ಕಿರಗೂರಿನ ಗಯ್ಯಾಳಿಗಳು

ಕಿರಗೂರಿನ ಗಯ್ಯಾಳಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು
ಪುಸ್ತಕದ ಬೆಲೆ
ರೂ.69/-

ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು ಭಾಷೆಗಳಿಗೆ ಅನುವಾದವಾಗಿದೆ.

ಮಲೆನಾಡಿನ ಮೂಲೆಯ ಹಳ್ಳಿ ಕಿರಗೂರು. ಅಲ್ಲಿನ ಆಗುಹೋಗುಗಳ ಕಥನ “ಕಿರಗೂರಿನ ಗಯ್ಯಾಳಿಗಳು”. ತೇಜಸ್ವಿಯವರು ಮೂಡಿಗೆರೆಯ ಹತ್ತಿರ ಕಾಫಿ ಎಸ್ಟೇಟಿನಲ್ಲಿ ವಾಸಿಸುತ್ತಾ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದವರು. ಹಳ್ಳಿ ಬದುಕಿನ ಸೂಕ್ಷ್ಮ ಅವಲೋಕನದಿಂದಾಗಿಯೇ ಅವರಿಗೆ ಇಂತಹ ಕತೆ ಬರೆಯಲು ಸಾಧ್ಯವಾಗಿದೆ. ಅರಣ್ಯ ಇಲಾಖೆ, ರೆವಿನ್ಯೂ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಮತ್ತು  ಸಿಬ್ಬಂದಿ, ಅವರ ಭ್ರಷ್ಟಾಚಾರ, ಅವರು ಹಳ್ಳಿಯ ಜನರನ್ನು ಹೆದರಿಸುವ, ಸುಲಿಯುವ, ಶೋಷಿಸುವ ಪರಿ; ಹಳ್ಳಿಯ ಜಾತಿ ರಾಜಕೀಯ; ಮದ್ಯದ ದಾಸರಾಗುವ ಹಳ್ಳಿಗರು; ಗಂಡಸರಿಂದ ಹೆಂಗಸರ ಶೋಷಣೆ, ಅದರ ವಿವಿಧ ಆಯಾಮಗಳು - ಇವನ್ನೆಲ್ಲ ನಮ್ಮ ಕಣ್ಣಿಗೆ ಕಟ್ಟುವಂತೆ ಈ ಕತೆಯಲ್ಲಿ ಚಿತ್ರಿಸಲಾಗಿದೆ. ಕತೆಯ ಮುಕ್ತಾಯದಲ್ಲಿ ಹಳ್ಳಿಯ ಹೆಂಗಸರು “ಅಬಲೆಯರು" ಎಂಬ ಹಣೆಪಟ್ಟಿ ಕಿತ್ತೆಸೆದು ಗಂಡಸರ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ಸಿಡಿದೇಳುವ ವಿವರಗಳಂತೂ ತೇಜಸ್ವಿಯವರ ಸಮರ್ಥ ಲೇಖನಿಯಲ್ಲಿ ಮುಗಿಲ ಮಿಂಚಿನಂತೆ ಮೂಡಿ ಬಂದಿವೆ.

