ಕಾಶ್ಮೀರದಲ್ಲಿ ಹೆಚ್ಚಿದ ಮತದಾನ

ಕಾಶ್ಮೀರದಲ್ಲಿ ಹೆಚ್ಚಿದ ಮತದಾನ

ಕಾಶ್ಮೀರ ನಿಜಕ್ಕೂ ಬದಲಾಗಿದೆ. ೩೭೦ನೇ ವಿಧಿ ರದ್ದುಪಡಿಸಿ, ಅದರ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ ಅದನ್ನು ನಿಜವಾಗಿಯೂ ಭಾರತದ ಅಂಗವನ್ನಾಗಿಸಿದಂದಿನಿಂದ ಕಾಶ್ಮೀರ ಬದಲಾಗುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ಅದು ಸ್ಪಷ್ಟವಾಗಿದೆ. ಶ್ರೀನಗರ ಮತ್ತು ಬಾರಾಮುಲ್ಲಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಂಖ್ಯೆಯ ಮತದಾರರು ಮತದಾನ ಮಾಡಿದ್ದಾರೆ. ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಶೇ ೩೮.೫ರಷ್ಟು ಮತದಾನವಾಗಿದ್ದರೆ, ಬಾರಾಮುಲ್ಲಾ ಶೇ. ೫೯.೧ರಷ್ಟು ಮತದಾನ ದಾಖಲಿಸಿದೆ. ಬಾರಾಮುಲ್ಲಾದ ಮತದಾನವು ಮುಂಬೈಯಲ್ಲಾದ ಮತದಾನಕ್ಕಿಂತಲೂ ಹೆಚ್ಚು. ಬಾರಾಮುಲ್ಲಾದಲ್ಲಿ ಕಳೆದ ಎಂಟು ಲೋಕಸಭಾ ಚುನಾವಣೆಯಲ್ಲೇ ಇದು ಅತ್ಯಧಿಕ ಮತದಾನ. ೨೦೧೯ರ ಚುನಾವಣೆಯಲ್ಲಿ ಶ್ರೀನಗರದಲ್ಲಿ ಶೇ. ೧೪.೪೩ ಹಾಗೂ ಬಾರಾಮುಲ್ಲಾದಲ್ಲಿ ಶೇ. ೩೪.೩೬ ಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಜನರು ಪ್ರಜಾತಾಂತ್ರಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಹಾಗೂ ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸಲು ಬದ್ಧರಾಗಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ.

೩೭೦ನೇ ವಿಧಿ ತೆಗೆದು ಹಾಕಿದ ನಂತರದ ಕಾಶ್ಮೀರದ ಕುರಿತಾದ ಪ್ರತ್ಯೇಕವಾದಿಗಳ, ಅವರ ಬೆಂಬಲಿಗರ ನರೇಟಿವ್ ಸುಳ್ಳೆಂಬುದನ್ನು ಈ ಮತದಾನ ಪ್ರಮಾಣ ತೋರಿಸಿಕೊಟ್ಟಿದೆ. ಪಾಕಿಸ್ತಾನದ ಅಪಪ್ರಚಾರವಂತೂ ಈಗ ಮಖಾಡೆ ಮಲಗಿದೆ. ಕಾಶ್ಮೀರದ ಜನರು ಭಾರತ ಸರಕಾರದ ಪ್ರಜಾತಾಂತ್ರಿಕ ಉಪಕ್ರಮಗಳನ್ನು ಬೆಂಬಲಿಸುತ್ತಾರೆಂಬುದನ್ನು ಇದು ನಿಚ್ಚಳಗೊಳಿಸಿದೆ.

ಈ ಮೊದಲೆಲ್ಲ ಜಮ್ಮುಕಾಶ್ಮೀರದಲ್ಲಿ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದವರೂ ಕೂಡಾ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿರುವುದು ಮತ್ತೊಂದು ಮಹತ್ವದ ಬೆಳವಣಿಗೆ. ಚುನಾವಣೆ ವಿರೋಧಿಸುತ್ತಿದ್ದ ಹಾಗೂ ಭಾರತದ ಕಡುವಿರೋಧಿಯಾದ ಕಾಶ್ಮೀರದ ಜಮಾತ್ ಇ ಇಸ್ಲಾಮೀ ಸಂಘಟನೆ ಕೂಡಾ ಈಗ ತನ್ನ ಮೇಲಿನ ನಿಷೇಧ ತೆಗೆದು ಹಾಕಿದರೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ. ಸಂಘಟನೆಯ ಮುಖ್ಯಸ್ಥ ಗುಲಾಮ್ ಖಾದಿರ್ ವನಿ ಇದನ್ನು ತಿಳಿಸಿದ್ದು, ಅವರು ಕೂಡಾ ಈ ಬಾರಿ ಮತದಾನ ಮಾಡಿದ್ದಾರೆ. ಇದು ಮಹತ್ವದ ಬೆಳವಣಿಗೆಯೇ ನಿಜ. ಆದರೆ ಜಮಾತ್ ಇ ಇಸ್ಲಾಮಿಯಂತಹ ಸಂಘಟನೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮುನ್ನ ಸರಕಾರವು ಸಾಕಷ್ಟು ವಿಚಾರ ವಿಮರ್ಶೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕೆ ಅವಕಾಶ ನೀಡಿದರೆ ಕಾಶ್ಮೀರವನ್ನು ತಾಲಿಬಾನ್ ಕೈಗೆ ಒಪ್ಪಿಸಿದಂತೆ ಎಂಬುದಾಗಿ ಕೆಲವು ಪರಿಣಿತರು ಹೇಳುವುದಿದೆ. ಈ ವಿಚಾರದಲ್ಲಿ ಸರಕಾರವು ಪ್ರಜ್ಞಾವಂತ ನಿರ್ಧಾರ ತೆಗೆದುಕೊಳ್ಳುವುದೆಂದು ಆಶಿಸೋಣ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೩-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