ಕಾಳುಗಳು ಮೊಳಕೆಯೊಡೆದಾಗ ಪ್ರೋಟೀನ್ ಮಾಯವಾಗುತ್ತಾ?!

ಕಾಳುಗಳು ಮೊಳಕೆಯೊಡೆದಾಗ ಪ್ರೋಟೀನ್ ಮಾಯವಾಗುತ್ತಾ?!

ಕಾಳುಗಳು ಅಥವಾ ಧಾನ್ಯಗಳನ್ನು ಅಡಿಗೆಗೆ ಬಳಸುವಾಗ ಎಲ್ಲರೂ ಹೇಳುವುದು ಒಂದೇ... ಮೊಳಕೆ ಬರಿಸಿ ಅಡಿಗೆಗೆ ಬಳಸಿ ಎಂದು. ಮೊಳಕೆ ಬರಿಸಿದಾಗ ಆ ಕಾಳುಗಳು ಸುಲಭವಾಗಿ ಜೀರ್ಣವಾಗುತ್ತವೆ, ಆಹಾರದ ರುಚಿಯೂ ಹೆಚ್ಚುತ್ತದೆ. ಸುಲಭವಾಗಿ ಜೀರ್ಣವಾಗುವುದರಿಂದ ವಾಯು (ಗ್ಯಾಸ್ಟ್ರಿಕ್) ಸಂಬಂಧಿ ದೋಷಗಳೂ ಇರುವುದಿಲ್ಲ. ಆದರೆ ಇಲ್ಲಿ ಒಂದು ಸಂಶಯ ಕಾಡುವುದೇನೆಂದರೆ ಈ ಧಾನ್ಯಗಳನ್ನು ಮೊಳಕೆ ಬರುವಂತೆ ಮಾಡಿದಾಗ ಅದರಲ್ಲಿರುವ ಪ್ರೋಟೀನ್ ಅಂಶವು ಕಡಿಮೆಯಾಗುವುದೋ? ಎಂದು. ಇದಕ್ಕೆ ಇಲ್ಲಿದೆ ನೋಡಿ ಉತ್ತರ.

ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ದ್ವಿದಳ ಧಾನ್ಯಗಳು ನೀಡುತ್ತವೆ. ಆದರೆ ಧಾನ್ಯಗಳನ್ನು ಮೊಳಕೆ ಬರಿಸದೇ ತಿಂದರೆ ಅದು ಬೇಗನೇ ಜೀರ್ಣವಾಗಲಾರದು. ಬೇಗನೇ ಜೀರ್ಣವಾಗದೇ ಇದ್ದರೆ ವೃದ್ಧರಿಗೆ ಅಜೀರ್ಣವಾಗಿ ನಾನಾ ಸಮಸ್ಯೆಗಳು ಕಾಡತೊಡಗುತ್ತವೆ. ಅದಕ್ಕೆ ಪರಿಹಾರವೆಂದರೆ ಕಾಳುಗಳನ್ನು ಮೊಳಕೆ ಬರಿಸಿ ಆಹಾರದಲ್ಲಿ ಬಳಸುವುದು. 

ಕಡಲೆ, ಹೆಸರು, ಶೇಂಗಾ, ಅವರೆ, ಅಲಸಂಡೆ, ಹುರುಳಿ ಮುಂತಾದ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮಾರನೇ ದಿನ ಒಂದು ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ ಇಟ್ಟು ಅದರ ಮೇಲೊಂದು ಭಾರ ಇಟ್ಟರೆ ಸೊಗಸಾಗಿ ಮೊಳಕೆಯೊಡೆಯುತ್ತದೆ. ಇದೇನೂ ಬ್ರಹ್ಮ ಜ್ಞಾನವಲ್ಲ. ನಮ್ಮ ಎಲ್ಲಾ ಅಮ್ಮಂದಿರು ಕಂಡುಕೊಂಡ ಸತ್ಯವೇ. ಆದರೆ ಹೀಗೆ ಮೊಳಕೆಯೊಡೆದಾಗ ಧಾನ್ಯಗಳಲ್ಲಿ ಹೇರಳವಾಗಿರುವ ಪ್ರೋಟೀನ್ ಅಂಶ ಏನಾಗುತ್ತದೆ? ಸರಳವಾಗಿ ಒಂದು ಉದಾಹರಣೆಯ ಮೂಲಕ ಹೇಳುವುದಾದರೆ ದಪ್ಪ ಉಂಡೆಯನ್ನು ನೀವು ತಿನ್ನುವಾಗ ಬಾಯಿಗೆ ಅನುಕೂಲಕರವಾಗುವಂತಹ ಗಾತ್ರಕ್ಕೆ ತುಂಡು ಮಾಡಿ ತಿನ್ನುವುದಿಲ್ಲವೇ? ಮೊಳಕೆ ಬರಿಸುವುದೆಂದರೆ ಹಾಗೆಯೇ. ಕಾಳು ತನ್ನನ್ನು ತಾನು ಹದಗೊಳಿಸಿಕೊಳ್ಳುತ್ತದೆ ಎಂದರ್ಥ. ಮೊಳಕೆಯೊಡೆಯುವ ಪ್ರಕ್ರಿಯೆ ನಡೆಯುವಾಗ ಕಾಳಿನೊಳಗೆ ಇರುವ ಹಲವಾರು ಸಂಕೀರ್ಣ ಘಟಕಗಳು ಒಡೆದು ಸರಳ ಘಟಕಗಳಾಗುತ್ತವೆ. ಇನ್ನೂ ಸರಳವಾಗಿ ಹೇಳುವುದಾದರೆ, ಮೊಳಕೆ ಬರಿಸುವುದರಿಂದ, ನಿಮ್ಮ ಹೊಟ್ಟೆಯಲ್ಲಿ ಆಗುವ ಜೀರ್ಣಕ್ರಿಯೆಯ ಹಲವಾರು ಭಾಗಗಳು ಕಾಳಿನಲ್ಲೇ ಆಗಿ ಬಿಡುತ್ತವೆ. ಹೀಗಾಗುವುದರಿಂದ ದೇಹವು ಪ್ರೋಟೀನ್ ಅನ್ನು ಜೀರ್ಣಿಸುವುದು, ಮೈಗೂಡಿಕೊಳ್ಳುವುದು ಸುಲಭವಾಗುತ್ತದೆ. 

