ಕಾಶ್ಮೀರಕ್ಕೆ ಅಭಯಸೇತು

ಕಾಶ್ಮೀರಕ್ಕೆ ಅಭಯಸೇತು

ಜಮ್ಮು ಮತ್ತು ಕಾಶ್ಮೀರ ಭಾಗದ ಚೆನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವುದು ಕೇವಲ ಅಭಿವೃದ್ಧಿಯ ಹೆಜ್ಜೆ ಎಂಬರ್ಥದಲ್ಲಷ್ಟೇ ಗ್ರಹಿಸಬೇಕಾದ ಸಂಗತಿಯಲ್ಲ. ಇದು ಹಿಮ ಕಣಿವೆಗಳ ತಪ್ಪಲಿನಲ್ಲಿ ಭಾರತ ಕೈಗೊಂಡ ಅತ್ಯಾಧುನಿಕ ಎಂಜಿನಿಯರಿಂಗ್ ಸಾಹಸಕ್ಕೆ ಮತ್ತೊಂದು ನಿದರ್ಶನ ಕೂಡ. ಮಿಗಿಲಾಗಿ, ಭಾರತ ತನ್ನ ಅವಿಭಾಜ್ಯ ಅಂಗ ಕಾಶ್ಮೀರಕ್ಕೆ ನೀಡಿದ ಬಹುದೊಡ್ಡ ಸಂಪರ್ಕ ಭದ್ರತೆ ಎಂಬುದು ಗಮನಾರ್ಹ.

ಸ್ವಾತಂತ್ರ್ಯ ಬಂದು ೭೬ ವರ್ಷಗಳ ನಂತರವೂ ಹಿಮಪಾತದ ಅವಧಿಯಲ್ಲಿ ಕಾಶ್ಮೀರ ಕಣಿವೆಗೆ ದೇಶದ ಇತರ ಭಾಗಗಳ ಸಂಪರ್ಕ ಕಡಿತವಾಗುತ್ತಿತ್ತು. ಪ್ರಧಾನಿ ಅವರು ಈ ಸೇತುವೆ ಉದ್ಘಾಟಿಸುವವರೆಗೂ ಕಾಶ್ಮೀರ ಕಣಿವೆಯನ್ನು ರಾಷ್ಟ್ರೀಯ ಹೆದ್ದಾರಿ -೪೪ರ ಮೂಲಕ ಮಾತ್ರವೇ ತಲುಪಬೇಕಿತ್ತು. ಆದರೆ, ಚಳಿಗಾಲದಲ್ಲಿ ಈ ಮಾರ್ಗದಲ್ಲಿನ ಯಾನ ದುಃಸ್ವಪ್ನವಾಗಿದ್ದ ಕಾರಣ ಭದ್ರತಾ ಪಡೆಗಳಿಗೂ ಸಂಚಾರ ದುಸ್ತರವಾಗಿತ್ತು. ರೈಲ್ವೇ ನಿಲ್ದಾಣ ಕೊನೆಗೊಳ್ಳುವ ಜಮ್ಮು ತವಿಯಿಂದ ಶ್ರೀನಗರ ಪ್ರಯಾಣಿಸುವವರಿಗೂ ಕೇವಲ ೩೫೦ ಕಿ.ಮೀ ಗ಼ೆ ದುರ್ಗಮ ಹಾದಿಯಲ್ಲಿ ೮-೧೦ ತಾಸುಗಳ ಪ್ರಯಾಣ ತ್ರಾಸದಾಯಕವಾಗಿತ್ತು. “ಕಾಶ್ಮೀರ ತನ್ನ ಭಾಗವೆಂದು ಹೇಳಿಕೊಳ್ಳುವ ಭಾರತವು ಶ್ರೀನಗರಕ್ಕೆ ಸರ್ವಋತು ಮಾರ್ಗವನ್ನೇ ರೂಪಿಸಿಲ್ಲ.” ಎಂಬ ಪಾಕಿಸ್ತಾನದ ಆರೋಪವು ಭಾರತಕ್ಕೆ ವಿಶ್ವ ವೇದಿಕೆಯಲ್ಲಿ ಮುಜುಗರವನ್ನೂ ಸೃಷ್ಟಿಸಿತ್ತು. ಇಂದು ಮೋದಿ ಸರಕಾರವು ‘ಏಕ್ ಭಾರತ್ ಶ್ರೇಷ್ಟ ಭಾರತ್' ಯೋಜನೆ ಅಡಿಯಲ್ಲಿ ಬಹುದಿನಗಳ ಕೊರತೆಗೆ ಉತ್ತರ ನೀಡುರುವುದು ಶ್ಲಾಘನೀಯ.

