'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ

'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ

ಬರಹ

'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ

ನನ್ನ 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ' ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿರುವೆ. ಆಸಕ್ತಿಯಿಂದ ಓದಿ ವಿವಿಧ ರೀತಿ ಹಾಗೂ ಭಾವಗಳೊಂದಿಗೆ ಪ್ರತಿಕ್ರಿಯಿಸಿರುವ ಎಲ್ಲರಿಗೂ ಧನ್ಯವಾದಗಳು. ಒಬ್ಬ ಓದುಗರು ಆಕ್ಷೇಪಿಸಿರುವಂತೆ, ನಾನು ನನ್ನ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳಿಗೆ ಸಾಮಾನ್ಯವಾಗಿ ಉತ್ತರಿಸುವುದಿಲ್ಲ ಎಂಬುದು ನಿಜ. ಇದಕ್ಕೆ ಎರಡು ಕಾರಣಗಳು. ಒಂದು, ಇನ್ನೋರ್ವ ಓದುಗರು ಈಗಾಗಲೇ ಸೂಚಿಸಿರುವಂತೆ ನನಗೆ ಬ್ಲಾಗ್ ತಂತ್ರಜ್ಞಾನ ತಿಳಿದಿಲ್ಲ. ಹಾಗೆ ನೋಡಿದರೆ, ಮೂಲತಃ ನಾನು ಈ 'ಬ್ಲಾಗ್'ಗಾಗಿಯೇ ಲೇಖನಗಳನ್ನು ಬರೆಯುತ್ತಿಲ್ಲ. 'ವಿಕ್ರಾಂತ ಕರ್ನಾಟಕ' ಸಾಪ್ತಾಹಿಕಕ್ಕಾಗಿ ಬರೆಯುತ್ತಿರುವ ಲೇಖನಗಳು ನನ್ನ ಸ್ನೇಹಿತರಾದ ಶ್ರೀನಿವಾಸ ಮೂರ್ತಿಯವರ ಪ್ರೇರೇಪಣೆ ಮತ್ತು ಸಹಾಯದಿಂದ 'ನಾಗಸಂಪದ' ಬ್ಲಾಗ್ನಲ್ಲಿ ಬರುತ್ತಿವೆಯಷ್ಟೆ. ಮತ್ತೋರ್ವ ಓದುಗರು ಕೇಳಿರುವ, ಪ್ರತಿಕ್ರಿಯೆಗೆ ಉತ್ತರಿಸದ ಲೇಖನಗಳಿಗೆ 'ಸಂಪದ'ದಲ್ಲಿ ಅವಕಾಶವೇಕೆ ('ಇದೇನು ಕಸದ ಬುಟ್ಟಿಯೆ?') ಎಂಬ ಪ್ರಶ್ನೆಗೆ ನಾನು ಉತ್ತರಿಸಲಾರೆ. ಸಂಬಂಧಪಟ್ಟವರು ಅವಕಾಶವಿಲ್ಲವೆಂದರೆ, ಈಗಲಿಂದೀಗಲೇ ನಿಲ್ಲಿಸಬಹುದು. ನನಗೇನೂ ಬೇಸರವಿಲ್ಲ.

ಎರಡನೇ ಕಾರಣ: ನಾನು ಗಮನಿಸಿರುವಂತೆ, ಅಂತರ್ಜಾಲದಲ್ಲಿ ನಡೆಯುವ ಬಹುತೇಕ ಚರ್ಚೆ ವೈಯುಕ್ತಿಕ ಮಟ್ಟದಲ್ಲಿರುತ್ತದೆ. ವಿಚಾರ ಪ್ರಚೋದಕವಾಗಿರುವುದಕ್ಕಿಂತ ಹೆಚ್ಚಾಗಿ, ವಾದದಲ್ಲಿ ಗೆಲ್ಲುವ ಹವಣಿಕೆಯೇ ಉದ್ದೇಶವಾಗಿರುವ 'ಚರ್ಚಾಕೂಟ'ದ ಶೈಲಿಯಲ್ಲಿರುತ್ತದೆ. ಅಥವಾ ವ್ಯಂಗ್ಯ - ವಿಡಂಬನೆ - ದುರುದ್ದೇಶಪೂರ್ವಕ ಟೀಕೆಗಳಿಂದ ತುಂಬಿದ ವಾಗ್ಯುದ್ಧದ ರೂಪದಲ್ಲಿರುತ್ತದೆ. ಇದರಿಂದ ನನಗೇನೂ ಪ್ರಯೋಜನವಾಗದಿರುವುದರಿಂದ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ನನ್ನ ಲೇಖನ ಮತ್ತು ಅದಕ್ಕೆ ಬರುವ ಪ್ರತಿಕ್ರಿಯೆಗಳು ಈ ಎರಡನ್ನೂ ಓದಿದ ಜನ ಒಂದು ತೀರ್ಮಾನಕ್ಕೆ ಬರಬಹುದೆಂದು ಸುಮ್ಮನಾಗುತ್ತೇನೆ. ಆದರೆ ನನ್ನ ಲೇಖನದ ಬಗ್ಗೆ ಪ್ರಾಮಾಣಿಕ ಅನುಮಾನಗಳನ್ನು ವ್ಯಕ್ತಪಡಿಸಿದಾಗ ಅಥವಾ ನನ್ನ ನಿಲುವುಗಳನ್ನು ಬದಲಿಸಿಕೊಳ್ಳಲು ಸಹಾಯಕವಾಗುವಂತಹ ಮಾಹಿತಿ ನೀಡಿ ವಿಮರ್ಶಿಸಿದಾಗ ನಾನು ಪ್ರತಿಕ್ರಿಯಿಸಿರುವೆ. ಇತ್ತೀಚಿನ ಉದಾಹರಣೆ: 'ಕಲ್ಯಾಣ ಕ್ರಾಂತಿ' ಕುರಿತ ನನ್ನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನೀಡಿದ ಉತ್ತರ.

