ಕಾಸಿಗಾಗಿ ಕಾತುರ

ಕಾಸಿಗಾಗಿ ಕಾತುರ

 
          ಅಂದು ಭಾನುವಾರ, ಬೆಳಗ್ಗೆ ಎದ್ದು ಟೀ ಕುಡಿಯುತ್ತ ಬೆಳಗಿನ ವಾರ್ತೆಯನ್ನು ನೋಡುತಿದ್ದೆ , ಎರಡು ದಿನಗಳ ಹಿಂದಷ್ಟೇ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಹಿನ್ನೆಲೆಯಲ್ಲಿ ಚಲಾವಣೆಯಲ್ಲಿದ್ದ ಐದುನೂರು ಹಾಗು ಒಂದುಸಾವಿರ ರೂಪಾಯಿಗಳ ನೋಟುಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿ ಮತ್ತು ಇದರಿಂದ ದೇಶದೆಲ್ಲೆಡೆ ಜನರು ತಮ್ಮ ತಮ್ಮ ದೈನಂದಿನ ಖರ್ಚುಗಳಿಗಾಗಿ ೧೦೦ ಮತ್ತು ೨೦೦೦ ಹೊಸ ನೋಟುಗಳಿಗೋಸ್ಕರ ಹತ್ತಿರದ ಬ್ಯಾಂಕ್ ಹಾಗು ಎಟಿಎಂಗಳಿಗೆ ಮುಗಿಬೀಳುತ್ತಿರುವ ಸುದ್ದಿ ಟೀಯಷ್ಟೇ ಬಿಸಿ ಬಿಸಿಯಾಗಿತ್ತು.
          ಈ ಪ್ರಕಟಣೆ ಹೊರಡಿಸಿದ ರಾತ್ರಿ ನನ್ನ ಜೇಬಿನಲ್ಲಿ  ಸ್ವಲ್ಪ ಬಿಡಿಗಾಸು ಇದ್ದುದರಿಂದ  ನಾನು ಎಟಿಎಂಗೆ ಹೋಗಿ ಇನ್ನಷ್ಟು ಹಣ ತರುವ ಕೆಲಸ ಮಾಡಿರಲಿಲ್ಲ. ಭಾನುವಾರದಂದು ಸ್ನೇಹಿತರೆಲ್ಲರೂ  ಕೂಡಿ ಹೊರಗಡೆ ಹೋಗೋಣವೆಂದು ನಿಶ್ವಯಿಸಿದ್ದೆವು ಆದ್ದರಿಂದ ದುಡ್ಡಿನ ಅವಶ್ಯಕತೆ ಇತ್ತು. ಆದರೆ ವಾಲೆಟ್ನಲ್ಲಿ ದುಡ್ಡಿರಲಿಲ್ಲ. ದೂರದರ್ಶನದಲ್ಲಿನ  ವಿಷಯ ನೋಡಿ ನೆನ್ನೆಯ ಅಪ್ಪನ ಮಾತು ನೆನಪಿಗೆ ಬಂತು, ಸಾಮಾನ್ಯವಾಗಿ ಭಾನುವಾರದಂದು ನಾನು ಹೊರಗೆ ಹೋಗುವನೆಂದು ಮನೆಯವರಿಗೆಲ್ಲ ಗೊತ್ತಿರುವ ವಿಷಯವಾದ್ದರಿಂದ ನೆನ್ನೆ ರಾತ್ರಿಯೇ ಅಪ್ಪ " ಇದು ಒಂತರ ತುರ್ತು ಪರಿಸ್ಥಿತಿ ಇದ್ದ ಹಾಗೆ ,ಒಮ್ಮೆಗೆ ಎದ್ವಾ ತದ್ವಾ ವಹಿವಾಟುಗಳು ಬಂದುದರಿಂದ ಶನಿವಾರ ಮತ್ತು ಭಾನುವಾರ ಬ್ಯಾಂಕ್ ಗಳು ತೆರೆದಿರುತ್ತವೆ. ನಿನಗೇನಾದ್ರು ದುಡ್ಡು ಬೇಕಿದ್ದರೆ ಈವಾಗಲೇ ಹೋಗಿ ತೊಗೊಂಡು ಬಾ ರಶ್ ಕಮ್ಮಿ ಇದೆ " ಅಂತ ಎಚ್ಚರಿಸಿದ್ದರು. "ಬಿಡಪ್ಪ ಡೆಬಿಟ್ ಕಾರ್ಡ್ ಇದೆಯಲ್ಲ ನಡೆಯುತ್ತದೆ " ಎಂದು ಹೇಳಿದ್ದೆ.  ಆದರೆ ಈಗ ವಾಲೆಟ್ ನಲ್ಲಿ ಸ್ವಲ್ಪವೂ ಹಣ ಇಲ್ಲದುದ್ದು ಕಂಡು ದೊಡ್ಡೋರು ಹೇಳೋ ತರ ಬಾಯಾರಿಕೆ ಅದಾಗಲೇ  ಬಾವಿ ತೋಡುದ್ರು ಅನ್ನೋಹಾಗೆ ಎಟಿಎಂಗೆ ಹೋಗಲೇಬೇಕಾದ ಪರಿಸ್ಥಿತಿ ಬಂದೊದಗಿತು. 
