ಕಾಲ, ಬೆಳಕು ಹಾಗೂ ಮಹಾಭಾರತ...
ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌತುಕವಾದದ್ದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಬೆಳಕಿಗೆ ಸಂಬಂಧಿಸಿದ ವೈಜ್ಞಾನಿಕ ಸಿದ್ಧಾಂತಗಳಲ್ಲಿ ಮೊದಲಿಗೆ ಪ್ರತಿಪಾದಿಸಲ್ಪಟ್ಟ ಬಹುತೇಕ ವಿಚಾರಗಳು ಕಾಲ್ಪನಿಕವಾದವುಗಳು. ಆದರೂ ಅವು ಮೈನವಿರೇಳಿಸುವ ಕಲ್ಪನೆಗಳು ಎಂಬುದರಲ್ಲಿ ಸಂಶಯವಿಲ್ಲ. ಕೊನೆಮೊದಲಿಲ್ಲದ ಈ ಅನಂತ ವಿಶ್ವದಲ್ಲಿ ನಮ್ಮ ಅಸ್ತಿತ್ವ ಸೊನ್ನೆಗೆ ಅತೀ ಸಮೀಪ. ಆದರೂ ವಿಶ್ವವನ್ನು ಅರಿಯಲು ನೆಡೆಸುವ ನಮ್ಮ ವೈಚಾರಿಕ ಹೋರಾಟ ಅಷ್ಟಿಷ್ಟಲ್ಲ. ಬೆಳಕಿನ ಅಸ್ತಿತ್ವ ಗಣನೆಗೆ ಬರುವುದು ಅದು ಯಾವುದಾದರೂ ವಸ್ತುವಿನ ಸಂಪರ್ಕಕ್ಕೆ ಬಂದ ಮೇಲೆಯಷ್ಟೆ.. ಬೆಳಕು ನಿರ್ವಾತದಲ್ಲಿಯೂ ಚಲಿಸಬಲ್ಲದು, ಆದರೆ ಅದಕ್ಕೆ ಒಂದು ವ್ಯವಸ್ತಿತವಾದ ಬಣ್ಣವಾಗಲೀ ಅಥವಾ ಪ್ರತಿಕ್ರಿಯೆಯಾಗಲೀ ದೊರೆಯುವುದು ಅದು ವಸ್ತುವಿನ ಮೇಲೆ ಬಿದ್ದಾಗ ಮಾತ್ರ. ವಸ್ತುವಿನ ಸಂಪರ್ಕಕ್ಕೆ ಬರುವ ಮೊದಲು ಅದು ಅಲೆಯೋ ,ಕಣವೋ ಅರಿಯುವುದು ಬಲುಕಷ್ಟ. ಒಮ್ಮೆ ಅಲೆಯಾಗಿಯೂ ಮತ್ತೊಮ್ಮೆ ಕಣದ ರೂಪಿನಲ್ಲಿಯೂ ಭೌತಶಾಸ್ತ್ರದ ನಿಯಮಗಳನ್ನು ತೃಪ್ತಿಪಡಿಸುವ ಬೆಳಕು ಸೃಷ್ಟಿಯ ಒಗಟೇ ಸರಿ. ತಾತ್ವಿಕ ಚಿಂತಕರ ಪ್ರಕಾರ ಬೆಳಕೆಂಬುದು ವಿಜ್ಞಾನವನ್ನು ತತ್ವಶಾಸ್ತ್ರದ ಜೊತೆಗೆ ಬೆಸೆಯುವ ಸಾಧನ. ಮನಸ್ಸು ಹಾಗೂ ಭೌತಿಕ ಪ್ರಕೃತಿಯ ನಡುವಿರುವ ಮಾಯಾಶಕ್ತಿ. ಇದು ಬೆಳಕನ್ನು ಕುರಿತು ಚಿಂತಿಸುವವನಿಗೆ ಸತ್ಯವೆನಿಸದೆ ಇರದು.. ಕಾಲಯಾತ್ರೆಯಂತಹ(Time travel) ಪರಿಕಲ್ಪನೆಯನ್ನು ಆಧರಿಸಿ ಈಗಾಗಲೆ ಬಂದಿರುವ ಹಲವಾರು ಪುಸ್ತಕಗಳು ಹಾಗೂ ಸಿನೇಮಾಗಳ ಬಗ್ಗೆ ನೀವೀಗಾಗಲೇ ತಿಳಿದಿರಬಹುದು. ಮೊದಮೊದಲಿಗೆ ಇದು ಅಭಾಸವೆನಿಸಿದರೂ ಅದನ್ನು