ಕಾವೇರಿ
ಮತ್ತದೇ ಮತ್ತದೇ ...
ಇವತ್ತು ಅದೇಕೋ "ಮತ್ತದೇ ಬೇಸರ, ಅದೆ ಸಂಜೆ, ಅದೇ ಏಕಾಂತ" ಭಾವಗೀತೆ ಮನಸ್ಸಿನಲ್ಲಿ ಗುನುಗುತ್ತಿದೆ. ಏನು ಕಾರಣ ಎಂದು ತಿಳಿಯುತ್ತಿಲ್ಲ. ಇಂದು ಕರ್ನಾಟಕದಲ್ಲಿ ಮತ್ತೊಮ್ಮೆ ಬಂದ್. ಎಲ್ಲವೂ ಮತ್ತೊಮ್ಮೆ ನಿಶ್ಯಬ್ದ. ಹೊರಗೆ ಬೀದಿಯಲ್ಲಿ ಜನರಿಲ್ಲ, ಜೋರಾಗಿ ಸದ್ದು ಮಾಡುವ ವಾಹನಗಳಿಲ್ಲ. ದಿನವೂ ತನ್ನಲ್ಲಿ ಜಾಗವಿಲ್ಲದಿದ್ದರೂ ಜನರನ್ನು ತುಂಬಿಕೊಂಡು ಹೋಗುವ ಬಸ್ಸುಗಳ ಅಬ್ಬರವಿಲ್ಲ. ಕೇವಲ ಆಕಾಶದಲ್ಲಿ ಹಾರಾಡುತಿರುವ ವಿಮಾನದ ಸದ್ದು ಮೇಲಿಂದ ಮೇಲೆ ಕೇಳುತ್ತಿದೆ. ಪಕ್ಕದ ಬೀದಿಯಲ್ಲಿ ಮಕ್ಕಳು ಸಂತೋಷದಿಂದ ಕ್ರಿಕೆಟ್ ಆಡುತ್ತಿದ್ದಾರೆ. ಅದೇಕೋ ಇಂದು ಮನಸ್ಸಿನಲ್ಲಿ ಬೇಸರ.
ಕಳೆದ ಒಂದು ವರ್ಷದಲ್ಲಿ ಮೂರನೆಯ ಬಾರಿ ಕರ್ನಾಟಕ ಬಂದ್. ನಾನು ಕೇರಳ, ಬಂಗಾಳವೆಂದರೆ ಬಂದ್ ಎಂದು ಅಣಗಿಸಿಸುತ್ತಿದ್ದೆ. ಈಗಿನ ಪರಿಸ್ಥಿತಿ ನೋಡಿದರೆ ಕರ್ನಾಟಕವೂ ಅವರಿಗೆ ಕಮ್ಮಿಯಿಲ್ಲ ಎಂದೆನಿಸುತ್ತಿದೆ. ಆದರೂ ಕೇರಳ, ಬಂಗಾಳವನ್ನು ಬಂದ್ ವಿಷಯದಲ್ಲಿ ಸೋಲಿಸಲು ಸಾಧ್ಯವಿಲ್ಲ ಬಿಡಿ.
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಇಂದು ಬಂದ್. ಕಾವೇರಿ ನ್ಯಾಯ ಮಂಡಳಿಯ ತೀರ್ಪು ತಮಿಳುನಾಡಿಗೆ ಹೆಚ್ಚಿನ ಪಾಲನ್ನು ನೀಡಿದೆ. ಕರ್ನಾಟಕಕ್ಕೆ ಕಿರಿಯ ಪಾಲು ಸಿಕ್ಕಿರುವುದು ನಮ್ಮಿಂದ ಸಹಿಸಲಾಗುತ್ತಿಲ್ಲ. ಸಾವಿರ ಪುಟಗಳ ತೀರ್ಪುನ್ನು ಓದಿದರಷ್ಟೆ ನಿಜವಾದ ಅಂಕಿ-ಅಂಶಗಳು ತಿಳಿಯುತ್ತವೆ. ಪ್ರಜಾವಾಣಿ ಪತ್ರಿಕೆಯಲ್ಲಿ ತೀರ್ಪನ್ನು ಎಳೆ-ಎಳೆಯಾಗಿ ಬಿಡಿಸಿ ಅದನ್ನು ಪ್ರಕಟಿಸುತ್ತಿದ್ದಾರೆ. ತೀರ್ಪಿನಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಬಾಧಕಗಳೇ ಇವೆ ಎಂದು ಹೇಳಿದ್ದಾರೆ.
