ಕಿತ್ತೂರು ರಾಣಿ ಚೆನ್ನಮ್ಮ
"ಕಿತ್ತೂರು ರಾಣಿ ಚೆನ್ನಮ್ಮಳ ಉನ್ನತೋನ್ನತ ಬಹುಮುಖಿ ವ್ಯಕ್ತಿತ್ವದ ಆಯಾಮವನ್ನು ಬಿಂಬಿಸುವ ಕಥೆ, ಕಾದಂಬರಿ, ಕವನ, ಲೇಖನ, ಸಂಶೋಧನ ಗ್ರಂಥ ಸಾಕಷ್ಟು ಬಂದಿದೆ. ಅವುಗಳಿಗೆ ಮುಡಿಯ ಮಾಣಿಕ್ಯವಾಗಿ 'ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ' ಎಂಬ ಬೃಹತ್ ಚಾರಿತ್ರಿಕ ಕಾದಂಬರಿಯನ್ನು ತಂಗಿ ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ ರಚಿಸಿದ್ದಾರೆ.
ದಾನಚಿಂತಾಮಣಿ ಅತ್ತಿಮಬ್ಬೆ, ಪಟ್ಟ ಮಹಿಷಿ ಶಾಂತಲಾ ದೇವಿ, ತಪಸ್ವಿನಿ ಅಕ್ಕಮಹಾದೇವಿ, ತೇಜಸ್ವಿನಿ ಕೆಳದಿ ಚೆನ್ನಮ್ಮ ಮೊದಲಾದವರ ಉದಾತ್ತ ಚರಿತೆಯನ್ನು ಮೈಗೂಡಿಸಿಕೊಂಡು ಬೆಳೆದು ಬಾಳಿದ ಕಿತ್ತೂರು ರಾಣಿ ಚೆನ್ನಮ್ಮಳ ಸಾಹಸಗಾಥೆಯ ಯಶೋಗೀತೆ ಈ ಕೃತಿಯಲ್ಲಿ ಮಾರ್ಮೊಳಗಿದೆ.
ಅತ್ತ ಪ್ರಬಲ ಪೋರ್ಚ್ ಗೀಸರ ದಾಳಿ ದಬ್ಬಾಳಿಕೆಗೆ ಮಣಿಯದೆ, ಕಪ್ಪಕಾಣಿಕೆ ಕೊಡದೆ ಹಗೆಗಳನ್ನು ಸೋಲಿಸಿ ಹಿಮ್ಮೆಟ್ಟಿಸಿದ ಪುಟ್ಟ ಉಲ್ಲಾಳದ ರಾಣಿ ಅಬ್ಬಕ್ಕಳ ಪರಾಕ್ರಮ ದಶದಿಕ್ಕುಗಳಲ್ಲಿ ಅನುರಣಿಸಿತು. ಇತ್ತ ಪುಟ್ಟ ಕಿತ್ತೂರು ರಾಣಿ ಚೆನ್ನಮ್ಮಳು ಬಲಿಷ್ಟ ಬ್ರಿಟೀಷರನ್ನು ಬಗ್ಗು ಬಡಿದು ರಾಜ್ಯದ ಕೀರ್ತಿಯನ್ನು ಅಜರಾಮರಗೊಳಿಸಿದಳು. ತಾನು ಆಳುವ ರಾಜ್ಯದ ವಿಸ್ತಾರಕ್ಕಿಂತಲೂ ಆಳುವವರ ದಕ್ಷತೆ, ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಸೆಟೆದು ನಿಲ್ಲಬಲ್ಲ ಸಾಮರ್ಥ್ಯ ಮುಖ್ಯ ಎಂಬುದನ್ನು ಲೋಕಕ್ಕೆ ಬಿತ್ತರಿಸಿದ ಧೀಮಂತೆ ಚೆನ್ನಮ್ಮ ರಾಣಿ. ಆಕೆಯ ಹೃದಯ ಹೂವಿನಂತೆ ಮೃದುವಿದ್ದರೂ ನಯವಂಚಕರನ್ನು ನಿಗ್ರಹಿಸುವಾಗ ವಜ್ರದಂತೆ ಕಠಿಣವೂ ಆಗಬಲ್ಲುದು. ಆದರೆ ವೈರಿಗಳನ್ನು ಶಿಕ್ಷಿಸುವಾಗಲೂ ಅಮಾಯಕರನ್ನು ಕಾಪಾಡುವ ರಾಣಿಯ ಅಂತಃಕರಣ ದಯಾರ್ದ್ರವಾಗಿರುತ್ತದೆ ಎಂಬುದನ್ನು ಕಾದಂಬರಿಯಲ್ಲಿ ಸಮಂಜಸವಾಗಿ ಚಿತ್ರಿಸಲಾಗಿದೆ.
ಲೇಖಕಿ ವಿಜಯಲಕ್ಷ್ಮಿಯವರು ಚೆನ್ನಮ್ಮ ರಾಣಿಯ ಬಹುಮುಖಿ ವ್ಯಕ್ತಿತ್ವವನ್ನು , ಸಮಾಜಮುಖಿ ಕಾಳಜಿಯನ್ನು ಓದುಗರಲ್ಲಿ ಅಚ್ಚೊತ್ತಿ ನಿಲ್ಲುವಂತೆ ನಿರರ್ಗಳ ಶೈಲಿಯಲ್ಲಿ ಪ್ರಭಾವಶಾಲಿಯಾಗಿ ಪಡಿಮೂಡಿಸಿದ್ದಾರೆ. ಬೀದರಿನ ಹಿರಿಯ ಲೇಖಕಿಯಾಗಿ ಬೆಳಗುತ್ತಿರುವ ವಿಜಯಲಕ್ಷ್ಮಿಯವರಿಗೆ ಅಭಿನಂದನೆಯೊಂದಿಗೆ ಶುಭಾಶಯವನ್ನು ತಿಳಿಸಲು ಖುಷಿ ಆಗುತ್ತದೆ" ಎಂದು ಪುಸ್ತಕದ ಬೆನ್ನುಡಿಯನ್ನು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಹಿರಿಯ ಸಾಹಿತಿ ಕಮಲಾ ಹಂಪನಾ ಇವರು.