ಕಾವೇರಿ ತೀರದ ಕಥೆಗಳು

ಕಾವೇರಿ ತೀರದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೇಜರ್। ಡಾ। ಕುಶ್ವಂತ್ ಕೋಳಿಬೈಲು
ಪ್ರಕಾಶಕರು
ಮೈತ್ರಿ ಪ್ರಕಾಶನ, ಬನಶಂಕರಿ ಮೊದಲ ಸ್ಟೇಜ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೨

ಈಗಾಗಲೇ ‘ಕೂರ್ಗ್ ರೆಜಿಮೆಂಟ್' ಎಂಬ ಕಥಾ ಸಂಕಲನದ ಮೂಲಕ ಪರಿಚಯವಾಗಿರುವ ಮೇಜರ್ ಕುಶ್ವಂತ್ ಕೋಳಿಬೈಲು ಅವರ ಮತ್ತೊಂದು ಕಥಾ ಸಂಕಲನ ಬಿಡುಗಡೆಯಾಗಿದೆ. ಈ ಪುಸ್ತಕದ ಕಥೆಗಳೂ ಮಡಿಕೇರಿಯ ಪರಿಸರದಲ್ಲೇ ನಡೆದಿರುವುದರಿಂದ ಇದಕ್ಕೆ ‘ಕಾವೇರಿ ತೀರದ ಕಥೆಗಳು' ಎಂದು ಹೆಸರಿಸಿದ್ದಾರೆ. ಕುಶ್ವಂತ್ ಕೋಳಿಬೈಲು ಅವರ ಬರವಣಿಗೆಯ ಶೈಲಿ ಬಹಳ ಆಪ್ತವಾಗುತ್ತದೆ ಮತ್ತು ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಕಥೆಗಳು ನಮ್ಮ ಸುತ್ತಮುತ್ತಲಿನಲ್ಲೆಲ್ಲೋ ನಡೆದಿದೆ ಎಂದು ಭಾಸವಾಗುತ್ತದೆ. ಲೇಖಕರು ಭಾರತೀಯ ಸೈನ್ಯದಲ್ಲಿ ದುಡಿದ ಹಿನ್ನಲೆ ಉಳ್ಳವರು ಹಾಗೂ ಮಕ್ಕಳ ವೈದ್ಯರೂ ಹೌದು.

ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಹರೀಶ್ ಕೇರ ಇವರು. ಇವರು “ ಕುಶ್ವಂತ್ ಕತೆಗಳು ಕೊಡಗಿನ ಭೂಪ್ರದೇಶದ ಕತೆಗಳಾಗಿವೆ ಎಂಬ ಮಾತ್ರಕ್ಕೆ ಅವು ಅಲ್ಲಿಗೆ ಸೀಮಿತವಾಗಿವೆ ಎಂದಲ್ಲ. ಅವು ಈ ಸರಹದ್ದನ್ನು ದಾಟಿ ವಿಶಾಲವಾದ ಒಂದು ಮಾನವೀಯ ನೆಲೆಯಲ್ಲಿ ಮಿಡಿಯುತ್ತವೆ. ಪರಿವರ್ತನಶೀಲತೆಯ ಕ್ಷೋಭೆಗಳು ಬದುಕನ್ನು ಕಾಡುತ್ತವೆ ಎಂಬುದನ್ನು ನಂಬುವ ಎಲ್ಲರನ್ನು ಈ ಕತೆಗಳು ತಮ್ಮದೇ ರೀತಿಯಲ್ಲಿ ಸ್ಪರ್ಶಿಸುತ್ತವೆ.

