ಕಿಡಿಗೇಡಿಗಳಿಗೆ ಭರಪೂರ ಅವಕಾಶ ಮತ್ತು ವೇದಿಕೆ ಕಲ್ಪಿಸಿದ ಆಡಳಿತ ವ್ಯವಸ್ಥೆ...

ಕಿಡಿಗೇಡಿಗಳಿಗೆ ಭರಪೂರ ಅವಕಾಶ ಮತ್ತು ವೇದಿಕೆ ಕಲ್ಪಿಸಿದ ಆಡಳಿತ ವ್ಯವಸ್ಥೆ...

ಮೈಸೂರು ಪ್ರಾಂತ್ಯವೂ ಸೇರಿ ಕರ್ನಾಟಕವಾಗಿ ನಮ್ಮ ರಾಜ್ಯ ಒಟ್ಟು 1950 ರಿಂದ ಇಲ್ಲಿಯವರೆಗೆ 72 ವರ್ಷಗಳನ್ನು ಪೂರೈಸಿದೆ. ದಕ್ಷಿಣ ಭಾರತದ ಅತ್ಯಂತ ಪ್ರಮುಖ, ಶಾಂತಿ ಪ್ರಿಯ, ಸೌಮ್ಯ, ಸ್ವಲ್ಪ ಬುದ್ದಿವಂತ, ಎಲ್ಲರನ್ನೂ ಒಳಗೊಳ್ಳುವ ರಾಜ್ಯ ಎಂದು ಹೆಸರಾಗಿತ್ತು. ಕೆಲವೊಮ್ಮೆ ಸಣ್ಣ ಪುಟ್ಟ ಕೋಮು ಗಲಭೆಗಳು ಸಂಭವಿಸಿದ್ದರೂ ಉತ್ತರ ಭಾರತದ ಕೆಲವು ರಾಜ್ಯಗಳಂತೆ ಕೊಲೆ ಸುಲಿಗೆಗಳು ಆಗಿರಲಿಲ್ಲ.

ದುರಾದೃಷ್ಟವಶಾತ್ ಯಾರು ಯಾಕೆ ಹಚ್ಚಿದ ಕಿಡಿಯೋ ಗೊತ್ತಿಲ್ಲ, ಆದರೆ ಅದರ ಪರಿಣಾಮ ಕರ್ನಾಟಕದೊಳಗೆ ಆಂತರಿಕ ದಳ್ಳುರಿ ಭುಗಿಲೆದ್ದಿದೆ. ಸಣ್ಣ ಸಣ್ಣ ವಿಷಯಗಳು ದೊಡ್ಡದಾಗಿ ಹಿಂದೂ ಮುಸ್ಲಿಂ ಮೂಲಭೂತವಾದಿಗಳು ಮುನ್ನಲೆಗೆ ಬಂದು ವ್ಯವಸ್ಥೆಯನ್ನು ಹಾಳುಗೆಡಿಸುತ್ತಿವೆ. ಮಾಧ್ಯಮಗಳು ಸಾಕಷ್ಟು ಪ್ರಚಾರ ನೀಡುತ್ತಿವೆ. ಈಗ ಶಾಂತಿ ಪ್ರಿಯ ಮನಸ್ಸುಗಳಿಗೆ, ಅಭಿವೃದ್ಧಿ ಮತ್ತು ನೆಮ್ಮದಿ ಬಯಸುವ ಜನರಿಗೆ ತುಂಬಾ ಬೇಸರವಾಗುತ್ತಿದೆ.