ಇನ್ನು 'ಕಾಶ್ಮೀರದ ಬೆಂಕಿ' ಲೇಖನ ಕುರಿತ ಪ್ರತಿಕ್ರಿಯೆಗಳ ಕಡೆ ಈ 'ಬ್ಲಾಗ್'ಗೆ ಕಾರಣರಾಗಿರುವ ಶ್ರೀನಿವಾಸ ಮೂರ್ತಿಯವರು ನನ್ನ ಗಮನ ಸೆಳೆದಿರುವುದರಿಂದ ಮತ್ತು ಕೆಲವು ಓದುಗರು ತಮ್ಮ ಪ್ರಾಮಾಣಿಕ ಅನುಮಾನಗಳನ್ನು - ಕೆಲವರ ಭಾಷೆ ಅವರ ನಿಲುವಿಗನುಸರವಾಗಿ ಖಾರವಾಗಿದೆಯಾದರೂ - ವ್ಯಕ್ತಪಡಿಸಿರುವದರಿಂದ ಇವಕ್ಕೆ (ಮತ್ತೆ ಶ್ರೀನಿವಾಸ ಮೂರ್ತಿಯವರ ನೆರವಿನಿಂದಲೇ) ಉತ್ತರಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಬರೆಯಲು ಹೊರಟಾಗ ಚಾಮರಾಜ ಸವಡಿ ಎಂಬುವವರ ಎರಡನೇ ಪ್ರತಿಕ್ರಿಯೆ ಬಂದಿದೆ. ಇದರ ಶೈಲಿ ಮತ್ತು ಭಾವ ನನ್ನ ಉತ್ಸಾಹಕ್ಕೆ ತಣ್ಣೀರೆರಚಿದೆ ಎಂದೇ ಹೇಳಬೇಕು. ಇವರೀಗಾಗಲೇ ನನ್ನ ಬಗ್ಗೆ ತೀರ್ಮಾನಗಳಿಗೆ ಬಂದಿರುವುದರಿಂದ (ಹಾಗೆ ಬರಲು ನನ್ನ ಲೇಖನ ಅವರಲ್ಲಿ ಹುಟ್ಟಿಸಿರುವ ಆತಂಕಗಳೇ ಕಾರಣವಿರಬೇಕು), ಮುಖ್ಯವಾಗಿ ಅವರ ಮೊದಲ ಪ್ರತಿಕ್ರಿಯೆಗೇ ವಿವರವಾಗಿ - ಕಾಶ್ಮೀರ ಭಾರತಕ್ಕೆ ಸೇರಿದ ಪ್ರಕ್ರಿಯೆ ಮತ್ತು ಆನಂತರದ ಬೆಳವಣಿಗೆಗಳನ್ನು ಕುರಿತಂತೆ - ಪ್ರತಿಕ್ರಿಯಿಸಬೇಕೆಂದಿದ್ದ ನಾನು, ಅದರಿಂದ ಪ್ರಯೋಜನವಿಲ್ಲವೆಂದು ಇಲ್ಲಿ ಸಂಕ್ಷಿಪ್ತವಾಗಿ ಮಾತ್ರ ಪ್ರತಿಕ್ರಿಯಿಸುತ್ತಿರುವೆ.

