ಕಿರಂಡಲ್ ಯಾತ್ರೆ

ಕಿರಂಡಲ್ ಯಾತ್ರೆ

ಬರಹ

ಆಂಧ್ರಪ್ರದೇಶದ ಬಂದರು ನಗರ ವಿಶಾಖಪಟ್ಟಣದಿಂದ ಚತ್ತೀಸ್‌ಗಡದ ಬೈಲಾದಿಲಾ ಗಣಿ ಪ್ರದೇಶಕ್ಕೆ ತೆರಳುವ ೪೪೫ ಕಿಲೋಮೀಟರು ದೂರದ ಕೊತ್ತವಲಸ-ಕಿರಂಡಲ್ ರೈಲು ಪ್ರಯಾಣ ಹಲವಾರು ರೋಮಾಂಚಕಾರಿ ಅನುಭವಗಳನ್ನು ನೀಡುತ್ತದೆ. ದಂಡಕಾರಣ್ಯದ ದುರ್ಗಮ ಬೆಟ್ಟಸಾಲುಗಳ ನಡುವೆ ಈ ರೈಲು ಹೊರಳುತ್ತಾ ತೆವಳುತ್ತಾ ಏರುತಗ್ಗುಗಳನ್ನು ಹತ್ತಿ ಇಳಿಯುತ್ತಾ ಐವತ್ತಕ್ಕೂ ಮಿಕ್ಕಿದ ಸುರಂಗಗಳಲ್ಲಿ ನುಸುಳುತ್ತಾ ಸಾಗುವುದೇ ಒಂದು ಅಪರೂಪದ ಅನುಭವ. ಈ ದಟ್ಟಾರಣ್ಯದ ವನಸಿರಿಯನ್ನು ದರ್ಶಿಸುತ್ತಾ ಮಜಲು ಮಜಲುಗಳಾಗಿ ಮೇಲೇರುತ್ತಾ ಇಳಿಯುತ್ತಾ ರೈಲು ಪ್ರಯಾಣ ಮಾಡುವ ಖುಷಿ ನೀಡುವ ಮುದವನ್ನು ಅನುಭವಿಸಿಯೇ ತೀರಬೇಕು.
ವಿಶಾಖಪಟ್ಟಣದಿಂದ ಹೊರಟು ಬಯಲು ಪ್ರದೇಶಗಳನ್ನು ವೇಗವಾಗಿ ಕೆಲವೇ ನಿಮಿಷಗಳಲ್ಲಿ ದಾಟುವ ಈ ರೈಲು ಅರಣ್ಯ ಪ್ರವೇಶಿಸುತ್ತಿದ್ದಂತೆ ನಿಧಾನವಾಗುತ್ತದೆ. ಕಣ್ಣಿಗೆ ರಾಚುವ ಹಸಿರೋ ಹಸಿರು ಎಲ್ಲೆಡೆ ತುಂಬಿ ಮನ ಪುಳಕಗೊಳ್ಳುತ್ತದೆ. ವಿಶಾಖದ ಅಸಹನೀಯ ಸೆಕೆ ಮಾಯವಾಗಿ ಹಿತಕರ ತಂಗಾಳಿ ಬೀಸತೊಡಗುತ್ತದೆ. ನಾವೀಗ ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಬೆಸೆಯುವ ಆದರೆ ದಕ್ಷಿಣ ಮತ್ತು ಉತ್ತರ ಭಾರತಗಳನ್ನು ಬೇರ್ಪಡಿಸುವ ಅಗಾಧ ವನರಾಶಿ, ನದಿ-ಝರಿ, ಕೊರಕಲುಗಳಿಂದ ಕೂಡಿದ ದಂಡಕಾರಣ್ಯವನ್ನು ಪ್ರವೇಶಿಸಿದ್ದೆವು.