ಮನಸ್ಸಿನಲ್ಲಿ ಕಲ್ಪಿಸಿ ಅನುಭವಿಸಿಯೇ ತೀರುತ್ತೇವೆ. Edge of tomorrow ನಂತಹ ಇತ್ತೀಚಿನ ಸಿನೇಮಾಗಳು ನಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ. ಆ ಸಂಗತಿಗಳಾದರೂ ಹೇಗೆ ಸಾಧ್ಯ ಎಂದು ಕ್ಷಣಕಾಲವೂ ಯೋಚಿಸದೆ ಅವುಗಳನ್ನು ಸ್ವೀಕರಿಸಿ ಖುಷಿಪಡುತ್ತೇವೆ.. ಈ ಪರಿಕಲ್ಪನೆಯನ್ನು ಆಧರಿಸಿ ಇಲ್ಲೀವರೆಗೂ ನೂರೈವತ್ತಕ್ಕೂ ಮಿಕ್ಕು ಸಿನೆಮಾಗಳು ತೆರೆಕಂಡಿವೆ. ಕಾಲಯಾತ್ರೆ(Time travel) ಎಂಬ ಪರಿಕಲ್ಪನೆ ನಿಂತಿರುವುದೇ ಈ ಬೆಳಕಿನ ಸ್ವಭಾವದ ಮೇಲೆ. ೨೦ನೇ ಶತಮಾನದ ಆದಿ ಭಾಗದವರೆಗೂ 'ಕಾಲ' ಎಂಬುದನ್ನು ಒಂದು ಸ್ಥಿರವಾದ ಸಂಗತಿಯೆಂದೇ ಪರಿಗಣಿಸಲಾಗಿತ್ತು, ಆದರೇ ವಿಶೇಷ ಸಾಪೇಕ್ಷ ಸಿದ್ಧಾಂತದ(Special theory of relativity ಯ) ನಂತರ 'ಕಾಲ' ದ ಬಗ್ಗೆ ಇದ್ದ ಪೂರ್ವಾಭಿಪ್ರಾಯಗಳು ಬದಲಾಗಬೇಕಾಯಿತು. ಕಾಲವು ವಸ್ತುವಿನ ನಾಲ್ಕನೇ ಆಯಾಮ ಎಂದು ಗುರುತಿಸಲ್ಪಟ್ಟುದಲ್ಲದೆ ಉಳಿದ ಆಯಾಮಗಳಿಗಿಂತಲೂ ಭಿನ್ನ ಎಂಬ ಖ್ಯಾತಿಗೆ ಒಳಗಾಯಿತು.
ಬೆಳಕಿಗೆ ಒಂದು ವಿಶೇಷವಾದ ಸ್ವಭಾವವಿದೆ, ಈ ಸ್ವಭಾವವು ಪ್ರಕೃತಿ ಬೆಳಕೆಂಬ ವಸ್ತುವಿಗೆ ಕೊಟ್ಟ ವರವೆಂದೇ ಹೇಳಬಹುದು. ಎರಡು ವಾಹನಗಳು x ಹಾಗೂ y ಎಂಬ ವೇಗದಲ್ಲಿ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಅವುಗಳ ನಡುವಿನ ಸಾಪೇಕ್ಷ ವೇಗವು ( relative speed) x - y ಆಗಿರುವುದು.. ಆದರೆ ಬೆಳಕಿನೊಂದಿಗಿನ ಸಾಪೇಕ್ಷ ವೇಗವು ಯಾವಾಗಲೂ ಸ್ಥಿರವಾಗಿದ್ದು 'c' ಆಗಿರುವುದು.. ಅಂದರೆ ನೀವು ಮತ್ತು ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವಾಗ, ನೀವು ಅದೆಷ್ಟೇ ವೇಗದಲ್ಲಿ ಬೆಳಕಿಗೆ ಪೈಪೋಟಿ ನೀಡುವಂತೆ ಓಡಿದರೂ ನಿಮ್ಮ ಮತ್ತು ಬೆಳಕಿನ ನಡುವಿನ ವೇಗವು 