ಬಹಳಷ್ಟು ಓದುಗರು - ಚಾಮರಾಜ ಸವಡಿಯವರೂ ಸೇರಿದಂತೆ - ಕಾಶ್ಮೀರದ ರಾಜಕೀಯ ಪ್ರಶ್ನೆಯನ್ನು ಅದರ ಕೋಮು ಆಯಾಮದಲ್ಲಿ ಮಾತ್ರ ಗ್ರಹಿಸಿ ಪ್ರತಿಕ್ರಿಯಿಸಿದಂತಿದೆ. ಉದಾಹರಣೆಗೆ, ಓರ್ವ ಓದುಗರು ದ.ಕ.ದಲ್ಲೆಲ್ಲೋ ನಡೆದಿದೆಯೆಂದು ಹೇಳಲಾದ ಪುಂಡಾಟಿಕೆಯ ಪ್ರಕರಣವನ್ನು ಕಾಶ್ಮೀರದ ಪ್ರಶ್ನೆಗೆ ಜೋಡಿಸಿ ಪ್ರಶ್ನೆಗಳನ್ನೆತ್ತಿರುವುದು. ಇವನ್ನು ಮುಸ್ಲಿಂ ಪುಂಡಾಟಿಕೆ ಎನ್ನುವುದಾದರೆ, ಇದೇ ಭಾವನೆಯಲ್ಲಿ ಹಿಂದೂ ಪುಂಡಾಟಿಕೆಯೆಂದು ಕರೆಯಬಹದಾದ ಎಷ್ಟು ಪ್ರಕರಣಗಳು ವರದಿಯಾಗಿಲ್ಲ? ಇವನ್ನೇನಿದ್ದರೂ ಕಾನೂನು ಮತ್ತು ಶಿಸ್ತಿನ ಪ್ರಕರಣಗಳಾಗಿ ಮಾತ್ರ ನೋಡುವುದು ಸಾಮಾಜಿಕ ಶಾಂತಿಯ ದೃಷ್ಟಿಯಿಂದ ಒಳ್ಳೆಯದು. ಇಲ್ಲದೇ ಹೋದರೆ, ಅದು ಮುಗಿಯದ (ಮಾನಸಿಕ ಮತ್ತು ಸಾಮಾಜಿಕ) ಅಶಾಂತಿಗೆ ಕಾರಣವಾದೀತು!

ಕಾಶ್ಮೀರ ವಿವಾದದ ಬಗ್ಗೆ ನಾವು ಸಾಹಿತ್ಯ ಕೃತಿಯೊಂದಕ್ಕೆ ಅಥವಾ ವೈಚಾರಿಕ ಪ್ರಮೇಯವೊಂದಕ್ಕೆ ಸ್ಪಂದಿಸಿದಂತೆ ಭಾವನಾತ್ಮಕ ನೆಲೆಯಲ್ಲಿ ಸ್ಪಂದಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ, ಅದೊಂದು ಲಕ್ಷಾಂತರ ಜನರ ಸುಖ - ದುಃಖಗಳನ್ನು ಮತ್ತು ಸಾವು - ಬದುಕುಗಳನ್ನು ನಿರ್ಧರಿಸುವ ಜೀವಂತ ವಾಸ್ತವದ ಪ್ರಶ್ನೆ. ಹಾಗಾಗಿ, ಅದನ್ನು ಮಾನವೀಯವಾಗಿ ಹೇಗೆ ಪರಿಹರಿಸಿ ಹೆಚ್ಚು ಜನರ ಸುಖ - ನೆಮ್ಮದಿಗಳಿಗೆ ಹೇಗೆ ಕಾರಣವಾಗಬಹುದು ಎಂಬ ಕಡೆಗೆ ನಮ್ಮ ಗಮನವಿರಬೇಕೇ ಹೊರತು, ರಾಷ್ಟ್ರೀಯತೆಯ ಭಾವಾವೇಶದೊಂದಿಗೋ ಅಥವಾ ನಾವು ಸೇರಿದ ಕೋಮಿನ ಬಗೆಗಿನ ಅಭಿಮಾನದಿಂದಲೋ ವಾದ ಮಾಡುವುದರಿಂದ ನಂನಮ್ಮ ಅಹಂಕಾರಗಳನ್ನು ತಣಿಸಿಕೊಳ್ಳುವುದರ ಹೊರತಾಗಿ ಮತ್ತಾವ ಪ್ರಯೋಜನವೂ ಆಗದು. ಹೆಚ್ಚೆಂದರೆ, ಅಲ್ಲಿನ ಹಿಂಸಾಚಾರದಲ್ಲಿ - ಭಯೋತ್ಪಾದನೆಯಲ್ಲ್ಲ್ಲಿ ಕೊನೆಗೂ ಯಾರು ಗೆಲ್ಲುವರೋ ಅವರದೇ (ಅರಣ್ಯ) ನ್ಯಾಯ ಎಂಬಂತಹ ಸಾಮಾಜಿಕ ಪರಿಸ್ಥಿತಿಗೆ ನಮ್ಮದೂ ಸಣ್ಣ ಕೊಡುಗೆಯನ್ನು ಸಲ್ಲಿಸಿದಂತಾಗುತ್ತದಷ್ಟೆ!

