ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ

ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಪಿ.ಶ್ರೀಕೃಷ್ಣ ಭಟ್
ಪ್ರಕಾಶಕರು
ಕಾಂತಾವರ ಕನ್ನಡ ಸಂಘ, ಕಾಂತಾವರ, ಕಾರ್ಕಳ
ಪುಸ್ತಕದ ಬೆಲೆ
ರೂ. 33.00, ಮುದ್ರಣ: 2013

ಡಾ. ಪಿ. ಶ್ರೀಕೃಷ್ಣ ಭಟ್ ಅವರು ಬರೆದ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ

ಕಾಂತಾವರ ಕನ್ನಡ ಸಂಘ (ರಿ)ದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 80ನೆಯ ಕುಸುಮವೇ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ" (ಲೇಖಕರು: ಡಾ. ಪಿ. ಶ್ರೀಕೃಷ್ಣ ಭಟ್). 52 ಪುಟಗಳ, 33 ರೂಪಾಯಿ ಬೆಲೆಯ ಕೃತಿಯನ್ನು 2013ರಲ್ಲಿ ಕನ್ನಡ ಸಂಘ (ಕಾಂತಾವರ - 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ.

ಕೃತಿಯ ಆರಂಭದಲ್ಲಿ, ಪ್ರಧಾನ ಸಂಪಾದಕರಾದ ಡಾ. ನಾ. ಮೊಗಸಾಲೆಯವರು ಕನ್ನಡ ಸಂಘದ ಹಿನ್ನೆಲೆ, ಸಾಧನೆ ಮತ್ತು ಗ್ರಂಥಮಾಲೆಯ ಯೋಜನೆ ಇತ್ಯಾದಿಗಳ ಬಗ್ಗೆ "ನಾಡಿಗೆ ನಮಸ್ಕಾರ" ದಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಕೃತಿಯ ಕೊನೆಗೆ ಗ್ರಂಥಮಾಲೆಯಲ್ಲಿ ಪ್ರಕಟವಾದ ಇತರ 86 ಕೃತಿಗಳ ಶೀರ್ಷಿಕೆ ಮತ್ತು ಲೇಖಕರ ಹೆಸರುಗಳ ಪಟ್ಟಿಯನ್ನು ಕೊಡಲಾಗಿದೆ.

ಗಡಿನಾಡು ಕಾಸರಗೋಡಿನ ಮೀಂಜದಲ್ಲಿ ತಲೇಕಳ ಮನೆತನದ ಸಂಕಪ್ಪ ಭಂಡಾರಿ (ಶಂಕರ ಭಂಡಾರಿ) ಹಾಗೂ ಕಳ್ಳಿಗೆ ಬೀಡಿನ ಶ್ರೀಮತಿ ಶಂಕರಿ (ಸಂಕಾಜು) ದಂಪತಿ ಮಗನಾಗಿ 1928ರಲ್ಲಿ ಜನಿಸಿದವರು ಕಳ್ಳಿಗೆ ಮಹಾಬಲ ಭಂಡಾರಿಯವರು. ವೃತ್ತಿಯಲ್ಲಿ ನ್ಯಾಯವಾದಿಗಳಾಗಿ ಕಾಸರಗೋಡು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಖ್ಯಾತರಾದವರು. ಕಾದಂಬರಿಕಾರರಾಗಿಯೂ, ಲೇಖಕರಾಗಿಯೂ ಹೆಸರು ಮಾಡಿದ ಕಳ್ಳಿಗೆಯವರು, ಕಾಸರಗೋಡಿನ ಕನ್ನಡಿಗರಿಗಾಗಿಯೇ ತಮ್ಮ ಇಡೀ ಬದುಕನ್ನೇ ಸಮರ್ಪಿಸಿದ ತ್ಯಾಗಮಯಿ.

ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಕಳ್ಳಿಗೆಯವರು, ಕಾಸರಗೋಡನ್ನು ಕೇರಳದೊಂದಿಗೆ ಅನ್ಯಾಯವಾಗಿ ವಿಲೀನಗೊಳಿಸಿದಾಗ ಪಕ್ಷಕ್ಕೆ ರಾಜೀನಾಮೆ ನೀಡಿದವರು. ಕರ್ನಾಟಕ ಪ್ರಾಂತೀಕರಣ ಸಮಿತಿಯ ಪ್ರತಿನಿಧಿಯಾಗಿ ಕೇರಳ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಮಹಾಬಲ ಭಂಡಾರಿಯವರು ಮೂರು ಬಾರಿ ಶಾಸಕರಾಗಿಯೂ ಆಯ್ಕೆಯಾದರು. ವೃತ್ತಿಗಿಂತ ಕನ್ನಡಿಗರ ಸೇವೆಯೇ ಮುಖ್ಯವೆಂದು ತಿಳಿದು ಅಹೋರಾತ್ರಿ ಕಾಸರಗೋಡಿನ ಕನ್ನಡಿಗರ ಬೇಕು ಬೇಡಗಳಿಗಾಗಿಯೇ ಓಡಾಡುತ್ತಾ ಆರೋಗ್ಯವನ್ನೂ ಹಾಳು ಮಾಡಿಕೊಂಡವರು, ಕೊನೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿಯೇ 1978ರ ಜನವರಿ ಏಳರಂದು ಮೃತರಾದವರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೈವಳಿಕೆ ಶಾಲೆಯಲ್ಲಿ ಮುಗಿಸಿ, ಹೈಸ್ಕೂಲ್ ಶಿಕ್ಷಣಕ್ಕಾಗಿ ನೀಲೇಶ್ವರದ ರಾಜಾಸ್ ಹೈಸ್ಕೂಲಿಗೆ ಸೇರಿದ ಬಳಿಕ ಕಳ್ಳಿಗೆಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ  ಭಾಗಿಯಾದರು. 1942ರ "ಭಾರತ ಬಿಟ್ಟು ತೊಲಗಿ" ಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾದ ಕಳ್ಳಿಗೆಯವರು, ಪೊಲೀಸರ ಲಾಠಿ ಏಟಿನ ಪೆಟ್ಟನ್ನೂ ತಿಂದಿದ್ದರು.

ಕಳ್ಳಿಗೆಯವರು ಬೆಳಗಾವಿಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ಅವಧಿಯ ಒಂದು ಘಟನೆಯನ್ನು ಲೇಖಕರು ಕೃತಿಯಲ್ಲಿ ಈ ಕೆಳಗಿನಂತೆ ವಿವರಿಸುತ್ತಾರೆ.

