ಕಾಲ ಪ್ರಯಾಣ - ಭಾಗ ೨

ಕಾಲ ಪ್ರಯಾಣ - ಭಾಗ ೨

ಬರಹ

ಭಾಗ ೧ ಇಲ್ಲಿದೆ

ಭಾಗ ೨

ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ ಋತ್ವಿಕನ ಕಾಲುಗಳಬಳಿ ಕುಸಿದುಬಿದ್ದೆ. ನಾನು ಓದಿದ್ದ 'ಸಯನ್ಸ್ ಫಿಕ್ಷನ್' ಕತೆಗಳು ನಿಜ ಎನ್ನುವಂತೆ ಕಾಲ ಪ್ರಯಾಣ ನನ್ನನ್ನು 'ಡಿಸೋರಿಯಂಟ್' ಮಾಡಿದೆ ಎಂದು ಯೋಚಿಸುವಷ್ಟು ತ್ರಾಣವಿತ್ತು. ಆ ಕ್ಷಣದ ನಂತರ ಎಲ್ಲವೂ ಕತ್ತಲಾಯಿತು.

ನನ್ನ ಕಣ್ತೆರೆದಾಗ ಯಾವುದೋ ಮನೆಯ ಒಂದು ಕೋಣೆಯಲ್ಲಿ, ಅಟ್ಟಣಿಗೆಯ ಮೇಲೆ ಹಾಸಿದ್ದ ಮೆತ್ತನೆಯ ಹಾಸಿಗೆಯಲ್ಲಿ ಮಲಗಿದ್ದೆ. ಸುತ್ತ ಯಾರೂ ಕಾಣಿಸಲಿಲ್ಲ. ಎದ್ದು ಕೋಣೆಯಿಂದ ಹೊರಬಂದೆ. ಆಚೆ ಬೀದಿಯಿಂದ ಜನರ ಓಡಾಡುವ ಗದ್ದಲ ಒಳಬರುತ್ತಿತ್ತು. ಮತ್ತೊಂದು ಕಡೆ ಅಡುಗೆ ಮನೆಯಂತಿದ್ದ ಮೂಲೆಯೊಂದರಲ್ಲಿ ಒಲೆಗುಂಡದ ಮೇಲೆ ಮಣ್ಣಿನ ಮಡಿಕೆಗಳನ್ನಿಟ್ಟು ಒಬ್ಬಾಕೆ ಅಡಿಗೆ ಮಾಡುತ್ತಿದ್ದರು. ಅದನ್ನು ಕಂಡು ನನಗೆ ಹೊಟ್ಟೆ ಹಸಿವಾಗಿರುವುದು ನೆನಪಾಯಿತು.

ಆಡಿಗೆ ಮಾಡುತ್ತಿದ್ದಾಕೆ ನನ್ನನ್ನು ನೋಡಿದರೂ ಮಾತನಾಡಲಿಲ್ಲ. ಬಾಗಿಲಾಚೆ ಹೋಗಿ ಸಣ್ಣನೆಯ ಧ್ವನಿಯಲ್ಲಿ ಏನೋ ಮಾತನಾಡಿದ ಶಬ್ಧ ಕೇಳಿಸಿತು. ಕೆಲ ಕ್ಷಣಗಳ ನಂತರ ಆ ಋತ್ವಿಕರೊಡನೆ ಒಳಬಂದು, ಅಡಿಗೆ ಮೂಲೆಗೆ ಮರಳಿದರು. ಋತ್ವಿಕರು ನನ್ನ ಕಡೆ ಬಂದು ನಾನರಿಯದ ಭಾಷೆಯಲ್ಲಿ ಏನೋ ಮಾತನಾಡಿದರು. ನನ್ನನ್ನು ನಾನೇ ನೋಡಿಕೊಂಡೆ - ಪಾಶ್ಚಿಮಾತ್ಯ ಶೈಲಿಯ ಶರ್ಟನ್ನು ಧರಿಸಿದ್ದರೂ ನನ್ನ ಎಂದಿನ ಅಭ್ಯಾಸದಂತೆ ಸ್ನಾನದ ನಂತರ ಪಂಚೆಯನ್ನೇ ಉಟ್ಟಿದ್ದೆ. ನನ್ನ ಬಟ್ಟೆಗಳು ಇನ್ನೂ ನನ್ನ ಮೇಲೇ ಇದ್ದವು. ಒಂದು ಕ್ಷಣದಲ್ಲಿ ಹಲವಾರು ಯೋಚನೆಗಳು ನನ್ನ ತಲೆ ಹಾಯ್ದು ಹೋದವು:

