ಕಾವೇರಿ ಸಂಕಷ್ಟ ಸೂತ್ರಕ್ಕೆ ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ವಹಿಸಲಿ

ಕರ್ನಾಟಕ ಹಾಗೂ ತಮಿಳುನಾಡು ನಡುವೆ ಜೀವನದಿ ಕಾವೇರಿಗಾಗಿ ಮತ್ತೊಂದು ಸುತ್ತಿನ ಕದನ ಆರಂಭವಾಗಿ, ತಾರಕಕ್ಕೇರುತ್ತಿದೆ. ನಿಗದಿಯಂತೆ ಕರ್ನಾಟಕ ತನಗೆ ನೀರು ಹರಿಸುತ್ತಿಲ್ಲ ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿದ್ದ ತಮಿಳುನಾಡು, ನೀರು ಬಿಡಿಸಿಕೊಳ್ಳುವಲ್ಲಿ ಸಫಲವಾಗಿದೆ. ಆದರೆ ಕರ್ನಾಟಕ ಹರಿಸುತ್ತಿರುವ ನೀರು ತನಗೆ ಸಾಲುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಕದವನ್ನೂ ಬಡಿದಿದೆ. ಅದರ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ. ಈ ನಡುವೆ ಕರ್ನಾಟಕ ಸರ್ಕಾರ ಸರ್ವಪಕ್ಷಗಳ ಸಭೆ ಆಯೋಜಿಸಿ ಪ್ರಬಲ ಕಾನೂನು ಹೋರಾಟದ ಜತೆಗೆ ಕೇಂದ್ರ ಸರ್ಕಾರಕ್ಕೆ ನಿಯೋಗ ಒಯ್ಯುವ ನಿರ್ಧಾರವನ್ನೂ ತೆಗೆದುಕೊಂಡಿದೆ. ಈ ಹೋರಾಟ ಯಾವ ಹಂತದವರೆಗೂ ಹೋಗಲಿದೆ ಎಂಬುದನ್ನು ಮುಂದಿನ ದಿನಗಳೇ ಹೇಳಬೇಕು. ಆದರೆ ಇಲ್ಲಿಯವರೆಗಿನ ಇತಿಹಾಸವನ್ನು ಗಮನಿಸಿದರೆ, ತಮಿಳುನಾಡು ಯಾವಾಗಲೂ ಕಾವೇರಿ ಹೋರಾಟದಲ್ಲಿ ಗೆಲ್ಲುತ್ತಲೇ ಇದೆ. ಅದಕ್ಕೆ ಮುಖ್ಯ ಕಾರಣವೆಂದರೆ ಕಾವೇರಿ ನದಿ ನೀರು ಹಂಚಿಕೆ ವೇಳೆ ನಿರ್ಲಕ್ಷಿಸಲಾಗಿರುವ ಒಂದು ವಿಷಯ. ಕಾವೇರಿಯಲ್ಲಿ ಸಮೃದ್ಧವಾಗಿ ನೀರು ಹರಿದಾಗ ಸಮಸ್ಯೆಯೇ ಉದ್ಭವಿಸುವುದಿಲ್ಲ. ಆದರೆ ಮಳೆ ಕೊರತೆ ಉಂಟಾಗಿ, ಕಾವೇರಿ ಬರಿದಾದಾಗ ಏನು ಮಾಡಬೇಕು ಎಂಬುದಕ್ಕೆ ಸ್ಪಷ್ಟ ಮಾರ್ಗಸೂಚಿ ಇಲ್ಲ. ಇಂತಹ ಒಂದು ಸಂಕಷ್ಟ ಸೂತ್ರ ಇದ್ದಿದ್ದರೆ, ಜಲ ವಿವಾದ ಪ್ರಾಯಶಃ ಇಷ್ಟು ತಾರಕಕ್ಕೇರುತ್ತಿರಲಿಲ್ಲ.
ಕಾವೇರಿ ವಿವಾದ ಭುಗಿಲೆದ್ದಾಗಲೆಲ್ಲಾ ಸರ್ಕಾರಗಳು ಸಂಕಷ್ಟ ಸೂತ್ರದ ಅಗತ್ಯವನ್ನು ಒತ್ತಿ ಹೇಳುತ್ತವೆ. ಚೆನ್ನಾಗಿ ಮಳೆಯಾದ ಸಂದರ್ಭದಲ್ಲಿ ಅದರ ಗೊಡವೆಗೇ ಹೋಗುವುದಿಲ್ಲ. ವಿವಾದ ಮತ್ತೆ ಕಾಣಿಸಿಕೊಂಡಾಗ ಸಂಕಷ್ಟ ಸೂತ್ರದ ಬೇಡಿಕೆ ಆರಂಭವಾಗುತ್ತದೆ. ಇದು ನಿಲ್ಲಬೇಕು. ಕರ್ನಾಟಕ ಹಾಗೂ ತಮಿಳುನಾಡು ನಡುವೆ ಮಧ್ಯಸ್ಥಿಕೆ ವಹಿಸಿ ಸಂಕಷ್ಟ ಸೂತ್ರವೊಂದನ್ನು ಕೇಂದ್ರ ಸರಕಾರ ರೂಪಿಸುವ ಮೂಲಕ ಈ ವಿವಾದ ಬಿಸಿಯನ್ನು ತಣ್ಣಗಾಗಿಸಬೇಕಿದೆ. ಈಗಿನ ಸಮಸ್ಯೆ ಎಂದರೆ, ನೀರಿರಲಿ ಬಿಡಲಿ ತೀರ್ಪಿನಂತೆ ನೀರು ಹರಿಸಿ ಎಂದು ತಮಿಳುನಾಡು ಆಗ್ರಹಿಸುತ್ತಿರುವುದು, ಕರ್ನಾಟಕದಲ್ಲಿ ಮಳೆಯ ತೀವ್ರ ಅಭಾವ ಎದುರಾಗಿ, ರೈತರು ಪರಿಪೂರ್ಣವಾಗಿ ಬಿತ್ತಲೂ ಆಗದಂತಹ, ಬೆಳೆಯುತ್ತಿರುವ ಬೆಳೆಗೆ ನೀರು ಹರಿಸಲಾಗದಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ತಮಿಳುನಾಡು ತನ್ನ ಹಿತವನ್ನಷ್ಟೇ ನೋಡುತ್ತಿದೆ. ಮೇಕೆದಾಟು ಅಣೆಕಟ್ಟು ಇದ್ದಿದ್ದರೆ, ಇಂತಹ ಸಂಕಷ್ಟ ಸ್ಥಿತಿ ಎದುರಾದಾಗ ತಮಿಳುನಾಡಿಗೆ ಭರಪೂರ ನೀರಾದರೂ ಸಿಗುತ್ತಿತ್ತು. ಅದರ ಹಠಮಾರಿತನದಿಂದಾಗಿ ಆ ಯೋಜನೆಯೂ ಸಾಕಾರವಾಗಿಲ್ಲ. ಹೀಗಾಗಿ ಸರ್ಕಾರ ನಿರ್ವಹಣಾ ಮಂಡಳಿ, ಸುಪ್ರೀಂ ಕೋರ್ಟ್ ನಲ್ಲಿ ಪ್ರಬಲವಾಗಿ ವಾದ ಮಂಡಿಸುವ ಮೂಲಕ ರಾಜ್ಯದ ರೈತರ ಹಿತವನ್ನು ಕಾಯಬೇಕಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೫-೦೮-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