ಜೀವನ ಮಾಡ ಬೇಕಿತ್ತು!

ಇದು ಒಂದು ಸ್ಯಾಂಪಲ್ ಅಷ್ಟೆ. ದಿನಗಳು ಕಳೆದಂತೆಲ್ಲಾ ಕಳೆದ ಮೂರು ನಾಲ್ಕು ದಶಕಗಳಲ್ಲಿ ಅದೆಷ್ಟು ಸುಧಾರಣೆ ಯಾಗುತ್ತಾ ಬಂತು! ಬಡವ-ಬಲ್ಲಿದನ ಮಧ್ಯೆ ಕಂದಕ ಕಮ್ಮಿಯಾಗುತ್ತಾ ಬಂತು. ಬಡವನ ನಾಲಿಗೆಗೆ ಶಕ್ತಿ ಬರುತ್ತಾ ಬರುತ್ತಾ, ಬಲ್ಲಿದನಆಟಕ್ಕೆ ನಿಯಂತ್ರಣ ಬರಲೇ ಬೇಕಾಯ್ತು. ಆಗ ಬಲ್ಲಿದನ ಬಾಯಲ್ಲಿ ಹೊರಟ ಮಾತು " ಕಾಲ ಕೆಟ್ಟು ಹೋಯ್ತು"                                ನಮ್ಮ ಪೀಳಿಗೆ ಅಂತ್ಯ ಕಾಣೋ ಮುಂಚೆ ಹಿಂದಿನ ಸತ್ಯಸಂಗತಿಗಳನ್ನು ರಟ್ಟು ಮಾಡಲೇ ಬೇಕು. ಇಲ್ಲವಾದರೆ ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಧ್ವೇಷಿಸುತ್ತಾ ಸಮಾಜದ ನೆಮ್ಮದಿ ಹಾಳು ಮಾಡುವ ಅವಿವೇಕಿಗಳಿಗೇನೂ ಕೊರತೆಯಿಲ್ಲ.

ಒಳ್ಳೆಯಜನ ಎಲ್ಲ ಸಮುದಾಯದಲ್ಲೂ ಆಗಲೂ ಇದ್ದರು. ಈಗಲೂ ಇದ್ದಾರೆ. ರಾಕ್ಷಸೀ ಪ್ರವೃತ್ತಿಯಜನ ಮೇಲ್ವರ್ಗದಲ್ಲಿ ಕೆಲವರಿದ್ದುದು ಸುಳ್ಳಲ್ಲ. ಆದರೆ ಆಗಲೂ ಮೇಲ್ ಜಾತಿಯಲ್ಲಿ ಶೋಷಣೆಗೆ ಒಳಗಾದವರು ಇದ್ದರು. ಈಗಲೂ ಇದ್ದಾರೆ. ಒಂದು ಸತ್ಯದರ್ಶನ ಕಣ್ಮುಂದೆ ಇದೆ. ಎಲ್ಲಾ ವರ್ಗಗಳಲ್ಲೂ ಅಂದು ಶೋಷಣೆಗೆ ಒಳಗಾಗಿದ್ದವರು ಅತ್ಯಂತ ಕಷ್ಟದ ದಿನಗಳನ್ನು ಕಳೆದು ಪಾಪ ಆತಲೆಮಾರು ಅಂತ್ಯಕಂಡೇ ಬಿಟ್ಟಿತು. ಆದರೆ ಅವರ ಕುಡಿಗಳನ್ನು ದೇವರು ರಕ್ಷಿಸಿದ. ಅವರ ಒಳ್ಳೆಯತನ ರಕ್ಷಿಸಿತು. ಈಗ ಗುಡಿಸಲು ಗಳಿಂದ ಬಂದ ಮೇರು ವ್ಯಕ್ತಿಗಳನ್ನು ಕಾಣ ಬಹುದು. ಅಂದು ಮಹಲುಗಳಲ್ಲಿ ವಿಲಾಸ ಜೀವನ ನಡೆಸುತ್ತಿದ್ದವರು, ಇಂದು ಅತ್ಯಂತ ಕಳಪೆ ಜೀವನ ನಡೆಸುವ ಪರಿಸ್ಥಿತಿಯು ನಿರ್ಮಾಣ ವಾಗಿರುವುದು ಸುಳ್ಳಲ್ಲ. ಹಾಗೆಂದು ಕಾಲ ಕೆಟ್ಟು ಹೋಯ್ತು ಅಂದ್ರೆ ಆಗುತ್ತಾ?