"ಕಾಲ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವುದಂತೂ ಖಚಿತ. ಇವರ ಭಾಷೆಯನ್ನೂ ಅರಿಯದವ ನಾನು. ಇಲ್ಲಿಗೆ ಹೇಗೆ ಬಂದೆ ಎಂದು ತಿಳಿದಿಲ್ಲ. ಇಲ್ಲಿಂದ ಹೇಗೆ ಹಿಂತಿರುಗುವುದು? ನನ್ನ ಕಾಲದಲ್ಲಿ ನನ್ನ ಮನೆ, ಮಠ, ಬಂಧು, ಬಳಗ? ಹಿಂತಿರುಗಲಾಗದಿದ್ದರೆ ಇಲ್ಲಿಯೇ ಬದುಕಿ, ಇಲ್ಲಿಯೇ ಸಾಯುವುದೇ? ಕಾಲ ಪ್ರಯಾಣದ ಪರಿಣಾಮಗಳು?" ಅಷ್ಟರಲ್ಲಿ ಮತ್ತೊಂದು ವಿಚಿತ್ರ ವಿಚಾರ ಹೊಳೆಯಿತು "ನನ್ನ ಕಾಲದಲ್ಲಿಯೂ ನಾನಿದ್ದೇನೆಯೇ? ಈ ಕಾಲ ಪ್ರಯಾಣ ಎಂಥದ್ದು ಎಂದು ಅರಿತವರಾರು?" ಈ ವಿಚಾರಗಳು ಮುಗಿಯುವಷ್ಟರಲ್ಲಿ ಮತ್ತಷ್ಟು ವಿಚಾರಗಳು - "ಇದೇನು ಬರೀ ಕಾಲ ಪ್ರಯಾಣವೋ, ಅತವ ನಾನೇನಾದರೂ ಮತ್ತೊಂದು ಲೋಕಕ್ಕೇ ಬಂದಿರುವೆನೋ? ಕಾಲ ಪ್ರಯಾಣ ಸಾಧ್ಯವಾದರೆ 'ಪ್ಯಾರಲಲ್ ಯೂನಿವರ್ಸ್' ಏಕೆ ಸಾಧ್ಯವಿಲ್ಲ?"
"ನನ್ನ ಕಾಲದಲ್ಲಿ ನಾನು ಕಾಣೆಯಾದರೆ ನಮ್ಮವರು ನನಗಾಗಿ ಹುಡುಕುವರೆ? ನನ್ನ ಆ ವಿಚಿತ್ರ ಕೋಣೆಯೊಳಗೆ ಯಾರಾದರೂ ಬರಲು ಸಾಧ್ಯವೇ? ಕೊಂಡದಲ್ಲಿ ಮುಳುಗಿದವ ಬೇರೆ - ಯಾರಾದರೂ ಪತ್ತೆ ಹಚ್ಚುವರೇ? ಭಗವಂತ, ನನಗೆ ಮೋಕ್ಷವೆಲ್ಲಿ?" ಇಷ್ಟೆಲ್ಲ ನನ್ನ ತಲೆಯಲ್ಲಿ ಹಾಯ್ದು ಹೋಗಲು ಇದನ್ನು ಬರೆಯುವಷ್ಟು, ಹೇಳುವಷ್ಟು ಅಥವ ಓದುವಷ್ಟು ಸಮಯ ತೆಗೆದುಕೊಳ್ಳಲಿಲ್ಲ. ಒಂದೇ ಕ್ಷಣದಲ್ಲಿ ಹಾಯ್ದು ಹೋದವು.