'c' ಆಗಿರುವುದು. ಬೆಳಕಿನ ಈ ಸಾಪೇಕ್ಷ ವೇಗವು ಸ್ಥಿರವಾಗಿರುವುದರಿಂದ, ಕೆಲವೊಂದು ಸಂದರ್ಭದಲ್ಲಿ 'ಕಾಲ' ತನ್ನ ಸ್ಥಿರತೆಯನ್ನು ಕಳೆದು ಕೊಳ್ಳಬೇಕಾಗುವುದು. ಅಂದರೆ ಕಾಲವು ತನ್ನ ಗತಿಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾಗುವುದು.. ವಿಜ್ಞಾನದ ಕೆಲವು ಸರಳ ಸಿದ್ಧಾಂತಗಳು ಇದನ್ನು ಪುಷ್ಟೀಕರಿಸುತ್ತವೆ. ಕಾಲವೆಂಬುದು ಗುರುತ್ವಾಕರ್ಷಣೆಯಿಂದ ಪ್ರಭಾವಕ್ಕೊಳಗಾಗುವುದು ಎಂಬುದನ್ನು ಕೆಲವು ಭೌತಶಾಸ್ತ್ರದ ಸೂತ್ರಗಳು ಧೃಢಪಡಿಸುತ್ತವೆ. ಎಲ್ಲಿ ಜಾಸ್ತಿ ಘನರಾಶಿ ಇರುವುದೋ ಅಲ್ಲಿ 'ಕಾಲ'ದ ಗತಿ ಕಡಿಮೆ ಇದ್ದೂ, ಎಲ್ಲಿ ಅದು ಕಡಿಮೆ ಇರುವುದೋ ಅಲ್ಲಿ ಕಾಲದ ಗತಿ ಜಾಸ್ತಿಯಿರುವುದೆಂಬುದು ವೈಜ್ಞಾನಿಕ ಸೂತ್ರಗಳಿಂದ ಧೃಡಪಟ್ಟಿರುವ ವಿಷಯ, ಅಂದರೆ ನಭೋಮಂಡಲದ ಎರಡು ಭಿನ್ನವಾದ ಪ್ರದೇಶಗಳ ನಡುವೆ ಭಿನ್ನವಾದ ಕಾಲಗತಿಯಿರುವುದು. ಸರಳವಾದ ನುಡಿಗಳಲ್ಲಿ ಹೇಳಬೇಕೆಂದರೆ, ನಿಮ್ಮ ಎರಡು ಡಿಜಿಟಲ್ ಕೈಗಡಿಯಾರಗಳನ್ನು ವ್ಯೋಮದಲ್ಲಿನ ಎರಡು ಭಿನ್ನ ಪ್ರದೇಶದಲ್ಲಿಟ್ಟಾಗ ಅವುಗಳು ಚಲಿಸುವ ವೇಗ ವಸ್ತುರಾಶಿಯನ್ನಾಧರಿಸಿ ಭಿನ್ನವಾಗಿರಬಹುದು.
ಇನ್ನೂ ಸರಳನುಡಿಗಳಲ್ಲಿ, ಭೂಮಿ ಹಾಗೂ ಕೋಟ್ಯಾಂತರ ಮೈಲಿಯಾಚೆಗಿನ ಪ್ರದೇಶದ ಕಾಲಗತಿಯಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇದೆ, ಉದಾಹರಣೆಗೆ ಈ ರೀತಿಯಾಗಿ ಭಾವಿಸಬಹುದು, ಭೂಮಿಯಿಂದ ಕೋಟ್ಯಾನು ಕೋಟಿ ದೂರದಲ್ಲಿ ಮಿಭೂ ಎಂಬ ಪ್ರದೇಶವಿದೆ ಅಲ್ಲಿನ ಒಂದು ದಿನ ಇಲ್ಲಿಯ ಒಂದು ವರ್ಷಕ್ಕೆ ಸಮ... ಕಾಲಗತಿಗೆ ತಕ್ಕಂತೆ ಹೃದಯಬಡಿತ, ವಿಶ್ವದ ನಿಯಮಗಳೆಲ್ಲವೂ ಇಲ್ಲಿ ತಮ್ಮ ಗತಿಯನ್ನು ಬಳಸಿಕೊಳ್ಳುತ್ತವೆ, ಹಾಗಾಗಿ ಇದು, ಜೀವಿಯೊಂದು ಕೇವಲ ಮಾನಸಿಕವಾಗಿ ಅನುಭವಿಸುವ ಸಂಗತಿಯಲ್ಲ.