           ಬೇಗ ಬೇಗ ತಯಾರಾಗಿ ಎಟಿಎಂಗೆ  ಹೊರಟೆ, ಮನೆಯ ಹತ್ತಿರ ನಾಲ್ಕೈದು ಎಟಿಎಂಗಳು ಇದ್ದವು. ಎಲ್ಲಿನೋಡಿದರು ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸೈನ್ಯ ನಿಂತಂತೆ ಜನರು ಜಮಾಯಿಸಿದ್ದರು. ಇದನ್ನು ನೋಡಿ ತಲೆ ತಿರುಗಿದಂತಾದರೂ ವಿಧಿಯಿಲ್ಲದೆ ಒಂದು ಕ್ಯೂನಲ್ಲಿ ನಾನೂ  ನಿಂತೆ. ಕಾಸಿಗಾಗಿ ಕಾತುರದಿ ಕಾಯುತ್ತಿದ್ದ ಜನರನ್ನು ನೋಡಿ
ಜೊತೆಗೆ ನನ್ನ ಪರಿಸ್ಥಿತಿಯನ್ನು ನೆನೆದು ಕೆಂಡಾಮಂಡಲವಾಗುವಷ್ಟು ಕೋಪ ಬಂತು. ಆದರೂ ಇದು ದೇಶಕ್ಕಾಗಿ ಒಂದು ಒಳ್ಳೆಯ ನಿರ್ಧಾರ ಇದನ್ನು ಬೆಂಬಲಿಸಬೇಕು ಎಂದು ಗಟ್ಟಿ ಮನಸ್ಸಿನಿಂದ ನನ್ನನ್ನು ನಾನೆ ಸಮಾಧಾನ ಮಾಡಿಕೊಂಡು ನನ್ನ ಸರದಿಗಾಗಿ ಕಾಯುತಿದ್ದೆ .ದುರದೃಷ್ಟವಶಾತ್ earphoneನನ್ನು  ಮರೆತಿದ್ದರಿಂದ ಲೋಕದಲ್ಲಿನ ಆಗುಹೋಗುಗಳ ಬಗ್ಗೆ ಗಮನ ಹರಿಸಲು ಸಮಯ ತಾನಾಗೇ  ಬಂದೊದಗಿತ್ತು . 
          ಸಾಲ ಹಿಂದಿರುಗಿಸುವುದಕೊಸ್ಕರ , ಔಷಧಿಯ ಖರ್ಚಿಗಾಗಿ,ಪ್ರಯಾಣಕ್ಕಾಗಿ,ಮನೆ ಬಾಡಿಗೆಗಾಗಿ ಮತ್ತು ಇನ್ನಿತರ  ಖರ್ಚುವೆಚ್ಚಗಳಿಗಾಗಿ ದುಡ್ಡನ್ನು ಪಡೆಯುವುದಕ್ಕೋಸ್ಕರ ನಿಂತಿದ್ದವರನ್ನು ನೋಡಿ ಮರುಕ ಹುಟ್ಟಿತು. ಇದಲ್ಲದೆ ಮಕ್ಕಳು ಸಹ ಈ ಸಮಯದಲ್ಲಿ ತಮ್ಮನು ತಾವು ತೊಡಗಿಸಿಕೊಂಡು ಅಪ್ಪ ಅಮ್ಮಂದಿರಿಗೋಸ್ಕರ ಬೆವರುಸುರಿಸುವುದನ್ನು ಕಂಡ ನಾನು ಹೌಹರಿದೆ. ನನ್ನ ಜೀವನದ ಅನೇಕ ಘಟನೆಗಳನ್ನು ಮೆಲುಕು ಹಾಕುತ್ತಿದ್ದೆ, ಆದನಂತರ ಮನದಲ್ಲಿ ನೆನಪಿಗೆ ಬಂದ ಹಾಡುಗಳನ್ನು ಹೇಳಿಕೊಂಡೆ, ಅತ್ತಿತ್ತವರನ್ನು ಮಾತನಾಡಿಸಿದೆ. ಹಿಂದೆ ನಡೆಯುತಿದ್ದ ಚರ್ಚೆಯಲ್ಲಿ ತೊಡಗಿಸಿಕೊಂಡೆ ಕಡೆಯಲ್ಲಿ ಸಮಯ ನೋಡಿದೆ, ಮೂರ್ಛೆಹೋಗೋದೊಂದೇ ಬಾಕಿ , ಸುಮಾರು ಎರಡು  ಘಂಟೆಯಾಗಿತ್ತು ಕ್ಯೂನಲ್ಲಿ ನಿಂತು. 