ನಾನು ಪುನಃ ಎಚ್ಚೆತ್ತುಕೊಂಡಾಗ ನನ್ನೆದುರಿದ್ದ ಮನುಷ್ಯ ಮತ್ತೇನೋ ಹೇಳುತ್ತಿದ್ದರು. ನನ್ನ ಮುಖದ ಶೂನ್ಯ ಭಾವ ನೋಡಿ ಮತ್ತೆ ನಿಧಾನವಾಗಿ ಹೇಳಲಾರಂಭಿಸಿದರು. ಹಿಂದಿ, ಸಂಸ್ಕೃತಗಳನ್ನೂ, ಹಾಗೂ ಆ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಅರಿತಿದ್ದೆ. ಅವರು ಹೇಳುತ್ತಿದ್ದ ಕೆಲವು ಪದಗಳು ಅರ್ಥವಾಗತೊಡಗಿದವು. ಹೊಟ್ಟೆ ಹಸಿದಿತ್ತು, ಇದು ನಿಜವಾಗಿ ಅನ್ಯ ಲೋಕವಾಗಿ ಇವರ ಆಹಾರ ಬೇರೆಯಾಗಿದ್ದರೆ? ನಾನು ಸಸ್ಯಾಹಾರಿ, ಇಲ್ಲಿ ಸಸ್ಯಾಹಾರ ಇಲ್ಲವಾದರೆ? ಎಂದೆಲ್ಲ ಯೋಚನೆ ಬಂದರೂ, ಹೊಟ್ಟೆ ಕೇಳಬೇಕೇ! ಹೊಟ್ಟೆಯ ಕಡೆ ಸನ್ನೆ ಮಾಡಿ ತೋರಿಸಿದೆ. ಅವರು ತಲೆ ಕುಲುಕುತ್ತ ಹಿಂದೆ ತಿರುಗಿ ಕೂಗಿದರು. ಒಂದು ಮಣ್ಣಿನ ಬೋಸಿಯಲ್ಲಿ ಬೆಂದ ಹೆಸರುಬೇಳೆ ಹಾಗು ಲೋಹದ ತಟ್ಟೆಯಲ್ಲಿ ಗಂಜಿಯುಕ್ತ ಅನ್ನವನ್ನು ನನ್ನ ಮುಂದೆ ತಂದಿಟ್ಟರು. ಮನೆಯ ಅಡಿಗೆ ನೆನಪಾಯಿತು - ಅನ್ನ-ಸಾರಿನ ನನ್ನ ಪರಮಪ್ರಿಯ ಅಡಿಗೆ. ಒಟ್ಟಾರೆ ಅನ್ನದಲ್ಲಿ ಬೇರೆಯ ರುಚಿಯಿದ್ದರೂ ಅನ್ನವೇ ಆಗಿತ್ತು. ಹೊಟ್ಟೆ ತುಂಬ ತಿಂದು ಮತ್ತೊಂದು ಪುಟ್ಟ ಮಡಿಕೆಯಲ್ಲಿ ತಂದಿಟ್ಟ ನೀರನ್ನು ಕುಡಿದೆ. ಈಗ ಉಳಿದ ವಿಚಾರಗಳನ್ನು ಯೋಚಿಸುವ ಶಕ್ತಿ ಬಂದಿತ್ತು.

ಋತ್ವಿಕರ ಬಳಿ ಹೋಗಿ ಕುಳಿತೆ. ಅವರು ದೊಡ್ಡ ವಾಕ್ಯಗಳನ್ನು ಪುನಃ ಮಾತನಾಡಿದರು. ಈಗ ಅವರ ಮೇಲೆ ನನ್ನ ಸಂಪೂರ್ಣ ಗಮನ ಇದ್ದರಿಂದಲೋ ಏನೋ ಇನ್ನೂ ಹೆಚ್ಚು ಪದಗಳು ಪರಿಚಿತವಾಗಿ ಕೇಳಿಸಿದವು. ಹೆಚ್ಚು ಕಡಿಮೆ "ನೀನು ಯಾರು? ಎಲ್ಲಿಂದ ಬಂದಿರುವೆ?" ಎಂದು ಕೇಳುತ್ತಿದ್ದಾರೆಂದು ಊಹಿಸಿದೆ. ಇವರಿಗೇನು ಹೇಳಲಿ? ಹೇಗೆ ಹೇಳಲಿ? "ಕಾಲ ಪ್ರಯಾಣ ಮಾಡಿ ಬಂದಿರುವೆ, ನಾನು ಭವಿಷ್ಯ ಮಾನವ" ಎಂದು ಹೇಳಲೇ? ಅದು ಇವರಿಗೆ ಅರ್ಥವಾದೀತೆ? ನಂಬಿಯಾರೆ? ಎಂಬ ಯೋಚನೆಗಳು ಮನಸ್ಸನ್ನು ಕಾಡಹತ್ತಿದವು.