ಹಿಜಾಬ್ ನಿಂದ ಪ್ರಾರಂಭವಾಗಿ ಹಳೆ ಹುಬ್ಬಳ್ಳಿಯ ಕಲ್ಲುಗಳ ತೂರಾಟದ ಘಟನೆಗಳು ಎಲ್ಲವೂ ಪ್ರಾರಂಭ ಮಾತ್ರ. ಮುಂದೆ ಇದು ಆಂತರಿಕ ದಂಗೆಗಳಾಗಿ ಮಾರ್ಪಡಬಹುದು. ಏಕೆಂದರೆ ಇದು ಧರ್ಮಗಳ ( ಮತಗಳ ) ನಡುವಿನ ಸಂಘರ್ಷ. ಅದು ಬೆಳೆಯುತ್ತಾ ಹೋಗುತ್ತದೆ. ಈಗ ನಮ್ಮ ಧ್ವನಿಗಳು ಹೊರಬರಬೇಕಿದೆ. ಹಿಂದೂ ಮುಸ್ಲಿಂ ಎರಡೂ ಕಡೆಯ ಪ್ರಬುದ್ಧ ಮನಸ್ಸುಗಳು ಏಕಕಾಲದಲ್ಲಿ ಈ ಪುಂಡರ ವಿರುದ್ಧ ಮಾತನಾಡಬೇಕಿದೆ. ಮುಖ್ಯವಾಗಿ ಆಯಾ ಧರ್ಮಗಳ ಧಾರ್ಮಿಕ ಮುಖಂಡರು ಮತ್ತು ಪ್ರಗತಿಪರ ಚಿಂತಕರು ದ್ವೇಷದ ವಿರುದ್ಧ ಧ್ವನಿ ಎತ್ತಿ ಕ್ಷಮಾಗುಣ ಮತ್ತು ಹೊಂದಾಣಿಕೆಯ ಮಹತ್ವವನ್ನು ತಮ್ಮ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. 

ಎಷ್ಟೊಂದು ವೈಭವದ ನಾಡು ನಮ್ಮದು. ಸಾಂಸ್ಕೃತಿಕ ನಗರ ಮೈಸೂರು, ಸಾಹಿತ್ಯದ ನಗರ ಧಾರವಾಡ, ಮಾಹಿತಿ ತಂತ್ರಜ್ಞಾನದ ನಗರ ಬೆಂಗಳೂರು, ವಿದ್ಯಾವಂತರ ನಗರ ದಕ್ಷಿಣ ಮತ್ತು ಉತ್ತರ ಕನ್ನಡ, ವೀರ ಯೋಧರ ನಗರ ಕೊಡಗು, ಚಿನ್ನದ ನಗರ ಕೋಲಾರ, ಚಿಂತಕರ ನಗರ ಶಿವಮೊಗ್ಗ, ಬಂಡಾಯ ನಗರ ಬಳ್ಳಾರಿ, ಸ್ವಾಭಿಮಾನದ ನಗರ ರಾಯಚೂರು, ರಾಜಕೀಯ ಮಹತ್ವದ ನಗರ ಹಾಸನ, ಭತ್ತದ ಕಣಜ ಕೊಪ್ಪಳ, ಕನ್ನಡದ ಮ್ಯಾಂಚೆಸ್ಟರ್‌ ದಾವಣಗೆರೆ, ತೊಗರಿಯ ನಾಡು ಕಲಬುರ್ಗಿ - ಯಾದಗಿರಿ, ಹೊಸ ನಗರ ಬಸವನ ಬಾಗಲಕೋಟೆ, ಕೋಟೆ ನಗರ ಚಿತ್ರದುರ್ಗ, ವಾಣಿಜ್ಯ ನಗರ ಹುಬ್ಬಳ್ಳಿ, ಫ್ಯಾಷನ್ ನಗರ ಮಂಗಳೂರು, ವೈವಿಧ್ಯಮಯ ನಗರ ಬೆಳಗಾವಿ, ಗೊಮ್ಮಟ ನಗರ ಬೀದರ, ಶರಣರ ಗದಗ, ಗತ ವೈಭವ ಸಾರುವ ವಿಜಯನಗರ, ಪ್ರಾಕೃತಿಕ ಸೌಂದರ್ಯದ ಚಿಕ್ಕಮಗಳೂರು, ಕಡಲತಡಿ ಉಡುಪಿ, ಕಲ್ಪ ವೃಕ್ಷದ ನಗರ ತುಮಕೂರು, ಗಡಿನಾಡು ಚಾಮರಾಜನಗರ, ಹಾಲು ಮಾವು ತರಕಾರಿಗಳ ಚಿಕ್ಕಬಳ್ಳಾಪುರ, ಪಂಚ ನದಿಗಳು ಬೀಡು ವಿಜಯಪುರ, ಗಂಡು ಮೆಟ್ಟಿನ ನಗರ ಮಂಡ್ಯ.,. ಹೀಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಜನರೂ ತಮ್ಮ ನೆಲದ ಶ್ರೇಷ್ಠ ಗುಣಗಳನ್ನು ಕೊಂಡಾಡುತ್ತಾರೆ.