ಭಾರತದ ಬ್ರಾಡ್‌ಗೇಜ್ ರೈಲುಮಾರ್ಗಗಳಲ್ಲೇ ಅತ್ಯಂತ ದುರ್ಗಮವೆನಿಸಿದ ಹಾಗೂ ಬರೀ ಬೆಟ್ಟ ಗುಡ್ಡಗಳಿಂದಲೇ ತುಂಬಿದ ಈ ಪ್ರದೇಶದಲ್ಲಿ ರೈಲುಹಾದಿ ನಿರ್ಮಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಬೆಟ್ಟಗಳ ಬೆನ್ನ ಮೇಲೆಯೇ ಸಪಾಟಾದ ಹಾಗೂ ಸದೃಢವಾದ ನೆಲಗಟ್ಟು ನಿರ್ಮಿಸಿ ಕಣಿವೆಗಳನ್ನು ಕೊರಕಲುಗಳನ್ನು ಸೇತುವೆಗಳಿಂದ ಬೆಸೆದು ಅನಿವಾರ್ಯವಾದ ಕಡೆಗಳಲ್ಲಿ ಸುರಂಗಗಳನ್ನು ಕೊರೆದು ರೈಲುಹಾದಿ ನಿರ್ಮಿಸಲಾಗಿದೆ. ಅದಿರು ರವಾನೆಗೆಂದೇ ನಿರ್ಮಿಸಲಾದ ಈ ರೈಲುಮಾರ್ಗದಲ್ಲಿ ಕಿರಂಡಲ್ ಎಕ್ಸ್‌ಪ್ರೆಸ್ ಎಂಬ ಏಕಮಾತ್ರ ಪ್ಯಾಸೆಂಜರ್ ರೈಲು ಓಡುತ್ತದೆ.
ರೈಲಿನ ಬೋಗಿಯೊಳಗೆ ಕಣ್ಣಾಡಿಸಿದರೆ ಅದರಲ್ಲಿ ನಾಗರಿಕ ಉಡುಪು ಧರಿಸಿದವರು ನೀವು ಮಾತ್ರವೇ. ಉಳಿದವರೆಲ್ಲ ಸೊಂಟಕ್ಕೆ ಮಾತ್ರ ಬಟ್ಟೆ ಸುತ್ತಿಕೊಂಡ ಕರಿಮೈಯ ವ್ಯಕ್ತಿಗಳು. ಹೆಂಗಸರಂತೂ ಸೀರೆಯನ್ನು ಉಡಲು ಬಾರದೆ ಸುಮ್ಮನೇ ಮೈಮೇಲೆ ಹೊದ್ದುಕೊಂಡಿದ್ದಾರೆ ಎನಿಸುತ್ತದೆ. ಅವರ ಕೇಶರಾಶಿ ಸಿಂಬೆಯಾಕಾರದಲ್ಲಿ ಒಂದು ಪಕ್ಕಕ್ಕೆ ವಾಲಿದೆ. ಅದರ ಮೇಲೆ ಎಂಥದೋ ಕಾಡಿನ ಹೂ ಗುಚ್ಛ ಅಲಂಕರಿಸಿದೆ. ಅವರು ರವಿಕೆ ತೊಟ್ಟಿಲ್ಲ. ಅವರ ಮೈಗಳಿಂದ ಎಂಥದೋ ಎಣ್ಣೆಯ ಕಮಟು ವಾಸನೆ ಸೂಸುತ್ತಿರುತ್ತದೆ. ಅರಣ್ಯದಲ್ಲಿ ಸೌದೆಗಳನ್ನು ಸೀಳಿ ಹೊರೆ ಕಟ್ಟಿ ರೈಲಿಗೆ ತಂದಿದ್ದ ಅವರು ನಾಗರಿಕ ಪ್ರಪಂಚದಿಂದ ದೂರವಿದ್ದವರು. ಅವರೆಲ್ಲ ಆಂಧ್ರ, ಒರಿಸ್ಸಾ, ಚತ್ತೀಸ್‌ಗಡಗಳಲ್ಲಿ ಹರಡಿರುವ ಬುಡಕಟ್ಟು ಜನರು. ಆ ರೈಲಿಗಿದ್ದ ಕೇವಲ ಆರೇ ಬೋಗಿಗಳಲ್ಲಿ ಒಂದರಲ್ಲಷ್ಟೇ ರೈಲು ಕಾರ್ಮಿಕರಿದ್ದರು. ಇನ್ನು ಉಳಿದವುಗಳಲ್ಲಿ ಈ ಬುಡಕಟ್ಟು ಜನರೇ ತುಂಬಿದ್ದರು. ಇವರ್‍ಯಾರೂ ರೈಲು ಪ್ರಯಾಣಕ್ಕೆ ಟಿಕೆಟ್ಟೇ ಕೊಂಡಿರುವುದಿಲ್ಲ. ಎಲ್ಲೋ ಹತ್ತಿ ಎಲ್ಲೋ ಇಳಿದು ಹೋಗುವ ಇವರು ಇಂಥ ನಿಲ್ದಾಣವೆಂಬುದಕ್ಕೇ ಕಾದವರಲ್ಲ. ಅರಣ್ಯದ ಎಲ್ಲ ಮಗ್ಗುಲುಗಳೂ ಇವರಿಗೆ ಗೊತ್ತಿವೆ. ಅವರು ಮಾತನಾಡುವ ಭಾಷೆಯೂ ವಿಚಿತ್ರವಾಗಿದೆ.
ಒಂದು ವಿಷಯ ನಾನು ಗಮನಿಸಿದೆ. ಅವರ್‍ಯಾರ ಮುಖದಲ್ಲೂ ನಗುವಿನ ಕಳೆ ಇರಲಿಲ್ಲ. ಹೊಳಪು ಕಂಗಳ ಒಂದು ಪುಟ್ಟ ಮಗುವಿನ ಗಲ್ಲ ಹಿಡಿದು ನಾನು ನಗಿಸಲೆತ್ನಿಸಿದೆ. ಆ ಮಗು ನಗುವ ಪ್ರಯತ್ನ ಮಾಡುವ ಮೊದಲೇ ಅದರ ತಾಯಿ ಸರಕ್ಕನೇ ಮಗುವನ್ನು ಹಿಂದಕ್ಕೆಳೆದುಕೊಂಡಳು. ನಾಗರಿಕ ಪ್ರಪಂಚದಿಂದ ದೂರವಿರಲು ಬಯಸುವ ಅವರಿಗೆ ಕಲ್ಮಶರಹಿತ ನನ್ನ ವರ್ತನೆ ಯಾವ ನಂಬಿಕೆಯನ್ನೂ ಹುಟ್ಟಿಸಲಿಲ್ಲ.
ಇದ್ದಕ್ಕಿದ್ದಂತೆ ರೈಲು ಸುರಂಗವೊಂದನ್ನು ಹೊಕ್ಕಿತು. ಒಂದು ನಿಮಿಷದಷ್ಟು ದೀರ್ಘಾವದಿs ನಾವು ಕತ್ತಲೆಯೊಳಗೆ ಚಲಿಸುತ್ತಿದ್ದೆವು. ಸುರಂಗದೊಳಗೆ ಮಂದ ಬೆಳಕಿನ ವಿದ್ಯುದ್ದೀಪಗಳು ಬೆಳಗುತ್ತಿದ್ದವು. ನಾನು ನಮ್ಮೂರ ಪುಟ್ಟ ಹುಡಗರನ್ನು ಕಲ್ಪಿಸಿಕೊಂಡೆ. ಈ ಸಂದರ್ಭದಲ್ಲಿ ಅವರು ಇಲ್ಲಿದ್ದಿದ್ದರೆ ರೈಲು ಸುರಂಗ ಹೊಕ್ಕ ಕೂಡಲೇ ಹೋ ಎಂದು ಕಿರುಚುತ್ತಿದ್ದರು. ಮತ್ತೆ ಬೆಳಕಿನತ್ತ ನಾವು ಹೊರಳುತ್ತಿದ್ದಂತೆ ಆ ಕೂಗು ತಾರಕಕ್ಕೇರುತ್ತಿತ್ತು. ಆದರೆ ಇಲ್ಲಿ ಅಂಥದೇನೂ ನಡೆಯಲಿಲ್ಲ.