ಕಡೆಗೆ "ದೂರದ ಊರಿನಿಂದ ಬಂದಿರುವವ, ಈ ಊರಿನಲ್ಲಿ ಯಾರೂ ಗೊತ್ತಿಲ್ಲ" ಎಂದು ಹೇಳಲು ನಿರ್ಧರಿಸಿದೆ. ಇದನ್ನು ಹೇಳುವುದಾದರೂ ಹೇಗೆ? ಸಂಸ್ಕೃತ, ಹಿಂದಿ ಹಾಗು ನಾನರಿತ ಇತರ ಭಾಷೆಗಳನ್ನು ಉಪಯೋಗಿಸಿಕೊಂಡು ಒಂದೊಂದಾಗಿ ಪದಗಳನ್ನು ಹೇಳಲಾರಂಭಿಸಿದೆ. ಒಂದೊಂದು ಪದವನ್ನೂ ಎಲ್ಲ ಭಾಷೆಗಳಲ್ಲಿ ಹೇಳತೊಡಗಿದೆ. ಭಾವಹೀನರಾಗಿದ್ದರೆ ಮುಂದಿನ ಭಾಷೆಯಲ್ಲಿ ಹೇಳುತ್ತಿದ್ದೆ, ಅವರ ಮುಖದಲ್ಲಿ ಜ್ಞಾನೋದಯ ಕಂಡಾಗ ಮುಂದಿನ ಪದಕ್ಕೆ ವೃದ್ಧಿಸುತ್ತಿದ್ದೆ. ಹಲವು ನಿಮಿಷಗಳು ಇದೇ ರೀತಿ ಮಾತನಾಡಿದ ನಂತರ ನನ್ನ ಮಾತು ಅವರ ಬುದ್ಧಿಗೆ ತಲುಪಿತೆಂದು ನಿಟ್ಟುಸಿರೆಳೆದೆ. ಈಗ ಇವರಿಗರ್ಥವಾಗುವ ಕೆಲವು ಪದಗಳು ನನ್ನ ಕೈಯಲ್ಲಿದ್ದವು. ಅವನ್ನು ಕಾಳಜಿ ವಹಿಸಿ ನೆನಪಿನಲ್ಲಿಟ್ಟುಕೊಂಡೆ.

ನಾನು ಆಚೆ ಹೋಗಲು ಹೊರಟಾಗ ಋತ್ವಿಕರು ನನ್ನನ್ನು ಅವರ ಕೈ ಅಡ್ಡ ಹಾಕಿ ತಡೆದರು. ಅವರ ಮಾತುಗಳಿಂದ ನನ್ನ ದೇಹಸ್ಥಿತಿ ಇನ್ನೂ ಸರಿಯಾಗಿಲ್ಲವೆಂದೂ, ಹಾಗು ನಾನು ಈಗಲೇ ಹೊರ ಹೋಗಬಾರದೆಂದು ಅರ್ಥವಾಯಿತು. ನಾನು ಎಷ್ಟು ದಿನ ಮಲಗಿದ್ದೆ ಎಂದು ಸನ್ನೆ ಮಾಡಿ ಸೂರ್ಯನಕಡೆ ತೋರಿಸಿ ಕೇಳಿದೆ. ಅವರು ಆರು ಬೆರಳುಗಳನ್ನು ಎತ್ತಿ ಹಿಡಿದರು. "ಅಂದರೆ, ನಾನು ಮುಳುಗಿದ್ದು ಬುಧವಾರದಂದು - ಇವತ್ತು ಶನಿವಾರ ಛೆ, ಛೇ.... ಇದೇನು ಹಿಂದೆ ಬಂದ ಮೇಲೆ ನನ್ನ ಕಾಲದಲ್ಲಿ ಸಮಯ ಗತಿಸುವುದೇ?" ಪುನಃ ಗೊಂದಲವುಂಟಾಗಿ ಅದರ ಬಗ್ಗೆ ಯೋಚಿಸಬಾರದೆಂದು ನಿರ್ಧರಿಸಿದೆ.

