ಕಿರಿಕಿರಿ ಹೇನುಗಳು !
ಹೇನುಗಳ ಬಗ್ಗೆ ಯಾರಿಗೆ ಗೊತ್ತಿಲ್ಲ. ಜೀವನದ ಒಂದಲ್ಲಾ ಒಂದು ಹಂತದಲ್ಲಿ ಬಹುತೇಕರು ಹೇನಿನ ಉಪಟಳವನ್ನು ಅನುಭವಿಸಿದವರೇ. ಬಾಲ್ಯದಲ್ಲಿ ಶಾಲೆಗೆ ಹೋಗುವಾಗ, ಅದರಲ್ಲೂ ಹುಡುಗಿಯರಿಗೆ ಈ ಹೇನಿನ ಕಿರಿಕಿರಿ ಬಹಳ. ಅವರ ಉದ್ದವಾದ ಕೂದಲಿನಲ್ಲಿ ಆಶ್ರಯ ಪಡೆದುಕೊಂಡು, ಮೊಟ್ಟೆ ಇಟ್ಟು, ಮರಿಯಾಗಿ ದಿನವಿಡೀ ತಲೆ ತುರಿಕೆಯಾಗುವಂತೆ ಮಾಡಿ, ಅದರ ಜೊತೆಗೆ ಹೊಟ್ಟಿನ ಸಮಸ್ಯೆಯನ್ನೂ ಅಧಿಕಗೊಳಿಸುವ ಈ ಜೀವಿಯನ್ನು ಯಾರಾದರೂ ಮರೆಯಲು ಸಾಧ್ಯವೇ? ಶಾಲೆಯಿಂದ ಮನೆಗೆ ಬಂದು ತಲೆ ತುರಿಸಲು ಪ್ರಾರಂಭಿಸಿದ ಕೂಡಲೇ ಅಮ್ಮ ಹೇಳುವ ಮಾತು “ನೀನು ಯಾರ ತಲೆಯಿಂದ ಹೇನು ತೆಗೆದುಕೊಂಡು ಬಂದಿದ್ದೀಯಾ?” ಎಂಬುದು. ಇದು ಸತ್ಯವೂ ಕೂಡಾ. ಶಾಲೆಯಲ್ಲಿ ಪಕ್ಕ ಪಕ್ಕ ಕೂತುಕೊಂಡಾಗ ಈ ಹೇನಿನ ಪ್ರಸಾರವಾಗುವುದಿದೆ.
ಕ್ರಮೇಣ ಹೇನು ನಿವಾರಣೆಗೆ ವಿಶೇಷ ಬಾಚಣಿಕೆಗಳು ಬಂದವು, ಸ್ನಾನ ಮಾಡುವಾಗ ಬಳಸುವ ಶ್ಯಾಂಪೂ ಬಳಕೆಗೆ ಬಂತು. ಕೆಲವು ಔಷಧಿಗಳೂ ಬಂದುವು. ನಿಧಾನವಾಗಿ ಹೇನಿನ ಉಪಟಳ ನಿಯಂತ್ರಣಕ್ಕೆ ಬಂತು. ಈಗ ಹೇನಿನ ಬಗ್ಗೆ ಅಷ್ಟಾಗಿ ಯಾರೂ ದೂರು ಕೊಡುವುದಿಲ್ಲ. ಏಕೆಂದರೆ ತಲೆ ಕೂದಲಿನ ಆರೈಕೆಗಾಗಿಯೇ ಹಲವಾರು ಬ್ಯೂಟಿಪಾರ್ಲರುಗಳಿವೆ. ಅವರು ಈ ಉಪಟಳ ಕೊಡುವ ಹೇನನ್ನು ದೂರಮಾಡುವ ಉಪಾಯಗಳನ್ನು ಕಂಡುಕೊಂಡಿದ್ದಾರೆ. ನಾವು ಸಣ್ಣವರಾಗಿರುವಾಗ ತೊಂದರೆ ಕೊಡುವ ಹೇನು ಯುವಕರಾಗುವಾಗ ತನ್ನಿಂದ ತಾನೇ ಕಮ್ಮಿಯಾಗಿ ಹೋಗುವುದಿದೆ. ಏನಾದರಾಗಲಿ ಹೇನಿನ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.
