ಕಾಶ್ಮೀರದ ಬೆಂಕಿ: ಎಚ್ಚರವಿರಲಿ!

ಕಾಶ್ಮೀರದ ಬೆಂಕಿ: ಎಚ್ಚರವಿರಲಿ!

ಬರಹ

ಮ್ಮು ಕಳೆದ ಮೂರು ವಾರಗಳಿಂದ ಹೊತ್ತಿ ಉರಿಯುತ್ತಿದೆ. ಜನ, ಮಕ್ಕಳು ಮಹಿಳೆಯರೆನ್ನದೆ ಬೀದಿಗೆ ಬಂದು ಮೈಯಲ್ಲಿ ದೆವ್ವ ಹೊಕ್ಕಂತೆ ಕುಣಿಯತೊಡಗಿದ್ದಾರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಇಡತೊಡಗಿದ್ದಾರೆ. ಅಲ್ಲಿಯ ನಾಗರಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನ, ಪೋಲೀಸ್ ಇಬ್ಬರೂ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ದೇಶದ ಇತರ ಭಾಗಗಳೊಡನೆ ಕಾಶ್ಮೀರ ಕಣಿವೆಯ ಸಂಪರ್ಕ ತಪ್ಪಿ ಹೋಗಿದೆ. ಅಲ್ಲಿನ ಜನ ಅವಶ್ಯಕ ಸಾಮಗಿಗಳ ಪೂರೈಕೆ-ವಿಶೇಷವಾಗಿ ಅತ್ಯವಶ್ಯಕ ಔಷಧಿ ಸಾಮಗ್ರಿಗಳು-ಇಲ್ಲದೆ ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಅವರ ಸೇಬು ಮತ್ತಿತರ ಸರಕು ತುಂಬಿದ ಲಾರಿಗಳು ಜಮ್ಮು ಬಳಿ ತಡೆಯಲ್ಪಟ್ಟಿದ್ದು, ಹಣ್ಣುಗಳು ಕೊಳೆಯತೊಡಗಿವೆ.

ಇಷ್ಟೆಲ್ಲ ಆದರೂ ದೆಹಲಿಯಲ್ಲಿನ ಸಂಯುಕ್ತ ಸರ್ಕಾರ ಮೂಕ ಪ್ರೇಕ್ಷಕನಂತೆ ಕೂತಿದ್ದು, ಅಲ್ಲಿ ಹಿಂಸಾಚಾರ ಪೋಲೀಸರನ್ನೇ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲಷ್ಟೇ ಎಚ್ಚೆತ್ತುಕೊಂಡು ಸರ್ವಪಕ್ಷಗಳ ನಿಯೋಗವೊಂದನ್ನು ಮಾತುಕತೆಗಾಗಿ ಜಮ್ಮು ಶ್ರೀನಗರಗಳಿಗೆ ಕಳಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಗಲಭೆ ಮುಂದುವರೆದಿದೆ. ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ. ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.