"ಒಮ್ಮೆ ಅಲ್ಲಿನ ಕನ್ನಡ ಸಂಘದವರು ಸಾಹಿತ್ಯ ಸಭೆಯೊಂದನ್ನು ಏರ್ಪಡಿಸಿದ್ದರು. ಅದರಲ್ಲಿ ಭಂಡಾರಿಗಳಿಗೆ ಪ್ರಮುಖ ಪಾತ್ರವಿತ್ತು. "ಸಭೆ ನಡೆಸಲು ಬಿಡಲಿಕ್ಕಿಲ್ಲ, ಸಭಾಂಗಣವನ್ನೇ ಸುಟ್ಟು ಹಾಕುತ್ತೇವೆ" ಎಂದು ಮರಾಠಿಗಳು ಹೆದರಿಸಿದರಂತೆ. ಭಂಡಾರಿಗಳು ಕೆಚ್ಚೆದೆಯಿಂದ ಅವರನ್ನು ಇದಿರಿಸಲು ಸನ್ನದ್ಧರಾದರು. "ಯಾರು ಸುಟ್ಟು ಹಾಕುತ್ತಾರೆಂದು ನಾವೂ ನೋಡುತ್ತೇವೆ" ಎಂದು ತಮ್ಮ ಸಂಗಡಿಗರೊಂದಿಗೆ ಸೆಟೆದು ನಿಂತರು. ಇವರ ದೃಢ ನಿಲುವನ್ನು ಕಂಡು ಪ್ರತಿಭಟನಾಕಾರರು ಆ ಜಾಗ ಖಾಲಿ ಮಾಡಿದರು. ಕಾರ್ಯಕ್ರಮವು ನಿರಾತಂಕವಾಗಿ ಜರುಗಿತು" (ಪುಟ: 12).

ಕಳ್ಳಿಗೆಯವರ ಧೈರ್ಯ, ಕೆಚ್ಚೆದೆ, ಸವಾಲುಗಳನ್ನು ಸ್ವೀಕರಿಸುವ ಛಾತಿ ಇತ್ಯಾದಿಗಳೆಲ್ಲ, ವಿದ್ಯಾರ್ಥಿಯಾಗಿರುವಾಗಲೇ ಮೈಗೂಡಿಸಿಕೊಂಡಂಥವುಗಳು. ಕಾರಗೋಡು ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಿದ ನಿರಂತರವಾದ ಹೋರಾಟದಲ್ಲಿ ಮತ್ತು ನ್ಯಾಯಾಂಗ ಲೋಕದಲ್ಲಿ ಅವರ ಧೀರತನ ಹೇಗಿದ್ದಿರಬಹುದು ಎಂಬುದನ್ನು ಈ ಹಿನ್ನೆಲೆಯಲ್ಲಿ ಯಾರು ಬೇಕಾದರೂ ಅಂದಾಜಿಸಬಹುದು.

ವಿದ್ಯಾರ್ಥಿಯಾಗಿದ್ದಾಗಲೇ, ಹೋರಾಟಗಾರನಾಗಿ, ನ್ಯಾಯವಾದಿಯಾಗಿ, ಜನಪ್ರತಿನಿಧಿಯಾಗಿ ಹೀಗೆ ತಾನು ತೊಡಗಿಸಿಕೊಂಡ ಪ್ರತೀ ಕ್ಷೇತ್ರದಲ್ಲೂ ಪ್ರತಿಯೊಂದಕ್ಕೂ ಮಾದರಿಯಾದವರು ಕಳ್ಳಿಗೆಯವರು. ಆದರ್ಶ ಮತ್ತು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಅವರಿಗೆ ಅವರೇ ಪರ್ಯಾಯ. "ನ್ಯಾಯವಾದಿ ಕಳ್ಳಿಗೆ" ಯವರ ನಡೆ - ನುಡಿ ಬಗ್ಗೆ ಲೇಖಕರು ಹೀಗೆ ಬರೆದಿದ್ದಾರೆ:

"ಮಹಾಬಲ ಭಂಡಾರಿಗಳಿಗೆ ವಕೀಲಿ ವೃತ್ತಿ ಸಮಾಜ ಸೇವೆಯ ಹಾಗೂ ಜನಹಿತ ಸಾಧನೆಯ ಒಂದು ಮಾರ್ಗ ಮಾತ್ರವಾಗಿತ್ತು. ಬಡವನಾದ ಕಕ್ಷಿಗಾರನಲ್ಲಿ ಅವರಿಗೆ ಎಲ್ಲಿಲ್ಲದ ಅನುಕಂಪ. ಕಕ್ಷಿಗಾರ ಬಡವನಾದರೂ ಅವರು ನ್ಯಾಯವಾದಿಯಾಗಿ  ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎಂದೂ ಭೇದ ಭಾವ ತೋರಿದವರಲ್ಲ. ಎಷ್ಟೋ ಪ್ರಕರಣಗಳಲ್ಲಿ ಅವರು ಉಚಿತವಾಗಿ ವಾದಿಸಿದ ಸಂದರ್ಭಗಳಿದ್ದುವು. ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಅವರ ಕಾಸರಗೋಡು ಕಛೇರಿಗೆ ಬಂದು ಸಂಜೆ ತಮ್ಮೂರಿಗೆ ಮರಳಲು ಅನುಕೂಲವಿಲ್ಲದ ಬಡ ಕಕ್ಷಿಗಾರರು ಅವರ ಕಛೇರಿಯಲ್ಲಿಯೇ ತಂಗುವುದಿತ್ತು. ಅವರ ರಾತ್ರಿಯ ಊಟ, ಬೆಳಗ್ಗಿನ ತಿಂಡಿ, ಬಸ್ ಪ್ರಯಾಣದ ವೆಚ್ಚ ಎಲ್ಲದಕ್ಕೂ ಭಂಡಾರಿಗಳೇ ಕೆಲವೊಮ್ಮೆ ಹಣ ನೀಡುವುದಿತ್ತು. ಬಡ ಕಕ್ಷಿಗಾರರಿಗೆ ಅವರು ನೀಡುವ ಉಚಿತ ಕಾನೂನು ಸೇವೆ ಜನಜನಿತವಾಗಿತ್ತು. ತನ್ನಲ್ಲಿಗೆ ಬಂದ ಕಕ್ಷಿಗಾರನಿಗೆ ಅಲ್ಲಸಲ್ಲದ ಬೋಧನೆಗಳನ್ನು ನೀಡಿ, ಅವರನ್ನು ದುರ್ವ್ಯವಹಾರಕ್ಕಿಳಿಸಿ, ಅವರಲ್ಲಿದ್ದ ಹಣವನ್ನು ತನ್ನದಾಗಿಸಿಕೊಳ್ಳುವ ಹೀನ ಪ್ರವೃತ್ತಿ ಭಂಡಾರಿಗಳದ್ದಾಗಿರಲಿಲ್ಲ. ಅದಕ್ಕೆ ಬದಲಾಗಿ ಇತ್ತಂಡದ ಕಕ್ಷಿಗಾರರನ್ನು ತನ್ನಲ್ಲಿಗೆ ಬರಮಾಡಿ ಅವರೊಳಗಿನ ವ್ಯವಹಾರಗಳನ್ನು ಶಾಂತಿಯುತವಾಗಿ ತೀರಿಸಿ, ಅವರಲ್ಲಿ ಪರಸ್ಪರ ಪ್ರೀತಿ ಬೆಳೆಯುವಂತೆ ಮಾಡಿದ ಸಂದರ್ಭಗಳೆಷ್ಟೊ. ಅನೇಕರು ಭಂಡಾರಿಗಳ ಹಿರಿತನವನ್ನು  ನಿಷ್ಪಕ್ಷಪಾತ ಧೋರಣೆಯನ್ನು ಕಂಡು, ಕೋರ್ಟ್ ನ ವ್ಯವಹಾರವನ್ನು ಅವರಲ್ಲಿ ಭಿನ್ನವಿಸಿ, ರಾಜಿಯಿಂದ ಮುಗಿಸಿಕೊಂಡು ತೃಪ್ತಿಪಟ್ಟು ಮರಳುತ್ತಿದ್ದರು" (ಪುಟ: 25).