ಕುಶ್ವಂತ್ ಕತೆಗಳನ್ನು ಬಿಡಿಬಿಡಿಯಾಗಿ ಓದಿದರೆ ನೀಡುವ ಅನುಭವವೇ ಬೇರೆ ; ಇಡೀ ಕೃತಿಯನ್ನು ಓದಿದರೆ ಆಗುವ ಅನುಭವ ಅದಕ್ಕಿಂತ ಭಿನ್ನ- ಅದು ಕೊಡಗು ಎಂಬ ಭೂಪ್ರದೇಶದ ಒಂದು ಕಾಲಘಟ್ಟದ, ಕೆಲವು ತಲೆಮಾರುಗಳು ಅನುಭವಿಸುವ ಕ್ಷೋಭೆಯ ರೂಪಕವಾಗಿ ನಿಲ್ಲುತ್ತದೆ. ಇಲ್ಲಿನ ಬಿಡಿ ಕತೆಗಳು ಒಟ್ಟಾರೆಯಾಗಿ ಒಂದು ಕಾದಂಬರಿಯಾಗ ಬಹುದಾದ ಜೀವ ದ್ರವ್ಯವೂ ಹೌದು. ಅವರೊಳಗೆ ಮಿಡಿಯುತ್ತಿರಬಹುದಾದ ಕಾದಂಬರಿಗೆ ಇವು ಮುನ್ನುಡಿಯಾಗಿವೆ. ಅವರಿಂದ ಇನ್ನಷ್ಟು ಕೃತಿಗಳ ನಿರೀಕ್ಷೆ ನನ್ನದು" ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಲೇಖಕರಾದ ಕುಶ್ವಂತ್ ಕೋಳಿಬೈಲು ಇವರು ತಮ್ಮ ಮಾತಿನಲ್ಲಿ ಈ ಪುಸ್ತಕ ಬರೆಯಲು ಹೊರಟ ಬಗ್ಗೆ, ಅವರನ್ನು ಕಾಡಿದ ವಿಭಿನ್ನ ವಿಷಯಗಳ ಬಗ್ಗೆ ಹೀಗೆ ಬರೆದ್ದಾರೆ. “ಸೈನಿಕರ ಬಗೆಗಿನ ಕಥೆಗಳನ್ನು ಮಾತ್ರ ಕೂರ್ಗ್ ರೆಜಿಮೆಂಟ್ ಸಂಕಲನದಲ್ಲಿ ಸೇರಿಸಿದ ಕಾರಣದಿಂದಾಗಿ ನನ್ನನ್ನು ಕಾಡಿದ ವಿಭಿನ್ನ ವಿಷಯಗಳ ಮತ್ತು ಪಾತ್ರಗಳ ಬಗ್ಗೆ ಬರೆದಿದ್ದ ಒಂದೆರಡು ಹಳೇ ಕಥೆಗಳು ನನ್ನ ಜೋಳಿಗೆಯಲ್ಲಿ ಹಾಗೆಯೆ ಉಳಿದಿದ್ದವು. ನಾನು ಮಹಾರಾಷ್ಟ್ರದಿಂದ ಕೊಡಗಿಗೆ ಮರಳಿ, ಇಲ್ಲಿ ವೈದ್ಯ ವೃತ್ತಿಯನ್ನು ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದೇನೆ. ಒಬ್ಬ ಮಕ್ಕಳ ವೈದ್ಯನಾಗಿ ಸಮಾಜದ ಜೊತೆಗಿರುವ ನಿರಂತರ ಸಂಪರ್ಕದ ಕಾರಣ ನಿತ್ಯ ನೂರಾರು ವಿಭಿನ್ನ ವ್ಯಕ್ತಿಗಳ ಸಂಪರ್ಕಕ್ಕೆ ಬರುತ್ತೇನೆ ಮತ್ತು ಜನರ ನೋವು ನಲಿವುಗಳನ್ನು ಅತ್ಯಂತ ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸುತ್ತೇನೆ. ಸರಕಾರಿ ಆಸ್ಪತ್ರೆಯಲ್ಲಿ ಎದುರಾಗುವ ಗ್ರಾಮೀಣ ಭಾಗದ ಜನರು ಮತ್ತು ಸಂಜೆ ಕ್ಲಿನಿಕ್ಕಿನಲ್ಲಿ ಮುಖಾಮುಖಿಯಾಗುವ ಹೆಚ್ಚು ಸುಶಿಕ್ಷಿತ ಮತ್ತು ಶ್ರೀಮಂತರ ಜನರು ನನಗೇ ಅರಿವಿಲ್ಲದಂತೆ ನನ್ನ ಕಥೆಗಳಲ್ಲಿ ಪಾತ್ರಗಳಾಗಿದ್ದಾರೆ. ಹೃದಯವನ್ನು ತಟ್ಟಿದ ಕೆಲವು ಘಟನೆಗಳಿಗೆ ಸ್ವಲ್ಪ ಮಸಾಲೆಯನ್ನು ಸೇರಿಸಿ ಕಥೆಯನ್ನಾಗಿಸಿದ್ದೇನೆ. ಒಂದು ಘಟನೆಯನ್ನು ಕಥೆಯನ್ನಾಗಿಸುವುದು ಕೂಡ ಅಡುಗೆ ಮಾಡಿದ ಹಾಗಲ್ಲವೇ?! ಸ್ವಲ್ಪ ಹೆಚ್ಚು ಕಮ್ಮಿಯಾದರೂ ರುಚಿ ಕೆಡುವುದಿಲ್ಲವೇ !?”