ತೀರ್ಪು ಬಂದಾಕ್ಷಣ ಹೆಚ್ಚಿನ ಕನ್ನಡಿಗರೆಲ್ಲಾ ಕರುಣಾನಿಧಿ ಸಮೇತ ಕೇಂದ್ರದಲ್ಲಿರುವ ತಮಿಳನಾಡಿನ ಮಂತ್ರಿಗಳ ಕೈವಾಡವೆಂದು ತಮ್ಮ ಕೋಪ, ಸಂಕಟವನ್ನು ತೋರಿದರು. ಆದರೆ ಇದೆಷ್ಟು ಸರಿ ? ಈ ತೀರ್ಪನ್ನು ನೋಡಿದರೆ ಕರ್ನಾಟಕದ ರಾಜಕಾರಣಿಗಳು ಕಾವೇರಿಯನ್ನು serious ಆಗಿ ತೆಗೆದುಕೊಂಡಿದ್ದಾರೆಯೇ ಎಂಬುದೇ ಪ್ರಶ್ನೆಯಾಗಿ ಕಾಡುತ್ತಿದೆ. ೧೭ ವರ್ಷ ನಡೆದ ನ್ಯಾಯಮಂಡಳಿಯ ಕಲಾಪವನ್ನು ನಮ್ಮ ಸರ್ಕಾರ ಕೂಲಂಕುಶವಾಗಿ follow ಮಾಡಿತ್ತೋ ಇಲ್ಲವೋ ಎಂಬುದೇ ಸಂಶಯಾಸ್ಪದವಾಗಿದೆ. ತೀರ್ಪಿನಲ್ಲಿ ತಮಿಳುನಾಡಿನ ರಾಜಕಾರಣಿಗಳ ಕೈವಾಡವಿದೆಯೋ ಇಲ್ಲವೊ ಗೊತ್ತಿಲ್ಲ. ಆದರೆ ಒಂದೊಂತೂ ಖಂಡಿತವಾಗಿಯೂ ಸತ್ಯ, ತಮಿಳುನಾಡಿನ ರಾಜಕಾರಣಿಗಳು ನಮ್ಮವರಿಗಿಂತ ತಮ್ಮ ರಾಜ್ಯ, ತಮ್ಮ ಭಾಷೆ, ತಮ್ಮವರಿಗೆ ಬದ್ದರಾಗಿದ್ದಾರೆ. ತಮಿಳುನಾಡಿಗೋಸ್ಕರ ಅವರು ಏನು ಮಾಡಲೂ ಸಿದ್ದರಾಗಿದ್ದಾರೆ ಎಂಬುದೊಂತೂ ಹಿಂದಿನಿಂದಲೂ ಹಲವಾರು ಬಾರಿ ಸಾಬೀತಾಗಿದೆ. ಅವರಿಗೆಲ್ಲರಿಗೂ ನನ್ನ ಅಭಿನಂದನೆಗಳು. ನಮ್ಮವರು ಬಿಡಿ, ಹೇಳಿಕೆಗಳನ್ನು, ಆಶ್ವಾಸನೆಗಳನ್ನು ನೀಡುವುದರಲ್ಲಿ ಎತ್ತಿದ ಕೈ !!
