ಕಿರಗೂರಿನ ಗಯ್ಯಾಳಿಗಳು
ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ.
ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು (ಪುಟ ೨) ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ.
ಮೂರು ದಿನಗಳು ಸತತವಾಗಿ ಬೀಸಿದ ಗಾಳಿ ಕಥೆಯ ಹಂದರಕ್ಕೆ ಮುಖ್ಯ ನೆಲೆ ಒದಗಿಸಿದ್ದರೂ ನಂತರದ ಸಾಮಾಜಿಕ ಬದಲಾವಣೆಗೆ ವನಿತಾಕ್ರಾಂತಿಗೆ ದಾನಮ್ಮನೇ ಮೂಲ ಕಾರಣವಾಗಿ ನಿಲ್ಲುತ್ತಾಳೆ. ಒಂದು ರೀತಿಯಲ್ಲಿ ದಾನಮ್ಮನೇ ಕಥಾನಾಯಕಿ ಎಂದರೂ ತಪ್ಪಾಗದು. ದಾನಮ್ಮನ ಸಿಟ್ಟು ಭಯಂಕರ, ಅವಳಿಗೆ ಸಿಟ್ಟು ಬಂದಾಗ ದೆವ್ವ ಬಂದವರನ್ನು ಮಾತಾಡಿಸುವಂತೆ ಅವಳ ಗಂಡನೂ ಮಾವನೂ ಆಕೆಯನ್ನು ಗೌರವದಿಂದ ಮಾತಾಡಿಸುತ್ತಿದ್ದರು.(ಪುಟ ೬) ಹೇಗೆ ಹೇಗೋ ಎಲ್ಲರನ್ನೂ ಕಲಾತ್ಮಕವಾಗಿ ಸಂಯೋಜಿಸಿ ಭಾವಗೀತೆಯಂತೆ ಝಾಡಿಸಿ ಉಗಿದಿದ್ದರಿಂದ ಪುಟ(೭) ಕಾಕತಾಳೀಯವೋ ಎಂಬಂತೆ ಬಿರುಗಾಳಿ ಕಡಿಮೆಯಾಗಿ. ಆ ಗಯ್ಯಾಳಿ ಬಾಯಿಗೆ ಮಳೆಗಾಳಿ ಸುತ ಹೆದರ್ತದೆ ಅಂತಾಯ್ತು ಎಂಬಂತೆ ಊರಿನವರಿಂದ ಅನ್ನಿಸಿಕೊಳ್ಳುತ್ತಾಳೆ.
ದಾನಮ್ಮ ಮಾತ್ರವಲ್ಲ ಊರಿನ ಇತರ ಹೆಂಗಸರು ಸಹ ಇದೇ ರೀತಿ ಗಯ್ಯಾಳಿಗಳೇ. ಅವರ ಗಯ್ಯಾಳಿತನ ಕೇವಲ ಮಾತುಗಾರಿಕೆಯಲ್ಲಿ ಮಾತ್ರವಲ್ಲದೆ ದೈಹಿಕ ಕಸುವಿನಲ್ಲೂ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಊರಿನ ಗಂಡಸರ ದೌರ್ಬಲ್ಯ ಶಾರೀರಿಕವಾಗಿಯಲ್ಲದೆ ಆಲೋಚನಾ ಶಕ್ತಿಯಲ್ಲೂ ಕಾಣುತ್ತದೆ.