ಮೊದಲಾಗಿ, ನಾವು ಕಾಶ್ಮೀರದ ಬಗ್ಗೆ ಮಾತನಾಡತೊಡಗುವ ಮುನ್ನ ಅರಿಯಬೇಕಾದುದೇನೆಂದರೆ, ಆ ರಾಜ್ಯ ಮಿಕ್ಕೆಲ್ಲ ರಾಜ್ಯಗಳಂತೆ ನಮ್ಮ ರಾಷ್ಟ್ರೀಯತೆಯ ಸಹಜ ಕೂಸಲ್ಲ. ಅದಕ್ಕೆ ತನ್ನದೇ ಆದ ಸಂವಿಧಾನವಿದೆ ಹಾಗೂ ಅದರಡಿ ತನ್ನದೇ ಆದ ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ಕಾನೂನುಗಳಿವೆ. ಭಾರತದ ಸಂವಿಧಾನದಡಿ ಆ ರಾಜ್ಯಕ್ಕೆ 370ನೇ ಕಲಮಿನ ಪ್ರಕಾರ ವಿಶೇಷ ಸ್ಥಾನಮಾನ ನೀಡಿ ಈ ಸ್ವಾಯತ್ತತೆ ಕಲ್ಪಿಸಲಾಗಿದೆ. ಈ ರಾಜ್ಯ ರಾಷ್ಟ್ರ ವಿಭಜನೆಗೆ ಆಧಾರವಾಗಿದ್ದ ಧಾರ್ಮಿಕ ಬಹುಸಂಖ್ಯಾತತೆಯ ಆಧಾರದ ಮೇಲೆ ಸಹಜವಾಗಿಯೇ ಪಾಕಿಸ್ತಾನಕ್ಕೆ ಸೇರಬೇಕಿತ್ತು ಅಥವಾ ಸ್ವತಂತ್ರ ರಾಷ್ಟ್ರವಾಗುಳಿಯಲು (ಇದಕ್ಕೆ ಗಣನೀಯ ಸಂಖ್ಯೆಯ ಹಿಂದೂಗಳ ಬೆಂಬಲವಿತ್ತು ಎಂಬುದೂ ಗಮನಾರ್ಹ) ಪ್ರಯತ್ನಿಸಬಹುದಿತ್ತು ಎಂಬುದನ್ನೂ ನಾವು ನೆನಪಿಡಬೇಕು. ಆದರೂ, ಚರಿತ್ರೆಯ ಆಕಸ್ಮಿಕದಿಂದಾಗಿ - ಅದರ ಹಿಂದೂ ದೊರೆಯ ನಿರ್ಧಾರ ಮತ್ತು ಅವರಡಿ ಪ್ರಧಾನಿಯಾಗಿದ್ದ ಜಾತ್ಯತೀತ ಮುಸ್ಲಿಂ ನಾಯಕ ಷೇಕ್ ಅಬ್ದುಲ್ಲಾರ ಮುತ್ಸದ್ದಿತನದಿಂದಾಗಿ - ಅದು ಭಾರತದ ಒಕ್ಕೂಟಕ್ಕೆ ಸೇರಿತೆಂದರೆ, ಹಾಗೆ ಸೇರಲು ಮಾಡಿಕೊಂಡ ಒಪ್ಪಂದವನ್ನು ನಾವು ಗೌರವಿಸುವ ನಾಗರಿಕ ಪ್ರಜೆಗಳಾಗಿ; ನಂತರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅದರ ವಿವರಗಳ ಈಗಿನ ಸಾಧುತ್ವದ ಅಥವಾ ಅಗತ್ಯ ಬದಲಾವಣೆಗಳ ಬಗ್ಗೆ ಮಾತನಾಡಬೇಕು. ಬದಲಿಗೆ ಕಾಶ್ಮೀರವೊಂದು ನಮ್ಮ ವಸಾಹತು ಎಂಬಂತೆ ಏಕಪಕ್ಷೀಯವಾಗಿ, 'ಅರವತ್ತು ವರ್ಷಗಳ ನಂತರವೂ ಅದನ್ನು ಸ್ವಾಯತ್ತವಾಗಿ ಇರಿಸುವ ಅಪಾಯ'ದ ಬಗ್ಗೆ (ಸವಡಿಯವರಂತೆ)ಮಾತನಾಡತೊಡಗಿರುವವರ ಕಾರ್ಯಕ್ರಮವಾದರೂ ಏನು? ಇಂತಹ ರಾಷ್ಟ್ರೀಯತೆಯ ಸ್ವಯಂಘೋಷಿತ "ಕಾವಲುಗಾರ"ರೇ ರಾಷ್ಟ್ರಕ್ಕೆ ಹೆಚ್ಚು ಅಪಾಯಕಾರಿ ಎಂದು ನಾನು ಭಾವಿಸಿದ್ದೇನೆ. ಕಳೆದ ಅರವತ್ತು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಇಂತಹ ಘಾತುಕ ರಾಷ್ಟ್ರೀಯತೆಯೇ, ಕಾಶ್ಮೀರವನ್ನು ಅದರ ತುಂಬಾ ಮಿಲಿಟರಿ ಇಟ್ಟುಕೊಂಡೇ ನಿರ್ವಹಿಸುವಂತಹ ಅಂತಾರಾಷ್ಟ್ರೀಯ ಮುಜುಗರದ ಪರಿಸ್ಥಿತಿಯನ್ನು ಉಂಟುಮಾಡಿರುವುದು! ಇದರಿಂದಾಗಿ ಅಲ್ಲಿ ಪ್ರತ್ಯೇಕತಾವಾದಿಗಳ ಮತ್ತು ಉಗ್ರರ ಅಬ್ಬರ ಹೆಚ್ಚುತ್ತಾ ಹೋಗಿ, ಇಂದು ಕಾಶ್ಮೀರ ನಮ್ಮ ಕೈಬಿಟ್ಟು ಹೋಗುವುದೇನೋ ಎಂಬ ಆತಂಕ ಹುಟ್ಟಿಸಿರುವುದು... ಇಂತಹವರು ನಮ್ಮನ್ನು ಹುಸಿ ಜಾತ್ಯತೀತವಾದಿಗಳಂದೋ ಕೋಮುವಾದಿ ಕನ್ನಡಕ ಹಾಕಿಕೊಂಡಿರುವವರೆಂದೋ ಕರೆಯುವುದು ಎಂತಹ ವಿಪರ್ಯಾಸ!

