ಕಾವ್ಯುತ್ಯೋಗರ

ಕಾವ್ಯುತ್ಯೋಗರ

ಪುಸ್ತಕದ ಲೇಖಕ/ಕವಿಯ ಹೆಸರು
ಬಸವರಾಜ ಕೋಡಗುಂಟಿ
ಪ್ರಕಾಶಕರು
ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು- ೫೮೪೧೨೪
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ವಿಭಿನ್ನ ಭಾಷಾ ಪ್ರಯೋಗದ ‘ಕಾವ್ಯುತ್ಯೋಗರ' ಎಂಬ ಕೃತಿಯನ್ನು ಬರೆದಿದ್ದಾರೆ ಲೇಖಕರಾದ ಬಸವರಾಜ ಕೋಡಗುಂಟಿ ಇವರು. ತಮ್ಮ ೧೩೪ ಪುಟಗಳ ಈ ಪುಟ್ಟ ಪುಸ್ತಕದೊಳಗೆ ಏನಿದೆ ಎಂಬ ಬಗ್ಗೆ ಅವರ ಮಾತುಗಳಲ್ಲೇ ಓದೋಣ ಬನ್ನಿ...

“ಬೇಂದ್ರೆ ಶಬ್ದಗಾರುಡಿಗನೆಂದು ಕನ್ನಡದೊಳಗೆ ಪ್ರಸಿದ್ದ. ಹಾಗೆಯೆ ಬೇಂದ್ರೆ ಅರ್ತಗಾರುಡಿಗನೂ ಹವುದು. ಶಬ್ದಗಳ ಜೋಡಣೆಯೆ ಕುಶಲತೆಯೆಂದು ಅಲ್ಲಿಗೆ ನಿಲ್ಲುವುದು ಮಾತಿನ ಮೋಡಿಯೊ, ಮಾಟವೊ ಆಗಬಹುದು. ಅದರಾಚೆಗೆ ಹೋಗಿ ಅರ್ತಗಳನೊಡೆದೊಡೆದು ಎಲ್ಲವನು ಚೆಲ್ಲಾಪಿಲ್ಲಿಯಾಗಿ ಚೆಲ್ಲಿ ಎಲ್ಲರಿಗೂ ಎಲ್ಲವೂ ದಕ್ಕುವ ಬ್ರಮೆಯನ್ನು ತರುವುದು ಅರ್ತಮಾಂತ್ರಿಕತೆ. ಆದರೆ ಇದು ಬ್ರಮೆಯಂತೆ ಕಾಣುವುದು. ತುಸು ನಿಂತು ಓದಿದಾಗ ಸ್ಪಶ್ಟತೆಗಳಿಗಿಂತ ಅಸ್ಪಶ್ಟತೆಗಳೆ, ಅರ್ತಗಳಿಗಿಂತ ಅತೀತವಾಗುವವೆ ಹೆಚ್ಚಾಗಿರುತ್ತವೆ. ಬಾಶೆಯೊಂದರಲ್ಲಿ ಇಂತಾ ಗಾರುಡಿಗತನವು ಆ ಬಾಶೆಯ ಹಣೆಬರಹವನ್ನು ಬರೆಯುವುದಕ್ಕೂ ನಡೆ ಇಡಬಹುದು. ಹಾಗೆಯೆ ಗಾರುಡಿಗ ಪದದೊಳಗೊಂದು ‘ಗರುಡ’ವಿದೆ. ಗರುಡವು ಗಗನವಿಹಂಗಮ ಗಮನಿ. ಬೇಂದ್ರೆಯ ಈ ಗಾರುಡ ಗುಣವನ್ನ ಅರಸಿ ಹಾರಲು, ಗರುಡವನಿಡಿಯಲು ಇದೊಂದು ಪ್ರಯತ್ನ ಈ ಬರಹ. ಇದೆಶ್ಟು ಮಟ್ಟಿಗೆ ಸಾದ್ಯವೊ ಕಾಣೆ. ದಿಗ್ಮಂಡಲಗಳನೆಶ್ಟು ತಾಕಲು ಸಾದ್ಯವೊ, ಮತ್ತೆ ಆ ಸೋಕಿನ ಅನುಬವವೆಂತು ದಕ್ಕಿಸಿಕೊಳ್ಳುವೆವೊ ಅಶ್ಟು ಈ ಪ್ರಯತ್ನ ಯಶಸ್ಸು ಪಡೆಯುತ್ತದೆ.

