ಕಾಲ ನಿಲ್ಲುವುದಿಲ್ಲ !

ಕಾಲ ನಿಲ್ಲುವುದಿಲ್ಲ !

ಕವನ

ಎನ್ನ ಒಲವಿನ ಸವಿಯೆ ಬಳಿಗೋಡಿ ಬಂದಿರುವೆ ಎಲ್ಲಿರುವೆ ನನ್ನ ಚೆಲುವೆ 

ದೂರದೂರಿನ ಚೆಲುವ ಗಡಿದಾಟಿ ಬಂದಿರುವೆ ಸಿಗಲಿಲ್ಲ ನಿನ್ನ ಒಲುಮೆ

ಬಂದಿರುವ ಸಮಯವದು ತಂಗಾಳಿ ಬೀಸಿತ್ತು ಮಳೆ ಹೊಯ್ವ ರಭಸ ಕಂಡೆ

ಹಳ್ಳಕೊಳ್ಳವ ದಾಟಿ ಗುಡ್ಡಬೆಟ್ಟವ ಹತ್ತಿ ತಿರುವುಗಳ ಎಡೆಯಲ್ಲೆ ನಡೆದು ಬಂದೆ

 

ತೋಯ್ದಿರುವ ತನುವಿನಲಿ ಮುದುಡಿರುವ ಮನದಲ್ಲಿ ನಿನ್ನದೇ ಪ್ರತಿರೂಪವಿರಲು

ಹಸಿಬಯಕೆ ಒಳಗೊಳಗೆ ಹುಸಿಯಾಗೆ ಕುಳಿತಿರಲು ಸವಿಗನಸು ನನ್ನ ಒಡಲು

ಒದ್ದೆ ಅಂಗಳದಲ್ಲಿ ನಾಯಿಮರಿಯೊಂದಿರಲು ನೋಡುತಲಿ ಓಡುತಲೆ ಬರಲು

ಸಣ್ಣ ದನಿಯಲಿ ಕಿರುಚಿ ಹೊಸ ಅತಿಥಿ ಬಂದಿಹನು ಎನುತ ಯಜಮಾನನ ಕರೆದು

 

ಬಾಗಿಲನು ತೆರೆಯುತಲಿ ಹಿರಿಯರೆಲ್ಲರು ಬರುತ ಚಾವಡಿಯಲ್ಲಿಗೆ ನನ್ನನು ಕರೆದು

ಚಾಪೆಯನು ಹಾಸುತಲಿ ನನ್ನನು ಕುಳ್ಳಿರಿಸಿದರು ಚಳಿಯ ನಡುವೆಯೇ ಬೆಗರು

ಮೈಯ ಮೇಲಿನ ಬಟ್ಟೆಯು ಒದ್ದೆಯಾದುದ ಕಂಡು ಹೊಸಬಟ್ಟೆ ತಂದು ಕೊಡಲು

ಹಸಿಯ ಬಟ್ಟೆಯ ತೆಗೆದು ಹೊಸ ಬಟ್ಟೆಯ ಉಡುತ ಖುಷಿಯಾಯ್ತು ಮನವು ಇಂದು

 

ಮನೆಯೆಲ್ಲ ತೋರಿಸುತ ಪಡಸಾಲೆ ಇದುಯೆನುತ ತಿರುಗಾಡಿಸುತ್ತ ಮನೆಯ ತಿರುಗಿ

ಬಂದಿರುವ ಕಾರಣವ ತಿಳಿಸುತಲೇ ಹೇಳಿದೆನು ಮುಸಿಯಲೇ ನಕ್ಕರವರು ಕರಗಿ

ಮತ್ತೆ ಕರೆಯುತ ನನ್ನ ಚಾವಡಿಲಿ ಕೂರಿಸುತ ಮನೆಯ ಸಂಗತಿಯನು ಕೇಳುತಲಿ

ವಿಷಯ ಕೇಳಿದ ಅವರು ಖುಷಿಯಲ್ಲಿ ಹೇಳಿದರು ಮಗಳಿಗೆ ಅಗಬಹುದು ಜೋಡಿ

 

ಒಳಗಿಂದ ಕರೆಯಿಸಿದರು ಎದುರಿನಲ್ಲೆ ಕುಳ್ಳಿರಿಸಿ ಮಾತುಕತೆಯೊಳು ಜೊತೆಗೆ ಹಾಡಿ

ನಾನು ಕೆಲಸದಲಿರುವೆ ನೀನು ಕೆಲಸದಲಿರುವೆ ನಮ್ಮಿಬ್ಬರದು ಪಕ್ಕಾಜೊತೆ ಬಂಡಿ

ಎಳೆದಷ್ಟು ಓಡುವುದು ಓಟನಿಲ್ಲದುಯೆಂದು ಹೇಳುತಲೇ ಹೋದಳು ಚೆಲುವಿ

ಮತ್ತೆ ಎಳೆಯಲು ನಾನು ಇರುವೆನೆಂದಳು ಅವಳು ಜೊತೆಗಾರ ನಿನೆಂದು ಇರುವಿ

 

ಅವಳು ಹೇಳಿದ ಮಾತ ಕೇಳುತಲೆ ಹೋದೆನು ಆಗಬಹುದೆನುತ ತಲೆಯ ಅಲ್ಲಾಡಿಸಿ

ಚೆಲುವು ಕಣ್ಣನು ಕುಕ್ಕಿ ನನ್ನ ಹೃದಯವ ಹೊಕ್ಕು ಅವಳ ಪ್ರೀತಿಯ ಮೊದಲು ಬಯಸಿ

ಒಪ್ಪಿಗೆಯ ನೀಡುತಲಿ ಕೈಯ ಹಿಡಿದೆವು ಅಂದು ಹಿರಿಯರೆಲ್ಲರು ನಗುತಲಿದ್ದರು ಖುಷಿಲಿ

ವರನೊಲುಮೆ ದಿಬ್ಬಣವು ಬಂತು ಓಲಗವು ಜೊತೆಯಾಯ್ತು ತಾಳಿ ಕಟ್ಟಿದೆ ಮದುವೆಲಿ

 

ರಾತ್ರಿ ಹುಣ್ಣಿಮೆಯ ಚಂದ್ರ ಚಂದ್ರಮಂಚಕೆ ಬರಲು ಸವಿಯಾಯ್ತು ನಮ್ಮಿಬ್ಬರ ಒಲವು

ಹೀಗೆ ಸಾಗುತಲಿರಲು ಸಂಸಾರದೊಳಗಿನ ನೊಗವು ಇಣುಕಿದವು ಎರಡು ಕೂಸು

ಕಾಲ ನಿಲ್ಲುವುದಿಲ್ಲ ವಯಸ್ಸು ಕಾಣುತಿರಲು ನಮಗೆ ಮೊಮ್ಮಕ್ಕಳೂ ಬರಲಿ ಕನಸು

ಅದೇ ದಿನವು ಬಂದಾಯ್ತು ಖುಷಿಯೆಲ್ಲ ನಮದಾಗಲು ಬದುಕಿಂದ ದೂರ ಹೊರಟು

 

ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್