ಭಾರತದ ಸ್ವಾತಂತ್ರ್ಯ ಘೋಷಣೆಯೊಂದಿಗೇ ಕಾಶ್ಮೀರ ಸಮಸ್ಯೆ ಆರಂಭವಾಯಿತೆಂದು ಹೇಳಬಹುದಾದರೂ, ಅಂತಾರಾಷ್ಟ್ರೀಯ ಒತ್ತಡಗಳ ಪರಿಣಾಮವಾಗಿ ಅದು ಬಹುಕಾಲ ಶಮನಗೊಂಡಿತ್ತು. ಆದರೆ 70-80ರ ದಶಕದಲ್ಲಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿನ ಸಂಯುಕ್ತ ಸರ್ಕಾರ ತನ್ನ ಅಧಿಕಾರದ ಅತ್ಯುತ್ಸಾಹದಲ್ಲಿ ಸಮಸ್ಯೆಯನ್ನು ತನ್ನದೇ ರೀತಿಯಲ್ಲಿ ಬಗೆಹರಿಸುವ ಪ್ರಯತ್ನ ನಡೆಸಿತು. ಅಲ್ಲಿ ಅದು ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಲು ಚುನಾವಣೆಗಳಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡಿ, ಜನತೆಯ ವಿಶ್ವಾಸಕ್ಕೆ ಎರವಾಗುತ್ತಾ ಬಂತು. ಇದರ ಪರಿಣಾಮವಾಗಿ ಪುನರಾರಂಭವಾದ ಅಶಾಂತಿ ಇಂದಿಗೂ ಕೊನೆ ಮುಟ್ಟಿಲ್ಲ. ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ಥಾನ ಮತ್ತು ಇರಾಕ್‌ಗಳ ಮೇಲಿನ ಅಮೆರಿಕಾದ ಆಕ್ರಮಣಗಳ ನಂತರವಂತೂ ಈ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತಿತವಾಗಿ, ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸ್ವಾತಂತ್ರ್ಯ ಘೋಷಣೆಯ ಸಮಯದಲ್ಲಿ ಈ ರಾಜ್ಯವನ್ನು ಆಳುತ್ತಿದ್ದ ಹಿಂದೂ ದೊರೆ ಕೆಲವು ಷರತ್ತುಗಳ ಮೇಲೆ ಅದನ್ನು ಭಾರತದಲ್ಲಿ ವಿಲೀನಗೊಳಿಸಲು ಇಚ್ಛಿಸಿದ್ದರಿಂದ ಮಾತ್ರ; ಮುಸ್ಲಿಂ ಜನಸಂಖ್ಯಾ ಪ್ರಾಬಲ್ಯವಿರುವ ಈ ರಾಜ್ಯ ಪಾಕಿಸ್ತಾನಕ್ಕೆ ಬದಲಾಗಿ ಭಾರತಕ್ಕೆ ಸೇರಿ, ಭಾರತದ ರಾಷ್ಟ್ರ ರಚನೆಯ ಆಧಾರ ಮೌಲ್ಯಗಳಲ್ಲೊಂದಾದ ಸೆಕ್ಯುಲರ್ ರಾಜಕಾರಣವನ್ನು ಪದೇ ಪದೇ ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಲೇ ಇದೆ. ಹಾಗೇ, ಈ ರಾಜ್ಯದ ಒಳಗೂ ಮತ್ತು ಗಡಿ ಪ್ರದೇಶದುದ್ದಕ್ಕೂ ನಮ್ಮ ಲಕ್ಷಾಂತರ ಮಂದಿ ಸೈನಿಕರು ನೆಲೆ ನಿಂತು ಭಾರತದ ಭೂಭಾಗ ಮತ್ತು ಅದರ ಸೆಕ್ಯುಲರಿಸಂ ಎರಡನ್ನೂ ಕಾವಲು ಕಾಯುವ ಮುಜುಗರದ ಪರಿಸ್ಥಿತಿ ಉಂಟಾಗಿದೆ!