ಪುಸ್ತಕದಲ್ಲಿ ಹನ್ನೊಂದು ಕಥೆಗಳಿವೆ. ಬೀಟಿ ಕಾಡು ಎಸ್ಟೇಟ್, ಕೊರೊನಾ ವಾರಿಯರ್, ಹಳ್ಳಿ ರೇಡಿಯೋ, ಒದ್ದೆ ಹಾಸಿಗೆ, ದೇವರ ಗದ್ದೆ, ದೇವರಪುರ, ಮದುವೆ ಮಾಡಿ ನೋಡು, ಪ್ರಕಾಶನ ಹುಡುಗಿ, ಬೆಂಗಳೂರು ಚಲೋ, ತೊದಲು ಬದಲು ಮತ್ತು ಎಮ್ಮೆ ಮನೆಯಂಗಳದಿ. ಎಲ್ಲಾ ಕಥೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಆದರೆ ‘ಒದ್ದೆ ಹಾಸಿಗೆ' ಕಥೆ ಮಾತ್ರ ಓದಿ ಮುಗಿಸಿದ ಬಳಿಕ ತುಂಬಾ ಕಾಡುತ್ತದೆ. ಲೇಖಕರು ಸ್ವತಃ ಮಕ್ಕಳ ತಜ್ಞರಾಗಿದ್ದುದರಿಂದಲೇ ಈ ರೀತಿಯ ಒಂದು ಕಥೆ ಬರೆಯಲು ಸಾಧ್ಯವಾಯಿತೇನೋ ಎಂದು ನನ್ನ ಅನುಮಾನ. ಆ ಕಥೆಯಲ್ಲಿ ನಾಲ್ಕು ವರ್ಷದ ಮಗು ರಾತ್ರಿ ನಿದ್ರೆಯಲ್ಲಿ ಹಾಸಿಗೆಯನ್ನು ಒದ್ದೆ ಮಾಡುತ್ತಿತ್ತು. ಇದು ಅದರ ತಂದೆಗೆ ವಿಪರೀತ ಕೋಪ ಬರಿಸುತ್ತಿತ್ತು. ಈ ವಿಷಯದಲ್ಲಿ ಪ್ರತೀ ದಿನ ಬೆಳಿಗ್ಗೆ ಗಂಡ ಹೆಂಡತಿಯರಲ್ಲಿ ಗಲಾಟೆಯಾಗುತ್ತಿತ್ತು. ಸ್ವತಃ ನರ್ಸ್ ಆಗಿರುವ ಮಗುವಿನ ತಾಯಿಗೆ ಈ ಮಗುವಿನ ಅಭ್ಯಾಸ ಸ್ವಲ್ಪ ದೊಡ್ಡದಾದ ಬಳಿಕ ತಂತಾನೇ ನಿಂತು ಹೋಗಲಿದೆ ಎಂದು ತಿಳಿದಿದ್ದರೂ ತಂದೆ ಮಾತ್ರ ಒಪ್ಪಲು ತಯಾರಿಲ್ಲ. ಕೊನೆಗೆ ನರ್ಸ್ ಅಮ್ಮ ತೆಗೆದುಕೊಂಡ ನಿರ್ಧಾರವೇನು? ಬಹಳ ಮನೋಜ್ಞವಾದ ಕಥೆಯಿದು.

ಸುಮಾರು ೯೦ ಪುಟಗಳ ಈ ಪುಟ್ಟ ಕಥಾ ಸಂಕಲನ ಓದಲು ಬಹಳ ಖುಷಿಕೊಡುತ್ತದೆ. ಮಡಿಕೇರಿಯಲ್ಲಿ ತಿರುಗಾಡಿ ಬಂದ ಅನುಭವವನ್ನೂ ಕೊಡುತ್ತದೆ. ಅಲ್ಲಲ್ಲಿ ತಿಳಿ ಹಾಸ್ಯದ ಹೊನಲನ್ನೂ ಹರಿಸುತ್ತದೆ. ಒಟ್ಟಿನಲ್ಲಿ ಓದಬಹುದಾದ ಉತ್ತಮ ಕಥಾ ಸಂಕಲನ ಎನ್ನಬಹುದು.