ಕಾಲ ಪ್ರಯಾಣ - ಭಾಗ ೩

ಕಾಲ ಪ್ರಯಾಣ - ಭಾಗ ೩

ಬರಹ

ನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ ಶರ್ಟ್ ಕೈಗೆತ್ತಿಕೊಂಡೆ. ಅದರೊಳಗಿನ ನನ್ನ ಚೆಕ್ ಸಹಿ ಮಾಡುವ ಪೆನ್ ಸ್ವಲ್ಪ ಒದ್ದೆಯಾಗಿದ್ದರೂ ನನ್ನ ಕೈ ಮೇಲೆ ಗೀಚಿ ನೋಡಿದಾಗ ಬರೆಯುತ್ತಿತ್ತು. ಬರೆಯಲು ಹಾಳೆಗಳೆಲ್ಲಿ? ಈ ಕಾಲದಲ್ಲಂತೂ ಹಾಳೆಗಳು ಸಿಗುವ ಹಾಗಿಲ್ಲ - ಇನ್ನೂ ನಾವು ಕಾಣುವಂತಹ ಹಾಳೆಗಳ ಅವಿಶ್ಕಾರವೇ ಆಗಿರಲಿಲ್ಲ! ಇವರು ಬರೆಯುತ್ತಿದ್ದದ್ದು ಕಲ್ಲು ಶಾಸನಗಳೆಂದು ನಮ್ಮ ಕಾಲದಲ್ಲಿಯೇ ನನ್ನ ಶೋಧನೆಯಿಂದ ಅರಿತಿದ್ದೆ. ಆ ಕಲ್ಲುಗಳ ಮೇಲೆ ಬರೆಯುವುದು ಕಷ್ಟವಷ್ಟೇ ಅಲ್ಲ, ಅಕಸ್ಮಾತ್ ನನ್ನ ಕಾಲಕ್ಕೆ ಹಿಂತಿರುಗುವ ಸಂದರ್ಭ ಬಂದರೆ ಹೇಗೆ ಕೊಂಡೊಯ್ಯುವುದು? ಕಡೆಗೆ ನನ್ನ ಬಿಳಿಯ ಪಂಚೆಯ ಮೇಲೆ ಬರೆಯುವ ನಿರ್ಧಾರ ಮಾಡಿದೆ. ಹಾಗೆ ಬರೆದರೆ ಅದನ್ನು ಉಡುವಹಾಗಿಲ್ಲ. ಮೇಲಾಗಿ ಆ ಪಂಚೆಯುಟ್ಟು ಹೊರಗೆ ಹೋಗಲಾಗದು. ಹಾಗಾಗಿ ಮೊದಲಿಗೆ ಈ ಕಾಲದ ವಸ್ತ್ರಗಳ ಏರ್ಪಾಡು ಮಾಡುವುದು ಸೂತ್ಕವೆನಿಸಿತು.

ಆ ಯೋಚನೆ ಬಂದಾಗ ಮೊದಲಿಗೆ ಋತ್ವಿಕರ ಬಳಿ ಹೋಗಿ ಆದಷ್ಟು ನಿಖರವಾದ ಭಾಷೆಯಲ್ಲಿ ಕೇಳಿಕೊಂಡೆ:

"ನನ್ನ ವಸ್ತ್ರಗಳನ್ನು ಧರಿಸಿ ಹೊರ ಹೋಗುವಂತಿಲ್ಲ. ನಿಮ್ಮ ರೀತಿಯ ವಸ್ತ್ರಗಳನ್ನು ನನಗೆ ಕೊಡಲಾಗುತ್ತದೆಯೇ?"