ಬಿಡಿ! ಎಲ್ಲವೂ ನಮ್ಮ ಹಣೆಬರಹವೆಂದೆನಿಸುತ್ತದೆ. ಸರಿ, ಇಂದಿನ ಬಂದ್ ಯಾರ ವಿರುದ್ಧ ? ಬೆಳಗಾವಿ ವಿಷಯದಲ್ಲಿ ಕೇಂದ್ರ ಸರ್ಕಾರದ ಕೈವಾಡವಿತ್ತು. ಕಳೆದ ಬಾರಿ ಬಂದ್ ಕೂಡ ಕೇಂದ್ರ ಸರ್ಕಾರದ ವಿರುದ್ಧವಾಗಿತ್ತು. ಅದರಲ್ಲಿ ರಾಜಕೀಯವೂ ಇತ್ತು. ಆದರೆ ಕಾವೇರಿ ವಿಷಯದಲ್ಲಿ ತೀರ್ಪನ್ನು ನೀಡಿರುವುದು ನ್ಯಾಯಾಲಯ. ಬಂದ್ ನ್ಯಾಯಾಲಯದ ವಿರುದ್ಧವೇ ? ನ್ಯಾಯಾಲಯ ಕಾವೇರಿ ನದಿ ಪಾತ್ರದ ಎಲ್ಲಾ ರಾಜ್ಯಗಳು ನೀಡಿರುವ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ತೀರ್ಪುನ್ನು ನೀಡಿದೆ. ಹಾಗಾದರೆ ಈ ಬಂದ್ ನಮ್ಮ ಸರ್ಕಾರದ ವಿರುದ್ಧವೇ ? ಗೊತ್ತಿಲ್ಲ... ಸರ್ಕಾರ ಈಗಾಗಲೇ ತೀರ್ಪಿನ ಮರು ಪರಿಶೀಲನೆಗೆ ನ್ಯಾಯ ಮಂಡಳಿಯ ಎದುರು ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಇಂದಿನ ಬಂದ್‍ನಿಂದ ಎಲ್ಲರಿಗೂ ಒಂದು ದಿನದ ರಜೆಯೇ ಹೊರತು ಬೇರೆ ಯಾವ ಉದ್ದೇಶವೂ ನನಗೆ ಕಾಣುತಿಲ್ಲ.
ನ್ಯಾಯ ಮಂಡಳಿಯ ಕಡೆಯ ತೀರ್ಪಿನಲ್ಲೂ ಕರ್ನಾಟಕಕ್ಕೆ ನಮಗೆ ಅಗತ್ಯವಿರುವಷ್ಟು ಕಾವೇರಿಯ ನೀರು ಸಿಗುವುದು ಕನಸೇ ! ನಾವು ಕಾವೇರಿಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿಸಿದ್ದೇವೆ. ನಮ್ಮ ನೀರಿನ ಬೇಡಿಕೆಗಳನ್ನು ಕಾವೇರಿಯಿಂದ ಪೂರೈಸಲು ಅಸಾಧ್ಯ. ನಮ್ಮ ನೀರಿನ ದಾಹವನ್ನು ಪೂರೈಸಿಕೊಳ್ಳಲು ಇರುವುದು ಎರಡೇ ಮಾರ್ಗಗಳು. ಒಂದು, ನೀರನ್ನು ಪೋಲು ಮಾಡದಿರುವುದು. ಎರಡು, ಮಳೆಗಾಲದಲ್ಲಿ ಅಣೆಕಟ್ಟಿನಲ್ಲಿರುವ ನೀರನ್ನು ಎಲ್ಲಾ ಕೆರೆ-ಕಟ್ಟೆಗಳಿಗೆ ಹರಿಸಿ ಭರ್ತಿ ಮಾಡಿಕೊಳ್ಳುವುದು. ನಾವು ನಮ್ಮ ಅಣೆಕಟ್ಟುಗಳಿಂದ ಮಳೆಗಾಲದಲ್ಲಿ ಹೆಚ್ಚಾಗಿರುವ ನೀರನ್ನು ನದಿಗೆ ಬಿಟ್ಟು ಬಿಡುತ್ತೇವೆ. ಅದರ ಬದಲು ಹೆಚ್ಚು ಹೆಚ್ಚು ಕೆರೆ-ಕಟ್ಟೆಗಳನ್ನು ಕಟ್ಟಿ ಅವುಗಳಿಗೆ ತುಂಬಿಸಿಟ್ಟುಕೊಂಡರೆ ಬೇಸಿಗೆಯಲ್ಲಿ ನೀರಿನ ತಾಪತ್ರಯವನ್ನು ಕಡಿಮೆಯಾಗಿಸಬಹುದು. ಕಳೆದ ಬಾರಿ ಕೃಷ್ಣಾನದಿಯಲ್ಲಿ ಪ್ರವಾಹ ಬಂದಾಗಲೂ ಬಿಜಾಪುರ, ಗುಲಬರ್ಗಾಗಳಲ್ಲಿ ನೀರಿಗಾಗಿ ಪರದಾಡುವುದು ತಪ್ಪಲಿಲ್ಲ. ನ್ಯಾಯಾಲಯ ನೀಡುವ ತೀರ್ಪಿಗಿಂತ ಒಂದಿಷ್ಟನ್ನೂ ಹೆಚ್ಚಾಗಿ ಬಿಡದೆ ಶೇಖರಿಸಿಟ್ಟುಕೊಂಡರೆ ನಮ್ಮ ನೀರಿನ ದಾಹವನ್ನು ಸ್ವಲ್ಪವಾದರೂ ನೀಗಿಸಬಹುದು.