ಮಿಕ್ಕಂತೆ ಸವಡಿಯವರು ಅಮರನಾಥ ದೇವಸ್ಥಾನ ಮಂಡಳಿಯ ಬಗ್ಗೆ ಕೊಟ್ಟಿರುವ ಮಾಹಿತಿ - ಸಂಬಂಧಪಟ್ಟ ಮೂಲ ಕಾಯಿದೆಯ ವಿವರಗಳು ಮತ್ತು ನ್ಯಾಯಾಲಯದ ತೀರ್ಪಿನ ವಿವರಗಳು - ಅವರ ವಾದಕ್ಕೇ ವಿರುದ್ಧವಾಗಿರುವುದನ್ನು ಓದುಗರು ಗಮನಿಸಬಹುದು. ಇವರು ಫರೂಕ್ ಅಬ್ದುಲ್ಲಾರ ಮುಖ್ಯಮಂತ್ರಿತ್ವ ಕಾಲದಲ್ಲಿ ಅನುಮೋದಿತವಾದ 2000ರ ಅಮರನಾಥ ದೇಗುಲ ಕಾಯ್ದೆಯ ವಿವರಗಳನ್ನು ನೀಡಿ ಇದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಸರಿಯಾಗಿಯೇ ಇದೆ. ಅದರೆ ಅದನ್ನು ಇತ್ತೀಚೆಗೆ ತಿದ್ದಿ, ದೇವಸ್ಥಾನ ಮಂಡಳಿಯನ್ನು ಕೋಮುವಾರು ಆಧಾರದ ಮೇಲೆ ಪುನಾರಚಿಸಿ (ಹಜ್ ಯಾತ್ರೆ ವಿದೇಶಾಂಗ ಖಾತೆಯಡಿ ನಡೆಯುತ್ತಿದ್ದು, ಸಂಬಂಧಪಟ್ಟ ಖಾತೆ ಅಥವಾ ಇಲಾಖೆಯ ಮುಖ್ಯಸ್ಥರು ಮುಸ್ಲಿಮರೇ ಆಗಿರಬೇಕೇಂಬ ನಿಯಮವೇನೂ ಇಲ್ಲ!) ಮೂಲ ಕಾಯ್ದೆಯಲ್ಲಿ ತಾತ್ಕಾಲಿಕ ವ್ಯವಸ್ಥೆಗಾಗಿ ಎಂದಿದ್ದ ಭೂಮಿಯನ್ನು ಶಾಶ್ವತ ವ್ಯವಸ್ಥೆಗಾಗಿ ಮಂಜೂರು ಮಾಡುವಂತೆ ಆಜ್ಞೆ ಹೊರಡಿಸಿದ್ದು ಮಾತ್ರ ತಪ್ಪಾಗಿದೆ! ಅಲ್ಲದೆ ಇದು, ಇವರು ತಮ್ಮ ವಾದ
ಸಮರ್ಥನೆಗಾಗಿ ಉಲ್ಲೇಖಿಸಿರುವ ನ್ಯಾಯಾಯಲಯದ ತೀರ್ಪಿಗೂ ವಿರುದ್ಧವಾಗಿದೆ ಎಂಬುದನ್ನೂ ಗಮನಿಸಬಹುದು!