ಎರಡನೆಯ ಕತೆ “ಕೃಷ್ಣೇಗೌಡನ ಆನೆ”. ಅದರ ಮಾವುತ ವೇಲಾಯುಧನ್ ಮತ್ತು ಮಾಲೀಕ ಕೃಷ್ಣೇಗೌಡ. ಹಲವಾರು ಉದ್ಯೋಗಗಳಿಗೆ ಕೈಹಾಕಿ ಕೈಸುಟ್ಟುಕೊಂಡ ಕೃಷ್ಣೇಗೌಡ ಕೊನೆಗೆ ಮಠವೊಂದರ ಆನೆ ಖರೀದಿಸುತ್ತಾನೆ - ಮೂಡಿಗೆರೆಯ ಸುತ್ತಮುತ್ತಲಿನ ಕಾಡುಗಳಲ್ಲಿ ಕಡಿದ ಮರದ ದಿಮ್ಮಿಗಳನ್ನು ಸಾಗಿಸಲಿಕ್ಕಾಗಿ. ಇದು ತನ್ನ ಮನೆಗೆ ಲಕ್ಷ್ಮಿ ಬಂದಂತೆ ಬಂದಿದೆ ಎಂಬುದು ಅವನ ಅಂಬೋಣ. ಆದರೆ ಅವನ ಹಣ ಗಳಿಸುತ್ತಿದ್ದದ್ದು - ಕಾಡಿನಲ್ಲಿ ಕಾನೂನುಬಾಹಿರವಾಗಿ ಮರ ಕಡಿದು, ನಾಟಾ (ಮರದ ದಿಮ್ಮಿಗಳು) ಕಳ್ಳಸಾಗಣೆ ಮಾಡಿ, ಮರದ ಮಿಲ್ಲುಗಳಿಗೆ ಮಾರುತ್ತಿದ್ದವರ ಜೊತೆ ಸೇರಿ ಮಾಡುವ ದಂಧೆಯಿಂದ.

ರಾತ್ರಿ ಈ ದಂಧೆಯಲ್ಲಿ ತೊಡಗಿರುತ್ತಿದ್ದ ಆನೆ, ಹಗಲು ಹೊತ್ತಿನಲ್ಲಿ ಮೂಡಿಗೆರೆ ಪೇಟೆಯಲ್ಲಿ ಸುತ್ತುತ್ತಿತ್ತು. ಹಲವು ಹಣ್ಣು ಮಾರುವವರು, ಗೂಡಂಗಡಿಯವರು ಅದಕ್ಕೆ ಬಾಳೆಹಣ್ಣು ಇತ್ಯಾದಿ ತಿನಿಸುತ್ತಿದ್ದರು. ಅದು ಹಾದಿಯಲ್ಲಿ ಎಲೆ ತಿನ್ನಲಿಕ್ಕಾಗಿ ಕೆಲವು ಮರಗಳ ಗೆಲ್ಲುಗಳನ್ನು ಎಳೆದಾಗ ಅವು ಮುರಿದು ವಿದ್ಯುತ್ ಮತ್ತು ಟೆಲಿಫೋನ್ ತಂತಿಗಳ ಮೇಲೆ ಬಿದ್ದು, ವಿದ್ಯುತ್ ಹಾಗೂ ಟೆಲಿಫೋನ್ ಸಂಪರ್ಕ ಆಗಾಗ ಕಡಿತವಾಗುತ್ತಿತ್ತು. ಈ ಅವಾಂತರದಿಂದಾಗಿ ಆ ಎರಡೂ ಇಲಾಖೆಗಳ ಸಿಬ್ಬಂದಿಗಳಿಂದ ಪರಸ್ಪರ ಆಪಾದನೆ. ಇದು ಸಾಲದೆಂಬಂತೆ ಫಾರೆಸ್ಟರ್ ನಾಗರಾಜ ಮರ ಕಳ್ಳಸಾಗಣೆದಾರರ ಮೇಲಿನ ಕೋಪದಲ್ಲಿ ಆ ಎರಡೂ ಇಲಾಖೆಗಳ ಸಿಬ್ಬಂದಿಗಳಿಗೆ "ನಿಮಗೆಲ್ಲಾ ಬುದ್ಧಿ ಕಲಿಸ್ತೀನಿ. ಕೋಳ ಹಾಕಿಸ್ತೀನಿ” ಎಂದು ಎಗರಾಡುತ್ತಿದ್ದ; ಕೆಲವರ ಕಾರುಗಳನ್ನು ಜಪ್ತಿ ಮಾಡಿ, ಜನರ ಕೆಂಗಣ್ಣಿಗೆ ಗುರಿಯಾಗಿದ್ದ.