ಜಗತ್ತಿನ ನೆತ್ತಿಯ ಎರಡು ಹಸಿಗಾಯಗಳೆಂದು ಜಾಗತಿಕ ರಾಜತಂತ್ರಜ್ಞರಿಂದ ವರ್ಣಿಸಲ್ಪಡುವ ಇಸ್ರೇಲ್ ಮತ್ತು ಕಾಶ್ಮೀರ ಸಮಸ್ಯೆಗಳಲ್ಲಿ ಇಸ್ರೇಲ್ ಈಗ ಕೊಂಚ ಹಿನ್ನೆಲೆಗೆ ಸರಿದಂತಾಗಿ ಕಾಶ್ಮೀರ ಎಲ್ಲರ ಗಮನ ಸೆಳೆಯುಂತಾಗಿದ್ದರೆ, ಅದಕ್ಕೆ ಕಾರಣ, ಭಾರತ ಈ ಸಮಸ್ಯೆಯನ್ನು ಹಿಂದೂ ಮುಸ್ಲಿಂ ಸಮಸ್ಯೆ ಎಂದೇ ಪರಿಗಣಿಸಿ ಎರಡೂ ಕೋಮುಗಳನ್ನು ಸರದಿಯ ಮೇಲೆ ಓಲೈಸುವ ರಾಜಕಾರಣ ಮಾಡುವುದನ್ನು ಮುಂದುವರಿಸಿರುವುದೇ ಆಗಿದೆ. ಜಮ್ಮು-ಕಾಶ್ಮೀರ ಎಂಬ ಈ ಪ್ರದೇಶದ ಜನತೆ ಎಂದೂ ಸ್ವಾತಂತ್ರ್ಯ ಹೋರಾಟದ ಕೊನೆಯ ವರ್ಷಗಳ ಕೋಮುವಾದಿ ರಾಜಕಾರಣದ ಅವಧಿಯಲ್ಲೂ-ಕೋಮುವಾದಿಯಾಗಿರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಚಾರಿತ್ರಿಕವಾಗಿ ಬೌದ್ಧ, ಶೈವ ಮತ್ತು ಆನಂತರ ಸೂಫಿ ಸಂಪ್ರದಾಯದ ನೆಲವೀಡಾಗಿದ್ದ ಈ ಪ್ರದೇಶದಲ್ಲ್ಲಿ ಹಿಂದೂ, ಮುಸ್ಲಿಂ ಹಾಗೂ ಬೌದ್ಧ ಮತ್ತು ಇತ್ತೀಚೆಗೆ ಸಿಕ್ಖರು ಒಂದೇ ಸಂಸ್ಕೃತಿಯ ಮೂರು ಸಂಪ್ರದಾಯಗಳ ಅನುಯಾಯಿಗಳಾಗಿದ್ದರು. ಕಾಶ್ಮೀರದ ರಾಜಧಾನಿ ಶ್ರೀನಗರ, ಚರಿತ್ರೆಯಲ್ಲಿ ಅದರ ಬದಲಾಗದ ಹೆಸರೇ ಸೂಚಿಸುವಂತೆ, ಹಿಂದೂ-ಬೌದ್ಧ-ಸೂಫಿ ಸಂಪ್ರದಾಯಗಳ ಒಂದು ಅಮೂರ್ತ ಸಾಮಾನ್ಯ ನೆಲೆಯನ್ನು ಸಂಕೇತಿಸುವ ಶ್ರೀಚಕ್ರದ ಆರಾಧನಾ ಕೇಂದ್ರವಾಗಿತ್ತು.

ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ, ಸಂವಿಧಾನ ಪ್ರತಿಪಾದಿಸಿದ್ದ ಒಕ್ಕೂಟ ರಾಷ್ಟ್ರದ ಭಾವನೆಯ ವಿರುದ್ಧ ಆಚರಿಸಿಕೊಂಡು ಬರುತ್ತಿರುವ ಕೇಂದ್ರೀಕೃತ ಆಡಳಿತ ನೀತಿಯ ಫಲವಾಗಿ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿ ಸಂಪ್ರದಾಯಗಳು ಘಾಸಿಗೊಂಡಿರುವಂತೆ, ಇಲ್ಲೂ ಆ ಬಹು ಸಂಸ್ಕೃತಿಯ ಸಂಪ್ರದಾಯ ಘಾಸಿಗೊಂಡಿದೆ. ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ. ಜೊತೆಗೆ 1948ರ ಪಾಕಿಸ್ಥಾನೀ ಬುಡಕಟ್ಟಿನ ಜನರ ಆಕ್ರಮಣದ ಫಲವಾಗಿ ಈಗಾಗಲೇ ಕಾಶ್ಮೀರದ ಮೂರನೇ ಒಂದು ಭಾಗ ಪಾಕಿಸ್ಥಾನದ ವಶದಲ್ಲಿದ್ದು, ಅದು 'ಆಝಾದ್(ಸ್ವತಂತ್ರ) ಕಾಶ್ಮೀರ'ದ ಹೆಸರಲ್ಲಿ ಸ್ವಾಯತ್ತ ಪ್ರಾಂತ್ಯದ ಸ್ಥಾನಮಾನ ಅನುಭವಿಸುತ್ತಿದ್ದು, ನಮ್ಮ ಕಾಶ್ಮೀರವನ್ನು ತನ್ನೆಡೆಗೆ ಸೆಳೆಯುತ್ತಿದೆ.