ಮಾರ್ಗ ಮಧ್ಯೆ ಧುತ್ತೆಂದು ಎದುರಾಗುವ ಬೆಟ್ಟಕ್ಕೆ ಭಾರೀ ರಂಧ್ರ ಕೊರೆದು ಸುರಂಗ ಮಾಡಿರುತ್ತಾರೆ. ಈ ರೈಲು ಮಾರ್ಗದಲ್ಲಿ ಇಂಥ ಸುರಂಗಗಳ ಸಂಖ್ಯೆ ೫೮. ಅತಿ ಉದ್ದನೆಯ ಸುರಂಗವು ೮೬೯ ಮೀಟರು ಇದೆ. ಎಲ್ಲ ಸುರಂಗಗಳ ಒಟ್ಟು ಉದ್ದ ೧೦ ಕಿಲೋಮೀಟರು. ಕೆಲವನ್ನು ರೈಲು ಕೆಲವೇ ಕ್ಷಣಗಳಲ್ಲಿ ಹಾದುಹೋದರೆ ಇನ್ನು ಕೆಲವನ್ನು ದಾಟಲು ಒಂದೆರಡು ನಿಮಿಷಗಳ ದೀರ್ಘಾವದಿs ಬೇಕು.
ಕೊಂಕಣ ರೈಲುಮಾರ್ಗದಲ್ಲೂ ಬೆಟ್ಟ ಕೊರೆದು ಸುರಂಗ ಮಾಡಿರುವುದೇನೋ ನಿಜ. ಆದರೆ ಕಿರಂಡಲ್ ರೈಲಿನಲ್ಲಿ ಹೋಗುತ್ತಿದ್ದರೆ ನಾವು ಕಾಲಯಂತ್ರವನ್ನು ಹೊಕ್ಕಂತೆಯೇ. ಕ್ರಮೇಣ ನಾವು ಇತಿಹಾಸಪೂರ್ವದ ಕಾಲಕ್ಕೆ ಜಾರುತ್ತೇವೆ. ಆ ಆದಿವಾಸಿಗಳು, ಅವರ ಅದೇ ಪುರಾತನ ವೇಷಭೂಷಣಗಳು, ಪ್ರಾಣಿಪಕ್ಷಿಗಳೊಂದಿಗಿನ ಅವರ ಚೇಷ್ಟೆಗಳು, ಕೃತ್ರಿಮವರಿಯದ ಕನ್ಯೆಯರು ಇವೆಲ್ಲವನ್ನೂ ತೋರಿಸುತ್ತಾ, ನಿಂತು ನಿಂತು ಹೊರಡುವ ಈ ರೈಲುಪ್ರಯಾಣ ಒಂದು ಅನುಪಮ ಪ್ರದರ್ಶನಯಾತ್ರೆ ಎನ್ನಬಹುದೇನೋ? ಆದರೆ ಒಂದು ಮಾತ್ರ ನಿಜ. ಆ ಕಾಡುಜನರ ಹಾವಭಾವಗಳ ಅಧ್ಯಯನ ಮಾಡುತ್ತಾ ಇನ್ನೇನು ಅವರ ಪರಿಚಯ ಮಾಡಿಕೊಂಡು ನಿಕಟವಾಗಬಹುದು ಎನ್ನುವ ಹೊತ್ತಿಗೆ ಅವರು ಇಳಿದು ಹೋಗಿರುತ್ತಾರೆ. ನಾಟಕದ ಹೊಸ ಅಂಕದ ರೀತಿಯಲ್ಲಿ ಬೇರೆಯವರು ರೈಲಿನೊಳಕ್ಕೆ ಪ್ರವೇಶಿಸುತ್ತಾರೆ. ಹೀಗೆ ಕಾಲಯಂತ್ರದ ನಿಜವಾದ ಗ್ರಾಹಕರು ನಾವಾಗುತ್ತೇವೆ.
