ಕಾಶ್ಮೀರದ ಪ್ರವಾಸದಲ್ಲಿ ಕೆಲ ನಿಮಿಷಗಳು ನಿಮ್ಮೊಂದಿಗೆ....

ಕಾಶ್ಮೀರದ ಪ್ರವಾಸದಲ್ಲಿ ಕೆಲ ನಿಮಿಷಗಳು ನಿಮ್ಮೊಂದಿಗೆ....

ಕೆಲವು ಯೂರೋಪಿಯನ್ ದೇಶಗಳು, ದಕ್ಷಿಣ ಏಷ್ಯಾದ ಒಂದೆರಡು ದೇಶಗಳು, ಭಾರತದ ಅನೇಕ ರಾಜ್ಯಗಳು, ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿದ್ದೇನೆ. ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕ, ಏಷ್ಯಾ ಮುಂತಾದ ವಿಶ್ವದ ಭೂ ಪ್ರದೇಶಗಳ ಇಂದಿನ ಜನಜೀವನದ ಬಗ್ಗೆ ಒಂದಷ್ಟು ಸಣ್ಣ ಮಾಹಿತಿ ಸಂಗ್ರಹಿಸಿದ್ದೇನೆ. ಕೆಲವು ವಿದೇಶಿ ಗೆಳೆಯರ ಜೊತೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಆಗಾಗ ಚರ್ಚಿಸುತ್ತಿರುತ್ತೇನೆ. ಈಗ ಭಾರತ ದೇಶದ ಉತ್ತರದ ತುತ್ತ ತುದಿ ಜಮ್ಮು ಕಾಶ್ಮೀರ ಕಣಿವೆಯಲ್ಲಿ ಪ್ರವಾಸದಲ್ಲಿದ್ದೇನೆ. 

ಸುಮಾರು ಅರ್ಧ ಶತಮಾನಗಳ ಕಾಲ ಇದನ್ನೆಲ್ಲಾ ಸೂಕ್ಷ್ಮವಾಗಿ ನನ್ನ ಅರಿವಿನ ಮಿತಿಯಲ್ಲಿ ವಿಮರ್ಶೆಗೊಳಪಡಿಸಿದಾಗ.... ಮುಖ್ಯವಾಗಿ ಸಮೂಹ ಸಂಪರ್ಕ ಕ್ರಾಂತಿಯ ಫಲವಾಗಿ ಇಡೀ ವಿಶ್ವದ ಸಾಮಾನ್ಯ ಜನರ ಆಹಾರ ಉಡುಗೆ ತೊಡುಗೆ ರಸ್ತೆಗಳು ಕಟ್ಟಡಗಳು ವಾಹನಗಳು ಪರಿಸರ ಮಾಲಿನ್ಯ ನಗರೀಕರಣದ ತ್ಯಾಜ್ಯ, ಮನಸ್ಥಿತಿಗಳು ಜೊತೆಗೆ ಮತ್ತೊಂದಿಷ್ಟು ಸಮಾನ ವಿಷಯಗಳು ಎಲ್ಲವೂ ಬಹುತೇಕ ಒಂದೇ ರೀತಿಯ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ತಮ್ಮ ಮೂಲ ಸ್ವರೂಪದ ಬದಲಾವಣೆಯ ದಿಕ್ಕು ಏಕೀಭವನ ಹೊಂದುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇಡೀ ವಿಶ್ವದ ಸ್ಥಳೀಯ ಆಹಾರ ಪದ್ದತಿಗಳು ಭಿನ್ನವಾಗಿದ್ದರು, ಈಗಲೂ ಪ್ರಮುಖ ಆಹಾರ ಅದೇ ಆಗಿದ್ದರು, ಪಾಶ್ಚಾತ್ಯ ದೇಶಗಳ ಪೀಜಾ ಬರ್ಗರ್ ಚೀನಾ ಶೈಲಿಯ ಊಟ ಮುಂತಾದ ಕೆಲವು ವಿಶಿಷ್ಟ ಖಾದ್ಯಗಳು ಕಾಂಟಿನೆಂಟಲ್ ಪುಡ್ ಹೆಸರಿನಲ್ಲಿ ನಗರ ಪಟ್ಟಣಗಳನ್ನು ದಾಟಿ ಚಿಕ್ಕ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಕೆ ಎಫ್ ಸಿ, ಮ್ಯಾಕ್ ಡೊನಾಲ್ಡ್, ನೂಡಲ್ಸ್, ಬ್ರೆಡ್ ಆಮ್ಲೆಟ್, ಕೆಲವು ಐಸ್ ಕ್ರೀಮ್ ಗಳು ಇನ್ನೂ ಅನೇಕ ಪದಾರ್ಥಗಳ ಬ್ರಾಂಡೆಡ್ ಅಂಗಡಿಗಳು ಎಲ್ಲಾ ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಕಾಣಿಸಿಕೊಂಡು ಎಲ್ಲಾ ಊರು ಪ್ರದೇಶ ಗಲ್ಲಿ ಮಾರುಕಟ್ಟೆ ಮಾಲುಗಳು ಒಂದೇ ರೀತಿಯಲ್ಲಿ ಕಾಣತೊಡಗಿದೆ.