ದೇವಸ್ಥಾನ ಮಂಡಳಿಗೆ ಭೂಮಿಯ ಶಾಶ್ವತ ವರ್ಗಾವಣೆಯಾಗದಿರುವುದರಿಂದ ಅಮರನಾಥ ಯಾತ್ರೆಗೆ ಯಾವುದೇ ತೊಂದರೆಯಾಗಿತ್ತೆ? ಈ ಬಗ್ಗೆ ಅಧಿಕೃತ ದೂರುಗಳಿದ್ದವೆ? ಇಲ್ಲವಲ್ಲ! ಬದಲಿಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಯಾತ್ರೆಯನ್ನು - ಅಲ್ಲಿ ಶಾಶ್ವತ ವಸತಿ ಅಥವಾ ಕಛೇರಿಗಳನ್ನು ನಿರ್ಮಿಸಲು ಅವಕಾಶ ಕೊಡದೆ - ಕಾಲ ಮತ್ತು ಸಂಖ್ಯೆಯ ನೆಲೆಯಲ್ಲಿ ಸೀಮಿತಗೊಳಿಸಬೇಕೆಂದು ಸರ್ಕಾರವೇ ರಚಿಸಿದ್ದ ಸಮಿತಿ ಶಿಫಾರಸ್ ಮಾಡಿತ್ತಲ್ಲ? ಆದರೂ ಭೂಮಿ ವರ್ಗಾವಣೆಯ ದಿಢೀರ್ ನಿರ್ಧಾರವೇಕೆ? ಇದರ ಉದ್ದೇಶವಾದರೂ ಏನು? ಈ ಬಗೆಗಿನ ಅನುಮಾನಗಳೇ ಇಂದು ಕಾಶ್ಮೀರಕ್ಕೆ ಮತ್ತು ನಂತರ ಜಮ್ಮುವಿಗೆ ಬೆಂಕಿ ಹಚ್ಚಿರುವುದು. ನಿಜ, ಕಾಶ್ಮೀರದ ನಿರ್ವಹಣೆಯ ಕಷ್ಟದಿಂದಾಗಿ ಜಮ್ಮುವಿಗೆ ಅಭಿವೃದ್ಧಿಯ ನೆಲೆಯಲ್ಲಿ ಅನ್ಯಾಯವಾಗಿದೆ. ಆದರೆ ಅದನ್ನು ಪ್ರತಿಭಟಿಸಲು ಅಮರನಾಥ ಭೂಮಿ ವರ್ಗಾವಣೆ ಸಮಸ್ಯೆಯನ್ನು ಎತ್ತಿಕೊಂಡು ಅದನ್ನು ಜಟಿಲಗೊಳಿಸುವ, ಮತೀಯಗೊಳಿಸುವ ಹಾಗೂ ಜಮ್ಮು ಮತ್ತು ಕಾಶ್ಮೀರಗಳ ನಡುವೆ ಈಗಾಗಲೇ ಹದಗೆಟ್ಟಿರುವ ಭಾವನಾತ್ಮಕ ಸಂಬಂಧವನ್ನು ಇನ್ನಷ್ಟು ಹದಗೆಡಿಸುವ ಯತ್ನ ಮಾಡುವುದು ರಾಷ್ಟ್ರಘಾತುಕ ಕೃತ್ಯವೇ ಆಗುತ್ತದೆ. ಇದನ್ನೇ ನಾನು ನನ್ನ ಮೂಲ ಲೇಖನದಲ್ಲಿ ಹೇಳಿದ್ದುದು.

