ಕಾಳ್ಗಿಚ್ಚು ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯ

ಕಾಳ್ಗಿಚ್ಚು ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯ

ಬೇಸಗೆ ಕಾಲ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಳ್ಗಿಚ್ಚು ಪ್ರಮಾಣ ಹೆಚ್ಚುತ್ತಲೇ ಇದ್ದು ಇದನ್ನು ನಿಯಂತ್ರಿಸುವುದಕ್ಕೆ ರಾಜ್ಯ ಸರಕಾರ ತುರ್ತು ಸ್ಪಂದಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ತನ್ನ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದೆಯಾದರೂ ವ್ಯವಸ್ಥೆಯನ್ನು ಇನ್ನಷ್ಟು ಸನ್ನದ್ದ ಸ್ಥಿತಿಯಲ್ಲಿ ಇಡಬೇಕಾಗಿದೆ.

ಕಳೆದೊಂದು ತಿಂಗಳಲ್ಲಿ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದು, ಸಾಕಷ್ಟು ಅರಣ್ಯ ನಾಶವಾಗಿದೆ. ದಟ್ಟಡವಿಯಲ್ಲಿ ಕಾಳ್ಗಿಚ್ಚು ಕಂಡು ಬಂದರೆ ತತ್ ಕ್ಷಣವೇ ಬೆಂಕಿ ನಂದಿಸಲು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಅನೇಕ ತೊಡಕುಗಳು ಸೃಷ್ಟಿಯಾಗಿವೆ. ಸಕಾಲದಲ್ಲಿ ಸ್ಪಂದಿಸಲು ಸಾಧ್ಯವಾಗದೇ ಇದ್ದರೆ ನೂರಾರು ಹೆಕ್ಟೇರ್ ಕಾಡುಗಳು ಬೆಂಕಿಗೆ ಆಹುತಿಯಾಗುವ ಅಪಾಯವಿರುತ್ತದೆ. ವಿದೇಶಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಾಗ ಅದರ ನಿಯಂತ್ರಣಕ್ಕೆ ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತದೆ. ಆದರೆ ರಾಜ್ಯದಲ್ಲಿ ಈ ಸೌಲಭ್ಯದ ಕೊರತೆ ಇದ್ದು, ಹೆಲಿಕಾಪ್ಟರ್ ಖರೀದಿಸಿ, ಅರಣ್ಯ ಇಲಾಖೆಗೆ ನೀಡುವ ಇಚ್ಛಾಶಕ್ತಿಯನ್ನು ರಾಜ್ಯ ಸರಕಾರ ತೋರಬೇಕಾಗಿದೆ.

ಹಳೆ ಮೈಸೂರು ಭಾಗದಲ್ಲಿ ಬೇಸಗೆ ಬಂದರೆ ಬಂಡೀಪುರ, ನಾಗರಹೊಳೆ, ಬಿ ಆರ್ ಟಿ, ಎಂಎಂ ಹಿಲ್ಸ್ ಮುಂತಾದ ಪ್ರದೇಶಗಳಿಗೆ ಬೆಂಕಿ ಬೀಳುವುದು ಸಾಮಾನ್ಯ. ಕಾಡುಗಳು ಸಮತಟ್ಟಾಗಿದ್ದರೆ ಬೆಂಕಿ ಬಿದ್ದಾಗ ಆ ಪ್ರದೇಶಗಳಿಗೆ ತತ್ ಕ್ಷಣವೇ ವಾಹನಗಳ ಮೂಲಕ ತಲುಪಿ ಬೆಂಕಿಯನ್ನು ನಿಯಂತ್ರಣಕ್ಕೆ ತರಬಹುದು. ಕಣಿವೆ, ಬೆಟ್ಟ ಇಳಿಜಾರಿನಿಂದ ಕೂಡಿದ ಅಡವಿಯಲ್ಲಿ ವಾಹನಗಳ ಮೂಲಕ ತೆರಳಿ ಬೆಂಕಿ ನಂದಿಸುವುದು ಕಷ್ಟ. ಕೆಲವು ದಿನಗಳ ಹಿಂದೆ ಸಕಲೇಶಪುರದಲ್ಲಿ ಇಂಥ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು ಇಬ್ಬರು ತೀವ್ರ ಗಾಯಗೊಂಡಿದ್ದರು. ಸೂಕ್ತ ವ್ಯವಸ್ಥೆಗಳಿದ್ದರೆ ಅಲ್ಲಿ ಪ್ರಾಣ ಕಾಪಾಡುವುದಕ್ಕೆ ಅವಕಾಶಗಳಿದ್ದವು.