ಹೇನು ಒಂದು ಪರಾವಲಂಬಿ ಜೀವಿ. ಸುಮಾರು ಎರಡು ಮಿಲಿಮೀಟರ್ ಗಾತ್ರದ ಈ ಪುಟ್ಟ ಜೀವಿ ನೀಡುವ ಹಿಂಸೆ ಅಷ್ಟಿಷ್ಟಲ್ಲ. ಹಗಲೂ ರಾತ್ರಿ ನಮ್ಮ ಕೂದಲಿನಲ್ಲಿ ವಾಸಿಸಿ ನಮ್ಮದೇ ರಕ್ತವನ್ನು ಹೀರುವ ಜೀವಿ ಇದು. ಹೇನಿನ ಹಾವಳಿ ಪ್ರಪಂಚದಾದ್ಯಂತ ಇದ್ದರೂ, ಉಷ್ಣ ಪ್ರದೇಶದವರಿಗಿಂತಲೂ ಶೀತ ಪ್ರದೇಶದವರಿಗೆ ಇದರ ಉಪಟಳ ಜಾಸ್ತಿ. ತಲೆಯಲ್ಲಿ ಹೇನಿನ ವಾಸವಿದೆ ಎಂದರೆ ಅದು ಅಶುಚಿತ್ವದ ಲಕ್ಷಣ. ಆರೋಗ್ಯದ ಬಗ್ಗೆ ಗಮನವಿಡದೇ, ಕೊಳಚೆ ಪ್ರದೇಶದಲ್ಲಿ ವಾಸಿಸುವವರಲ್ಲಿ ಇದು ಹೇರಳವಾಗಿ ಕಂಡು ಬರುತ್ತದೆ. ನಮ್ಮ ದೇಹವನ್ನು ಸ್ವಚ್ಚವಾಗಿ ಇಟ್ಟರೆ ಹೇನಿನ ಉಪದ್ರವ ಕಮ್ಮಿ.
ಹೇನುಗಳಲ್ಲಿ ಹಲವಾರು ವಿಧಗಳಿವೆ. ಕೆಲವು ಹೇನುಗಳು ಪ್ರಾಣಿಗಳ ರೋಮಗಳೆಡೆಯಲ್ಲೂ ಬದುಕುತ್ತವೆ. ಮನುಷ್ಯನನ್ನು ಅವಲಂಬಿಸಿ ಬದುಕುವ ಹೇನಿನಲ್ಲಿ ಮೂರು ವಿಧಗಳಿವೆ.
೧. ತಲೆ ಮೇಲೆ ವಾಸಿಸುವ ಹೇನು ೨. ಮೈಮೇಲೆ ವಾಸಿಸುವ ಹೇನು ಹಾಗೂ ೩. ಜ಼ನನೇಂದ್ರಿಯ ಭಾಗದ ಕೂದಲಿನಲ್ಲಿ ವಾಸಿಸುವ ಹೇನು.
ಮೊದಲ ವಿಧದ ಹೇನು ಹೆಸರೇ ಹೇಳುವಂತೆ ತಲೆಯ ಕೂದಲುಗಳಲ್ಲಿ ವಾಸ ಮಾಡುತ್ತವೆ ಹಾಗೆಯೇ ಮೈ ಮೇಲೆ ವಾಸ ಮಾಡುವ ಹೇನು ಮೈಮೇಲಿನ ರೋಮಗಳಲ್ಲಿ ವಾಸ ಮಾಡುತ್ತದೆ. ಇವೆರಡು ಹೇನುಗಳು ಕಂಡು ಬರುವ ಸ್ಥಳಗಳನ್ನು ಹೊರತು ಪಡಿಸಿ ಬೇರೆ ವ್ಯತ್ಯಾಸವಿಲ್ಲ. ಎರಡೂ ಹೇನುಗಳ ಜೀವನ ಕ್ರಮವೂ ಒಂದೇ ರೀತಿ.