ಅವರ ಮುಖದ ಮೇಲೆ ಕಂಡ ಅಚ್ಚರಿ ನನಗರ್ಥವಾಗಲಿಲ್ಲ. ನಂತರ ಇದಕ್ಕೆ ಕಾರಣ ತಿಳಿದಿದ್ದು. ಅವರು ಧರಿಸಿದ್ದ ವಸ್ತ್ರಗಳು ಅವರ ಪದವಿ ಹಾಗು ಸ್ಥಾನ-ಮಾನಗಳ ಸಂಕೇತ. ಅವರು ಕಂದು ಬಣ್ಣದ ದಪ್ಪನೆಯ ಕಾರ್ಪಸ (ಕಾಟನ್) ಬಟ್ಟೆಯನ್ನು ಎಡ ಹೆಗಲಿನ ಮೇಲಿನಿಂದ ಬಲ ಹೆಗಲಿನ ಕೆಳಕ್ಕೆ ಮಂಡಿಯಿಂದ ಸ್ವಲ್ಪ ಕೇಳಗಿನ ವರೆಗು ಧರಿಸಿದ್ದರು. ಅವರ ಈ ವಸ್ತ್ರಕ್ಕೆ ವಿಶೇಷವಾದ ಕೆಂಪು ಬಣ್ಣದ ಅಂಚಿತ್ತು. ಅಂಚಿನ ಮೇಲೆ ಹಳದಿ ಬಣ್ಣದ ಹೂಬಳ್ಳಿಗಳ ವಿನ್ಯಾಸ. ಈ ವಸ್ತ್ರಕ್ಕೆ ಎಲ್ಲಿಯೂ ಹೊಲಿಗೆಗಳಿರಲಿಲ್ಲ. ಹಣೆ ಹಾಗು ತೋಳಿನ ಮೇಲೆ ಬಂಗಾರದ ಪದಕ ಹಾಗು ಆನೆಯ ದಂತದ ಮಣಿಗಳುಲ್ಲ ಆಭರಣಗಳನ್ನು ಧರಿಸಿದ್ದರು.

ಆ ರೀತಿಯ ವಸ್ತ್ರಗಳನ್ನು ಇತರರು ಧರಿಸುವಂತಿರಲಿಲ್ಲ. ನನಗಾಗಿ ಸಾಮಾನ್ಯ ಜನರು ಧರಿಸುವಂತಹ ವಸ್ತ್ರಗಳನ್ನು ತರಿಸಿ ಕೊಟ್ಟರು. ಇವೂ ಸಹ ಅದೇ ರೀತಿ ಎಡ ಹೆಗಲಿನ ಮೇಲಿನಿಂದ ಬಲ ಹೆಗಲಿನ ಕೆಳಕ್ಕೆ ಧರಿಸುವಂಥದ್ದಾದರೂ ಇದು ಅಷ್ಟು ಒಳ್ಳೆಯ ಗುಣ ಮಟ್ಟದ ಬಟ್ಟೆಯಾಗಿರಲಿಲ್ಲ. ಮೇಲಾಗಿ ಇದು ಋತ್ವಿಕರು ಉಟ್ಟಂತಹ ಹೊಲಿಗೆಯಿಲ್ಲದ ವಸ್ತ್ರವಾಗಿರಲಿಲ್ಲ. ಇದನ್ನು ಆ ಆಕಾರದಲ್ಲಿ ಹೊಲಿಯಲಾಗಿತ್ತು. ತಲೆಯ ಮೇಲೆ ಕಟ್ಟಿಕೊಳ್ಳಲು ಮತ್ತೊಂದು ತುಣುಕು ವಸ್ತ್ರವೂ ಇತ್ತು. ತೋಳಿನ ಮೇಲೆ ಮಣಿಗಳ ಒಂದು ಕಟ್ಟು ಆಭರಣ.