"ಕ್ರಿಮಿನಲ್ ವಕೀಲರಾಗಿದ್ದರೂ ತನ್ನ ಕಕ್ಷಿಗಾರರಿಗಾಗಿ ಅವರು ಪೊಲೀಸ್ ಸ್ಟೇಶನಿಗೆ ಹೋದವರಲ್ಲ. ಸಾವಿರಗಟ್ಟಲೆ ಹಣ ಕೊಡುತ್ತೇನೆ ಎಂದರೂ ಪೊಲೀಸ್ ಸ್ಟೇಶನ್ ಮೆಟ್ಟಿಲು ತುಳಿಯಲಾರರು. ಒಮ್ಮೆ ಅವರ ಪ್ರಮುಖ ಕಕ್ಷಿಗಾರರೊಬ್ಬರು ಒಂದು ದೊಡ್ಡ ಕ್ರಿಮಿನಲ್ ಕೇಸಿನಲ್ಲಿ ಸಿಕ್ಕಿಬಿದ್ದರು. ಅವರು ಉಪಾಯವಿಲ್ಲದೆ ಭಂಡಾರಿಯವರನ್ನು ಸಮೀಪಿಸಿ "ಸ್ವಾಮೀ, ನಾನೊಂದು ಕೇಸಿನಲ್ಲಿ ಸಿಕ್ಕಿಬಿದ್ದಿದ್ದೇನೆ. ನೀವು ಒಮ್ಮೆ ಪೊಲೀಸ್ ಸ್ಟೇಶನಿಗೆ ಬಂದು, ನಿಮ್ಮ ಪ್ರಭಾವವನ್ನು ಬೀರಿ ನನ್ನ ಮೇಲೆ ಕೇಸು ಇಲ್ಲದಂತೆ ಮಾಡಬೇಕು" ಎಂದು ವಿನಂತಿಸಿದರು. ಒಂದು ನೋಟಿನ ಕಟ್ಟನ್ನು ಅವರೆದುರಿಗೆ ಇಟ್ಟರು. ಆದರೆ ಭಂಡಾರಿಗಳು ಶಾಂತರಾಗಿ "ನೀವು ಈ ರೀತಿ ಸಿಕ್ಕಿಬಿದ್ದುದರಲ್ಲಿ ನನಗೆ ತುಂಬಾ ಬೇಸರವಿದೆ. ಹಾಗೆ ಆಗಬಾರದಿತ್ತು. ನಾನು ಪೊಲೀಸ್ ಸ್ಟೇಶನಿಗೆ ಬರುವ ಕ್ರಮವಿಲ್ಲ. ಪೊಲೀಸಿನವರು ಕೈಗೊಳ್ಳುವ ಕೆಲಸದಲ್ಲಿ ನಾನು ಕೈ ಹಾಕುವುದು ಸರಿಯಲ್ಲ. ಅವರು ಏನು ಬೇಕಾದರೂ ಮಾಡಲಿ. ನಾವು ಕೋರ್ಟಿನಲ್ಲಿ ನೋಡಿಕೊಳ್ಳುವ. ನನ್ನ ಮುಂದಿರಿಸಿದ ಈ ಹಣ ನನಗೆ ಬೇಡ" ಎಂದರು. ಕಕ್ಷಿಗಾರರು ಪದೇ ಪದೇ ಒತ್ತಾಯಿಸಿದಾಗ ಭಂಡಾರಿಯವರು ಅಶಾಂತರಾಗಿ ಬಹಳ ತೀಕ್ಷ್ಣವಾಗಿಯೇ ನಿರಾಕರಿಸಿದರು".

"ಒಮ್ಮೆ ಒಬ್ಬ ಮಹಾಶಯನು ತನ್ನ ಕೇಸಿನ ಬಗ್ಗೆ ಭಂಡಾರಿಯವರಲ್ಲಿಗೆ ಬಂದವನು ಇವರ ಮೇಜಿನ ಮೇಲೆ ನೋಟಿನ ಕಟ್ಟುಗಳನ್ನಿಟ್ಟು 'ನನ್ನ ಕೇಸನ್ನು ನೀವು ತೆಗೆದುಕೊಳ್ಳಬೇಕು" ಎಂದನಂತೆ. ಅವನ ನಡತೆಯಿಂದ ಭಂಡಾರಿಯವರಿಗೆ ಕೋಪ ಬಂದಿತು. 'ಆ ಹಣ ಮೇಜಿನ ಮೇಲಿಂದ ತೆಗೆಯಿರಿ' ಎಂದರಂತೆ. 'ನನ್ನ ಕೇಸಿಗಾಗಿ ಬಂದಿದ್ದೇನೆ' ಎಂಬ ಆತನ ವಾದವನ್ನು ತಳ್ಳಿ ಹಾಕಿ "ನೀವು ಮೊದಲು ಆ ಹಣವನ್ನು ತೆಗೆದುಕೊಂಡು ಹೋಗಿ ಇಲ್ಲಿಂದ. ಇನ್ನೊಮ್ಮೆ ಇಲ್ಲಿಗೆ ಬರಬೇಕೆಂದಿದ್ದರೆ ಹಾಗೆ ಬನ್ನಿ. ಹಣದ ಲಾಲಸೆ ನನಗೆ ತೋರಿಸುವ ತಪ್ಪು ಮಾಡಬೇಡಿ" ಎಂದು ಆತನನ್ನು ಕಳುಹಿಸಿಯೇ ಬಿಟ್ಟರಂತೆ. ಭಂಡಾರಿಯವರು ಎಂದೂ ಹಣದ ಆಮಿಷಕ್ಕೆ ಬಲಿಯಾದವರಲ್ಲ. ಅವರು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದ ಬಹುಭಾಗ ಸಾರ್ವಜನಿಕವಾಗಿ ವಿನಿಯೋಗವಾಗುತ್ತಿದ್ದು ಸದಾ ಅವರು ಹಣದ ಮುಗ್ಗಟ್ಟಿನಲ್ಲೇ ಇರುತ್ತಿದ್ದರು. ಸುಮಾರು 25 ವರ್ಷಗಳ ಕಾಲ ಬಿಡುವಿಲ್ಲದೆ ದುಡಿದರೂ ತಮಗೆ ಸ್ವಂತದ್ದಾಗಿ ಒಂದು ಮನೆ ಖರೀದಿಸಲು ಕೊನೆಗಾಲದವರೆಗೂ ಅವರಿಗೆ ಸಾಧ್ಯವಾಗಿರಲಿಲ್ಲ" (ಪುಟ: 26).