ಪ್ರಕೃತಿಯ ವನಸಿರಿಯನ್ನು ಆಸ್ವಾದಿಸಲು ನಾನು ಬಾಗಿಲ ಬಳಿ ಬಂದು ನಿಂತೆ. ಬೆಟ್ಟದ ಹೊರಮೈಯ ಮೇಲಿನ ವರ್ತುಲಾಕಾರದ ರೈಲು ಮಾರ್ಗದಲ್ಲಿ ರೈಲು ನಿಧಾನವಾಗಿ ಏರುತ್ತಾ ಹೋಗುತ್ತಿತ್ತು. ಕಾಡಿನ ಹಸಿನೆಲದ ಕಂಪಿನೊಂದಿಗೆ ರೈಲಿನ ಒಡಲೊಳಗಿನ ಹಸಿಸೌದೆಯ ಸ್ನಿಗ್ದ ವಾಸನೆಯೂ ಬೆರೆತು ವಾತಾವರಣ ಪ್ರಫುಲ್ಲವಾಗಿತ್ತು. ಹಾಗೆಯೇ ಬೆಟ್ಟದ ತಳದತ್ತ ಕಣ್ಣು ಹಾಯಿಸಿದೆ. ನಾವು ಸಾಗಿ ಬಂದ ರೈಲುಹಳಿ ಅನತಿ ದೂರದಲ್ಲಿ ಕೆಳಗೆ ಕಾಣುತ್ತಿತ್ತು. ಹಾಗೆಯೇ ಮೇಲೆ ದಿಟ್ಟಿಸಿ ನೋಡಿದರೆ ಅಲ್ಲೊಂದು ರೈಲು ಹಾದಿ, ಅದಕ್ಕೆ ಪೂರಕವಾದ ವಿದ್ಯುತ್ ಕಂಬ ಗೋಚರವಾಗುತ್ತಿತ್ತು. ಇದು ಎಷ್ಟಾದರೂ ಜಪಾನ್‌ನವರು ನಿರ್ಮಿಸಿಕೊಟ್ಟ ರೈಲು ಮಾರ್ಗವಲ್ಲವೇ?
ನಿಧಾನವಾಗಿ ಬುಸುಗುಡುತ್ತಾ ಏರುಮುಖಿಯಾಗಿ ಹೊರಟಿದ್ದ ನಮ್ಮ ರೈಲು ಪರ್ವತದ ನೆತ್ತಿಯಂಥ ಪ್ರದೇಶದಲ್ಲಿ ಬಂದು ನಿಂತಿತು. ಕೆಳಗಿಳಿದು ಸುತ್ತಲೂ ಕಣ್ಣಾಡಿಸಿದೆ. ಅದೊಂದು ಪುಟ್ಟ ಸ್ಟೇಷನ್. ಹೆಸರು ಸಿಮಿಲಿಗುಡ. ೨೦೦೪ರವರೆಗೆ ಆ ಸ್ಟೇಷನ್ ಭಾರತದ ಬ್ರಾಡ್‌ಗೇಜ್ ರೈಲು ಮಾರ್ಗದಲ್ಲಿನ ಅತಿ ಎತ್ತರದ ಸ್ಟೇಷನ್ (ಸಮುದ್ರಮಟ್ಟದಿಂದ ೯೯೬ಮೀಟರು) ಆಗಿತ್ತೆಂದು ಅಲ್ಲಿ ಬರೆಯಲಾಗಿತ್ತು. ಅದನ್ನು ಓದಿ ಯಾವುದೇ ಪ್ರಯಾಸವಿಲ್ಲದೆ ಎವರೆಸ್ಟ್ ಹತ್ತಿ ಬಂದಷ್ಟು