ಆಫ್ರಿಕಾದ ಒಂದು ಸಣ್ಣ ಪ್ರದೇಶವೇ ಇರಲಿ, ಭಾರತದ ಕೊಡಗಿನ ಸಣ್ಣ ಗ್ರಾಮವೇ ಇರಲಿ, ನ್ಯೂಜಿಲೆಂಡಿನ ಹಿಮಾಚ್ಛಾದಿತ ಪ್ರದೇಶವೇ ಇರಲಿ, ಚೀನಾದ ಅತಿ ಹಿಂದುಳಿದ ಪ್ರದೇಶವೇ ಇರಲಿ, ನ್ಯೂಯಾರ್ಕ್, ಲಂಡನ್, ಸಿಡ್ನಿ, ಸಿಯೋಲ್, ಬ್ಯೂನಸ್ ಐರಿಸ್ ಹೀಗೆ ಯಾವುದೇ ಪ್ರದೇಶದ ಎಲ್ಲಾ ಮಧ್ಯಮ ವರ್ಗದ ಜನರ ವೇಷಭೂಷಣಗಳಲ್ಲಿ ಅಂತಹ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಜೀನ್ಸ್ ಶಾರ್ಟ್ಸ್ ಶೂಸ್ ಟೀಶರ್ಟ್ಸ್ ಕಲರ್ಸ್ ಲೆಗ್ಗಿನ್ಸ್ ಮುಂತಾದ ಎಲ್ಲಾ ರೀತಿಯ ಡಿಸೈನುಗಳು ಎಲ್ಲೆಲ್ಲೂ ಒಂದೇ ರೀತಿ ಕಾಣುತ್ತದೆ. ರಸ್ತೆ ಕಟ್ಟಡ ಮಾರುಕಟ್ಟೆಗಳ ವಿನ್ಯಾಸ, ವಸ್ತುಗಳ ಜೋಡಣೆ, ನಾಮ ಫಲಕಗಳು ಇತರ ಅನೇಕ ಸ್ವರೂಪಗಳು ಇಡೀ ವಿಶ್ವದಲ್ಲೇ ಒಂದೇ ರೀತಿಯಲ್ಲಿ ಕಾಣುತ್ತದೆ. ಗುಣಮಟ್ಟದಲ್ಲಿ ಮಾತ್ರ ಒಂದಷ್ಟು ವ್ಯತ್ಯಾಸ ಇರುತ್ತದೆ.