ಕಳ್ಳಿಗೆ ಮಹಾಬಲ ಭಂಡಾರಿಯವರು ಹೈಸ್ಕೂಲ್ ಕಲಿಯುತ್ತಿರುವಾಗಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.  ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ ಸೃಜನಶೀಲ ಸಾಹಿತಿಯಾಗಿ ಮತ್ತು ಲೇಖಕರಾಗಿ, ಅಂಕಣಕಾರರಾಗಿ ಪತ್ರಿಕಾಲೋಕದಲ್ಲಿ ಮಿಂಚಿದವರು. ಮೊದಲ ಕಾದಂಬರಿ "ಸಮಾಗಮ" ವನ್ನು ಬರೆದುದು ಕಾನೂನು ವಿದ್ಯಾರ್ಥಿಯಾಗಿದ್ದಾಗಲೇ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮ. ನವೀನಚಂದ್ರ ಪಾಲ್ ಅವರ ಪ್ರಸಿದ್ಧ ವಾರಪತ್ರಿಕೆ "ಸಂಗಾತಿ" ಯ ಖಾಯಂ ಲೇಖಕರೂ, ಅಂಕಣಕಾರರೂ ಆಗಿದ್ದ ಕಳ್ಳಿಗೆಯವರ ಮೊದಲ ಕಾದಂಬರಿ "ಸಮಾಗಮ" ವನ್ನು "ಸಂಗಾತಿ ಪ್ರಕಾಶನ"ವು ತನ್ನ ಪ್ರಕಾಶನದ ಚೊಚ್ಚಲ ಪ್ರಕಟಣೆಯಾಗಿ (1953)  ಆಗಲೇ ಪ್ರಕಟಿಸಿತ್ತು.

ಕಾಸರಗೋಡಿನ ಕನ್ನಡ ಚಳುವಳಿಯ ಮುಖವಾಣಿಯಾಗಿ ಜನ್ಮತಾಳಿದ "ಕಾಸರಗೋಡು ಸಮಾಚಾರ" (1955) ಪತ್ರಿಕೆಯ ಸಲಹೆಗಾರರಾಗಿದ್ದ ಕಳ್ಳಿಗೆಯವರ ಅನೇಕ ಸಮಾಜಮುಖಿ ಲೇಖನಗಳು "ಅಂತರಂಗ" , "ಪ್ರಕಾಶ" , "ನವಭಾರತ" , ಕಥಾವಳಿ" , ಪಾಟೀಲ ಪುಟ್ಟಪ್ಪರವರ "ಪ್ರಪಂಚ" ಮುಂತಾದ ಪತ್ರಿಕೆಗಳಲ್ಲೂ ನಿರಂತರವಾಗಿ ಪ್ರಕಟವಾಗುತ್ತಿದ್ದುವು. ನ್ಯಾಯವಾದಿಯಾಗಿ ಕರ್ತವ್ಯ ಸಲ್ಲಿಸುತ್ತಿರುವಾಗಲೂ ಕಳ್ಳಿಗೆಯವರು ಬರೆಯುತ್ತಿದ್ದರು. ”ಮೇಲಿನ ಕೋರ್ಟು" ಮತ್ತು "ದೇವರು ಮಾಡಿದ ಕೊಲೆ" ಇವರ ಇನ್ನೆರಡು ಕಾದಂಬರಿಗಳು. ಕಳ್ಳಿಗೆಯವರ ಆಯ್ದ  ಲೇಖನಗಳ ಸಂಕಲನ "ಮಾತುಕತೆ".

ಕಳ್ಳಿಗೆಯವರ ಬರಹಗಳ ಬಗ್ಗೆ ಲೇಖಕ ಡಾ. ಪಿ. ಶ್ರೀಕೃಷ್ಣ ಭಟ್ ರವರ ಅಭಿಪ್ರಾಯ: " ಮಹಾಬಲ ಭಂಡಾರಿಗಳದು ಪ್ರಗತಿಶೀಲ ಮನೋವೃತ್ತಿ. ಜಾತೀಯತೆ, ಕೋಮು ಭಾವನೆ, ಸಾಮಾಜಿಕವಾದ ಉಚ್ಚ ನೀಚ ಭೇದ ಭಾವ ಅವರಿಗೆ ತೀರಾ ಹಿಡಿಸದು. ಶೋಷಣೆ ವ್ಯಕ್ತಿಗತವಾದದ್ದಿರಲಿ, ಸಾಮಾಜಿಕವಾದದ್ದಿರಲಿ, ಅದನ್ನು ಕಂಡೊಡನೆ ಸಿಡಿದೇಳುವ ಪ್ರವೃತ್ತಿ ಅವರದು. ಈ ಮನೋಧರ್ಮ ಅವರ ಲೇಖನಗಳಲ್ಲಿ ಕತೆ ಕಾದಂಬರಿಗಳಲ್ಲಿ ಸಮರ್ಥವಾಗಿ ಪ್ರತಿಬಿಂಬಿತವಾದುದನ್ನು ಕಾಣಬಹುದಾಗಿದೆ". "ಸರಳ ಕನ್ನಡದಲ್ಲಿ ಸಲೀಸಾಗಿ ಬರೆದುಕೊಂಡು ಹೋಗುವ ಭಂಡಾರಿಗಳ ಶೈಲಿ ಸೊಗಸಾಗಿದೆ. ಹೇಳಬೇಕಾದದ್ದನ್ನು ನೇರವಾಗಿ ಸ್ಪಷ್ಟವಾಗಿ ಕೃತಕತೆಯ ಸೋಗಿಲ್ಲದೆ ಹೇಳುತ್ತಾರೆ. ಅವರಿಗೆ ಜೀವನ ಮೌಲ್ಯಗಳಲ್ಲಿರುವ ತೀವ್ರವಾದ ಆಸಕ್ತಿ ಕೃತಿಗಳಲ್ಲಿ ನಿಚ್ಚಳವಾಗಿ ಮೂಡಿಬರುತ್ತದೆ. ಮಾತ್ರವಲ್ಲ, ಅವರ ಎಲ್ಲ ಕೃತಿಗಳು ಇಂದಿನ ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಚಿಂತಿಸುವಂತೆಯೂ ಮಾಡುತ್ತಿರುವುದು ಗಮನೀಯ ಅಂಶವಾಗಿದೆ". (ಪುಟ: 28, 43, 44)

