ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ

ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿ

ಕಾವೇರಿ ಎಂದರೆ ಕನ್ನಡಿಗರ ಪಾಲಿಗೆ ಕೇವಲ ನದಿಯಲ್ಲ, ಜೀವನಾಡಿ, ಜೀವಜಲ ನೀಡುತ್ತಿರುವ ದೇವತೆ. ಇಂಥ ಕಾವೇರಿ ಉಗಮ ಸ್ಥಳವೆಂದೇ ತಲಕಾವೇರಿ ಪ್ರಖ್ಯಾತಿ, ಅಷ್ಟೇ ಅಲ್ಲ, ನವದಂಪತಿ ತಲಕಾವೇರಿಗೆ ಬಂದು ಹರಕೆ ಸಲ್ಲಿಸಲು ಇಷ್ಟಪಡುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇಲ್ಲಿ ಗಂಡ ಮಳೆಯಾದರೆ, ಹೆಂಡತಿ ಭುವಿ, ಅವನು ಪ್ರೀತಿ ಸುರಿಸುತ್ತಾನೆ. ಅವಳು ತಣ್ಣಗೆ ತಣಿಯುತ್ತಾಳೆ ಎಂಬ ಅರ್ಥದಲ್ಲಿ ದಾಂಪತ್ಯ ಅರ್ಥವನ್ನು ಹಲವರು ವರ್ಣಿಸುತ್ತಾರೆ.

ಕಾವೇರಿ ಕರ್ನಾಟಕದ ಪವಿತ್ರ, ಪುಣ್ಯವಾಹಿನಿ, ಭಕ್ತಿ ಮುಕ್ತಿಪ್ರದಾಯಿನಿ ಎಂಬ ಖ್ಯಾತಿಯನ್ನು ಗಳಿಸಿದಾಕೆ. ಕಾವೇರಿಯಲ್ಲಿ ಸ್ನಾನ, ಸ್ಮರಣೆ ಮಾಡಿದರೆ ಸಕಲ ಪಾಪ ನಿವಾರಣೆಯೆಂಬ ನಂಬಿಕೆ. ಹೀಗಾಗಿ, ಕಾವೇರಿ ದಕ್ಷಿಣದ ಗಂಗೆ ಎಂದೇ ಜನಜನಿತ, ಕೊಡಗು ತಾಯ ತವರು ಮನೆ. ಬ್ರಹ್ಮದೇವನ ಪಾದಸ್ಪರ್ಶದಿಂದ ಪವಿತ್ರವಾದ ಶೈಲಗಿರಿ ಎನ್ನುವುದಾಗಿ ಈ ಸ್ಥಳ ಪ್ರಸಿದ್ಧವಾಗಿದೆ. ಈ ಬೆಟ್ಟದ ಮೇಲೆ ಸಪ್ತ ಋಷಿಗಳು ಲೋಕ ಕಲ್ಯಾಣಕ್ಕಾಗಿ ಯಾಗ ಮಾಡಿದ್ದರು ಎಂಬುದರ ಕುರುಹು ಬಲಭಾಗದಲ್ಲಿರುವ ಶಿಖರದಲ್ಲಿ ಇಂದೂ ಕಾಣಬಹುದು.

ಪೂರ್ವ ಕಾಲದಲ್ಲಿ ಕವೇರನೆಂಬ ಬ್ರಾಹ್ಮಣರು ಬ್ರಹ್ಮಗಿರಿಯಲ್ಲಿ ವಾಸ ಮಾಡಿಕೊಂಡಿದ್ದರು. ತಮಗೆ ಸಂತತಿಯಾಗಬೇಕೆಂದು ಬ್ರಹ್ಮನನ್ನು ಓಲೈಸಲು ತೀವ್ರ ತಪಸ್ಸು ಆಚರಿಸುತ್ತಾರೆ. ಬ್ರಹ್ಮ ಪ್ರತ್ಯಕ್ಷನಾಗಿ ನೀವು ಹಿಂದಿನ ಜನ್ಮದಲ್ಲಿ ಪುತ್ರರ ಸಂತಾನಕ್ಕಾಗಿ ಪುಣ್ಯ ಕೆಲಸ ಮಾಡಿಲ್ಲ. ಹಾಗಾಗಿ, ಲೋಪಮುದ್ರೆಯೆಂಬ ಮಾನಸ ಪುತ್ರಿಯನ್ನು ಅನುಗ್ರಹಿಸುತ್ತಿದ್ದೇನೆ. ಆಕೆಯನ್ನು ಸ್ವೀಕರಿಸುವಂತೆ ಹೇಳುತ್ತಾರೆ. ಅನಂತರ ಒಮ್ಮೆ ಲೋಪಾಮುದ್ರೆ ದೇವಿಯು ಕವೇರ ಮುನಿಯನ್ನು ಸಂತೈಸುತ್ತಾ 'ತಂದೆಯೇ ಮುಂದೆ ನಾನು ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿದು ಸಮುದ್ರ ಸೇರುತ್ತೇನೆ. ಜನರು ನನ್ನನ್ನು ಬ್ರಹ್ಮನ ಮಾನಸ ಪುತ್ರಿ ಕಾವೇರಿ ಎಂದು ಕರೆಯುತ್ತಾರೆ' ಎನ್ನುತ್ತಾಳೆ. ಇದಕ್ಕೆ ಕವೇರ ಮುನಿಯು ಲೋಪಮುದ್ರೆಯ ಇಚ್ಛೆಯನ್ನು ಒಪ್ಪಿ ದೇಹತ್ಯಾಗ ಮಾಡುತ್ತಾನೆ.

ಕಾವೇರಿಯು ಬ್ರಹ್ಮಗಿರಿಯ ತಪ್ಪಲಿನಲ್ಲಿ ಬ್ರಹ್ಮಋಷಿಗಳ ಪವಿತ್ರವಾದ ತಪ್ಪಲಿನಲ್ಲಿ ವಾಸಿಸುತ್ತಾಳೆ. ಶ್ರೀ ಅಗಸ್ತ್ಯ ಮುನಿಯವರು ಕಾವೇರಿಯನ್ನು ವಿವಾಹವಾಗಲು ಬಯಸುತ್ತಾರೆ. ಕಾವೇರಿ ಮದುವೆಗೆ ಒಪ್ಪಿದರೂ, ನೀವು ನನ್ನೊಂದಿಗೇ ಇರಬೇಕು. ನನ್ನ ಬಿಟ್ಟು ಎಲ್ಲಿಯಾದರೂ ಹೋದದ್ದೇ ಆದರೆ, ನಾನು ನದಿಯಾಗಿ ಹರಿದು ಹೋಗುತ್ತೇನೆ ಎನ್ನುವ ಶರತ್ತು ಹಾಕುತ್ತಾಳೆ ಕಾವೇರಿ. ಅನಂತರ ಕೆಲ ಸಮಯದ ನಂತರ ದಂಪತಿಗಳು ಗೃಹಸ್ಥಾಶ್ರಮ ಜೀವನ ನಡೆಸುತ್ತಾರೆ. ಒಂದು ಬ್ರಾಹ್ಮೀ ಮುಹೂರ್ತದಲ್ಲಿ ಅಗಸ್ತ್ಯ ಮುನಿಗಳು ನದಿ ತೀರಕ್ಕೆ ಸ್ನಾನಕ್ಕೆ ತೆರಳುವ ಮುನ್ನ ಕಾವೇರಿಯನ್ನು ಆವಾಹನೆ ಮಾಡಿ ಕಮಂಡಲದಲ್ಲಿ ಇರಿಸಿ ಹೋಗುವರು. ಕಾವೇರಿ ಕೂಡಲೇ ಕಮಂಡಲದಿಂದ ಹೊರಬಂದು ನದಿಯಾಗಿ ಹರಿಯುವಳು, ಅಗಸ್ತ್ಯ ಮುನಿಗಳೂ ನದಿಯಾಗಿ ಹರಿಯದೇ ಉಳಿಯಬೇಕೆಂದು ಒತ್ತಾಯಿಸುತ್ತಾರೆ. ಆಗ, ಪತಿಯನ್ನುದ್ದೇಶಿಸಿ 'ತಾನು ನದಿಯಾಗಿ ಹೊರಟುಹೋಗುವೆ' ಎಂದು ಹೇಳಿ ಕಾವೇರಿಯಾಗಿ ಹರಿಯುವಳು. 

ಕಾವೇರಿ, ಕನ್ನಿಕೆ, ಸುಜ್ಯೋತಿಯಾಗಿ ಹರಿದು ಸಮುದ್ರ ಸೇರುತ್ತಾಳೆ. ಈ ಮೂರು ನದಿಗಳು ಭಾಗಮಂಡಲದಲ್ಲಿ ಸೇರುವುದರಿಂದ ತ್ರಿವೇಣಿ ಸಂಗಮವಾಗಿದೆ. ತಲಕಾವೇರಿಯಲ್ಲಿ ಸಹಸ್ರಾರು ಜನ ತಮ್ಮ ಇಷ್ಟ ಈಡೇರಿದ್ದಕ್ಕಾಗಿ ಹರಕೆ ಸಲ್ಲಿಸುತ್ತಾರೆ. ಭಕ್ತರು ಸಲ್ಲಿಸುವ ಪ್ರಮುಖ ಹರಕೆ ಬೆಳ್ಳಿ, ತೊಟ್ಟಿಲು, ಕುಂಕುಮದ ಬಿಚ್ಚೋಲೆ. ಇದರಲ್ಲಿ ಕುಂಕುಮ, ತಾಳಿ, ಕಾಲುಂಗುರ, ಬಳೆ ಒಳಗೊಂಡಿರುತ್ತದೆ.