ಹಾಗಾಗಿಯೇ, ಈಗ ಜಮ್ಮು ಕಡೆ ವಾಹನ ಸಂಚಾರ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ತಮ್ಮ ಸರಕಿನ ಉಳಿವಿಗಾಗಿ ಅದನ್ನು ಈ 'ಆಝಾದ್ ಕಾಶ್ಮೀರ'ದೆಡೆಗೆ ತಿರುಗಿಸದೆ ವಿಧಿಯಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ರಾಷ್ಟ್ರ ವಿರೋಧಿ ಕ್ರಮ ಎಂದು ಕರೆದಿರುವ ಜಮ್ಮು ಸಂಘರ್ಷ ಸಮಿತಿಗೆ, ತಾನು ನಿರಂತರ ಬಂದ್ ಹೆಸರಿನಲ್ಲಿ ರಸ್ತೆ ತಡೆ ನಡೆಸುತ್ತಾ ಕಾಶ್ಮೀರಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದು ಕೂಡಾ ರಾಷ್ಟ್ರ ವಿರೋಧಿ ಕ್ರಮ ಎಂದು ಅನ್ನಿಸಿದಿರುವುದರ ಹಿಂದಿನ ಮಾನಸಿಕತೆಯೇ ಕಾಶ್ಮೀರ ಸಮಸ್ಯೆ ದಿನೇ ದಿನೇ ಜಟಿಲಗೊಳ್ಳುವುದಕ್ಕೆ ಕಾರಣವಾಗಿದೆ. ಇದು, ಹಿಂದೂ ಬಹುಸಂಖ್ಯಾತತೆಯ ಮೇಲೆ ಕಟ್ಟಲ್ಪಟ್ಟಿರುವ ಭಾರತದ ಈ ಮಾನಸಿಕತೆಗೆ ತನ್ನ ಮುಸ್ಲಿಂ ಬಹುಸಂಖ್ಯಾತವಾದ ಕಾಶ್ಮೀರದ ಬಗೆಗೆ ಭಿನ್ನವಾಗಿ ಯೋಚಿಸಬೇಕಾಗಿದೆ ಎಂಬ ಪರಿವೆಯೇ ಇಲ್ಲದಿರುವ ಸೂಚನೆಯಾಗಿದೆ. ಕಾಶ್ಮೀರದ ಬಗೆಗೂ ಮುಸ್ಲಿಮರ ತುಷ್ಠೀಕರಣದ ನೆಲೆಯಲ್ಲೇ ಯೋಚಿಸಿಸುವುದಾದರೆ, ನಾವು-ಹಿಂದೂ ಕೋಮುವಾದಿಗಳು ಹೇಳಿಕೊಳ್ಳುವಂತೆ ಎಂತಹ ಹುಟ್ಟಾ ಸೆಕ್ಯುಲರಿಸ್ಟರಾದೇವು?

ಸದ್ಯದ ಸಮಸ್ಯೆಗೆ ಕಾರಣವಾಗಿರುವ ಅಮರನಾಥ ದೇವಾಲಯದ ಜಮೀನು ವರ್ಗಾವಣೆ ಪ್ರಕರಣವನ್ನೇ ತೆಗೆದುಕೊಳ್ಳಿ. ಅಮರನಾಥ ದೇಗುಲವೆಂದು ಈಗ ಪ್ರಸಿದ್ಧವಾಗಿರುವ ಗುಹೆಯೊಂದರಲ್ಲಿ ಸುಮಾರು ನೂರೈವತ್ತು ವರ್ಷಗಳ ಹಿಂದೆ ಹಿಮಲಿಂಗವನ್ನು ಪ್ರಥಮ ಬಾರಿಗೆ ನೋಡಿ ಅದನ್ನು ಪ್ರಚುರಪಡಿಸಿದವನೇ ಒಬ್ಬ ಮುಸ್ಲಿ ತುರುಗಾಹಿ. ಅಂದಿನಿಂದ ಇಂದಿನವರೆಗೆ ಈ ಲಿಂಗವನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಬಂದು ಹೋಗಿರುವ ಕೋಟ್ಯಾಂತರ ಅಮರನಾಥ ಯಾತ್ರಿಗಳ ಕಷ್ಟಸುಖಗಳನ್ನು ದಾರಿಯುದ್ದಕ್ಕೂ ನೋಡಿಕೊಂಡಿರುವವರು ಮುಸ್ಲಿಮರೇ. ಹದಿನೈದು ವರ್ಷಗಳ ಹಿಂದೆ ಈ ಯಾತ್ರೆ ಭೂಕುಸಿತ ಮತ್ತು ಬಿರುಮಳೆಗಳ ನೈಸರ್ಗಿಕ ಅನಾಹುತಗಳಿಗೆ ಸಿಕ್ಕಾಗಲೂ, ಈ ಹಿಂದೂ ಯಾತ್ರಿಗಳ ರಕ್ಷಣೆಗೆ ಧಾವಿಸಿದವರೂ ಸ್ಥಳೀಯ ಮುಸ್ಲಿಮರೇ. ಹಾಗೆ ನೋಡಿದರೆ ಅಮರನಾಥ ಯಾತ್ರೆಯನ್ನು ನಿರ್ವಹಿಸುವುದು ಕಾಶ್ಮೀರಿ ಮುಸ್ಲಿಮರ ಒಂದು ವಾರ್ಷಿಕ ಸಂಪ್ರದಾಯವೇ ಆಗಿ ಹೋಗಿದೆ. ಆದರೆ ಈ ನೈಸರ್ಗಿಕ ಅನಾಹುತದಲ್ಲಿ ನೂರಾರು ಯಾತ್ರಿಗಳು ಸಾವನ್ನಪ್ಪಿದ ನಂತರ ಎಚ್ಚೆತ್ತುಕೊಂಡ ಆಗಿನ ಫರೂಕ್ ಅಬ್ದುಲ್ಲಾರ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ, ಯಾತ್ರೆಯ ವ್ಯವಸ್ಥಿತ ಸುಪರ್ದಿಗಾಗಿ ಅಮರನಾಥ ದೇವಸ್ಥಾನ ಮಂಡಳಿಯೊಂದನ್ನು ರಚಿಸಿ, ಯಾತ್ರೆ ಕಾಲದ ತಾತ್ಕಾಲಿಕ ಉಪಯೋಗಕ್ಕಾಗಿ 40 ಹೆಕ್ಟೇರ್ ಅರಣ್ಯ ಭೂಮಿಯನ್ನೂ ಒದಗಿಸಿತು.

ಆದರೆ ಈ ಹಿಂದಿನ ರಾಜ್ಯಪಾಲ ಲೆ|| ಜ|| ಎಸ್.ಕೆ. ಸಿನ್ಹಾ ತಾನು ಅಧಿಕಾರ ತ್ಯಜಿಸುವ ಮುನ್ನ ಸರ್ಕಾರಿ ಖರ್ಚಿನಲ್ಲಿ 'ಪುಣ್ಯ'ದ ಕೆಲಸವೊಂದನ್ನು ಮಾಡುವ ಆತುರದಲ್ಲಿ ದೇವಸ್ಥಾನದ ಮಂಡಳಿಯನ್ನು ಪುನಾರಚಿಸಿ, ರಾಜ್ಯಪಾಲ ಹಿಂದೂ ಆಗಿದ್ದರೆ ಅದರ ಅಧ್ಯಕ್ಷತೆಯನ್ನು ಅವರೇ ವಹಿಸಬಹುದೆಂಬ ಕೋಮು ಅಂಶವೊಂದನ್ನು ಅದಕ್ಕೆ ಸೇರಿಸಿದರಲ್ಲದೆ, ಯಾತ್ರಾ ಸಮಯ ಮತ್ತು ಅನುಕೂಲಗಳಿಗಾಗಿ ಮಾತ್ರ ಒದಗಿಸಿದ್ದ ಭೂಮಿಯನ್ನು ಶಾಶ್ವತವಾಗಿ ದೇವಸ್ಥಾನದ ಮಂಡಳಿಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ ಮಾಡಿದರು. ಅಧಿಕಾರದಲ್ಲಿದ್ದ-ಜಮ್ಮುವಿನವರೇ ಆದ-ಕಾಂಗ್ರೆಸ್ಸಿನ ಗುಲಾಂ ನಬಿ ಆಝಾದರ ನೇತೃತ್ವದ ಸಮ್ಮಿಶ್ರ ಸರ್ಕಾರವೂ, ಇದು ಜಮ್ಮುವಿನ ಹಿಂದೂ ಮತದಾರರನ್ನು ತನ್ನೆಡೆಗೆ ಸೆಳೆದೀತು ಎಂಬ ಆಸೆಯಲ್ಲಿಯೋ ಏನೋ ಅವಸರವಸರದಲ್ಲಿ ಈ ಸಂಬಂಧ ಆಜ್ಞೆಯನ್ನೂ ಹೊರಡಿಸಿತು. ಆದರೆ ಈವರೆಗೆ ಒಂದು ಧಾರ್ಮಿಕ ವಿದ್ಯಮಾನದಂತೆ ಕಾಣುತ್ತಿದ್ದ ಅಮರನಾಥ ಯಾತ್ರೆ ಒಂದು ಮತೀಯ ಬಣ್ಣ ಪಡೆಯುತ್ತಿರುವ ವಾಸನೆ ಹಿಡಿದ ಕಾಶ್ಮೀರಿ ಮುಸ್ಲಿಮರು ಸಹಜವಾಗಿಯೇ ಸಿಟ್ಟಿಗೆದ್ದರು. ಇದಕ್ಕೆ ಪ್ರತ್ಯೇಕತಾವಾದಿಗಳ ಮತ್ತು ಉಗ್ರರ ಕುಮ್ಮಕ್ಕೂ ದೊರಕಿತು. ಈ ಮಧ್ಯೆ, ತನ್ನ ರಾಜಕೀಯ ನೆಲೆಯಾದ ಕಾಶ್ಮೀರಿ ಮುಸ್ಲಿಮರ ಬೆಂಬಲ ಕಳೆದುಕೊಳ್ಳುವ ಆತಂಕದಲ್ಲಿ ಕಾಂಗ್ರೆಸ್‌ನ ಸಹ ಪಕ್ಷ ಪಿ.ಡಿ.ಎಫ್., ತನ್ನ ಗಮನಕ್ಕೆ ತಾರದೆ ಆಜ್ಞೆ ಹೊರಡಿಸಲಾಗಿತ್ತೆಂದು ಹೇಳಿ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಇದರ ಪರಿಣಾಮವಾಗಿ ಗುಲಾಂ ನಬಿ ಸರ್ಕಾರ ದಾರಿಗಾಣದೆ ರಾಜೀನಾಮೆ ನೀಡಬೇಕಾಯಿತು.

ಯಾತ್ರೆಯ ದಾರಿಯುದ್ದಕ್ಕೂ ಶಾಶ್ವತ ವಸತಿ ಮತ್ತು ವಿಹಾರ ಕೇಂದ್ರಗಳನ್ನು ಕಟ್ಟಲು ಅನುವು ಮಾಡಕೊಡುವ ಸರ್ಕಾರದ ಈ ಆಜ್ಞೆ, ಕೇಂದ್ರ ಸರ್ಕಾರ ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಯಾತ್ರೆಯ ವಿವಿಧ ಆಯಾಮಗಳನ್ನು ಕುರಿತು ಅಧ್ಯಯನ ಮಾಡಲು ನೇಮಿಸಿದ್ದ ಸೇನಗುಪ್ತ ಸಮಿತಿಯ ಶಿಫಾರಸ್ ಗಳಿಗೂ ವಿರುದ್ಧವಿತ್ತು. ಈ ಸಮಿತಿ, ಯಾತ್ರೆಯ ದಾರಿಯಿರುವ ಪ್ರದೇಶ ಜೀವ ಪರಿಸರ ದೃಷ್ಟಿಯಿಂದ ತುಂಬಾ ಸೂಕ್ಷವಾಗಿದ್ದು, ಅನಿಯಂತ್ರಿತ ಯಾತ್ರೆ ಇನ್ನಷ್ಟು ಪರಿಸರ ಮತ್ತು ಮಾನವ ಅವಘಡಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿತ್ತು ಹಾಗೂ ಯಾತ್ರೆಯ ಅವಧಿಯನ್ನು ಒಂದು ತಿಂಗಳಿಗೆ ಮತ್ತು ಯಾತ್ರಿಕರನ್ನು ಒಂದು ಲಕ್ಷಕ್ಕೆ ಸೀಮಿತಗೊಳಿಸಬೇಕೆಂದು ಶಿಫಾರಸ್‌ ಮಾಡಿತ್ತು. ಈ ದೃಷ್ಟಿಯಿಂದಲೂ, ರಾಜ್ಯ ಸರ್ಕಾರದ ಆಜ್ಞೆ ವಿರುದ್ಧ ಕಾಶ್ಮೀರಿಗಳ ಪ್ರತಿಭಟನೆ ತೀವ್ರಗೊಂಡಿತು. ಅದು ಹಿಂಸಾತ್ಮಕವಾಗಿ ಅಪಾರ ಪ್ರಮಾಣದ ಪ್ರಾಣಹಾನಿಯೂ ಆಗತೊಡಗಿದಾಗ, ಹೊಸ ರಾಜ್ಯಪಾಲ ಎನ್.ಎನ್. ವೋಹ್ರಾ ಸರ್ಕಾರ ತನ್ನ ಆಜ್ಞೆಯನ್ನು ಹಿಂದೆಗೆದುಕೊಳ್ಳುವಂತೆ ಸೂಚಿಸಿದರು. ಇದರಿಂದಾಗಿ ಕಾಶ್ಮೀರವೇನೋ ಶಾಂತವಾಗತೊಡಗಿತು. ಆದರೆ ಜಮ್ಮುವಿನಲ್ಲಿ ಪ್ರತಿಭಟನೆಗಳು ಆರಂಭವಾದವು.