ನನ್ನ ಪಂಚೆ ಈಗ ನನ್ನ ದಾಖಲೆ ಪುಸ್ತಕವಾಗಲು ಯಾವ ಅಡ್ಡಿಯೂ ಇರಲಿಲ್ಲ. 'ಹೊಸ' ವಸ್ತ್ರಗಳನ್ನು ತೊಟ್ಟು ಬೀದಿಗೆ ಹೋದೆ. ದಾಖಲೆ ಮಾಡಲು ಎಷ್ಟೊಂದು ವಿಚಾರಗಳು. ಎಲ್ಲಿ ಆರಂಭಿಸಲಿ? ಇಲ್ಲಿ ಮೊದಲಿಗೆ ಕಾಣಿಸುವಂತಹ ವಸ್ತ್ರ ವಿನ್ಯಾಸದ ವಿಚಾರ ಹೇಳುವುದೇ ಸೂಕ್ತವೆನಿಸುತ್ತದೆ. ಪುರುಷರ ವಸ್ತ್ರಗಳನ್ನು ಮೇಲಾಗಲೇ ಹೇಳಿರುವೆ - ಅಂದರೆ ನನ್ನ ವಸ್ತ್ರಗಳಂತೆ ಪುರುಷರ ವಸ್ತ್ರಗಳು. ಜೊತೆಗೆ ಗಡ್ಡ ಮೀಸೆಗಳನ್ನು ಆಗಾಗ ಕತ್ತರಿಸಿಕೊಂಡು ಹದದಲ್ಲಿಟ್ಟುಕೊಳ್ಳುತ್ತಿದ್ದದ್ದೂ ತೋರುತ್ತಿತ್ತು. ತಲೆಗೂದಲನ್ನೂ ಆಗಾಗ ಕತ್ತರಿಸಿಕೊಂಡಿರುವುದು ಕಂಡು ಬರುತ್ತಿತ್ತು. ಉದ್ದವಾದ ಜಟೆಗಳನ್ನು ತಲೆಯ ಹಿಂದೆ ಗಂಟಿನಾಕಾರದಲ್ಲಿ ಕಟ್ಟಿಕೊಳ್ಳುತ್ತಿದ್ದರು. ಮೇಲಾಗಿ ವಸ್ತ್ರಗಳು ಕೇವಲ ಕಂದು ಬಣ್ಣಕ್ಕೆ ಸೀಮಿತವಾಗಿರಲಿಲ್ಲ. ಕಂದು, ಬಿಳಿ, ಹಳದಿ, ಕೆಂಪು, ಹಸಿರು ಹಾಗು ನೀಲಿ ಬಣ್ಣಗಳ ಬಟ್ಟೆಗಳು ಎಲ್ಲೆಲ್ಲೂ ಕಾಣಿಸುತ್ತಿದ್ದವು.

ಮಹಿಳೆಯರ ವಸ್ತ್ರ ವಿನ್ಯಾಸ ಸ್ವಲ್ಪ ವಿಭಿನ್ನವಾಗಿತ್ತು. ಕೆಳಗೆ ಲಂಗದಂತಹ ಒಂದು ವಸ್ತ್ರ. ಬರಿದಾದ ಸೊಂಟ, ಮೇಲೆ ಎರಡೂ ಹೆಗಲು ಮುಚ್ಚುವಂತಹ ಕುಪ್ಪಸ. ಮಹಿಳೆಯರಲ್ಲಿ ಈಗಿನಂತೆ ಆಗಲೂ ಆಭರಣಗಳು ಬಹು ಪ್ರಚಲಿತ. ಕೆಂಪು ಹಾಗು ಕಪ್ಪು ಚಿತ್ರಾಕಾರಗಳ ವಿನ್ಯಾಸ ಮಣ್ಣಿನ ಬಳೆಗಳು, ಉದ್ದನೆಯ ಕಂಬಿಯನ್ನು ಚಕ್ರಾಕಾರದಲ್ಲಿ ಬಗ್ಗಿಸಿ ಮಾಡಿದ ತಾಮ್ರದ ಬಳೆಗಳು, ಚಿನ್ನ, ಬೆಳ್ಳಿ, ಹಾಗು ಹರಳು-ಮಣಿಗಳುಳ್ಳ ಹಣೆಪಟ್ಟಿಗಳು, ಬಳೆಗಳು, ಓಲೆಗಳು, ಕುತ್ತಿಗೆ-ಹಾರಗಳು, ಕಾಲ್ಬಳೆಗಳು, ಚೂಡಾಮಣಿಗಳು, ಸೊಂಟದ ಪಟ್ಟಿಗಳು ಹೀಗೆ. ಇಲ್ಲಿಯ ಮತ್ತೊಂದು ವಿಶಿಷ್ಟತೆ ಶಂಕದ ಬಳೆಗಳು.