ಬಾಶೆ ಒಂದು ರಚನೆ. ನಿರ್ದಿಶ್ಟವಾದ ರಚನೆಗಳ ಕಟ್ಟು. ರಚನೆಯನ್ನು ಮುರಿಯಲು ಸುಲಬದಲ್ಲಿ ಸಾದ್ಯವಿಲ್ಲದ ಕಟ್ಟು. ಆದರೆ ಈ ಅಂತಿಕರಚನೆಯೊಳಗನಂತ ಬ್ರಹ್ಮಾಂಡಗಳನ್ನು ಹುಟ್ಟಿಸುವ ಸಾದ್ಯತೆಯನ್ನು ಅದು ಹೊಂದಿದೆ. ಇದನ್ನು ಬಳಸಿಕೊಳ್ಳುವುದೆ ಯಶಸ್ವಿ ಬಾಶಾಬಳಕೆ. ಇಂತಾ ಬಾಶೆಯ ಬಳಕೆಯನ್ನು ನಮ್ಮ ಬದುಕಿನಲ್ಲಿ ಹಲವರು ಮಾಡುವವರನ್ನು ಕಾಣಬಹುದು. ಸಹಜ ಬಾಶೆಯನ್ನು ವಿಚಿತ್ರವಾಗಿ ಬಳಸಿ ಸುತ್ತಿನವರನ್ನು ಮೋಡಿ ಮಾಡುವವರು ಹಲವರು ಸಮಾಜದಲ್ಲಿ ಸಿಗುತ್ತಾರೆ. ಇದೊಂದು ಪ್ರತಿಬೆ. ಇದರಲ್ಲಿ ಕಣ್ಕಟ್ಟೂ, ಮಾತಿನಕಟ್ಟೂ, ಅರ್ತದ ಕಟ್ಟೂ ಇದ್ದು ಅದೊಂದು ಸೆಗುತಿಯೂ, ಮಾಯವೂ ಆಗಿ ದಿನಜೀವನದಲ್ಲಿ ಸಾಮಾನ್ಯ ಮಂದಿ ಅನುಬವಿಸಿ ಕಟ್ಟಿಕೊಂಡಿಟ್ಟುಕೊಂಡಿದ್ದಾರೆ. ಅದನ್ನೆ ಕಾವ್ಯಮೀಮಾಂಸೆ ಪ್ರತಿಬೆ ಎನ್ನುತ್ತದೆ. ಈ ಸೆಗುತಿಯೆ ಯಾವತ್ತೂ ನವನವೋನ್ಮೇಶಶಾಲಿನಿಯಾದುದು ನವದ ನವೆಯನನುಬವಿಸಿ ನವಿಸುವ ನವ ನವಿರು ಬಾವ. ಪ್ರಕ್ರುತಿ ಒದಗಿಸುವ ಎಚ್ಚವನ್ನ ಸೋಸಿ, ಕೊಯ್ದು, ಮುರಿದು, ಉರಿದು, ಸುಟ್ಟು, ಬೇಯಿಸಿ ಗಮಿಸುವ ಅಡುಗೆಯನ್ನು ತಯಾರಿಸುವುದೆ ಜೀವನ. ಹಾಗೆಯೆ, ಬಾಶೆ ಒದಗಿಸುವ ಸಾಮಾಜಿಕ-ಸಾಂಸ್ಕ್ರುತಿಕದ ಎರಕಹೊಯ್ದ ಎಚ್ಚವನ್ನ ಸೋಸಿ, ಕೊಯ್ದು, ಮುರಿದು, ಉರಿದು, ಸುಟ್ಟು, ಬೇಯಿಸಿ ಗಮಿಸುವ ಕಾವ್ಯವನ್ನು ತಯಾರಿಸುವುದೆ ಕಾವ್ಯ-ಉತ್-ಯೋಗ.

ಬಾಶೆಯ ಹಲವು ಉಪಯೋಗಗಳಲ್ಲಿ ಕಾವ್ಯವೂ ಒಂದು. ಕಾವ್ಯವನ್ನು, ಸಾಹಿತ್ಯವನ್ನು ಬಾಶೆಯೊಳಗೆ ಹುಟ್ಟಿಸಲಾಗುತ್ತದೆ. ಕಾವ್ಯ ಎಂಬುದು ಒಂದು ಸ್ರುಜನ ಶಕ್ತಿ. ಇದನ್ನು ಬಾರತೀಯ ಪರಂಪರೆಯಲ್ಲಿ ಪ್ರತಿಬೆ ಎಂದು ಕರೆಯಲಾಗಿದೆ. ಹೀಗೆ ಪ್ರತಿಬೆ ಪಡೆದ ಕವಿ ರಸ-ದ್ವನಿಗಳನ್ನು ಅನುರಣಿಸುವ ವ್ಯಂಜನವನ್ನು ಕೊಡಬಲ್ಲರೆಂಬುದು ತಿಳುವಳಿಕೆ.

ಸಾಮಾನ್ಯವಾಗಿ ಕಾವ್ಯದ ಮೇಲು ಓದಿಗೆ ದಕ್ಕದ ಹಲವು ಅಂಶಗಳು ಕಾವ್ಯದೊಳಗಿರುತ್ತವೆ. ಅದರಲ್ಲೂ ಪದ್ಯಜಾತಿಯಾದ ಕವನವನ್ನು ಬೆರಗಿನಿಂದ ಓದುವುದು ಹೆಚ್ಚಾಗಿ ಕಾಣುತ್ತದೆ. ಹೀಗೆ ಬೆರಗಿನಿಂದ ಓದಿದಾಗ ಕಾಣದೆ ಹೋಗುವ ಹಲವಾರು ಅಂಶಗಳು ಇರುತ್ತವೆ. ಹೀಗೆ ಕಾಣದಾದವುಗಳನ್ನು ಕಾಣ್ಕೆಯಾಗಿಸುವವು ವಿವಿದ ಗ್ನಾನಶಾಕೆಗಳು. ಬಾಶೆಯ ಅದ್ಯಯನ ಅಂತದೊಂದು. ಬಾಶೆಯನ್ನು, ಬಾಶೆಯ ರಚನೆಯನ್ನು ಗಮನಿಸಿದಾಗ ಕಾವ್ಯದ ಸಾಮಾನ್ಯ ಓದಿಗೆ ದಕ್ಕದ, ಬೆರಗಿನ ಓದಿನಲ್ಲಿ ಮರೆಯಾದ ಹಲವಾರು ಅಂಶಗಳು ಕಾಣುವ ಸಾದ್ಯತೆ ಇರುತ್ತದೆ. ಕವನಗಳಲ್ಲಿ, ಬೇಂದ್ರೆ ಕವನಗಳಲ್ಲಿ ಹಲವು ವಯಿರುದ್ಯವನ್ನೂ, ವಿಬಿನ್ನ ರಚನೆಗಳನ್ನೂ ಕಾಣಬಹುದು. ಹಲವು ವಯಿರುದ್ಯಗಳು ಬದುಕಿನ ಗೋಜಲಿನಂತೆಯೆ ಇಲ್ಲವೆ ಬದುಕಿನ ಸಂಕೀರ್ಣತೆಯನ್ನು ಕನ್ನಡಿಸುವಂತೆಯೆ ಬರುತ್ತವೆ. ವಿಬಿನ್ನ ರಚನೆಗಳು ಬಿನ್ನವಾಗಿ ನೋಡಿದಾಗ ಕಾಣುತ್ತ ಹೋಗುತ್ತವೆ. ಒಂದರ ದರುಶನ ಇನ್ನೊಂದರ ದರುಶನಕ್ಕೆ ಬಾಗಿಲು ತೆರೆಯುತ್ತ ಹಾಗೆಯೆ ಮುಂದುವರೆಯುತ್ತಿರುತ್ತವೆ. ಎಲ್ಲಿಯವರೆಗೆ ಸಾಗಲು ಸಾದ್ಯವೊ ಅಲ್ಲಿಯೆ ಮುಕ್ತಿ. ಸಾಗುವ ಹಾದಿ ಸಾಗದಿದ್ದರೆ ಕವನದೊಳ ಪುಗಲಾಗದು, ಸಾಗುವ ಹಾದಿ ತುದಿಯರಿಯದಿದ್ದರೆ ಬ್ರಮೆಯೆಂಬುದೆ ಮುಕ್ತಿ. ಮುಕ್ತಿಯೆಂಬ ಬ್ರಮೆಯನ್ನು ಅರಿತುಕೊಳ್ಳಬಹುದು.

ಬೇಂದ್ರೆ ಬರೆದ ಒಟ್ಟು ಕವನಗಳಲ್ಲಿ ಕೆಲವೆಲ್ಲ ಸುಮ್ಮಸುಮ್ಮನೆ ಎನಿಸುವಂತೆ ಇರಬಹುದು. ಆದರೆ ಹೆಚ್ಚಿನ ಕವನಗಳು ಸ-ಶಕ್ತವಾಗಿವೆ, ಕುಸುರಿತನದ ರಚನೆಯಾಗಿವೆ. ಕವನವನ್ನು ಸೂಕ್ಶ್ಮವಾಗಿ ಕುಸುರಿತನದ ರಚನೆಯಲ್ಲಿ ಕೆತ್ತಿ ನಿಲ್ಲಿಸುವ ಕೆಲಸ ಬೇಂದ್ರೆಗೆ ಸಹಜವೆ ಆಗಿದ್ದಿತು. ಕವನದಲ್ಲಿ ಬರುವ ಪ್ರತಿಯೊಂದು ಪದ, ಪಾದ, ಪದ್ಯ ಒಂದು ವಿಚಿತ್ರ ರಚನೆಯಲ್ಲಿ ಬರುತ್ತಿರುತ್ತವೆ. ಪದ, ಪಾದ, ಪದ್ಯಗಳು ತಮ್ಮೊಳಗೆ ಇಲ್ಲವೆ ಪರಸ್ಪರದೊಳಗೆ ಒಂದು ಇನ್ನೊಂದಕ್ಕೆ ಪೂರಕವಾಗಿ ಇಲ್ಲವೆ ವಿರುದ್ದವಾಗಿ ಸಾತ್ ಕೊಡುತ್ತ ಕವನದ ಶಕ್ತಿಯನ್ನು ಹೆಚ್ಚಿಸುತ್ತಿರುತ್ತವೆ. ಬೇಂದ್ರೆಯ ಹಲವು ಕವನಗಳಲ್ಲಿ ಅರ್ತಲೋಕವಿಹಾರಕ್ಕೆ ಅವಶ್ಯ ಅಟ್ಟವೊಂದನ್ನು ತಯಾರಿಸಿಕೊಂಡು ಇನ್ನು ಆಟ ಮೊದಲಾಗುವುದಕ್ಕೆ ಎಲ್ಲವನ್ನೂ ಸಿದ್ದಪಡಿಸಿ ಕವನವೆಂಬ ಉತ್-ಯೋಗ ಶುರು ಮಾಡುವಂತ ರಚನೆಗಳೂ ಸಿಗುತ್ತವೆ. ಇಂತಾ ವ್ಯವಸ್ತಿತವಾದೊಂದು ರಚನೆಯ ನೆರವಿನಿಂದ ಹಲವು ಕವನಗಳು ಸಾಮಾನ್ಯಕ್ಕೆ ಕಯ್ಗೆ ಸಿಗದೆ ಹಾರಿ ಹೋಗುತ್ತಿರುತ್ತವೆ. ಈ ಸೆಕುತಿ ಬೇಂದ್ರೆಗಿದ್ದಿತು. ಬೇಂದ್ರೆಗೆ ಬಾಶೆಯ ಹಿಡಿತ, ಲಯದ ಹುಚ್ಚು, ಬದುಕಿನ ಅರಿವು, ತಾತ್ವಿಕತೆಯ ತಹತಹ ಮೊದಲಾದವು ಬೆಸೆದು ಕುಲುಮೆಯಲಿ ಹದಗೊಂಡು ಪೊಳೆವ ಕರ್ಪೊನ್ನಿನ ಹಾಗೆ ಕಾಣಿಸುತ್ತಿವೆ. ಬೇಂದ್ರೆ ಕಾವ್ಯದೊಳಪುಗೆ, ಇವೆಲ್ಲವೂ ಮಯ್ದೆರದು ದರುಶನವನೀವುವು. ಬೇಂದ್ರೆಯ ಮತ್ತು ಬೇಂದ್ರೆಯ ಕವನಗಳ ಸೆಕುತಿಯನ್ನು ಹಲವು ನೆಲೆ ಮತ್ತು ಹಲವು ಆಯಾಮಗಳಲ್ಲಿ ಕಂಡುಕೊಳ್ಳಬಹುದು. ಬೇಂದ್ರೆ ಕವನಗಳನ್ನು ಹೀಗೆ ಓದಿಕೊಂಡಾಗ ಮಾತ್ರ ನಿಜವಾದ ದರುಶನ ಸಾದ್ಯ. ಇಲ್ಲಿ ಮಾತನಾಡುತ್ತಿರುವುದು ಬೇಂದ್ರೆಯ ಬಗೆಗೆ ಎಂಬುದು ನಿಜವಾದರೂ, ಕವನವೆಂಬ ಉತ್ಯೋಗದಲ್ಲಿ ತೀವ್ರತೆಯನ್ನು ಕಳೆದುಕೊಂಡ ಚಣದಲ್ಲಿ ಹುಟ್ಟಿರಬಹುದಾದ ಕವನವೆಂಬ ಎಲ್ಲ ಬರಹಗಳ ಕುರಿತು ಕಂಡಿತ ಅಲ್ಲ. ಪ್ರತಿಯೊಬ್ಬ ಮನುಶ್ಯಮಾತ್ರರಾದವರಿಗೆ ತಮ್ಮ ತಮ್ಮ ಉತ್ಯೋಗದೊಳೆಶ್ಟು ತೀವ್ರತೆಯಲ್ಲಿ ಎನಿತು ಕಾಲ ಇರಲು ಸಾದ್ಯವೊ ತಿಳಿಯದು. ಹಾಗೆ ತುಸು ನಿಗಾ ತಪ್ಪಿದ ಕಾಲದಲ್ಲಿ ಹುಟ್ಟಿದ ಹಲವು ಬರವಣಿಗೆಗಳು ಬೇಂದ್ರೆ ಕಾವ್ಯದ ಲಕ್ಶಣಗಳೆದುರು ಸೋತುಬಿಡುತ್ತವೆ. ಹಾಗಾಗಿ, ಬೇಂದ್ರೆಯ ಅಂತಾ ಕವನಗಳನ್ನು ಈ ಕಾವ್ಯುತ್ಯೋಗದಲಿ ಹದಗೊಂಡ ಕರ್ಪೊನ್ನುಗಳನ್ನು ತೂಗುತಿರುವಾಗಿ ತುಸು ಹೊರಗಿಡಬೇಕಾಗುತ್ತದೆ. ಇಲ್ಲಿ ಯಾವು ಕವನಗಳು, ಯಾವು ಕವನವೆಂಬ ಬರಹಗಳು, ಯಾವು ಬಾಶಾ ಆಟಗಳು ಎಂಬ ಮೊದಲಾದ ವರ್ಗೀಕರಣಾದಿಯನ್ನು ಮಾಡಲು ಅನುವಿಲ್ಲ. ಅದರ ಅವಸರವೂ ನನದಲ್ಲ. ಹಾಗಾಗಿ, ಈಗಿನ ಬರವಣಿಗೆಯ ಕೇಂದ್ರ ವಿಚಾರವಾಗಿ ಬೇಂದ್ರೆ ಕವನದ ವಿರಾಟ್ ಸ್ವ-ರೂಪದ ದರುಶನದ ಪ್ರ-ಯತ್ನ ಮಾತ್ರ.

ಬೇಂದ್ರೆಯ ಕವನಗಳ ಲಕ್ಶಣಗಳನ್ನು, ಗುಣಗಳನ್ನು ಮಾತನಾಡುತ್ತ ಇದು ಸಹಜವಾಗಿ ಕವನದ ಲಕ್ಶಣ, ಗುಣ ಎಂದು ಓದಿಕೊಳ್ಳಲು ಅನುವಾದರೆ ಅದು ತುಂಬಾ ಒಳ್ಳೆಯದು.

ಕವನ ಒಂದು ರಚನೆ ಮತ್ತು ಅದೊಂದು ಕುಸುರಿ ರಚನೆ. ರಚನೆ ಎಂದ ಕೂಡಲೆ ಯಾವ ಯಾವ ಹಂತದಲ್ಲಿ ಈ ರಚನೆ ಇರುತ್ತದೆ ಎಂದು ಯೋಚಿಸಬಹುದು. ಈಗಿನ ಬರವಣಿಗೆ ಕವನದ ಆಶಯವನ್ನು ಕೇಂದ್ರವಾಗಿಟ್ಟುಕೊಳ್ಳದೆ, ಅವಲಂಬಿಸದೆ ಓದುಗರಿಗೆ ಆಶಯವನ್ನು ಮುಕ್ತವಾಗಿಡುತ್ತದೆ. ಒಂದು ಸಶಕ್ತ ಕಾವ್ಯ ಸಾಮಾನ್ಯವಾಗಿ ಒಂದು ನಿರ್ದಿಶ್ಟ ಅರ್ತಕ್ಕೆ ಸೀಮಿತಗೊಳ್ಳದೆ ಅರ್ತಸಾದ್ಯತೆಯ ಎಲ್ಲ ವಿಸ್ತರಗಳಿಗೆ ಮುಕ್ತವಾಗಿರುತ್ತದೆ. ಹಾಗಾಗಿ ಇಲ್ಲಿ ಕವನದ ಒಂದು ನಿರ್ದಿಶ್ಟವಾದ ಆಶಯವನ್ನು ಕೇಂದ್ರವಾಗಿರಿಸಿಕೊಳ್ಳದೆ ಕವನದ ಬಾಶೆಯ ರಚನೆ ಹೇಗಿದೆ ಎಂಬುದನ್ನು ಅರ್ತ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಇಲ್ಲವೆ ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಕವನದ ಪ್ರಬಾವಿ, ಪರಿಣಾಮಕಾರಿ ಗುಣಕ್ಕೆ, ವಿಸ್ತರಕ್ಕೆ ಬಾಶೆ ಹೇಗೆ ಪೂರಕ ಎಂಬುದನ್ನು ತಿಳಿದುಕೊಳ್ಳಬಹುದು. ನಿರ್ದಿಶ್ಟವಾದ ಬಾಶಿಕ ರಚನೆಯನ್ನು ತರುವ ಮೂಲಕ ಕವನವನ್ನು ಹೆಚ್ಚು ಸಶಕ್ತಗೊಳಿಸುವ ಪ್ರಯತ್ನವನ್ನು ಬೇಂದ್ರೆ ಮಾಡುತ್ತಿರುವುದನ್ನು ಕಾಣಬಹುದು. ಪ್ರತಿಯೊಂದು ಕವನಕ್ಕೆ ಒಂದು ಕೇಂದ್ರ ಆಶಯವಿರಬಹುದು ಮತ್ತು ಒಟ್ಟೊಟ್ಟಿಗೆ ಅದು ಅನಂತ ಸಾದ್ಯತೆಗಳನ್ನು ಒಳಗೊಂಡಿರಬಹುದು ಎಂಬ ಪ್ರಾತಮಿಕ ತಿಳುವಳಿಕೆಯೊಂದಿಗೆ ಆಯ್ದ ನಾಕು ಬೇಂದ್ರೆ ಕವನಗಳ ಬಾಶಿಕ ರಚನೆಯನ್ನು ಆ ಮೂಲಕ ಆ ಕವನಗಳನ್ನು ತಿಳಿದುಕೊಳ್ಳಲು ಮೊದಲಾಗೋಣ.

ಈ ಪುಸ್ತಕವನ್ನು ಕವನದ ತಾತ್ವಿಕತೆಯನ್ನು ಹಿಡಿದು ಕವನವನ್ನು ಓದುವ ಪ್ರಯತ್ನ ಎಂದೂ ಅರ್ತ ಮಾಡಿಕೊಳ್ಳುವ ಸಾದ್ಯತೆ ಇದೆ. ಈ ಪುಸ್ತಕವು ಬೇಂದ್ರೆ ಬಾಶೆಯನ್ನು ಹಿಡಿಯುವುದಕ್ಕೆ ದಾರಿ ಹುಡುಕುವ ಪ್ರಯತ್ನವೆ ಆಗಿದೆ. ಹಲವು ದಾರಿಗಳನ್ನ ಪ್ರಯತ್ನಿಸಿದ ಬಳಿಕ ಬೇಂದ್ರೆ ಬಾಶೆಯನ್ನು ಹಿಡಿಯಲು ಸಾದ್ಯವಾಗಬಹುದು. ಅಲ್ಲಿಯವರೆಗೆ ಮಾತುಗಳು ಬಸವಳಿಯುವುದಿಲ್ಲ. ಈ ಉದ್ಯೋಗವೊಂದು ಕನ್ನಡದಲ್ಲಿ ಹೊಸತೆನಿಸುವಂತಿದೆ. ಹೀಗೆ ಬಾಶೆಯನ್ನು ಇಶ್ಟು ಹಿಡಿದು ಓದುವ ಕ್ರಮಗಳು ಬಂದ ಹಾಗಿಲ್ಲ.”