ಆದರೆ ಇದೇ ಜನ ತಮ್ಮ ಪ್ರತಿನಿಧಿಗಳಾಗಿ ಹುಚ್ಚು ಕುದುರೆಗಳನ್ನು, ಊಸರವಳ್ಳಿಗಳನ್ನು, ಬೀದಿ ನಾಯಿಗಳನ್ನು, ನರಿಗಳನ್ನು, ಜಿಗಣೆಗಳ ಲಕ್ಷಣಗಳನ್ನು ಹೋಲುವ ವ್ಯಕ್ತಿಗಳನ್ನು ಮತ್ತೆ ಮತ್ತೆ ಚುನಾಯಿಸಿ ಕಳುಹಿಸುತ್ತಾರೆ. ಅವರು ಇಡೀ ರಾಜ್ಯದ ಮಾನ ಮರ್ಯಾದೆಯನ್ನು ಹರಾಜಾಕುತ್ತಾರೆ. ಅವರ ತಾಳಕ್ಕೆ ತಕ್ಕಂತೆ ಮಾಧ್ಯಮಗಳು ಕುಣಿಯುತ್ತವೆ. ಎಲ್ಲಿ ಹೋಯಿತು ಆ ನಿಮ್ಮ ವಿವೇಚನೆ, ಸಂವೇದನೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾರುತ್ತಾ ಮಂಗನಾಟವಾಡುವ ವ್ಯಕ್ತಿಗಳನ್ನು ಜೈಕಾರ ಹಾಕಿ ಮತ್ತೆ ಮತ್ತೆ ಚುನಾಯಿಸುವ ನಿಮ್ಮ ಬುದ್ಧಿಶಕ್ತಿಗೆ ಏನಾಗಿದೆ.  

ಹೌದು, ಎಲ್ಲರಿಗೂ ಮಹತ್ವಾಕಾಂಕ್ಷೆ ಇರುತ್ತದೆ. ಕೇವಲ ರಾಜಕಾರಣಿಗಳಿಗಷ್ಟೇ ಅಲ್ಲ, ಸಿನಿಮಾ, ಸಾಹಿತ್ಯ, ಸಂಗೀತ, ಕ್ರೀಡೆ, ವಿಜ್ಞಾನ, ವ್ಯಾಪಾರ, ಉದ್ಯಮ ಮುಂತಾದ ಎಲ್ಲಾ ಕ್ಷೇತ್ರದಲ್ಲೂ ಮಹತ್ವದ್ದನ್ನು ಸಾಧಿಸುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕೆ ಒಂದು ನೀತಿ ನಿಯಮ ಮಿತಿ ಇರಬೇಕಲ್ಲವೇ ? ನಾಗರಿಕ ಸಮಾಜದಲ್ಲಿ, ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ, ಪ್ರಜಾಪ್ರಭುತ್ವದ ಮಾರ್ಗದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಲ್ಲವೇ ?