ಇದು ವಿಶೇಷ ಸಾಪೇಕ್ಷಸಿದ್ಧಾಂತದ ಪರಿಚಯವಿಲ್ಲದವರಿಗೆ ಅಸಂಗತವಾಗಿಯೂ, ಅಸಂಬದ್ಧವಾಗಿಯೂ ಕಾಣುವುದು ಸುಳ್ಳಲ್ಲ. ಕಾಲವೆಂಬುದು ಎಲ್ಲಾಕಾಲದಲ್ಲಿಯೂ ಸ್ಥಿರಗತಿಯುಳ್ಳದ್ದು ಎಂಬ ನಮ್ಮ ವಿಚಾರಗಳಿಂದ ನಾವು ಅಷ್ಟು ಸುಲಭವಾಗಿ ಹೊರಬರಲೂ ಆಗುವುದಿಲ್ಲ.
ಎರಡು ನಿಮಿಷ ನೀವೇ ಭಾವಿಸಿ ನೋಡಿ, ಕಾಲವೆಂಬುದು ಎಷ್ಟು ಚಮತ್ಕಾರಿಕ ವಸ್ತು ಎಂಬುದು ನಿಮಗೇ ತಿಳಿಯುತ್ತದೆ..
ನಿಮ್ಮ ಒಂದು ನಿಮಿಷವನ್ನು ಹತ್ತು ಭಾಗ ಮಾಡಲು ನಿಮ್ಮಿಂದ ಸಾಧ್ಯವಾಗುವುದಲ್ಲವೇ? , ಸಾಧ್ಯವಾಗುತ್ತದೆ.. ಅದನ್ನು ನೂರು ಭಾಗ ಮಾಡಬಹುದಲ್ಲವೇ ? ಅದೂ ಸಾಧ್ಯವಾಗುವುದು,, ಅದನ್ನು ಕೋಟಿ ಭಾಗವಾಗಿ ಮಾಡುವ ಕಲ್ಪನೆಯನ್ನು ಮನಸ್ಸಿಗೆ ತಂದು ಕೊಳ್ಳಿ, ಅದೂ ಕೂಡ ಸಾಧ್ಯವಾಗುತ್ತದೆ... ಈ ರೀತಿ ಕೋಟಿ ಭಾಗಗಳುಳ್ಳ ಒಂದುನಿಮಿಷದ ಪ್ರತಿ ಭಾಗವೂ ತನ್ನದೆ ಆದ ಕಾಲವ್ಯಾಪ್ತಿಯನ್ನು ಹೊಂದಿದೆ, ಆ ವ್ಯಾಪ್ತಿಗೆ ಮಾನವನು ಹೆಸರಿಡದೆ ಇರಬಹುದು, ಆದರೆ ಆ ಕಾಲವ್ಯಾಪ್ತಿಗೆ ವಿಶ್ವದಲ್ಲಿ ಒಂದು ಅರ್ಥವಿದೆ....
ಈಗ, ಒಂದು ನಿಮಿಷವನ್ನು ಅನಂತ ಭಾಗವಾಗಿ ಮಾಡಲು ನಿಮ್ಮಿಂದ ಸಾಧ್ಯವಾಗುವುದೆ ನೋಡಿ. ಅನಂತವನ್ನು ಪರಿಭಾವಿಸಿದಾಗ ಅದೊಂದು ನಿರಂತರವಾದ ಪ್ರಕ್ರಿಯೆ ಎಂಬುದು ನಿಮಗೆ ತಿಳಿಯದೆ ಇರುವುದಿಲ್ಲ. ಮೊದಲನೆಯದಾಗಿ ಪ್ರಕೃತಿಯು ಒಂದು ನಿಮಿಷವನ್ನು ಅನಂತಭಾಗಗಳಾಗಿ ವಿಂಗಡಿಸಲು ಸಾಧ್ಯವಾಗುವುದೇ ಇಲ್ಲ, ಏಕೆಂದರೆ ಎಷ್ಟು ವಿಭಾಗಿಸಿದರೂ ವಿಭಾಗಗೊಳ್ಳಬೇಕಾದ ಕಾಲದ ಪರಿಮಾಣ ಇದ್ದೇ ಇರುತ್ತದೆ. ಆದರೆ ವಾಸ್ತವದಲ್ಲಿ ಈ ಅನಂತ ಕಾಲವಿಭಜನೆಯು ಒಂದಕ್ಕೊಂದು ಸೇರಿ ನಮ್ಮ ಒಂದು ನಿಮಿಷವಾಗಿದೆ. ಒಂದು