ಚೆನಾಬ್ ಗೆ ಸೇತುವೆ ನಿರ್ಮಿಸುವ ಮೂಲಕ ಒಂದೇ ಕಲ್ಲಿನಲ್ಲಿ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರತ ಏಟು ನೀಡಿದೆ. ಈ ಸೇತುವೆಯನ್ನು ಕಾಶ್ಮೀರದ ಅಖ್ನೂರ್ ವಲಯದಲ್ಲಿ ನಿರ್ಮಿಸಲಾಗಿದೆ. ಇದನ್ನು ಚಿಕನ್ ನೆಕ್ ಭಾಗ ಎಂದೇ ಕರೆಯಲಾಗುತ್ತದೆ. ಈ ಸೇತುವೆಯ ಸಮಾನಾಂತರದಲ್ಲಿ ಇತ್ತ ಚೀನಾವು ‘ಸಿಲಿಗುರಿ ಕಾರಿಡಾರ್' ಮೇಲೂ ವಕ್ರದೃಷ್ಟಿ ಬೀರಿದೆ. ಇದು ಕೂಡ ಚಿಕನ್ ನೆಕ್ ಭಾಗ. ಒಂದು ವೇಳೆ ಅತ್ತ ಪಾಕಿಸ್ತಾನ, ಇತ್ತ ಚೀನಾವು ಚಳಿಗಾಲದಲ್ಲಿ ಇವುಗಳನ್ನು ವಶಪಡಿಸಿಕೊಳ್ಳಲು ಮುಂದಾದರೆ ಕಾಶ್ಮೀರವೇ ಎರಡು ಭಾಗಗಳಾಗಿ ವಿಭಜನೆಯಾಗುವ ಅಪಾಯವಿತ್ತು. ಒಂದು ಸೇತುವೆ ಮೂಲಕ ಈ ಆತಂಕವನ್ನು ಭಾರತ ಹೊಡೆದುರುಳಿಸಿರುವುದು ಜಾಣ ಭದ್ರತಾ ತಂತ್ರಗಾರಿಕೆಗೆ ಸಾಕ್ಷಿ.

ಸೇತುವೆ ಎಂದರೆ ಕೇವಲ ರೈಲಷ್ಟೇ ಸಂಚರಿಸುತ್ತದೆ ಎನ್ನುವುದೂ ಅಲ್ಲ. ಸರಕು ಸಾಗಾಟ ಇನ್ನು ಮುಂದೆ ಸುಲಭವಾಗಿ, ಕಣಿವೆಯಲ್ಲಿ ಚಳಿಗಾಲದ ವೇಳೆ ಏರಿಕೆ ಕಾಣುತ್ತಿದ್ದ ವಸ್ತುಗಳ ಬೆಲೆಯೂ ತಗ್ಗುವ ನಿರೀಕ್ಷೆ ಇದೆ. ಸಾಮಾನ್ಯ ಪ್ರವಾಸಿಗರೂ ಕಣಿವೆ ಪ್ರದೇಶಗನ್ನು ತಲುಪಲು ಅನುಕೂಲ ಮಾಡಿಕೊಟ್ಟಂತಾಗಿದೆ. ಯುದ್ಧದಂಥ ತುರ್ತು ಸನ್ನಿವೇಶಗಳಲ್ಲೂ ಸೇತುವೆಯಿಂದ ಲಾಭವೇ ಆಗಲಿದೆ. ಇಂಥ ಪ್ರಗತಿಗಳು ಕಣಿವೆಯ ಜನರಿಗೆ ಭಾರತದ ಮೇಲಿನ ಒಲವನ್ನು ನೂರ್ಮಡಿಸುವಂತೆ ಮಾಡಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೨-೦೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