ಹೇನುಗಳು ಸಂದಿಪದಿಗಳ (Arthropoda) ಜಾತಿಗೆ ಸೇರಿದ ರೆಕ್ಕೆಗಳಿಲ್ಲದ ಪುಟ್ಟ ಜೀವಿ. ಇದಕ್ಕೆ ತಲೆ, ಹೊಟ್ಟೆ, ಹೊಟ್ಟೆಗೆ ಹೊಂದಿಕೊಂಡಂತೆ ಮೂರು ಜೊತೆ ಕಾಲುಗಳು, ರಕ್ತ ಹೀರಲು ಅನುಕೂಲಕರವಾದ ಬಾಯಿ ಇದೆ. ಹೇನಿನ ಬಣ್ಣ ಸಾಧಾರಣವಾಗಿ ಕಪ್ಪು ಆಗಿರುವುದರಿಂದ ಕೂದಲುಗಳಲ್ಲಿ ಅಡಗಿಕೊಳ್ಳಲು ಅನುಕೂಲವಾಗಿದೆ. ಕಾಲಿನ ತುದಿಯಲ್ಲಿ ಕೊಕ್ಕೆಯಂತಹ ಅಂಗವಿದೆ. ಇದರಿಂದಾಗಿ ಹೇನುಗಳು ಕೂದಲುಗಳ ಮೇಲೆ ನಡೆದಾಡುವ ಸಂದರ್ಭದಲ್ಲಿ ಜಾರಿ ಕೆಳಗೆ ಬೀಳುವುದಿಲ್ಲ. ಹೊಟ್ಟೆಯ ಮೇಲೆ ಉಂಗುರಗಳಂತಹ ಗುರುತುಗಳಿದ್ದು ಕೊನೆಯ ಉಂಗುರದಲ್ಲಿ ಜನನೇಂದ್ರಿಯ ಇದೆ.
ಪೂರ್ಣ ಬೆಳೆದ ಹೇನುಗಳು ಕೂದಲಿನಲ್ಲಿ ಮೊಟ್ಟೆಯಿಡುತ್ತವೆ. ಒಂದು ಬಾರಿಗೆ ಅಂದರೆ ಒಂದು ವಾರದ ಅವಧಿಯಲ್ಲಿ ಸುಮಾರು ಮುನ್ನೂರು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಒಂದೊಂದಾಗಿ ಅಥವಾ ಸಣ್ಣ ಸಣ್ಣ ಗುಂಪಿನಲ್ಲಿರುತ್ತವೆ. ಈ ಮೊಟ್ಟೆಗಳನ್ನು ಹೇನು ಅಂಟಾದ ದ್ರವದ ಸಹಾಯದಿಂದ ತಲೆಯಲ್ಲಿನ ಚರ್ಮದ ಭಾಗಕ್ಕೆ ಅಥವಾ ಕೂದಲುಗಳಿಗೆ ಅಂಟಿಸಿ ಬಿಡುತ್ತವೆ. ಹೇನಿನ ತತ್ತಿ ಅಥವಾ ಮೊಟ್ಟೆಗೆ ಸೀರು (nits) ಎನ್ನುತ್ತಾರೆ. (ಚಿತ್ರ ೨) ನಮ್ಮ ದೇಹದ ಉಷ್ಣತೆಯ ಕಾರಣ ಹತ್ತು ದಿನಗಳ ಒಳಗಾಗಿ ಈ ತತ್ತಿಗಳು ಒಡೆದು ಪುಟ್ಟ ಮರಿಗಳು ಹೊರಬರುತ್ತವೆ. ಈ ಪುಟ್ಟ ಮರಿಗಳು ರಕ್ತವನ್ನು ಕುಡಿಯುತ್ತಾ ಬೆಳೆದು ದೊಡ್ಡದಾಗುತ್ತವೆ. ಮರಿಗಳು ಪ್ರೌಢಾವಸ್ಥೆಗೆ ಬರಲು ಕೇವಲ ಒಂದು ವಾರ ಸಾಕು. ಹೇನುಗಳ ಜೀವಿತಾವಧಿ ಎರಡು ತಿಂಗಳು ಮಾತ್ರ.