ನಿಮಿಷದ ಅನಂತ ಘಟಕಗಳಲ್ಲಿ ಪ್ರತಿಯೊಂದು ಭಾಗಕ್ಕೂ ತನ್ನದೇ ಆದ ಅರ್ಥವಿದೆ... ಒಂದು ನಿಮಿಷದಲ್ಲಿನ ಅತಿ ಚಿಕ್ಕ ಕಾಲದ ಭಾಗ ಯಾವುದೆಂದು ನಮಗೆ ನಾವು ಕೇಳಿಕೊಂಡರೂ ಅದಕ್ಕೆ ಉತ್ತರ ನಮ್ಮಲಿಲ್ಲ ಅದು ನಮ್ಮ ಕಲ್ಪನೆಗೂ ಮೀರಿದ್ದೂ. ಒಂದು ಭೌತಿಕ ಪರಿಮಾಣವನ್ನು ನಾವು ಅನಂತಭಾಗದವರೆಗೂ ವಿಭಾಗಿಸಿದ್ದೇವೆ ಎಂದರೆ ಅದರ ಅರ್ಥ ನಮಗೆ ಸಿಕ್ಕಿರುವ ಭಾಗದ ಪರಿಮಾಣ ಸೊನ್ನೆ. ಆದರೆ ಪ್ರಕೃತಿಯಲ್ಲಿನ ವೈಚಿತ್ರ್ಯವನ್ನು ನೋಡಿ!, ಹೇಗಿದೆ. ಸೊನ್ನೆ ಸೊನ್ನೆಗಳೆ ಕೂಡಿ ಇಡಿ ವಿಶ್ವವಾಗಿದೆ. ಕಾಲವೇ ಇಲ್ಲದೆ ನಮ್ಮ ಒಂದು ನಿಮಿಷವಾಗಿದೆ... ಇದು ಆಶ್ಚರ್ಯವಲ್ಲವೇ.. ವೇದಾಂತಿಗಳು ಹೇಳಿದ್ದನ್ನು ಅಲ್ಲಿ ಇಲ್ಲಿ ಕೇಳಿ ನೋಡಿರಬಹುದು. ಆದರೆ ವೈಜ್ಞಾನಿಕವಾಗಿಯೂ ಜಗತ್ತು ಎಂಬುದು ಸೊನ್ನೆಯಿಂದ ಹುಟ್ಟಿದೆ ಎಂಬುದು ಸತ್ಯವಾದ ಮಾತು.. ವಸ್ತುವು ತನ್ನ ಅಸ್ತಿತ್ವದಲ್ಲಿಯೇ ಇಲ್ಲದೆ ಪ್ರಕೃತಿಯ ವೈಚಿತ್ರ್ಯದಿಂದ ತಾನು ಅಸ್ತಿತ್ವದಲ್ಲಿರುವಂತೆ ಕಾಣಿಸಿಕೊಳ್ಳುವುದು ಎಷ್ಟು ಸೋಜಿಗವಲ್ಲವೇ?. ಆಲ್ಲದೇ ಸೊನ್ನೆಯೇ ಪೂರ್ಣವಾಗಿ ಎಲ್ಲಾ ಕಾಲದಲ್ಲೂ ಇಂದ್ರಿಯಗಳಿಗೆ ಗೋಚರವಾಗುವುದನ್ನು ಮಾಯೆ ಎಂದು ವೇದಾಂತಿಗಳು ಕರೆದದ್ದು ಅಸಮರ್ಪಕವಾಗಿಲ್ಲ.
ಕಾಲದ ಗತಿಯ ಅನಿಯತತೆಯ ಬಗ್ಗೆ ಹೇಳುವಾಗ ನನಗೆ ಅತಿ ಪ್ರಿಯವಾದ ಸಂಗತಿಯೆಂದರೆ ಮಹಾಭಾರತದ ಈ ಕೆಳಗಿನ ಸಂಗತಿ. ಈ ಒಂದು ಕಲ್ಪನೆಯನ್ನು ತಮ್ಮ ಮನೊದೊಳಗೆ ತಂದುಕೊಳ್ಳಲು ಪಾಶ್ಚಾತ್ಯ ಜಗತ್ತು ಹತ್ತೊಂಬತ್ತನೆ ಶತಮಾನದವರೆಗೂ ಕಾಯಬೇಕಾಯಿತು ಎಂಬುದು ಎಂಬುದು ವಿಪರ್ಯಾಸವಾದರೂ ನಮಗೆ ನಾವೇ ಬೆನ್ನು ತಟ್ಟಿಕೊಳ್ಳುವ ಸಂಗತಿ..