ಸರ್ಕಾರ ಮುಸ್ಲಿಮರ ಒತ್ತಡಕ್ಕೆ ಮಣಿದು ಹಿಂದೂಗಳಿಗೆ ಅನ್ಯಾಯ ಮಾಡಿದೆ ಎಂದು ಜಮ್ಮುವಿನ ಹಿಂದೂ ಸಂಘಟನೆಗಳು ಕಳೆದ ಒಂದು ತಿಂಗಳಿಂದ ಅಲ್ಲಿ ಬಂದ್ ಆಚರಿಸುತ್ತಾ, ರೈಲು ಬಸ್ಸು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚುತ್ತಾ, ಕಾಶ್ಮೀರಕ್ಕೆ ಯಾವುದೇ ವಸ್ತುಗಳು ಸಾಗಾಟವಾಗದಂತೆ ನಿರ್ಬಂಧ ಹೇರಿ, ಕಾಶ್ಮೀರ ವಿರೋಧಿ ಆಂದೋಲನವನ್ನು ಬೆಳೆಸುತ್ತಿವೆ. ಹೇಗೋ ಏನೋ ಈವರೆಗೆ ತಾತ್ಕಾಲಿಕ ಅಡೆ ತಡೆಗಳನ್ನು ಎದುರಿಸುತ್ತಾ ಪಾರಂಪರಿಕ ನೆನಪುಗಳ ಆಧಾರದ ಮೇಲೆ ಒಂದಾಗಿ ಇದ್ದ ಇಡೀ ರಾಜ್ಯ, ಈಗ ಹಿಂದು-ಮುಸ್ಲಿಂ ಎಂದು ನಿರ್ಣಾಯಕವಾಗಿ ಒಡೆದು ಹೋಗುವ ಸ್ಥಿತಿ ತಲುಪಿದೆ. ಹಾಗೆ ನೋಡಿದರೆ, 1950ರಲ್ಲಿ ಆಗಿನ ಭಾರತೀಯ ಜನಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ ಮುಖರ್ಜಿ ಜಮ್ಮುವಿಗೆ ಭೇಟಿ ನೀಡಿದಾಗಿನಿಂದಲೇ ಈ ಒಡಕು ಆರಂಭವಾಯಿತೆಂದು ಮೊನ್ನೆ ಟಿ.ವಿ.ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಜಮ್ಮುವಿನ ಪತ್ರಕರ್ತ ಮನೋಹರ ಜೋಷಿ ಹೇಳುತ್ತಾರೆ. ಇಂದು ಜಮ್ಮು ಸಂಘರ್ಷ ಸಮಿತಿಯಲ್ಲಿರುವ ಬಹುಪಾಲು ಜನರು ಅಂದು ಆರಂಭವಾದ ಜಮ್ಮು ಮುಕ್ತಿ ವಾಹಿನಿಯ ಸದಸ್ಯರೇ ಆಗಿದ್ದಾರೆ ಎಂದು ಅವರು ಸೂಚಿಸುತ್ತಾರೆ. ಅಷ್ಟೇ ಅಲ್ಲ, ಹದಿನೈದು ವರ್ಷಗಳ ಹಿಂದೆ ಶ್ರೀನಗರದಲ್ಲಿ ಸ್ಫೋಟಿಸಿದ ಕಟ್ಟಾ ಮುಸ್ಲಿಂವಾದಿಗಳ ದಂಗೆಯನ್ನು ನಿಯಂತ್ರಿಸಲು ಕೈಗೊಂಡಂತಹ ನಿರ್ದಾಕ್ಷಿಣ್ಯ ಮಿಲಿಟರಿ ಕಾರ್ಯಾಚರಣೆಯನ್ನು ಇಲ್ಲೂ ಕೈಗೊಳ್ಳದಿದ್ದಲ್ಲ್ಲಿ ಜಮ್ಮು-ಕಾಶ್ಮೀರದ ವಿಭಜನೆ ಮತ್ತು ವಿಘಟನೆಗೆ ದಾರಿ ಮಾಡಿಕೊಟ್ಟ ಅಕ್ಷಮ್ಯ ಅಪರಾಧಕ್ಕೆ ಸಂಯುಕ್ತ ಸರ್ಕಾರ ಗುರಿಯಾಗಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.