ಖುಷಿಯಾಯಿತು. ಕ್ರಾಸಿಂಗ್‌ಗಾಗಿ ರೈಲು ಬಹಳ ಹೊತ್ತು ಅಲ್ಲಿ ನಿಲ್ಲಬೇಕಾಯಿತು. ಎಷ್ಟೋ ಹೊತ್ತಿನ ನಂತರ ಎದುರು ದಿಕ್ಕಿನಿಂದ ಒಂದು ರೈಲು ಬರುವುದು ಕಾಣಿಸಿತು. ನಾನು ತ್ವರಿತವಾಗಿ ನಮ್ಮ ರೈಲನ್ನೇರಿದೆ. ಎದುರಿನಿಂದ ಬಂದ ರೈಲು ಒಂದಲ್ಲ ಎರಡಲ್ಲ ಮೂರು ವಿದ್ಯುಚ್ಚಾಲಿತ ಇಂಜಿನ್ ಹೊಂದಿತ್ತು. ಅವುಗಳ ಹಿಂದೆ ಕಬ್ಬಿಣದ ಅದಿರು ತುಂಬಿದ ಸುಮಾರು ೬೦ ಭಾರೀ ವ್ಯಾಗನ್‌ಗಳು ಗಡಗಡ ಸದ್ದು ಮಾಡುತ್ತಾ ಬಂದವು. ಐದಾರು ನಿಮಿಷಗಳಷ್ಟು ದೀರ್ಘಕಾಲ ಇಡೀ ಬೆಟ್ಟವೇ ಆ ೬೪೪ ಮೀಟರುಗಳಷ್ಟು ಉದ್ದದ ರೈಲಿನಾಕಾರದಲ್ಲಿ ಸರಿದು ಹೋಗುತ್ತಿದೆಯೇನೋ ಎನ್ನುವ ಭಾವನೆ ಮೂಡಿಸಿತು. ಹೀಗೆ ಪ್ರತಿ ವರ್ಷ ೧೫ ಮಿಲಿಯನ್ ಟನ್‌ಗಳಷ್ಟು ಕಬ್ಬಿಣದ ಅದಿರು ಮಣ್ಣನ್ನು ಚತ್ತೀಸಗಡದ ಬೈಲಾದಿಲಾ ಗಣಿ ಪ್ರದೇಶದಿಂದ ವಿಶಾಖಪಟ್ಟಣ ಬಂದರಿಗೆ ತಂದು ಸುರಿಯಲಾಗುತ್ತದೆ. ಇದರಲ್ಲೊಂದು ಭಾಗ ಜಪಾನ್ ದೇಶಕ್ಕೆ ನಿರ್ಯಾತವಾಗಿ ಉಳಿದದ್ದನ್ನು ಎಸ್ಸಾರ್ ಮತ್ತು ವಿಕ್ರಮ್ ಇಸ್ಪಾಟ್ ಕಂಪೆನಿಗಳಿಗೆ ಹಾಗೂ ಇತರ ದೇಶೀಯ ಉಕ್ಕಿನ ಕಾರ್ಖಾನೆಗಳಿಗೆ ಹಂಚಲಾಗುತ್ತದೆ. ೧೯೬೬ರಲ್ಲಿ ೭೩ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಈ ರೈಲು ಮಾರ್ಗ ಇಂದು ರಾಷ್ಟಕ್ಕೆ ಪ್ರತಿವರ್ಷ ೬೦೦ ಕೋಟಿ ರೂಪಾಯಿಗಳ ಆದಾಯ ತರುತ್ತಿದೆ.