ಯೂರೋಪ್, ಆಸ್ಟ್ರೇಲಿಯಾ, ಅಮೆರಿಕ, ಜಪಾನ್, ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಪುರ, ಟರ್ಕಿ, ರಷ್ಯಾ ಮುಂತಾದ ದೇಶಗಳಲ್ಲಿ ಶ್ರೀಮಂತಿಕೆ ಮತ್ತು ಜನಸಂಖ್ಯೆಯ ಕಡಿಮೆ ಒತ್ತಡದ ಕಾರಣದಿಂದ ಒಂದಷ್ಟು ಕೊಳಚೆ ಪ್ರದೇಶಗಳು ಕಡಿಮೆ ಇದ್ದು ಸುಂದರ ಮೇಲ್ಮೈ ವಾತಾವರಣ ಇರಬಹುದು. ಉಳಿದೆಲ್ಲಾ ದೇಶಗಳು ಜನಸಂಖ್ಯೆಯ ಒತ್ತಡ ಮತ್ತು ಅದರಿಂದಾಗಿ ಹರಡುತ್ತಿರುವ ತ್ಯಾಜ್ಯ ನಿಯಂತ್ರಿಸಲಾಗದೆ ತುಂಬಾ ಹದಗೆಟ್ಟ ಪರಿಸ್ಥಿತಿ ಕಾಣುತ್ತಿದ್ದೇವೆ. ಪ್ಲ್ಯಾಸ್ಟಿಕ್ ಕಸ ಎಲ್ಲಾ ಪ್ರದೇಶಗಳಲ್ಲಿ ಒಂದೇ ರೀತಿಯಲ್ಲಿ ಕಾಣುತ್ತಿದೆ.

ಪ್ರವಾಸೋದ್ಯಮ ಮತ್ತು ವಸತಿ ಪ್ರದೇಶಗಳು ಸಹ ಒಂದೇ ರೀತಿ ಇರುತ್ತದೆ. ಅಪಾರ್ಟ್ಮೆಂಟ್ ಸಂಸ್ಕೃತಿ, ರಿಯಲ್ ಎಸ್ಟೇಟ್ ಉದ್ಯಮ ಎಲ್ಲಾ ಸರ್ವವ್ಯಾಪಿಯಾಗಿ ಯಾವ ಪ್ರದೇಶವನ್ನು ಬಿಟ್ಟಿಲ್ಲ. ಇದನ್ನು ಈಗ ಪ್ರಸ್ತಾಪಿಸಲು ಕಾರಣ ಬೆಂಗಳೂರು, ದೆಹಲಿ, ಪಂಜಾಬ್, ಹರಿಯಾಣ, ಜಮ್ಮು, ಕಾಶ್ಮೀರದವರೆಗೂ ಹೋಟೆಲ್ ಡಾಬ ಮೆಡಿಕಲ್ ಸ್ಟೋರ್ ಮೆಡಿಕಲ್ ಲ್ಯಾಬ್ ಬಟ್ಟೆ ಅಂಗಡಿ ಆಟೋ ಕಾರು ಎಲ್ಲವೂ ರೈಲು ಜನರ ವೇಷಭೂಷಣ ಎಲ್ಲವೂ ಒಂದೇ ರೀತಿಯಲ್ಲಿ ಕಂಡುಬರುತ್ತಿದೆ. ನಾವು ಅತ್ಯಂತ ಸುಂದರ ಎಂದು ಭಾವಿಸಲಾದ ಜಮ್ಮು ಕಾಶ್ಮೀರವೂ ಸಹ ತನ್ನ ತನವನ್ನು ಕಳೆದುಕೊಳ್ಳುತ್ತಿದೆ.

ಅತಿಯಾದ ಮಾರುಕಟ್ಟೆ ಪ್ರದೇಶಗಳು, ವಾಹನಗಳು, ವಿವಿಧ ಬ್ರಾಂಡಿನ ಬಟ್ಟೆ ಹೋಟೆಲುಗಳು, ಪ್ರವಾಸೋದ್ಯಮ ಏಜೆಂಟರಗಳ ದೊಡ್ಡ ವ್ಯವಹಾರ ಎಲ್ಲವೂ ಪ್ರಸಿದ್ಧ ಯಾತ್ರಾಸ್ಥಳಗಳ ಮಾದರಿಯಲ್ಲೇ ನಡೆಯುತ್ತಿದೆ. ರಾಜಸ್ಥಾನ - ಮೈಸೂರು - ಪೂರ್ವದ ರಾಜ್ಯಗಳು ಎಲ್ಲವೂ ಒಂದೇ ರೀತಿಯಲ್ಲಿ ಇರುತ್ತದೆ. ಹೋಮ್ ಸ್ಟೇ - ಸರ್ವೀಸ್ ಅಪಾರ್ಟ್ಮೆಂಟ್ ಗಳು ಒಂದೇ ರೀತಿಯ ಬೆಲೆ ಮತ್ತು ಸೇವೆ ನೀಡುತ್ತವೆ.

ಈ ರೀತಿಯ ಅಭಿವೃದ್ಧಿಯ ಮಾದರಿಗಳು ಮೂಲ ಸಂಸ್ಕೃತಿಯನ್ನು ಆಪೋಷನ ತೆಗೆದುಕೊಳ್ಳುವ ಕ್ರಿಯೆಯನ್ನು ವಿಶ್ವದಾದ್ಯಂತ ಗಮನಿಸಬಹುದು. ‌ಪಾಶ್ಚಾತ್ಯ ದೇಶಗಳಲ್ಲಿ ಈ ಕ್ರಿಯೆ ತುಂಬಾ ನಿಧಾನಗತಿಯಲ್ಲಿದ್ದರೆ ಭಾರತದಲ್ಲಿ ಅತ್ಯಂತ ವೇಗವಾಗಿ  ಆಗುತ್ತಿದೆ. ವೈವಿಧ್ಯತೆಯ ಮನೋ ಭೂಮಿಕೆ ಮರೆಯಾಗುತ್ತಿದೆ. ಭೂಲೋಕದ ಸ್ವರ್ಗ ಎಂದು ಬಣ್ಣಿಸಲಾಗುವ ಕಾಶ್ಮೀರ ಕಣಿವೆಯಲ್ಲಿ ಸುತ್ತಾಡುವಾಗ ಪ್ರಾಕೃತಿಕ ಸೌಂದರ್ಯ ಹೆಚ್ಚು ಕಡಿಮೆ ಮೂಲ‌ ಸ್ವರೂಪವನ್ನು ಉಳಿಸಿಕೊಂಡಿದೆ. ಆದರೆ ಮನುಷ್ಯ ಸಮಾಜ ಮತ್ತು ಕೃತಕ ಕಟ್ಟಡಗಳು ಇತರೆ ಪ್ರದೇಶಗಳಿಗಿಂತ ಭಿನ್ನವಾಗಿಲ್ಲ. 

ಇಲ್ಲಿನ ಜನರು, ಸೈನಿಕರು, ಮಕ್ಕಳು, ಹೆಂಗಸರು ಹೀಗೆ ಎಲ್ಲರನ್ನೂ ಅವರ ಮನಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸಾಗುತ್ತಿದ್ದೇನೆ. ಮಳೆ ಚಳಿ ಗಾಳಿಯ ಸಂಪೂರ್ಣ ಶೀತವಲಯದ ವಾತಾವರಣದಲ್ಲಿ, ನೆಟ್ ವರ್ಕ್ ಸಮಸ್ಯೆಯ ಮಧ್ಯೆ ಬದುಕಿನ ಸವಿಯನ್ನು ಗೆಳೆಯರೊಂದಿಗೆ ಸವಿಯುತ್ತಾ, ಇಲ್ಲಿನ ಭದ್ರತಾ ವ್ಯವಸ್ಥೆಯನ್ನು ನೋಡಿ ಒಳಗೆ ಮೂಡುವ ಸಣ್ಣ ಭಯವನ್ನು ಹಾಸ್ಯವಾಗಿ ಕಲ್ಪಿಸಿಕೊಂಡು ಹೊಟ್ಟೆ ತುಂಬಾ ನಗುತ್ತಾ ಪ್ರವಾಸ ಮುಂದುವರಿದಿದೆ. ನನ್ನ ಬದುಕಿನ ‌ಪಯಣವೇ ಜನರ ಜೀವನಮಟ್ಟ ಸುಧಾರಣೆಯ ಮನಸ್ಸುಗಳ ಅಂತರಂಗದ ಚಳವಳಿ. ಅದರಲ್ಲಿ ಈ ಪ್ರವಾಸವು ಒಂದು ಭಾಗ ಮಾತ್ರ. ಜೊತೆಗೆ ನಿಮ್ಮೊಂದಿಗೆ ಸಂಪರ್ಕ ನಿರಂತರ.....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