ಮಣ್ಣಿನ ಬಳೆಗಳನ್ನು ನಮ್ಮ ಕಾಲದಲ್ಲಿ ಗಾಜಿನ ಬಳೆಗಳನ್ನು ಬಳಸುವ ರೀತಿಯಲ್ಲಿ ಬಳಸುತ್ತಿದ್ದರು. ಉಪಯೋಗಿಸುವುದು, ಒಡೆದರೆ ಅಲ್ಲೇ ಬಿಸಾಡುವುದು! ಈ ತುಣುಕುಗಳೇ ನಮಗೆ ಶೋಧನೆ ಮಾಡುವ ಸಮ್ಯದಲ್ಲಿ ಸಿಗುತ್ತಿದ್ದವೆಂದು ಅರ್ಥವಾಯಿತು. ಇವರುಗಳು ಆಭರಣಗಳನ್ನು ಮಾಡುವುದರಲ್ಲಿ ಬಹು ತೀಕ್ಷ್ಣ ಕುಶಲಕರ್ಮಿಗಳು. ಚಿನ್ನದ ತಗಡನ್ನು ಕುಟ್ಟಿ ಆಭರಣಗಳನ್ನು ಮಾಡುತ್ತಿದ್ದರು. ಚಿನ್ನದ ಕಟ್ಟಿನಲ್ಲಿ ನಾನಾರೀತಿಯ ಅಮೂಲ್ಯವಾದ ಕಲ್ಲುಗಳನ್ನು ಕೂರಿಸಿ ಹಲವಾರು ಆಭರಣಗಳನ್ನು ತಯಾರಿಸುತ್ತಿದ್ದರು.

ಋತ್ವಿಕರ ಮನೆಯಲ್ಲಿದ್ದ ಒಂದು ಆಭರಣ ಹತ್ತಿರದಿಂದ ನೋಡಿ ಪರಿಶೀಲಿಸುವ ಅವಕಾಶ ಒಮ್ಮೆ ದೊರಕಿತು: ಬಹು ಸುಂದರ ಹಾರ ಅದು. ಚಿನ್ನ ಹಾಗು ನೀಲ ಮಣಿಗಳನ್ನು ದಾರದಲ್ಲಿ ಪೋಣಿಸಲಾಗಿತ್ತು. ಪದಕವಾಗಿ ಮೂರು ಮಣಿಗಳು - ಮಧ್ಯೆ ದೊಡ್ಡ ನೀಲ ಮಣಿ, ಎರಡೂ ಬದಿಯಲ್ಲಿ ಆನೆಯ ದಂತದ ಮಣಿಗಳು. ನಮ್ಮ ಕಾಲದಲ್ಲೂ ಇದು ಫ್ಯಾಶನ್ ಸ್ಟೇಟ್ಮೆಂಟ್ ಆಗಬಹುದೆಂದುಕೊಂಡೆ. ಕಳ್ಳತನ ಜಗದ ಅತ್ಯಂತ ಹಳೆಯ ವೃತ್ತಿಗಳಲ್ಲೊಂದು ಎನ್ನುವುದು ಸತ್ಯ. ಈ ಕಾಲದಲ್ಲೂ ಕಳ್ಳ ಕಾಕರ ಭಯವಿರುತ್ತಿತ್ತು. ಹಾಗಾಗಿ ಇಂತಹ ಬೆಲೆ ಬಾಳುವ ಒಡವೆಗಳನ್ನು ಮಾಲಿಕರು ನೆಲದಲ್ಲು ಹುಗಿದಿಟ್ಟಿರುತ್ತಿದ್ದರು!