"ವಿಶಾಲ ಕೇರಳ ಚಳುವಳಿಯು 1937ರ ಹೊತ್ತಿಗೆ ಆರಂಭಗೊಂಡಿತ್ತು. ಕೇರಳದ ವಿಸ್ತಾರವನ್ನು ಕರ್ನಾಟಕದ ಗೋಕರ್ಣದವರೆಗೂ ಸ್ಥಾಪಿಸುವ, ಮಲಯಾಳಿ ಮುಖಂಡರ ಲೇಖನವೊಂದು ಪ್ರಕಟವಾಗಿತ್ತು. ಕಾಲೇಜು ವಿದ್ಯಾರ್ಥಿಯಾಗಿದ್ದ ಭಂಡಾರಿಗಳು ಅದನ್ನು ಪ್ರತಿಭಟಿಸಿ ಕಾಲೇಜು ಮ್ಯಾಗಜೀನ್ ನಲ್ಲಿ ಒಂದು ಉಗ್ರ ಲೇಖನವನ್ನು ಬರೆದರು. 'ಅಸ್ತಿಪಂಜರಗಳೊಡನೆ ಮಾತುಕತೆ' ಎಂಬ ಶಿರ್ಷಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಭಂಡಾರಿಗಳು 'ಕೇಳಪ್ಪನು ಕೇಳಿದ ಕಾಸರಗೋಡು' ಎಂದು ವಿಡಂಬಿಸಿದ್ದಾರೆ"(ಪುಟ: 11).

ಹೀಗೆ ಕಳ್ಳಿಗೆಯವರ ಕನ್ನಡ ಭಾಷೆ ಮತ್ತು ಕಾಸರಗೋಡು ನೆಲದ ಪರವಾದ ಪ್ರೀತಿ, ಅಭಿಮಾನ ವಿದ್ಯಾರ್ಥಿಯಾಗಿದ್ದಾಗಲೇ ಚಿಗುರೊಡೆದಿತ್ತು. ಅಲ್ಲಿಂದ ತೊಡಗಿದ ಕಾಸರಗೋಡು ಕನ್ನಡ ಪರವಾದ ಕಳ್ಳಿಗೆಯವರ ಧ್ವನಿ ಅವರ ಉಸಿರಿರುವವರೆಗೂ ಪ್ರಖರವಾಗಿ ಮೊಳಗುತ್ತಲೇ ಇದ್ದುದು ಕಾಸರಗೋಡಿನ ಮಣ್ಣಿಗೆ ಕಳ್ಳಿಗೆಯವರಿಂದ ಸಂದ ಅನನ್ಯವೂ, ಅನುಪಮವೂ, ವಿಶೇಷವೂ, ವಿಶಿಷ್ಟವೂ ಆದ ಒಂದು ಮಹಾನ್ ಕೊಡುಗೆಯಾಗಿದೆ. ಇದರ ಋಣಭಾರ ಕಾಸರಗೋಡಿನ ಕನ್ನಡಿಗರ ಮೇಲೆ ಖಂಡಿತಕ್ಕೂ ಇದ್ದೇ ಇದೆ, ಇದ್ದೇ ಇರುತ್ತದೆ.

1960, 1965 ಮತ್ತು 1967ರಲ್ಲಿ  ಮೂರು ಬಾರಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ಪ್ರಾಂತೀಕರಣ ಸಮಿತಿಯ ಪ್ರತಿನಿಧಿಯಾಗಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದ ಕಳ್ಳಿಗೆಯವರು,   ಕಾಸರಗೋಡಿನ ಕನ್ನಡಿಗರ ಕಷ್ಟ ನಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ  ಹಗಲಿರುಳೆನ್ನದೆ ಶ್ರೀಗಂಧದಂತೆ ತಮ್ಮ ಬದುಕನ್ನು ಸಮರ್ಪಿಸಿದವರು. ಕಳ್ಳಿಗೆಯವರು ಇರುವವರೆಗೂ ಕಾಸರಗೋಡು ಕನ್ನಡಿಗರ ಚಳುವಳಿಗೆ ಅರ್ಥವಿತ್ತು, ಮಾನ್ಯತೆಯಿತ್ತು, ಜೀವಂತಿಕೆಯಿತ್ತು.  ಯಾವಾಗ ಅವರನ್ನು ನಾಲ್ಕನೇ ಬಾರಿ ವಿಧಾನಸಭಾ ಚುನಾವಣಾ ಕಣಕ್ಕಿಳಿಸಲು ಕರ್ನಾಟಕ ಪ್ರಾಂತೀಕರಣ ಸಮಿತಿಯಲ್ಲಿದ್ದ ಒಂದು ಮುಖ್ಯ ಗುಂಪು ನೆಪಗಳನ್ನು ಮುಂದಿಟ್ಟುಕೊಂಡು ತಡೆ ಒಡ್ಡಿತೋ, ಅಲ್ಲಿಂದ ನಂತರ ಕಾಸರಗೋಡು ಕನ್ನಡಿಗರ ಪರ ಚಳುವಳಿ ಹಳ್ಳ ಹಿಡಿಯಿತು ಎಂಬುದೇ  ಸತ್ಯ.

"ಕಾಸರಗೋಡಿನ ಕನ್ನಡದ ಹೋರಾಟದ ಮುಂಚೂಣಿಯಲ್ಲಿದ್ದು ಕನ್ನಡದ 'ಮಹಾಬಲ'ನೆನಿಸಿ ತನ್ನ ಕೊನೆಯುಸಿರಿನ ತನಕವೂ ಕಾಸರಗೋಡು ಕರ್ನಾಟಕದೊಂದಿಗೆ ವಿಲೀನಗೊಳ್ಳಬೇಕೆಂಬ ಆಸೆಯನ್ನು ಇಟ್ಟುಕೊಂಡು ಸದಾ ಕನ್ನಡಿಗರ ಕಣ್ಣೀರೊರೆಸುತ್ತಿದ್ದ , ತನ್ನ ಸರ್ವಸ್ವವನ್ನೂ ಕಾಸರಗೋಡಿಗಾಗಿ ಧಾರೆಯೆರೆದು ಕಣ್ಮರೆಯಾದ ಆ ದಿವ್ಯ ಚೇತನ ನಿಜವಾಗಿಯೂ ಅವಿಸ್ಮರಣೀಯ. ಕನ್ನಡದ ಧೀರ ಹೋರಾಟಗಾರ ಮಾತ್ರವಲ್ಲ , ಒಬ್ಬ ಆದರ್ಶ ಶಾಸಕರಾಗಿ , ಸಮರ್ಥ ನ್ಯಾಯವಾದಿಯಾಗಿ, ಪ್ರತಿಭಾವಂತ ಸಾಹಿತಿಯಾಗಿ, ಇವೆಲ್ಲಕ್ಕೂ ಮಿಗಿಲಾಗಿ ಒಬ್ಬ ವಿಶಾಲ ಹೃದಯದ ಮಾನವ ಪ್ರೇಮಿಯಾಗಿ, ಕಾಸರಗೋಡಿನ ಸಮಸ್ತ ಜನತೆಯ ಪ್ರೀತ್ಯಾದರಗಳಿಗೆ ಪಾತ್ರರಾದ ಕಳ್ಳಿಗೆ ಮಹಾಬಲ ಭಂಡಾರಿಗಳ ಜೀವನ ಮತ್ತು ಸಾಧನೆ ಅನ್ಯಾದೃಶವಾದುದು, ಅನುಕರಣೀಯವಾದುದು". (ಪುಟ: 2).

"ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ"  ಕೃತಿಯ ಮೂಲಕ ಕಳ್ಳಿಗೆಯವರನ್ನು ಪರಿಚಯಿಸುವಲ್ಲಿ ಲೇಖಕರಾದ ಡಾ. ಪಿ. ಶ್ರೀಕೃಷ್ಣ ಭಟ್ ಅವರು ಯಶಸ್ವಿಯಾಗಿದ್ದಾರೆ ಎನ್ನಬಹುದು. ಆದರೆ, ನಿರ್ಧಿಷ್ಟವಾಗಿ ಎರಡು ಕಡೆ; ಎರಡು ವಿಷಯಗಳಲ್ಲಿ ಸತ್ಯವನ್ನು ಬರೆಯದೆ ಮರೆಮಾಚಲು ಪ್ರಯತ್ನಿಸಿರುವುದು ಅಥವಾ ವಾಸ್ತವಾಂಶಗಳನ್ನು  ಹಾರಿಸಿಬಿಡುವ ಜಾಣತನ ಪ್ರದರ್ಶಿಸಿರುವುದು ಓದುಗನಿಗೆ ಗೊತ್ತಾಗಿಬಿಡುತ್ತದೆ. ಸತ್ಯ ಬರೆಯಬೇಕೋ, ಬೇಡವೋ ಎಂಬ ಲೇಖಕರಲ್ಲಿನ ಗೊಂದಲವೂ ಕೃತಿಯಲ್ಲಿ ಈ ವಿಷಯಗಳಲ್ಲಿ ಕಂಡುಬರುವ ಗೊಂದಲಗಳಿಗೆ ಕಾರಣವಿರಬಹುದೇನೊ.

ಪುಟ 3ರಲ್ಲಿ , "ಅನಾರೋಗ್ಯದ ಕಾರಣದಿಂದಲೇ 1970ರ ಚುನಾವಣೆಯಲ್ಲಿ  ಸ್ಪರ್ಧಿಸದಿರಲು ತೀರ್ಮಾನಿಸಿದರು". ಎಂದು ಬರೆಯುವ ಲೇಖಕರು, ಪುಟ 14ರಲ್ಲಿ "1970ರ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಾಬಲ ಭಂಡಾರಿಗಳು ವಿಸಮ್ಮತಿಸಿದರು. ಅದಕ್ಕೆ ಅವರ ಹದಗೆಡುತ್ತಿರುವ ಆರೋಗ್ಯವೂ ಒಂದು ಕಾರಣವಾಗಿತ್ತು. ಕರ್ನಾಟಕ ಸಮಿತಿಯ ಒಳಗೂ ಚುನಾವಣೆಗೆ ಸ್ಪರ್ಧಿಸುವುದು ಬೇಡವೆಂಬ ದನಿ ಮೊಳಗಿತು. ಕೊನೆಗೆ ಸಮಿತಿಯು ಚುನಾವಣೆಯಲ್ಲಿ ತನ್ನ ಹುರಿಯಾಳುಗಳನ್ನು ನಿಲ್ಲಿಸುವುದು ಬೇಡವೆಂದೇ ತೀರ್ಮಾನಿಸಿತು. (ಈ ತೀರ್ಮಾನವು ಒಂದು ಅಚಾತುರ್ಯ ಎಂಬುದನ್ನು ಸಮಿತಿಯ ನೇತಾರರು ಮುಂದೆ ಅರ್ಥಮಾಡಿಕೊಂಡರು)'. ಎಂದು ದಾಖಲಿಸಿದ್ದಾರೆ.

ವಾಸ್ತವವಾಗಿ, ಇಲ್ಲಿ ಈ ವಿಷಯದಲ್ಲಿ ನಡೆದುದೇನು ?

"ಕಾಸರಗೋಡು ಕರ್ನಾಟಕಕ್ಕೇ ಸೇರಬೇಕೆಂಬ ನನ್ನ ಸ್ವಾಮಿಯ ಅದಮ್ಯ ಇಚ್ಛೆ , ಅದಕ್ಕಾಗಿ ಅವರು ಕ್ಷಣ ಕ್ಷಣವೂ ನಡೆಸಿದ ಹೋರಾಟ, ಅವರ ಜೀವನವನ್ನೇ ಬಲಿ ತರಗೆದುಕೊಂಡಿತೆಂಬ ಸಂಗತಿ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅವರಿಗೆ ವಿಶ್ರಾಂತಿಯೆಂಬುದೇ ಇರಲಿಲ್ಲ". , " ಕಾಸರಗೋಡಲ್ಲಿ ಕಡೇ ಕಡೇಗೆ ಅವರು ಇಲೆಕ್ಷನಿಗೆ ನಿಲ್ಲುವ ಬಗ್ಗೆ ಕರ್ನಾಟಕ ಸಮಿತಿಯವರಲ್ಲೇ ಕೆಲವರಿಗೆ ಭಿನ್ನಾಭಿಪ್ರಾಯಗಳಿದ್ದುವಂತೆ. ಭಂಡಾರಿಯವರಲ್ಲಿ ಅವರೇ ಇಲೆಕ್ಷನಿಗೆ ನಿಲ್ಲಬೇಕೆಂದೂ, ಹಿಂದಿನಿಂದ ಅವರು ಬೇಡ ಬೇರೆಯವರು ನಿಲ್ಲಬೇಕೆಂದೂ, ಅಭಿಪ್ರಾಯಗಳು ಬರತೊಡಗಿದುವಂತೆ. ಅದನ್ನು ಅವರಲ್ಲೇ ಹೇಳಬಹುದಿತ್ತು. ಅದು ಅವರ ತಿಳುವಳಿಕೆಗೆ ಬಂದಾಗ, ಅವರ ಆತ್ಮೀಯರಲ್ಲೊಬ್ಬರಲ್ಲಿ ಹೇಳಿ ಅತ್ತುಬಿಟ್ಟರಂತೆ". , "ಮೂರನೆಯ ಬಾರಿ ಅವರು ಇಲೆಕ್ಷನಿಗೆ ನಿಂತ ನಂತರ ಅವರಿಗೆ ಕಾಸರಗೋಡಲ್ಲಿ ಉಳಿಯುವ ಮನಸ್ಸಾಗಲಿಲ್ಲ. ತನ್ನ ಜನರೇ ತನಗೆ ತಿರುಗಿ ನಿಂತರೆಂದಾಗ ಮಂಗಳೂರಿಗೆ ಹೋಗುವ ಅಭಿಪ್ರಾಯ ತಳೆದರು. ಸಾಲವೂ ಆಗಿತ್ತು. ಈ ಎಲ್ಲಾ ನೋವುಗಳ ಭಾರದೊಂದಿಗೆ ಮಂಗಳೂರಿಗೆ ಬಂದೆವು. ಆದರೂ ಕಾಸರಗೋಡಿನ ಅವರ ಮೋಹ ಅವರನ್ನು ಬಿಡಲೇ ಇಲ್ಲ". (ಸುವಾಸಿನಿ ಭಂಡಾರಿ, ದಿ. ಕಳ್ಳಿಗೆ ಮಹಾಬಲ ಭಂಡಾರಿಯವರ ಧರ್ಮಪತ್ನಿ /  "ಅಣ್ಣ ಕಳ್ಳಿಗೆ" / ಗೀತಾ ಪ್ರಕಾಶನ ಕಾಸರಗೋಡು / 1994).