ಸುಮಾರು ಒಂದು ವಾರದ ಕಾಲ ನನ್ನನ್ನು ಆಚೆ ಹೋಗಲು ಬಿಡಲಿಲ್ಲ. ದಿನ ನಿತ್ಯ ಎರಡು ಬಾರಿ ಊಟ ತಿಂದು ಮಲಗಿರುತ್ತಿದ್ದೆ. ಋತ್ವಿಕರು ಆಗಾಗ ಔಷಧದೊಡನೆ ಬಂದು ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ಇವರ ಭಾಷೆಯ ಇನ್ನೂ ಹಲವಾರು ಪದಗಳು ಗೊತ್ತಾಗಿ ಈಗ ಇವರೊಂದಿಗೆ ಸಂಭಾಷಣೆ ನಡೆಸಲಾಗುತ್ತಿತ್ತು. ಏಳನೆಯ ದಿನದಂದು ಋತ್ವಿಕರೇ ಬಂದು ನನ್ನನ್ನು ಬಾಗಿಲಿಂದ ಹೊರಗೆ ಕರೆದೊಯ್ದರು. ಅವರೊಂದಿಗೆ ಮಾತನಾಡುತ್ತ ನನಗೆ ಅವರು ತೋರಿಸಿದ ಆರು ಬೆರಳುಗಳು ನಾನು ಮೂರ್ಛೆ ಬಿದ್ದಿದ್ದ ಸಮಯವಲ್ಲ, ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದ್ದ ಸಮಯವೆಂದು ಅರ್ಥವಾಯಿತು.

ಮುಂದೇನು ಮಾಡುವುದು ತಿಳಿಯಲಿಲ್ಲ. ಹಿಂತಿರುಗುವುದು ನನ್ನ ಕೈಯಲ್ಲಿರಲಿಲ್ಲ. ನನ್ನೊಳಗಿನ ಭೂಶೋಧಕ ಎಚ್ಚೆತ್ತುಕೊಂಡಿದ್ದ. ನನ್ನ ಊಹೆ ಸರಿಯಾಗಿದ್ದರೆ ಈ ಜನಾಂಗದ ಬಗ್ಗೆ ಇವರ ಅವಶೇಶಗಳನ್ನು ನೋಡಿ ಊಹಿಸುತ್ತಿದ್ದೆವು. ಈಗ ನನಗೆ ಇವರುಗಳ ಮಧ್ಯೆ ಜೀವನ ಮಾಡಿ ಇವರ ರೀತಿ-ರಿವಾಜುಗಳನ್ನು ತಿಳಿಯುವ ಅವಕಾಶ ದೊರಕಿತ್ತು. ಆದಷ್ಟು ಇವರುಗಳ ಬಗ್ಗೆ ತಿಳಿಯಬೇಕೆಂದು ತೀರ್ಮಾನಿಸಿದೆ. ಜೊತೆಗೆ ನಾನು ಬಹು ಎಚ್ಚರದಿಂದಿರಬೇಕೆಂದೂ ಅರ್ಥಮಾಡಿಕೊಂಡೆ. ಇವರು ಪ್ರಾಚೀನ ಕಾಲದವರಾಗಿ ನನ್ನ ಈ ಕಾಲದ ತಂತ್ರಜ್ಞಾನದಿಂದ ಇವರ ತಾಂತ್ರಿಕ ಅಭಿವೃದ್ಧಿ ಬದಲಾಯಿಸಬಾರದು. ಹಾಗೇನಾದರೂ ಆದಲ್ಲಿ, ಹಾಗೂ ನಾನು ನೋಡಿರುವ 'ಸಯನ್ಸ್ ಫಿಕ್ಶನ್' ನಿಜವಾಗಿದ್ದಲ್ಲಿ, ಇವರ ತಂತ್ರಜ್ಞಾನವೇನಾದರೂ ಬದಲಾದರೆ ನಮ್ಮ-ನಿಮ್ಮ ಭವಿಷ್ಯ - ಅಲ್ಲ ಈಗಿನ ಕಾಲವೇ ಬದಲಾಗಿ, ನಾವೆಲ್ಲರು ಹುಟ್ಟಿಯೇ ಇಲ್ಲದಿರಬಹುದು. ಇದು ಕಾಲ ಪ್ರಯಾಣದ ದೊಡ್ಡ ವಿರೋಧಾಭಾಸ!

ಸರಸ್ವತೀ-ಸಿಂಧು ಜನಾಂಗದ ನಡುವ ಜೀವನ ಮಾಡಲು ನಿರ್ಧಾರ ಮಾಡಿ, ಅದಕ್ಕೆ ಮಾನಸಿಕವಾಗಿ ಸಿದ್ಧನಾದೆ. ನಾನು ಬಿಟ್ಟು ಬಂದ ಕಾಲದ ಬಗ್ಗೆ ಹೆಚ್ಚು ಯೋಚಿಸಿ ಗೊಂದಲಕ್ಕೊಳಗಾಗಬಾರದೆಂದೂ ತೀರ್ಮಾನಿಸಿದೆ.