ಈಗ ರಾಷ್ಟ್ರೀಯರ ಮುಂದಿರುವ ಪ್ರಶ್ನೆ ಒಂದೇ: ಭೌಗೋಳಿಕ ಮತ್ತು ಸಾಂವಿಧಾನಿಕ ಭಾರತದ ಕಿರೀಟದಂತಿರುವ ಕಾಶ್ಮೀರವನ್ನು ಉಳಿಸಿಕೊಳ್ಳುವುದು ಹೇಗೆ? ಕಳೆದ ಐವ್ವತ್ತೈದು ವರ್ಷಗಳಲ್ಲಿ (ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟಕ್ಕೆ 'ಅಧಿಕೃತ'ವಾಗಿ ಸೇರಿದ್ದು 1952ರಲ್ಲಿ - ಸ್ವಾತಂತ್ರ್ಯ ಘೋಷಣೆಯ ಐದು ವರ್ಷಗಳ ಮತ್ತು ನಮ್ಮ ಸಂವಿಧಾನ ಜಾರಿಗೆ ಬಂದ ಎರಡು ವರ್ಷಗಳ ನಂತರ) ಪ್ರತ್ಯೇಕತಾವಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವಂತೆ ಮಾಡಿ, ಬಹು ಹಿಂದೆಯೇ ವಿಶ್ವಸಂಸ್ಥೆಯಡಿಯಲ್ಲಿ ಅದನ್ನೊಂದು ಜನಮತಗಣನೆಯ ಮೂಲಕ ಇತ್ಯರ್ಥವಾಗಬೇಕಾದ ಅಂತಾರಾಷ್ಟ್ರೀಯ ವಿವಾದಿತ ಪ್ರದೇಶವನ್ನಾಗಿ ಪರಿವರ್ತಿಸಿಕೊಂಡಿರುವ ಈವರೆಗಿನ ಅಪ್ರಬುದ್ಧ ಪಿತೂರಿ ರಾಜಕಾರಣದ ಮತ್ತು ಬಲಪ್ರಯೋಗದ ಕಾಶ್ಮೀರ ನೀತಿಯನ್ನು ಮುಂದುವರಿಸಿಕೊಂಡು ಹೋಗಬೇಕೆ? ಅಥವಾ ನಮ್ಮನ್ನು ಸೇರಿಕೊಳ್ಳುವ ಮುನ್ನ ಆ ಜನಕ್ಕೆ ಕೊಟ್ಟ ವಚನದಂತೆ ಅವರ ಸ್ವಾಯತ್ತತೆಗೆ ಭಂಗ ಬರದ ರೀತಿಯಲ್ಲಿ ನಡೆದುಕೊಳ್ಳುತ್ತಾ, ಆ ವಿಶ್ವಾಸದ ವಾತಾವರಣದಲ್ಲಿ ಮಾತುಕತೆ ನಡೆಸುವ ಮೂಲಕವೇ ಆ ರಾಜ್ಯವನ್ನು ನಮ್ಮ ಒಕ್ಕೂಟದ ಸಾಮಾನ್ಯ ರಾಜ್ಯವನ್ನಾಗಿ ಪರಿವರ್ತಿಸಿಕೊಳ್ಳುವ ಪ್ರಜಾಸತ್ತಾತ್ಮಕ ಮುತ್ಸದ್ದಿತನದ ನೀತಿಯನ್ನು ಅನುಸರಿಸಬೇಕೆ? ಇದನ್ನು ಆದಷ್ಟು ಬೇಗ ತೀರ್ಮಾನಿಸುವ ಕಾಲವೀಗ ಬಂದಿದೆ.