"ಒಂದು ವಿಭಾಗದವರು ಸಮಿತಿಯ ಹೊರಗಿದ್ದು ಖಾಡಾ ಖಾಡಿ ಹೋರಾಡಿದರೆ ಮತ್ತೊಂದು ವಿಭಾಗದವರು ಸಮಿತಿಯ ಒಳಗೇ ಪರಕಾಯ ಪ್ರವೇಶ ಮಾಡಿ ಪ್ರಚ್ಛನ್ನ ಯುದ್ಧಕ್ಕೆ ಸಿದ್ಧರಾಗುತ್ತಿದ್ದರು. ಭಂಡಾರಿಯವರು ಚುನಾವಣೆಗೆ ನಿಂತರೆ ಸೋಲಿಸುವುದು ಸಾಧ್ಯವಿಲ್ಲವೆಂದರಿತವರು ಅವರನ್ನು ಸ್ಪರ್ಧೆಗೇ ಇಳಿಯದಂತೆ ಮಾಡಲು ಶಕುನಿ ನೀತಿಯನ್ನನುಸರಿಸಲು ನಾಚಲಿಲ್ಲ. ಹೇಸಲಿಲ್ಲ. ಪರಿಣಾಮವಾಗಿ ಕರ್ನಾಟಕ ಸಮಿತಿ, ಕನ್ನಡ ಚಳವಳ ದುರ್ಬಲವಾಗಿ ನಾಮ್ ಕೆ ವಾಸ್ತೆಯಾಗುತ್ತಿರುವುದನ್ನು ಕಂಡು ಭಂಡಾರಿಯವರ ಮನಸ್ಸಿಗೆ ತೀವ್ರ ಆಘಾತವಾಯಿತು". (ದಿ. ಗಣಪತಿ ದಿವಾಣ / "ಅಣ್ಣ ಕಳ್ಳಿಗೆ")

ಕೃತಿಯಲ್ಲಿ ಕಂಡುಬರುವ ಇನ್ನೊಂದು ಗೊಂದಲದ ವಿಷಯವೆಂದರೆ, ಪುಟ 44ರಲ್ಲಿ ಪ್ರಸ್ತಾಪಿಸಿರುವ "ಕಳ್ಳಿಗೆ ಮಹಾಬಲ ಭಂಡಾರಿ ಮೆಮೋರಿಯಲ್ ಟ್ರಸ್ಟ್" ಮತ್ತು   "ಕಳ್ಳಿಗೆ ಪುಣ್ಯ ದಿನಾಚರಣೆ" ಬಗ್ಗೆ. ಲೇಖಕರ ಉಲ್ಲೇಖ ಹೀಗಿದೆ:

"ಕಾಸರಗೋಡಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾಬಲ ಭಂಡಾರಿಗಳ ನಿಧನಾನಂತರ ಅವರ ಗೌರವಕ್ಕೆ ತಕ್ಕುದಾದ ಒಂದು ಸ್ಮಾರಕವನ್ನು ರಚಿಸಬೇಕೆಂದು ಅವರ ಅಭಿಮಾನಿಗಳೂ ಒಡನಾಡಿಗಳೂ ಹಿರಿಯ ನೇತಾರರೂ ಅಭಿಪ್ರಾಯಪಟ್ಟರು. ಅದಕ್ಕಾಗಿ 16 - 05 - 1978ರಂದು ನಡೆದ ಸಭೆಯಲ್ಲಿ "ಕಳ್ಳಿಗೆ ಮಹಾಬಲ ಭಂಡಾರಿ ಮೆಮೋರಿಯಲ್ ಟ್ರಸ್ಟ್" ರೂಪಿತವಾಯಿತು. ದಿ. ಕಳ್ಳಿಗೆಯವರ ಜೀವನಾದರ್ಶಗಳಿಗೆ ತಕ್ಕುದಾದ ಒಂದು ಶಾಶ್ವತ ಸ್ಮಾರಕವನ್ನು ಸ್ಥಾಪಿಸುವುದೇ ಟ್ರಸ್ಟಿನ ಪ್ರಧಾನ ಗುರಿಯಾಗಿತ್ತು. ಮೊದಲ ಪುಣ್ಯ ದಿನಾಚರಣೆಯನ್ನು ತುಂಬ ಅದ್ದೂರಿಯಿಂದಲೇ ಆಚರಿಸಲಾಯಿತು" ಎಂದು ಬರೆದ ಲೇಖಕರು, ಮುಂದುವರಿಯುತ್ತಾ , "ಅವರ ಅಭಿಮಾನಿಗಳಲ್ಲಿ ಕೆಲವರು, ಮುಖ್ಯವಾಗಿ ದಿ. ಎಂ. ಗಂಗಾಧರ ಭಟ್, ಸಿರಿಗನ್ನಡ ಪ್ರೆಸ್ಸಿನ ಎಂ. ವೆಂಕಟಕೃಷ್ಣಯ್ಯ ಮತ್ತು ಎಂ. ವಿ. ಬಳ್ಳುಳ್ಳಾಯ ಮೊದಲಾದವರು ಸೇರಿಕೊಂಡು ಮುಂದಿನ ಕೆಲವು ವರ್ಷಗಳ ಕಾಲ ಪುಣ್ಯ ದಿನಾಚರಣೆಗಳನ್ನು ನಡೆಸುತ್ತಾ ಬಂದರು" ಎಂದು ಬರೆದಿದ್ದಾರೆ.