     "ಪರಿವರ್ತನೆ ಯುಗಧರ್ಮ".

ಕೆಲವು ವಿಚಾರಗಳನ್ನು ಬರೆಯಲೂ ಹೇಸಿಗೆ ಯಾಗುತ್ತೆ. ಊರಿಗೆ ದೊಡ್ದವರು ಯಾರು? ಪಟೇಲರು, ಶಾನುಭೋಗರು.

ಅವರುಗಳಿಗೆ ಮನೆಯಲ್ಲಿ ಒಬ್ಬಳು ಪಟ್ತದರಾಣಿ.ತೋಟದಲ್ಲೊಬ್ಬಳು ಇಟ್ಟುಕೊಂಡವಳು. ಅವಳು ತೋಟದ ಕೆಲಸಕ್ಕೂ ಆಯ್ತು . ಇವನ ಸಂಗಕ್ಕೂ ಆಯ್ತು. ಇಟ್ಟುಕೊಂಡವಳು ಬೇರೆ ಜಾತಿಯವಳೇ. ಎರಡೆರಡು ಸಂಸಾರ ಮಾಡುವುದೆಂದರೆ ಪ್ರತಿಷ್ಠೆಯ ವಿಚಾರ. ಊರಿನ ದೇವರು-ಜಾತ್ರೆ ಎಂದಾಗ ಈ ಪುಣ್ಯಾತ್ಮರ ಮಾತೇ ಅಂತಿಮ. ಇವರಿಗೇ ಮೊದಲ ತೀರ್ಥ.ಇವರು ಮಾಡಿದ್ದೆಲ್ಲಾ ರೈಟ್. ಯಾವಾಗ "ಯಾಕೆ ಸ್ವಾಮಿ ಹೀಗ್ ಮಾಡ್ತೀರಿ? ಅನ್ನೋ ಧ್ವನಿ ಹುಟ್ಟಿಕೊಂಡಾಗ  ಬಂದ ಮಾತು-" ಕಾಲ ಕೆಟ್ಟು ಹೋಯ್ತು" 

        ಈಗಲೂ ದೊಡ್ದ ದೊಡ್ಡ ಜಮೀನ್ದಾರರು ಹೇಳ್ತಾ ಇರ್ತಾರೆ-" ಕೂಲಿ ಆಳುಗಳೇ ಸಿಗುವುದಿಲ್ಲ"

ನಗರಗಳಲ್ಲಿ ಗೃಹಿಣಿಯರು ಹೇಳ್ತಾ ಇರ್ತಾರೆ   " ಕೆಲಸದವರು ಬರ್ತಾನೇ ಇಲ್ಲಾರೀ"

ನಾನು ನನ್ನ ಪತ್ನಿಗೆ ಹೇಳಿರುವೆ-" ನೀನು ಕೊಡುವ ಮುನ್ನೂರು ರೂಪಾಯಿಗೆ ಯಾರು ಬರಲು ಸಾಧ್ಯ? ಬಂದರೆ ಅವರ ಜೀವನ ನಡೆಯ ಬಾರದೇ? ಅವರಿಗೆ ಒಂದು ಸಾವಿರ ರೂಪಾಯಿ ತಿಂಗಳಿಗೆ ಕೊಡು, ನಿನ್ನಂತ  ಮೂರು ಮನೆಯಲ್ಲಿ ಆಕೆ ಮಾಡಿದರೆ ಅವಳ ಜೀವನವಾದರೂ ಹೊರೆಯುತ್ತೆ.

ಸತ್ಯ ಕಹಿಯಾಗಿರುತ್ತೆ! ಏನಂತೀರಾ?