ಹೆಬ್ಬಲಸಿನ ಮರ ಕೊಯ್ಯುವುದು, ಅವರ ಬಲಹೀನತೆಗೆ ಸಾಕ್ಷಿ. ಮಾತ್ರವಲ್ಲದೆ ಅವರ ಮೌಢ್ಯವನ್ನು ಕಾರ್ಯತಂತ್ರ ಗೊತ್ತಿಲ್ಲದ ಮುಗ್ಥತೆಯನ್ನು ಸಾರಿ ಹೇಳುತ್ತದೆ. ಗಂಡಸರ ದೌರ್ಬಲ್ಯವನ್ನು ಒಂದೇ ಘಟನೆ ಸಂಪೂರ್ಣವಾಗಿ ತೆರೆದಿಡುತ್ತದೆ. ಅದ್ಯಾವುದೆಂದರೆ ಮಾರ ಮತ್ತು ಸಿದ್ಧ ಇಬ್ಬರು ಮರವನ್ನು ಅರೆಬರೆ ಕತ್ತರಿಸಿ ರಂಬೆ ಎಳೆಯಲಾಗದೆ ಸೋತು ಕುಳಿತಿದ್ಧಾಗ ಗದ್ದೆ ಕೆಲಸ ಮುಗಿಸಿ ಬಂದ ಹೆಂಗಸರ ನಡುವೆ ಇದ್ದ ಮಾರನ ಹೆಂಡತಿ ಗಂಡನನ್ನು ತರಾಟೆಗೆ ತೆಗೆದುಕೊಳ್ಳುವ ಪರಿ ಪ್ರಾತಿನಿದಿsಕವಾಗಿದೆ. ಅವರನ್ನು ಸಾಗಹಾಕಿದ ಮೇಲೆ ಮಾರ ಹೇಳುವ ಊರು ಉಳಿಸುವ ವಿಧಾನವೂ ಅದಕ್ಕೆ ಸಿದ್ಧನ ನೀರಸ ಪ್ರತಿಕ್ರಿಯೆಯೂ ಆ ಊರಿನ ಗಂಡಸರ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಅದೂ ಅಲ್ಲದೆ ಪೊಲೀಸರಿಂದ ಲಾತ ತಿಂದ ಸವರ್ಣೀಯ ಗಂಡಸರು ಹೊಲೆಯರ ಮೇಲಿನ ದ್ವೇಷದಿಂದ ಅವರನ್ನು ದೂರವಿಟ್ಟರೂ ಸ್ವತಃ ಏಗಲಾಗದೇ ನಿಟ್ಟುಸಿರು ಬಿಡುವುದೂ ಅಸಹನೀಯ.
ಅಜಾಗರೂಕತೆಯಿಂದ ಹೆಬ್ಬಲಸಿನ ಮರದ ದಿಮ್ಮಿ ಊರೊಳಗೆ ನುಗ್ಗಿದ್ದರಿಂದ ಊರ ಗಂಡಸರಿಗಿಂತಲೂ ಹೆಚ್ಚು ಆತಂಕಕ್ಕೆ ಒಳಗಾದವಳೆಂದರೆ ದಾನಮ್ಮನೇ. ಈ ಘಟನೆಯಿಂದಂತೂ ಆಕೆ ಊರ ಕಾಯುವ ವೀರ ನಾರಿ ಎನಿಸಿಕೊಳ್ಳುತ್ತಾಳೆ. ಊರ ವನಿತೆಯರಿಗಂತೂ ಆಕೆ ಅಪ್ರತಿಮ ಆದರ್ಶ ವ್ಯಕ್ತಿಯಾಗಿ ಕಂಡು ಬರುತ್ತಾಳೆ. ಸೂಕ್ಷ್ಮವಾಗಿ ನೋಡಿದಾಗ ಈ ಘಟನೆ ದಾನಮ್ಮ ನಾದಿಯಾಗಿ ಊರ ಹೆಂಗಸರಿಗೆಲ್ಲ ಗಂಡಸರ ಮೇಲಿನ ಒಳಗುದಿಯನ್ನು ಮತ್ತಷ್ಟು ಕುಮುಲುವಂತೆ ಮಾಡಿ ಯಾವುದೇ ಸಮಯದಲ್ಲಿ ಸ್ಫೋಟಿಸಬಹುದಾದ ಜ್ವಾಲಾಮುಖಿಗಳಾಗುವಂತೆ ಮಾಡುತ್ತದೆ. ಗಂಡಸರು ಮಾಡುವ ಜಾತಿಗಳು, ಆಚಾರಗಳು, ಮದುವೆಗಳು ಪಂಚಾಯ್ತಿಗಳು ಪ್ರತಿಯೊಂದೂ ಹೆಂಗಸರಿಗೆ ಹಿಂದೆ ಕೊಡುವ ನೀಚತಂತ್ರ ಎಂಬುದನ್ನು ದಾನಮ್ಮ ಕಂಡುಕೊಳ್ಳುತ್ತಾಳೆ. ಶಂಕರಪ್ಪನ ಹೆಂಡದ ಬಗ್ಗೆಯೂ ಆಕೆ ಕಿಡಿಕಾರುತ್ತಾಳೆ. ಹೀಗೆ ಅಲ್ಲಿದ್ದ ಹಣ್ಣು ಮಕ್ಕಳಿಗೆಲ್ಲಾ ನಿಧಾನವಾಗಿ ಅರಿವು ಮೂಡತೊಡಗುತ್ತದೆ. ಹೆಂಗಳೆಯರ ಪ್ರತಿನಿದಿsಯಂತಿದ್ದ ದಾನಮ್ಮನ ಸಂತೇಲಿ ಸೀರೆ ಬಿಚ್ಚಿ ಹೋಗಿ ಬರೋರಿಗೆ ಬಸುರಾಗುವಂತಹ ನಿರ್ಧಾರದ ನುಡಿ ಕೇಳಿದ್ದಲ್ಲದೆ, ದೇವಗಣಗಿಲೆ ಮರಕ್ಕೆ ವಾಲಿ ಕುಳಿತಿದ್ದ ಸೀಗೇಗೌಡರು ತಮ್ಮ ಸೊಸೆಯ ಮುಂದಾಳತ್ವದಲ್ಲಿ ಊರಿನ ಹೆಂಗಸೆಲ್ಲಾ ರೌಡಿ ಹೆಬ್ಬುಲಿಗಳಂತೆ ಹಾರಿದ್ದು ನೋಡಿ, ಆ ಬಿದ್ದ ಹೆಬ್ಬಲಸಿನ ಮರದಲ್ಲಿದ್ದ ಅಷ್ಟೂ ದೆವ್ವಗಳು ಇವರಿಗೆ ಅಮರಿಕೊಂಡಿವೆ ಎಂದೇ ತೀರ್ಮಾನಿಸಿದರು.(ಪುಟ ೬೧)
ಹೆಂಗಳೆಯರ ಕೋಪ ಅಲ್ಲಿಗೇ ತಣಿಯದೆ ಶಂಕ್ರಪ್ಪನ ಶೇಂದಿ ಅಂಗಡಿ ನಾಶ ಮಾಡಿದ ಸುದ್ದಿ ರೈತ ಚಳುವಳಿಗೆ ಸ್ಫೂರ್ತಿ ನೀಡುತ್ತದೆ. ಮಹಿಳಾ ವಿಮೋಚನೆಗೂ ದಾರಿ ಮಾಡುತ್ತದೆ. ಎಲ್ಲ ಊರುಗಳ ಸಾರಾಯಿ ಅಂಗಡಿಗಳ ಎದರೂ ಗಲಭೆ ಚಳುವಳಿಗಳು ಪ್ರಾರಂಭವಾಗುತ್ತದೆ. ಒಂದು ರೀತಿಯಲ್ಲಿ ತೇಜಸ್ವಿಯವರು ಕಿರಗೂರಿನ ಮಹಿಳೆಯರ ಬಗ್ಗೆ ಸದ್ಭಾವನೆ ಉಂಟಾಗದ ಘಟನೆಗಳೊಂದಿಗೆ ಕಥೆ ಪ್ರಾರಂಬಿsಸಿರುವರಾದರೂ ಅಂತ್ಯದ ವೇಳೆಗೆ ಓದುಗ ಆ ಮಹಿಳೆಯರ ಬಗ್ಗೆ ಗೌರವ ತಳೆಯುವುದು ಅನಿವಾರ್ಯವಾಗುತ್ತದೆ.
ಕಥಾ ನಿರೂಪಣೆಯಲ್ಲಂತೂ ಯಾವುದೇ ಉತ್ಪ್ರೇಕ್ಷೆಯ ವಾಕ್ಯಗಳು ಕಂಡುಬರುವುದಿಲ್ಲ. ಲೇಖಕರು ಪರಕಾಯ ಪ್ರವೇಶ ಮಾಡಿ ಪಾತ್ರಗಳ ಭಾವನೆಗಳನ್ನು ಅರಿತುಕೊಂಡರೋ ಎಂಬಂತೆ ಮಾತುಗಳು, ವರ್ತನೆಗಳು ಹರಿದುಬಂದಿವೆ. ಒಟ್ಟಾರೆ ಇಡೀ ಘಟನೆಯು ನಮ್ಮ ಕಣ್ಣ ಮುಂದೆಯೇ ನಡೆದಿರುವಂತೆ ಓದುಗನೂ ಒಂದು ಪಾತ್ರವಾಗಿರುವಂತೆ ಕಥೆ ನಿರೂಪಿತವಾಗಿರುವುದು ಅದ್ಭುತ ಕೌಶಲ್ಯವೆನ್ನಬಹುದು.