ಈ ನಡುವೆ ; ಟ್ರಸ್ಟ್ , ದಿ. ಕಳ್ಳಿಗೆಯವರ ಹೆಸರಿನಲ್ಲಿ ನಿಧಿ ಸಂಗ್ರಹಿಸಿದ್ದನ್ನು ಮತ್ತು ಬಳಿಕ ಆ ನಿಧಿ ಕಾಣದಂತೆ ಮಾಯವಾದುದನ್ನು ಲೇಖಕರು ಇಲ್ಲಿ ಬರೆಯಬಹುದಿತ್ತು. ಇದನ್ನು ಲೇಖಕರು ಇಲ್ಲಿ ಬರೆದಿಲ್ಲ. ಲೇಖಕರೇ ಬರೆದಂತೆ, "ಶಾಶ್ವತ ಸ್ಮಾರಕವನ್ನು ಸ್ಥಾಪಿಸುವುದೇ ಟ್ರಸ್ಟಿನ ಪ್ರಧಾನ ಗುರಿಯಾಗಿತ್ತು". ಆದರೆ ಟ್ರಸ್ಟ್ ಸ್ಥಾಪನೆಯಾಗಿ ಈಗಾಗಲೇ 42 ವರ್ಷಗಳೇ ಕಳೆಯಿತು. ಆದರೂ ಶಾಶ್ವತ ಸ್ಮಾರಕವೊಂದು ಇನ್ನೂ ಸಹ ರಚನೆ ಆಗದೇ ಇರುವ ಬಗ್ಗೆ  ಲೇಖಕರು ಇಲ್ಲಿ ಬರೆಯಬಹುದಿತ್ತು. ಆದರೆ ಬರೆದಿಲ್ಲ. ಅಂದು ರೂಪಿತವಾದ ಟ್ರಸ್ಟ್ ಈಗ ಇದೆಯೋ, ಇಲ್ಲವೋ ಎಂಬ ಬಗ್ಗೆಯೂ ಲೇಖನದಲ್ಲಿ ಪ್ರಸ್ತಾಪವಿಲ್ಲ. ಆರಂಭದಲ್ಲಿ ಟ್ರಸ್ಟ್ ವತಿಯಿಂದಲೇ ಕಳ್ಳಿಗೆಯವರ ಪುಣ್ಯ ದಿನಾಚರಣೆಯನ್ನು ಆಚರಿಸಲಾಯಿತೆಂದೂ, ಬಳಿಕ ಎಂ. ಗಂಗಾಧರ ಭಟ್, ವೆಂಕಟಕೃಷ್ಣಯ್ಯ, ಎಂ. ವಿ. ಬಳ್ಳುಳ್ಳಾಯ ಮೊದಲಾದವರು ಸೇರಿಕೊಂಡು ಪುಣ್ಯ ದಿನಾಚರಣೆಗಳನ್ನು ನಡೆಸುತ್ತಾ ಬರಲಾಯಿತೆಂದೂ ಬರೆಯಲಾಗಿದೆ. ಇಲ್ಲಿಯೂ  ಟ್ರಸ್ಟ್ ಕಾಣದಂತೆ ಮಾಯವಾಗಿರುವುದು ಇತ್ಯಾದಿಗಳೆಲ್ಲವೂ ಗೊಂದಲವನ್ನು ಮೂಡಿಸುತ್ತದೆ. ಟ್ರಸ್ಟಿನಲ್ಲಿ ಯಾರೆಲ್ಲಾ ಇದ್ದರು, ಶಾಶ್ವತ ಸ್ಮಾರಕ ಯಾಕಾಗಿ ರಚನೆಯಾಗಿಲ್ಲ, ಪುಣ್ಯ ದಿನಾಚರಣೆಯನ್ನು ಸಹ ನಡೆಸಿಕೊಂಡು ಬರಲು ಟ್ರಸ್ಟಿ ಯಾಕೆ ಆಸಕ್ತಿ ವಹಿಸಲಿಲ್ಲ, ಟ್ರಸ್ಟಿ ಸಂಗ್ರಹಿಸಿದ ನಿಧಿ ಎಲ್ಲಿಗೆ ಹೋಯಿತು ಎಂಬಿತ್ಯಾದಿ ವಿಷಯಗಳನ್ನು ಲೇಖನದಲ್ಲಿ ಉಲ್ಲೇಖಿಸುತ್ತಿದ್ದರೆ ಕಳ್ಳಿಗೆಯವರಿಗೆ ನ್ಯಾಯ ಒದಗಿಸಿದಂತೆ ಆಗುತ್ತಿತ್ತು.

ಕಾಸರಗೋಡಿನ ಪ್ರತಿಯೋರ್ವ ಕನ್ನಡಿಗನೂ ಕಾಸರಗೋಡಿನ ಕನ್ನಡ ಪರ ಚಳುವಳಿಗೆ ಸಂಬಂಧಿಸಿದಂತೆ ಮೊತ್ತ ಮೊದಲು ಸ್ಮರಿಸಬೇಕಾದ ಹೆಸರೇ ಕಳ್ಳಿಗೆ ಮಹಾಬಲ ಭಂಡಾರಿಗಳದು. ಇವರ ಜೊತೆಗೆ ಮುಖ್ಯವಾಗಿ; 1956ರ "ಕಾಸರಗೋಡು ಸಮಾಚಾರ" ಮತ್ತು "ನಾಡಪ್ರೇಮಿ" ಪತ್ರಿಕೆಗಳನ್ನು, "ಸಿರಿಗನ್ನಡ ಮುದ್ರಣಾಲಯ" ದ ದಿ.  ಎಂ. ವೆಂಕಟಕೃಷ್ಣಯ್ಯರನ್ನು ಹಾಗೂ ಕೇರಳ ಪೊಲೀಸರ ಗುಂಡಿಗೆ ಬಲಿಯಾದ ಶಾಂತಾರಾಮ - ಸುಧಾಕರ ಎಂಬಿಬ್ಬರು ಆ ಕಾಲದ ಬಾಲಕರನ್ನು. ದೌರ್ಭಾಗ್ಯವೆಂದರೆ, ಇವರಾರನ್ನೂ ಕಾಸರಗೋಡಿನ ಹಾಲಿ ಕನ್ನಡ ಪರ ಸಂಘ ಸಂಸ್ಥೆಗಳು ಮತ್ತು ನಾಯಕರು ಸ್ಮರಿಸದೇ ಮರೆತಿರುವುದು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ, ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಒಂದು ಬಾರಿ ಕೇರಳ ವಿಧಾನಸಭೆಗೆ ಕಾಸರಗೋಡಿನ ಕನ್ನಡಪರ ಚಳುವಳಿಯ ನಾಯಕರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕಳಿಸಿದ ಕನ್ನಡಾಭಿಮಾನಿ ಮತದಾರರಿದ್ದಾಗ, ಈ ಒಂದು ಭಾಗ್ಯವನ್ನು ಮುಂದುವರಿಸದೆ, ಈ ಭಾಗ್ಯಕ್ಕೆ ತಡೆಹಾಕಿದ ಅಂದಿನ ಕರ್ನಾಟಕ ಸಮಿತಿಯ ನೇತಾರರು ಕಾಸರಗೋಡಿನ ಕನ್ನಡಿಗರಿಗೆ ಶಾಶ್ವತವಾದ ದ್ರೋಹವನ್ನು ಎಸಗಿದರು ಎಂಬುದು ಈ ಕೃತಿಯನ್ನು ಓದುವಾಗ ಮನದಟ್ಟಾಗುವ ಒಂದು ಮಹತ್ವದ ಅಂಶವಾಗಿದೆ. 

~ *ಶ್ರೀರಾಮ ದಿವಾಣ*