ಮೊಳಕೆಯೊಡೆದ ಕಾಳು ಎಂದರೆ ದೊಡ್ದದಾದ ಮರದ ದಿಮ್ಮಿಯನ್ನು ಸಣ್ಣ ಸಣ್ಣ ಚಕ್ಕೆಗಳನ್ನಾಗಿ ತುಂಡು ಮಾಡುವುದು. ಇದರಿಂದ ಚಕ್ಕೆಗಳಿಗೆ ದಿಮ್ಮಿಗಿಂತ ಬೇಗನೇ ಬೆಂಕಿ ತಗಲುತ್ತದೆ. ಹಾಗೆಯೇ ಇದೂ ಸಹ. ಅಲ್ಲದೆ ಮೊಳಕೆಯೊಡೆದ ಕಾಳುಗಳು ಇನ್ನಷ್ಟು ರುಚಿಕರವಾಗಿರುತ್ತವೆ. ಕಾಳುಗಳನ್ನು ಯಾವತ್ತೂ ಕರಿದು, ಹುರಿದು ತಿನ್ನಬೇಡಿ. ಅದರಿಂದ ನಿಮ್ಮ ದೇಹಕ್ಕೆ ಸಿಗುವ ಲಾಭ ಸೊನ್ನೆ. ಇದರ ಬದಲು ಬೇಯಿಸಿ ತಿನ್ನುವುದು ಒಳಿತು. ಹಸಿಯಾಗಿ ತಿಂದರೆ ಇನ್ನಷ್ಟು ಆರೋಗ್ಯಕರ. 

ಮೊಳಕೆ ಬರಿಸಿದ ಕಾಳುಗಳು ಕೇವಲ ವಯಸ್ಸಾದವರಿಗೆ ಮಾತ್ರವಲ್ಲ, ಎಳೆಯರ ಆರೋಗ್ಯಕ್ಕೂ ಒಳ್ಳೆಯದು. ಮೊಳಕೆ ಬರಿಸಿದ ಕಾಳುಗಳ ಪ್ಲಸ್ ಪಾಯಿಂಟ್ ಏನೆಂದರೆ ಅವುಗಳು ಬೇಗನೇ ಜೀರ್ಣವಾಗುತ್ತವೆ. ಇವುಗಳಲ್ಲಿ ಯಥೇಚ್ಛವಾದ  ವಿಟಮಿನ್ ಮತ್ತು ಪೋಷಕಾಂಶಗಳಿರುತ್ತವೆ. ವಿಟಮಿನ್ ಎ, ಕೆ, ಸಿ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಂ ಅಪಾರ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ದೊರಕುತ್ತದೆ. ಮೊಳಕೆ ಬರಿಸಿ ತಯಾರಿಸಿದ ಅಡಿಗೆಯಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚು. ಕೊಬ್ಬಿನ ಪ್ರಮಾಣ ಕಡಿಮೆ. ಮೊಳಕೆ ಬರಿಸಿದ ಕಾಳುಗಳನ್ನು ಹಸಿಯಾಗಿಯೇ ಅಥವಾ ಬೇಯಿಸಿ ತಿಂದರೆ ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆಯ ಅಂಶವು ನಿಯಂತ್ರಣದಲ್ಲಿರುತ್ತದೆ. ರಕ್ತಹೀನತೆಗೂ ಇದು ಉತ್ತಮ ಆಹಾರ. ಆರೋಗ್ಯ ಕಾಪಾಡಲು ಅವಶ್ಯಕವಾದ ಒಮೆಗಾ ೩ ಫ್ಯಾಟಿ ಆಸಿಡ್ ಸಹ ಸಾಕಷ್ಟು ಮೊಳಕೆ ಕಾಳುಗಳಲ್ಲಿ ಸಿಗುತ್ತವೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ಬಹು ದೊಡ್ಡ ಲಾಭವೆಂದರೆ ಮೊಳಕೆ ಬರಿಸಿದ ಕಾಳುಗಳನ್ನು ಬಳಸಿ ಅಡಿಗೆ ಮಾಡಲು ಕಡಿಮೆ ಸಮಯ ಸಾಕು. ಹೀಗಾಗಿ ಅಡುಗೆ ಅನಿಲ (ಗ್ಯಾಸ್) ಕಡಿಮೆ ಬಳಕೆಯಾಗಿ, ಹಣದ ಉಳಿತಾಯವಾಗುತ್ತದೆ.

ಮಾಹಿತಿ: ‘ಸೂತ್ರ’ ಪತ್ರಿಕೆ

ಚಿತ್ರ ಕೃಪೆ: ಅಂತರ್ಜಾಲ ತಾಣ