ಕಾವೇರಿ ವಿಷಯದಲ್ಲಿ ಸರ್ಕಾರ ಈಗಲಾದರೂ ಎಚ್ಚೆತ್ತು ಸರಿಯಾದ ಸಾಕ್ಷಿ, ಪುರಾವೆ, ಅಂಕಿ-ಅಂಶಗಳನ್ನು ಕೊಟ್ಟು ಕರ್ನಾಟಕಕ್ಕೆ ನ್ಯಾಯವನ್ನು ತಂದು ಕೊಡಲಿ.
ನಮ್ಮ ಸುತ್ತಮುತ್ತಲಿನ ಎಲ್ಲಾ ರಾಜ್ಯಗಳ ಜತೆ ಯಾವುದೇ ವಿಷಯಕ್ಕೂ ಜಗಳವಾಡದೇ ಮತ್ತಿದೇ ಬೇಸರ, ಇದೇ ಏಕಾಂತ ನಮ್ಮ ನಾಡನ್ನು ಎಂದೂ ಕಾಡದಿರಲಿ........
ಆತಂಕ
ನಾಳೆ ಅಂದರೆ, ಫೆಬ್ರವರಿ ೫ರಂದು ಕಾವೇರಿ ನ್ಯಾಯ ಮಂಡಳಿಯ ಕಾವೇರಿ ನದಿ ನೀರು ಹಂಚಿಕೆಯ ತೀರ್ಪು ಹೊರಬೀಳಲಿದೆ. ೨ ದಶಕಗಳ ವಾದ-ಪ್ರತಿವಾದಗಳ ನಂತರ ಬರಲಿರುವ ತೀರ್ಪು ಕರ್ನಾಟಕ, ತಮಿಳುನಾಡು ಜನರಲ್ಲಿ ಆತಂಕ ಮೂಡಿಸಿದೆ.
ಕಾವೇರಿ ಕರ್ನಾಟಕದ ಮೈಸೂರು ಪ್ರಾಂತ್ಯ ಹಾಗೂ ತಮಿಳುನಾಡಿನ ಜೀವ ನದಿಯಾಗಿದೆ. ಎರಡೂ ರಾಜ್ಯಗಳ ಲಕ್ಷಾಂತರ ಜನರು ಕಾವೇರಿಯನ್ನೇ ನಂಬಿ ಬೇಸಾಯ ಮಾಡುತ್ತಿದ್ದಾರೆ. ಕಾವೇರಿ ನದಿಯ ನೀರಾವರಿಯಿಂದ ಒಂದು ಕಾಲದಲ್ಲಿ ಬರಡಾಗಿದ್ದಂತಹ ಭೂಮಿ ಇಂದು ಭತ್ತದ ಕಣಜಗಳಾಗಿವೆ. ಹಸಿರನ್ನು ಹೊದ್ದುಕೊಂಡಿವೆ.
ಆದರೆ, ಎರಡೂ ರಾಜ್ಯಗಳೂ ಕಾವೇರಿ ನೀರಾವರಿ ಪ್ರದೇಶವನ್ನು ಹೆಚ್ಚಿಸುತ್ತಲೇ ಇವೆ. ಈ ಪ್ರದೇಶಗಳಿಗೆಲ್ಲಾ ನೀರುಣಿಸುವಷ್ಟು ಕಾವೇರಿಯಲ್ಲಿ ನೀರಿದೆಯೇ? ವರ್ಷದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತಿವೃಷ್ಟಿಯಾದರೆ ಮಾತ್ರ ಕಾವೇರಿ ಕರ್ನಾಟಕ, ತಮಿಳುನಾಡುಗಳ ನೀರಿನ ದಾಹವನ್ನು ತೀರಿಸಬಲ್ಲಳು. ಮಳೆ ಕಡಿಮೆಯಾಯಿತೆಂದರೆ, ಮತ್ತೆ ಎರಡೂ ರಾಜ್ಯಗಳ ಮಧ್ಯೆ ಕಚ್ಚಾಟ. ಇಬ್ಬರೂ ಕಾವೇರಿ ತಮ್ಮ ಹಕ್ಕು ಎಂದು ಕೂಗಾಡುತ್ತಾರೆ. ಕೆಲವೊಮ್ಮೆ ಈ ಜಗಳ ತಾರಕ್ಕೇರಿರುವುದೂ ಉಂಟು. ಇದಕ್ಕೆ ಕೆಲವೊಂದು ಸಾರಿ ರಾಜಕಾರಣಿಗಳೂ ಕಾರಣ. ತಮ್ಮ ತಮ್ಮ ರಾಜ್ಯದ ಜನತೆಗೆ ತಮ್ಮ ನಿಷ್ಠೆಯನ್ನು ತೋರಿಸಲು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾರೆ. ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ತಾವು ಅಪ್ಪಟ ತಮಿಳು ಹೆಣ್ಣು ಎಂದು ತೋರಿಸಲು ಸುಪ್ರೀಂಕೋರ್ಟಿಗೂ ಹೋಗಿದ್ದಾರೆ.
ಆದರೆ, ಈ ಕಾವೇರಿ ಜಗಳಕ್ಕೆ ನಿಜವಾದ ಕಾರಣವೇನು ? ಮೊದಲೇ ಹೇಳಿದಂತೆ ಹೆಚ್ಚುತ್ತಿರುವ ನೀರಾವರಿ ಪ್ರದೇಶ ಒಂದು ಕಾರಣ. ಇನ್ನೊಂದು ಮುಖ್ಯ ಕಾರಣ, ಎರಡೂ ರಾಜ್ಯಗಳ ನೀರಾವರಿ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯುವುದು. ಮಂಡ್ಯದಲ್ಲಿ ಕಬ್ಬನ್ನೂ ಬೆಳೆಯುತ್ತಾರೆ. ಎರಡೂ ಬೆಳೆಗಳಿಗೂ ಹೆಚ್ಚು ನೀರು ಬೇಕು. ಮಳೆ ಕಡಿಮೆಯಾದರೆ ಹೇಗೆ ತಾನೆ ನೀರು ಸಾಲುತ್ತದೆ ಹೇಳಿ ? ಇದರ ಮೇಲೆ ಎರಡೂ ಕಡೆಯ ಜನರ ಸ್ವಾರ್ಥ. ಕರ್ನಾಟಕದವರು 'ನಮಗೇ ನೀರು ಸಾಲುವುದಿಲ್ಲ, ನಿಮಗೆ ಎಲ್ಲಿಂದ ಕೊಡುವುದು ನೀರು' ಎಂದು, ಇನ್ನು ತಮಿಳುನಾಡಿನವರು, ಕರ್ನಾಟಕದಲ್ಲಿ ಮಳೆ ಆಗುತ್ತದೋ ಬಿಡುತ್ತದೋ, ನೀರು ಇದೆಯೋ ಇಲ್ಲವೋ, 'ನಮಗೆ ನೀರು ಬಿಡಿ'. ಇದು ಸ್ವಾರ್ಥವಲ್ಲದೆ ಮತ್ತೇನು ?
ಕಾವೇರಿ ನಮಗೆ ಸೇರಿದ್ದೆಂದು ಎರಡೂ ರಾಜ್ಯದವರು ಕಚ್ಚಾಡಿದರೆ ಅದಕ್ಕೆ ಪರಿಹಾರವೆಲ್ಲಿ ಸಿಕ್ಕೀತು ? ಕಾವೇರಿ ಪ್ರಕೃತಿಗೆ ಸೇರಿದ್ದು. ಅದನ್ನು ಇಬ್ಬರೂ ಹಂಚಿಕೊಳ್ಳಬೇಕಲ್ಲವೇ ? ಜತೆಗೆ, ಎರಡೂ ರಾಜ್ಯದವರೂ ಕಡಿಮೆ ನೀರು ಬೇಕಾಗುವ ಬೆಳೆಗಳನ್ನು ಬೆಳೆದರೆ ಕಾವೇರಿಯಲ್ಲಿರುವಷ್ಟು ನೀರು ಸಾಲುತ್ತದೆ. ಹನಿ ನೀರಾವರಿಯನ್ನು ಅನುಸರಿಸಿದರೆ ನೀರಿನ ಬಳಕೆಯೂ ಕಡಿಮೆಯಾಗುತ್ತದೆ.
ಭಾರತದ ಅಂತರ-ರಾಜ್ಯ ಜಗಳಗಳಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಕೇವಲ ತಮ್ಮ ತಮ್ಮ ರಾಜಕೀಯ ಲಾಭದ ಬಗ್ಗೆ ಯೋಚಿಸುವುದೇ ಹೆಚ್ಚು. ಸಮಸ್ಯೆಗಳು ತಣ್ಣಗಾಗುತ್ತವೆಯೇ ಹೊರತು, ಪರಿಹಾರ ಮಾತ್ರ ಕಂಡುಕೊಳ್ಳಲು ಸಾಧ್ಯವೇ ಅಗಿಲ್ಲ. ಭಾರತದ ರಾಜ್ಯಗಳು, ಯುರೋಪಿನ ದೇಶಗಳ ಮಧ್ಯೆ ಹಲವು ಸಮಾನತೆಗಳಿವೆ. ಯುರೋಪಿನಲ್ಲಿ ಕೂಡ ಹಲವು ನದಿಗಳು ಹಲವು ದೇಶಗಳ ಮೂಲಕ ಹರಿಯುತ್ತವೆ. ಆದರೆ ನೀರಿಗಾಗಿ ಜಗಳವಾಡಿರುವುದನ್ನು ನಾನು ಕೇಳಿಯೇ ಇಲ್ಲ. ಹಲವು ಯೋಜನೆಗಳನ್ನು ಸುತ್ತಮುತ್ತಲಿನ ದೇಶಗಳು ಸೇರಿ ಕೈಗೊಂಡಿವೆ. 'ರೈನ್' ಮತ್ತು 'ಡಾನ್ಯೂಬ್' ನದಿಗಳ ಮಧ್ಯೆ ಕಾಲುವೆಯನ್ನು ಸೃಷ್ಟಿಸಿ 'ನಾರ್ತ್' ಸಮುದ್ರದಿಂದ 'ಬ್ಲಾಕ್' ಸಮುದ್ರದವರೆಗೂ ಹಾಯ್ದುಹೋಗಬಹುದಾದಂತಹ ಮಾರ್ಗವನ್ನು ನಿರ್ಮಿಸಿವೆ. ಇವೆಲ್ಲಾ ಯೋಜನೆಗಳು ಪರಸ್ಪರ ಸಹಕಾರವಿಲ್ಲದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು ? ನಮ್ಮ ಸರ್ಕಾರಗಳು ಸ್ವಲ್ಪ ರಾಜಕೀಯವನ್ನು ಬದಿಗಿಟ್ಟು, ಪರಸ್ಪರ ಸಹಕಾರವನ್ನು ತೋರಿದ್ದರೆ ಇಂದಿನ ಈ ಆತಂಕ ಎಲ್ಲಿರುತ್ತಿತ್ತು ?