ಇಷ್ಟೆಲ್ಲಾ ಸಂತಸದ ಸಂಗತಿಗಳಿದ್ದರೂ ಪ್ರಕೃತಿ ಮಾತೆಗೆ ಮಾತ್ರ ಇದೇನೂ ಸಂತಸದ ವಿಷಯವಲ್ಲ. ಸದಾ ಆಕೆ ಮುನಿಸು ತೋರುವವಳೇ. ಇಲ್ಲಿನ ವಾತಾವರಣದ ಉಷ್ಣಾಂಶ ಚಳಿಗಾಲದಲ್ಲಿ ನಾಲ್ಕು ಡಿಗ್ರಿಯಾದರೆ ಬಿಸಿಲುಗಾಲದಲ್ಲಿ ೪೫ ಡಿಗ್ರಿ ಮೀರುತ್ತದೆ. ಮಂಜು ಮುಸುಕಿರುವಾಗಲಂತೂ ಬೆಳಗಿನ ಒಂಬತ್ತು ಗಂಟೆವರೆಗೆ ಏನೇನೂ ಕಾಣದಂಥ ಪರಿಸ್ಥಿತಿ. ಮಳೆಗಾಲವಂತೂ ಚಂಡಿಚಾಮುಂಡಿ. ವರ್ಷದ ಎಲ್ಲ ಕಾಲದಲ್ಲೂ ಮಳೆ ಆಗುವುದರಿಂದ ಈ ಪ್ರದೇಶದಲ್ಲಿ ಭೂಕುಸಿತಗಳು ಸರ್ವೇಸಾಮಾನ್ಯ. ಸುರಂಗಗಳು ಮುಚ್ಚಿಕೊಂಡಾಗ ತೆರವುಗೊಳಿಸಲು ಹಲವಾರು ವಾರಗಳೇ ಬೇಕಾಗುತ್ತವೆ. ಈ ಮಾರ್ಗದಲ್ಲಿ ಆಂಧ್ರದ ಶೃಂಗವರಪುಕೋಟದಿಂದ ಒರಿಸ್ಸಾದ ಸಿಮಿಲಿಗುಡವರೆಗಿನ ೬೭ ಕಿಲೋಮೀಟರುಗಳ ಹಾದಿ ಅತ್ಯಂತ ಕಠಿಣತಮ ಹಾದಿ. ಈ ಮಾರ್ಗ ಮಧ್ಯೆಯೇ ಹಲವಾರು ಅವಗಢಗಳು ಸಂಭವಿಸಿವೆ.
ಆಗ್ನೇಯ ರೈಲ್ವೆಯೂ ಪ್ರತಿನಿತ್ಯ ಭೂಕುಸಿತ ತಡೆಗೆಂದೇ ಹಲವಾರು ತಡೆಗಟ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇಡೀ ಕಿರಂಡಲ್ ಮಾರ್ಗದ ೫೮ ಸುರಂಗಗಳು ಮಾತ್ರವಲ್ಲದೆ ೮೪ ಹಿರಿದಾದ ಹಾಗೂ ೧೧೮೭ ಕಿರಿದಾದ ಸೇತುವೆಗಳು (ಒಂದು ಸೇತುವೆಯಂತೂ ೪೫೭ಮೀಟರು ಉದ್ದವಿದೆ) ಪೂರ್ಣ ಪ್ರಮಾಣದ ಸಂರಕ್ಷಣೆಗೆ ಸವಾಲು ಒಡ್ಡುತ್ತಲೇ ಇರುತ್ತವೆ. ರೈಲ್ವೆ ಸಿಬ್ಬಂದಿ ರೈಲು ಹಳಿಗುಂಟ ಮಾತ್ರವಲ್ಲದೆ ಆಸುಪಾಸಿನ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು ಸಣ್ಣ ಪ್ರಮಾಣದ ಕಲ್ಲಿನ ಜರುಗುವಿಕೆಯನ್ನೂ ತಪಾಸಿಸುತ್ತಾರೆ.