        ಬ್ಯಾಂಕ್ ನ ಸಿಬ್ಬಂದಿಯ ಪಾಡಂತೂ ತುಂಬಾ  ವಿಷಾದನೀಯವಾಗಿತ್ತು. ಇದರಮಧ್ಯ ನನ್ನ ಬಗ್ಗೆ ನನ್ನ ಸ್ನೇಹಿತರಿಗೆಲ್ಲ ಎಷ್ಟೊಂದು ಕಾಳಜಿ ಎಂಬಂತೆ ಗಂಟೆಗೆ ಮೂರು ಮೂರು ಬಾರಿ ಕರೆ ಮಾಡಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ಯಾರು ಕರೆ ಮಾಡಿದರು ನನ್ನದೊಂದೇ ಉತ್ತರ "ಇನ್ನೇನು ಸ್ವಲ್ಪ ಸಮಯದಲ್ಲಿ ಅಲ್ಲಿರುತ್ತೇನೆ " ಎಂದು.
          ಕಾಲುಗಳು ಕಂಪಿಸತೊಡಗಿದವು, ಬಾಯಾರಿಕೆಯು ಉತ್ತುಂಗದಲ್ಲಿತ್ತು,ಕಣ್ಣುಗಳಿಗೆ ಕತ್ತಲೆ ಕವಿದಂತೆ ಭಾಸವಾದವು.ದುಡ್ದನ್ನು ದುಡಿಯುವುದಷ್ಟೇ ಅಲ್ಲ ಅದನ್ನು ಪಡೆಯುವುದು ಎಷ್ಟು ಕಷ್ಟ ಎಂಬುದು ಗೊತ್ತಾಯಿತು . ಇನ್ನೇನು ಬಿದ್ದೆ ಎನ್ನುವಷ್ಟರಲ್ಲಿ ಎಟಿಎಂನ ಬಾಗಿಲಿನ ಹ್ಯಾಂಡಲ್ ಹಿಡಿದೆ. ಸ್ವಲ್ಪ ನಿರಾಳವಾಯಿತು.
           ಸ್ವಲ್ಪದರಲ್ಲೇ ಎಟಿಎಂ ನ ಬಾಗಿಲು ವೈಕುಂಠದ ಬಾಗಿಲಿನ ತರ ತೆರೆದು ಒಳಗೆ ಹೋದೆ. ಸಾಕ್ಷಾತ್ ಲಷ್ಮಿ  ಸ್ವರೂಪದಂತೆ ಅಲ್ಲಿದ್ದ ಮಷೀನ್ ಕಾಣಿಸಿತು. ದುಡ್ಡನ್ನು ತೆಗೆದು ಹೊರಗೆ ಬಂದೆ ಏನನ್ನೋ ಸಾಧಿಸಿದ ಸಂತಸ ನನ್ನನ್ನು ಆವರಿಸಿತು. ಹೊರಗೆ ಬಂದು ಕ್ಯೂ ನೋಡಿದೆ ಮೊದಲಿಗಿಂತ ದುಪ್ಪಟ್ಟು ಇರುವುದನ್ನು ಕಂಡು ದಿಗ್ಬ್ರಮೆಗೊಂಡೆ. 
            ಅಲ್ಲಿಂದ ಸ್ವಲ್ಪ ದೂರ ಬರುವಷ್ಟರಲ್ಲಿ ಅಪ್ಪ ಆ ಕಡೆಯಿಂದ ಬರುತ್ತಿರುವುದು ಕಾಣಿಸಿತು ಇನ್ನು ರೋಡ್ನಲ್ಲೇ ಗೀತೋಪದೇಶ ಶುರು ಎಂದುಕೊಂಡೆ. ನನ್ನನ್ನು ಸಹ್ನೆ ಮಾಡಿ  ಕರೆದರು. ಅವರಹತ್ತಿರ ಹೋದೆ. " ಸಂಜೆ ನಾನು ಅಂಗಡಿಗೆ ದುಡ್ಡು ಕೊಡಬೇಕು ಇಗೋ ನನ್ನ ಎಟಿಎಂ ಕಾರ್ಡ್ ಈ ರಶ್ ನಲ್ಲಿ ನನ್ನ ಕೈಯಲ್ಲಿ ನಿಲ್ಲಲು ಆಗೋದಿಲ್ಲ. ನೀನೇ ತೊಗೊಂಡು ಅಮ್ಮನ ಕೈಲಿ ಕೊಟ್ಟು ಹೋಗು" ಎಂದು ಹೊರಟು ಹೋದರು. 
 
        ಅಸಹಾಯಕನಂತೆ ನಾನು ಮತ್ತೆ ಹೋಗಿ ಕ್ಯೂ ನಲ್ಲಿ ನಿಂತೆ. 
 
                                                                                                                                                                                                                                                                             - ಭರತ್