ಜಗತ್ತು ಹುಟ್ಟಿದ್ದು ಅನಂತನೆಂಬುವನ ಬಲದಲ್ಲಿ ನೆಡೆದ ಬ್ರಂಹಾಂಡವೆಂಬ ಸಾಗರದ ಮಥನದ ಸಮಯದಲ್ಲಿ ಎಂಬ ಕಲ್ಪನೆ ಆಧುನಿಕ ಜಗತ್ತಿಗೆ ತೀರಾ ಹೊಸದಾಗಿದೆ.. ಜೀವಿಯ ಹುಟ್ಟು ಪಂಚಭೂತಗಳ ಸೇರುವಿಕೆಯಿಂದಾಗಿದೆ ಎಂಬುದನ್ನು ಯೂರೋಪಿಯನ್ನರು ಹತ್ತೊಂಬತ್ತನೇ ಶತಮಾನದ ಆದಿಭಾಗದವರೆಗೂ ಒಪ್ಪಿಯೇ ಇರಲಿಲ್ಲ. Adam & eve ರ ಚಿತ್ರಣದಿಂದ ಹೊರಬಂದು ತಾನೇ ಏನಾದರೂ ಕಲ್ಪಿಸಿದ್ದಲ್ಲಿ ಚರ್ಚಿನ ಶಿಕ್ಷೆಗೆ ಗುರಿಯಾಗಬೇಕೆಂಬ ಹೆದರಿಕೆಯೂ ಅವರಲ್ಲಿದ್ದಿತು ಎಂಬ ಅಂಶವೂ ಅದಕ್ಕೆ ಕಾರಣವಿರಬಹುದು. ಅದಕ್ಕಾಗಿಯೇ ಡಾರ್ವಿನ್ನನ ಸಿದ್ಧಾಂತಕ್ಕೂ ಅಷ್ಟಾಗಿ ಮಾನ್ಯತೆ ದೊರೆತಿರಲಿಲ್ಲ.
ಮನು ಎಂಬ ಭಾರತೀಯ ಮೂಲಪುರುಷನ ಸಂತತಿಯಲ್ಲಿ ಬರುವ 'ಕಕುದ್ಮಿ' ಎಂಬ ಅರಸನ ಬಗ್ಗೆ ನೀವು ಕೇಳಿರಲಾರಿರಿ. ಆತ ಒಬ್ಬ ದಕ್ಷ ಆಡಳಿತಗಾರ, ಈ ರಾಜನಿಗೆ 'ರೇವತಿ' ಎಂಬ ಸುಕನ್ಯೆಯೊಬ್ಬಳು ಮಗಳಾಗಿ ಹುಟ್ಟುತ್ತಾಳೆ, ಅತಿ ಚತುರೆ, ಅತಿ ಸುಂದರಿ, ಅತಿ ಸಾಹಸಿಯಾದ ಈಕೆಗೆ ವರನನ್ನು ಹುಡುಕುವುದೇ ಕಕುದ್ಮಿಗೆ ಒಂದು ಸವಾಲಾಗಿ ಕಾಣುತ್ತದೆ. ಭೂಮಿಯಮೇಲಿನ ಕೆಲವು ಪ್ರಖ್ಯಾತ ರಾಜರ ಪಟ್ಟಿ ಮಾಡಿ ಅವರಲ್ಲಿ ಒಬ್ಬರಿಗೆ ತನ್ನ ಮಗಳನ್ನು ಮದುವೆ ಮಾಡಬೇಕೆಂದು ನಿಶ್ಚಯಿಸುತ್ತಾನೆ, ಆದರೂ ಅಷ್ಟು ಜನ ರಾಜರಲ್ಲಿ ತನ್ನ ಮಗಳಿಗೆ ತಕ್ಕವನು ಯಾರೆಂದು ಗುರುತಿಸುವಲ್ಲಿ ಆತ ಸೋಲಬೇಕಾಗುತ್ತದೆ. ಆದ್ದಕಾರಣ ತನ್ನ ಪಿತಾಮಹ ಬ್ರಹ್ಮ ದೇವನೇ ತನ್ನ ಮಗಳಿಗೆ ವರ ಹುಡುಕಲು ಸೂಕ್ತ ವ್ಯಕ್ತಿ ಎಂದು ಭಾವಿಸಿ ತನ್ನ ಮಗಳೊಡನೆ ತಾನು ಮಾಡಿದ ರಾಜರ ಪಟ್ಟಿಯನ್ನು ತೆಗೆದು ಕೊಂಡು ಬ್ರಹ್ಮ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಬ್ರಹ್ಮನ ಆಸ್ಥಾನದಲ್ಲಿ ಗಂಧರ್ವರ ಸಂಗೀತ ಗೋಷ್ಠಿಯೊಂದು ನೆಡೆಯುತ್ತಿರುತ್ತದೆ, ಸಂಗೀತ ಕೇಳುವಲ್ಲಿ ಮಗ್ನನಾದ ಬ್ರಹ್ಮನೂ ಇವರನ್ನು ಗುರುತಿಸುವುದಿಲ್ಲ, ಗೋಷ್ಠಿ ಮುಗಿದಾದ ಮೇಲೆ, ಕಕುದ್ಮಿ ತನ್ನ ಮಗಳೊಡನೆ ಬ್ರಹ್ಮನನ್ನು ಕಾಣಲು ಹೋಗುತ್ತಾನೆ. ತನ್ನ ಬ್ರಹ್ಮಲೋಕದ ಭೇಟಿಯನ್ನು ಬ್ರಹ್ಮನಲ್ಲಿ ನಿವೇದಿಸಿಕೊಂಡ ಕಕುದ್ಮಿಯನ್ನು ನೋಡಿ ಬ್ರಹ್ಮನಿಗೆ ನಗು ಬರುತ್ತದೆ, ಹಾಗೂ ತಾನು ಮಾಡಿದ್ದ ರಾಜರ ಪಟ್ಟಿಯನ್ನೊಮ್ಮೆ ಧೀರ್ಘವಾಗಿ ನೋಡಿ ಮತ್ತೂ ನಗುತ್ತಾನೆ. ಕಕುದ್ಮಿಗೆ ಬ್ರಹ್ಮನ ನಗುವಿನ ಹಿಂದಿನ ಮರ್ಮ ಅರ್ಥವಾಗುವುದಿಲ್ಲ. ಆಗ ಬ್ರಹ್ಮನೇ ಮಾತು ಮುಂದುವರಿಸಿ ಹೇಳುತ್ತಾನೆ. "ಕಕುದ್ಮಿಯೇ, ಲಕ್ಷಾಂತರ ಭೂಲೋಕದ ವರ್ಷಗಳು ಸೇರಿ ಒಂದು ಯುಗವಾಗುತ್ತದೆ, ಇಂತಹ ಸಾವಿರ ಯುಗಗಳಿಗೆ ಒಂದು ಕಲ್ಪವಾಗುತ್ತದೆ, ಈ ಒಂದು ಕಲ್ಪವೇ ನನ್ನ ಒಂದು ದಿನ. ನೀವಿಲ್ಲಿ ಬಂದು ಕೆಲವೇ ಕ್ಷಣಗಳಾದರೂ; ಈ ಅವಧಿಯಲ್ಲಿ ಭೂಲೋಕದಲ್ಲಿ ಹಲವಾರು ಯುಗಗಳು ಘಟಿಸಿ ಹೋಗಿವೆ, ನೀನು ಪಟ್ಟಿ ಮಾಡಿ ತಂದಿರುವ ಹಲವಾರು ರಾಜರುಗಳು ಸತ್ತು ಅವರ ವಂಶಾವಳಿಗಳೆಲ್ಲವೂ ನಿರ್ನಾಮವಾಗಿವೆ." ಎಂದು ಹೇಳುತ್ತಾನೆ.
ಈ ಸಂಗತಿಯನ್ನು ಕೇಳಿ ಕಕುದ್ಮಿಗೆ ಗಾಬರಿಯಾಗಿ ತನ್ನ ಮಗಳನ್ನು ಇನ್ನಾರಿಗೆ ಕೊಟ್ಟು ಮದುವೆ ಮಾಡಲಿ ಎಂದು ಬ್ರಹ್ಮನಲ್ಲಿ ಕೇಳಿದಾಗ. "ನೀನು ಮರಳಿ ಭೂಲೋಕಕ್ಕೆ ಹೋಗುವಷ್ಟರಲ್ಲಿ ದ್ವಾಪರ ಯುಗವು ಆರಂಭವಾಗಿ ಅಲ್ಲಿ ವಿಷ್ಣು ಲೋಕಪಾಲನೆಗಾಗಿ ಸ್ವಯಂ ತಾನೆ ತನ್ನ ಅವತಾರವಾದ ಬಲರಾಮನೊಂದಿಗೆ ಹುಟ್ಟಿರುತ್ತಾನೆ. ನಿನ್ನ ಮಗಳಿಗೆ ಬಲರಾಮನೇ ಸರಿಯಾದ ವರ" ಎಂದು ಹೇಳುತ್ತಾನೆ.. ಹೀಗಾಗಿ ಬಲರಾಮನು ತನಗಿಂತಲೂ ವಯಸ್ಸಿನಲ್ಲಿ ಯುಗ ಯುಗಗಳಷ್ಟು ಹಿರಿಯಳಾದ ರೇವತಿಯನ್ನು ಮದುವೆ ಆಗಬೇಕಾಗುತ್ತದೆ..