ಫೆ.೧೮ರಂದು ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ರೇಂಜ್ ವ್ಯಾಪ್ತಿಯ ಕೋಟೆ ಬೆಟ್ಟ ಹಾಗೂ ನಿಶಾನಿ ಬೆಟ್ಟದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿತ್ತು. ಅದೇ ದಿನ ಸಕಲೇಶಪುರ ತಾಲೂಕಿನ ರಣಭಿಕ್ತಿ ರಕ್ಷಿತಾರಣ್ಯ ಬೆಂಕಿಗಾಹುತಿಯಾಯಿತು. ಫೆ.೨೩ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಕಡೆಯಿಂದ ಅಳದಂಗಡಿಯ ಊರ್ಜಾಲುಬೆಟ್ಟ ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪ್ರದೇಶ ಸುಟ್ಟು ಭಸ್ಮವಾಯಿತು. ಹಾಗೆಯೇ ಫೆ.೨೫ರಂದು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿನ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಸತತ ನಾಲ್ಕು ದಿನಗಳ ಕಾಲ ಹೊತ್ತಿ ಉರಿಯಿತು. ಮಾ.೪ರಂದು ಬಂಡೀಪುರ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಮೊಗನಹಳ್ಳಿ ಬಳಿ ಬೆಟ್ಟಕ್ಕೆ ಬೆಂಕಿ ಬಿದ್ದು ಬಹಳಷ್ಟು ಅರಣ್ಯ ನಾಶವಾಯಿತು. ಅದೇ ದಿನ ಚಾಮುಂಡಿಬೆಟ್ಟದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅಪಾರ ಪ್ರಮಾಣದ ಕಾಡು ನಾಶವಾಯಿತು. ಕೊಡಗು ಜಿಲ್ಲೆ ನಾಪೊಕ್ಲು ಸಮೀಪದ ಕಕ್ಕಬೆ ವ್ಯಾಪ್ತಿಯ ಇಗ್ಗುತ್ತಪ್ಪ ಬೆಟ್ಟ, ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೂ ಕಾಳ್ಗಿಚ್ಚು ಆವರಿಸಿತ್ತು. ಅದೇ ದಿನ ಚಿಕ್ಕಮಗಳೂರು ಜಿಲ್ಲಾ ವಿಭಾಗದ ಚಾರ್ಮಾಡಿ ಘಾಟಿಯ ಅಲೇಖಾನ್ ಹೊರಟ್ಟಿ ಗುಡ್ಡದಲ್ಲಿ ರವಿವಾರ ಬೆಂಕಿ ಹತ್ತಿಕೊಂಡು ಸಾಕಷ್ಟು ಪ್ರಮಾಣದ ಕಾಡು ನಾಶವಾಗಿದೆ. ಈ ಎಲ್ಲ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಅರಣ್ಯ ಇಲಾಖೆ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅರಣ್ಯ ಇಲಾಖೆಯನ್ನು ಇನ್ನಷ್ಟು ಸದೃಢಗೊಳಿಸಬೇಕಾಗಿದ್ದು, ಹೆಲಿಕಾಪ್ಟರ್ ಖರೀದಿಗೆ ತತ್ ಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಂರಕ್ಷಣ ಕ್ಷೇತ್ರದ ಕಾರ್ಯಕರ್ತರು ಹಾಗೂ ಪರಿಸರವಾದಿಗಳಿಂದ ಕೇಳಿ ಬಂದಿದೆ. 

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೮-೦೩-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