ಮಕ್ಕಳು ಶಾಲೆಯಲ್ಲಿ ಗುಂಪಾಗಿ ಇರುವ ಸಂದರ್ಭದಲ್ಲಿ ಹೇನುಗಳು ಒಬ್ಬರಿಂದ ಒಬ್ಬರ ತಲೆಯತ್ತ ಚಲಿಸುತ್ತವೆ. ಬಟ್ಟೆಯ ಮೇಲಿನಿಂದ ಅಥವಾ ಕೂದಲುಗಳು ತಾಗಿದಾಗ ಅವುಗಳು ಬೇರೆ ದೇಹದ ಮೇಲೆ ಹತ್ತಿಕೊಳ್ಳುತ್ತವೆ. ಹೇನು ಇದ್ದವರ ಬಟ್ಟೆ, ಬಾಚಣಿಕೆ, ಹಾಸಿಗೆ ಇವುಗಳನ್ನು ಬೇರೆಯವರು ಬಳಸಿದಾಗ ಅವರಿಗೂ ಹೇನು ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಜ್ವರ ಬಂದಾಗ ಆದರ ಉಷ್ಣತೆಗೆ ಹೇನುಗಳು ತಲೆಯಿಂದ ಹೊರಟು ಹೋಗುವುದುಂಟು. ಹೇನುಗಳು ರಕ್ತ ಹೀರುವ ಸಂದರ್ಭದಲ್ಲಿ ಪುಟ್ಟ ಗಾಯಗಳಾಗುವ ಸಾಧ್ಯತೆ ಇದೆ. ಇದರಿಂದ ತುರಿಕೆ ಮತ್ತು ಕಜ್ಜಿ ಪ್ರಾರಂಭವಾಗುತ್ತದೆ. ಹೇನುಗಳು ಗಂಭೀರವಾದ ಯಾವುದೇ ಕಾಯಿಲೆಗಳನ್ನು ಹರಡದೇ ಇದ್ದರೂ ಸಾರ್ವಜನಿಕವಾಗಿ ನಮ್ಮ ಮೈ ಮೇಲೆ ಹೇನು ಕಂಡು ಬಂದರೆ ನಾವು ಸಾಮಾಜಿಕವಾಗಿ ನಗೆಪಾಟಲಿಗೀಡಾಗುವ ಸಾಧ್ಯತೆ ಇದೆ.
ಮೂರನೇಯ ವಿಧದ ಹೇನು ಎಂದರೆ ನಮ್ಮ ಕಂಕುಳ ಕೂದಲುಗಳಲ್ಲಿ ಹಾಗೂ ಜನನೇಂದ್ರಿಯದ ಹಾಗೂ ಗುದದ್ವಾರದ ಸುತ್ತಲೂ ಇರುವ ಕೂದಲುಗಳಲ್ಲಿ ಕಂಡು ಬರುತ್ತವೆ. (ಚಿತ್ರ ೩) ಈ ಹೇನುಗಳು ಬಹಳ ಸೋಮಾರಿ. ಆದರೆ ಇದು ಚರ್ಮಕ್ಕೆ ಬಿಗಿಯಾಗಿ ಅಂಟಿಕೊಂಡಿರುವುದರಿಂದ ಇದನ್ನು ಬಿಡಿಸುವುದು ಬಹಳ ತ್ರಾಸದಾಯಕವಾಗಿರುತ್ತದೆ. ಇದರ ಓಡಾಟ ಬಹಳ ಕಮ್ಮಿ. ಎಲ್ಲಿ ಹುಟ್ಟುವುದೋ ಆ ಜಾಗದಲ್ಲೇ ಜೀವನ ಪರ್ಯಂತ ಇರುವ ಸಾಧ್ಯತೆಯೂ ಇದೆ. ಇದು ಉಳಿದೆರಡು ಬಗೆಯ ಹೇನಿಗಿಂತಲೂ ಗಾತ್ರದಲ್ಲಿ ಸಣ್ಣದು. ದೇಹದ ಆಕಾರ ಚೌಕಾಕಾರವಾಗಿದ್ದು, ಕಾಲುಗಳು ಹಾಗೂ ಕಾಲಿನ ತುದಿಯ ಕೊಕ್ಕೆಗಳು ಬಲಶಾಲಿಯಾಗಿರುತ್ತವೆ. ಇವುಗಳ ರಕ್ತ ಹೀರುವಿಕೆಯಿಂದ ನಮಗೆ ತುರಿಕೆಗಳು ಶುರುವಾಗುವ ಸಂಭವ ಇದೆ. ಇವುಗಳು ಬಾರದೇ ಇರಲು ನಾವು ಕೂದಲುಗಳನ್ನು ಆಗಾಗ ಕತ್ತರಿಸಿ ಸ್ವಚ್ಚವಾಗಿರಿಸಿಕೊಳ್ಳಬೇಕು.