ಈ ಒಂದು ಸಂಗತಿಯ ವಾಸ್ತವತೆಯ ಬಗ್ಗೆ ನಮ್ಮಲ್ಲಿ ಭಿನಾಭಿಪ್ರಾಯಗಳಿರಬಹುದು, ಆದರೆ ಮಹಾಭಾರತದ ಕೃತಿಯ ರಚನೆಯ ಕಾಲವು ಕನಿಷ್ಠವೆಂದರೂ ಮೂರೂವರೆ ವರ್ಷಗಳಿಗಿಂತಲೂ ಹಳೆಯದಾದುದು ಎಂಬುದು ವಾಸ್ತುತಜ್ಞರ ಅಭಿಪ್ರಾಯ. "ಕಲ್ಪನೆಯೆಂಬುದು ಬುದ್ಧಿವಂತಿಕೆಗಿಂತಲೂ ಪ್ರಬಲವಾದ ಅಂಶ – imagination is more stronger than intelligence" ಎಂಬ ಐನ್ಸ್ ಟೈನ್ ರ ಮಾತನ್ನು ಕುರಿತು ಯೋಚಿಸಿದಾಗ , ನಾಲ್ಕು ಸಾವಿರ ವರ್ಷಗಳ ಹಿಂದಿನ, 'ಕಾಲ'ವನ್ನು ಆಧರಿಸಿದ ಈ ಕಲ್ಪನೆ ಎಷ್ಟು ಪ್ರೌಢವಾದದ್ದು ಎಂಬುದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ.. 'ಕಾಲ' ಎಂಬುದು ಅಸ್ಥಿರವಾದ ಭೌತಪರಿಮಾಣ (Variable physical unit ) ಎಂಬುದು ಆಧುನಿಕ ಜಗತ್ತಿನ ಅತೀ ಅದ್ಭುತವಾದ ಆವಿಷ್ಕಾರ. ಅದೂ ಇಂದಿಗೂ ವಿದ್ಯಾವಂತರಲ್ಲನೇಖರ ತಲೆಗೆ ಹೋಗದ ಸಿದ್ಧಾಂತವಾಗಿದೆ. ಆದರೂ ಎರಡು ಭಿನ್ನ ಪ್ರದೇಶದಲ್ಲಿನ ಭಿನ್ನವಾದ ಕಾಲದ ಗತಿಯನ್ನು ಕಲ್ಪಿಸಿದ ವೇದವ್ಯಾಸರು ಎಷ್ಟು ಪ್ರೌಢರಾಗಿದ್ದಿರಬೇಕು, ಅದೂ ನಾಲ್ಕು ಸಾವಿರ ವರ್ಷಗಳ ಹಿಂದೆ..!! ಆಧುನಿಕ ಜಗತ್ತು ಈ ಪರಿಕಲ್ಪನೆಯನ್ನು ಭಾವಿಸಲು ನಾಲ್ಕು ಸಾವಿರ ವರ್ಷಗಳೇ ಕಾಯಬೇಕಾಯಿತು....
Comments
ಉ: ಕಾಲ, ಬೆಳಕು ಹಾಗೂ ಮಹಾಭಾರತ...
ಹಿಂದಿನವರ ಕಾಲ ಮತ್ತು ಅನಂತಕೋಟಿ ಬ್ರಹ್ಮಾಂಡದ ಪರಿಕಲ್ಪನೆಗಳು ಆಶ್ಚರ್ಯಹುಟ್ಟಿಸುವಂತಿವೆ! ಉತ್ತಮ ಲೇಖನಕ್ಕಾಗಿ ಧನ್ಯವಾದಗಳು......