ಇವೆಲ್ಲದರ ಜೊತೆಗೆ ಪ್ರತಿಯೊಂದು ಘಟನೆಗೂ ಬಣ್ಣ ಹಚ್ಚಿ, ತಮ್ಮ ಕಲ್ಪನೆಗಳನ್ನೂ ಬೆರಕೆ ಮಾಡಿ, ಇಲ್ಲಸಲ್ಲದ ವದಂತಿ ಹಬ್ಬಿಸಿ ಮಜಾ ನೋಡುವ ಜನರು. ಅಂತೂ ನಿಗೂಢ ಕಾಡುಗಳ ಪ್ರದೇಶದ ಜನವಸತಿಗಳಲ್ಲಿ ಬಾಳುತ್ತಿದ್ದ ಜನರ ಬದುಕಿನ ಬಗೆ ಸುಲಭದಲ್ಲಿ ಅರ್ಥವಾಗುವಂಥದ್ದಲ್ಲ. ಅದಕ್ಕೆ ಜಾತಿ, ಶೋಷಣೆ, ಮೌಢ್ಯ, ಅಜ್ನಾನ, ಅಂಧಶ್ರದ್ಧೆ ಸೇರಿಕೊಂಡಾಗಲಂತೂ ಎಲ್ಲವೂ ಸಂಕೀರ್ಣ. ಇದರ ರಹಸ್ಯಮಯ ಗಂಟುಗಳನ್ನು ಬಿಡಿಸುತ್ತಾ ಕತೆ ಹೆಣೆಯುವ ತೇಜಸ್ವಿಯವರ ಶೈಲಿ ಅನನ್ಯ. ಈ ಕತೆಯಲ್ಲಿ, ವ್ಯವಸ್ಥೆಗೆ ಬಲಿಯಾದವರ ಬಗ್ಗೆ ಓದುವಾಗ ನಮ್ಮಲ್ಲಿ ವಿಷಾದ ಗಾಢವಾಗುತ್ತದೆ - ಯಾಕೆಂದರೆ ಅವರಿಗಾದ ಅನ್ಯಾಯದ ಬಗ್ಗೆ ದೂರು ನೀಡಲಿಕ್ಕೂ ಆಗದ, ಅವರಿಗೆ ಕಿಂಚಿತ್ ಪರಿಹಾರ ಕೊಡಿಸಲಿಕ್ಕೂ ಆಗದ ಪರಿಸ್ಥಿತಿಗೆ ನಾವೆಲ್ಲರೂ ಕಾರಣ. ಈ ಕತೆ ಓದುತ್ತಾ ನಮ್ಮ ಪರಿಸರದಲ್ಲಿ, ನಮ್ಮ ಊರಿನಲ್ಲಿ, ನಮ್ಮ ಬೀದಿಯಲ್ಲಿ, ನಮ್ಮ ವಠಾರದಲ್ಲಿಯೂ ಒಂದು "ಆನೆ" ಇದ್ದಂತೆ, ಅದರಿಂದಾಗುವ ಅವಾಂತರಗಳಿಂದಾಗಿ ನಾವು ಅಸಹಾಯಕರಾದಂತೆ ಅನಿಸುತ್ತದೆ.

“ಮಾಯಾಮೃಗ" ಶ್ಮಶಾನಕ್ಕೆ ಪಿಶಾಚಿಗಳ ಇದ್ದಾವೆಯೇ ಎಂದು ತಿಳಿಯಲು ಹೋದ ಇಬ್ಬರು ತಮ್ಮ ಬೆನ್ನು ಹತ್ತಿದ ನಾಯಿಮರಿಯಿಂದ ಪಾರಾಗಲು ಪಟ್ಟ ಪಡಿಪಾಟಲನ್ನು ಹಾಸ್ಯಭರಿತವಾಗಿ ನಿರೂಪಿಸುವ ಕತೆ. ಕೊನೆಯ ಕತೆ “ರಹಸ್ಯ ವಿಶ್ವ". ಸೈಕಲ್ ಓಡಿಸೋದನ್ನು ಕಲಿಯಲು ಹೋದಾಗ ಜರಗಿದ ಪ್ರಸಂಗವನ್ನು ಹಾಸ್ಯಮಯವಾಗಿ ಚಿತ್ರಿಸುವ ಕತೆ.