ಹೇನಿನ ನಿವಾರಣೆಗೆ ಹಲವಾರು ಬಗೆಯ ಸಾಬೂನು, ಶ್ಯಾಂಪೂ, ಔಷಧಿಗಳು ಬಂದಿವೆ. ಆದರೆ ಯಾವುದೇ ನಾಶಕಗಳನ್ನು ಬಳಸುವ ಮೊದಲು ನಿಮ್ಮ ಚರ್ಮ ಅಥವಾ ಕೂದಲುಗಳಿಗೆ ಹಾನಿಯಾಗುತ್ತದೆಯೇ ಎಂಬುವುದನ್ನು ಪರೀಕ್ಷಿಸಬೇಕು. ರಾಸಾಯನಿಕಗಳನ್ನು ಹೊಂದಿರುವ ಕೀಟನಾಶಕಗಳನ್ನು ಬಳಸುವುದು ಕಮ್ಮಿ ಮಾಡಬೇಕು. ಕೆಲವು ನಾಶಕಗಳನ್ನು ಬಳಸುವುದರಿಂದ ತೀವ್ರ ತರನಾದ ಅಲರ್ಜಿಗಳು, ಶ್ಯಾಂಪೂ ಬಳಕೆಯಿಂದ ಕಣ್ಣು ಬೇನೆ, ಉರಿ ಬರುವ ಸಾಧ್ಯತೆ ಇರುತ್ತದೆ.
ಹೇನುಗಳು ನಮ್ಮ ಮೈಮೇಲೆ ಇರುವುದು ಅಸ್ವಚ್ಚತೆಯ ಲಕ್ಷಣ. ಈ ಕಾರಣದಿಂದ ನಾವು ದಿನಾಲೂ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಉದ್ದನೆಯ ತಲೆಕೂದಲು ಇದ್ದ ಮಹಿಳೆಯರು ತಮಗೆ ಅನುಕೂಲ ಕಂಡು ಬರುವ ಸಾಬೂನು ಅಥವಾ ಶ್ಯಾಂಪೂ ಬಳಸಿ ಸ್ನಾನ ಮಾಡಬೇಕು. ಮಕ್ಕಳು ಶಾಲೆಯಲ್ಲಿ ಒಬ್ಬರ ಜೊತೆ ಇನ್ನೊಬ್ಬರು ಬೆರೆಯುವ ಸಂದರ್ಭ ಇರುವುದರಿಂದ ಅವರನ್ನು ಸ್ವಚ್ಚವಾಗಿ ಇರುವಂತೆ ಗಮನಿಸಬೇಕು. ಈ ಮೂಲಕ ಹೇನಿನ ನಿವಾರಣೆ ಸಾಧ್ಯ.
ಚಿತ್ರ ಕೃಪೆ: ಅಂತರ್ಜಾಲ ತಾಣ ಹಾಗೂ ಹಳೆಯ ಕಸ್ತೂರಿ ಮಾಸಿಕ