ಈ ಎಚ್ಚರಿಕೆಯ ಹಿಂದೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಳೆದ ಅರವತ್ತು ವರ್ಷಗಳ ಕಾಲದಿಂದಲೂ ನಮ್ಮ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಅನುಸರಿಸುತ್ತಾ ಬಂದಿರುವ ಅಪ್ರಾಮಾಣಿಕ ರಾಜಕಾರಣವನ್ನು ಕುರಿತ ವಿಷಾದವಿದೆ. ಇಂದು ಜಮ್ಮು-ಕಾಶ್ಮೀರ ತಲುಪಿರುವ ಸ್ಥಿತಿ ನೋಡಿದರೆ, ಕಾಂಗ್ರಸ್ನೊಳಗೊಂದು ಬಿಜೆಪಿ ಮತ್ತು ಬಿಜೆಪಿಯೊಳಗೊಂದು ಕಾಂಗ್ರೆಸ್ ಇದ್ದಂತೆ ತೋರುತ್ತಿದೆ. ನಿಜ, ಇಂದು ಕಾಶ್ಮೀರದಲ್ಲಿ ಕಿಡಿ ಹೊತ್ತಿಸಿದ್ದು ಕಾಂಗ್ರೆಸ್ಸಿನ ಅಜಾಗರೂಕ ಮತ್ತು ಸಮಯ ಸಾಧಕ ರಾಜಕಾರಣವೇ. ಆದರೆ ಬಿಜೆಪಿ ಆ ಕಿಡಿಯನ್ನು ಜಮ್ಮುವಿನಲ್ಲಿ ಬೆಂಕಿ ಮಾಡಿ, ಈಗ ಅದನ್ನು ರಾಷ್ಟ್ರಾದ್ಯಂತ ಹಚ್ಚುವ ತನ್ನ ಹಿಂದೂ ಅಭಿಯಾನದ ಎರಡನೇ ಸುತ್ತಿಗೆ ಸಜ್ಜಾಗುತ್ತಿದೆ. ಇದು ರಾಷ್ಟ್ರವನ್ನು ಎಲ್ಲಿಗೆ ಒಯ್ಯಬಹುದು ಎಂಬ ಪರಿವೆ ಈ ಪಕ್ಷಕ್ಕಿದ್ದಂತಿಲ್ಲ. ಜಮ್ಮು ಮತ್ತು ಕಾಶ್ಮೀರದ ಸಂಬಂಧ ಕುಸಿದು ಬಿದ್ದರೆ, ಕಾಶ್ಮೀರ ಮತ್ತು ದೇಶದ ಇತರ ಭಾಗಗಳ ನಡುವಣ ಸಂಬಂಧ ಕುಸಿದು ಬಿದ್ದಂತೆಯೇ. ಹಾಗೇನಾದರೂ ಕಾಶ್ಮೀರ ನಮ್ಮ ಕೈಬಿಟ್ಟರೆ ನಮ್ಮ ರಾಷ್ಟ್ರವನ್ನು ಬಂಧಿಸಿರುವ ಸೆಕ್ಯುಲರಿಸಂ-ರಾಷ್ಟ್ರೀಯತೆಗೆ ಭಂಗ ಬರದಂತೆ ಎಲ್ಲ ಧರ್ಮಗಳೂ ಒಟ್ಟಿಗೆ ಇರಬಲ್ಲವೆಂಬ ನಂಬಿಕೆ-ತನ್ನೆಲ್ಲ ವಿಶ್ವಾಸಾರ್ಹತೆಯನ್ನು ಅಂತಿಮವಾಗಿ ಕಳೆದುಕೊಂಡಂತೆಯೇ. ಅಲ್ಲಿಂದಾಚೆಗೆ ನಮ್ಮನ್ನಾಳುವವರು ವಿಚ್ಛಿದ್ರಕಾರಕ ಧರ್ಮ ರಾಕ್ಷಸರೇ. ಎಚ್ಚರವಿರಲಿ!