ಕಾವೇರಿ ತೀರ್ಥೋದ್ಭವ : ಜ್ಯೋತಿಷ್ಯ ಗಣಿತ ರೀತಿಯಾಗಿ ಪ್ರಕಟಿಸಲ್ಪಡುವ ತುಲಾ ಸಂಕ್ರಾಂತಿ ಮುಹೂರ್ತಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಉದ್ಭವಾಗುತ್ತದೆ. ಅರ್ಚನೆ ಆರಂಭವಾಗುತ್ತಿದ್ದಂತೆಯೇ ಹಾಲು ಉಕ್ಕಿ ಬರುವಂತೆ ಪವಿತ್ರ ಜಲ ಉಕ್ಕಿ ಬರುತ್ತದೆ. ಹೀಗೆ ಶ್ರೀ ಕಾವೇರಿ ಭಕ್ತಾದಿಗಳ, ಜನಸಾಗರದ ಜೀವನದಿಯಾಗಿದ್ದಾಳೆ. ಇಂಥ ಅಪೂರ್ವ ಕ್ಷಣವನ್ನು ಕಾವೇರಿ ತೀರ್ಥೋದ್ಭವದ ದಿನದಂದು ಕಾಣಬಹುದು.

ತಲಕಾವೇರಿಗೆ ಬರಲು ಸಾಕಷ್ಟು ಬಸ್‌ ಸೌಕರ್ಯವಿದೆ. ಜೊತೆಗೆ ಇಲ್ಲೇ ತಂಗಲೂ ಕೂಡ ಕೊಠಡಿ ವ್ಯವಸ್ಥೆ ಇರುವುದರಿಂದ ಕುಟುಂಬ ಸಮೇತ ಬರಬಹುದು. ತಲಕಾವೇರಿ ಸುತ್ತಮುತ್ತ ಭಾಗಮಂಡಲ ಹಾಗೂ ಕೊಡಗು ಸಿಗುವುದರಿಂದ ಪ್ರಕೃತಿ ಸೌಂದರ್ಯ ಸವಿಯಲು ಕೂಡ ಅವಕಾಶವಿದೆ. ಕಾವೇರಿ ಪಾಪವನ್ನು ಕಳೆವ ತಾಯಿ ಎಂಬ ಪ್ರತೀತಿ ಇರುವುದರಿಂದ ತೀರ್ಥೋದ್ಭವ ಸಂದರ್ಭದಲ್ಲಿ ಇಲ್ಲಿನ ನೀರನ್ನು ತಲೆ ಮೇಲೆ ಚಿಮುಕಿಸಿಕೊಂಡರೆ ಸಕಲ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರ ಮನದಲ್ಲಿ ಈಗಲೂ ಇದೆ.

ತಲಕಾವೇರಿ ಉಗಮ ಸ್ಥಾನವು ಮಡಿಕೇರಿಯಿಂದ 44 ಕಿ. ಮೀ, ಉಡುಪಿಯಿಂದ 195 ಕಿ. ಮೀ, ಮೈಸೂರಿನಿಂದ 161 ಕಿ. ಮೀ, ಮಂಗಳೂರಿನಿಂದ 144 ಕಿಲೋ ಮೀಟರ್ ದೂರವಿದೆ.

"ಕನ್ನಡ ನಾಡಿನ ಜೀವನದಿ ಈ ಕಾವೇರಿ

ಓ ಹೋ ಹೋ ಜೀವನದಿ ಈ ಕಾವೇರಿ

ಅನ್ನವ ನೀಡುವ ದೇವನದಿ ಈ ವಯ್ಯಾರಿ

ಓ ಹೋ ಹೋ ದೇವನದಿ ಈ ವಯ್ಯಾರಿ" 

ಬನ್ನಿ ಪ್ರವಾಸ ಹೋಗೋಣ .....

(ಚಿತ್ರಗಳು : ಅಂತರ್ಜಾಲ ಕೃಪೆ)

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು