ಕಾವ್ಯ ದೀವಿಗೆ

ಕಾವ್ಯ ದೀವಿಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕರು: ವರುಣ್ ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್
ಪ್ರಕಾಶಕರು
ಸ್ಪಂದನ ಸಿರಿ ಪ್ರಕಾಶನ, ಕುವೆಂಪುನಗರ, ಹಾಸನ - ೫೭೩೨೦೧
ಪುಸ್ತಕದ ಬೆಲೆ
ರೂ.೮೦.೦೦, ಮುದ್ರಣ: ೨೦೨೩

೧೪೦ ಪುಟಗಳ ಸೊಗಸಾದ ಕವನಗಳ ಸಂಕಲನವೇ ಕಾವ್ಯ ದೀವಿಗೆ. ವರುಣ್ ರಾಜ್ ಮತ್ತು ಧನುಷ್ ಶೇಖರ್ ಎಂಬವರು ಈ ಸಂಕಲನದ ಕವನಗಳನ್ನು ಸಂಪಾದಿಸಿದ್ದಾರೆ. ಬಹಳಷ್ಟು ಉದಯೋನ್ಮುಖ ಕವಿಗಳ ಕವನಗಳು ಈ ಸಂಕಲನ ಒಳಗೊಂಡಿದೆ. ಸ್ವತಃ ಕವಿಗಳಾಗಿರುವ ಅಮರ್ ಬಿ ಎನ್ನುವವರು ಸುದೀರ್ಘವಾದ ಮುನ್ನುಡಿಯನ್ನು ಬರೆದಿದ್ದಾರೆ. ಹಲವು ಕವನಗಳನ್ನು ಸತ್ವಭರಿತವಾಗಿ ವಿಮರ್ಶೆ ಮಾಡಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗ ನಿಮ್ಮ ಓದಿಗಾಗಿ...

“ವರುಣ್‌ ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್ ಅವರ ಸಂಪಾದಕತ್ವದಲ್ಲಿ ‘ಕಾವ್ಯ ದೀವಿಗೆ’ ಕವನ ಸಂಕಲನ ಹೊರಬರುತ್ತಿದೆ. ಹೊಸ ತಲೆಮಾರಿನ, ಉದಯೋನ್ಮುಖ ಕವಿಗಳ, ಕವಿತೆಗಳ ಆಗರವಿದು. ಹೆಸರು ಮಾಡಿದ, ಪಳಗಿದ ಕವಿಗಳಿಂದ ಕವನಗಳನ್ನು ಸಂಗ್ರಹಿಸಿ ಪ್ರಕಟಿಸುವುದು ಕಷ್ಟವಾದರೂ ಅದು ಸಂಪಾದಕರಿಗೆ ಎರಡು ರೀತಿಯಲ್ಲಿ ಲಾಭದಾಯಕವಾಗಿರುತ್ತದೆ. ಮೊದಲನೆಯದ್ದಾಗಿ, ಸಂಪಾದಕರಿಗೆ ಸಾಹಿತ್ಯವೆಂಬ ಮಾರುಕಟ್ಟೆಯಲ್ಲಿ ಒಳ್ಳೆಯ ಜಾಹಿರಾತನ್ನು ನೀಡುತ್ತದೆ. ಎರಡನೆಯದ್ದು, ತಾವು ಹೆಸರಾಂತ ಕವಿಗಳ ವಿಶ್ವಾಸಕ್ಕೆ ಪಾತ್ರರಾಗಿದ್ದೇವೆ ಎಂಬ ಹೆಮ್ಮೆಯನ್ನು ಮೂಡಿಸಿ, ಸ್ವ-ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ವ್ಯಾವಹಾರಿಕ ಜಗತ್ತಿನಲ್ಲಿ ಈ ಎರಡು ಲಾಭಗಳಿಗೆ ಹಣಗಳಿಕೆಯ ಆಯಾಮವೂ ಇದೆ, ಸಾಂಸ್ಕೃತಿಕ ರಾಜಕಾರಣದ ಚಹರೆಯೂ ಇದೆ. ಆದರೆ, ಈ ಎರಡು ತೆರನಾದ ಲಾಭಗಳನ್ನು ಬೆನ್ನುಹತ್ತದ ಸದರಿ ಸಂಪಾದಕೀಯ ತಂಡ, ಕೇರಿಯಾಚೆಗೆ ತನ್ನ ಹೆಸರೇ ದಾಟಿರದಂಥ ವ್ಯಕ್ತಿಗಳ ಮೊದಲ ಕವನಗಳನ್ನೂ ಈ ಪುಸ್ತಕದಲ್ಲಿ ಪ್ರಕಟಿಸಿದೆ. ಹೊಸಬರ ಬಹುತೇಕ ಚೊಚ್ಚಲ ಕವನಗಳು ಕಾವ್ಯತತ್ತ್ವದ ದೃಷ್ಟಿಯಿಂದಷ್ಟೇ ಅಲ್ಲ, ಕಾಗುಣಿತಾದಿ ಪ್ರಾಥಮಿಕ ಭಾಷಾ ಬಳಕೆಯ ದೃಷ್ಟಿಯಿಂದಲೂ ಹತ್ತು ಹಲವು ದೋಷಗಳಿಂದ ಕೂಡಿರುತ್ತವೆ. ಆ ಎಲ್ಲವನ್ನು ತಾಳ್ಮೆಯಿಂದ ಅವಲೋಕಿಸಿ, ಆಯಾ ಕವಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕವನಗಳನ್ನು ಭಾಷಾ ದೃಷ್ಟಿಯಲ್ಲಾದರೂ ಒಪ್ಪ-ಓರಣಗೊಳಿಸಿ, ಪ್ರಕಟಿಸುವುದಿದೆಯಲ್ಲ ಇದು ಸಾಹಿತ್ಯವನ್ನು ಕುರಿತು, ಮೇಲಾಗಿ ಮನುಷ್ಯರು ಮತ್ತು ಅವರ ಬದುಕನ್ನು ಕುರಿತು ಆರ್ದ್ರ ಆಧ್ಯಾತ್ಮಿಕ ಪ್ರೀತಿಯಿದ್ದರಷ್ಟೇ ಸಾಧ್ಯ. ಆತ್ಮತೃಪ್ತಿಯನ್ನು ಹೊರತುಪಡಿಸಿ ಇನ್ಯಾವ ಲಾಭವನ್ನೂ ನೀಡದ ಇಂಥ ಸಂಪಾದನ ಕೆಲಸದಲ್ಲಿ ತೊಡಗಿದ ಸಂಪಾದಕೀಯ ಬಳಗಕ್ಕೆ, ಇವರಿಗೆ ಬೌದ್ಧಿಕ ಮತ್ತು ನೈತಿಕ ಬೆಂಬಲ ನೀಡಿದ ಎಲ್ಲ ಅಧ್ಯಾಪಕರಿಗೆ ನನ್ನ ಮನಃಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತ, ಪ್ರಸ್ತುತ ಸಂಕಲನದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಲು ಬಯಸುತ್ತೇನೆ.

ಮುಕ್ತಕಗಳು, ವಚನ, ದಾಸರ ಪದ, ಜನಪದ ಕಾವ್ಯ ಹಾಗೂ ತತ್ವ್ತ ಪದಗಳನ್ನು ಹೊರತುಪಡಿಸಿದರೆ ಆಧುನಿಕಪೂರ್ವ ಕನ್ನಡ ಸಾಹಿತ್ಯ ವಲಯವನ್ನು ಛಂದೋಬದ್ಧ ದೀರ್ಘ ಕಾವ್ಯಗಳೇ ವ್ಯಾಪಿಸಿದ್ದವೆಂದು ಹೇಳಬಹುದು. ಕಾವ್ಯದ ದೀರ್ಘತೆಯು ವಸ್ತು, ಭಾವ, ವಿಚಾರ ಹಾಗೂ ಸಂವೇದನೆಗಳು ಸಮಗ್ರಗೊಳ್ಳಲು ಅವಕಾಶ ನೀಡುತ್ತದೆಯಲ್ಲದೆ, ನಿರ್ದಿಷ್ಟ ಕಾವ್ಯದರ್ಶನವೊಂದು ರೂಪುಗೊಳ್ಳಲು ಅನುವು ಮಾಡಿಕೊಡುತ್ತದೆ. ಛಂದಸ್ಸು ಈ ಕೆಲಸವನ್ನು ಲಯಬದ್ಧಗೊಳಿಸುತ್ತದೆ. ಬರವಣಿಗೆಯ ತಂತ್ರಜ್ಞಾನವು ವ್ಯಾಪಕವಲ್ಲದ ಹಾಗೂ ವಾಚನ, ಗಾಯನದ ಮುಖಾಂತರವೇ ಹೆಚ್ಚಾಗಿ ಕಾವ್ಯ-ಸಂವಹನ ನಡೆಯುತ್ತಿದ್ದ ಕಾಲದಲ್ಲಿ ಕಾವ್ಯ-ಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಲಯವನ್ನು ಶಾಸ್ತ್ರಬದ್ಧಗೊಳಿಸುವ ಕೆಲಸವೂ ನಡೆದಿತ್ತು. ಶಾಸ್ತ್ರಬದ್ಧ ಲಯದ ಹಂಗಿರದ ಜನಪದ ಕಾವ್ಯಗಳನ್ನು ಕೂಡ ಲಯಬದ್ಧವಾಗಿ ಹಾಡಲಾಗುತ್ತಿತ್ತು. ಜೊತೆಗೆ, ಈ ಯಾವ ಕಾವ್ಯಕ್ಕೂ ಒಂದು ನಿರ್ದಿಷ್ಟ ಪರಂಪರೆಗೆ- ಅಂದರೆ, ಕಾವ್ಯ, ಕವಿ, ಕುಲ ಅಥವಾ ದರ್ಶನ ಪರಂಪರೆಗೆ- ಹೊರತಾದ ಸಂಪೂರ್ಣ ಪ್ರತ್ಯೇಕ ಅಸ್ತಿತ್ವವಿರಲಿಲ್ಲ. ಈ ಮಾತು ಪಂಪ, ಕುಮಾರವ್ಯಾಸರಂತೆ ಪ್ರಜ್ಞಾಪೂರ್ವಕವಾಗಿ, ತಮ್ಮ ವೃತ್ತಿಯೋ ಎಂಬಂತೆ ಕಾವ್ಯಗಳನ್ನು ರಚಿಸದ ವಚನಕಾರರು ಮತ್ತು ತತ್ತ್ವವಪದಕಾರರ ನಿಶ್ಚಿತ ಛಂದೋರೂಪಗಳಲ್ಲಿಲ್ಲದ ಭಾಷಿಕ ಅಭಿವ್ಯಕ್ತಿಗಳಿಗೂ ಅನ್ವಯ. ಆಧುನಿಕ ಕವಿಯೊಬ್ಬಳು ಬೆಳಗ್ಗೆ ತನ್ನ ತಂದೆಯ ಬಗ್ಗೆ ಹಾಗೂ ಸಂಜೆ ಕಪ್ಪುಕುಳಿಗಳ ಬಗ್ಗೆ ಕವಿತೆಗಳನ್ನು ಬರೆದಂತೆ ಅಕ್ಕಳಾಗಲಿ, ಕನಕದಾಸರಾಗಲಿ ತಮ್ಮ ಬಿಡಿ ವಚನಗಳನ್ನಾಗಲಿ, ಕೀರ್ತನೆಗಳನ್ನಾಗಲಿ ರಚಿಸಿಲ್ಲ.

ಈ ಭಾಷಿಕ ರಚನೆಗಳು ಅವರ ಒಟ್ಟು ಆಧ್ಯಾತ್ಮಿಕ ಹುಡುಕಾಟದ ಉಪ-ಉತ್ಪನ್ನಗಳಾಗಿದ್ದವಷ್ಟೇ. ತನ್ನದೇ ಎರಡು ಭಾಷಿಕ ರಚನೆಗಳು ಪರಸ್ಪರ ಪ್ರತ್ಯೇಕಿತ, ಸಂದರ್ಭವಿಶಿಷ್ಟ ಅಸ್ಮಿತೆಯನ್ನು ಪಡೆದಿವೆ ಎಂಬಂಥ ಮಾತು ಆಧುನಿಕ ಕವಿಗಳಿಂದ ಬರಲು ಸಾಧ್ಯವೇ ಹೊರತು ಆಧುನಿಕಪೂರ್ವದ ಕವಿಗಳಿಂದಲ್ಲ. ಈ ನಿಟ್ಟಿನಲ್ಲಿ, ನಾವಿಂದು ಯಾವುದನ್ನು ಕವಿತೆ, ಕವನ ಎಂದು ಗುರುತಿಸುತ್ತೇವೆಯೋ ಅದು ಯುರೋಪಿನಲ್ಲಿ ೧೮-೧೯ನೆಯ ಶತಮಾನದಲ್ಲಾದ ಸೃಷ್ಟಿ. ಕನ್ನಡದ ಪರಿಸರದಲ್ಲಿ ಅದು 19ನೆಯ ಶತಮಾನದ ಕೊನೆ ಮತ್ತು ೨೦ನೆಯ ಶತಮಾನದ ಆದಿಭಾಗದಲ್ಲಿ ನೆಲೆಕಂಡಿತು. ಕವಿತೆಗಳು ಸೀಮಿತ ಕಾಲಾವಧಿಯಲ್ಲಿ ಕವಿಯಲ್ಲಿ ಮೂಡುವ ಭಾವ ಸಂಚಲನಕ್ಕೆ, ವಿಚಾರ ವಿಹಾರಕ್ಕೆ ಒಂದು ನಿರ್ದಿಷ್ಟ ಭಾಷಿಕ ರೂಪವನ್ನು ನೀಡಿ, ವಿರಮಿಸುತ್ತವೆ. ಈ ಭಾವ-ವಿಚಾರಗಳು ಲೋಕಕ್ಕೆ ಎಷ್ಟೇ ಸಂಬಂಧಿಸಿದ್ದಾದರೂ ತಾನು ರಚಿಸಿದ ಕವಿತೆಗಳು ತನ್ನ ಅತ್ಯಂತ ವೈಯಕ್ತಿಕ, ಖಾಸಗಿ ಪ್ರಪಂಚದಲ್ಲಿ, ನಿರ್ದಿಷ್ಟ ಸಂದರ್ಭದಲ್ಲಿ ಮೂಡಿವೆ ಎಂಬುದು ಕವಿಯ ನಂಬಿಕೆಯಾಗಿರುತ್ತದೆ. ಹಾಗಾಗಿ, ಕವಿತೆಗಳಲ್ಲಿ ವ್ಯಕ್ತಿವಿಶಿಷ್ಟ ಮತ್ತು ಸ್ವಾಯತ್ತ ವ್ಯಕ್ತಿತ್ವದ ಅಭಿವ್ಯಕ್ತಿಯ ಲಕ್ಷಣಗಳು ಎದ್ದು ಕಾಣುತ್ತವೆ. ಈ ಲಕ್ಷಣಗಳು ಆಧುನಿಕತೆಯ ಲೋಕಗ್ರಹಿಕೆಯ ಬಹುಮುಖ್ಯ ಭಾಗವೇ ಆಗಿರುವುದರಿಂದ ಹಾಗೂ ಕವಿತೆಗಳನ್ನು ಓದುವವರು ಕೂಡ ಈ ಲೋಕಗ್ರಹಿಕೆಯ ಹೆಜ್ಜಾಲದಿಂದ ತಪ್ಪಿಸಿಕೊಂಡು ಮರೆಯಾಗಿರಲು ಸಾಧ್ಯವೇ ಇಲ್ಲದ್ದರಿಂದ, ಕವಿಯ ಹೆಸರನ್ನು ತಿಳಿಯದೆಯೂ ಅವರು ಕವಿತೆಯನ್ನು ವೈಯಕ್ತೀಕರಿಸಿಕೊಂಡು, ವ್ಯಕ್ತಿವಿಶಿಷ್ಟ ನೆಲೆಯಲ್ಲಿ ಆಸ್ವಾದಿಸಬಲ್ಲರು. ವ್ಯಕ್ತಿವಿಶಿಷ್ಟತೆಯ ಬಗೆಗಿನ ನಂಬಿಕೆಯ ಕಾರಣಕ್ಕೆ ಕವಿಯು ತನ್ನ ಕವಿತೆಯಲ್ಲಿ ವ್ಯಕ್ತಿವಿಶಿಷ್ಟವಾದ ಲಯವನ್ನು ಅರಸಲು ಹೊರಡುತ್ತಾಳೆ. ಇದು, ಕಾವ್ಯ-ಲಯಕ್ಕೂ, ಶಾಸ್ತ್ರೀಯ ಛಂದೋಬದ್ಧತೆಗೂ ಇದ್ದ ನಂಟನ್ನು ಮುರಿಯುತ್ತದೆ. ಕವಿತೆಗಳು ಲಯಬದ್ಧವಾಗಿದ್ದೂ ಛಂದೋಬದ್ಧತೆಯನ್ನು ನಿರಾಕರಿಸುತ್ತವೆ. ವಚನ, ದಾಸರ ಕೀರ್ತನೆ, ತತ್ತ್ವಪದ ಹಾಗೂ ಜನಪದ ಕಾವ್ಯಗಳಲ್ಲಿಯೂ ಈ ವಿಘಟನೆಯನ್ನು ನೋಡಬಹುದಾದರೂ ಇದಕ್ಕೆ ವ್ಯಕ್ತಿವಿಶಿಷ್ಟತೆಯನ್ನು ಕುರಿತ ಲೋಕಗ್ರಹಿಕೆ ಕಾರಣವಲ್ಲ. ಅಲ್ಲದೆ, ಆಧುನಿಕ ಕವಿತೆಗಳ ರಾಚನಿಕ ಸ್ವರೂಪಗಳು ಹೊಂದಿರುವಷ್ಟು ಪರಸ್ಪರ ಭಿನ್ನತೆ ಹಾಗೂ ಸ್ವಾಯತ್ತತೆಯನ್ನು ಆ ಯಾವ ರಚನೆಗಳೂ ಹೊಂದಿಲ್ಲ ಎನ್ನಬಹುದು.

ಪ್ರಸ್ತುತ ಕವನ ಸಂಕಲನದಲ್ಲಿ ಒಟ್ಟು 62 ಕವಿತೆಗಳಿವೆ. ವಸ್ತುವಿನ ದೃಷ್ಟಿಯಿಂದ ವೈವಿಧ್ಯತೆ ಇದೆ. ಈ ವಸ್ತುಗಳನ್ನು ನಿರ್ವಹಿಸಿದ ಕವನಗಳ ತಾತ್ವಿಕ ಹಾಗೂ ನೈತಿಕ ಚೌಕಟ್ಟುಗಳ ಬಗ್ಗೆ ನನಗೆ ಅಪಾರ ಖುಷಿಯಿದೆ. ಜಾತಿ, ಲಿಂಗ, ವರ್ಗೀಯ ಪರಿಕಲ್ಪನೆ ಮತ್ತು ತಾರತಮ್ಯಗಳನ್ನು ಕುರಿತು, ಆಧುನಿಕತೆಯ ಭಾವಶೂನ್ಯ ಅರ್ಥಪ್ರಪಂಚವನ್ನು ಕುರಿತು ಕಟು ವಿಮರ್ಶೆಗಳಿವೆ. ಜೀವನಸ್ಫೂರ್ತಿಯನ್ನು ನೀಡುವ ನುಡಿಮುತ್ತುಗಳಿವೆ. ಪರೋಪಕಾರಿಯಾಗಿ ಬದುಕಿರಿ ಎಂದು ಬೋಧಿಸುವ ಹಿತನುಡಿಗಳಿವೆ. ನಲ್ಲ-ನಲ್ಲೆಯರ ಪಿಸುಮಾತುಗಳಿವೆ, ವಿರಹಿಗಳ ವಿಪ್ರಲಬ್ಧ ಪ್ರಲಾಪಗಳಿವೆ. ಒಟ್ಟಾರೆಯಾಗಿ, ನಮ್ಮ ಇಂದಿನ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಪ್ರಚಲಿತವಿರುವ ‘ಜೀವಪರ’, ‘ಜೀವನಪರ’ ಕವಿತೆಗಳ ಪಟ್ಟಿಗೆ ಈ ಸಂಕಲನದ ಬಹುತೇಕ ಕವಿತೆಗಳು ಸೇರುತ್ತವೆ ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ. ಆದರೆ, ಈ ಎಲ್ಲ ಕವಿತೆಗಳನ್ನು ಓದಿದಾಗ, ನಿರ್ದಿಷ್ಟ ವಸ್ತು-ವಿಷಯವನ್ನು ಕುರಿತ ವ್ಯಕ್ತಿಯ ತಲ್ಲಣಗಳನ್ನು ಅಭಿವ್ಯಕ್ತಿಸಲು ಇಲ್ಲಿ ಬರಹಗಾರರು ಕವಿತೆಯ ಮಾದರಿಯನ್ನೇ ಏಕೆ ಆಯ್ದುಕೊಂಡರು? ಗದ್ಯದ ರೂಪವನ್ನೇಕೆ ಆಯ್ಕೆಮಾಡಿಕೊಂಡಿಲ್ಲ? ಕವಿತೆಗೂ, ಗದ್ಯಕ್ಕೂ ಯಾವ ವ್ಯತ್ಯಾಸವಿದೆ? ಕವಿತೆಯನ್ನು ಕುರಿತು ನಮ್ಮ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಾವ ಬಗೆಯ ಕಲ್ಪನೆಗಳಿವೆ? ಮುಂತಾದ ಪ್ರಶ್ನೆಗಳು ಎದ್ದವು. ಈ ಪ್ರಶ್ನೆಗಳನ್ನು ಸಂಕ್ಷೇಪಗೊಳಿಸಿ, ಕವಿತೆಯ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಹೀಗೆ ಕೇಳಬಹುದು- ಕವಿತೆಯ ಸ್ವರೂಪ ಮತ್ತು ಪರಿಣಾಮಗಳಿಗೆ ಅದರದ್ದೇ ಆದ ವಿಶಿಷ್ಟತೆಗಳಿವೆಯೇ? ಇದನ್ನು ನಾನು ಈ ಸಂಕಲನದ ಕವಿಗಳಿಗೆ ಕೇಳುತ್ತಿಲ್ಲ. ಬದಲಿಗೆ, ಅವರ ಕವನಗಳನ್ನು ಅವಲೋಕಿಸುವ ನೆಪದಲ್ಲಿ ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ.

ದೀಪಿಕಾ ಮರಳೂರು ಅವರು ರಚಿಸಿರುವ ‘ದುಷ್ಟತೆ’ ಕವನದ ಭಾಗವೊಂದರಿಂದ ಈ ಚರ್ಚೆಯನ್ನು ಆರಂಭಿಸಬಹುದು.

“ಅವಳು ಒಂದು ಹೆಣ್ಣಲ್ಲವೇ, ಅವಳಿಗೂ ಮನಸ್ಸಿಲ್ಲವೇ
ಭಾವನೆಗಳ ಕಿತ್ತೆಸೆದು ಕೊಂದುಬಿಟ್ಟರು
ಸುಟ್ಟರು ಅವಳ ಅಂತರಗವನ್ನು
ಸಾಧನೆಯ ಮನೋಭಾವವನ್ನೇ, ಕಸಿದುಬಿಟ್ಟರು”.

ನಾಲ್ಕು ಸಾಲುಗಳಲ್ಲಿ ಹರಡಿರುವ ಈ ಕವನದ ಭಾಗವನ್ನು, ಅದರ ವಾಚ್ಯಾರ್ಥ ಮತ್ತು ವ್ಯಂಗ್ಯಾರ್ಥಕ್ಕೆ ಕಿಂಚಿತ್ತೂ ಊನಬರದಂತೆ ಗದ್ಯ ರೂಪದಲ್ಲಿ ಹೀಗೆ ಬರೆಯಬಹುದು – “ಅವಳು ಒಂದು ಹೆಣ್ಣಲ್ಲವೇ? ಅವಳಿಗೂ ಮನಸ್ಸಿಲ್ಲವೇ? ಭಾವನೆಗಳನ್ನು ಕಿತ್ತೆಸೆದು ಅವಳನ್ನು ಕೊಂದುಬಿಟ್ಟರು! ಅವಳ ಅಂತರಂಗವನ್ನೇ ಸುಟ್ಟುಬಿಟ್ಟರು. ಸಾಧನೆಯ ಮನೋಭಾವವನ್ನೇ ಕಸಿದುಬಿಟ್ಟರು!” ಕವಿತೆಯಲ್ಲಿ ಹೇಳಿರುವುದನ್ನೇ ಗದ್ಯ ರೂಪದಲ್ಲಿ, ಪದಜೋಡಣೆಗಳನ್ನು ಹೆಚ್ಚು ಮಾರ್ಪಡಿಸದೆ, ಭಾವಕ್ಕೂ ಧಕ್ಕೆ ತರದೆ ಬರೆಯಬಹುದಾದರೆ, ಗದ್ಯವನ್ನು ವಾಚಿಸಬಹುದಾದರೆ ಈ ಕವಿ ಕವಿತೆಯ ಮಾದರಿಯನ್ನೇ ಏಕೆ ಆಯ್ಕೆಮಾಡಿಕೊಂಡಿದ್ದಾರೆ? ಉದ್ದಕ್ಕೆ ಬರೆಯುವುದರ ಬದಲು ಚಿಕ್ಕ ಚಿಕ್ಕ ಸಾಲುಗಳಾಗಿ ತುಂಡರಿಸಿ ಬರೆಯುವುದೇ ಕವಿತೆಯೇ?

ಓದುಗರ ಮತಿಯನ್ನು ಕೆರಳಿಸುವ ಇನ್ನೊಂದು ಕವನ ಇದೇ ಸಂಕಲನದಲ್ಲಿರುವ ‘ಬೇಕಾಗಿದ್ದಾಳೆ!!”. ಇದು, ಸಾಹಿತ್ಯ ಕೃತಿಯೊಂದರಲ್ಲಿ ಕೃತಿಕಾರಳನ್ನು ಗುರುತಿಸಲು ಸಾಧ್ಯವೇ ಎನ್ನುವ ಚರ್ಚೆಯನ್ನು ನೆನಪಿಸುತ್ತದೆ. ಕೃತಿಯು ಲೋಕಕ್ಕೆ ಸಮರ್ಪಣೆಗೊಳ್ಳುತ್ತಿದ್ದಂತೆ ಕೃತಿಕಾರ ಸತ್ತ, ಆಥರ್ ಇಸ್ ಡೆಡ್ ಎಂಬ ರೊನಾಲ್ಡ್ ಬಾರ್ತ್ರ ಮಾತನ್ನು ಸ್ಮರಿಸುವಂತೆ ಮಾಡುತ್ತದೆ. ಈ ಕವನವನ್ನು ಬರೆದದ್ದು ಯಾರು ಎಂಬುದನ್ನು ನೋಡಲು ಹೋಗದೆ ಕವನವನ್ನು ಓದಿದರೆ, ಗಂಡೊಬ್ಬ ತನ್ನ ಆದರ್ಶ ಬಾಳಸಂಗಾತಿಯನ್ನು ವರ್ಣಿಸುವುದು ಈ ಕವನದ ವಸ್ತು ಎಂದನ್ನಿಸುತ್ತದೆ. ವಿನಯವಂತಳಾಗಿರಬೇಕು, ಸಂಸ್ಕಾರವಂತಳಾಗಿರಬೇಕು, ಲೋಕದ ರೂಢಿಪಾಠಗಳಲ್ಲಿ ಒಗ್ಗಿದವಳಾಗಿರಬೇಕು ಎನ್ನುವುದು ಪುರುಷಪ್ರಧಾನ ವ್ಯವಸ್ಥೆಯು ಹೆಂಡತಿಯಿಂದ ಬಯಸುವ ಲಕ್ಷಣಗಳು ಎನ್ನುವ ಧೋರಣೆಯಿಂದ ಈ ಕವನವನ್ನು ನೋಡಿದರೆ, ಇದನ್ನು ಬರೆದ ಗಂಡು ಆ ಪುರುಷಪ್ರಧಾನ ವ್ಯವಸ್ಥೆಯ ಅತ್ಯುತ್ತಮ ನಿರ್ಮಾಣವೆಂದೇ ಭಾಸವಾಗುತ್ತದೆ. ಹೀಗೆ ಭಾವಿಸುತ್ತಲೇ ಈ ಕವನ ಬರೆದ ಗಂಡಸಿನ ಹೆಸರೇನೆಂದು ನೋಡಲು ಹೋದಾಗ ‘ಶ್ವೇತಾ ನಾಯಕ್’ ಎಂಬ ಹೆಸರು ಗೋಚರಿಸುತ್ತದೆ! ಲೋಕರೂಢಿಯಂತೆ ಶ್ವೇತ ಎನ್ನುವುದು ಹೆಣ್ಣಿನ ಹೆಸರು.

ರಸಾನುಭವ ಆದನಂತರ ಏನು? ಕ್ರಾಂತಿಯಾಗುತ್ತದೆಯೇ? ಕ್ರಾಂತಿ ಆದರೂ ಆದೀತು. ಆಗದಿದ್ದರೂ ನಡೆದೀತು. ರಸಾನುಭವದ ನಂತರ ಕ್ರಾಂತಿಯಾದರೆ ಸಂತೋಷ. ಆದರೆ, ಕವಿತೆಯಲ್ಲಿ ರಸಾನುಭವ ಅಮುಖ್ಯವೆಂದು ಭಾವಿಸುವ ಕ್ರಾಂತಿಕಾರಿಗಳು, ಆರ್ಥಿಕ, ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಬಯಸುವವರು ತಾವು ಕವಿತೆಗಳನ್ನು ಬರೆಯುವುದನ್ನು ಕುರಿತು ಇನ್ನೊಮ್ಮೆ ಯೋಚಿಸಬೇಕು. ಪ್ರತಿಭಟನೆ, ಅದು ರಸಾನುಭವದ ಕಾಳಜಿಯನ್ನು ಹೊಂದಿದಾಗಷ್ಟೇ ಕಾವ್ಯವಾಗಲು ಸಾಧ್ಯ. ಇಂಥ ಕಾಳಜಿಯನ್ನು ಹೊಂದಿದ ಅನೇಕ ಕವಿಗಳ ಕವಿತೆಗಳನ್ನು ಓದುತ್ತ ಪ್ರಸ್ತುತ ಸಂಕಲನಕ್ಕೆ ಕವಿತೆಗಳನ್ನು ಬರೆದಿರುವ ಎಲ್ಲರೂ ಕಾವ್ಯಾತ್ಮಕವಾಗಿ ಮಾಗಲಿ ಎಂದು ಆಶಿಸುತ್ತೇನೆ.”