ಕನಿಷ್ಠ ಮಟ್ಟದ ಪ್ರಾಮಾಣಿಕತೆ, ನಿಷ್ಠೆ, ಸೌಜನ್ಯ, ಮಾನವೀಯತೆ ಇರಬೇಕಲ್ಲವೇ ? ಚುನಾವಣೆಯಲ್ಲಿ ಗೆಲ್ಲಲು ಕೋಮು ಗಲಭೆ ಸೃಷ್ಟಿಸಿದರೆ ನಮ್ಮ ಮಕ್ಕಳ ಭವಿಷ್ಯದ ಗತಿ ಏನು ? ಎಲ್ಲರಿಗೂ ತಿಳಿದಿದೆ, ಸರ್ಕಾರಿ ಶಿಕ್ಷಣ ಕೇಳುವವರಿಲ್ಲ, ಖಾಸಗಿ ಶಿಕ್ಷಣ ಅವರು ಕೇಳಿದಷ್ಟು ನಾವು ಕೊಡಬೇಕಿದೆ. ಆಹಾರ ವಿಷಯುಕ್ತವಾಗಿದೆ. ವೈದ್ಯಕೀಯ ಚಿಕಿತ್ಸೆ ಭಯ ಹುಟ್ಟಿಸುತ್ತಿದೆ. ಕೊಲೆಗಳು, ವಂಚನೆಗಳು, ಅಪಘಾತಗಳು ಸಹಜವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ನಮ್ಮನ್ನು ನಮ್ಮ ಬೇಡಿಕೆಗಳನ್ನು ಸಮರ್ಥವಾಗಿ ಪ್ರತಿನಿಧಿಸಬೇಕಾದ ಈ ಕಿರಾತಕರು ರಾಕ್ಷಸ ರೂಪ ಪಡೆದರೆ, ಕೋಮು ಧ್ರುವೀಕರಣ ರಾಜಕೀಯಕ್ಕೆ ಶರಣಾದರೆ ನಮ್ಮ ಗತಿ ಏನು ?

ಅವರೇನೋ ಮಂತ್ರಿಯೋ, ಶ್ರೀಮಂತರೋ, ಮಾಜಿ ಶಾಸಕನೋ ಆಗಬಹುದು. ಆದರೆ ಈ ಐದು ವರ್ಷಗಳ ಅಪೂರ್ವ ಸಮಯ ಮತ್ತೆ ಬರುತ್ತದೆಯೇ ? ನಮ್ಮ ಜೀವಿತದ ಈ ಕಾಲವನ್ನು ನಮಗೆ ಮತ್ತೆ ವಾಪಸ್ಸು ಕೊಡುವವರು ಯಾರು ? ರಾಜಕೀಯ, ಶಿಕ್ಷಣ, ಆರೋಗ್ಯ ವ್ಯಾಪಾರೀಕರಣಗೊಂಡ ದಿನದಂದಲೇ ನಮ್ಮ ಸಮಾಜ ಅವನತಿಯ ಹಾದಿ ಹಿಡಿಯಿತು. ಪ್ರಜಾಪ್ರಭುತ್ವ ಅರ್ಥ ಕಳೆದುಕೊಂಡಿತು. ಈಗ ಅದರ ಅವಸಾನದ ದಿನಗಳಿಗೆ ಸಾಕ್ಷಿಯಾಗಿ ನಾವು ಕಾಯುತ್ತಾ ಇರಬೇಕಾಗಿದೆ.

ಆದರೂ ಎಲ್ಲೋ ಒಂದು ಕಡೆ ಬೆಳಕಿನ ಕಿರಣಗಳು ಕಾಣಬಹುದು. ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ಜನತೆ ಸಾಮೂಹಿಕವಾಗಿ ಒಂದು ಅಭಿಪ್ರಾಯ ಮೂಡುವಂತೆ ಮಾಡಿ ಒಬ್ಬ ಅತ್ಯುತ್ತಮ ವ್ಯಕ್ತಿ ಸಾಮಾನ್ಯನಾದರೂ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ದಿನಗಳು ಶೀಘ್ರದಲ್ಲೇ ಬರಬಹುದು. ಆಗ ನಿಜವಾದ ಪ್ರಜಾಪ್ರಭುತ್ವ ತನ್ನ ಅರ್ಥ ಪಡೆದುಕೊಳ್ಳಬಹುದು. ಈ ಕೋಮು ವಾದ ಸೌಹಾರ್ಧ ಸಮನ್ವಯವಾಗಿ ಮಾರ್ಪಡಬಹುದು. ಅದಕ್ಕಾಗಿ ಕಾಲ ಮಿಂಚುವ ಮುನ್ನ ನಾವೆಲ್ಲರೂ ಒಕ್ಕೊರಲಿನಿಂದ ಶಾಂತಿಯ ಪರವಾಗಿ ಧ್ವನಿ ಎತ್ತೋಣ. ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