ಕಾರ್ಪಸ! ಇಷ್ಟು ಹಿಂದಿನ ಜನಾಂಗಗಳಲ್ಲಿ ನೇಯ್ದ ಬಟ್ಟೆ ಕಾಣುವುದೇ ವಿರಳ - ಪ್ರಾಣಿ ಚರ್ಮಗಳನ್ನು ತೊಡುತ್ತಿದ್ದವರೇ ಹೆಚ್ಚು. ಆದರೆ ಈ ಜನಾಂಗ ತೆಳ್ಳನೆಯ ಕಾರ್ಪಸ ಬಟ್ಟೆಯನ್ನು ನೇಯುತ್ತಿದ್ದರು. ಅನೇಕ ಬೆಳೆಗಳೊಂದಿಗೆ ಹತ್ತಿಯನ್ನೂ ಬೆಳೆಯುತ್ತಿದ್ದರು. ಈ ಹತ್ತಿಯಿಂದ ನೂಲು ತೆಗೆದು, ಆ ನೂಲಿನಿಂದ ಬಟ್ಟೆ ನೇಯ್ಯುವ ವಿಧಾನವನ್ನೂ ಅರಿತಿದ್ದರು. ಅರೆಯುಳ್ಳ ಗಾಲಿಯನ್ನರಿತಿದ್ದ ಇವರು, ಪ್ರಾಚೀನ ಚರಕಗಳ ಸಹಾಯದಿಂದ ನೂಲು ತೆಗೆಯುತ್ತಿದ್ದರು. ಈ ನೂಲನ್ನು ಮಣ್ಣಿನ ಲಾಳಿಯಲ್ಲಿ ಸುತ್ತಿ ನಂತರ ನೆಯ್ಗೆ ಯಂತ್ರದಲ್ಲಿ ಬಟ್ಟೆಯಾಗಿ ನೇಯ್ಯುತ್ತಿದ್ದರು. ಎಲುಬು, ಅಥವ ತಾಮ್ರದ ಸೂಜಿಯಿಂದ ಹೊಲಿಯುವುದನ್ನೂ ಅರಿತಿದ್ದರು.

ಜೊತೆಗೆ ಬಣ್ಣಗಳು. ಬಟ್ಟೆಗಳಿಗೆ ಬಣ್ಣ ಹಾಚ್ಚುವುದನ್ನು ಹೇಗೆ ಕಲಿತಿದ್ದರೆಂದು ಯಾರಿಗೂ ತಿಳಿಯದು. ಬಹುಶಃ ಅದು ಕಾಕತಾಳೀಯವಾಗಾದದ್ದು. ಆದರೆ ಇವರು ಬಟ್ಟೆಗಳಿಗೆ ಅನೇಕ ಬಣ್ಣಗಳನ್ನು ಹಾಕುತ್ತಿದ್ದರು. ನಮ್ಮ ದೇಶದ ಪ್ರಸಿದ್ಧ ವಜ್ರನೀಲಿ, ಅರಗಿನಿಂದ ಕೆಂಪು, ಅರಿಶಿನದಿಂದ ಹಳದಿ, ಹಾಗು ಮಸಿಯಿಂದ ಕಪ್ಪು ಹೀಗೆ ಪ್ರಥಮ ಬಣ್ಣಗಳು. ಇವುಗಳನ್ನು ಬೆರೆಸಿ ಯಾವ ಬಣ್ಣ ಬೇಕಾದರೂ ಮಾಡುವ ಸಾಧ್ಯತೆ ಇತ್ತು.

ಕಾಲ ಕ್ರಮೇಣ ನನ್ನ ಎರಡು ಮಡಿಕೆಯ ಪಂಚೆಯಮೇಲೆ ರೇಖೆಗಳೆಳೆದು ಅದನ್ನು ವಿಭಾಗಿಸಿಕಿಒಂಡೆ. ಒಂದೊಂದು ವಿಭಾಗಕ್ಕೂ ಓಡು-ಸಂಖ್ಯೆಗಳನ್ನು ಕೊಟ್ಟು ಕಾಗದ ಹಾಳೆಗಳಂತೆ ಬಳಸುತ್ತಿದ್ದೆ. ಪೆನ್ನು ಹೊಸದಾಗಿತ್ತು, ಸಾಕಷ್ಟು ಬರೆಯುವ ಸಾಧ್ಯತೆ ಇತ್ತು, ಆದರೆ ಅದು ಮುಗಿದರೆ ಬೇರೆಯಿರಲಿಲ್ಲ, ಸಿಗುವಹಾಗಿರಲಿಲ್ಲ. ಹಾಗಾಗಿ ನನ್ನದೇ ಆದ ಒಂದು ತುಣುಕು ಭಾಷೆ ಮಾಡಿಕೊಂಡು ಅದರಲ್ಲಿ ನನಗರ್ಥವಾಗುವ ಹಾಗೆ ಚಿಕ್ಕ ಅಕ್ಷರಗಳಲ್ಲಿ ನನ್ನ ಅನುಭವ ಹಾಗು ಅವಲೋಕನಗಳನ್ನು ಬರೆಯಲಾರಂಭಿಸಿದೆ.