'ಕಾಶ್ಮೀರ ನಮ್ಮದು! ನಾವು ಅದನ್ನು ಬಿಡೆವು!!' ಅಥವಾ 'ಪಾಕಿಸ್ತಾನಕ್ಕೆ ಹೋಗಬಯಸುವವರನ್ನು ಇಲ್ಲಿಂದ ಒದ್ದೋಡಿಸಿ!' ಎಂದು ಎದೆ ಬಡಿದುಕೊಳ್ಳುತ್ತಾ ಇಲ್ಲಿ ಅದೆಷ್ಟೇ ಕೂಗಿಕೊಂಡರೂ, ಅಲ್ಲಿನ ವಾಸ್ತವವೇನೂ ಬದಲಾಗದು. ಇಂತಹ ಕೂಗುಮಾರಿಗಳ ಒತ್ತಡದಿಂದಾಗಿಯೇ ಅವರು ಪಾಕಿಸ್ತಾನಕ್ಕೆ ಹೋಗುವ ಅಥವಾ ಸ್ವತಂತ್ರ ರಾಷ್ಟ್ರ ರಚಿಸಿಕೊಳ್ಳುವ ಅವಕಾಶ ಉಂಟಾದರೆ, ನೂರಾರು ವರ್ಷಗಳಿಂದ ವಾಸಿಸುತ್ತಾ ಬಂದಿರುವ ತಮ್ಮ ನೆಲದೊಂದಿಗೇ ಹೋಗಲು ಬದ್ಧರಾದವರು ಅವರು ಎಂಬುದು ಕಳೆದ ಐವ್ವತ್ತು ವರ್ಷಗಳಿಂದ ಅಲ್ಲಿ ನಿರಂತರವಾಗಿ ನಡೆದಿರುವ ಪ್ರತಿಭಟನೆ ಸಾಬೀತು ಮಾಡಿದೆ. ಇದನ್ನು ಶ್ರೀನಗರದಲ್ಲಿ ವಿಶ್ವಸಂಸ್ಥೆಯ ಮಿಲಿಟರಿ ಕಛೇರಿ ಇರುವಂತಹ ಪರಿಸ್ಥಿತಿ ನಿರ್ಮಿಸಿಕೊಂಡಿರುವ ನಾವು, ಬಲಪ್ರಯೋಗದ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ ಎಂಬುದು ನೆನಪಿರಲಿ. ಹಾಗೇನಾದರೂ ಸಾಧ್ಯವಿದ್ದಲ್ಲಿ 1948ರಲ್ಲೇ ಪಾಕಿಸ್ತಾನದ ಬುಡಕಟ್ಟು ಜನ ಆಕ್ರಮಿಸಿಕೊಂಡು; ಪಾಕಿಸ್ತಾನದ ಸಹಕಾರದಿಂದ ಅದರಲ್ಲಿ ಚೀನಾಕ್ಕೂ ಒಂದಿಷ್ಟು ನೆಲ ಬಿಟ್ಟುಕೊಟ್ಟು ಸ್ಥಾಪಿತವಾಗಿರುವ - ಮೂಲ ಕಾಶ್ಮೀರದ ಮೂರನೇ ಒಂದು ಭಾಗದಷ್ಟಿರುವ-'ಆಝಾದ್ ಕಾಶ್ಮೀರ'ವನ್ನು ನಾವು ಮರುವಶಪಡಿಸಿಕೊಳ್ಳಬಹುದಿತ್ತಲ್ಲ? ಇದನ್ನು ನಾವು 'ಪಾಕ್ ಆಕ್ರಮಿತ
ಕಾಶ್ಮೀರ'ವೆಂದು ಕರೆಯುತ್ತಲೇ ಅದರ ರಾಜಧಾನಿ ಮುಝಫರಾಬಾದ್‌ಗೆ ಸಂಬಂಧ ಸುಧಾರಣೆಗಳ ಹೆಸರಿನಲ್ಲಿ ಬಸ್ ಸಂಪರ್ಕ ಕಲ್ಪಿಸಿಕೊಂಡು, ಅದಕ್ಕೆ ಅರ್ಧ ಮಾನ್ಯತೆಯನ್ನೂ ನೀಡಿದ್ದೇವಲ್ಲ?

ಹಾಗಾಗಿ, ನೀತಿ ಸ್ಥಿತ್ಯಂತರ ಅನಿವಾರ್ಯವಾಗಿರುವ ಇಂತಹ ಸಂದರ್ಭದಲ್ಲಿ ನಾವು ಯಾವುದೇ ನಿಲುವು ರೂಪಿಸಿಕೊಳ್ಳುವ ಮುನ್ನ ಅದು ಅನುಷ್ಠಾನ ಸಾಧ್ಯವೇ; ಸಾಧ್ಯವೇ ಆಗುವುದಾದರೆ, ಅದರ ಆತ್ಯಂತಿಕ ಪರಿಣಾಮಗಳೇನು ಎಂಬುದನ್ನು ಯೋಚಿಸಬೇಕು.

ಇಷ್ಟು ಹೇಳಿದ ನಂತರವೂ ನಾನು ಧಿಕ್ಕಾರಕ್ಕೆ ಅರ್ಹನಾಗಿದ್ದರೆ, ಅದನ್ನು ಹೆಮ್ಮೆ - ಸಂತೋಷಗಳಿಂದಲೇ ಸ್ವೀಕರಿಸುವೆ.