ಭೂಮಿಯ ಈ ದಿನಗಳಲ್ಲಿ ಬರ, ಪ್ರವಾಹ, ಚಂಡಮಾರುತಗಳು ಹೆಚ್ಚಾಗಿವೆ. ಎಲ್ಲೋ ಓದಿದ ನೆನಪು, "ಭಾರತದಲ್ಲಿ ಇನ್ನು ಮುಂದೆ ಮುಂಗಾರು ಮಳೆ ಸಾಮಾನ್ಯವಾಗಿರುವುದಿಲ್ಲ". ಕಳೆದ ವರ್ಷದಲ್ಲೇ, ಗುಜರಾತ್ ನಲ್ಲಿ ಅತಿವೃಷ್ಟಿಯಾದರೆ, ಅತಿ ಹೆಚ್ಚು ಮಳೆ ಬೀಳುವ ಅಸ್ಸಾಂನಲ್ಲಿ ಬರ. ಪರಿಸ್ಥಿತಿ ಹೀಗಿರುವಾಗ ನಾವು ಮಳೆಯನ್ನು ನಂಬಿ ಬದುಕಿರಲು ಸಾಧ್ಯವೇ ? ಅದರಲ್ಲೂ ಮುಂಗಾರು ಮಳೆಯಿಂದಲೇ ಮೈದುಂಬಿ ಹರಿಯುವ ದಕ್ಷಿಣ ಭಾರತದ ನದಿಗಳನ್ನೇ ನಂಬಿರಲು ಸಾಧ್ಯವೇ ? ಪ್ರಪಂಚದಲ್ಲಿ ಈಗಾಗಲೇ ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳು ದಶಕಗಳ ಹಿಂದೆ ಕಂಡಂತಹ ಬರದಿಂದ ಮತ್ತೆ ತತ್ತರಿಸುತ್ತಿವೆ. ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಆಸ್ಟ್ರೇಲಿಯಾದಲ್ಲಿ ಬಳಸಿದ ನೀರನ್ನು ಮತ್ತೆ ಪರಿಷ್ಕರಿಸಿ ಬಳಸಲಾಗುತ್ತಿದೆ. ಜಕಾರ್ತ ಪ್ರವಾಹದಿಂದ ನರಳುತ್ತಿದೆ. ನಮ್ಮ ರಾಜ್ಯವೂ ಎರಡು ವರ್ಷಗಳ ಹಿಂದೆ ಬರದಿಂದ ನರಳಿತ್ತು. ಕೇವಲ ರೈತರ ಆತ್ಮಹತ್ಯೆ ಸುದ್ದಿಯಾಯಿತೇ ಹೊರತು, ಮುಂದಿನ ಬರದ ದಿನಗಳನ್ನು ಹೇಗೆ ಎದುರಿಸುವುದು ಎಂದು ಯಾರೂ ಯೋಚಿಸಲಿಲ್ಲ. ಕೊಳವೆ ಭಾವಿಗಳನ್ನು ಸಿಕ್ಕಲ್ಲೆಲ್ಲಾ ತೋಡಿ ನೀರನ್ನು ಹೀರುತ್ತಿದ್ದೇವೆ ಅಷ್ಟೆ. ಅಂತರ್ಜಲಕ್ಕೆ ಮತ್ತೆ ನೀರುಣಿಸುವ ಬಗ್ಗೆ ಯೋಚಿಸಿಯೇ ಇಲ್ಲ.
ಹೀಗೇ ಮುಂದೆ ನಡೆದರೆ, ನಮಗೆಲ್ಲಾ ಒಂದು ದೊಡ್ದ ಆಘಾತ ಕಾದಿದೆ. ನಮ್ಮ ಜನರಿಗೆ ಕುಡಿಯುವುದಕ್ಕೂ ನೀರಿರುವುದಿಲ್ಲ.
ಭಾರತೀಯರು ಕೇವಲ ಪೂಜೆ-ಪುನಸ್ಕಾರಗಳಲ್ಲಿ ನೀರು ಅತ್ಯಮೂಲ್ಯವಾದದ್ದು ಎಂದು ಹಾಡಿ ಹೊಗಳುತ್ತಾರೆ ಅಷ್ಟೆ. ನಿತ್ಯ ಜೀವನದಲ್ಲಿ ನೀರಿನ ಬಳಕೆಯ ಬಗ್ಗೆ ಅತ್ಯಲ್ಪ ಕಾಳಜಿಯನ್ನೂ ತೋರುವುದಿಲ್ಲ. ನೀರಿನ ಮಹತ್ವ, ಅದು ಇಲ್ಲದಿರುವಾಗಲೇ ಅರಿವಾಗಬೇಕೆ ?
ಮುಂದೆ ಏನೋ, ಹೇಗೋ ಎಂಬ ಆತಂಕ.