ಇವೆಲ್ಲ ಪ್ರಕೃತಿಮಾತೆಯನ್ನು ಹದ್ದುಬಸ್ತಿನಲ್ಲಿ ಇಡುವುದಕ್ಕಾಯಿತು. ಆದರೆ ರೈಲ್ವೆಗೆ ತನ್ನದೇ ಆದ ದೈತ್ಯ ಗೂಡ್ಸ್ ಗಾಡಿಯನ್ನು ಸಂಭಾಳಿಸುವುದೂ ದೊಡ್ಡ ತಲೆನೋವಾಗಿದೆ. ಅಗಾಧ ಭಾರ ಹೊರುವ ಈ ಗಾಲಿಗಳೂ ಅಚ್ಚುಗಳೂ ಯಾವಾಗ ಮುರಿದೀತೆಂಬ ಕಲ್ಪನೆಯೇ ಇರುವುದಿಲ್ಲ. ಘಟ್ಟ ಇಳಿವ ಇಳಿಜಾರಿನಲ್ಲಿ ಹೊರೆ ಹೊತ್ತ ರೈಲಿಗೆ ತಡೆ ಹಾಕುವುದೇನೂ ಸುಲಭದ ಮಾತಲ್ಲ. ರೈಲ್ವೆ ಅದಕ್ಕೂ ಒಂದು ಉಪಾಯ ಕಂಡುಕೊಂಡಿದೆ. ಇಳಿಜಾರಿಗೆ ಸಮಾಂತರದಲ್ಲಿಯೇ ಏರುಮುಖದ ರೈಲು ಮಾರ್ಗ ನಿರ್ಮಿಸಿ ರೈಲುಗಾಡಿಯೇನಾದರೂ ಮಿತಿಮೀರಿದ ವೇಗದಲ್ಲಿ ಕೆಳಕ್ಕೆ ಧಾವಿಸುತ್ತಿದ್ದರೆ ತನ್ನಿಂತಾನೇ ಮಾರ್ಗ ಬದಲಿಸಿ ಏರು ಹಾದಿ ಹಿಡಿಯುವಂತೆ ತಂತ್ರಜ್ಞಾನ ರೂಪಿಸಲಾಗಿದೆ. ಆಗ ರೈಲು ಕ್ರಮೇಣ ತಾನೇ ತಹಬದಿಗೆ ಬಂದು ನಿಲ್ಲುತ್ತದೆ. ಹೇಗಿದೆ ಉಪಾಯ?
ಒರಿಸ್ಸಾದ ದಾಮನ್‌ಜೋಡಿ ಬಾಕ್ಸೈಟ್ ಗಣಿ ಪ್ರದೇಶದ ನಾಲ್ಕೊ ಕಂಪೆನಿಯವರು ತಮ್ಮ ಅಲ್ಯುಮಿನಿಯಂ ಲೋಹದದಿರನ್ನು ಸಾಗಿಸಲು ಮತ್ತೊಂದು ಉಪಾಯವನ್ನೇ ಕಂಡುಕೊಂಡಿದ್ದಾರೆ. ಅವರ ಲೋಹದದಿರನ್ನು ದಾಮನ್‌ಜೋಡಿಯಲ್ಲೇ ಸಂಸ್ಕರಿಸಿ ೧೮ ಕಿಲೋಮೀಟರು ದೂರದ ಕೋರಾಪುಟ್‌ವರೆಗೆ ಅವರದೇ ರೈಲು ವ್ಯಾಗನ್‌ಗಳಲ್ಲಿ ತಂದು ಸುರಿಯಲಾಗುತ್ತದೆ. ಅಲ್ಲಿ ಆ ಸಂಸ್ಕರಿಸಿದ ಅದಿರನ್ನು ನೀರಿನಲ್ಲಿ ಕಲಸಿ ಕೆಸರಂತೆ ಮಾಡಿ ಕೊಳವೆ ಮಾರ್ಗದಲ್ಲಿ ಕೆಳಮಟ್ಟದಲ್ಲಿರುವ ವಿಶಾಖಪಟ್ಟಣಕ್ಕೆ ರವಾನಿಸಲಾಗುತ್ತದೆ. ಖರ್ಚೂ ಕಡಿಮೆ, ಅವಗಢವೂ ಇಲ್ಲ, ನಿಸರ್ಗಕ್ಕೂ ಹಾನಿಯಿಲ್ಲ. ಹೇಗಿದೆ ಈ ಉಪಾಯ?